ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shishir Hegde Column: ಮರೆಯದಿರಿ, ಈ ತಳಮಳ ಬುದ್ಧಿವಂತರಿಗೆ ಮಾತ್ರ

ಯಾವುದೇ ಅಸಹಜ ಘಟನೆಯಾದಾಗ ಹೇಗಾಯ್ತು ಎಂಬುದು ಅಪಾಯ/ಹಾನಿಯನ್ನು ಗ್ರಹಿಸಲು. ಏಕಾಯ್ತು ಎನ್ನುವುದು ಸ್ವರಕ್ಷಣೆ ಮತ್ತು ಪರಿಹಾರಕ್ಕೆ. ನಮಗೆ ಆಗದಂತೆ ಎಚ್ಚರ ವಹಿಸಲು. ಯಾವುದೇ ಘಟನೆ ಅರ್ಥವೇ ಆಗದಾಗ? ಹಾನಿಯನ್ನು ಯಾವುದೋ ಒಂದಕ್ಕೆ ಆರೋಪಿಸಬೇಕು. ಇದು ಗುಣ. ಇಲ್ಲಿ ತಂದೆ-ತಾಯಿಗೋ, ಅವರ ಶಿಸ್ತಿಗೋ, ಓದಿನ ಒತ್ತಡಕ್ಕೋ, ಪ್ರೇಮ ಪ್ರಕರಣಕ್ಕೋ, ಆಫೀಸಿನ ಬಾಸ್ʼಗೋ- ಏನೋ ಒಂದಕ್ಕೆ. ಕಾರಣವನ್ನು ವ್ಯಕ್ತಿಗೆ ಆರೋಪಿಸುವುದು ಸಮಾಜಕ್ಕೆ ಸುಲಭದ ಮಾರ್ಗ.

Shishir Hegde Column: ಮರೆಯದಿರಿ, ಈ ತಳಮಳ ಬುದ್ಧಿವಂತರಿಗೆ ಮಾತ್ರ

-

ಶಿಶಿರಕಾಲ

(ತಾಳು ಮನವೇ -ಭಾಗ 1)

ಆಂಕ್ಸೈಟಿ ಕೇವಲ ದುರ್ಬಲ ಮನಸ್ಸಿನವರಿಗೆ ಅಮರಿಕೊಳ್ಳುತ್ತದೆ, ಅದು ಗಟ್ಟಿ ಮನಸ್ಸಿ ನವರಿಗೆ ಬಾಧಿಸುವುದಿಲ್ಲ ಎಂಬುದು ಅತಿ ದೊಡ್ಡ ತಪ್ಪು ಕಲ್ಪನೆ. ಇದು ಬುದ್ಧಿವಂತರ ಜಾಸ್ತಿ. ಯಾರು ಓದಿನಲ್ಲಿ, ಕೆಲಸದಲ್ಲಿ, ಸಾಧನೆಯಲ್ಲಿ ಮುಂದಿರುತ್ತಾರೋ- ಇದು ಅವರನ್ನು ಅತಿ ಹೆಚ್ಚು ಬಾಧಿಸುತ್ತದೆ. ಆಂಕ್ಸೈಟಿ ಸದಾ ದೃಗ್ಗೋಚರವಲ್ಲ.

The smallest coffins are the heaviest to carry ಎಂಬ ಮಾತಿದೆ. ಮಕ್ಕಳನ್ನು ಕಳೆದುಕೊಳ್ಳುವ ದುಃಖವನ್ನು ಉಳಿದವರು ಊಹೆ ಮಾಡಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಮೊದಲೆಲ್ಲ- ಈಗೊಂದು ಐವತ್ತು, ಎಪ್ಪತ್ತು ವರ್ಷದ ಹಿಂದೆ, ಆರೆಂಟು, ಹತ್ತು-ಹನ್ನೆರಡು ಮಕ್ಕಳನ್ನು ಪಡೆಯುವುದು ಸಾಮಾನ್ಯವಾಗಿತ್ತು. ಆಗ ಹೆಚ್ಚಾಗಿ ಮಧ್ಯದಲ್ಲಿ ಒಂದು ಅಥವಾ ಎರಡು ಮಕ್ಕಳು ಸಾಯುವುದು ಕೂಡ ಸಾಮಾನ್ಯವೇ ಆಗಿತ್ತು. ಆ ರೀತಿಯ ವಿಯೋಗಗಳು ತಂದೆ-ತಾಯಿಯರಿಗೆ, ಕುಟುಂಬಕ್ಕೆ ಅಗಾಧ ನೋವುಂಟುಮಾಡಿದ್ದರೂ, ಅವು ಅಷ್ಟಾಗಿ ಬದುಕಿಗೆ ಪೆಟ್ಟು ಕೊಡುವ ಘಟನೆಯಾಗುತ್ತಿರ ಲಿಲ್ಲ.

ಈಗ ಹಾಗಲ್ಲ. ಇರೋದೇ ಒಂದು ಅಥವಾ ಎರಡು ಮಕ್ಕಳು. ಈಗ ನಾಲ್ಕೈದು ವರ್ಷದಿಂದ ಇಂಥ ದ್ದೊಂದು ಸುದ್ದಿ ಕೇಳುವುದು ಹೆಚ್ಚಾಗಿದೆ. ಒಳ್ಳೆಯ, ನೆಮ್ಮದಿಯ, ಸುಸಂಸ್ಕೃತ ಮನೆಯ ಮಕ್ಕಳು, ಓದಲು ಚುರುಕಾಗಿರುತ್ತಾರೆ, ಯಾವುದೇ ಚಟವಿರುವುದಿಲ್ಲ, ಅತ್ಯಂತ ಜವಾಬ್ದಾರಿ ಯುತವಾಗಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ, ಅಥವಾ ಓದು ಮುಗಿಸಿ ಈಗ ತಾನೇ ಕೆಲಸಕ್ಕೆ ಸೇರಿರುತ್ತಾರೆ.

ಸ್ಫುರದ್ರೂಪ, ಯಾವುದೇ ಹೇಳಿಕೊಳ್ಳುವ ಸಮಸ್ಯೆ ಇಲ್ಲ. ಹೀಗಿರುವಾಗ ಹಿಂದಿಲ್ಲ-ಮುಂದಿಲ್ಲ, ಒಂದು ದಿನ ಅದೇಕೋ ಸೋತು ಜೀವ ಬಿಟ್ಟು ಹೋಗಿಬಿಡುತ್ತಾರೆ. ನನ್ನ ಪರಿಚಯದವರ ಮನೆ ಯಲ್ಲಿ ಇಂಥದ್ದೇ ಒಂದು ಘಟನೆ ಹಿಂದಿನ ವರ್ಷ ನಡೆಯಿತು.

ಇಂದಿಗೂ ತಂದೆ-ತಾಯಿಗೆ ಕಾರಣವೇ ಪಕ್ಕಾ ಗೊತ್ತಾಗಿಲ್ಲ. ಇದು ಪುತ್ರವಿಯೋಗದಲ್ಲಿಯೇ ಅತ್ಯಂತ ಘೋರ ಸ್ಥಿತಿ. ಇಂಥ ಘಟನೆಯಾದಾಗ ಇಂದಿನ ‘ಅತಿ ಸಂಪರ್ಕದ’ ಸಮಾಜವನ್ನು ಎದುರಿಸುವುದು ಕೂಡ ಸುಲಭವಲ್ಲ. ಏನೇನೋ ಗಾಳಿಸುದ್ದಿಗಳು. ಹಾಗಂತೆ, ಹೀಗಂತೆ ಎನ್ನುವ ಕಥೆಗಳು. ಎಲ್ಲ ದುಃಖದ ಜತೆ ಇದೊಂದು ಹೊರಲಾಗದ ಹೊರೆ. ಇಡೀ ಸಮಾಜಕ್ಕೆ ಅದರದೇ ಆದ ಅವಶ್ಯಕತೆ ಯಿದೆ. ಆದಷ್ಟು ಬೇಗ ಕಾರಣ ತಿಳಿಯಬೇಕು. ಇಲ್ಲದಿದ್ದರೆ ಸಮಾಧಾನವಿಲ್ಲ. ಏನಾಯ್ತಂತೆ? ಏಕಾಯ್ತಂತೆ? ಎಂಬ ಪ್ರಶ್ನೆಗಳು.

ಇದನ್ನೂ ಓದಿ: Shishir Hegde Column: ಪೇಟೆಯ ಬದುಕಿಗೆ ಜೀನ್ಸ್‌ ಬದಲಿಸಿಕೊಂಡ ಶಿಕಾಗೋ ಗಿಡುಗ

ಯಾವುದೇ ಅಸಹಜ ಘಟನೆಯಾದಾಗ ಹೇಗಾಯ್ತು ಎಂಬುದು ಅಪಾಯ/ಹಾನಿಯನ್ನು ಗ್ರಹಿಸಲು. ಏಕಾಯ್ತು ಎನ್ನುವುದು ಸ್ವರಕ್ಷಣೆ ಮತ್ತು ಪರಿಹಾರಕ್ಕೆ. ನಮಗೆ ಆಗದಂತೆ ಎಚ್ಚರ ವಹಿಸಲು. ಯಾವುದೇ ಘಟನೆ ಅರ್ಥವೇ ಆಗದಾಗ? ಹಾನಿಯನ್ನು ಯಾವುದೋ ಒಂದಕ್ಕೆ ಆರೋಪಿಸಬೇಕು. ಇದು ಗುಣ. ಇಲ್ಲಿ ತಂದೆ-ತಾಯಿಗೋ, ಅವರ ಶಿಸ್ತಿಗೋ, ಓದಿನ ಒತ್ತಡಕ್ಕೋ, ಪ್ರೇಮ ಪ್ರಕರಣಕ್ಕೋ, ಆಫೀಸಿನ ಬಾಸ್ʼಗೋ- ಏನೋ ಒಂದಕ್ಕೆ. ಕಾರಣವನ್ನು ವ್ಯಕ್ತಿಗೆ ಆರೋಪಿಸುವುದು ಸಮಾಜಕ್ಕೆ ಸುಲಭದ ಮಾರ್ಗ.

ಅದಾದ ಮೇಲೆ ವಿಧಿಗೆ. ಯಾವುದೂ ಇಲ್ಲದಿದ್ದರೆ- ನಮ್ಮ ಸಮೀಕರಣಗಳಿಗೆ ಒಗ್ಗುವ ಕಾರಣ ಸಿಗದಿದ್ದಾಗ ಕೊನೆಯಲ್ಲಿ, Anxiety ಆಗಿತ್ತಂತೆ, depression ಗೆ ಹೋಗಿ ಬಿಟ್ಟಿದ್ದನಂತೆ ಎಂಬ ಎರಡು ಅವ್ಯಕ್ತಕ್ಕೆ. ಹಿಂದಿನ ವರ್ಷ ಜೂನ್ ತಿಂಗಳಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ ಒಂದು ಅಂಕಿ-ಅಂಶ ವನ್ನು ಪ್ರಕಟಿಸಿತ್ತು. ‌

ಅದು 2000-22 ಎರಡು ವರ್ಷದ ಸಾವಿನ ಅಂಕಿ-ಸಂಖ್ಯೆ. ಅದರಲ್ಲಿ ನನ್ನ ಗಮನ ಸೆಳೆದದ್ದು 15 ರಿಂದ 29 ವಯಸ್ಸಿನವರ ಸಾವಿನ ಕಾರಣಗಳು. National Crime Records Bureau (NCRB), Government of India ಕೊಟ್ಟ ಅಂಕಿ-ಅಂಶದ ಪ್ರಕಾರ ಈ ವಯೋಮಿತಿಯ ಶೇ.17.1ರಷ್ಟು ಸಾವಿಗೆ ಆತ್ಮಹತ್ಯೆ ಕಾರಣವಂತೆ! ಅಪಘಾತ ಕಾರಣವನ್ನೂ ಮೀರಿ. ಆರರಲ್ಲಿ ಒಬ್ಬ ಹುಡುಗ/ಹುಡುಗಿಯ ಸಾವು ಆತ್ಮಹತ್ಯೆ- ಬಹುಪಾಲು ಕಾರಣ ಮನೋದ್ವೇಗ ಮತ್ತು ಖಿನ್ನತೆ.

ಪ್ರಪಂಚದಲ್ಲಿ ಮತ್ತು ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಅತ್ಯಲ್ಪ ಆದರೂ ಕ್ಷೀಣಿಸುತ್ತಿದೆ. ಆದರೆ 15 ರಿಂದ 29ರ ವಯಸ್ಸಿನವರಲ್ಲಿ ಹೆಚ್ಚುತ್ತಿದೆ!!

ಹೀಗಿರುವಾಗ ಏನಿದು ಆಂಕ್ಸೈಟಿ, ಇದೇನು ಸೋಂಕೇ? ಅಥವಾ ಮಾನಸಿಕ ದೌರ್ಬಲ್ಯವೇ? ಮಾನ ಸಿಕ ಬೆಳವಣಿಗೆಯ ಕೊರತೆಯೇ? ಅಥವಾ ಯಾವುದನ್ನೂ ಎದುರಿಸಲಾಗದ ಪುಕ್ಕಲುತನವೇ? ಇದನ್ನು ಏನೋ ಒಂದು ಕೊರತೆ ಇಂದು ನಂಬಿಸುವವರೇ ಜಾಸ್ತಿ. ಏಕೆಂದರೆ ಕೊರತೆ ಇದ್ದರಷ್ಟೇ ಹಾನಿ ಸಾಧ್ಯ ಎಂಬ ನಂಬಿಕೆ ಸಮಾಧಾನದ್ದು. ಆದರೆ ಅಸಲಿಗೆ ಇದೊಂದು ಕೊರತೆಯೇ? ಅಥವಾ ಕುಟುಂಬ ಕಾರಣವೇ? ಏನಿದು ಸಮಸ್ಯೆ? ಕಾರಣ ಏನೆಂದು ತಿಳಿಯದಿದ್ದರೆ ಸಮಸ್ಯೆ ತಿಳಿಯುವುದು ಹೇಗೆ? ಈಗೀಗ ಹಲವರು ವಾರ್ಷಿಕ ದೈಹಿಕ ಚೆಕಪ್ ಮಾಡಿಕೊಳ್ಳುತ್ತಾರೆ.

ಆದರೆ ಯಾರಿಗೂ ವಾರ್ಷಿಕ ಮಾನಸಿಕ ಚೆಕಪ್ ಮಾಡಿಕೊಳ್ಳುವ ವ್ಯವಸ್ಥೆ ಮತ್ತು ರೂಢಿ ಇಲ್ಲವಲ್ಲ!! ಹಾಗಾಗಿ ಆಂಕ್ಸೈಟಿ ಮತ್ತು ಡಿಪ್ರೆಶನ್ ಇವನ್ನು ಅರ್ಥಮಾಡಿಕೊಳ್ಳುವುದು ಒಳಿತು. ಆದರೆ ಸುಲಭ ವಲ್ಲ. ಆಂಕ್ಸೈಟಿಯನ್ನು ಅರ್ಥಮಾಡಿಕೊಳ್ಳುವುದೆಂದರೆ ಭಾವನೆಗಳ ಸಾಸಿವೆ ಡಬ್ಬದಲ್ಲಿ ರಾಗಿ ಬೀಜ ತೋರಿಸಿದಂತೆ. ಇದು ವ್ಯಕ್ತ ಆದರೆ ಅವ್ಯಕ್ತ. ಹಾಗಾಗಿಯೇ ಹೆಚ್ಚಿನವರಿಗೆ ಇದು ಏನೆಂದು ಸ್ಪಷ್ಟತೆ ಇಲ್ಲ.

Anxiety ಈ ಶಬ್ದಕ್ಕೆ ಆತಂಕ, ಉದ್ವೇಗ, ಚಿಂತೆ, ಗಾಬರಿ, ಭಾವೋದ್ವೇಗ, ಒತ್ತಡ, ತಳಮಳ, ನರ್ವಸ್, ಹೈಪರ್ ಟೆನ್ಷನ್ ಇತ್ಯಾದಿ ಆಡುಬಳಕೆಯಲ್ಲಿ ಏನೇನೋ ಶಬ್ದಗಳನ್ನು ಪರ್ಯಾಯವಾಗಿ ಬಳಸುವುದಿದೆ. ಇಂಗ್ಲಿಷಿನಲ್ಲಿ ಕೂಡ ಇದೆಲ್ಲ ಅರ್ಥದಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಆದರೆ ಇದನ್ನು ‘Anxiety ಒಂದು ಆಧುನಿಕ ಸಮಸ್ಯೆ’ ಎಂಬ ರೀತಿಯಲ್ಲಿ ಹೇಳುವಾಗ ಈ ಶಬ್ದದ ಅರ್ಥ ವಿಸ್ತಾರ ಬದಲಾಗುತ್ತದೆ, ಹೆಚ್ಚುತ್ತದೆ.

ಆಂಕ್ಸೈಟಿ ಎಂದರೆ ಹೆದರಿಕೆಯಲ್ಲ. ನೀವು ಕಾಡಿನಲ್ಲಿ ಒಬ್ಬರೇ ನಡೆದು ಹೋಗುತ್ತಿದ್ದೀರಿ ಎಂದಿಟ್ಟು ಕೊಳ್ಳಿ. ಅಕಸ್ಮಾತ್ ಎದುರಿಗೆ ಹುಲಿಯೊಂದು ಬಂದು ನಿಲ್ಲುತ್ತದೆ. ಅಥವಾ ನೀವು ನಡೆಯುವ ದಾರಿಯಲ್ಲಿ ನಾಗರಹಾವೊಂದು ಅಕಸ್ಮಾತ್ ಎದುರಾಗುತ್ತದೆ. ಅಥವಾ ಬೆಂಗಳೂರಿನ ಯಾವುದೋ ಗಲ್ಲಿಯಲ್ಲಿ ರಾತ್ರಿ ಒಬ್ಬರೇ ನಡೆಯುವಾಗ ಎದುರಿಗೆ ಬೀದಿನಾಯಿ ಚೂಪಾದ ಹಲ್ಲನ್ನು ಕಿರಿದು ದಾಳಿಗೆ ನಿಲ್ಲುತ್ತದೆ. ಆ ಕ್ಷಣ ಆಗುವುದು ‘ಹೆದರಿಕೆ’.

ಇದನ್ನು ಮನಃಶಾಸ್ತ್ರದಲ್ಲಿ Fight or Flight ಎನ್ನಲಾಗುತ್ತದೆ. ತಕ್ಷಣ ಎದುರಿಸಬೇಕೋ ಅಥವಾ ಪಲಾಯನ ಮಾಡಬೇಕೋ ಎನ್ನುವ ವಿಚಾರ ಮುಗಿಯುವುದರೊಳಗೆ ದೇಹ ಕಾಯುವುದಿಲ್ಲ, ಸನ್ನದ್ಧವಾಗಿಬಿಡುತ್ತದೆ. ಉಸಿರಾಟ ಹೆಚ್ಚುತ್ತದೆ, ಸ್ನಾಯುಗಳು ಸಂಕುಚಿತಗೊಳ್ಳುತ್ತವೆ, ಎದೆಬಡಿತ ಹೆಚ್ಚುತ್ತದೆ, ರಕ್ತದೊತ್ತಡ ಹೆಚ್ಚುತ್ತದೆ. ಈ ಮೂಲಕ ರಕ್ತ ಸರಬರಾಜು ಮತ್ತು ಆಮ್ಲಜನಕ ಎರಡೂ ತಯಾರಾಗಿ ನರನಾಡಿಗಳು, ಸ್ನಾಯು, ಕಣ್ಣು, ಕಿವಿ- ಇಡೀ ದೇಹದ ವ್ಯವಸ್ಥೆ ಅಪಾಯವನ್ನು ಎದುರಿಸಲು, ಇಲ್ಲವೇ ತಪ್ಪಿಸಿಕೊಂಡು ಓಡಲು ಸನ್ನದ್ಧವಾಗಿ ಬಿಡುತ್ತವೆ.

ಅಪಾಯ ಎದುರಾದಾಗ ದೇಹದಗುವ ‘ಆಟೋ ಸ್ಟಾರ್ಟ್’ ಇದು. ಯಾದೃಚ್ಛಿಕ. ಇದೊಂದು ಅದ್ಭುತ, ನಮ್ಮ ಹಿಡಿತದಲ್ಲಿರದ ವ್ಯವಸ್ಥೆ. ಆದರೆ ಅಪಾಯ ಇನ್ನಿಲ್ಲ ಎಂದಾದಾಗ ದೇಹ ಸ್ವಾಭಾವಿಕ ಸ್ಥಿತಿಗೆ ಮರಳುತ್ತದೆ. ಎಷ್ಟು ಒಳ್ಳೆ ವ್ಯವಸ್ಥೆ ನೋಡಿ. ಒಂದು ವೇಳೆ, ‘ಅಪಾಯವಿದೆ, ಈಗ ಓಡಲು ಸನ್ನದ್ಧವಾಗಬೇಕು’ ಎಂದೆಲ್ಲ ಯೋಚಿಸಿದ ಮೇಲೆ ದೇಹ ತಯಾರಾಗುತ್ತಿದ್ದರೆ ಕಷ್ಟವೇ ಇತ್ತು. ಆ ವ್ಯವಸ್ಥೆಯೇ ನಮ್ಮನ್ನು ಕೋಟಿ ಕೋಟಿ ವರ್ಷ ಬಚಾವ್ ಮಾಡಿದ್ದು.

ನಾಯಿ ಓಡಿಸಿಕೊಂಡು ಬಂದಾಗ ಯಾರೇ ಆಗಲಿ- ದುಪ್ಪಟ್ಟು ವೇಗದಲ್ಲಿ ಓಡಲು ಸಾಧ್ಯ ವಾಗುವುದೇಕೆ. ದೇಹದ ನರ, ನಾಡಿ, ಸ್ನಾಯು, ರಕ್ತ ಸಂಚಲನೆ, ಉಸಿರಾಟ, ಕಣ್ಣಿನ ತೀಕ್ಷ್ಣತೆ, ಕಿವಿಯ ಮತ್ತು ಉಳಿದ ಇಂದ್ರಿಯಗಳ ಚುರುಕು ಇವನ್ನೆಲ್ಲ ದುಪ್ಪಟ್ಟು ಮಾಡಲು ದೇಹ ಕೆಮಿಕಲ್ ಪ್ರವಾಹ ವನ್ನೇ ಹರಿಸಿಬಿಡುತ್ತದೆ. ಆದರೆ ಹೆದರಿಕೆಯು ಕಣ್ಣಿಂದ ಕ್ರಮೇಣ ಸರಿದಾಗ, ದೂರವಾದಾಗ ದೇಹ ಸುಧಾರಿಸಿಕೊಂಡು ಸಾಮಾನ್ಯ ಸ್ಥಿತಿಗೆ ಬರುತ್ತದೆ. ಯಾವುದೋ ಭಾವ ತೀವ್ರತೆಯ ನಂತರ ನೀರು ಕುಡಿದು ಸಮಾಧಾನವಾಗುವುದು ಎಂದರೆ ಇದು.

ಈ ಇಂಗ್ಲಿಷ್ ಆಂಕ್ಸೈಟಿಯದು ಇದರ ಮುಂದಿನ ಕಥೆ. ನಮ್ಮ ಉಳಿವಿನ ತಂತ್ರ ವ್ಯವಸ್ಥೆ Survival Mechanism - ದೇಹ ಮತ್ತು ಮಾನಸಿಕ ಸ್ಥಿತಿಗಳು, ಅಪಾಯ ಹೋದ ನಂತರವೂ ಜಾಗೃತವಾಗಿಯೇ ಉಳಿದು ಬಿಡುವ ಸ್ಥಿತಿ. ಹುಲಿಯು ಓಡಿಹೋದ ನಂತರವೂ ಹಾಗೆಯೇ ಅತಿಉದ್ವೇಗದಲ್ಲಿ ಇರುವ ಸ್ಥಿತಿ. ಕೆಲವೊಮ್ಮೆ ಹುಲಿಯೇ ಬಂದಿರುವುದಿಲ್ಲ.

ಯಾವುದೇ ಅಪಾಯವೇ ಇರುವುದಿಲ್ಲ. ಅಪಾಯವಾದರೆ? ತೊಂದರೆಯಾದರೆ? ಈ ‘ಆದರೆ ಪ್ರಶ್ನೆ ಗಳ’ ನಿರಂತರ ಪ್ರವಾಹ ಮತ್ತು ಮನೋದೈಹಿಕ ನಿರಂತರ ತಯಾರಿ. ಕೊನೆಕೊನೆಗೆ ಯಾವುದೇ ಕಾರಣವೇ ಬೇಕಾಗಿಲ್ಲ. ಬಿಕ್ಕಳಿಕೆ ಬಂದಂತೆ. ಯಾವುದೋ ಒಂದು ಚಿಕ್ಕ ಮೆಸೇಜ್ ಬಂದರೆ, ಯಾರೋ ಸ್ವಲ್ಪ ಗಟ್ಟಿಯಾಗಿ ಮಾತನಾಡಿದರೆ ಹೀಗೆ ಏನೋ ಒಂದು ಕ್ಷುಲ್ಲಕ ಕಾರಣಕ್ಕೆ ಅನವಶ್ಯಕ ಉದ್ವೇಗದ ತುರೀಯಾವಸ್ಥೆಯ ಸ್ಥಿತಿಗೆ ದೇಹ, ಮಿದುಳು, ಇಡೀ ವ್ಯವಸ್ಥೆ ತಲುಪಿಬಿಡುವುದು.

ಇದೊಂದು ಶಾರೀರಿಕ ಮತ್ತು ಮಾನಸಿಕ ಸ್ಥಿತಿ. ಮನಸ್ಸು ಚಿಂತೆಯನ್ನು ಬಿಟ್ಟರೂ ದೇಹ, ನರಮಂಡಲಗಳೇ ಚಿಂತೆಯನ್ನು ಹಿಡಿದಿಟ್ಟು ಸತಾಯಿ ಸುವ ಸ್ಥಿತಿ. ಕಾರಣ ಯಾವುದೋ ಒಂದು ಚಿಂತೆಯಲ್ಲ. ಚಿಂತೆಯ ಗಾಯವಾದ ಕೆರೆತ. ಒಂದು ವಿಚಿತ್ರ ಸ್ಥಿತಿ. ಸುಳಿ. ಏನಾದರೂ ಅಪಾಯ ವಾದರೆ ಹೇಗೆ? ಕೆಲಸ ಕಳೆದು ಕೊಂಡರೆ ಹೇಗೆ? ಪರೀಕ್ಷೆಯಲ್ಲಿ ಫೇಲ್ ಆಗಿಬಿಟ್ಟರೆ? ಆಕ್ಸಿಡೆಂಟ್ ಆದರೆ ನನ್ನ ಕುಟುಂಬ ಬದುಕಲು ಬೇಕಾಗುವಷ್ಟು ಉಳಿತಾಯ ಮಾಡಿಲ್ಲವಲ್ಲ!

ಅಯ್ಯೋ ಇವತ್ತು ಎದ್ದ ಮೇಲೆ ಮಾಡಲು ನೂರೆಂಟು ಕೆಲಸಗಳಿವೆಯಲ್ಲಾ? ಇವತ್ತು ನಾನು ಆ ಕೆಲಸ ಮಾಡಿಲ್ಲವೆಂದರೆ ನನಗೇನೋ ಹಾನಿಯಾಗಿ ಬಿಡುತ್ತದೆ. ಇವೆಲ್ಲ ಚಿಂತೆ, ಯೋಚನೆಗಳು, ಕಾರಣಗಳೇ ಇಲ್ಲದೆ ಕಾಡುತ್ತಿದ್ದರೆ, ಬೆಳಗಿನ 2-3 ಗಂಟೆಯ ವೇಳೆ ಎಚ್ಚರಿಸಿದರೆ, ಅಥವಾ ನಿದ್ರೆಗಿಂತ ಮುಂಚೆ ನಿದ್ರೆ ಬಾರದೆ ಭವಿಷ್ಯದ ಚಿಂತೆ ನಿದ್ರೆಯನ್ನು ತಡೆದರೆ, ಮತ್ತೆ ಮತ್ತೆ ನಿತ್ಯ ಬಂದು ಗೊಂದಲ ಎಬ್ಬಿಸಿದರೆ ಅವು ಆಂಕ್ಸೈಟಿಯ ಲಕ್ಷಣಗಳು.

ಆಧುನಿಕ ಆಂಕ್ಸೈಟಿಯು ಶರೀರ, ಮನಸ್ಸಿನ ಆಚೆ ದಾಟಿ ವ್ಯಕ್ತಿಯ ನಡವಳಿಕೆಯ ಮೇಲೆ ಕೂಡ ಪರಿಣಾಮ ಬೀರಿರುತ್ತದೆ. ಚಿಕ್ಕ ಪುಟ್ಟದ್ದಕ್ಕೆಲ್ಲ planning ಹೆಸರಿನಲ್ಲಿ ಅತಿಯಾದ ಯೋಚನೆ. ಯಾವುದಾದರೂ ಪ್ರವಾಸಕ್ಕೆ ಹೊರಡಬೇಕೆಂದರೆ ಮುಗಿದೇಹೋಯಿತು. ಇವರದು ಪ್ರವಾಸ ದುದ್ದಕ್ಕೂ, ನಿರಂತರ ಮುಂದಿನದೇನೆಂಬ ಪ್ಲಾನ್.

ಮುಗಿಯುವುದೇ ಇಲ್ಲ. ಕೆಲವೊಮ್ಮೆ ಪ್ರವಾಸದಲ್ಲಿರುವಾಗಲೇ ‘ಮುಂದಿನ ಸಲ ಬಂದಾಗ’ ಎಂಬ ಅತಿಭವಿಷ್ಯದ ಯೋಚನೆಗಳು. ವರ್ತಮಾನದಲ್ಲಿ ಏನನ್ನೂ ಪೂರ್ಣ ಅನುಭವಿಸಲಿಕ್ಕಾಗದ ಸ್ಥಿತಿ. ಸದಾ ಭವಿಷ್ಯತ್ತಿನ ಚಿಂತೆ. ಸ್ವಗತ ಮಾತು. ಹೀಗಾದರೆ ಹೇಗೆ, ಹಾಗಾದರೆ ಹೇಗೆ? ಎಲ್ಲದಕ್ಕೂ ತಯಾರಿಯಿರಬೇಕು.

ಯಾವ ಕೆಲಸ, ಯೋಜನೆಗೂ ನೂರೆಂಟು ಸಮಸ್ಯೆಗಳನ್ನು ತಂದು ಗುಡ್ಡೆಹಾಕಿಕೊಳ್ಳುವುದು, ಚಿಂತಿ ಸುವುದು. ಕಲ್ಪಿತ ಅಪಾಯಗಳು, ಅವುಗಳಿಗೆ ನಿರಂತರ ತಯಾರಿ. ಎಲ್ಲಿಲ್ಲದಷ್ಟು ಚಿಂತೆ. ಸಣ್ಣಪುಟ್ಟ ವಿಷಯಕ್ಕೆ ಕೆರಳಿಕೆ (Irritation). ಅತಿಯಾಗಿ ಕ್ಷಮೆ- ಸಾರಿ ಕೇಳುವುದು, ‘ನಾನು ಮಾಡುತ್ತಿರುವುದು ಸರಿಯಿದೆಯೇ?’ ಎಂದು ಎಲ್ಲರಲ್ಲೂ ಪದೇ ಪದೆ ಕೇಳುತ್ತಿರುವುದು.

ಇವೆಲ್ಲ ಆಂಕ್ಸೈಟಿಯ ಸಾಮಾನ್ಯ ಮಾನಸಿಕ ಪರಿಣಾಮಗಳು. ಅವೇ ಆಂಕ್ಸೈಟಿ ಅಲ್ಲ. ಸದಾ ಏನೋ ಒಂದು ಸಂಭವಿಸಬಹುದು ಎಂಬ ಭವಿಷ್ಯದ ಭಯ ಮತ್ತು ದೈಹಿಕ ಒತ್ತಡದ ಸ್ಥಿತಿ. ದೈಹಿಕ ಎಂದಾ ಕ್ಷಣ ಇದೆಲ್ಲ ಹೊರಗೆ ಇನ್ನೊಬ್ಬರಿಗೆ ಕಾಣಿಸುವಂತಿರಬೇಕು ಎಂದೇನೂ ಇಲ್ಲ. ಹತ್ತು ಜನ ಸೇರಿದಲ್ಲಿ ಅತ್ಯಂತ ಸೌಮ್ಯವಾಗಿ ವ್ಯವಹರಿಸುವ ವ್ಯಕ್ತಿ ಕೂಡ ಈ ಸಮಸ್ಯೆಯಿಂದ ಬಳಲುತ್ತಿರ ಬಹುದು.

ಕ್ಷಣಿಕ ಭಾವೋದ್ವೇಗ, ಬೇಸರ, ಅಥವಾ ಯಾವುದೋ ಒಂದು ಅಚಾನಕ್ ನಡೆದ ಘಟನೆಯೊಂದಕ್ಕೆ ಅತಿಯಾಗಿ ಹೆದರುವುದು, ಬೆವರುವುದು, ಕೂಗುವುದು ಇವು ಕೆಲವರಲ್ಲಿ ಜಾಸ್ತಿ. ಕೆಲವರು ಹೆದರಿ ಪ್ರತಿಕ್ರಿಯಿಸುವ ಪ್ರಮಾಣ ಹೆಚ್ಚು. ಅದು ಕ್ಷಣಿಕ ಸ್ಥಿತಿ. ಹತ್ತು ಜನರೆದುರು ಮೈಕ್ ಎದುರಿಗೆ ಮಾತ ನಾಡಲು ನಿಂತಾಗ ಕೈ ನಡುಗುವುದು, ಪರೀಕ್ಷೆಯ ಕೊಠಡಿಯಲ್ಲಿ ಬೆವರುವುದು, ಇವೆಲ್ಲವೂ ಮಾನಸಿಕ ಉದ್ವೇಗವೇ. ಕಣ್ಣೆದುರಿಗಿನ ಸ್ಥಿತಿಯಿಂದಾಗಿ, ಸಕಾರಣ ಎದುರಿಗಿದ್ದರೆ ಅದು ಭಯ. ಅದು ಸಮಸ್ಯೆಯಾಗುವ ಆಂಕ್ಸೈಟಿ ಅಲ್ಲ. ಕಲ್ಪಿತ ಅಪಾಯಗಳ ಚಿಂತೆಯ ಸುಳಿ ಮಾತ್ರ ನಾನು ಇಲ್ಲಿ ಹೇಳುತ್ತಿರುವ ಆಂಕ್ಸೈಟಿ.

ಆಂಕ್ಸೈಟಿಯನ್ನು ಕೇವಲ ಚಿಂತೆ ಎಂಬರ್ಥದಲ್ಲಿ ನೋಡಿದಾಗ, ಯಾರಿಗೆ ಚಿಂತೆಯಿಲ್ಲ, ಯಾರಿಗೆ ಸಮಸ್ಯೆಯಿಲ್ಲ? ‘ಎಲ್ಲರೂ ಬದುಕಬೇಕಪ್ಪ, ಬದುಕನ್ನು ಎದುರಿಸಬೇಕಪ್ಪ’ ಎಂಬುದು ಸರಿ. ಆದರೆ ಆಂಕ್ಸೈಟಿ ಎಂದರೆ ನ್ಯೂಟ್ರಲ್‌ನಲ್ಲಿಟ್ಟು ಆಕ್ಸಿಲರೇಟರ್ ಕೊಟ್ಟು ವಾಹನವನ್ನು ‘ವ್ರೂಂ ವ್ರೂಂ’ ಮಾಡಿದಂತೆ. ಇದು ಹೆದರಿಕೆ, ಅಪಾಯವನ್ನು ಕಲ್ಪಿಸಿಕೊಂಡು ಅಯಾಚಿತ, ಅನಿಯಂತ್ರಿತ ದೇಹವ್ಯವಸ್ಥೆ ಮತ್ತು ಮಿದುಳು ತಲುಪುವ ಸ್ಥಿತಿ. ಈ ಏರುಗತಿ ದೈಹಿಕ ಮತ್ತು ಮಾನಸಿಕವಾಗಿ ತ್ಯಂತ ಒತ್ತಡಪೂರಿತವಾದದ್ದು. ಹಾಗಾಗಿ ನಿರಂತರ ನಡೆಯುತ್ತಲೇ ಇದ್ದರೆ ಅಂಥ ದೇಹವನ್ನು, ಮನಸ್ಸನ್ನು ನಿಭಾಯಿಸುವುದು ಹೇಗೆ? ನಮ್ಮೆಲ್ಲರ ಬದುಕಿನ ವೇಗ ಮತ್ತು ಓಘ ಈಗ ಬದಲಾಗಿದೆ.

ನಿರಂತರ ಅನಿಶ್ಚಿತತೆಯ ಸುದ್ದಿಗಳು ನಮಗೆ ತಲುಪುವ ಪ್ರಮಾಣ ಹೆಚ್ಚಿದೆ. ಆದರೆ ನಾವಂದು ಕೊಂಡಷ್ಟು ಭಾವಜಡತ್ವ ನಮ್ಮಲ್ಲಿಲ್ಲ. ಸುದ್ದಿಗಳು, ಸೋಷಿಯಲ್ ಮೀಡಿಯಾ ಎಲ್ಲ ಮಾಧ್ಯಮ ಗಳು ನಿರಂತರ ಒಂದು ಹಂತದ ಉದ್ವೇಗವನ್ನು ನಮ್ಮೊಳಗೆ, ಎಲ್ಲರೊಳಗೂ ಜಾಗೃತವಾಗಿಟ್ಟಿರು ತ್ತದೆ.

ಮೊದಲು ಯಾವುದೇ ಘಟನೆಗೆ, ಸುದ್ದಿಗೆ ಒಂದಿಷ್ಟು ವ್ಯಾಪ್ತಿಯಿತ್ತು. ಈಗ ಹಾಗಲ್ಲ, ಅಮೆರಿಕದ ಮೂಲೆಯಲ್ಲಿ ನಡೆದ ಘಟನೆಯೊಂದು ಬೀದರಿನ ಗಲ್ಲಿಯಲ್ಲಿ ಭಯದ ಭಾವ ಹುಟ್ಟಿಸಿಬಿಡ ಬಹುದು. ಇವೆಲ್ಲ ನಮ್ಮಂದು ಅವ್ಯಕ್ತ ಅಸ್ಥಿರತೆಯ ಭಾವವನ್ನು ಸ್ವಲ್ಪ ಸ್ವಲ್ಪವೇ ಆಗೀಗ ಹುಟ್ಟಿಸು ತ್ತವೆ.

ಇನ್ನು ರಿಸೆಶನ್, ಯುದ್ಧ, ಧಾರ್ಮಿಕ ಆಕ್ರಮಣ ಕೂಡ ಇವೆ. ಅದೆಲ್ಲದರ ಜತೆ ಉದ್ಯೋಗ ಕೂಡ ಈಗೀಗ ಖಾತ್ರಿಯದಲ್ಲ. ಬಹುತೇಕ ಖಾಸಗಿ ಕೆಲಸಗಳು ಪರ್ಮನೆಂಟ್ ಎಂದಿಲ್ಲ, ಯಾವಾಗ ಬೇಕಾದರೂ ಕೆಲಸ ಹೋಗಬಹುದು. ತಳಮಳದ ಬದುಕು ಮೊದಲೂ ಇತ್ತು- ಆದರೆ ಈಗೀಗ ಬದುಕಿನ ಅನಿಶ್ಚಿತತೆಯೂ ಹೆಚ್ಚಿದೆ. ಇನ್ನೊಂದು ಕಾರಣ ಮಿತಿಮೀರಿದ ಸ್ಪರ್ಧೆ.

ಸ್ಪರ್ಧೆ ಎಂದಾಗ ಹೋಲಿಕೆ. ಹೋಲಿಕೆಯಿಂದ ನಿರಂತರ ಸ್ವವಿಮರ್ಶೆ- ತಳಮಳ. ಇವೆಲ್ಲ ವಯಸ್ಸಿನ ಸಂಖ್ಯೆಗೆ ಅತೀತವಾದರೂ ಅತಿಯಾಗಿ ಬಾಧಿಸುವುದು 15 ರಿಂದ 25ರ ವಯಸ್ಸಿನಲ್ಲಿ. ಹತ್ತನೇ ಕ್ಲಾಸಿನಿಂದ ಕಾಲೇಜು, ಕೆಲಸ ಆರಂಭಿಸುವವರೆಗೆ. ಅಥವಾ ಕೆಲಸದ ಆರಂಭ, ಮದುವೆಯ ವಯಸ್ಸು ಈ ಹಂತದಲ್ಲಿ. ಇದು ನಮ್ಮ ಸಮಾಜದಲ್ಲಿ ಬದುಕು ರೂಪುಗೊಳ್ಳುವ ಹಂತ. ಈ ಹಂತ ದಲ್ಲಿ ಆಂಕ್ಸೈಟಿ ಬಾಧಿಸಿದಲ್ಲಿ, ಅದರ ಸುಳಿಯಲ್ಲಿ ಸಿಕ್ಕಿದಲ್ಲಿ ಅದನ್ನು ಒಬ್ಬರೇ ಮೂಲೆಯಲ್ಲಿ ಕೂತು ನಿಭಾಯಿಸಲಿಕ್ಕಾಗುವುದಿಲ್ಲ.

ಇದು ಹಂತ ಮೀರಿದರೆ, ಈ ಆತಂಕಗಳಿಗೆ ಅನ್ಯಮಾರ್ಗ ಮಾಡಿಕೊಡದಿದ್ದಲ್ಲಿ ಆಗ ಬದುಕು ಸೋಲುತ್ತದೆ. ಆಂಕ್ಸೈಟಿ ಕೇವಲ ದುರ್ಬಲ ಮನಸ್ಸಿನವರಿಗೆ ಅಮರಿಕೊಳ್ಳುತ್ತದೆ, ಅದು ಗಟ್ಟಿ ಮನಸ್ಸಿನವರಿಗೆ ಬಾಧಿಸುವುದಿಲ್ಲ ಎಂಬುದು ಅತಿ ದೊಡ್ಡ ತಪ್ಪು ಕಲ್ಪನೆ. ಇದು ಬುದ್ಧಿವಂತರ ಜಾಸ್ತಿ. ಯಾರು ಓದಿನಲ್ಲಿ, ಕೆಲಸದಲ್ಲಿ, ಸಾಧನೆಯಲ್ಲಿ ಮುಂದಿರುತ್ತಾರೋ- ಇದು ಅವರನ್ನು ಅತಿ ಹೆಚ್ಚು ಬಾಧಿಸುತ್ತದೆ.

ಆಂಕ್ಸೈಟಿ ಸದಾ ದೃಗ್ಗೋಚರವಲ್ಲ. ಅದೆಷ್ಟೋ ಬಾರಿ ಇದು ಉಳಿದವರಿಗೆ ಕಾಣಿಸುವುದೇ ಇಲ್ಲ. ವ್ಯಕ್ತಿ ತೋರಿಸಿಕೊಳ್ಳುವುದಿಲ್ಲ. ಇದೆಲ್ಲವನ್ನೂ ಒಳಗೊಳಗೇ ಅನುಭವಿಸುವ ಸಾಧ್ಯತೆಯೇ ಹೆಚ್ಚು. ಈ ಆಂಕ್ಸೈಟಿಯ ಸುಳಿ ಹೇಗೆಂದರೆ ಸದಾ ಚಿಂತೆಯಲ್ಲಿರಬೇಕು, ಚಿಂತೆ ಮಾಡುವುದು ನಿಂತಾಕ್ಷಣ ಏನೋ ಒಂದು ಕೆಟ್ಟದ್ದೇ ಸಂಭವಿಸುತ್ತದೆ ಎಂದು ಅನಿಸುವುದು.

ಅದೊಂದು ಹಂತದಲ್ಲಿ ರಾತ್ರಿ ಮತ್ತು ಏಕಾಂತಕ್ಕಿಂತ ಹಗಲು ಮತ್ತು ಸಂತೆ ನೆಮ್ಮದಿಯೆನಿಸುವುದು. ಎ ಉದ್ವೇಗಗಳೂ ಕೆಟ್ಟವು ಎನ್ನುತ್ತಿಲ್ಲ. ಯೋಚನೆ, ಚಿಂತೆ ಇವೆಲ್ಲ ಇರಲೇಬೇಕು. ಅವು ತಕ್ಕಮಟ್ಟಿಗೆ ಇಲ್ಲದಿದ್ದರೆ ಅದು ಕೂಡ ಸಮಸ್ಯೆಯೇ. ಆದರೆ ಉದ್ವೇಗಗಳು ಆಕಾರಣವಾಗಿದ್ದಲ್ಲಿ, ಕಲ್ಪಿಸಿ ಕೊಂಡದ್ದಾದಲ್ಲಿ. ಅವುಗಳನ್ನು ಪದೇ ಪದೆ ಆಹ್ವಾನ ಮಾಡಿ ರಿಹರ್ಸಲ್ ನಡೆಸುವುದನ್ನೇ ಮಾನಸಿಕವಾಗಿ ವ್ಯಾಯಾಮ ಮಾಡಿಕೊಂಡಲ್ಲಿ ಅದು ಮನೋದ್ವೇಗದ ಬದುಕಿಗೆ ದಾರಿ ಮಾಡಿ ಕೊಡುತ್ತದೆ. ಹಾಗಾದರೆ ಇದರಿಂದ ಬಚಾವ್ ಆಗುವುದು ಹೇಗೆ? ಏನದು ಡಿಪ್ರೆಶನ್? ಆ ಸ್ಥಿತಿಗೆ ಮುಟ್ಟುವುದು ಎಂದರೇನು?

(ಮುಂದುವರಿಯುತ್ತದೆ)