ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ವಿಧಿಬರಹ ತಪ್ಪಿಸಲು ಸಾಧ್ಯವಿಲ್ಲ

ಗರುಡನಿಗೆ ಪುಟ್ಟ ಗುಬ್ಬಿಯ ಮೇಲೆ ಕನಿಕರ ಬಂದಿತು. ಪಾಪ ಇವನು ನನ್ನ ಜಾತಿಯ ಪುಟ್ಟ ಪಕ್ಷಿ ಅವನು ಯಾಕೆ ನಡುಗುತ್ತಿದ್ದಾನೆ ಸಮಾಧಾನ ಮಾಡಬೇಕು ಎಂದು ಅದರ ಬಳಿ ಹೋಗಿ, ಗುಬ್ಬಿ ನೀನು ಯಾಕೆ ನಡುಗುತ್ತಿರುವೆ ಎಂದು ಕೇಳಿದ. ಗುಬ್ಬಿ ಹೇಳಿತು. ‘ಈಗ ತಾನೆ ಯಮರಾಜನನ್ನು ನೋಡಿದೆ, ಅವನ ಕಣ್ಣಿನಲ್ಲಿ ನನ್ನ ಚಿತ್ರ ಕಾಣುತ್ತಿತ್ತು. ನನ್ನ ಜೀವಿತಾವಧಿ ಮುಗಿದಿದೆ, ಯಮ ನನ್ನನ್ನು ಕರೆ ದೊಯ್ಯಲು ಬಂದಿದ್ದಾನೆ ನನಗೆ ತುಂಬಾ ಭಯವಾಗಿದೆ’ ಎಂದಿತು.

ಒಂದೊಳ್ಳೆ ಮಾತು

rgururaj628@gmail.com

ಒಮ್ಮೆ ಕೈಲಾಸದಲ್ಲಿ ಒಂದು ಸಭೆ ಸೇರಿತ್ತು. ಆ ಸಭೆಗೆ ದೇವಾನು-ದೇವತೆಗಳು ಸೇರಿದ್ದರು. ಯಮ ದೇವ ತನ್ನ ವಾಹನ ಕೋಣನ ಮೇಲೆ ಸಭೆಗೆ ಬಂದನು. ಸಭಾ ಭವನದ ಒಳಗೆ ಹೋಗುವ ಮೊದಲು ಕೋಣವನ್ನು ಒಂದೆಡೆ ನಿಲ್ಲಿಸಿ ಇಳಿದು ಆ ಕಡೆ ಈ ಕಡೆ ನೋಡಿದ. ಒಂದು ಮರದ ಮೇಲೆ ಪುಟ್ಟ ಗುಬ್ಬಚ್ಚಿ ಕುಳಿತಿತ್ತು. ಯಮ ಅದರ ಕಡೆಗೆ ದೃಷ್ಟಿ ಇಟ್ಟು ಕ್ಷಣ ನೋಡಿ ಸಭಾ ಭವನದ ಒಳಗೆ ಹೋದನು.

ಗುಬ್ಬಿಗೆ ಭಯವಾಯಿತು; ಯಮದೇವ ಯಾಕೆ ತನ್ನ ಮೇಲೆ ದೃಷ್ಟಿ ಬೀರಿದ. ಇನ್ನು ತನ್ನ ಕಥೆ ಮುಗಿಯತು. ತನ್ನ ಸಾವು ಹತ್ತಿರ ಬಂದಿದೆ ಎಂದುಕೊಂಡ ಗುಬ್ಬಿ ಹೆದರಿಕೆಯಿಂದ ನಡುಗುತ್ತಿತ್ತು. ಸ್ವಲ್ಪ ಹೊತ್ತಿಗೆ ಮಹಾವಿಷ್ಣು ತನ್ನ ವಾಹನ ಗರುಡರಾಜನ ಮೇಲೆ ಬಂದು ಇಳಿದು ಸಭೆಯ ಕಲಾಪಕ್ಕೆ ಒಳಗೆ ಹೋದನು. ಅಲ್ಲೇ ನಿಂತಿದ್ದ ಗರುಡ ಸುತ್ತ ಮುತ್ತ ತಿರುಗಿದಾಗ ಪುಟ್ಟ ಗುಬ್ಬಿ ಹೆದರಿ ನಡುಗುವುದನ್ನು ನೋಡಿದ.

ಇದನ್ನೂ ಓದಿ: Roopa Gururaj Column: ಹೃದಯದೊಳಗೆ ಭಗವಂತನಿರಲೇಬೇಕು

ಗರುಡನಿಗೆ ಪುಟ್ಟ ಗುಬ್ಬಿಯ ಮೇಲೆ ಕನಿಕರ ಬಂದಿತು. ಪಾಪ ಇವನು ನನ್ನ ಜಾತಿಯ ಪುಟ್ಟ ಪಕ್ಷಿ ಅವನು ಯಾಕೆ ನಡುಗುತ್ತಿದ್ದಾನೆ ಸಮಾಧಾನ ಮಾಡಬೇಕು ಎಂದು ಅದರ ಬಳಿ ಹೋಗಿ, ಗುಬ್ಬಿ ನೀನು ಯಾಕೆ ನಡುಗುತ್ತಿರುವೆ ಎಂದು ಕೇಳಿದ. ಗುಬ್ಬಿ ಹೇಳಿತು. ‘ಈಗ ತಾನೆ ಯಮರಾಜನನ್ನು ನೋಡಿದೆ, ಅವನ ಕಣ್ಣಿನಲ್ಲಿ ನನ್ನ ಚಿತ್ರ ಕಾಣುತ್ತಿತ್ತು. ನನ್ನ ಜೀವಿತಾವಧಿ ಮುಗಿದಿದೆ, ಯಮ ನನ್ನನ್ನು ಕರೆದೊಯ್ಯಲು ಬಂದಿದ್ದಾನೆ ನನಗೆ ತುಂಬಾ ಭಯ ವಾಗಿದೆ’ ಎಂದಿತು. ಗರುಡ ಅದನ್ನು ಸಮಾಧಾನ ಪಡಿಸಿ ನೀನು ಹೆದರಬೇಡ. ನೀನು ಯಮನ ಕಣ್ಣಿಗೆ ಬೀಳದಂತೆ ನಿನ್ನನ್ನು ಸುರಕ್ಷಿತ ವಾಗಿ ದೂರದ ಹಿಮಾಲಯದ ತಪ್ಪಲಿನ ಪರ್ವತ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯಾರಿಗೂ ಕಾಣದಂತೆ ಅಲ್ಲಿ ಭದ್ರವಾದ ಜಾಗದಲ್ಲಿ ಇಡುವೆ ಎಂದು ಗುಬ್ಬಚ್ಚಿಯನ್ನು ತನ್ನ ಮೇಲೆ ಕೂರಿಸಿಕೊಂಡು ಹಾರಿ ಪರ್ವತದ ಬಳಿ ಬಂದು ಅಲ್ಲಿದ್ದ ಒಂದು ಗುಹೆಯೊಳಗೆ ಗುಬ್ಬಚ್ಚಿಯನ್ನು ಬಿಟ್ಟು ಗರುಡ ಬಂದನು.

ಇಷ್ಟು ಸಮಯ ಆಗುವುದರೊಳಗೆ ಒಳಗೆ ಸಭೆ ಮುಗಿದಿತ್ತು. ಸಭೆಯ ಕಲಾಪ ಮುಗಿಸಿ ಯಮ ಹೊರಗೆ ಬಂದು ಗರುಡನನ್ನು ನೋಡಿ ನಕ್ಕನು. ಗರುಡನಿಗೆ ಯಮನ ನಗು ಹಿಡಿಸಲಿಲ್ಲ, ಹೇಳಿದ ನೀನು ಗುಬ್ಬಚ್ಚಿಯನ್ನು ನೋಡಿದಂತೆ ನನ್ನ ನೋಡಿ ನಕ್ಕ ಮಾತ್ರಕ್ಕೆ ನಾನೇನು ಹೆದರುವುದಿಲ್ಲ. ನನ್ನ ಮೇಲೆ ಮಹಾವಿಷ್ಣು ಕುಳಿತು ಕೊಳ್ಳುತ್ತಾನೆ ನಿನಗೂ ಗೊತ್ತಿರಬೇಕಲ್ಲ ಎಂದ.

ಯಮರಾಜ ಮತ್ತೂ ಜೋರಾಗಿ ನಗುತ್ತಾ ನಾನು ನಕ್ಕಿದ್ದು ಅದಕ್ಕಲ್ಲ, ನೀನು ನನ್ನ ಹತ್ತಿರವೇ ನಾಟಕ ಆಡುವೆಯಲ್ಲ ಎಂದಾಗ, ಏನೀಗ ಆ ಪುಟ್ಟ ಪಕ್ಷಿಯ ಮೇಲೆ ನಿನ್ನ ದೃಷ್ಟಿ ನೆಟ್ಟು ಹೆದರಿಸಿದಿ ಯಲ್ಲ ಅದನ್ನು ನಾನು ಜೋಪಾನ ಮಾಡಿ ಬಂದಿರುವೆ, ಇನ್ನು ಗುಬ್ಬಚ್ಚಿಗೆ ನಿನ್ನ ಭಯವಿಲ್ಲ ಎಂದಿತು.

ಯಮ ಇನ್ನಷ್ಟು ಜೋರಾಗಿ ನಕ್ಕ, ಗರುಡನಿಗೆ ಮತ್ತೂ ಆಶ್ಚರ್ಯವಾಯಿತು. ಯಮ ಹೇಳಿದ ನಾನು ಆ ಗುಬ್ಬಿಯನ್ನು ಮೊದಲು ನೋಡಿದಾಗ ನನಗನ್ನಿಸಿತು, ಇದಕ್ಕೆ ಸಾವು ಇನ್ನು ಸ್ವಲ್ಪ ಹೊತ್ತಿಗೆ ಬರುವುದು. ಅದೂ ಸಹ ಹಿಮಾಲಯ ಪರ್ವತದ ಗುಹೆಯೊಳಗೆ ಒಂದು ಹಾವಿನ ಬಾಯಲ್ಲಿ ಎಂದು ಲಿಖಿತವಿತ್ತು ಎಂಬುದನ್ನು ತಿಳಿದು ಆಶ್ಚರ್ಯವಾಯಿತು.

ಈ ಪುಟ್ಟ ಗುಬ್ಬಿ ಹಿಮಾಲಯ ಪರ್ವತಕ್ಕೆ ಇಷ್ಟೇ ಸಮಯದಲ್ಲಿ ಹೋಗುವುದು ಹೇಗೆ? ಅದರ ಸಾವು ಅಲ್ಲಿರುವ ಹಾವಿನ ಬಾಯಲ್ಲಿ ಎಂದರೇನು? ಎಂದು ನನಗೇ ಆಶ್ಚರ್ಯವಾಗಿತ್ತು. ಇನ್ನೂ ಆಶ್ಚರ್ಯ ವಾದ ಸಂಗತಿ ಎಂದರೆ, ಕೇಳು ಗರುಡ ರಾಜ, ಆ ಪುಟ್ಟ ಪಕ್ಷಿಯನ್ನು ಹಾವಿನ ಬಾಯಿಗೆ ಹಾಕಲು ಆ ವಿಧಿಯು ನಿನ್ನನ್ನೇ ಬಳಸಿಕೊಂಡಿತಲ್ಲ, ಅದನ್ನು ಕಂಡು ನನಗೆ ಆಶ್ಚರ್ಯವಾಗಿದ್ದು ಎಂದ ಯಮ ರಾಜ. ವಿಧಿ ಬರಹವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದಲೇ ಬದುಕಿರುವಷ್ಟು ದಿನ ನೆಮ್ಮದಿಯಿಂದ ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಬದುಕಿ ಬಿಡಿ.

ರೂಪಾ ಗುರುರಾಜ್

View all posts by this author