ಶಿಶಿರಕಾಲ
(ತಾಳು ಮನವೇ ಭಾಗ-2)
ಅಜ್ಞಾನದಲ್ಲಿ ಜ್ಞಾನಕ್ಕಿಂತ, ದಡ್ಡತನದಲ್ಲಿ ಬುದ್ಧಿವಂತಿಕೆಗಿಂತ ಹೆಚ್ಚಿನ ಸಮಾಧಾನವಿದೆ. ನಮ್ಮ ತಲೆಯಲ್ಲಿ ಮೂಡುವ ಶೇ.99.99ರಷ್ಟು ಯೋಚನೆಗಳಿಗೆ ಯಾವುದೇ ಅರ್ಥವಿರುವುದಿಲ್ಲ. ಉದ್ದೇಶ, ದಿಶೆ, ತಲೆ-ಬುಡ ಕೂಡ ಇರುವುದಿಲ್ಲ. ಕ್ಷಣಕ್ಕೊಮ್ಮೆ ಬದಲಾಗುವ ನಮ್ಮದೇ ಯೋಚನೆಗಳತ್ತ ಹುಂಡು ಗಮನ ಹರಿಸಿದಲ್ಲಿ ಇದು ನಮಗೆ ಸ್ಪಷ್ಟವಾಗುತ್ತದೆ.
ಯೋಚನೆಗಳೇ ಹಾಗೆ. ನಿನ್ನೆ ರಾತ್ರಿ ಯೋಚಿಸಿದ್ದು ಇವತ್ತು ಬೆಳಗ್ಗೆ ಬಾಲಿಶವೆನಿಸುತ್ತದೆ. ಬಹುತೇಕ ಖಾಲಿ ಬರಡು. ಹಾಗಂತ ಚಿಂತೆ, ಉದ್ವೇಗ, ಯೋಚನೆ ಎಲ್ಲವೂ ಅನವಶ್ಯಕವಲ್ಲ, ಹದದಲ್ಲಿ ಇರಬೇಕು. ಪರೀಕ್ಷೆಯ ದಿನ, ಸಭೆಯಲ್ಲಿ ಹತ್ತು ಜನರ ಎದುರು ಮಾತನಾಡುವಾಗ, ರಸ್ತೆಯಲ್ಲಿ ಹುಲಿ ಎದುರಿಗೆ ಬಂದಾಗ, ಏನೋ ಒಂದು ಅಪಾಯದ ಸನ್ನಿವೇಶ, ಸಾಧ್ಯತೆ ಎದುರಾದಾಗ, ಬಸ್ಸು ತಪ್ಪಿ ಹೋಗುವಷ್ಟು ತಡವಾದಾಗ, ಇಂಥ ಸನ್ನಿವೇಶಗಳಲ್ಲಿ ಕೈಕಾಲು ನಡುಗುವುದು, ಬೆವರುವುದು, ಇನ್ನೊಬ್ಬರಿಗೆ ಕಾಣಿಸಿಕೊಳ್ಳುವಷ್ಟಾಗುವ ತಳಮಳಗೊಳ್ಳುವುದು ಸಮಸ್ಯೆ ಅಲ್ಲ.
ಅವೆಲ್ಲ ತಾತ್ಕಾಲಿಕ. ಯಾವುದೋ ಒಂದು ಕ್ರಿಯೆಗೆ, ಎದುರಿಗಿರುವ ಸ್ಥಿತಿಗೆ ಆರೋಗ್ಯಕರ ಪ್ರತಿಕ್ರಿಯೆ. ಆದರೆ ಆ ಉದ್ವೇಗ ನಂತರವೂ, ಅಕಾರಣ ಮುಂದುವರಿದರೆ, ಉದ್ವೇಗವೇ ವ್ಯಕ್ತಿಯ ಮನೋದೈಹಿಕ ಸ್ಥಿತಿಯಾಗಿಬಿಟ್ಟರೆ ಅದು ಆಂಕ್ಸೈಟಿ. ಯೋಚನೆಯೊಂದು ಮೂಡಿ, ಕೆಲಹೊತ್ತು ಇದ್ದು, ತಲೆ ಯಿಂದ ಹೊರಡಬೇಕು- ಮನೆಗೆ ಬಂದ ನೆಂಟರಂತೆ. ನೆಂಟರು ಕಾಯಂ ಉಳಿದು ಬಿಟ್ಟರೆ? ಅದುವೇ ಸ್ಥಿತಿ ಆಂಕ್ಸೈಟಿಯದು. ಅತಿಯಾದ ಯೋಚನೆ, ಮಾನಸಿಕ ಚಿಂತೆಯ ರಿಹರ್ಸಲ್, ಇನ್ನೊಬ್ಬರ ಬದುಕಿನ ಜತೆ ಎಲ್ಲದಕ್ಕೂ ಹೋಲಿಕೆ, ಅತಿಯಾದ ಮಾಹಿತಿ, ಸುದ್ದಿ, ಮಾನಸಿಕ ಬಿಡುವಿಲ್ಲದ ರೀತಿ ಬದುಕುವುದು ಇವೆಲ್ಲ anxiety ಎಂಬ ಸ್ಥಿತಿಗೆ ನಮ್ಮನ್ನು ಬದಲಿಸಬಹುದು. ಈ ಬಗ್ಗೆ ಹಿಂದಿನ ವಾರದ ಲೇಖನದಲ್ಲಿ ಸವಿವರವಾಗಿ ಹೇಳಿದ್ದೆ.
ಇದನ್ನೂ ಓದಿ: Shishir Hegde Column: ಮರೆಯದಿರಿ, ಈ ತಳಮಳ ಬುದ್ಧಿವಂತರಿಗೆ ಮಾತ್ರ
ನಮ್ಮ ಯೋಚನೆಗಳೇ ನಮ್ಮ ಸುಸ್ತಿಗೆ ಕಾರಣವಾಗುತ್ತಿವೆ, ಭಾರವೆನಿಸುತ್ತಿವೆ ಎನ್ನುವುದನ್ನು ತಿಳಿದು ಕೊಳ್ಳುವುದು ಕಷ್ಟದ ವಿಷಯವೇನಲ್ಲ. ನಮ್ಮ ವಿಚಾರಗಳನ್ನು, ಮನೋಹರಿವನ್ನು ಗಮನ ಕೊಟ್ಟು ನೋಡದಿದ್ದರೆ ಅವುಗಳಲ್ಲಿ ನಿಜವಾದ ಸಮಸ್ಯೆಗಳೆಷ್ಟು ಮತ್ತು ನಮ್ಮ ಕಲ್ಪನೆಯ ಸಮಸ್ಯೆ ಗಳೆಷ್ಟು ಎನ್ನುವ ಪ್ರತ್ಯೇಕತೆ ತಿಳಿಯುವುದಿಲ್ಲ.
ನಿಜವಾದ ಸಮಸ್ಯೆ ಕೊಡುವಷ್ಟೇ ಹಿಂಸೆಯನ್ನು ಕಾಲ್ಪನಿಕ ಸಮಸ್ಯೆಗಳೆಲ್ಲ ಕೊಡಲು ಶುರುಮಾಡಿ ದರೆ ಆ ಹಿಂಸೆಗೆ ಕಲ್ಪನೆಯಂತೆ- ಮಿತಿಯೇ ಇಲ್ಲ. ಬುದ್ಧಿವಂತಿಕೆ ಹೆಚ್ಚಿದಂತೆ ಯೋಚನೆ ಮತ್ತು ಕಲ್ಪನೆ, ಎರಡರ ಸಾಮರ್ಥ್ಯವೂ ಜಾಸ್ತಿ. ಹಾಗಾಗಿಯೇ ಹಾವಾಡಿಗರಿಗೆ ಹಾವು ಜಾಸ್ತಿ ಕಡಿಯುವಂತೆ- ಬುದ್ಧಿವಂತರಿಗೆ ಆಂಕ್ಸೈಟಿ ಸುಲಭದಲ್ಲಿ ಅಂಟಿಕೊಂಡು ಬಿಡುತ್ತದೆ.
ಆಂಕ್ಸೈಟಿ ಎಂದರೆ ಅತಿಚಿಂತೆಯ ಮನೋದೈಹಿಕ ಸ್ಥಿತಿ ಎಂದಾದರೆ ಈ ‘ಡಿಪ್ರೆಶನ್’- ಮಹಾ ಖಿನ್ನತೆ ಯ ಕಥೆಯೇನು? ಅದೇನು ಹುಚ್ಚೆ ? ಅಥವಾ ಬುದ್ಧಿಗೆ ಮಂಕು ಬಡಿಯುವುದೇ, ಅಥವಾ ಮಾನಸಿಕ ರೋಗವೇ? ಆಂಕ್ಸೈಟಿ ಹೋಗಿ ಡಿಪ್ರೆಶನ್ ಆಗುವುದು, ಯೋಚನೆಗಳ ಸುಳಿಯೇ ಬದುಕಿಗೆ ಅಂತ್ಯ ವಾಗುವಷ್ಟು ಕಠೋರವಾಗುವುದು ಯಾವಾಗ? ಹೇಗೆ? ‘ಡಿಪ್ರೆಶನ್’ ಎಂಬುದು ಆಂಕ್ಸೈಟಿಯ ಮುಂದಿನ ಹಂತವೇ ಆದರೂ ಇದು ತದ್ವಿರುದ್ಧದ ಸ್ಥಿತಿ!
ಅತ್ಯುದ್ವೇಗವು ರಾತ್ರಿ ಬೆಳಗಾಗುವುದರೊಳಗೆ ಮಹಾಖಿನ್ನತೆಯಾಗುವುದಿಲ್ಲ. ಇದೆಲ್ಲ ನಿಧಾನದ ಕ್ರಿಯೆ. ಅತ್ಯುದ್ವೇಗ ಹೆಚ್ಚಿದಂತೆ, ಅದೊಂದು ನಿರಂತರ ಹಿಂಸೆ, ಆ ನೋವಿನ ನಿರಂತರತೆಯನ್ನು ನಿಭಾಯಿಸುವ ಶಕ್ತಿ ಮೀರಿದಾಗ ಮನಸ್ಸು, ಮಿದುಳು ಇದನ್ನು ಬಗೆಹರಿಸಲು ಮುಂದಾಗುತ್ತವೆ.
Survival Instinct - ಆತ್ಮ ರಕ್ಷಣೆಯ ಪ್ರಯತ್ನ ಅದು. ನಿಮಗೆ ಗೊತ್ತಿರಬಹುದು- ಮಿದುಳು ಇರುವುದು ದೇಹದ ತೂಕದ ಸುಮಾರು 2 ಶೇಕಡಾ. ಅಷ್ಟೇ ಇದ್ದರೂ ಇದು ದೇಹವು ಬಳಸಿಕೊಳ್ಳುವ ಶಕ್ತಿಯಲ್ಲಿ ಅಂದಾಜು ಶೇ.20ರಷ್ಟನ್ನು ಬಳಸಿಕೊಳ್ಳುತ್ತದೆ.
ಯೋಚನೆ ಎಂದರೆ ಶಕ್ತಿಯ ವ್ಯಯ. ಹಿಂಸೆ ಎಂದರೆ ಹಾನಿ. ಮನಸ್ಸು ಆ ಒಂದು ಹಂತದಲ್ಲಿ ಸುಸ್ತಾಗಿ ತಿರುಗಿ ಬಿದ್ದಾಗ ಜಿಜ್ಞಾಸೆ ಶುರುವಾಗುತ್ತದೆ. ಬೆಕ್ಕನ್ನು ಕೋಣೆಯಲ್ಲಿ ಮೂಲೆ ಮಾಡಿ ಹೊಡೆದರೆ, ಕೊನೆಗೊಮ್ಮೆ ಬೆಕ್ಕು ಮೈಮೇಲೆ ಹಾರಿ ಪರಚುತ್ತದೆ. ಆ ರೀತಿ ಗೊಂದಲದ ಮನಸ್ಸಿನ ಬಚಾವ್ ಪ್ರಕ್ರಿಯೆ.
ಅತ್ಯುದ್ವೇಗಕ್ಕೆ ತದ್ವಿರುದ್ಧವಾದ ಸ್ಥಿತಿ ಎಂದರೆ ಪ್ರತಿ ಯೋಚನೆ. ಸಮಜಾಯಿಷಿ. “ಇಷ್ಟು ಕಾಲ ಇಷ್ಟೆ ಚಿಂತೆ ಮಾಡಿದೆನಲ್ಲ, ಇದರಿಂದ ಆದ ಪ್ರಯೋಜನವೇನು?" ಎಂಬ ಪ್ರಶ್ನೆ. ಮನಸ್ಸು ಚಿಂತಿಸಿ ಚಿಂತಿಸಿ ಸುಸ್ತಾಗಿ, ಬಳಲಿ ಕೇಳುವ ಪ್ರಶ್ನೆಗಳು- What is the point? ಚಿಂತಿಸಿ ಪ್ರಯೋಜನ ವೇನು? ಯೋಚಿಸಿ ಏನುಪಯೋಗ? ಬೆಳಗ್ಗೆ ಏಕೆ ಬೇಗ ಏಳಬೇಕು? ಅಷ್ಟಕ್ಕೂ ಎದ್ದು ಮಾಡಬೇಕಾದದ್ದು ಏನಿದು? ಏನು ಮಾಡಿದರೇನು ಪ್ರಯೋಜನ? ಯಾರಿಗೇಕೆ ಉತ್ತರಿಸಬೇಕು? ಪ್ರತಿಕ್ರಿಯಿಸಬೇಕು? ಏಕೆ ವಿವರಿಸಬೇಕು? ಯಾರನ್ನೇ ಭೆಟ್ಟಿಯಾಗಿ ಪ್ರಯೋಜನವೇನು? ನಾನು ಹೇಗೇ ಬದುಕಿದರೂ, ಎಷ್ಟೇ ಬದುಕಿದರೂ ಏನೂ ಬದಲಾಗುವುದಿಲ್ಲ ಎಂದಾದ ಮೇಲೆ ಏಕೆ ಬದುಕಬೇಕು? ಉಳಿದವರಿಗೇಕೆ ನನ್ನ ಕಷ್ಟಗಳಿಲ್ಲ? ಏಕೆ ಯಾರ ನನ್ನ ಸಮಸ್ಯೆ ಹೇಳಿಕೊಳ್ಳಬೇಕು? ಸಮಸ್ಯೆಗಳು ಮುಗಿಯುವವೇ ಅಲ್ಲವೆಂದರೆ ಇನ್ನೇಕೆ ಇರಬೇಕು? ಯಾರಿಂದ ಏನೂ ಆಗಬೇಕಿಲ್ಲ, ಯಾರೂ ಬೇಕಿಲ್ಲ, ನಾನು ಇರಬೇಕಿಲ್ಲ. ಇದು ಡಿಪ್ರೆಶನ್- ಮಹಾಖಿನ್ನತೆಯ ಸ್ಥಿತಿ.
ವಾಟ್ ಈಸ್ ದ ಪಾಯಿಂಟ್? ಬದುಕಿನ ಉದ್ದೇಶವೇನು? ಎಲ್ಲರಿಗೂ ಒಂದಿಂದು ದಿನ ಈ ಮಹಾ ಪ್ರಶ್ನೆ ಎದುರಾಗುತ್ತದೆ. ಬದುಕಿ ಆಗಬೇಕಾದದ್ದು ಏನಿದೆ? ಪ್ರಶ್ನೆ ತಪ್ಪಲ್ಲ, ವಾಸ್ತವ. ನೀವಾಗಲಿ, ನಾನಾಗಲಿ, ಇನ್ಯಾರೋ ಆಗಿರಲಿ, ಹುಟ್ಟಿಯೇ ಇಲ್ಲದಿದ್ದರೆ ಈ ಜಗತ್ತು ಇದಕ್ಕಿಂತ ವಿಭಿನ್ನವಾಗಿ ಇರುತ್ತಿರಲಿಲ್ಲ. ಹುಟ್ಟದೇ ಇರುವವರ ಬಗ್ಗೆ ಯಾರಿಗೆ ಗೊತ್ತಿರುತ್ತಿತ್ತು? ನಾವೆಲ್ಲ ಚಿಕ್ಕದೋ, ದೊಡ್ಡ ದೋ ಸಾಧನೆ ಮಾಡಿರಬಹುದು, ಹಣ ಗಳಿಸಿರಬಹುದು, ಗೆದ್ದಿರಬಹುದು, ಸೋತಿರಬಹುದು, ಪರೀಕ್ಷೆಯಲ್ಲಿ ನಪಾಸಾಗಿರಬಹುದು.
ಯಾವುದೇ ಕ್ರಿಯೆ, ಪ್ರತಿಕ್ರಿಯೆಗಳಿಗೆ ಒಂದು ಚಿಕ್ಕ ಕಾಲಮಿತಿಯ ನಂತರ ಅರ್ಥವೇ ಇಲ್ಲ. ನಿಮ್ಮ ಲೆಕ್ಕದಲ್ಲಿ ಯಾವುದು ದೊಡ್ಡ ಸಾಧನೆ? ಅಂಬಾನಿಯಷ್ಟು ಹಣ ಗಳಿಸುವುದೇ? ಅಥವಾ ದೇಶದ ಪ್ರಧಾನಿಯಾಗುವುದೇ? ಅಥವಾ ಬಲಿಷ್ಠ ರಾಷ್ಟ್ರವೊಂದರ ಅಧ್ಯಕ್ಷರಾಗುವುದೇ? ಇತ್ತೀಚೆಗೆ ಇಲ್ಲಿ ಅಮೆರಿಕದಲ್ಲಿ ಸರಕಾರಿ ಗ್ಯಾಲರಿ ಒಂದಕ್ಕೆ ಹೋಗಿದ್ದೆ. ಅಲ್ಲಿ ಅಮೆರಿಕದ ಅಧ್ಯಕ್ಷರಾದವರ ಫೋಟೋಗಳನ್ನು ಸಾಲಲ್ಲಿ ಜೋಡಿಸಿಟ್ಟಿದ್ದರು.
47 ಅಧ್ಯಕ್ಷರು- 47 ಫೋಟೋಗಳು ಅಲ್ಲಿದ್ದವು. ಅವರವರ ಫೋಟೋ ಕೆಳಗೆ ಚಿಕ್ಕ ಗುಂಡಿ- ಅದನ್ನು ಒತ್ತಿದರೆ ಮರೆಸಿಟ್ಟ ಅವರ ಹೆಸರು ಬೆಳಕಾಗಿ ಕಾಣಿಸುತ್ತಿತ್ತು. ಅಲ್ಲಿ ಯಾವುದೋ ಕಾಲೇಜಿನ ಡಿಗ್ರಿ ಮಟ್ಟದ ಇತಿಹಾಸದ ವಿದ್ಯಾರ್ಥಿಗಳು ಗುಂಪಾಗಿ ಬಂದಿದ್ದರು. ಅವರೆಲ್ಲ ಸೇರಿ, ಯಾರು ಹೆಚ್ಚು ಅಧ್ಯಕ್ಷರ ಹೆಸರನ್ನು ಚಿತ್ರ ನೋಡಿ ಊಹಿಸುತ್ತಾರೆ ಎಂಬ ಆಟವಾಡುತ್ತಿದ್ದರು.
ಆಟ ಮಜವಾಗಿತ್ತು- ನಾನು ಸ್ವಲ್ಪ ಹೊತ್ತು ನಿಂತೆ. ಗಮನಿಸಿದ್ದೇನೆಂದರೆ ಎಲ್ಲರಿಗೂ ಹತ್ತರಿಂದ ಹದಿನೈದು ಅಧ್ಯಕ್ಷರನ್ನಷ್ಟೇ ಗುರುತಿಸಲು ಸಾಧ್ಯವಾಗುತ್ತಿತ್ತು. ಹೆಚ್ಚಿನವು ಇತ್ತೀಚಿನ ಅಧ್ಯಕ್ಷರ ಹೆಸರು.. ಒಂದೆರಡು ತೀರಾ ಹಳೆಯವು. ಅರ್ಧಕ್ಕಿಂತ ಜಾಸ್ತಿ ಅಧ್ಯಕ್ಷರ ಹೆಸರು ಅಲ್ಲಿದ್ದ ಯಾರಿಗೂ ಗೊತ್ತಿರಲಿಲ್ಲ.
ನಕ್ಷತ್ರಗಳು ಹುಟ್ಟುತ್ತವೆ, ಉರಿಯುತ್ತವೆ, ಗ್ಯಾಲಕ್ಸಿಗಳು ಡಿಕ್ಕಿ ಹೊಡೆಯುತ್ತವೆ, ಸಾಯುತ್ತವೆ, ಕಪ್ಪು ರಂಧ್ರವಾಗುತ್ತವೆ, ನಾಲ್ಕೈದು ತಲೆಮಾರಿನಾಚೆ ನಾವು ಈಗ ಬದುಕಿರುವವರೆಲ್ಲರೂ ಅಪ್ರಸ್ತುತ ರಾಗಿಬಿಡುತ್ತೇವೆ. ಇವತ್ತು ಬದುಕಿದವರು ಇನ್ನೊಂದು ನೂರು ವರ್ಷ ಕಳೆದರೆ- ಹೆಚ್ಚೆಂದರೆ ಫೇಸ್ ಬುಕ್ ಸಾಮಾಜಿಕ ಜಾಲತಾಣದ ಆರ್ಕೈವ್ ಅಕೌಂಟ್ ಆಗಿ ಎಲ್ಲಿಯೋ ಸರ್ವರ್‌ಗಳ ಮೂಲೆ ಯಲ್ಲಿ ಬಿದ್ದಿರುತ್ತೇವೆ.
ಇವೆಲ್ಲ ಪರಮ ‘ವೈರಾಗ್ಯ’ ಅನ್ನಿಸಿದರೂ, ವಿಷಯ ನಿಜ ತಾನೇ? ಎಲ್ಲವೂ ತಾತ್ಕಾಲಿಕ, ಬದಲಾವಣೆ ಮಾತ್ರ ನಿರಂತರ- ಶಾಶ್ವತ. ನೀವು ಎಲಾನ್ ಮಸ್ಕ್ ಆಗಿರಬಹುದು, ನೊಬೆಲ್ ಪಡೆದವರಿರಬಹುದು ಅಥವಾ ಇನ್ನೇನೋ ಸಾಧಿಸಿದವರಾಗಿರಬಹುದು. ಎಲ್ಲದಕ್ಕೂ, ಎಲ್ಲರ ಬದುಕಿಗೂ ಒಂದು ಮಿತಿಯಿದೆ. ಅದರಾಚೆ ಅರ್ಥವೇ ಇಲ್ಲ.
ವಾಟ್ ಈಸ್ ದ ಪಾಯಿಂಟ್? ಬದುಕುವುದೇಕೆ? ಏನು ಮಾಡಿ ಏನು ಪ್ರಯೋಜನ? ಈ ಪ್ರಶ್ನೆಯನ್ನು ಖಿನ್ನತೆಯಿಂದ ಬಳಲುತ್ತಿರುವ ಒಬ್ಬ ವ್ಯಕ್ತಿ ಕೇಳಿಕೊಳ್ಳುವುದಕ್ಕೂ, ಒಬ್ಬ ತತ್ವಜ್ಞಾನಿ ಕೇಳುವು ದಕ್ಕೂ ಬಹಳ ವ್ಯತ್ಯಾಸವಿದೆ.
ಒಬ್ಬ ವ್ಯಕ್ತಿ ಆಂಕ್ಸೈಟಿಯ ಮಾರ್ಗದಲ್ಲಿ ಈ ಪ್ರಶ್ನೆಗೆ ಬಂದು ಮುಟ್ಟುವುದಕ್ಕೂ, ತಾರ್ಕಿಕ, ಅನ್ವೇಷಣೆ ಯ ಮಾರ್ಗದಿಂದ ತಲುಪುವುದಕ್ಕೂ ಅಜಗಜಾಂತರವಿದೆ. ಪ್ರಶ್ನೆ, ಚಿಂತೆ, ಯೋಚನೆಗಳಿಗೆ ಸುಸ್ತಾದ ಮನಸ್ಸಿಗೆ ಇಂಥದೊಂದು ಬಗೆಹರಿಯದ ಪ್ರಶ್ನೆಯನ್ನು ಎದುರಿಸುವಷ್ಟು, ವಿವೇಚಿಸುವಷ್ಟು ಸಮಾಧಾನವಿರುವುದಿಲ್ಲ. ಈ ಪ್ರಶ್ನೆ ಹುಟ್ಟಿರುವುದು ದುರ್ಬಲವಾದ ಮನಸ್ಸಿನಲ್ಲಿ.
ಉದ್ವೇಗದ ಹಿನ್ನೆಲೆಯಿದ್ದಲ್ಲಿ- “ಬದುಕಿಗೆ ಏನು ಅರ್ಥ, ಏಕೆ ಬದುಕಬೇಕು?’‘ ಎಂಬ ಪ್ರಶ್ನೆಗೆ, “ಏನೂ ಕಾರಣವಿಲ್ಲ, ಯಾವುದೂ ಮುಖ್ಯವಲ್ಲ, ನೀನೂ ಮುಖ್ಯವಲ್ಲ, ನಿನ್ನ ಬದುಕೂ ಮುಖ್ಯವಲ್ಲ" ಎಂಬ ಸಿದ್ಧ, ಸುಲಭದ ಉತ್ತರ ಕೊಡುವುದು ಸುಲಭ! ಮನಸ್ಸು ಬೇಕಾದಷ್ಟು ಉದಾಹರಣೆಗಳನ್ನು ಕೂಡ ಪಟ್ಟಿ ಮಾಡಿ, ‘ಅರ್ಥವೇ ಇಲ್ಲ’ ಎಂದು ನಂಬಿಸಿಬಿಡುತ್ತದೆ.
ಹಾಗಂತ ಮಹಾಖಿನ್ನತೆಗೆ ಅತ್ಯುದ್ವೇಗ ಮಾತ್ರ ಕಾರಣವೇ? ಆಂಕ್ಸೈಟಿ ಇದ್ದವರು ಮಾತ್ರ ಡಿಪ್ರೆಶನ್, ನಂತರ ಜೀವ ಕಳೆದುಕೊಳ್ಳುವ ಹಂತಕ್ಕೆ ತಲುಪುವುದೇ? ಹಾಗೇನಿಲ್ಲ. ಹತ್ತು ಹಲವು ಕಾರಣಗಳಿಂದ ವ್ಯಕ್ತಿ ಡಿಪ್ರೆಶನ್ ತಲುಪಬಹುದು. ಡಿಪ್ರೆಶನ್ ಎಂದರೆ ಮಹಾಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗದ ಸ್ಥಿತಿ. ಅದು ಅನ್ಯಕಾರಣಗಳಿಂದಲೂ ಉದ್ಭವಿಸಬಹುದು.
ಅತಿಯಾದ ಒತ್ತಡದ ವೃತ್ತಿ, ಬದುಕು, ಅತ್ಯಾಪ್ತರ ಸಾವು, ನೋವು, ಏಕಾಂಗಿತನ, ಕೆಲವೊಮ್ಮೆ ಮಿದುಳಿನ ರಾಸಾಯನಿಕಗಳು ಬದಲಾದಲ್ಲಿ, ಹಾರ್ಮೋನ್ ಬದಲಾವಣೆಯಿಂದ ಕೂಡ ಖಿನ್ನತೆ ಹುಟ್ಟುತ್ತದೆ. ಬಾಣಂತಿಯ ಖಿನ್ನತೆಯು ದೈಹಿಕ ಕಾರಣಕ್ಕೆ ಆರಂಭವಾಗಿ, ನಂತರವೂ ನಿರಂತರ ಕೆಲವರನ್ನು ಕಾಡುವುದಿದೆ. ಭಾವನೆಗಳನ್ನು ಹೊರ ಹಾಕದೆ ಬಂಧಿಸಿ ಕುಪೋಷಿಸಿದರೆ, ಅಥವಾ ಅತ್ಯಂತ ನಿಸ್ಸಹಾಯಕ ಸ್ಥಿತಿಯಲ್ಲಿ, ಜೈಲಿನಲ್ಲಿ ಡಿಪ್ರೆಶನ್ ಸಂಭವಿಸುತ್ತದೆ.
ಯುದ್ಧದಲ್ಲಿ ಭಾಗವಹಿಸಿದ ಸೈನಿಕರಿಗೆ, ಪರಮ ಕ್ರೌರ್ಯ ಕಂಡವರಿಗೆ ಡಿಪ್ರೆಶನ್ ಕಾಡುವ ಸಾಧ್ಯತೆ ಅತಿಹೆಚ್ಚು. ಈಗೀಗ ಕಡಿಮೆ ನಿದ್ರೆ, ಬೇಕಾಬಿಟ್ಟಿ ಆಹಾರ ಸೇವನೆ, ಸಾಮಾಜಿಕ ಜಾಲತಾಣ, ಶಿಸ್ತಿಲ್ಲದ ಬದುಕು ಇತ್ಯಾದಿಯಿಂದ ಕೂಡ ಡಿಪ್ರೆಶನ್ ಸಾಧ್ಯತೆ ಹೆಚ್ಚು ಎನ್ನುವುದು ಸಿದ್ಧಸತ್ಯ. ಜೀವನದ ಬಗೆಹರಿಯದ ಪ್ರಶ್ನೆ ಖಿನ್ನತೆಯಾಗಿ ಎದುರಾದಾಗ ಇರುವ ಮಾರ್ಗಗಳನ್ನು ಹೇಳುವುದಕ್ಕಿಂತ ಮೊದಲು ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಬೇಕು.
ನಾನು ಯಾವುದೇ ಮಾನಸಿಕ ಸಮಸ್ಯೆಗೆ ಪರಿಹಾರ ಹೇಳುವ ಉದ್ದೇಶದಿಂದ ಈ ಲೇಖನ ಮಾಲೆ ಯನ್ನು ಬರೆಯುತ್ತಿಲ್ಲ. ಅಥವಾ ಇದು ಯಾವುದೇ expert opinion ಕೂಡ ಅಲ್ಲ. ಒಬ್ಬ ಸಾಮಾನ್ಯ ಓದುಗನಲ್ಲಿ ಇದರ ಬಗ್ಗೆ ಕೆಲವು ತಿಳಿವಳಿಕೆಯನ್ನು ಹಂಚಿಕೊಳ್ಳುವುದಷ್ಟೇ ಉದ್ದೇಶ. ಇದೆಲ್ಲ ಸ್ವವಿಮರ್ಶೆಗೇ ಹೊರತು ಇನ್ನೊಬ್ಬರ ರೋಗನಿರ್ಣಯಕ್ಕಲ್ಲ.
ಮನೋದ್ವೇಗ, ಖಿನ್ನತೆ ಮಿತಿಮೀರಿದರೆ, ಮೊದಲು ನೆನಪಾಗಬೇಕಾದವರು, ಬಗೆಹರಿಸಬೇಕಾದವರು ಚಿಕಿತ್ಸಕರು ( Therapists). ಮನೋವೈದ್ಯರ ಮಾರ್ಗದರ್ಶನಕ್ಕೆ ಯಾರದೇ ಮುಲಾಜಿಲ್ಲದೆ ಹೊರಡು ವುದು ಅಂಥ ಸಮಯದಲ್ಲಿ ಮಾಡಲೇಬೇಕಾದ ಪ್ರಯತ್ನ. ನಮಗೆ ನಾವೇ ಮಾಡಿಕೊಳ್ಳಬಹುದಾದ ದೊಡ್ಡ ಉಪಕಾರ.
ಮಹಾಖಿನ್ನತೆ, ಮನೋದ್ವೇಗ, ಭರಿಸಲಾರದ ನಷ್ಟ, ಬದುಕಲಾಗದ ಕಷ್ಟವನ್ನು ಎದುರಿಸಿ ಬದುಕುವ ಹಲವಾರು ಜನರು ನಮ್ಮ ಸುತ್ತಮುತ್ತಲೇ ಇರುತ್ತಾರೆ, ನೋಡುತ್ತೇವೆ. ಅವರಲ್ಲಿ ಹೆಚ್ಚಿನವರು ಇಂಥ ಸ್ಥಿತಿಯಲ್ಲಿ ಅಧ್ಯಾತ್ಮ ಚಿಂತನೆಯ ಮೊರೆ ಹೋಗುವುದು ಕಾಣಿಸುತ್ತದೆ. ಇದು ಆಶ್ಚರ್ಯವೆನಿಸುವ ರೀತಿ ಅವರನ್ನು ಆ ಚಿಂತೆಯ ಸುಳಿಯಿಂದ ಮೇಲಕ್ಕೆತ್ತಿರುತ್ತದೆ.
ಇದು ಪ್ಲೇಸಿಬೋ ಅಲ್ಲ- ಏನೋ ಒಂದು ಪರಿಹಾರ ಅಲ್ಲಿದೆ. ಬದುಕಿನ ಅರ್ಥವೇನು ಎಂದು ಕೇಳಹೊರಟ ಯೋಗಿ, ಸಾಧಕ ಖಿನ್ನನಾಗುವ ಬದಲು ಹೇಗೆ ಅನ್ವೇಷಕನಾಗುತ್ತಾನೋ ಅದೇ ರೀತಿ. ಇದು ವಿಷಯಸೂಕ್ಷ್ಮ ಹಲವರಿಗೆ ಅಧ್ಯಾತ್ಮ, ಆಧ್ಯಾತ್ಮಿಕ ಚಿಂತನೆ ಎಂದರೆ ವಯಸ್ಸಾಗಿ ನಿವೃತ್ತಿ ಹೊಂದಿದ ಮೇಲಿನ ಟೈಮ್‌ಪಾಸ್ ಅವಶ್ಯಕತೆಯೆಂಬ ಅನಿಸಿಕೆಯಿದೆ.
ಎಷ್ಟೋ ಜನರಿಗೆ ಅಧ್ಯಾತ್ಮವು ಅವೈಜ್ಞಾನಿಕ ಮತ್ತು ವಿರಕ್ತಿ, ವೈರಾಗ್ಯ ಎಂಬೆಲ್ಲ ಕೊಲೋನಿಯಲ್ ಭಾವ ಇಂದಿಗೂ ಇದೆ. ಬದುಕಿನಲ್ಲಿ ಏನೂ ಇಲ್ಲ, ಎಲ್ಲವೂ ಶೂನ್ಯ ಎಂದು ಅಧ್ಯಾತ್ಮ ಹೇಳುತ್ತದೆ ಎಂಬ ಸಾರ್ವತ್ರಿಕ ಅನಿಸಿಕೆಯಿದೆ. ಹೆಚ್ಚಿನವರಿಗೆ ಅಧ್ಯಾತ್ಮ ಶುರುವಾಗುವುದೇ ‘ಬದುಕಿನ ಅರ್ಥ ವೇನೆಂಬ ಪ್ರಶ್ನೆಯಿಂದ’ ಎನ್ನುವುದು ತಿಳಿದಿರುವುದಿಲ್ಲ. ಆರಂಭವೇ ಅಂತ್ಯ ಎಂದುಕೊಂಡಿರುತ್ತಾರೆ.
ಅಧ್ಯಾತ್ಮ ಒಂದು ಖಿನ್ನಭಾವ ಎಂದು ಇದರಿಂದ ದೂರ ಇರುವವರು ಎಷ್ಟು ಜನ ಬೇಕು? ಇರಲಿ. ಬದುಕಿನಲ್ಲಿ ‘ವಾಟ್ ಈಸ್ ದ ಪಾಯಿಂಟ್?’ ಎಂಬ ಪ್ರಶ್ನೆ ಯಾವುದೇ ರೀತಿ ಎದುರಾಗುವುದಕ್ಕಿಂತ ಮೊದಲೇ ಒಂದಿಷ್ಟು ಅಧ್ಯಾತ್ಮ ಸಂಸ್ಕಾರದ ಪರಿಚಯವಿದ್ದರೆ, ಒಳಗಿಳಿಸಿಕೊಂಡಿದ್ದರೆ ಬದುಕು ಸುಲಭದಲ್ಲಿ ಹಳಿತಪ್ಪುವುದಿಲ್ಲ. ಅಧ್ಯಾತ್ಮ ಚಿಂತನೆಗಳು ನಿರಾಶ್ರಿತರ ಶಿಬಿರವಲ್ಲ.
ಸನಾತನ ಧರ್ಮದ ಉನಿಷತ್ತು, ಭಗವದ್ಗೀತೆ ಇವೆಲ್ಲ ಬದುಕು ಮುಗಿಯುವಾಗಿನ ಸಮಾಧಾನಕ್ಕಲ್ಲ. ಅವು ಅಸಲಿಗೆ ರೂಪಿಸಲ್ಪಟ್ಟದ್ದೇ ಸಮಯ ಸಂಕೋಲೆಯಾಚೆ ಇನ್ನೂ ಬದುಕನ್ನು ಉಳಿಸಿ ಕೊಂಡವರಿಗೆ. ದೇವರು ಬಂದು ಖಿನ್ನಭಾವದ ಸಮಸ್ಯೆಯನ್ನು ಪರಿಹರಿಸುವುದಿಲ್ಲ.
ಕೃಷ್ಣ ಭಗವದ್ಗೀತೆಯಲ್ಲಿಯೇ ಹೇಳಿಬಿಟ್ಟಿದ್ದಾನೆ- “ಉದ್ಧರೇದಾತ್ಮನಾತ್ಮನಮ್ ನಾತ್ಮಾನಾಮ್ ಅವಸಾದಯೇತ್“. ಸೂಚ್ಯವಾಗಿ- ನಾವೇ ನಮ್ಮನ್ನು ಖಿನ್ನತೆಯಿಂದ ಮೇಲಕ್ಕೆತ್ತಿಕೊಳ್ಳಬೇಕು, “ನ ಅವಸಾದಯೇತ್"- ಅದರಲ್ಲಿ ಮುಳುಗಬಾರದು. ಅತ್ಯಂತ ದೊಡ್ಡ ಆಘಾತವಾದಾಗ, ಹತ್ತಿರದವ ರನ್ನು, ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು, ಮಗುವನ್ನು, ತಂದೆ ತಾಯಿಯನ್ನು ಕಳೆದು ಕೊಂಡು ಬದುಕಿನ ದಿಕ್ಕು ತಪ್ಪಿಹೋಗುತ್ತದೆ.
ನನ್ನ ಪರಿಚಯದವರೊಬ್ಬರು ಕೆಲವು ವರ್ಷಗಳ ಹಿಂದೆ ತಮ್ಮ ಗಂಡನನ್ನು ಕಳೆದುಕೊಂಡರು. ನಂತರ ಖಿನ್ನತೆಯ ಕಾರಣಕ್ಕೆ, ಬೆಳೆದ ಅವರ ಮಗನೂ ಎರಡೇ ವರ್ಷಕ್ಕೆ ಬಿಟ್ಟು ಹೋಗಿ ಬಿಟ್ಟ. ಕೆಲವರಿಗಾಗುತ್ತದಲ್ಲ- ಪ್ರಪಂಚದಲ್ಲಿರುವ ಎಲ್ಲ ಕಷ್ಟಗಳೂ ಅವರಿಗೇ ಬಂದುಬಿಡುತ್ತವೆ. ಒಂದರ ಮೇಲೊಂದು ಸುಧಾರಿಸಿಕೊಳ್ಳಲಾಗದ ಹೊಡೆತ. ನಾನು ಆಗೀಗ ಅವರ ಜತೆ ಮಾತನಾಡುತ್ತಿರು ತ್ತೇನೆ. ಅವರು ಎಂದೂ ಕೊರಗಿದ್ದು ನೋಡಿಲ್ಲ. ಜೀವಚಿಲುಮೆ. ಅವರು ‘ಏಕೆ ಬದುಕಬೇಕು?’ ಎಂಬ ಪ್ರಶ್ನೆಗೆ ತಮ್ಮ ಬದುಕನ್ನೇ ಉತ್ತರವಾಗಿ ರೂಪಿಸಿಕೊಂಡಿದ್ದಾರೆ.
ಅವರು ಯಾವತ್ತೂ ಹೇಳುವ ಮಾತೊಂದಿದೆ- “ಶಿಶಿರ್, ನಾನಿವತ್ತು ಬದುಕಿದ್ದೇನೆ ಎಂದರೆ ಅದಕ್ಕೆ ಏಕೈಕ ಕಾರಣ ಸ್ಪಿರಿಚುಯಾಲಿಟಿ. ನನ್ನನ್ನು ಇದೆಲ್ಲ ಸಂದರ್ಭದಲ್ಲಿ ಕಾಪಾಡಿದ್ದು- ನಾನು ನನಗೆ ಕೊಟ್ಟುಕೊಂಡ ಆಧ್ಯಾತ್ಮಿಕ ವಿಚಾರ ಮತ್ತು ಸಂಸ್ಕಾರ. ಇಲ್ಲದಿದ್ದರೆ ನಾನು ಯಾವತ್ತೋ ಸತ್ತು ಹೋಗುತ್ತಿದ್ದೆ ಅಥವಾ ಹುಚ್ಚಿಯಾಗಿ ಬಿಡುತ್ತಿದ್ದೆ. ನನ್ನ ಬದುಕಿಗೆ ಅರ್ಥವೇ ಇಲ್ಲ ಎಂದು ನನಗೆ ಲಕ್ಷ ಬಾರಿ ಅನಿಸಿದೆ. ಆದರೆ ಪ್ರತಿ ಬಾರಿಯೂ ಅದನ್ನೊಂದು ಅನ್ವೇಷಣೆಯಾಗಿ ಆಧ್ಯಾತ್ಮಿಕ ಚಿಂತನೆಯು ಬದಲಿಸಿದೆ".
ಈಗೀಗ ಪಾಶ್ಚಾತ್ಯ ಮನಃಶಾಸ್ತ್ರಜ್ಞರು ಮಹೋದ್ವೇಗ, ಖಿನ್ನತೆಗೆ ಕೌನ್ಸಿಲಿಂಗ್‌ನ ಜತೆಗೆ ಯೋಗ, ಧ್ಯಾನವನ್ನು ಕೂಡ ಪ್ರಿಸ್ಕ್ರೈಬ್ ಮಾಡದೇ ಇರುವುದಿಲ್ಲ.ಇಲ್ಲಿ ಪ್ರಶ್ನೆ ಇರುವುದು ‘ಬದುಕುವುದೇಕೆ’ ಎಂದಲ್ಲವೇ? ಹಾಗಾದರೆ ಬದುಕಿನ ಉದ್ದೇಶ ತಿಳಿದುಕೊಳ್ಳಬೇಕೆಂದರೆ ನಾಲ್ಕು ವೇದ, ಶ್ರುತಿ, ಉಪನಿಷತ್ತು, ರಾಮಾಯಣ, ಮಹಾಭಾರತ, ಪುರಾಣ, ಯೋಗಸೂತ್ರ ಎಲ್ಲವನ್ನೂ ತಿಳಿಯಬೇಕೆ? ಅಥವಾ, “ಎಲ್ಲರೂ ಬದುಕುತ್ತಾರೆ- ಹಾಗಾಗಿ ಬದುಕಬೇಕು, ಏನೋ ಒಂದು ಕಾರಣ ಇಟ್ಟುಕೊಳ್ಳ ಬೇಕು" ಎನ್ನುವುದು ಪರಿಹಾರದ ಉತ್ತರವೇ? ನಮ್ಮೆಲ್ಲರ ವಯಸ್ಸು, ಹಿನ್ನೆಲೆ, ವೃತ್ತಿ, ಬದುಕಿನ ಸಾಧ್ಯತೆ, ಸಂಕೋಲೆಗಳು ಬೇರೆಯಾಗಿರುವಾಗ ‘ಏಕೆ ಬದುಕಬೇಕು?’ ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವುದು ಹೇಗೆ? ಸುಲಭದ ‘ಶಾರ್ಟ್ ಕಟ್’ ಮುಂದಿನ ವಾರಕ್ಕೆ.
(ಮುಂದುವರಿಯುವುದು)