ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Hegde Column: ಬೆಳ್ಳಿಯ ಬುಗುರಿ: ಲಾಭದ ಕನಸು ಮತ್ತು ವಾಸ್ತವದ ಪರಿಧಿ

ಮೆಸಪೊಟೇಮಿಯಾ, ಈಜಿಪ್ಟ್ ಮತ್ತು ಸಿಂಧು ನಾಗರಿಕತೆಗಳಲ್ಲಿ ಬೆಳ್ಳಿಯನ್ನು ಆಭರಣ, ಧಾರ್ಮಿಕ ವಸ್ತುಗಳು,ಪೂಜಾ ಸಾಮಗ್ರಿಗಳು, ಕಟ್ಟಡಗಳ ಕವಚಗಳು ಮತ್ತು ವಿನಿಮಯ ಮಾಧ್ಯಮವಾಗಿ ಬಳಸ ಲಾಗುತ್ತಿದ್ದುದರ ಪುರಾವೆಗಳಿವೆ. ರೋಮನ್ ಸಾಮ್ರಾಜ್ಯದಲ್ಲಿ ಡೆನೇರಿಯಸ್ ಬೆಳ್ಳಿ ನಾಣ್ಯವು ಆರ್ಥಿಕತೆ ಯ ಆಧಾರವಾಗಿತ್ತು. ಮಧ್ಯಯುಗದಲ್ಲಿ ಯುರೋಪಿನ ವ್ಯಾಪಾರ ವಿಸ್ತಾರಕ್ಕೆ ಬೆಳ್ಳಿ ಪ್ರಮುಖ ಪಾತ್ರವಾಗಿತ್ತು.

ಬೆಳ್ಳಿಯ ಬುಗುರಿ:  ಲಾಭದ ಕನಸು ಮತ್ತು ವಾಸ್ತವದ ಪರಿಧಿ

-

Ashok Nayak
Ashok Nayak Feb 7, 2026 8:56 AM

ಬೆಳ್ಳಿ ಬೆಳಕು

ಪ್ರಕಾಶ ಹೆಗಡೆ

ಮಕ್ಕಳನ್ನು ಒಲುಮೆಯಿಂದ ‘ಚಿನ್ನ’ ಎಂದೂ, ಪ್ರೀತಿಯ ಆಕಳನ್ನು ‘ಬೆಳ್ಳಿ’ ಎಂದೂ ಕರೆಯುವ ಅಭ್ಯಾಸ ನಮ್ಮಲ್ಲಿ ಹಿಂದಿನಿಂದಲೂ ಇದೆ. ನಾವೀಗ ಕಾಣುತ್ತಿರುವ ಬೆಳ್ಳಿಯ ಸ್ಥಿತಿ ಈ ಹಿಂದೆಯೂ ಇದ್ದಿದ್ದರೆ, ಮಕ್ಕಳನ್ನೂ ‘ಬೆಳ್ಳಿ’ ಎಂದೇ ಸಂಬೋಧಿಸುತ್ತಿದ್ದರು ಎಂದೆನಿಸುತ್ತದೆ!

ಬೆಳ್ಳಿ, ಮಾನವ ನಾಗರಿಕತೆಯ ಇತಿಹಾಸದಲ್ಲಿ ಅತ್ಯಂತ ಪ್ರಾಚೀನ ಹಾಗೂ ಮಹತ್ವದ ಲೋಹ ಗಳಲ್ಲಿ ಒಂದಾಗಿದೆ. ಬೆಳ್ಳಿಯನ್ನು ಮೊದಲ ಬಾರಿಗೆ ಕ್ರಿ.ಪೂ. 3000ದ ಕಾಲಘಟ್ಟದ ಸುಮಾರಿಗೆ ಅನಾಟೋಲಿಯಾದಲ್ಲಿ (ಇಂದು ತುರ್ಕಿಯೇ ಭಾಗ) ಗಣಿಗಾರಿಕೆ ಮಾಡಲಾಯಿತು. ‌

ಮೆಸಪೊಟೇಮಿಯಾ, ಈಜಿಪ್ಟ್ ಮತ್ತು ಸಿಂಧು ನಾಗರಿಕತೆಗಳಲ್ಲಿ ಬೆಳ್ಳಿಯನ್ನು ಆಭರಣ, ಧಾರ್ಮಿಕ ವಸ್ತುಗಳು,ಪೂಜಾ ಸಾಮಗ್ರಿಗಳು, ಕಟ್ಟಡಗಳ ಕವಚಗಳು ಮತ್ತು ವಿನಿಮಯ ಮಾಧ್ಯಮವಾಗಿ ಬಳಸಲಾಗುತ್ತಿದ್ದುದರ ಪುರಾವೆಗಳಿವೆ. ರೋಮನ್ ಸಾಮ್ರಾಜ್ಯದಲ್ಲಿ ಡೆನೇರಿಯಸ್ ಬೆಳ್ಳಿ ನಾಣ್ಯವು ಆರ್ಥಿಕತೆಯ ಆಧಾರವಾಗಿತ್ತು. ಮಧ್ಯಯುಗದಲ್ಲಿ ಯುರೋಪಿನ ವ್ಯಾಪಾರ ವಿಸ್ತಾರಕ್ಕೆ ಬೆಳ್ಳಿ ಪ್ರಮುಖ ಪಾತ್ರವಾಗಿತ್ತು.

16ನೇ ಶತಮಾನದಲ್ಲಿ ಲ್ಯಾಟಿನ್ ಅಮೆರಿಕದ ಬೆಳ್ಳಿ ಗಣಿಗಳು ಜಾಗತಿಕ ವ್ಯಾಪಾರವನ್ನು ಆಳವಾಗಿ ಪ್ರಭಾವಿಸಿದವು. ಕಾಲಕ್ರಮೇಣ, ಬೆಳ್ಳಿಯು ಆರ್ಥಿಕ, ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಮಹತ್ವ ಹೊಂದಿದ ಅಮೂಲ್ಯ ಲೋಹವಾಗಿ ಪ್ರಚಲಿತವಾಯಿತು.

ಇದನ್ನೂ ಓದಿ: Prakash Hegde Column: ಮುಕ್ತ ವ್ಯಾಪಾರ ಒಪ್ಪಂದ: ಅವಕಾಶಗಳ ಮಹಾಸೇತು

ಬೆಳ್ಳಿಯು ಸಾಮಾನ್ಯವಾಗಿ ಅಲ್ಪ ಪ್ರಮಾಣದಲ್ಲಿ ಸ್ವತಂತ್ರ ಲೋಹವಾಗಿ ಗಣಿಗಳಲ್ಲಿ ಕಂಡು ಬರುತ್ತದೆ. ಹೆಚ್ಚಿನದಾಗಿ ಇದು ತಾಮ್ರ, ಸೀಸ, ಜಿಂಕ್ ಮತ್ತು ಚಿನ್ನದ ಗಣಿಗಳ ಉಪ-ಉತ್ಪನ್ನವಾಗಿ ಹೊರಬರುತ್ತದೆ. ಗಣಿಗಾರಿಕೆಯಿಂದ ಹೊರತೆಗೆದ ಖನಿಜಗಳ ಧಾತುಗಳನ್ನು ಪುಡಿ ಮಾಡಿ, ರಾಸಾಯನಿಕ ಹಾಗೂ ತಾಪನ ಪ್ರಕ್ರಿಯೆಗಳಾದ ಫ್ಯೂಟೇಷನ್, ಸ್ಮೆಲ್ಟಿಂಗ್ ಮತ್ತು ಎಲೆಕ್ಟ್ರೋಲಿಸಿಸ್ ವಿಧಾನಗಳ ಮೂಲಕ ಬೆಳ್ಳಿಯನ್ನು ಬೇರ್ಪಡಿಸಲಾಗುತ್ತದೆ.

2025ರ ವರ್ಷದ ಜಾಗತಿಕ ಬೆಳ್ಳಿ ಉತ್ಪಾದನೆಯ ಕಡೆ ಗಮನ ಹರಿಸೋಣ. ಈ ಕಾಲಘಟ್ಟದಲ್ಲಿ, 26000 ಟನ್ ಉತ್ಪಾದನೆಯ ಮೂಲಕ ಮುಂಚೂಣಿಯಲ್ಲಿರುವ ಮೆಕ್ಸಿಕೋ ವಿಶ್ವದ ಅತಿದೊಡ್ಡ ಬೆಳ್ಳಿ ಉತ್ಪಾದಕ ರಾಷ್ಟ್ರವಾಗಿದ್ದು, ವರ್ಷಕ್ಕೆ ಸುಮಾರು 6000 ಟನ್ ಬೆಳ್ಳಿಯನ್ನು ಗಣಿಗಾರಿಕೆಯಿಂದ ಹೊರ ತೆಗೆಯುತ್ತದೆ. ಚೀನಾ ಎರಡನೇ ಮತ್ತು ಪೆರು ಮೂರನೇ ಸ್ಥಾನದಲ್ಲಿವೆ.

ಭಾರತದಲ್ಲಿ ಬೆಳ್ಳಿಯ ವಾರ್ಷಿಕ ಉತ್ಪಾದನೆ ಸುಮಾರು 80 ಟನ್‌ನಷ್ಟಿದೆ (ಜಾಗತಿಕ ಉತ್ಪಾದನೆಯ ಶೇ. 3ರಷ್ಟು). ರಾಜಸ್ಥಾನದ ಹಿಂದೂಸ್ತಾನ್ ಜಿಂಕ್ ಲಿಮಿಟೆಡ್ ಬೆಳ್ಳಿ ಉತ್ಪಾದನೆಯ ಮೊದಲಿಗ ನಾಗಿದ್ದು ರಾಜಸ್ಥಾನ ರಾಜ್ಯದ ಸಿಂಹಪಾಲಿನ ಕೊಡುಗೆಯ ಸಹಭಾಗಿಯಾಗಿದೆ.

ಕರ್ನಾಟಕದ ಹಟ್ಟಿ ಚಿನ್ನದ ಗಣಿ ಕೂಡ ಅಲ್ಪ ಪ್ರಮಾಣದಲ್ಲಿ ಬೆಳ್ಳಿಯನ್ನು ಉತ್ಪಾದಿಸುತ್ತಿದ್ದು, ಮುಖ್ಯವಾಗಿ ಚಿನ್ನದ ಗಣಿಗಾರಿಕೆಯ ಉಪ-ಉತ್ಪನ್ನವಾಗಿ ಲಭ್ಯವಾಗುತ್ತಿದೆ.

Screenshot_3 R

ಜಾಗತಿಕ ವಾರ್ಷಿಕ ಉತ್ಪಾದನೆಯ ಶೇ.25ರಷ್ಟು ಬೆಳ್ಳಿಯನ್ನು ಬಳಸುವ ಮೂಲಕ ಭಾರತವು ಜಗತ್ತಿನ ಅತಿದೊಡ್ಡ ಬೆಳ್ಳಿ ಬಳಕೆದಾರ ಎನಿಸಿಕೊಂಡಿದೆ. ವರ್ಷಕ್ಕೆ ಸುಮಾರು 6000 ಟನ್ ಬೆಳ್ಳಿ ಯನ್ನು ಭಾರತವು ಆಮದು ಮಾಡಿಕೊಳ್ಳುತ್ತದೆ. 2025ರಲ್ಲಿ ಸುಮಾರು 8000 ಟನ್ ಬೆಳ್ಳಿಯನ್ನು ಶೇ.90ರಷ್ಟು ಆಭರಣ ಮತ್ತು ಹೂಡಿಕೆಗೆ ಬಳಸಲಾಗಿದೆ.

ಸೌರಶಕ್ತಿ, ಇಲೆಕ್ಟ್ರಾನಿಕ್ಸ್ ಮತ್ತು ವಿದ್ಯುತ್ ವಾಹನಗಳ ಕ್ಷೇತ್ರಗಳ ತ್ವರಿತ ಬೆಳವಣಿಗೆಯಿಂದ ಔದ್ಯಮಿಕ ಬಳಕೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಭಾರತೀಯರು ಚಿನ್ನದಂತೆಯೇ ಭೌತಿಕ ಬೆಳ್ಳಿಯ ಮೇಲೆ ಅತೀವ ವ್ಯಾಮೋಹವನ್ನು ಹೊಂದಿರುವ ಕಾರಣ, ಅಪಾರ ಪ್ರಮಾಣದ ಬೆಳ್ಳಿಯನ್ನು ಹೊಂದಿದ್ದಾರೆ.

ಹಿಂದಿನ ಐದು ವರ್ಷಗಳ ಸುಮಾರು 29000 ಟನ್‌ನಷ್ಟು ಬೆಳ್ಳಿಯ ಆಭರಣಗಳು ಹಾಗೂ 4000 ಟನ್‌ನಷ್ಟು ಬೆಳ್ಳಿಯ ನಾಣ್ಯಗಳ ಒಡೆಯರಾಗಿದ್ದಾರೆ ನಮ್ಮ ಜನರು. ಭಾರತದಲ್ಲಿ ಬೆಳ್ಳಿಯು ಮನೆ ಮನೆಗಳಲ್ಲಿ ಆಭರಣ, ಪೂಜಾ ಸಾಮಗ್ರಿ ಮತ್ತು ಹೂಡಿಕೆ ರೂಪದಲ್ಲಿ ವ್ಯಾಪಕವಾಗಿ ಸಂಗ್ರಹಿತ ವಾಗಿದೆ.

ಪೀಳಿಗೆಗಳಿಂದ ಪೀಳಿಗೆಗೆ ಸಾಗುವ ಪರಂಪರೆಯ ಆಸ್ತಿಯಾಗಿ ಧಾರ್ಮಿಕ ಸಲಕರಣೆಗಳು, ನಾಣ್ಯಗಳು ಮತ್ತು ಆಭರಣಗಳು ಸಾಮಾನ್ಯವಾಗಿವೆ. ಆದರೆ ಭಾರತ ಸರಕಾರವು ನೇರವಾಗಿ ಬೆಳ್ಳಿ ಸಂಗ್ರಹವನ್ನು ಇರಿಸಿಕೊಂಡಿರುವ ಉದಾಹರಣೆಯಿಲ್ಲ. ನಾವೆಲ್ಲ ಗಮನಿಸಿದ್ದಂತೆ ಇತ್ತೀಚಿನ ವರ್ಷಗಳಲ್ಲಿ ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿದೆ.

ಜಾಗತಿಕ ಆರ್ಥಿಕ ಅನಿಶ್ಚಿತತೆ, ಹೆಚ್ಚುತ್ತಿರುವ ಹಣದುಬ್ಬರ, ಅಮೆರಿಕನ್ ಡಾಲರ್ ಮೌಲ್ಯದ ಏರಿಳಿತ ಹಾಗೂ ಬಡ್ಡಿದರಗಳ ಕುರಿತ ಅಸ್ಥಿರತೆಗಳು ಬೆಳ್ಳಿಯ ಬೇಡಿಕೆಯನ್ನು ಹೆಚ್ಚಿಸಿವೆ. ಜತೆಗೆ, ಸೌರಶಕ್ತಿ, ವಿದ್ಯುತ್ ವಾಹನಗಳು, ಇಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಉದ್ಯಮಗಳಲ್ಲಿ ಬೆಳ್ಳಿಯ ಬಳಕೆ ಹೆಚ್ಚುತ್ತಿರುವುದರಿಂದ ಕೈಗಾರಿಕಾ ಬೇಡಿಕೆಯೂ ಬಲವಾಗಿದೆ. ‌

ಚಿನ್ನದ ಬೆಲೆ ಹೆಚ್ಚಾದಾಗ, ಹೂಡಿಕೆದಾರರು ಬೆಳ್ಳಿಯನ್ನು ಪರ್ಯಾಯ ಸುರಕ್ಷಿತ ಆಸ್ತಿಯಾಗಿಸುವ ಪ್ರವೃತ್ತಿಯೂ ಬೆಲೆಯನ್ನು ಮೇಲಕ್ಕೆತ್ತುತ್ತಿದೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಸಾಮಾನ್ಯ ವಾಗಿ ಬೆಳ್ಳಿ ಮತ್ತು ಚಿನ್ನದ ಬೆಲೆಗಳು 50:1ರ ಅನುಪಾತದಲ್ಲಿ ಚಲಿಸುತ್ತವೆ. ಆದರೆ ಇತ್ತೀಚಿನ ವರ್ಷಗಳವರೆಗೆ ಅನುಪಾತದ ಪರಿಯು ಚಿನ್ನದ ಪರವಾಗಿ ವಕ್ರವಾಗಿದ್ದು, ಬೆಳ್ಳಿಗಿಂತ 70 ಪಟ್ಟು ಹೆಚ್ಚಾಗಿದ್ದುದು ಬೆಳ್ಳಿಯ ಬೆಲೆ ಏರಿಕೆಗೆ ಇನ್ನೊಂದು ಕಾರಣ. ಜನವರಿ ತಿಂಗಳೊಂದರ ಬೆಳ್ಳಿಯು ಶೇ. 39ರಷ್ಟು ಅದ್ಭುತ ಪ್ರಗತಿ ಕಂಡಿದೆ.

2026ರ ಜನವರಿ 29ರಂದು ಬೆಳ್ಳಿಯ ಬೆಲೆಯು ಪ್ರತಿ ಗ್ರಾಂ.ಗೆ 425 ರುಪಾಯಿಗೆ ತಲುಪಿತು. ಐದು ವರ್ಷಗಳ ಹಿಂದಿನ ಬೆಲೆಯಾದ ಗ್ರಾಂ.ಗೆ 70 ರುಪಾಯಿಗೆ ಹೋಲಿಸಿದರೆ, ಊಹಿಸಲಸಾದ್ಯವಾದ ಅಸಾಧಾರಣ ಶೇ.600ರಷ್ಟು ಏರಿಕೆಯಿದು.

ಯಾವುದೇ ಅಸಮಂಜಸ ಪ್ರಕ್ರಿಯೆಯು ಕ್ರಮೇಣ ನೈಜಸ್ಥಿತಿಗೆ ಮರಳುವುದು ನೈಸರ್ಗಿಕ/ಆರ್ಥಿಕ ಸಿದ್ಧಾಂತ. ಅದಕ್ಕನುಗುಣವೆಂಬಂತೆ ಹಿಂದಿನ ವಾರದಲ್ಲಿ ಬೆಳ್ಳಿಯ ಬೆಲೆಯು ಶೇ.30ರಷ್ಟು ಕುಸಿದಿರುವ ಆಘಾತದಿಂದ ಹೂಡಿಕೆದಾರು ಇನ್ನೂ ಹೊರಬಂದಿಲ್ಲ. ಜಾಗತಿಕ ಆರ್ಥಿಕ ಅನಿಶ್ಚಿತತೆ ಯು ಸಮತೋಲನ ಕಂಡಾಗ ಹೂಡಿಕೆದಾರರು ಸುರಕ್ಷಿತ ಆಸ್ತಿಗಳಾದ ಅಮೂಲ್ಯ ಲೋಹಗಳಿಂದ ಸರಿದು ಷೇರು ಮತ್ತು ಇತರೆ ಅಪಾಯಕರ ಹೂಡಿಕೆಗಳತ್ತ ವಾಲುತ್ತಾರೆ.

ಇರಾನ್, ಕ್ಯೂಬಾ ಮತ್ತು ಗ್ರೀನ್‌ಲ್ಯಾಂಡ್ ಕುರಿತಾದ ಅಮೆರಿಕದ ಆಕ್ರಮಣಕಾರಿ ನಿಲುವಿನಲ್ಲಿನ ಕ್ರಿಯಾತ್ಮಕ ಬದಲಾವಣೆ, ‘ಯುಎಸ್ ಫೆಡರಲ್ ರಿಸರ್ವ್’ ಅಧ್ಯಕ್ಷ ಜೆರೋಮ್ ಪಾವೆಲ್‌ರನ್ನು ಅವರ ನಿವೃತ್ತಿವರೆಗೆ (ಮೇ 2026) ಮುಂದುವರಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ಮಿತ ವ್ಯಯದ ನಿರ್ಧಾರ, ಹಾಗೂ ಪ್ರತಿದಾಳಿ ಸುಂಕಗಳನ್ನು ಕಡಿತಗೊಳಿಸುವ ಕುರಿತು ಅವರು ತೋರಿದ ಸಡಿಲ ನಿಲುವು, ಮಾರುಕಟ್ಟೆಯಲ್ಲಿದ್ದ ಅನಿಶ್ಚಿತತೆಗಳನ್ನು ಕಡಿಮೆ ಮಾಡಿವೆ.

ಇದಲ್ಲದೆ, ಪ್ರಪಂಚದ ಅನೇಕ ದೇಶಗಳು ಸ್ವಯಂಪ್ರೇರಿತವಾಗಿ ಸಕಾರಾತ್ಮಕ ಮನಸ್ಥಿತಿಯಿಂದ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡು ದೇಶಗಳ ಅನಿಶ್ಚಿತತೆಯನ್ನು ಬಹುಮಟ್ಟಿಗೆ ಕಡಿಮೆ ಮಾಡಿಕೊಳ್ಳುತ್ತಿರುವುದು ಇನ್ನೊಂದು ಪ್ರಮುಖ ಕಾರಣ.

ಬೆಳ್ಳಿಯ ಬೆಲೆಯ ಕುಸಿತಕ್ಕೆ ಹಣಕಾಸಿನ ಹಾಗೂ ವಿನಿಮಯ ಕೇಂದ್ರಗಳ ಕುರಿತಾದ ಇನ್ನೊಂದು ಪ್ರಧಾನ ಕಾರಣವಿದೆ. ಅದನ್ನು ಅರ್ಥಮಾಡಿಕೊಳ್ಳಲು ಹಣಕಾಸು ಮಾರುಕಟ್ಟೆಯ ಪರಿಭಾಷೆ ಗಳನ್ನು ಜೀರ್ಣಿಸಿಕೊಳ್ಳಬೇಕು. ಇತರೆ ಲೋಹದ ಮಾರುಕಟ್ಟೆಯಂತೆ ಬೆಳ್ಳಿಯೂ ಭೌತಿಕ ಬೆಳ್ಳಿ ಮತ್ತು ಡಿಜಿಟಲ್ ಬೆಳ್ಳಿ ಎಂಬೆರಡು ರೂಪದಲ್ಲಿ ಮಾರಾಟಕ್ಕೆ ಲಭ್ಯವಾಗುತ್ತದೆ.

ಡಿಜಿಟಲ್ ಬೆಳ್ಳಿ ಮತ್ತು ಭೌತಿಕ ಬೆಳ್ಳಿ ಹೂಡಿಕೆಯ ರೂಪಗಳಾಗಿದ್ದರೂ ಅವುಗಳ ಸ್ವರೂಪ ವಿಭಿನ್ನ ವಾಗಿದೆ. ಭೌತಿಕ ಬೆಳ್ಳಿ ಎಂದರೆ ನಾಣ್ಯಗಳು, ಬಾರ್ ಗಳು, ಆಭರಣಗಳು ಇತ್ಯಾದಿ ರೂಪದಲ್ಲಿ ಕೈಯಲ್ಲಿ ಹಿಡಿದು ಇಟ್ಟುಕೊಳ್ಳಬಹುದಾದ ನಿಜವಾದ ಬೆಳ್ಳಿ. ಇದು ಪರಂಪರೆಯ ಸ್ಪಷ್ಟ ಮಾಲೀಕತ್ವದ ಆಸ್ತಿಯಾಗಿದ್ದು, ಮೌಲ್ಯ ಸಂಗ್ರಹಕ್ಕೆ ಮತ್ತು ತುರ್ತು ಸಂದರ್ಭದಲ್ಲಿ ಉಪಯುಕ್ತ. ಆದರೆ ಸಂಗ್ರಹಣೆ, ಸುರಕ್ಷತೆ ಮತ್ತು ಶುದ್ಧತೆ ಪರಿಶೀಲನೆಯ ಸವಾಲುಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ.

ಇನ್ನು ಡಿಜಿಟಲ್ ಬೆಳ್ಳಿ ಎಂದರೆ ಆನ್‌ಲೈನ್ ವೇದಿಕೆಗಳ ಮೂಲಕ ಖರೀದಿಸಿ ಡಿಜಿಟಲ್ ಖಾತೆಯಲ್ಲಿ ಇರಿಸುವ ದಾಸ್ತಾನು. ಸಾಮಾನ್ಯವಾಗಿ ಇದು ಭೌತಿಕ ಬೆಳ್ಳಿಯಿಂದ ಬೆಂಬಲಿತವಾಗಿರುತ್ತದೆ. ಇದು ಸುಲಭ ಖರೀದಿ-ಮಾರಾಟ, ಕಡಿಮೆ ಸಂಗ್ರಹಣಾ ಕಷ್ಟ ಮತ್ತು ಹೆಚ್ಚಿನ ದ್ರವ್ಯತೆಯನ್ನು ಒದಗಿಸಿದರೂ, ಪ್ಲಾಟ್ ಫಾರ್ಮ್ ನಂಬಿಕೆ ಮತ್ತು ನಿಯಂತ್ರಣದ ಮೇಲೆ ಅವಲಂಬಿತವಾಗಿರುತ್ತದೆ.

ಕಳೆದ ಒಂದು ವಾರದಲ್ಲಿ ಡಿಜಿಟಲ್ ಬೆಳ್ಳಿಯ ಬೆಲೆ ತೀವ್ರವಾಗಿ ಕುಸಿದಿರುವುದಕ್ಕೆ ಪ್ರಮುಖ ಕಾರಣವೆಂದರೆ ಮೇಲಾಧಾರಿತ ಬೆಂಬಲಿತ ಭೌತಿಕ ಬೆಳ್ಳಿ ಇಲ್ಲದಿರುವುದು. ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಲ್ಲಿ ಮಾರಾಟವಾದ ಬೆಳ್ಳಿಯ ಪ್ರಮಾಣಕ್ಕೆ ತಕ್ಕಷ್ಟು ನಿಜವಾದ ಬೆಳ್ಳಿಯು ಸಂಗ್ರಹದಲ್ಲಿ ಇಲ್ಲದಿರುವುದರಿಂದ ಪೂರೈಕೆಯ ಅಸಮತೋಲನ ಉಂಟಾಗಿದೆ. ಇದರ ಪರಿಣಾಮವಾಗಿ ಹೂಡಿಕೆದಾರರು ಲಾಭ ಕಾಯ್ದುಕೊಳ್ಳಲು ಅಥವಾ ಅಪಾಯ ತಪ್ಪಿಸಲು ಮಾರಾಟಕ್ಕೆ ಮುಂದಾ ಗಿರುವುದರಿಂದ ಡಿಜಿಟಲ್ ಬೆಳ್ಳಿಯ ಬೆಲೆಯಲ್ಲಿ ಏಕಾಏಕಿ ಕುಸಿತ ಕಂಡುಬಂದಿದೆ.

ಅತಿಯಾದ ಊಹಾಪೋಹ ಮತ್ತು ಸಟ್ಟಾಬಜಾರಿನ ಚಟುವಟಿಕೆಗಳನ್ನು ನಿಯಂತ್ರಿಸುವ ಕ್ರಮ ಗಳನ್ನು ಅನೇಕ ದೇಶಗಳಲ್ಲಿ ತ್ವರಿತಗತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಚೀನಾ ದೇಶವು ಶೆನ್ ಜೆನ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಬೆಳ್ಳಿ ಫ್ಯೂಚರ್ಸ್ ಫಂಡ್‌ಗಳ ವಹಿವಾಟನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿದೆ.

ಇದೇ ರೀತಿ ಇಂಗ್ಲೆಂಡ್ ಮತ್ತು ಅಮೆರಿಕದ ಮಾರುಕಟ್ಟೆಗಳಲ್ಲೂ ಡಿಜಿಟಲ್ ಬೆಳ್ಳಿ ವಹಿವಾಟಿನ ಬಗ್ಗೆ ನಿಯಂತ್ರಕ ಸಂಸ್ಥೆಗಳು ಎಚ್ಚರಿಕೆಯ ನಿಲುವು ತಾಳುತ್ತಿವೆ. ಜಾಗತಿಕ ಮಟ್ಟದ ಭಾರಿ ಗ್ರಾಹಕ ಎನಿಸಿ ರುವ ಭಾರತದಲ್ಲಿ ಪರಿಸ್ಥಿತಿ ಇನ್ನೂ ಸಂಕೀರ್ಣವಾಗಿದ್ದು, ಡಿಜಿಟಲ್ ಬೆಳ್ಳಿಗೆ ಬೇಡಿಕೆ ವೇಗವಾಗಿ ಹೆಚ್ಚಿದರೂ ಪೂರೈಕೆ ಇಲ್ಲದಿರುವುದರಿಂದ ಬೇಡಿಕೆ-ಪೂರೈಕೆಯ ನಡುವೆ ಭಯಂಕರ ಕಂದಕ ಕಂಡುಬರುತ್ತಿದೆ. ಈಗ ವ್ಯಾವಹಾರಿಕವಾಗಿ ಯೋಚಿಸಿದರೆ ಭೌತಿಕ ಬೆಳ್ಳಿಯನ್ನು ಹೊಂದಿರುವುದೇ ಜಾಣ್ಮೆಯ ನಿರ್ಧಾರ ಎನಿಸುತ್ತದೆ.

ಒಟ್ಟಿನಲ್ಲಿ, ಬೆಳ್ಳಿಯ ಹೂಡಿಕೆ ಆಕರ್ಷಕವಾಗಿದ್ದರೂ, ಅದು ಅಪಾಯದ ಅಸ್ಥಿರತೆಯ ಪಂಜರ ವೆಂಬುದನ್ನು ಹೂಡಿಕೆದಾರರು ಅರಿತು ಎಚ್ಚರವಹಿಸಬೇಕು. ಭೌತಿಕ ಮತ್ತು ಡಿಜಿಟಲ್ ಬೆಳ್ಳಿಯ ನಡುವಿನ ಬೆಲೆ ಅಂತರ, ಪೂರೈಕೆ-ಬೇಡಿಕೆಯ ಅಸಮತೋಲನ, ಜಾಗತಿಕ ನಿಯಂತ್ರಣ ಕ್ರಮಗಳು ಮತ್ತು ಅತಿಯಾದ ಸಟ್ಟಾಬಜಾರಿನ ಪ್ರವೃತ್ತಿಗಳು ಬೆಳ್ಳಿಯ ಬೆಲೆಯನ್ನು ಏಕಾಏಕಿ ಏರಿಳಿತಗೊಳಿಸ ಬಹುದು.

ಆದ್ದರಿಂದ, ಕೇವಲ ತಾತ್ಕಾಲಿಕ ಲಾಭದ ನಿರೀಕ್ಷೆಯ ಅಸೆಯನ್ನು ಹತೋಟಿಯಲ್ಲಿಡುವುದನ್ನೇ ಹೂಡಿಕೆಯ ಉದ್ದೇಶವಾಗಿಸಿಕೊಳ್ಳಬೇಕು, ಬೆಳ್ಳಿಯನ್ನು ಸಂಪತ್ತಿನ ವೈವಿಧ್ಯೀಕರಣದ ಒಂದು ಭಾಗವಾಗಿ ಮಾತ್ರ ನೋಡಬೇಕು. ಅದರಲ್ಲಿ ಸಂಪೂರ್ಣ ಹೂಡಿಕೆಯನ್ನು ಕೇಂದ್ರೀಕರಿಸುವುದು ವಿವೇಕವಲ್ಲ. ಮಾಹಿತಿ, ಜಾಗರೂಕತೆ ಮತ್ತು ಸಮತೋಲನವೇ ಬೆಳ್ಳಿಯ ಹೂಡಿಕೆಯಲ್ಲಿನ ಸುರಕ್ಷಿತ ಮಾರ್ಗವಾಗಿದೆ.

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಪ್ರಚಲಿತ

ವಿದ್ಯಮಾನಗಳ ವಿಶ್ಲೇಷಕರು)