ವಿಶ್ಲೇಷಣೆ
ಡಾ.ನಿರಂಜನ ಪೂಜಾರ
ಯುದ್ಧಗಳು ರಣರಂಗಗಳಲ್ಲಿ ಮಾತ್ರ ನಡೆಯುವುದಿಲ್ಲ. ರಕ್ತಪಾತವಿಲ್ಲದೆ, ಗಡಿಗಳನ್ನು ದಾಟದೆಯೇ ಒಂದು ರಾಷ್ಟ್ರದ ಅಂತಃಸತ್ವವನ್ನು ನಾಶಮಾಡುವ ಮತ್ತು ಅದರ ಸಾಂಸ್ಕೃತಿಕ ಹೃದಯವನ್ನು ಛಿದ್ರಗೊಳಿಸುವ ತಂತ್ರಗಳು ಆಧುನಿಕ ಯುದ್ಧದ ಪ್ರಮುಖ ಭಾಗವಾಗಿವೆ.
ಇಂಥ ಒಂದು ಸೂಕ್ಷ್ಮವಾದ, ಎಡೆ ಹರಡಿರುವ ಪ್ರಬಲವಾದ ಅಸ್ತ್ರವೇ ‘ಸಾಂಸ್ಕೃತಿಕ ಮಾರ್ಕ್ಸ್ ವಾದ’. ಸಾಂಪ್ರದಾಯಿಕ ಮಾರ್ಕ್ಸ್‌ವಾದವು ಆರ್ಥಿಕ ವ್ಯವಸ್ಥೆ, ಉತ್ಪಾದನಾ ಸಾಧನಗಳ ಹಂಚಿಕೆ ಹಾಗೂ ವರ್ಗ ಸಂಘರ್ಷದ ಮೇಲೆ ತನ್ನ ಗಮನ ಕೇಂದ್ರೀಕರಿಸಿತ್ತು. ಆದರೆ, ಸಾಂಸ್ಕೃತಿಕ ಮಾರ್ಕ್ಸ್ ವಾದವು ಸಮಾಜದ ನೈತಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬೇರುಗಳ ಮೇಲೆ ದಾಳಿ ಮಾಡುತ್ತದೆ.
ಆರ್ಥಿಕ ಕ್ಷೇತ್ರದಲ್ಲಿ ವಿಫಲವಾದ ನಂತರ ಈ ಸಿದ್ಧಾಂತವು ತನ್ನ ಹೋರಾಟದ ಕ್ಷೇತ್ರವನ್ನು ‘ಅರ್ಥ ವ್ಯವಸ್ಥೆ’ಯಿಂದ ಹೊರಗಡಿಯಿಟ್ಟು ‘ಸಂಸ್ಕೃತಿ’ಯನ್ನು ಹೊಸ ರಣಭೂಮಿಯಾಗಿ ಮಾಡಿಕೊಂಡಿ ದೆ. ನಮ್ಮ ಸಮಾಜದಲ್ಲಿ ಇಂದು ಕಾಣುತ್ತಿರುವ ಅನೇಕ ಆಂತರಿಕ ಕಲಹಗಳು, ಮೌಲ್ಯಗಳ ಕುಸಿತ, ಯುವ ಪೀಳಿಗೆಗಳ ನಡುವಿನ ಸಾಂಸ್ಕೃತಿಕ ಸಂಘರ್ಷ ಮತ್ತು ಧರ್ಮದ ಕುರಿತಾದ ಅಸ್ಥಿರತೆಗೆ ಈ ಸಿದ್ಧಾಂತವೇ ಒಂದು ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ: Dr Niranjan Pujara Column: ಉಚಿತ ಭಾಗ್ಯಗಳ ಮೋಹದಿಂದ ಕುಸಿದ ರಾಷ್ಟ್ರಗಳ ಕಥೆ
ಐತಿಹಾಸಿಕ ಹಿನ್ನೆಲೆ ಮತ್ತು ಸೈದ್ಧಾಂತಿಕ ವಿಕಸನ: ಈ ಹೊಸ ರೂಪದ ಮಾರ್ಕ್ಸ್‌ವಾದದ ಬೌದ್ಧಿಕ ಬೀಜಗಳು ೨೦ನೇ ಶತಮಾನದ ಆರಂಭದಲ್ಲಿ ಜರ್ಮನಿಯ ‘ಫ್ರಾಂಕ್ ಫರ್ಟ್ ಶಾಲೆ’ ಎಂದು ಪ್ರಸಿದ್ಧವಾದ ‘ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ರಿಸರ್ಚ್’ನಲ್ಲಿ ರೂಪುಗೊಂಡವು.
ಥಿಯೋಡರ್ ಅಡೋರ್ನೋ, ಮ್ಯಾಕ್ಸ್ ಹಾರ್ಕೈಮರ್ ಮತ್ತು ಹರ್ಬರ್ಟ್ ಮಾರ್ಕ್ಯೂಸ್ ಅವರಂಥ ಚಿಂತಕರು, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಮಾರ್ಕ್ಸ್‌ವಾದಿ ಕ್ರಾಂತಿ ಏಕೆ ಸಂಭವಿಸಲಿಲ್ಲ ಎಂಬುದನ್ನು ವಿಶ್ಲೇಷಿಸಿದರು. ದೇಶದ ವ್ಯವಸ್ಥೆಯನ್ನು ಸಮರ್ಥಿಸಿ ಉಳಿಸಿಕೊಳ್ಳುವಲ್ಲಿ ಅಲ್ಲಿನ ದೃಢವಾದ ಸಾಂಸ್ಕೃತಿಕ ಪರಂಪರೆಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಕಂಡು ಕೊಂಡರು.
ಧರ್ಮ, ಮತ, ಕುಟುಂಬ, ಕಲೆ, ಸಾಹಿತ್ಯ ಮತ್ತು ರಾಷ್ಟ್ರೀಯ ಗೌರವದ ಭಾವನೆಗಳು ಜನಸಾಮಾನ್ಯ ರನ್ನು ವ್ಯವಸ್ಥೆಯ ವಿರುದ್ಧ ದಂಗೆ ಏಳದಂತೆ ಮಾಡುತ್ತವೆ ಎಂಬುದು ಅವರ ವಿಶ್ಲೇಷಣೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ‘ವಿಮರ್ಶಾತ್ಮಕ ಸಿದ್ಧಾಂತಗಳು’ ಮತ್ತು ಇಟಾಲಿಯನ್ ಮಾರ್ಕ್ಸ್ ವಾದಿ ಆಂಟೋನಿಯೋ ಗ್ರಾಂಚಿಯ ‘ಸಾಂಸ್ಕೃತಿಕ ಪ್ರಾಬಲ್ಯ’ ಎಂಬ ಪರಿಕಲ್ಪನೆಗಳು, ಒಂದು ರಾಷ್ಟ್ರದ ಸಂಸ್ಕೃತಿಯ ಮೇಲೆ ಹಿಡಿತ ಸಾಧಿಸಿದರೆ, ಆ ರಾಷ್ಟ್ರವನ್ನು ಸೇನಾಬಲದಿಂದಲೂ ಸಾಧಿಸ ಲಾಗದ ರೀತಿಯಲ್ಲಿ ವಶಪಡಿಸಿಕೊಳ್ಳಲು ಸಾಧ್ಯ ಎಂಬ ತತ್ವವನ್ನು ಪ್ರತಿಪಾದಿಸಿದವು.
ಗ್ರಾಂಚಿಯ ಪ್ರಕಾರ, ಶಿಕ್ಷಣ, ಮಾಧ್ಯಮ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸು ವುದು ರಾಜಕೀಯ ಅಧಿಕಾರ ಪಡೆಯುವುದಕ್ಕಿಂತ ಹೆಚ್ಚು ಮುಖ್ಯ. ಈ ಸಿದ್ಧಾಂತದ ವಿಕಸನವು ಮನೋವಿಜ್ಞಾನ ಮತ್ತು ಸಮಾಜಶಾಸ್ತ್ರದ ಸಂಯೋಜನೆಯಿಂದ ಆಗಿದೆ. ಸಿಗ್ಮಂಡ್ ಫಾಯ್ಡ್‌ನ ಮನೋವಿಶ್ಲೇಷಣೆ ಮತ್ತು ಕಾರ್ಲ್ ಮಾರ್ಕ್ಸ್‌ನ ಸಮಾಜವಾದವನ್ನು ಬೆರೆಸಿ, ಸಮಾಜದ ಸ್ಥಾಪಿತ ಮೌಲ್ಯಗಳು, ಸಂಪ್ರದಾಯಗಳು ಮತ್ತು ಪರಂಪರೆಗಳನ್ನು ಪರೋಕ್ಷವಾಗಿ ನಾಶ ಮಾಡುವ ‘ವಿಮರ್ಶಾತ್ಮಕ ಸಿದ್ಧಾಂತ’ ರೂಪುಗೊಂಡಿತು.
ಇದರ ಪ್ರಮುಖ ತಂತ್ರವೇ ‘ಅಸ್ಮಿತೆಯ ರಾಜಕೀಯ’. ಸಮಾಜವನ್ನು ಆರ್ಥಿಕ ವರ್ಗಗಳಾಗಿ ವಿಭಜಿಸುವ ಸಾಂಪ್ರದಾಯಿಕ ಮಾರ್ಕ್ಸ್‌ವಾದದ ಬದಲು, ಮತ, ಲಿಂಗ, ವರ್ಣ, ಜಾತಿ, ಭಾಷೆ, ಪ್ರದೇಶ ಮತ್ತು ಲೈಂಗಿಕತೆಯ ಆಧಾರದ ಮೇಲೆ ಅಸಂಖ್ಯಾತ ಛಿದ್ರ ಗುಂಪುಗಳಾಗಿ ವಿಂಗಡಿಸುವುದು ಇದರ ಉದ್ದೇಶ.
ಸ್ತ್ರೀವಾದ, ವಿಮರ್ಶಾತ್ಮಕ ವರ್ಣಸಿದ್ಧಾಂತ, ದಲಿತ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಚಳವಳಿಗಳನ್ನು ಸಾಧನಗಳನ್ನಾಗಿ ಬಳಸಿ, ಸಮಾಜದಲ್ಲಿ ‘ಶೋಷಕ ಮತ್ತು ಶೋಷಿತ’ ಎಂಬ ನಿರಂತರ ವೈಷಮ್ಯ ಹಾಗೂ ಅಸಂತೃಪ್ತಿಯ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.
ಒಂದು ವ್ಯವಸ್ಥಿತ ಆಕ್ರಮಣ: ಭಾರತದ ಸಂದರ್ಭದಲ್ಲಿ, ಸಾಂಸ್ಕೃತಿಕ ಮಾರ್ಕ್ಸ್‌ವಾದವು ವ್ಯವಸ್ಥಿತವಾಗಿ ಮತ್ತು ಆಳವಾಗಿ ಬೇರೂರಿದೆ. ಭಾರತದ ಬೌದ್ಧಿಕ ವಲಯಗಳು, ಶೈಕ್ಷಣಿಕ ಸಂಸ್ಥೆ ಗಳು, ಮಾಧ್ಯಮ ಮತ್ತು ಸಾಂಸ್ಕೃತಿಕ ಚರ್ಚೆಗಳ ಮೇಲೆ ಈ ಸಿದ್ಧಾಂತದ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ಈ ಸಿದ್ಧಾಂತದ ಪ್ರಾಥಮಿಕ ಗುರಿ ಹಿಂದೂ ಧರ್ಮ ಮತ್ತು ಭಾರತೀಯ ಸನಾತನ ಮೌಲ್ಯಗಳು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕ್ರೈಸ್ತ ಮತ ಸಾಂಸ್ಥಿಕ ರೂಪವನ್ನು ಶೋಷಣೆಯ ಮೂಲ ವೆಂದು ಚಿತ್ರಿಸಿದ ರೀತಿಯಲ್ಲಿಯೇ, ಭಾರತದಲ್ಲಿ ಹಿಂದೂ ಧರ್ಮವನ್ನು ಒಂದು ಸರ್ವವ್ಯಾಪಿ ‘ದಮನಕಾರಿ ಶಕ್ತಿ’ಯಾಗಿ ಬಿಂಬಿಸಲಾಗುತ್ತಿದೆ.
ಭಾರತೀಯ ಇತಿಹಾಸ ಮತ್ತು ಸಮಾಜವಿಜ್ಞಾನದ ಅಧ್ಯಯನಗಳಲ್ಲಿ, ಭಾರತೀಯ ಸಂಸ್ಕೃತಿ ಯನ್ನು ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆಗಳಿಂದ ಮಾತ್ರ ವ್ಯಾಖ್ಯಾನಿಸಲಾಗುತ್ತಿದೆ. ಭಾರತದ ವಿಶಾಲವಾದ ದಾರ್ಶನಿಕ, ವೈಜ್ಞಾನಿಕ ಮತ್ತು ಸಾಹಿತ್ಯಿಕ ಕೊಡುಗೆಗಳನ್ನು ಕಡೆಗಣಿಸಿ, ಅದರ ಇತಿಹಾಸವನ್ನು ಕೇವಲ ಶೋಷಣೆಯ ವಿವರಣೆಪಟ್ಟಿಯಾಗಿ ಮಾರ್ಪಡಿಸಲಾಗಿದೆ.
ಪುರೋಹಿತ ಸಂಪ್ರದಾಯವನ್ನು ಸಮಾಜದ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವೆಂದು ಪ್ರಸ್ತುತ ಪಡಿಸುವ ಮೂಲಕ, ಹಿಂದೂ ಸಮಾಜವನ್ನು ಆಂತರಿಕವಾಗಿ ಒಡೆಯಲು ಪ್ರಯತ್ನಿಸಲಾಗುತ್ತಿದೆ. ದಲಿತರು, ಹಿಂದುಳಿದ ವರ್ಗಗಳು, ಆದಿವಾಸಿಗಳು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರನ್ನು ಒಂದೇ ವೇದಿಕೆಗೆ ತಂದು, ಅವರೆಲ್ಲರ ಸಾಮಾನ್ಯ ಶತ್ರು ಹಿಂದೂ ಧರ್ಮ ಮತ್ತು ಸಂಸ್ಕೃತಿ ಎಂದು ನಂಬಿಸುವ ‘ಒಡೆದು ಆಳುವ ನೀತಿ’ಯನ್ನು ಅನುಸರಿಸಲಾಗುತ್ತಿದೆ.
ವೈಚಾರಿಕ ಯುದ್ಧದ ನಾಲ್ಕು ಹಂತಗಳು: ಈ ಸಿದ್ಧಾಂತವನ್ನು ಕಾರ್ಯರೂಪಕ್ಕೆ ತರಲು ‘ಸೈದ್ಧಾಂತಿಕ ವಿಧ್ವಂಸಕತೆ’ ಅಥವಾ ವೈಚಾರಿಕ ಯುದ್ಧದ ತಂತ್ರಗಳನ್ನು ಬಳಸಲಾಗುತ್ತದೆ. ರಷ್ಯಾದ ಕೆಜಿಬಿ ಮತ್ತು ಅಮೆರಿಕದ ಸಾಮಾಜಿಕ ಸಂಘಟಕ ಸೌಲ್ ಅಲಿನ್ಸ್ಕಿಯ ತಂತ್ರಗಳಿಂದ ಪ್ರೇರಿತವಾದ ಈ ಪ್ರಕ್ರಿಯೆಯು ನಾಲ್ಕು ಸ್ಪಷ್ಟ ಹಂತಗಳಲ್ಲಿ ಸಾಗುತ್ತದೆ:
೧) ಮನೋಬಲ ಭಂಜನೆ: ಇದು ಸುಮಾರು ೧೫-೨೦ ವರ್ಷಗಳ ದೀರ್ಘಕಾಲೀನ ಪ್ರಕ್ರಿಯೆ. ಒಂದು ಇಡೀ ಪೀಳಿಗೆಯ ಶಿಕ್ಷಣ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಿ, ಅವರಿಗೆ ತಮ್ಮ ಸ್ವಂತ ದೇಶ, ಧರ್ಮ, ಸಂಸ್ಕೃತಿ ಮತ್ತು ಪೂರ್ವಜರ ಬಗ್ಗೆಯೇ ಅಪನಂಬಿಕೆ ಮತ್ತು ಕೀಳರಿಮೆ ಮೂಡಿಸಲಾಗುತ್ತದೆ.
ಭಾರತದ ಇತಿಹಾಸವನ್ನು ವ್ಯವಸ್ಥಿತವಾಗಿ ತಿರುಚಿ, ಮೊಘಲ್ ಅಥವಾ ಬ್ರಿಟಿಷ್ ಆಳ್ವಿಕೆಯನ್ನು ‘್ರಗತಿಪರ’ ಎಂದೂ, ಹಿಂದೂ ಸಂಸ್ಕೃತಿಯನ್ನು ‘ಹಿಂದುಳಿದ’ ಮತ್ತು ‘ಸರ್ವಾಧಿಕಾರಿ’ ಎಂದೂ ಚಿತ್ರಿಸಲಾಗುತ್ತದೆ. ಯಾವಾಗ ಒಂದು ದೇಶದ ಯುವಕರಿಗೆ ತಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನ ಕಡಿಮೆಯಾಗುತ್ತದೆಯೋ, ಆಗ ಆ ದೇಶವನ್ನು ರಕ್ಷಿಸಲು ಯಾರೂ ಮುಂದೆ ಬರುವುದಿಲ್ಲ.
೨) ಅಸ್ಥಿರತೆಯ ಸೃಷ್ಟಿ: ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಈ ಹಂತ ದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಸಾಧನಗಳನ್ನಾಗಿ ಬಳಸ ಲಾಗುತ್ತದೆ. ಭಾರತದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳು, ರೈತರ ಆಂದೋಲನಗಳು ಮತ್ತು ಮಣಿಪುರದಂಥ ಸೂಕ್ಷ್ಮ ಪ್ರದೇಶಗಳಲ್ಲಿ ಉಂಟಾ ಗುವ ಜನಾಂಗೀಯ ಘರ್ಷಣೆಗಳು ಈ ಹಂತದ ತಂತ್ರಕ್ಕೆ ಉದಾಹರಣೆಗಳು.
ಸರಕಾರದ ಯಾವುದೇ ಜನಪರ ನಿರ್ಧಾರವನ್ನೂ ವಿರೋಧಿಸುವುದು, ಆಡಳಿತ ವ್ಯವಸ್ಥೆಯ ಮೇಲೆ ಜನರ ವಿಶ್ವಾಸ ಕಳೆದುಹೋಗುವಂತೆ ಮಾಡುವುದು ಮತ್ತು ವಿದೇಶಿ ಮಾಧ್ಯಮಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವನ್ನು ಹಾಳುಮಾಡುವುದು ಈ ಹಂತದ ಉದ್ದೇಶ.
೩) ಸಂಕಟದ ಸೃಷ್ಟಿ: ಅಸ್ಥಿರತೆಯು ತುತ್ತತುದಿಗೆ ಮುಟ್ಟಿದಾಗ, ಸಮಾಜದಲ್ಲಿ ಪೂರ್ಣ ಪ್ರಮಾಣದ ಅರಾಜಕತೆಯನ್ನು ಸೃಷ್ಟಿಸಲಾಗುತ್ತದೆ. ಈ ಹಂತದಲ್ಲಿ, ಜನರು ಪರಸ್ಪರರ ವಿರುದ್ಧವೇ ತಿರುಗಿ ಬೀಳುವಂತೆ ಪರಿಸ್ಥಿತಿಯನ್ನು ತಿರುಗಿಸಲಾಗುತ್ತದೆ. ಅಂತರ್ಯುದ್ಧದಂಥ ಪರಿಸ್ಥಿತಿ ನಿರ್ಮಾಣವಾಗಿ, ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಚೌಕಟ್ಟು ಸಂಪೂರ್ಣವಾಗಿ ಕುಸಿಯುವ ಹಂತ ತಲುಪುತ್ತದೆ. ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಬಾಂಗ್ಲಾದೇಶಗಳು ಇದಕ್ಕೆ ಇತ್ತೀಚಿನ ಉದಾಹರಣೆಗಳು.
೪) ಸಾಮಾನ್ಯೀಕರಣ: ಇದು ಅಂತಿಮ ಹಂತ. ದೇಶವು ಸಂಪೂರ್ಣವಾಗಿ ಅರಾಜಕತೆಗೆ ಜಾರಿದಾಗ, ಕಮ್ಯುನಿಸ್ಟ್ ಸಿದ್ಧಾಂತವು ತಾನೇ ಸಮಾಜದ ರಕ್ಷಕ ಮತ್ತು ಸುಸ್ಥಾಪಕನೆಂಬಂತೆ ಬಿಂಬಿಸಿಕೊಂಡು ಅಧಿಕಾರವನ್ನು ಹಿಡಿಯುತ್ತದೆ. ನಂತರ ಅಲ್ಲಿ ಹೊಸದೊಂದು ಸರ್ವಾಧಿಕಾರಿ ಆಡಳಿತ ಜಾರಿಗೆ ಬರುತ್ತದೆ. ಆಗ ಜನರ ವೈಯಕ್ತಿಕ ಸ್ವಾತಂತ್ರ್ಯ, ವೈಚಾರಿಕತೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಿ, ಅದನ್ನೇ ‘ಹೊಸ ಸಹಜ ಸ್ಥಿತಿ’ ಎಂದು ಪ್ರಚಾರ ಮಾಡಲಾಗುತ್ತದೆ.
ಭಾರತದ ಮೇಲಿನ ಪರಿಣಾಮಗಳು: ಸದ್ಯದ ಭಾರತೀಯ ಸಮಾಜದ ಮೂಲಭೂತ ನೆಲೆಗಟ್ಟು ಗಳ ಮೇಲೆ ಈ ಸಿದ್ಧಾಂತದ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದು. ಆಧುನಿಕತೆ ಮತ್ತು ಪ್ರಗತಿಯ ಹೆಸರಿನಲ್ಲಿ ಭಾರತೀಯ ಕುಟುಂಬ ವ್ಯವಸ್ಥೆಯನ್ನು ಯೋಜನಾಪೂರ್ವಕ ದುರ್ಬಲ ಗೊಳಿಸಲಾಗುತ್ತಿದೆ. ಪಾಶ್ಚಾತ್ಯ ‘ವೋಕ್ ಸಂಸ್ಕೃತಿ’ (Uಟhಛಿ ಇಠ್ಠ್ಟಿಛಿ) ನಗರಗಳ ಯುವಜನತೆಯ ಮೇಲೆ ತನ್ನ ಪ್ರಭಾವ ಬೀರುತ್ತಿದೆ.
ತಂದೆ-ತಾಯಿ, ಹಿರಿಯರು ಮತ್ತು ಗುರುಗಳ ಬಗ್ಗೆಯ ಗೌರವವನ್ನು ‘ದಾಸ್ಯ’ ಎಂದೂ, ವಿವಾಹ ದಂಥ ಪವಿತ್ರ ಬಂಧವನ್ನು ‘ಸಾಮಾಜಿಕ ಬಂಧನ’ ಎಂದೂ ತಪ್ಪಾಗಿ ಚಿತ್ರಿಸಲಾಗುತ್ತಿದೆ. ಸ್ವೇಚ್ಛಾ ಚಾರದ ಲೈಂಗಿಕ ಸಂಬಂಧಗಳು ಮತ್ತು ‘ಲಿವಿಂಗ್ ಟುಗೆದರ್’ ಪರಿಪಾಠಗಳನ್ನು ಸ್ವಾತಂತ್ರ್ಯದ ಸಂಕೇತಗಳಾಗಿ ಬಿಂಬಿಸಲಾಗುತ್ತಿದೆ.
ಸಿನಿಮಾ, ವೆಬ್ ಸರಣಿಗಳು ಮತ್ತು ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಹಿಂದೂ ಸಂಪ್ರದಾಯಗಳು, ಹಬ್ಬಗಳು ಮತ್ತು ಆಚರಣೆಗಳನ್ನು ಹೀಯಾಳಿಸುವುದು, ಅವುಗಳ ಹಿಂದೆ ‘ಪಿತೂರಿ’ ಇದೆ ಎಂಬಂತೆ ಚಿತ್ರಿಸುವುದು ಒಂದು ಸಾಮಾನ್ಯ ರೂಢಿಯಾಗಿದೆ. ಆದರೆ, ಅದೇ ಸಮಯದಲ್ಲಿ, ಇತರ ಧಾರ್ಮಿಕ ಸಮುದಾಯಗಳ ಮೌಢ್ಯಗಳನ್ನು ಪ್ರಶ್ನಿಸುವ ಧೈರ್ಯವನ್ನು ಈ ಬುದ್ಧಿಜೀವಿ ವರ್ಗ ತೋರಿಸುವುದಿಲ್ಲ.
ಪರಿಸರ ಕಾಳಜಿಯ ಹೆಸರಿನಲ್ಲಿ, ದೀಪಾವಳಿ ಅಥವಾ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಾತ್ರ ವಿಶೇಷವಾಗಿ ಮಾಲಿನ್ಯದ ಪ್ರಶ್ನೆಯನ್ನು ಎತ್ತಲಾಗುತ್ತದೆ, ಆದರೆ ವರ್ಷವಿಡೀ ನಡೆಯುವ ಇತರ ಮಾಲಿನ್ಯಕಾರಕ ಚಟುವಟಿಕೆಗಳ ಬಗ್ಗೆ ಮೌನ ವಹಿಸಲಾಗುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಭಾರತೀಯ ಜ್ಞಾನಪರಂಪರೆಯನ್ನು ನಿರ್ಲಕ್ಷಿಸಿ, ಕೇವಲ ಪಾಶ್ಚಾತ್ಯ ದೃಷ್ಟಿ ಕೋನಗಳು ಮತ್ತು ಸಿದ್ಧಾಂತಗಳನ್ನೇ ಸತ್ಯದ ಏಕೈಕ ಮಾನದಂಡವೆಂದು ಬೋಧಿಸಲಾಗುತ್ತಿದೆ. ಇದರಿಂದಾಗಿ, ನಮ್ಮ ಯುವಜನರು ತಮ್ಮ ಸ್ವಂತ ಸಾಂಸ್ಕೃತಿಕ ವಾರಸುದಾರ ರಾಗಿರುವುದರ ಬದಲು, ಪಾಶ್ಚಾತ್ಯರ ಅನುಕರಣೆ ಮಾಡುವ, ತಮ್ಮತನವನ್ನು ಕಳೆದುಕೊಂಡ ‘ಬೊಂಬೆಗಳಾಗಿ’ ಮಾರ್ಪಡುತ್ತಿದ್ದಾರೆ.
ಪುನರುತ್ಥಾನದ ಮಾರ್ಗ: ಈ ಮಹಾ ಸಾಂಸ್ಕೃತಿಕ ಆಪತ್ತಿನಿಂದ ಪಾರಾಗಲು ಮತ್ತು ಭಾರತದ ಅಸ್ಮಿತೆಯನ್ನು ಉಳಿಸಿಕೊಳ್ಳಲು, ವ್ಯವಸ್ಥಿತ ಮತ್ತು ದೃಢನಿಶ್ಚಯದ ಕ್ರಮಗಳ ಅವಶ್ಯಕತೆ ಇದೆ.
ಅವುಗಳೆಂದರೆ:
೧) ಶೈಕ್ಷಣಿಕ ಸುಧಾರಣೆ: ಇದು ಅತ್ಯಂತ ತುರ್ತು ಮತ್ತು ಮೂಲಭೂತ ಹಂತ. ಶಿಕ್ಷಣ ವ್ಯವಸ್ಥೆ ಯಲ್ಲಿ ಆಮೂಲಾಗ್ರ ಬದಲಾವಣೆ ತಂದು, ಭಾರತೀಯ ದೃಷ್ಟಿಕೋನವನ್ನು ಮರುಸ್ಥಾಪಿಸಬೇಕು. ರಾಮಾಯಣ, ಮಹಾಭಾರತ, ವೇದ, ಉಪನಿಷತ್ ಮತ್ತು ಇತರ ಶಾಸಗಳ ಸಾರವನ್ನು ಪಠ್ಯಕ್ರಮ ದಲ್ಲಿ ಸೇರಿಸಿ, ಯುವಜನರಲ್ಲಿ ಸ್ವಾಭಿಮಾನ ಮತ್ತು ಸಂಸ್ಕೃತಿಯ ಬಗ್ಗೆ ಅರಿವನ್ನು ಬೆಳೆಸಬೇಕು. ಕೇವಲ ಪದವಿ ಮತ್ತು ಉದ್ಯೋಗದ ಕಡೆಗೆ ಒಲವು ತೋರುವ ಶಿಕ್ಷಣದ ಬದಲು, ಚಾರಿತ್ರ್ಯ ನಿರ್ಮಾಣ ಮತ್ತು ಮೌಲ್ಯಾತ್ಮಕ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಬೇಕು.
೨) ಕುಟುಂಬ ವ್ಯವಸ್ಥೆಯ ಪುನರುಜ್ಜೀವನ: ಕುಟುಂಬವೇ ಭಾರತೀಯ ಸಮಾಜದ ಹೃದಯ. ಸಾಂಸ್ಕೃತಿಕ ಮಾರ್ಕ್ಸ್ ವಾದದ ಪ್ರಾಥಮಿಕ ಗುರಿಯೇ ಕುಟುಂಬ ವ್ಯವಸ್ಥೆಯನ್ನು ದುರ್ಬಲ ಗೊಳಿಸುವುದು. ಆದ್ದರಿಂದ, ಬಲವಾದ ಕುಟುಂಬ ಬಂಧಗಳನ್ನು ಉಳಿಸಿಕೊಳ್ಳುವುದು ಮತ್ತು ಬಲಪಡಿಸುವುದು ಅತ್ಯಗತ್ಯ. ಹಿರಿಯರ ಗೌರವ, ಪರಸ್ಪರ ಅವಲಂಬನೆ ಮತ್ತು ಸಮುದಾಯದ ಭಾವನೆಯನ್ನು ಪುನರುತ್ಥಾನಗೊಳಿಸಬೇಕು.
೩) ಬೌದ್ಧಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನ: ಕಲೆ, ಸಾಹಿತ್ಯ, ಸಿನಿಮಾ ಮತ್ತು ಮಾಧ್ಯಮ ಗಳಲ್ಲಿ ರಾಷ್ಟ್ರೀಯ ಚೇತನ/ಸ್ಪೂರ್ತಿ ಮತ್ತು ಸಕಾರಾತ್ಮಕ ಕಥನಗಳನ್ನು ಪ್ರೋತ್ಸಾಹಿಸಬೇಕು. ಭಾರತದ ವಿರುದ್ಧದ ಸುಳ್ಳು ಮತ್ತು ನಕಾರಾತ್ಮಕ ಕಥನಗಳಿಗೆ ಪ್ರಬಲವಾದ ಬೌದ್ಧಿಕ, ತಾರ್ಕಿಕ ಮತ್ತು ಸಂಶೋಧನಾತ್ಮಕ ಉತ್ತರವನ್ನು ನೀಡಬೇಕು.
ಸತ್ಯವನ್ನು ಜಗತ್ತಿಗೆ ಸಾರುವ ಮತ್ತು ಭಾರತದ ಮಹಾನ್ ಪರಂಪರೆಯನ್ನು ಪ್ರಸಾರಮಾಡುವ ಹೊಸ ಪೀಳಿಗೆಯ ಬುದ್ಧಿಜೀವಿಗಳು, ಇತಿಹಾಸಕಾರರು ಮತ್ತು ಮಾಧ್ಯಮದವರನ್ನು ಬೆಳೆಸಬೇಕು.
೪) ಸಾರ್ವಜನಿಕ ಜಾಗೃತಿ: ಸಾಂಸ್ಕೃತಿಕ ಮಾರ್ಕ್ಸ್‌ವಾದದ ನಿಜಸ್ವರೂಪ, ಅದರ ತಂತ್ರಗಳು ಮತ್ತು ದೀರ್ಘಕಾಲೀನ ಗುರಿಗಳ ಬಗ್ಗೆ ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ಜಾಗೃತಿ ಮೂಡಿಸ ಬೇಕು. ಸಮಾನತೆ ಮತ್ತು ಸ್ವಾತಂತ್ರ್ಯದ ಆಕರ್ಷಕ ಘೋಷಣೆಗಳ ಹಿಂದೆ ಅಡಗಿರುವ ವಿನಾಶಕಾರಿ ಉದ್ದೇಶವನ್ನು ಅರ್ಥಮಾಡಿಕೊಳ್ಳುವಂತೆ ಮಾಡಬೇಕು.
ಸಾಂಸ್ಕೃತಿಕ ಮಾರ್ಕ್ಸ್‌ವಾದವು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮುಖವಾಡ ಧರಿಸಿ, ಸಮಾಜದ ಮೂಲಭೂತ ನೆಲೆಗಟ್ಟುಗಳನ್ನೇ ನಾಶಮಾಡುವ ಉದ್ದೇಶ ಹೊಂದಿದೆ. ಇದು ಒಂದು ರೀತಿಯ ಬೌದ್ಧಿಕ ವಿಷವಾಗಿದ್ದು, ಸಿಹಿಲೇಪನದೊಂದಿಗೆ ನಮ್ಮನ್ನು ತಲುಪಿ, ರಾಷ್ಟ್ರದ ಆಂತರಿಕ ಏಕತೆ ಮತ್ತು ಸಾಂಸ್ಕೃತಿಕ ಸ್ವಾಭಿಮಾನವನ್ನು ಕ್ರಮೇಣ ನಾಶಮಾಡುತ್ತದೆ.
ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸಾಂಸ್ಕೃತಿಕ ನಿರಂತರತೆಯನ್ನು ಕಾಪಾಡಿಕೊಳ್ಳಲು, ಈ ಸಿದ್ಧಾಂತದ ನಿಜಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರ ವಿರುದ್ಧ ಬೌದ್ಧಿಕ ಹಾಗೂ ಸಾಂಸ್ಕೃತಿಕ ರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುವುದು ಅತ್ಯವಶ್ಯಕವಾಗಿದೆ.
ನಮ್ಮ ಸಂಸ್ಕೃತಿಯೇ ನಮ್ಮ ಅಸ್ತಿತ್ವದ ಆಧಾರಸ್ತಂಭ ಮತ್ತು ರಕ್ಷಾಕವಚವಾಗಿದೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಂಡು, ನಮ್ಮ ಮುಂದಿನ ಪೀಳಿಗೆಗೆ ಶ್ರೀಮಂತ ಮತ್ತು ಅವಿಚ್ಛಿನ್ನ ಸಾಂಸ್ಕೃ ತಿಕ ಪರಂಪರೆಯನ್ನು ಒದಗಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
(ಲೇಖಕರು ಕೇಂದ್ರೀಯ ವಿಶ್ವವಿದ್ಯಾಲಯದ
ಪ್ರಾಧ್ಯಾಪಕರು)