Dr Niranjan Pujara Column: ಉಚಿತ ಭಾಗ್ಯಗಳ ಮೋಹದಿಂದ ಕುಸಿದ ರಾಷ್ಟ್ರಗಳ ಕಥೆ
ಶ್ರೀಲಂಕಾ 2019ರಲ್ಲಿ ಜಾರಿಗೆ ತಂದ ತೆರಿಗೆ ಕಡಿತಗಳು ರಾಜ್ಯದ ಆದಾಯವನ್ನು ಸುಮಾರು ಶೇ.೨೫ರಷ್ಟು ಕುಸಿಯುವಂತೆ ಮಾಡಿದವು. 2021ರ ವೇಳೆಗೆ ಸಾರ್ವಜನಿಕ ಸಾಲವು ಜಿಡಿಪಿ ಯ ಶೇ.119ರಷ್ಟು ಮಟ್ಟಕ್ಕೆ ಏರಿತು, ಮತ್ತು ವಿದೇಶಿ ವಿನಿಮಯ ನಿಧಿ ಕೇವಲ 400 ಕೋಟಿ ರೂ. ಮಟ್ಟಕ್ಕೆ ಇಳಿಯಿತು. 2022ರ ಆರಂಭದಲ್ಲಿ ಇಂಧನ ಮತ್ತು ಆಹಾರ ಆಮದು ನಿಂತು ಹೋದಾಗ ರಾಷ್ಟ್ರವ್ಯಾಪಿ ಜನಪ್ರತಿಭಟನೆಗಳು ಸ್ಫೋಟಿಸಿದವು.
-
ವಿಶ್ಲೇಷಣೆ
ಡಾ.ನಿರಂಜನ ಪೂಜಾರ
ಸಮಾಜವಾದದ ಮೋಹಕ ಆಕರ್ಷಣೆಯಿಂದಾಗಿ ದಿವಾಳಿಯಾದ ಅನೇಕ ರಾಷ್ಟ್ರಗಳ ಕಥೆಯನ್ನು ಆರ್ಥಿಕ ಇತಿಹಾಸದ ಪುಟಗಳು ಸ್ಪಷ್ಟವಾಗಿ ತೆರೆದಿಡುತ್ತವೆ. ಜನರಿಗೆ ಸಮಾ ನತೆಯ ಕನಸನ್ನು ಬಿತ್ತಿದ ಸರಕಾರಗಳು, ಅಂತಿಮವಾಗಿ ತಮ್ಮದೇ ರಾಷ್ಟ್ರಗಳನ್ನು ದಾರಿದ್ರ್ಯ, ಅಪಾರ ಸಾಲ ಮತ್ತು ಆರ್ಥಿಕ ಕುಸಿತದ ಆಳಕ್ಕೆ ತಳ್ಳಿವೆ. ಉಚಿತ ಭಾಗ್ಯಗಳು, ಆರ್ಥಿಕ ಸಮತೆಯ ಘೋಷಣೆಗಳು ಮತಪೆಟ್ಟಿಗೆಯಲ್ಲಿ ಮಧುರವಾಗಿ ಪ್ರತಿಧ್ವನಿಸುತ್ತವೆ; ಆದರೆ ಅಧಿಕಾರಕ್ಕೆ ಬಂದಾಗ ಅವು ರಾಷ್ಟ್ರದ ಉತ್ಪಾದಕ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸುತ್ತವೆ.
ಸಮಾಜವಾದದ ಸಿದ್ಧಾಂತಗಳು ಮಾನವ ಪ್ರಗತಿಯ ಶಕ್ತಿಯನ್ನೇ ನಾಶಮಾಡುವಂಥ ಅಗಾಧ ಸಾಮರ್ಥ್ಯವನ್ನು ಹೊಂದಿವೆ. ಶ್ರಮಕ್ಕೆ ಪ್ರೇರಣೆ ಇಲ್ಲದ ಸಮಾಜ, ಕೇಂದ್ರೀಕೃತ ನಿಯಂತ್ರಣದಲ್ಲಿ ಸಿಲುಕಿದ ಆರ್ಥಿಕತೆ, ಮಿತಿಮೀರಿದ ಸಾಲ ಮತ್ತು ಉತ್ಪಾದನೆಗಿಂತ ಹೆಚ್ಚು ಖರ್ಚು ಈ ಅಂಶಗಳು ಸಂಪೂರ್ಣ ಆಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತವೆ.
ಆಧುನಿಕ ಇತಿಹಾಸದಲ್ಲಿ ಈ ಮಾದರಿ ಅನೇಕ ಬಾರಿ ದೃಢಪಟ್ಟಿದೆ; ಇದು ಕೇವಲ ಷಡ್ಯಂತ್ರ ಸಿದ್ಧಾಂತವಲ್ಲ (Conspiracy Theory). ಸೋವಿಯತ್ ಯುಗದಿಂದ ವೆನೆಜುವೆಲಾ ದವರೆಗೂ, ಸಮಾಜವಾದದ ಭರವಸೆಗಳು ಪ್ರಾರಂಭದಲ್ಲಿ ಜನರಿಗೆ ಆಶಾದಾಯಕವಾಗಿ ಕಂಡರೂ, ಅಂತಿಮವಾಗಿ ಅವುಗಳೇ ಭಾರವಾದ ಆರ್ಥಿಕ ಬಾಧ್ಯತೆಯಾಗಿ ದೇಶವನ್ನು ದಿವಾಳಿ ಮಾಡಿದವು. ಈ ಕಥೆಗಳು ಕೇವಲ ರಾಜಕೀಯ ವಿಚಾರವಲ್ಲ, ಕಠೋರ ಅನುಭವದ ಸತ್ಯವೂ ಹೌದು.
ಇದನ್ನೂ ಓದಿ: Dr Niranjan Pujara Column: ಉಚಿತ ಭಾಗ್ಯಗಳ ಹಿಂದೆ ಅಡಗಿರುವ ಆರ್ಥಿಕ ಅಪಾಯ
ಸೋವಿಯತ್ ಒಕ್ಕೂಟದ ಪತನ (1991): ಸೋವಿಯತ್ ಒಕ್ಕೂಟವು ಈ ಕಥೆಯ ಮೊದಲ ಮತ್ತು ಅತ್ಯಂತ ದೊಡ್ಡ ಚಾರಿತ್ರಿಕ ಅಧ್ಯಾಯ. ಕೈಗಾರಿಕಾ ಅಭಿವೃದ್ಧಿ, ತಂತ್ರ ಜ್ಞಾನ ಮತ್ತು ಸಾಮಾಜಿಕ ಸಮಾನತೆಯ ಹೆಸರಿನಲ್ಲಿ ಕೇಂದ್ರೀಯ ನಿಯಂತ್ರಣವನ್ನು ಬಲವಾಗಿ ಅಳವಡಿಸಿಕೊಂಡ ಸೋವಿಯತ್ ವ್ಯವಸ್ಥೆ ಪ್ರಾರಂಭದಲ್ಲಿ ಪ್ರಗತಿಯ ಸಂಕೇತ ದಂತೆ ಭಾಸವಾಯಿತು. ಆದರೆ ಅದು ವೈಯಕ್ತಿಕ ಉತ್ಪಾದಕತೆಯಿಂದ ಪ್ರೇರಿತರಾದ ಪ್ರಜೆಗಳ ಬದಲಿಗೆ, ಕೇವಲ ನಿಯಮಗಳಿಗೆ ಬದ್ಧರಾದ ಉದ್ಯೋಗಿಗಳನ್ನು ಸೃಷ್ಟಿಸಿತು.
ವೈಯಕ್ತಿಕ ಪ್ರೇರಣೆ ಇಲ್ಲದ ಸಮಾಜವು ನಿಧಾನವಾಗಿ ತನ್ನ ಆರ್ಥಿಕ ಚೈತನ್ಯವನ್ನು ಕಳೆದುಕೊಂಡಿತು.
1970ರ ದಶಕದ ವೇಳೆಗೆ ಕೈಗಾರಿಕಾ ಬೆಳವಣಿಗೆ ಶೇ.೧ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿಯಿತು. ಆಹಾರ ಹಾಗೂ ದಿನಬಳಕೆಯ ವಸ್ತುಗಳ ಕೊರತೆ ಪ್ರತಿ ಮನೆಯ ದೈನಂದಿನ ಕಥೆಯಾ ಯಿತು. ಅದೇ ಸಮಯದಲ್ಲಿ, ದೇಶದ ಸೈನಿಕ ಖರ್ಚು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಕಾಲುಭಾಗಕ್ಕೆ ಏರಿತು. ಇದರ ಪರಿಣಾಮವಾಗಿ, 1989ರ ಹೊತ್ತಿಗೆ ವಿದೇಶಿ ಸಾಲಗಳು 60 ಬಿಲಿಯನ್ ಡಾಲರ್‌ಗೆ ತಲುಪಿದವು.
ಇದು ಸಮಾಜವಾದ ವ್ಯವಸ್ಥೆಯ ನಿಜವಾದ ಆರ್ಥಿಕ ದುರ್ಬಲತೆಯನ್ನು ಬಯಲು ಮಾಡಿತು. 1991ರಲ್ಲಿ, ಜಗತ್ತಿನ ಅತಿದೊಡ್ಡ ಸಮಾಜದಿ ರಾಜ್ಯವು ಪತನಗೊಂಡಿತು. ಅದು ಕೇವಲ ರಾಜಕೀಯ ಪತನವಲ್ಲ, ವಿಫಲ ಸಿದ್ಧಾಂತದ ದರ್ಶನವೂ ಆಗಿತ್ತು. ಜನರನ್ನು ಸಮಾನವಾದ ಜೀವನದೆಡೆಗೆ ನಡೆಸಬೇಕೆಂಬ ಆಶಯದಲ್ಲಿದ್ದ ವ್ಯವಸ್ಥೆಯು, ಕೊನೆಗೆ ಅನಿಯಂತ್ರಿತ ಕೇಂದ್ರೀಕರಣದ ಭಾರದಿಂದಾಗಿ ಕುಸಿಯಿತು ಮತ್ತು ಅತಿ ದೊಡ್ಡ ಸಾಮ್ರಾಜ್ಯ ತುಂಡುತುಂಡಾಯಿತು.
ಚೀನಾದ ಪಲ್ಲಟ (1978): ಇದಾದ ಬಳಿಕ, ಚೀನಾದ ಪ್ರಯೋಗವೂ ಇದೇ ಪಾಠವನ್ನು ಸಾರಿತು. ಮಾವೋವಾದಿ ಸಮಾಜವಾದವು ದೇಶವನ್ನು ಹಸಿವಿನ ನಾಡಾಗಿಸಿತು, ಕಠಿಣ ನಿಯಂತ್ರಣವು ರೈತರ ಪ್ರೇರಣೆ ಮತ್ತು ಸ್ವಾತಂತ್ರ್ಯವನ್ನು ನಾಶ ಮಾಡಿತು. 1958ರಿಂದ 1962ರ ಗ್ರೇಟ್ ಲೀಪ್ ಫಾರ್ವರ್ಡ್ ಸಮಯದಲ್ಲಿ, ಲಕ್ಷಾಂತರ ಜನರು ಆಹಾರ ಕೊರತೆ ಯಿಂದ ಸಾವನ್ನಪ್ಪಿದರು; ಇದು ಮಾನವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದು.
ನಂತರ 1978ರಲ್ಲಿ ಡೆಂಗ್ ಕ್ಸಿಯಾಪಿಂಗ್ ಅಧಿಕಾರಕ್ಕೆ ಬಂದ ನಂತರ, ಚೀನಾದಲ್ಲಿ ಮಹತ್ತರ ಬದಲಾವಣೆಗಳು ಆರಂಭವಾದವು. ಕೇಂದ್ರ ನಿಯಂತ್ರಣದ ಅಡ್ಡಿಗಳನ್ನು ನಿಧಾನವಾಗಿ ತೆಗೆದು ಹಾಕಿ, ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿದಾಗ, ಚೀನಾ ತನ್ನ ಅಭೂತಪೂರ್ವ ಆರ್ಥಿಕ ಪುನರುತ್ಥಾನವನ್ನು ಕಂಡಿತು.
ಭಾರತದ ಪಾಠ (1991): ಭಾರತದ ಕಥೆಯೂ ಇದೇ ಪಾಠವನ್ನು ಪುನರುಚ್ಚರಿಸುತ್ತದೆ. ಸ್ವತಂತ್ರ ಭಾರತವು ಅಳವಡಿಸಿಕೊಂಡ ಮಿಶ್ರ ಆರ್ಥಿಕತೆ ಎಂಬ ಹೆಸರಿನ ಸಮಾಜವಾದಿ ಮಾದರಿಯಲ್ಲಿ ಸರಕಾರದ ನಿಯಂತ್ರಣ ಮತ್ತು ಭಾರಿ ಸಬ್ಸಿಡಿಗಳು ಪ್ರಧಾನವಾಗಿದ್ದವು. ‘ಲೈಸೆ ರಾಜ್’ ವ್ಯವಸ್ಥೆ ಖಾಸಗಿ ಉದ್ಯಮವನ್ನು ಬಿಗಿಯಾಗಿ ಕಟ್ಟಿಹಾಕಿತು. 1991ರ ವೇಳೆಗೆ, ದೇಶದ ಆರ್ಥಿಕತೆ ಬಿಕ್ಕಟ್ಟಿನ ಅಂಚಿನಲ್ಲಿ ನಿಂತಿತ್ತು.
ವಿದೇಶಿ ವಿನಿಮಯ ನಿಧಿ ( Forex Reserve) 1.2 ಬಿಲಿಯನ್ ಡಾಲರ್ ಮಾತ್ರ ಉಳಿದಿತ್ತು, ಇದು ಮೂರು ವಾರಗಳ ಆಮದುಗಳಿಗೆ ಸಾಕಾಗುವಷ್ಟು ಮಾತ್ರ. ಈ ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ, ಭಾರತವು ತನ್ನ ಚಿನ್ನವನ್ನು ವಿಮಾನದಲ್ಲಿ Bank of England ಮತ್ತು IMF ಗೆ ಸಾಗಿಸಬೇಕಾಯಿತು. ಭಾರತದ ಒಟ್ಟು ಉತ್ಪಾದನೆ (ಜಿಡಿಪಿ) ಬೆಳವಣಿಗೆ ಶೇ.೧.೧ಕ್ಕೆ ಕುಸಿಯಿತು,
ಹಣದುಬ್ಬರ (Inflation) ಶೇ.೧೫ರ ಗಡಿಯನ್ನು ದಾಟಿತ್ತು, ಮತ್ತು ಸುಮಾರು ಶೇ.45ರಷ್ಟು ಜನರು ಬಡತನದ ರೇಖೆಯಲ್ಲಿದ್ದರು. ಇದು ಸರಕಾರಿ ನಿಯಂತ್ರಣದ, ಸರಕಾರದ ಮೇಲಿನ ಅವಲಂಬನೆಯ ಫಲಿತಾಂಶವಾಗಿತ್ತು.
ಪೂರ್ವ ಯುರೋಪಿನ ಪತನ (1989): ಪೂರ್ವ ಜರ್ಮನಿ, ಪೋಲೆಂಡ್, ಜೆಕೊಸ್ಲೊ ವಾಕಿಯಾ, ರೊಮೇನಿಯಾ, ಬಲ್ಗೇರಿಯಾ, ಹಂಗೇರಿ ಈ ಎಲ್ಲಾ ರಾಷ್ಟ್ರಗಳು ಸೋವಿಯತ್ ಮಾದರಿಯ ಕೇಂದ್ರ ನಿಯಂತ್ರಣಕ್ಕೆ ಶರಣಾಗಿದ್ದವು. 1980ರ ಅಂತ್ಯದ ಹೊತ್ತಿಗೆ ಜಿಡಿಪಿ ಬೆಳವಣಿಗೆ ಶೇ.೧ಕ್ಕಿಂತ ಕಡಿಮೆ. ಪೋಲೆಂಡ್‌ನಲ್ಲಿ ಹಣದುಬ್ಬರ ಶೇ.300ನ್ನು ಮೀರಿತು, ಮತ್ತು ಬಾಹ್ಯ ಸಾಲವು 100 ಬಿಲಿಯನ್ ಡಾಲರ್‌ಗೆ ತಲುಪಿತು.
ಸಮಾಜವಾದ ಕುಸಿದಾಗ, ಆರ್ಥಿಕ ವ್ಯವಸ್ಥೆಗಳ ನಿಜಸ್ವರೂಪ ಹೊರ ಬಂತು. ಅವೆಂದರೆ- ಖಾಲಿ ಖಜಾನೆಗಳು, ನಿಷ್ಕ್ರಿಯ ಕಾರ್ಖಾನೆಗಳು ಮತ್ತು ಭಾರಿ ಸಾಲ. ನಂತರ ಈ ದೇಶಗಳು ಐಎಂಎ-ನ ನೀತಿಯ ನಿಯಂತ್ರಣದಲ್ಲಿ ನೋವಿನಿಂದ ಮುಕ್ತ ಮಾರುಕಟ್ಟೆಯ ಮಾರ್ಗ ವನ್ನು ಹಿಡಿದವು.
ಕಾರ್ಮಿಕರ ಸ್ವರ್ಗ ಎಂದು ಕರೆಯಲಾಗುತ್ತಿದ್ದ ಯುಗೋಸ್ಲಾವಿಯಾದ ಕಥೆ ಮಾನವೀಯ ದೃಷ್ಟಿಯಿಂದ ಅತ್ಯಂತ ದುಃಖಕರ. ಕಾರ್ಮಿಕರ ಸ್ವ-ನಿರ್ವಹಣೆಯ ಮಾದರಿ ಎನ್ನಲ್ಪಟ್ಟ ಈ ರಾಷ್ಟ್ರವು 1991ರ ಬಳಿಕ ಛಿದ್ರವಾಯಿತು. ಅತಿವಿಸ್ತಾರವಾದ ಸಬ್ಸಿಡಿ ಮತ್ತು ಕೋಶೀಯ ಸಾಲಗಳು (Fiscal Debts) ಅತಿ ಹಣದುಬ್ಬರಕ್ಕೆ ಕಾರಣವಾದವು.
ಜನವರಿ 1994ರಲ್ಲಿ, ಹಣದುಬ್ಬರ 313 ಮಿಲಿಯನ್ ಪ್ರತಿಶತ ತಲುಪಿತು, ಬೆಲೆಗಳು ಪ್ರತಿ ೩೪ ಗಂಟೆಗಳಿಗೆ ದ್ವಿಗುಣವಾಗುತ್ತಿದ್ದವು. ದೇಶದ ಕರೆನ್ಸಿ ದಿನಾರ್ ಸಂಪೂರ್ಣ ನಿರರ್ಥಕ ವಾಯಿತು. ಸೋವಿಯತ್ ಅವಲಂಬಿತವಾಗಿದ್ದ ಕ್ಯೂಬಾ, 1990ರ ದಶಕದಲ್ಲಿ ತನ್ನ ವ್ಯಾಪಾರದ ಶೇ.80ರಷ್ಟನ್ನು ಕಳೆದುಕೊಂಡಿತು.
ಅಡುಗೆ ಎಣ್ಣೆ ಮತ್ತು ಆಹಾರದ ಕೊರತೆ, ಅಸ್ಥಿರ ಜೀವನ ಇದು ಕ್ಯೂಬಾ ದೇಶವು ಸಮಾಜ ವಾದಕ್ಕೆ ಕಟ್ಟಿದ ನಿಜವಾದ ಬೆಲೆಯಾಗಿತ್ತು. ಎಷ್ಟೇ ಕ್ರಾಂತಿಯ ಘೋಷಣೆಗಳು ಇರಲಿ, ಆರ್ಥಿಕ ಸತ್ಯದಿಂದ ಯಾರೂ ತಪ್ಪಿಸಿಕೊಳ್ಳಲಾರರು, ಸಮಾಜವಾದದ ಸಿದ್ಧಾಂತಕ್ಕೆ ಸಿಲುಕಿದ ಕ್ಯೂಬಾ, ಉತ್ತರ ಕೊರಿಯಾ, ಮತ್ತು ಅರ್ಜೆಂಟೀನಾದಂಥ ದೇಶಗಳು ತಮ್ಮ ಆರ್ಥಿಕ ಅಸ್ತಿತ್ವವನ್ನೇ ಕಳೆದುಕೊಂಡವು.
ವೆನೆಜುವೆಲಾದ ಭೀಕರ ಪತನ: 2014ರ ತರುವಾಯದ ವೆನೆಜುವೆಲಾದ ಪತನ ಇನ್ನೂ ಸ್ಪಷ್ಟ ಮತ್ತು ಇತ್ತೀಚಿನ ಪಾಠ. ಒಮ್ಮೆ ಲ್ಯಾಟಿನ್ ಅಮೆರಿಕದ ಅತ್ಯಂತ ಶ್ರೀಮಂತ ರಾಷ್ಟ್ರ ವಾಗಿದ್ದ ವೆನೆಜುವೆಲಾ, ಸಮಾಜವಾದಿ ಆಡಳಿತಕ್ಕೆ ಸಿಲುಕಿ ಕೈಗಾರಿಕೆಗಳನ್ನು ರಾಷ್ಟ್ರೀಕರಣ ಮಾಡಿತು, ಬೆಲೆಗಳನ್ನು ನಿಗದಿಪಡಿಸಿತು ಮತ್ತು ಉಚಿತ ಭಾಗ್ಯಗಳ ಮೂಲಕ ತೈಲ ಸಂಪತ್ತನ್ನು ವಿತರಿಸಿತು. ತೈಲದ ಬೆಲೆ ಕುಸಿಯಲು ಆರಂಭಿಸಿದಾಗ ಸರಕಾರದ ಆದಾಯ ವೂ ದೊಡ್ಡಮಟ್ಟದಲ್ಲಿ ಕುಸಿಯಿತು. ಸುಧಾರಣೆಯ ಬದಲಿಗೆ, ಆಡಳಿತವು ಅನಿಯಮಿತ ವಾಗಿ ಹಣವನ್ನು ಮುದ್ರಿಸಿತು.
2018ರ ಹೊತ್ತಿಗೆ ಹಣದುಬ್ಬರ ಶೇ.೧,೦೦೦,೦೦೦ದಷ್ಟು ಮೀರಿತು, ಜಿಡಿಪಿ ಶೇ.25ರಷ್ಟು ಕುಸಿಯಿತು, ಮತ್ತು ಬಡತನದ ಪ್ರಮಾಣ ಶೇ.90ಕ್ಕೆ ಏರಿತು. ದೇಶದ ಅರ್ಧದಷ್ಟು ನಾಗರಿ ಕರು ವಿದೇಶಗಳಿಗೆ ಪಲಾಯನ ಮಾಡಿದರು. ವಿಶ್ವದ ಅತಿದೊಡ್ಡ ತೈಲ ಸಂಚಿತ ನಿಧಿ ಯನ್ನು ಹೊಂದಿದ್ದ ದೇಶವು ಸಮಾಜವಾದಿ ನೀತಿಗಳಿಂದಾಗಿ ಸಂಪೂರ್ಣ ಆರ್ಥಿಕ ನಾಶಕ್ಕೆ ಒಳಗಾಯಿತು.
ದಕ್ಷಿಣ ಏಷ್ಯಾದ ಪಾಠ: ಶ್ರೀಲಂಕಾ ಮತ್ತು ಪಾಕಿಸ್ತಾನ ವರ್ಷಗಳ ಕಾಲ ಜನಪರ ಕಲ್ಯಾಣ ಎಂಬ ಹೆಸರಿನಲ್ಲಿ ಜಾರಿಯಾದ ಅತಿಯಾದ ಸರಕಾರಿ ಖರ್ಚುಗಳು ಮತ್ತು ಸುಸ್ಥಿರವಲ್ಲದ ಯೋಜನೆಗಳು ದೇಶದ ಹಣಕಾಸು ಶಿಸ್ತನ್ನು ಸಂಪೂರ್ಣವಾಗಿ ಹಾಳು ಮಾಡಿದವು.
ಶ್ರೀಲಂಕಾ 2019ರಲ್ಲಿ ಜಾರಿಗೆ ತಂದ ತೆರಿಗೆ ಕಡಿತಗಳು ರಾಜ್ಯದ ಆದಾಯವನ್ನು ಸುಮಾರು ಶೇ.೨೫ರಷ್ಟು ಕುಸಿಯುವಂತೆ ಮಾಡಿದವು. 2021ರ ವೇಳೆಗೆ ಸಾರ್ವಜನಿಕ ಸಾಲವು ಜಿಡಿಪಿ ಯ ಶೇ.119ರಷ್ಟು ಮಟ್ಟಕ್ಕೆ ಏರಿತು, ಮತ್ತು ವಿದೇಶಿ ವಿನಿಮಯ ನಿಧಿ ಕೇವಲ 400 ಕೋಟಿ ರೂ. ಮಟ್ಟಕ್ಕೆ ಇಳಿಯಿತು. 2022ರ ಆರಂಭದಲ್ಲಿ ಇಂಧನ ಮತ್ತು ಆಹಾರ ಆಮದು ನಿಂತು ಹೋದಾಗ ರಾಷ್ಟ್ರವ್ಯಾಪಿ ಜನಪ್ರತಿಭಟನೆಗಳು ಸ್ಫೋಟಿಸಿದವು.
ಏಪ್ರಿಲ್ 2022ರಲ್ಲಿ, ಶ್ರೀಲಂಕಾ ತನ್ನ ೪.೨ ಲಕ್ಷ ಕೋಟಿ ರು. ವಿದೇಶಿ ಸಾಲದ ಪಾವತಿಯನ್ನು ನಿಲ್ಲಿಸಿ, ಇತಿಹಾಸದ ಮೊದಲ ಬಾರಿಗೆ ಸಾವರಿನ್ ಡಿಫಾಲ್ಟ್ ( Sovereign Default) ಘೋಷಿ ಸಿತು. ಆರ್ಥಿಕ ಅಚಲ ಸ್ಥಿತಿಯ ನಂತರ, ಐಎಂಎ- ಬಲವಂತವಾಗಿ ಹಸ್ತಕ್ಷೇಪ ಮಾಡಬೇಕಾ ಯಿತು.
ಉತ್ಪಾದಕತೆಗಿಂತ ಉಪಭೋಗಕ್ಕೆ ಆದ್ಯತೆ ಕೊಟ್ಟ ಪಾಕಿಸ್ತಾನದ ಆಮದು-ಆಧಾರಿತ ಮಾದರಿಯು ಸಮಾಜವಾದಿ ಮನೋಭಾವವನ್ನು ಪ್ರತಿಬಿಂಬಿಸುತ್ತದೆ, ವಿದ್ಯುತ್, ಇಂಧನ ಮತ್ತು ಆಹಾರ ಸಬ್ಸಿಡಿಗಳು ದೊಡ್ಡ ಮಟ್ಟದಲ್ಲಿ ಆರ್ಥಿಕ ಭಾಗವನ್ನು ಆಕ್ರಮಿಸಿ ಕೊಂಡವು.
2023ರ ವೇಳೆಗೆ ಪರಿಸ್ಥಿತಿ ಕೈಮೀರಿ ಹೋಯಿತು, ಹಣದುಬ್ಬರ ಶೇ.38ಕ್ಕೆ ತಲುಪಿತು. ವಿದೇಶಿ ವಿನಿಮಯ ನಿಧಿ ಕೇವಲ 25000 ಕೋಟಿ ರು.ನಷ್ಟು ಉಳಿಯಿತು, ರುಪಾಯಿಯು ಇತಿಹಾಸ ದ ಅತಿ ಕಡಿಮೆ ಮೌಲ್ಯವನ್ನು ತಲುಪಿತು. ಸಮಗ್ರ ಆರ್ಥಿಕ ವ್ಯವಸ್ಥೆ ಕುಸಿಯುತ್ತಿದ್ದಂತೆ ಯೇ, ಸರಕಾರವು ಐಎಂಎಫ್ ನಿಂದ 25000 ಕೋಟಿ ರು. ತುರ್ತು ಸಾಲ (Bailout) ಪಡೆಯ ಬೇಕಾದ ಹೀನಾಯ ಸ್ಥಿತಿಗೆ ತಲುಪಿತು.
ಇತಿಹಾಸದ ಪಾಠ ಸ್ಪಷ್ಟವಾಗಿದೆ: ಸರಕಾರಿ ನಿಯಂತ್ರಿತ ಆರ್ಥಿಕತೆ ಮತ್ತು ಉಚಿತ ಭಾಗ್ಯಗಳ ನೀತಿಗಳು ಅಲ್ಪಾವಧಿಯ ರಾಜಕೀಯ ಲಾಭವನ್ನು ನೀಡಬಹುದು, ಆದರೆ ದೀರ್ಘಾವಧಿಯಲ್ಲಿ ಅವು ಆರ್ಥಿಕ ದಾರಿದ್ರ್ಯ, ಹಣದುಬ್ಬರ ಮತ್ತು ನಾಗರಿಕರ ಸ್ವಾತಂತ್ರ್ಯದ ನಾಶಕ್ಕೆ ಕಾರಣವಾಗುತ್ತವೆ. ನಿಜವಾದ ಕಲ್ಯಾಣ ಮತ್ತು ಪ್ರಗತಿಯು ಉಚಿತ ದಾನ ಗಳಿಂದಲ್ಲ, ಬದಲಾಗಿ ಸ್ವಾಯತ್ತತೆ, ಸ್ವರಾಜ್ಯ, ಉದ್ಯಮಶೀಲತೆ, ಸ್ವಾವಲಂಬನೆ, ಸ್ವದೇಶಿ ಮತ್ತು ಮುಕ್ತ ಮಾರುಕಟ್ಟೆ ಆರ್ಥಿಕತೆಯಿಂದ ಬರುತ್ತದೆ. ನಾವು ಈ ಇತಿಹಾಸದಿಂದ ಪಾಠ ಕಲಿಯದಿದ್ದರೆ ಇತಿಹಾಸ ಪುಟಗಳನ್ನು ಸೇರಿಕೊಳ್ಳಬೇಕಾಗುತ್ತದೆ.
(ಲೇಖಕರು ಪ್ರಾಧ್ಯಾಪಕರು, ಕೇಂದ್ರೀಯ ವಿಶ್ವವಿದ್ಯಾಲಯ)