ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Hegde Column: ಮಾಲಿನ್ಯದ ವಿರುದ್ಧ ವಿಕಸಿತ ಭಾರತದ ಅನಿವಾರ್ಯ ಹೋರಾಟ

2026ರ ದಾವೋಸ್ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಐಎಂಎಫ್‌ʼನ ಮಾಜಿ ಮುಖ್ಯ ಅರ್ಥಶಾಸ್ತ್ರ ಜ್ಞೆ ಮತ್ತು ಪ್ರಸ್ತುತ ಹಾರ್ವರ್ಡ್ ಪ್ರೊಫೆಸರ್ ಎನಿಸಿರುವ ಗೀತಾ ಗೋಪಿನಾಥ್‌ ರವರು (ಇವರು ಮೈಸೂರಿನವರು), ‘ಅಮೆರಿಕದ ಟ್ಯಾರಿಫದʼಗಿಂತ ಮಾಲಿನ್ಯದ ಪರಿಣಾಮವು ಭಾರತದ ದೀರ್ಘ ಕಾಲೀನ ಆರ್ಥಿಕ ಬೆಳವಣಿಗೆಗೆ ಅಪಾಯಕಾರಿ’ ಎಂದು ಎಚ್ಚರಿಸಿದರು.

ಕಹಿ ವಾಸ್ತವ

ಪ್ರಕಾಶ ಹೆಗಡೆ

ಭಾರತದಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾನ ದಂಡಗಳನ್ನು ನಿಗದಿಪಡಿಸಿ, ಅನುಷ್ಠಾನದ ಉಸ್ತುವಾರಿಯನ್ನು ಕೇಂದ್ರ ಮತ್ತು ರಾಜ್ಯದ ನಿಯಂತ್ರಣ ಮಂಡಳಿಗಳಿಗೆ ನೀಡಿವೆ. ವಾಯುಮಾಲಿನ್ಯಕ್ಕೆ ರಾಷ್ಟ್ರೀಯ ವಾತಾವರಣ ಗಾಳಿ ಗುಣಮಟ್ಟ ಮಾನದಂಡಗಳು ಅನ್ವಯವಾಗುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಕೇಂದ್ರ ಬಜೆಟ್ 2026ರ ನಂತರದ ಮೊದಲ ಹಣಕಾಸು ನೀತಿ ನಿರ್ಧಾರದಲ್ಲಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು ಶೇ.7.4ರಷ್ಟು ಆಗಿರಲಿದೆ ಎಂದು ಪ್ರಕಟಿಸಿದೆ.

2047ರೊಳಗೆ ಅಭಿವೃದ್ಧಿಶೀಲ-ಉನ್ನತ ಆದಾಯದ ಆರ್ಥಿಕತೆಯಾಗಲು ಭಾರತವು ಮುಂದಿನ ಇಪ್ಪತ್ತು ವರ್ಷಗಳಲ್ಲಿ ಸರಾಸರಿ ವರ್ಷಕ್ಕೆ ಸುಮಾರು ಶೇ.8ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರಂತರವಾಗಿ ಸಾಧಿಸಬೇಕಾಗಿದೆ. ನಮ್ಮಲ್ಲಿ ‘ವಿಕಸಿತ ಭಾರತ’ ಗುರಿಯನ್ನು ತಲುಪಲು ಪ್ರಸ್ತುತ ಹೂಡಿಕೆ-ಜಿಡಿಪಿ ಅನುಪಾತವನ್ನು ದ್ವಿಗುಣಗೊಳಿಸು ವುದು, ಕಾರ್ಮಿಕ ಶಕ್ತಿಯನ್ನು ಹೆಚ್ಚಿಸುವುದು ಹಾಗೂ ಆಳವಾದ ರಚನಾತ್ಮಕ ಸುಧಾರಣೆ ಗಳನ್ನು ಜಾರಿಗೆ ತರುವ ಶ್ರಮತೆ ಸ್ಪಷ್ಟವಾಗಿ ಕಾಣುತ್ತಿದೆ.

ಆದರೆ, ಪರಿಸರ ಮಾಲಿನ್ಯವೆಂಬ ಪೆಡಂಭೂತದಿಂದ ಕೃಷಿ, ಜೀವವೈವಿಧ್ಯ ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಗಂಭೀರ ಪರಿಣಾಮವಾಗದಂತೆ ಅನಿವಾರ್ಯ ಹೋರಾಟವನ್ನು ನಡೆಸಲೇಬೇಕಾಗಿದೆ.

2026ರ ದಾವೋಸ್ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಐಎಂಎಫ್‌ʼನ ಮಾಜಿ ಮುಖ್ಯ ಅರ್ಥ ಶಾಸ್ತ್ರಜ್ಞೆ ಮತ್ತು ಪ್ರಸ್ತುತ ಹಾರ್ವರ್ಡ್ ಪ್ರೊಫೆಸರ್ ಎನಿಸಿರುವ ಗೀತಾ ಗೋಪಿನಾಥ್‌ ರವರು (ಇವರು ಮೈಸೂರಿನವರು), ‘ಅಮೆರಿಕದ ಟ್ಯಾರಿ-ಗಿಂತ ಮಾಲಿನ್ಯದ ಪರಿಣಾಮವು ಭಾರತದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆಗೆ ಅಪಾಯಕಾರಿ’ ಎಂದು ಎಚ್ಚರಿಸಿದರು.

ಮಾಲಿನ್ಯದಿಂದ ಉತ್ಪಾದಕತೆ ಕುಂಠಿತವಾಗಿ, ದೇಶೀಯ ಹಾಗೂ ಅಂತಾರಾಷ್ಟ್ರೀಯ ಹೂಡಿಕೆದಾರರ ಆರ್ಥಿಕತೆ ಹಾಗೂ ವಿಶ್ವಾಸವನ್ನು ಅದು ಕುಂದಿಸಿ ಅವರನ್ನು ಇತರೆ ದೇಶಗಳೆಡೆ ವಲಸೆಹೋಗುವಂತೆ ಮಾಡುತ್ತಿದೆ. ಮಾಲಿನ್ಯದಿಂದ ಭಾರತದ ಜಿಡಿಪಿಯ ಶೇ.9.5ರಷ್ಟು (336 ಬಿಲಿಯನ್) ನಷ್ಟಕ್ಕೆ ಕಾರಣವಾಗುತ್ತಿದೆಯೆಂಬುದು ಭಾರತೀಯರು ತಲೆತಗ್ಗಿಸುವಂಥ ವಿಷಯ.

ಇದನ್ನೂ ಓದಿ: Prakash Hegde Column: ಬೆಳ್ಳಿಯ ಬುಗುರಿ: ಲಾಭದ ಕನಸು ಮತ್ತು ವಾಸ್ತವದ ಪರಿಧಿ

ವಿಶ್ವ ಬ್ಯಾಂಕ್ ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರತಿವರ್ಷ ಹದಿನೇಳು ಲಕ್ಷ ಜನರು (ಒಟ್ಟು ಸಾವುಗಳ ಶೇ.18ರಷ್ಟು) ಮಾಲಿನ್ಯದಿಂದ ಸಾವಿಗೀಡಾಗುತ್ತಾರೆ. ಆದ್ದರಿಂದ ಮಾಲಿನ್ಯ ಸಮಸ್ಯೆಯನ್ನು ಅತ್ಯುನ್ನತ ಆದ್ಯತೆಯಾಗಿ ತೆಗೆದುಕೊಂಡು, ಸಮರೋಪಾದಿ ಯಲ್ಲಿ ಎದುರಿಸಿ ಪರಿಹಾರದ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಅವರು ಒತ್ತಾಯಿಸಿ ದರು. ಈ ಅಪ್ರಿಯ ಸತ್ಯವು ನೆರೆದಿದ್ದ ಗಣ್ಯರನ್ನು ದಿಗ್ಭ್ರಮೆಗೊಳಿಸಿತು. ಭಾರತೀಯ ನಿಯೋಗವು ಮುಜುಗರಕ್ಕೆ ಒಳಗಾಗಿದ್ದು ಸ್ಪಷ್ಟವಾಗಿತ್ತು.

ಮಾಲಿನ್ಯವೆಂದರೆ ಅನುಮತಿಸಿದ ಮಟ್ಟವನ್ನು ಮೀರಿ ವಾಯು, ಜಲ, ಭೂಮಿ ಹಾಗೂ ಶಬ್ದದ ದುರ್ಬಳಕೆ ಮೂಲಕ ಪರಿಸರದ ಸಮತೋಲನ ಹದಗೆಡುವ ಸ್ಥಿತಿಯನ್ನು ತಲುಪು ವುದು. ವಾಯುವಿನಿಂದಾಗುವ ಮಾಲಿನ್ಯವೆಂದರೆ ವಾತಾವರಣದಲ್ಲಿ ಹಾನಿಕಾರಕ ಅನಿಲ ಗಳು, ಧೂಳು ಮತ್ತು ಸೂಕ್ಷ್ಮ ಕಣಗಳು ಅತಿಯಾದ ಪ್ರಮಾಣದಲ್ಲಿ ಸೇರಿಕೊಂಡು ಮಾನವ ಆರೋಗ್ಯ ಹಾಗೂ ಪರಿಸರಕ್ಕೆ ಅಪಾಯ ಉಂಟುಮಾಡುವ ಸ್ಥಿತಿ.

ವಾಹನಗಳ/ಕಾರ್ಖಾನೆಗಳ ಎಮಿಷನ್, ಇಂಧನದ ದಹನ, ಕಟ್ಟಡ ನಿರ್ಮಾಣದಿಂದ ಹೊಮ್ಮುವ ಧೂಳು ಹಾಗೂ ಕೃಷಿಯ ಸ್ಟಬಲ್ ಸುಡುವಿಕೆ ವಾಯುಮಾಲಿನ್ಯದ ಪ್ರಮುಖ ಕಾರಣಗಳಾಗಿವೆ. ಇದರ ಪರಿಣಾಮವಾಗಿ ಉಸಿರಾಟದ ಸಮಸ್ಯೆಗಳು, ಶ್ವಾಸಕೋಶ ಮತ್ತು ಹೃದಯ ರೋಗಗಳು ಉಲ್ಬಣಿಸುತ್ತವೆ. ಜತೆಗೆ, ವಾಯುಮಾಲಿನ್ಯವು ಹವಾಮಾನ ಬದಲಾ ವಣೆ, ಆಮ್ಲ ಮಳೆ ಮತ್ತು ಜೀವವೈವಿಧ್ಯದ ಹಾನಿಗೂ ಕಾರಣವಾಗುತ್ತದೆ.

ವಾಯುಮಾಲಿನ್ಯವು ತೀವ್ರವಾಗಿರುವ ನಗರಗಳಿಂದ ಲಕ್ಷಾಂತರ ಜನರು ಸುರಕ್ಷಿತ ಹಾಗೂ ಆರೋಗ್ಯಕರ ವಾಸಸ್ಥಳಗಳತ್ತ ವಲಸೆಹೋಗುತ್ತಿರುವ ಪ್ರವೃತ್ತಿ ಕಾಣುತ್ತಿದೆ.

ಜಲಮಾಲಿನ್ಯವೆಂದರೆ ನದಿಗಳು, ಸರೋವರಗಳು, ಕೆರೆಗಳು, ಭೂಗರ್ಭ ಜಲ ಮತ್ತು ಸಮುದ್ರಗಳಿಗೆ ಹಾನಿಕಾರಕ ವಸ್ತುಗಳು ಸೇರಿ ನೀರಿನ ಗುಣಮಟ್ಟ ಕುಸಿಯುವ ಸ್ಥಿತಿ. ಕೈಗಾರಿಕಾ ತ್ಯಾಜ್ಯ, ನಗರಗಳ ಮಲಿನ ನೀರು, ಕೃಷಿಯಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳು, ಪ್ಲಾಸ್ಟಿಕ್ ಹಾಗೂ ಧಾರ್ಮಿಕ-ಸಾಂಸ್ಕೃತಿಕ ತ್ಯಾಜ್ಯಗಳು ಜಲಮಾಲಿನ್ಯದ ಪ್ರಮುಖ ಕಾರಣಗಳಾಗಿವೆ. ಪರಿಣಾಮವಾಗಿ ಕುಡಿಯುವ ನೀರು ಅಶುದ್ಧ ವಾಗುತ್ತದೆ, ಜೀವಿಗಳಿಗೆ ಹಾನಿ ಉಂಟಾಗುತ್ತದೆ ಹಾಗೂ ಮನುಷ್ಯರಲ್ಲಿ ಸಂಬಂಧಿತ ರೋಗ ಗಳು ಹರಡುವ ಅಪಾಯ ಹೆಚ್ಚುತ್ತದೆ.

ಭೂಮಿಯ ಮಾಲಿನ್ಯವೆಂದರೆ ಮಣ್ಣಿಗೆ ಹಾನಿಕಾರಕ ಪದಾರ್ಥಗಳು ಸೇರಿ ಅದರ ಸಹಜ ಗುಣಮಟ್ಟ ನಾಶವಾಗುವ ಸ್ಥಿತಿ. ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಘನತ್ಯಾಜ್ಯ, ಅತಿ ಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆ, ಇ-ವೇ ಮತ್ತು ವೈದ್ಯಕೀಯ ತ್ಯಾಜ್ಯಗಳು ಭೂಮಾಲಿನ್ಯದ ಪ್ರಮುಖ ಕಾರಣಗಳಾಗಿವೆ.

ಇದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ, ಬೆಳೆಗಳ ಗುಣಮಟ್ಟ ಕುಂಠಿತ ವಾಗುತ್ತದೆ ಮತ್ತು ಭೂಗರ್ಭ ಜಲವೂ ಅಶುದ್ಧವಾಗುವ ಸಾಧ್ಯತೆ ಉಂಟಾಗುತ್ತದೆ. ಭೂಮಾಲಿನ್ಯವು ಮಾನವ ಆರೋಗ್ಯಕ್ಕೂ ಅಪಾಯಕಾರಿಯಾಗಿದ್ದು ಕ್ಯಾನ್ಸರ್ ಹಾಗೂ ಇತರ ಗಂಭೀರ ರೋಗಗಳಿಗೆ ಕಾರಣವಾಗಬಹುದು.

ಶಬ್ದ ಮಾಲಿನ್ಯವೆಂದರೆ ಮಾನವ ಆರೋಗ್ಯ ಮತ್ತು ನೈಸರ್ಗಿಕ ಸಮತೋಲನಕ್ಕೆ ಹಾನಿಕರ ವಾದ, ಶಬ್ದದ ಸ್ಥಿತಿ. ವಾಹನಗಳ ಹಾರ್ನ್‌ಗಳು, ಕಾರ್ಖಾನೆ ಯಂತ್ರಗಳು, ನಿರ್ಮಾಣ ಕಾರ್ಯಗಳು, ಲೌಡ್ ಸ್ಪೀಕರ್ ಗಳು, ರೈಲು-ವಿಮಾನ ಸಂಚಾರ ಮತ್ತು ಹಬ್ಬ-ಕಾರ್ಯಕ್ರಮ ಗಳು ಶಬ್ದಮಾಲಿನ್ಯದ ಪ್ರಮುಖ ಮೂಲಗಳಾಗಿವೆ.

ನಿರಂತರ ಶಬ್ದವು ಮಾನಸಿಕ ಒತ್ತಡ, ನಿದ್ರಾಭಂಗ, ಕಿವಿಯ ಶಕ್ತಿಗುಂದಿಕೆ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ಪಕ್ಷಿಗಳು ಮತ್ತು ಪ್ರಾಣಿಗಳ ನೈಸರ್ಗಿಕ ಜೀವನಚಕ್ರಕ್ಕೂ ಶಬ್ದ ಮಾಲಿನ್ಯ ಅಡ್ಡಿಪಡಿಸುತ್ತದೆ.

ಭಾರತದಲ್ಲಿ ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾನೂನುಬದ್ಧ ಮಾನದಂಡಗಳನ್ನು ನಿಗದಿಪಡಿಸಿ, ಅನುಷ್ಠಾನದ ಉಸ್ತುವಾರಿಯನ್ನು ಕೇಂದ್ರ ಮತ್ತು ರಾಜ್ಯದ ನಿಯಂತ್ರಣ ಮಂಡಳಿಗಳಿಗೆ ನೀಡಿವೆ. ವಾಯುಮಾಲಿನ್ಯಕ್ಕೆ ರಾಷ್ಟ್ರೀಯ ವಾತಾವರಣ ಗಾಳಿ ಗುಣಮಟ್ಟ ಮಾನದಂಡಗಳು ಅನ್ವಯವಾಗುತ್ತವೆ.

ಜಲ ಕಾಯ್ದೆಯಡಿಯಲ್ಲಿ ಕುಡಿಯುವ ನೀರು, ಕೈಗಾರಿಕಾ ವಿಸರ್ಜನೆ ಮತ್ತು ನದಿಗಳ ನೀರಿಗೆ ಮಿತಿಗಳನ್ನು ವಿಧಿಸಲಾಗಿದೆ. ಮಣ್ಣಿನ ಮಾಲಿನ್ಯಕ್ಕೆ ನೇರ ಸಂಖ್ಯಾತ್ಮಕ ಮಿತಿಗಳು ಕಡಿಮೆ ಯಿದ್ದರೂ, ಘನತ್ಯಾಜ್ಯದ ನಿರ್ವಹಣಾ ನಿಯಮಗಳು, ಅಪಾಯಕಾರಿ ತ್ಯಾಜ್ಯ, ಇ-ವೇ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿಯಮಗಳ ಮೂಲಕ ಮಣ್ಣಿನ ರಕ್ಷಣೆಯನ್ನು ಕಡ್ಡಾಯಗೊಳಿಸ ಲಾಗಿದೆ.

ಶಬ್ದ ಮಾಲಿನ್ಯದ ಕಾನೂನಿನ ಅಡಿಯಲ್ಲಿ ವಸತಿ, ವಾಣಿಜ್ಯ, ಕೈಗಾರಿಕಾ ಮತ್ತು ಮೌನ ವಲಯಗಳಿಗೆ ಡೆಸಿಬಲ್ ಮಿತಿಗಳನ್ನು ನಿಗದಿಪಡಿಸಲಾಗಿದೆ. ಉದಾಹರಣೆಗೆ ನಮ್ಮೆಲ್ಲರಿಗೂ ಸುಲಭದಲ್ಲಿ ಅರ್ಥವಾಗುವ ಶಬ್ದ ಮಾಲಿನ್ಯದ ಮಿತಿಗಳನ್ನು ನೋಡೋಣ. ಶಬ್ದದ ಮಾನದಂಡಗಳನ್ನು ‘ಪರಿಸರ (ರಕ್ಷಣಾ) ಕಾಯ್ದೆ, 1986’ ಅಡಿಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದೆ.

ಇದರ ಅನ್ವಯ ವಸತಿ ಪ್ರದೇಶಗಳಲ್ಲಿ ಅನುಮತಿಸಲ್ಪಟ್ಟ ಶಬ್ದ ಮಿತಿಗಳು ಹೀಗಿವೆ: ಮುಂಜಾನೆ 6 ರಿಂದ ರಾತ್ರಿ 10ರವರೆಗೆ 55 ಡೆಸಿಬಲ್ ಮತ್ತು ರಾತ್ರಿ 10ರಿಂದ ಬೆಳಗ್ಗೆ 6 ರವರೆಗೆ 45 ಡೆಸಿಬಲ್. ಶಾಂತ ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಈ ಮಿತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ‌

ಕೆಲವು ಶಬ್ದಗಳ ಅಂದಾಜು ಡೆಸಿಬಲ್ ಮಟ್ಟಗಳು ಹೀಗಿವೆ: ಸಾಮಾನ್ಯ ಸಂಭಾಷಣೆ- ಸುಮಾರು 60 ಡೆಸಿಬಲ್ (ಸಾಮಾನ್ಯವಾಗಿ ಹಾನಿಕಾರಕವಲ್ಲ), ಟ್ರಾಫಿಕ್ ಗದ್ದಲ- 70ರಿಂದ 85 ಡೆಸಿಬಲ್ (ದೀರ್ಘಾವಧಿಯಲ್ಲಿ ಕಿವಿಗೆ ಹಾನಿ), ವಾಹನಗಳ ಹಾರ್ನ್- 90ರಿಂದ 110 ಡೆಸಿಬಲ್ (ಶಬ್ದ ಮಾಲಿನ್ಯದ ಪ್ರಮುಖ ಮೂಲ), ಲೌಡ್ ಸ್ಪೀಕರ್- 100ರಿಂದ 120 ಡೆಸಿಬಲ್ (ಅನುಮತಿತ ಮಿತಿಗಿಂತ ಬಹಳ ಅಧಿಕ), ನಿರ್ಮಾಣ ಕಾರ್ಯಗಳು- 90ರಿಂದ 110 ಡೆಸಿಬಲ್, ಪಟಾಕಿ ಸಿಡಿತ- 140ರಿಂದ 160 ಡೆಸಿಬಲ್ (ಅತ್ಯಂತ ಅಪಾಯಕಾರಿ).‌ ಇದನ್ನು ನೋಡಿದಾಗ, ನಾವೆಷ್ಟು ಶಬ್ದ ಮಾಲಿನ್ಯದಲ್ಲಿ ದಿನದೂಡುತ್ತಿದ್ದೇವೆ ಎಂಬುದು ಅರಿವಾಗಿ ಬೇಸರವಾಗುತ್ತದೆ.

ಭಾರತದಲ್ಲಿ ಪರಿಸರ ಮಾಲಿನ್ಯವನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದ್ದು, ದಂಡ, ಜೈಲು, ಕೈಗಾರಿಕಾ ಘಟಕದ ಚಟುವಟಿಕೆಗಳ ಅಮಾನತು ಮತ್ತು ಪರವಾನಗಿ ರದ್ದು ಮಾಡುವಷ್ಟು ಕಠಿಣ ಕ್ರಮಗಳನ್ನು ಕಾನೂನು ಒದಗಿಸಿದೆ. ಮಾಲಿನ್ಯ ನಿಯಂತ್ರಣ ನಿಯಮಗಳ ಉಲ್ಲಂಘನೆಗೆ ಪ್ರತಿವರ್ಷ ಸಾವಿರಾರು ದಂಡಾತ್ಮಕ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿವೆ.

ನಿಯಂತ್ರಣ ಮಂಡಳಿಗಳ ವರದಿಗಳ ಪ್ರಕಾರ, ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪ್ರತಿ ವರ್ಷ ಲಕ್ಷಾಂತರ ಪರಿಶೀಲನೆಗಳು ನಡೆಯುತ್ತಿದ್ದು, ಅವುಗಳಲ್ಲಿ ಸಾವಿರಾರು ಪ್ರಕರಣಗಳಲ್ಲಿ ನೋಟಿಸ್, ದಂಡ, ಕೈಗಾರಿಕಾ ಘಟಕದ ಮುಚ್ಚುವಿಕೆ, ವಿದ್ಯುತ್/ನೀರು ಸಂಪರ್ಕ ಕಡಿತ ಮತ್ತು ಕೆಲ ಸಂದರ್ಭಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಹೆಚ್ಚಿನ ಕ್ರಮಗಳು ಕೈಗಾರಿಕಾ ಘಟಕಗಳು, ಕಟ್ಟಡ ಕಾಮಗಾರಿಗಳು, ಗಣಿಗಾರಿಕೆ, ಆಸ್ಪತ್ರೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವಿರುದ್ಧವಾಗಿವೆ. ಬೆಂಗಳೂರು ನಗರದ 2023-2025ರ ವರ್ಷಾವಧಿಯಲ್ಲಿ, ಸಾರಿಗೆ ಇಲಾಖೆ ವಾಹನಗಳಿಂದ ಉಂಟಾಗುವ ಮಾಲಿನ್ಯಕ್ಕೆ ಸಂಬಂಧಿಸಿದಂತೆ 1.85 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದು, ಸುಮಾರು 27 ಕೋಟಿ ರುಪಾಯಿ ದಂಡವನ್ನು ವಿಧಿಸಲಾಗಿದೆ.

ಆದರೆ ಪೊಲೀಸ್ ಇಲಾಖೆ ನೀಡಿರುವ ಮಾಹಿತಿಯಂತೆ, ನಿಯಮ ಉಲ್ಲಂಘಿಸಿದವರಲ್ಲಿ ಶೇ.10ರಷ್ಟು ಜನ ಮಾತ್ರ ದಂಡವನ್ನು ಪಾವತಿಸಿದ್ದಾರೆ. ಪರಿಸರ ಕಾನೂನುಗಳ ಉಲ್ಲಂಘ ನೆಗೆ ಸಂಬಂಧಿಸಿದಂತೆ 1700 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ, ಅದರಲ್ಲಿ 39 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಆಗಿದೆ. ಮಾಲಿನ್ಯ ನಿಯಂತ್ರಣ ಕಾನೂನುಗಳ ಜಾರಿಯನ್ನು ಬಲಪಡಿಸುವ ದಿಕ್ಕಿನಲ್ಲಿ ಸರಕಾರ ಕಠಿಣನಿಲುವು ತಾಳುತ್ತಿದೆಯೆಂದು ಮೇಲ್ನೋಟಕ್ಕೆ ಕಂಡರೂ, ಕಾನೂನಿನ ಅನುಷ್ಠಾನ ಹಲ್ಲಿಲ್ಲದ ಹಾವಿನಂತೆ ಭುಸುಗುಡುತ್ತಿದೆಯಷ್ಟೇ.

ಅನುಷ್ಠಾನ ಮತ್ತು ತೀರ್ಪು ನೀಡುವ ಸಂಸ್ಥೆಗಳಲ್ಲಿ ಅಸ್ತಿತ್ವದಲ್ಲಿರುವ ವಿಳಂಬನೀತಿ ಹಾಗೂ ಭ್ರಷ್ಟಾಚಾರದ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲಿಸದಿದ್ದರೆ ಮಾಲಿನ್ಯದ ವಿರುದ್ಧದ ಸಮರದ ಉದ್ದೇಶ ಮರೀಚಿಕೆಯಾಗೇ ಉಳಿಯುತ್ತದೆ.

ಪರಿಸರ ಮಾಲಿನ್ಯವು ಜನರ ಆರೋಗ್ಯ, ಉತ್ಪಾದಕತೆ ಮತ್ತು ಜೀವನಮಟ್ಟವನ್ನು ಗಂಭೀರ ವಾಗಿ ಹಾನಿಗೊಳಿಸುತ್ತಿದ್ದು, ಇದು ದೇಶದ ಆರ್ಥಿಕ ಬೆಳವಣಿಗೆಯ ಮೇಲೆಯೇ ಭಾರಿ ಹೊಡೆತ ನೀಡುವ ಮುನ್ಸೂಚನೆಯನ್ನು ಐಎಂಎಫ್ ತನ್ನ ವರದಿಯಿಂದ ಎಚ್ಚರಿಸಿದೆ. ಸರಕಾರದ ಕಾರ್ಯಕ್ರಮ‌ಗಳಿಗೆ ಪೂರಕವಾಗಿ ಸಂಬಂಧಿತ ಪಾಲುದಾರರು ಜವಾಬ್ದಾರಿ ಯುತರಾಗಿ ಕೈ ಜೋಡಿಸಿದರೆ ಮಾತ್ರ ಶ್ರೇಯಸ್ಸು ಸಾಧ್ಯ. ಅರಣ್ಯರೋದನ ಅಥವಾ ‘ಸ್ವಲ್ಪ ಅಡ್ಜ ಮಾಡ್ಕೊಳಿ’ ವರ್ತನೆಯ ಪಲಾಯನವಾದಕ್ಕೆ ಕಿಂಚಿತ್ತೂ ಆಸ್ಪದ ಸಲ್ಲ.

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)