ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ranjith H Ashwath Column: ವಿಶ್ವವಿದ್ಯಾಲಯಗಳ ಆರಂಭಕ್ಕಿಂತ ಅಭಿವೃದ್ಧಿ ಮುಖ್ಯ

ಆದರೆ ಆರಂಭಗೊಂಡ ಬಳಿಕ ಆ ವಿಶ್ವವಿದ್ಯಾಲಯಗಳನ್ನು ಸರಕಾರ ನಡೆಸಿಕೊಂಡ ರೀತಿ ಗಮನಿಸಿದರೆ, ಅಂಥ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳಿಗೆ ಹಾಯವಾಗುವುದಕ್ಕಿಂತ ಸಮಸ್ಯೆಯೇ ಆಗುತ್ತದೆ ಎನ್ನುವುದು ಸ್ಪಷ್ಟ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವ ಪರಿ ಕಲ್ಪನೆಯಲ್ಲಿ ನೂತನ ವಿವಿಗಳನ್ನು ಆರಂಭಿಸಿದ ಬಿಜೆಪಿ ಸರಕಾರ, ಅವುಗಳಿಗೆ ನೀಡಿದ ಅನುದಾನ ಮಾತ್ರ ಕೇವಲ ಎರಡು ಕೋಟಿ ರು.ಆರಂಭಿಕ ಹಂತದಲ್ಲಿ ಅನುದಾನ ನೀಡಿದ ಬಳಿಕ, ಮುಂದಿನ ವರ್ಷದಿಂದ ‘ವಿಶ್ವವಿದ್ಯಾಲಯ ಆಂತರಿಕವಾಗಿ ಅನುದಾನವನ್ನು ಹೊಂದಿಸಿ ಕೊಳ್ಳಬೇಕು’ ಎಂದು ಹೇಳಿ, ಕೈತೊಳೆದುಕೊಂಡಿದೆ

ವಿಶ್ವವಿದ್ಯಾಲಯಗಳ ಆರಂಭಕ್ಕಿಂತ ಅಭಿವೃದ್ಧಿ ಮುಖ್ಯ

ಮುಖ್ಯ ವರದಿಗಾರ ಹಾಗೂ ಅಂಕಣಕಾರ ರಂಜಿತ್‌ ಎಚ್.ಅಶ್ವತ್ಥ

Ranjith H Ashwath Ranjith H Ashwath Feb 18, 2025 7:47 AM

ರಾಜ್ಯವೊಂದರ ಅಭಿವೃದ್ಧಿಯು ಅಲ್ಲಿನ ಉನ್ನತ ಶಿಕ್ಷಣ ವ್ಯವಸ್ಥೆಯ ಮೇಲೆ ಅವಲಂಬಿತ ವಾಗಿರುತ್ತದೆ. ಹೆಚ್ಚೆಚ್ಚು ಯುವಕರು ಉನ್ನತ ವ್ಯಾಸಂಗದತ್ತ ಮುಖ ಮಾಡಿದಷ್ಟೂ ರಾಜ್ಯದ ಆರ್ಥಿಕ-ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿ ಬದಲಾಗುತ್ತದೆ. ಹೆಚ್ಚು ಯುವಕ ರನ್ನು ಉನ್ನತ ಶಿಕ್ಷಣದತ್ತ ಸೆಳೆಯಬೇಕು ಎನ್ನುವ ಕಾರಣಕ್ಕಾಗಿಯೇ, ಹೆಚ್ಚುವರಿ ವಿಶ್ವವಿದ್ಯಾಲಯಗಳನ್ನು ಆರಂಭಿಸಬೇಕು ಎನ್ನುವ ‘ನಿಯಮ’ವನ್ನು ಹಿಂದಿನ ಬಿಜೆಪಿ ಸರಕಾರ ಮಾಡಿತ್ತು. ಆದರೀಗ ಆರಂಭಗೊಂಡಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಿಸು ವುದಕ್ಕೆ ಕಾಂಗ್ರೆಸ್ ಸರಕಾರ ಕೈಹಾಕಿರುವುದು ವಿವಾದಕ್ಕೆ ಕಾರಣವಾಗಿದೆ.

ಮೇಲ್ನೋಟಕ್ಕೆ ವಿವಿಗಳ ಬಂದ್ ಶಿಕ್ಷಣ ಕ್ಷೇತ್ರಕ್ಕೆ ನಷ್ಟವೆಂದೇ ಹೇಳಲಾದರೂ, ಸೂಕ್ಷ್ಮವಾಗಿ ಗಮನಿಸಿದರೆ ಈ ವಿಶ್ವವಿದ್ಯಾಲಯಗಳನ್ನು ಮುಚ್ಚುವುದೇ ಲೇಸು! ಹೌದು, ಶಿಕ್ಷಣದ ವಿಕೇಂದ್ರೀಕರಣದ ಸಲುವಾಗಿ ಬಿಜೆಪಿ ಸರಕಾರ 10 ವಿಶ್ವವಿದ್ಯಾಲಯಗಳನ್ನು ಆರಂಭಿ ಸಿತ್ತು.

ಇದನ್ನೂ ಓದಿ: Ranjith H Ashwath Column: ಪ್ರತಿಷ್ಠೆಯಿಂದಾಗಿ ಬಡವಾಗುತ್ತಿರುವ ಪಕ್ಷ ಸಂಘಟನೆ

ಆದರೆ ಆರಂಭಗೊಂಡ ಬಳಿಕ ಆ ವಿಶ್ವವಿದ್ಯಾಲಯಗಳನ್ನು ಸರಕಾರ ನಡೆಸಿಕೊಂಡ ರೀತಿ ಗಮನಿಸಿದರೆ, ಅಂಥ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳಿಗೆ ಹಾಯವಾಗುವುದಕ್ಕಿಂತ ಸಮಸ್ಯೆಯೇ ಆಗುತ್ತದೆ ಎನ್ನುವುದು ಸ್ಪಷ್ಟ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಎನ್ನುವ ಪರಿಕಲ್ಪನೆಯಲ್ಲಿ ನೂತನ ವಿವಿಗಳನ್ನು ಆರಂಭಿಸಿದ ಬಿಜೆಪಿ ಸರಕಾರ, ಅವುಗಳಿಗೆ ನೀಡಿದ ಅನುದಾನ ಮಾತ್ರ ಕೇವಲ ಎರಡು ಕೋಟಿ ರು.ಆರಂಭಿಕ ಹಂತದಲ್ಲಿ ಅನುದಾನ ನೀಡಿದ ಬಳಿಕ, ಮುಂದಿನ ವರ್ಷದಿಂದ ‘ವಿಶ್ವವಿದ್ಯಾಲಯ ಆಂತರಿಕವಾಗಿ ಅನುದಾನವನ್ನು ಹೊಂದಿಸಿಕೊಳ್ಳಬೇಕು’ ಎಂದು ಹೇಳಿ, ಕೈತೊಳೆದುಕೊಂಡಿದೆ.

ಈ 10 ವಿಶ್ವವಿದ್ಯಾಲಯಗಳಲ್ಲಿ ಹೆಚ್ಚಿನವು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆಗದೇ, ಇತರೆ ವಿವಿಗಳೊಂದಿಗೆ ವಿಲೀನವಾಗಲೂ ಆಗದೇ ಅತಂತ್ರ ಸ್ಥಿತಿ ತಲುಪಿದ್ದವು. ಆದ್ದರಿಂದ ಸಚಿವ ಸಂಪುಟ ಉಪಸಮಿತಿಯು ಈ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಶಿಫಾರಸು ಮಾಡಿದೆ. ಈ ಶಿಫಾರಸಿಗೆ ಬಿಜೆಪಿ ಸೇರಿದಂತೆ ಅನೇಕರು ವಿರೋಧಿಸುತ್ತಿದ್ದರೂ, ವಾಸ್ತವದಲ್ಲಿ ಈ ವಿವಿಗಳನ್ನು ಮುಚ್ಚಿ, ಇದೇ ಅನುದಾನವನ್ನು ಸೂಕ್ತ ರೀತಿಯಲ್ಲಿ ಹಂಚಿಕೆ ಮಾಡಿದರೆ ಸರಕಾರಕ್ಕೆ ಆರ್ಥಿಕವಾಗಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಲಾಭ ವಾಗುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ.

ನೂತನವಾಗಿ ಆರಂಭಗೊಂಡಿದ್ದ 10 ವಿಶ್ವವಿದ್ಯಾಲಯಗಳಲ್ಲಿ ಬೀದರ್ ವಿವಿಯ ವ್ಯಾಪ್ತಿ ಯಲ್ಲಿ 150ಕ್ಕೂ ಹೆಚ್ಚು ಕಾಲೇಜುಗಳಿವೆ. ಇನ್ನುಳಿದ ಬಹುತೇಕ ವಿವಿಗಳಲ್ಲಿ ಸರಾಸರಿ 70ರಿಂದ 80 ಕಾಲೇಜುಗಳಿದ್ದು, ಈ ಪೈಕಿ ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸು ತ್ತಿರುವುದು 40 ರಿಂದ 50 ಮಾತ್ರ. ಹೀಗಿರುವಾಗ, ವಿಶ್ವವಿದ್ಯಾಲಯಗಳು ಆರ್ಥಿಕವಾಗಿ ಸದೃಢವಾಗಿ ಬೆಳೆಯಲು ಹೇಗೆ ಸಾಧ್ಯ? ಹೆಚ್ಚು ಕಾಲೇಜುಗಳು ಒಂದೇ ವಿವಿಯಲ್ಲಿದ್ದಾಗ ನೂತನ ವಿವಿ ಆರಂಭಿಸುವುದು ಸೂಕ್ತ.

ಆದರೆ ಹೊಸದಾಗಿ ಆರಂಭಗೊಂಡ ವಿವಿಗಳ ಮೂಲ ವಿಶ್ವವಿದ್ಯಾಲಯಗಳಲ್ಲಿಯೇ ಎಲ್ಲ ಕಾಲೇಜುಗಳನ್ನು ನಿಭಾಯಿಸಲು ಶಕ್ತಿಯಿರುವಾಗ, ವಿಭಜನೆಯ ಅಗತ್ಯವಿರಲಿಲ್ಲ. ಸೂಕ್ತ ಅನುದಾನ ನೀಡದೇ, ಜಿಲ್ಲೆಗೊಂದು ವಿವಿಯನ್ನು ಆರಂಭಿಸುವುದರಿಂದ ಶಿಕ್ಷಣ ಕ್ರಾಂತಿಯ ಲಾಭಕ್ಕಿಂತ ಹೆಚ್ಚಾಗಿ ಕುಲಪತಿ, ಕುಲಸಚಿವ, ಸಿಂಡಿಕೇಟ್ ಸದಸ್ಯರ ‘ನೇಮಕ’ದ ಲಾಭ ವಷ್ಟೇ ಆಗುತ್ತದೆ.

ಹಾಗೆ ನೋಡಿದರೆ, ಕರ್ನಾಟಕದಲ್ಲಿ ಸರಕಾರಿ ವಿಶ್ವವಿದ್ಯಾಲಯಗಳಿಗೇನು ಕೊರತೆಯಿಲ್ಲ. ರಾಜ್ಯದಲ್ಲಿನ ಒಟ್ಟು ಸರಕಾರಿ ವಿವಿಗಳ ಸಂಖ್ಯೆ 41 ಇದ್ದರೂ ಅದರಲ್ಲಿ ಐದರಿಂದ ಆರು ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನೆಗೆ ಸಂಬಂಧಿಸಿದವಾಗಿವೆ. ಇನ್ನು ಕಾನೂನು ಅಧ್ಯಯನಕ್ಕೆ ಸಂಬಂಧಿಸಿದ ಎರಡು ವಿಶ್ವವಿದ್ಯಾಲಯಗಳಿದ್ದು, ಎಂಜಿನಿಯರಿಂಗ್‌ಗೆ ಒಂದು, ವೈದ್ಯಕೀಯಕ್ಕೆ ತಲಾ ಒಂದೊಂದು ವಿಶ್ವವಿದ್ಯಾಲಯಗಳಿವೆ. ಇನ್ನುಳಿದಂತೆ ಈ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಸುಪರ್ದಿಯಲ್ಲಿದ್ದ ಸಂಸ್ಕೃತಿ, ಜಾನಪದ, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಂಗೀತಕ್ಕೆಂದು ಪ್ರತ್ಯೇಕ ಒಂದೊಂದು ವಿಶ್ವ ವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಈ ಎಲ್ಲದರ ಹೊರತಾಗಿ ರೆಗ್ಯುಲರ್ ವಿಶ್ವ ವಿದ್ಯಾಲಯಗಳ ಸಂಖ್ಯೆ 27-28ರಷ್ಟಿದೆ.

ಇನ್ನುಳಿದಂತೆ 27 ಖಾಸಗಿ ವಿಶ್ವವಿದ್ಯಾಲಯ, ರಾಜ್ಯ ಸರಕಾರದ ಅಧೀನದಲ್ಲಿರುವ ಡೀಮ್ಡ್ ವಿಶ್ವವಿದ್ಯಾಲಯಗಳ ಸಂಖ್ಯೆ 11 ಇದೆ. ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳನ್ನು ಹೊರತುಪಡಿಸಿ, ಕರ್ನಾಟಕದಲ್ಲಿರುವ ರೆಗ್ಯುಲರ್ ಹಾಗೂ ವಿಶೇಷ ವಿಶ್ವವಿದ್ಯಾಲಯ ಗಳನ್ನು ಗಮನಿಸಿದರೆ, ಬಹುತೇಕ ವಿವಿಗಳಲ್ಲಿ ಮೂಲಸೌಕರ್ಯದ, ಸಿಬ್ಬಂದಿಯ ಕೊರತೆ ಎದ್ದುಕಾಣುತ್ತದೆ. ಅದರಲ್ಲಿಯೂ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿ ವರ್ಷಕ್ಕೆ ಆರೇಳು ತಿಂಗಳವರೆಗೆ ಸಿಬ್ಬಂದಿ ವೇತನವಾಗಿಲ್ಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಕ್ಕಿಲ್ಲ, ಕಾಮಗಾರಿಗೆ ಅನುದಾನವಿಲ್ಲ ಎನ್ನುವ ಕಾರಣಕ್ಕಾಗಿಯೇ ‘ಸುದ್ದಿ’ ಯಲ್ಲಿರುತ್ತದೆ.

ಇದು ಕೇವಲ ಕನ್ನಡ ವಿಶ್ವವಿದ್ಯಾಲಯದ ಸಮಸ್ಯೆಯಲ್ಲ, ಬಹುಪಾಲು ವಿಶ್ವವಿದ್ಯಾ ಲಯಗಳಲ್ಲಿ ಮೂಲಸೌಕರ್ಯ, ವಿದ್ಯಾರ್ಥಿಗಳ ಸಂಶೋಧನೆಗೆ ಅನುದಾನ ಕೊರತೆ ಕಾಡುತ್ತಿದೆ. ಆದರೆ ಯಾವುದೇ ಸರಕಾರಗಳು ಈ ವಿವಿಗಳ ಬಲವರ್ಧನೆಗೆ ಕ್ರಮ ವಹಿಸುವು ದಕ್ಕಿಂತ ಹೆಚ್ಚಾಗಿ, ಹೊಸ ವಿಶ್ವವಿದ್ಯಾಲಯಗಳನ್ನು ಆರಂಭಿಸುವುದಕ್ಕೆ ಉತ್ಸಾಹ ತೋರು ತ್ತಿರುವುದು ದುರಂತ.

ಅನುದಾನ ಕೊರತೆಗೆ ಮತ್ತೊಂದು ಉದಾಹರಣೆ ನೀಡಬೇಕೆಂದರೆ, ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಶಿಲ್ಪಕಲಾ ವಿಶ್ವವಿದ್ಯಾಲಯವನ್ನು ಬಾದಾಮಿಯಲ್ಲಿ ಮಾಡ ಬೇಕೆಂಬ ನಿಟ್ಟಿನಲ್ಲಿ ಚರ್ಚೆ ನಡೆದಿತ್ತು. ಆದರೆ ಅದರ ಆಡಳಿತ ಕಚೇರಿಯನ್ನು ಬೆಂಗಳೂರಿ ನಲ್ಲಿ ಮಾಡಲಾಗಿತ್ತು.

ಆ ಸಮಯದಲ್ಲಿ ಕಚೇರಿ ನಿರ್ವಹಣೆ ಅನುದಾನವಿಲ್ಲದೇ ಸಿಬ್ಬಂದಿಗಳು ಪರದಾಡಿದ ರೀತಿ ಹೇಳತೀರದು. ಒಂದು ಹಂತಕ್ಕೆ ವಿದ್ಯುತ್ ಹಾಗೂ ಫೋನ್ ಬಿಲ್ ಪಾವತಿಸುವುದಕ್ಕೂ ಅನುದಾನ ಸಾಲುತ್ತಿರಲಿಲ್ಲ. ಈ ರೀತಿಯ ಅನುದಾನ ಮೀಸಲಿರಿಸದೇ ವಿಶ್ವವಿದ್ಯಾಲಯ ಗಳನ್ನು ಆರಂಭಿಸುವುದಕ್ಕಿಂತ ಸುಮ್ಮನಿರುವುದು ಲೇಸಲ್ಲವೇ? ರೆಗ್ಯುಲರ್ ವಿಶ್ವವಿದ್ಯಾ ಲಯಗಳಲ್ಲಿ ಈ ರೀತಿಯ ಸಮಸ್ಯೆಗಳಿದ್ದರೆ, ವಿಶೇಷ ವಿಶ್ವವಿದ್ಯಾಲಯ (ಗ್ರಾಮೀಣಾ ಭಿವೃದ್ಧಿ, ಜಾನಪದ, ಸಂಗೀತ, ಕನ್ನಡ, ಸಂಸ್ಕೃತ ವಿವಿ)ಗಳ ಸಮಸ್ಯೆ ಇನ್ನೊಂದು ತೆರನಾ ದದ್ದಾಗಿದೆ. ರಾಜ್ಯ ಸರಕಾರ ಕೆಲವೊಂದಷ್ಟು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆಗೆ ಒತ್ತು ನೀಡಬೇಕು ಎನ್ನುವ ಕಾರಣಕ್ಕೆ ಒಂದಿಷ್ಟು ವಿಶೇಷ ವಿಶ್ವವಿದ್ಯಾಲಯಗಳನ್ನು ಆರಂಭಿಸಿದೆ.

ಹಾಗೆ ನೋಡಿದರೆ, ಈ ಎಲ್ಲ ವಿಶ್ವವಿದ್ಯಾಲಯಗಳು ಆರಂಭದಲ್ಲಿ ಹಂಪಿಯಲ್ಲಿರುವ ಕನ್ನಡ ವಿಶ್ವವಿದ್ಯಾಲಯದಲ್ಲಿಯೇ ಪ್ರತ್ಯೇಕ ವಿಭಾಗಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಆಯಾ ಸರಕಾರಗಳು, ಆಯಾ ವಿಭಾಗದ ಮುಖ್ಯಸ್ಥರ ‘ಹಿತಾಸಕ್ತಿ’ಯಿಂದಾಗಿ ಈ ಎಲ್ಲ ವಿಭಾಗಗಳಿಗೂ ಪ್ರತ್ಯೇಕ ವಿಶ್ವವಿದ್ಯಾಲಯದ ಸ್ಥಾನಮಾನ ಸಿಕ್ಕಿದೆ. ಆದರೆ ಈ ವಿಶ್ವವಿದ್ಯಾಲಯದ ಸಂಶೋಧನೆಗಳೇನು? ಇಲ್ಲಿ ಅಧ್ಯಯನ ನಡೆಸಿದ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಉದ್ಯೋಗದ ಸಂಖ್ಯೆಯೆಷ್ಟು? ಎನ್ನುವ ಬಗ್ಗೆ ಸ್ಪಷ್ಟನೆಯಿಲ್ಲ. ಇನ್ನು ಕೆಲ ವೊಂದಷ್ಟು ವಿಶ್ವವಿದ್ಯಾಲಯಗಳು ಆರಂಭಿಸಿರುವ ಕೋರ್ಸ್‌ಗಳು ‘ಮಾನ್ಯ’ವಾಗುವುದೇ ಎನ್ನುವ ಪ್ರಶ್ನೆಗೆ ಬಹುತೇಕರ ಬಳಿ ಉತ್ತರವಿಲ್ಲವಾಗಿದೆ.

ಉದಾಹರಣೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಿಂದ

ಎಂಬಿಎ ಕೋರ್ಸ್ ಅನ್ನು ಆರಂಭಿಸಲಾಗಿದೆ. ಈ ಕೋರ್ಸ್ಗೆ ರೆಗ್ಯುಲರ್ ವಿಶ್ವವಿದ್ಯಾಲಯದ ಎಂಬಿಎ ರೀತಿಯಲ್ಲಿಯೇ ಮಾನ್ಯತೆ ನೀಡಲು ಅವಕಾಶವಿದೆಯೇ ಎನ್ನುವ ಪ್ರಶ್ನೆ ಅನೇಕ ರಲ್ಲಿದೆ. ಆದ್ದರಿಂದ ವಿಶೇಷ ವಿಶ್ವವಿದ್ಯಾಲಯದಿಂದ ಹೊರಬರುವ ವಿದ್ಯಾರ್ಥಿಗಳಿಗೆ ‘ಉದ್ಯೋಗಾವಕಾಶ’ ಯಾವ ಪ್ರಮಾಣದಲ್ಲಿದೆ ಎನ್ನುವ ಬಗ್ಗೆಯೂ ಪುನರ್ ಪರಿಶೀಲನೆ ನಡೆಸುವ ಅಗತ್ಯವಿದೆ.

ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ‘ಜಿಲ್ಲೆಗೊಂದು ವಿಶ್ವವಿದ್ಯಾಲಯ’ ಎನ್ನುವ ಪರಿಕಲ್ಪನೆಯಲ್ಲಿ 10 ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿತ್ತು. ಈ ಮೂಲಕ ರಾಜ್ಯ ದಲ್ಲಿ ಒಟ್ಟಾರೆ 41 ವಿಶ್ವವಿದ್ಯಾಲಯಗಳನ್ನು ಆರಂಭಿಸಿದ್ದ ಕೀರ್ತಿ ಬಿಜೆಪಿ ಸರಕಾರಕ್ಕೆ ಬಂತು. ಕೊಪ್ಪಳ, ಕೊಡಗು, ಮಂಡ್ಯ, ಬೀದರ್, ಹಾಸನ, ಹಾವೇರಿ, ಬಾಗಲಕೋಟೆ, ಮಂಡ್ಯ ಸೇರಿದಂತೆ 10 ವಿಶ್ವವಿದ್ಯಾಲಯಗಳಿಗೆ ಅಂದಿನ ಬಿಜೆಪಿ ಸರಕಾರ ನೀಡಿದ ಅನುದಾನ ತಲಾ ಎರಡು ಕೋಟಿ ರು. ಹೊಸ ವಿಶ್ವವಿದ್ಯಾಲಯಗಳ ಆರಂಭಕ್ಕೆ ಈಗಿರುವ ಸಂಶೋಧನಾ ಕೇಂದ್ರಗಳನ್ನೇ ವಿಶ್ವವಿದ್ಯಾಲಯಗಳನ್ನಾಗಿ ಮಾರ್ಪಡಿಸಿ, ಆ ಭೂಮಿಯನ್ನು ನೀಡಿ ವಿವಿ ಆರಂಭಿಸಲಾಯಿತು. ಆದರೆ ಯಾವುದೇ ಒಂದು ಸುಸಜ್ಜಿತ ವಿಶ್ವವಿದ್ಯಾಲಯ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲು ಕನಿಷ್ಠ ನೂರು ಕೋಟಿ ರು. ಹಣವನ್ನು ಆರಂಭದಲ್ಲಿ ನೀಡಬೇಕಾಗುತ್ತದೆ.

ಆಗ ಮಾತ್ರ ಪೂರ್ಣಪ್ರಮಾಣದಲ್ಲಿ ವಿಶ್ವವಿದ್ಯಾಲಯದ ಕಾರ್ಯಾಚರಣೆ ಸಾಧ್ಯ. ಆದರೆ ಒಂದೊಂದು ವಿವಿಗೆ ಎರಡೆರಡು ಕೋಟಿ ರು. ಅನುದಾನ ನೀಡಿ, ಅದರಲ್ಲಿ ಮಾದರಿ ವಿಶ್ವ ವಿದ್ಯಾಲಯ ರೂಪಿಸಿ ಎಂದರೆ ಹೇಗೆ ಸಾಧ್ಯ? ಎಲ್ಲ ವಿಶ್ವವಿದ್ಯಾಲಯಗಳ ಮೇಲೆ ಮಂತ್ರಾ ಕ್ಷತೆಯ ರೀತಿಯಲ್ಲಿ ಅನುದಾನ ನೀಡುವುದಕ್ಕಿಂತ ಇರುವ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರಕಾರಗಳು ಯೋಜನೆ ರೂಪಿಸಬೇಕಿದೆ.

ರಾಜ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎನ್ನುವ ಕಾರಣಕ್ಕೆ ವಿಶ್ವ ವಿದ್ಯಾ ಲಯಗಳ ಸಂಖ್ಯೆಯನ್ನು ಏರಿಸುವ ಮೊದಲು ಪದವಿ, ಸ್ನಾತಕೋತ್ತರ ಪದವಿ ಕಾಲೇಜು ಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವ, ಈಗಿರುವ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ ಕೊಡುವ ನಿಟ್ಟಿನಲ್ಲಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಸಿಗುವ ರೀತಿಯ ಸೌಲಭ್ಯಗಳನ್ನು ನಮ್ಮ ಸರಕಾರಿ ವಿಶ್ವವಿದ್ಯಾಲಯಗಳಲ್ಲಿ ಕೊಡುವ ನಿಟ್ಟಿನಲ್ಲಿ ಸರಕಾರಗಳು ಆಲೋಚಿಸಬೇಕು.

ಇದನ್ನು ಬಿಟ್ಟು ‘ನನ್ನ ಅವಧಿಯಲ್ಲಿ ಇಷ್ಟು ವಿಶ್ವವಿದ್ಯಾಲಯ ಆರಂಭಿಸಿದೆ’ ಎಂದು ಬೆನ್ನು ತಟ್ಟಿಕೊಳ್ಳುವ ಕಾರಣಕ್ಕೆ ವಿವಿಗಳನ್ನು ಆರಂಭಿಸುವ ಕಾರ್ಯಕ್ಕೆ ಯಾವ ಸರಕಾರ ಗಳೂ ಮುಂದಾಗಬಾರದು. ಕಾಂಗ್ರೆಸ್ ಸರಕಾರ ಒಂಬತ್ತು ವಿವಿಗಳನ್ನು ಮುಚ್ಚಲು ಮುಂದಾಗಿರುವುದನ್ನು ಬಿಜೆಪಿಯವರು ವಿರೋಧಿಸಲು ಬಹುದೊಡ್ಡ ಕಾರಣವಿಲ್ಲ.

ಹಾಗೆ ನೋಡಿದರೆ, ಶಿಕ್ಷಣ ಕ್ಷೇತ್ರದಲ್ಲಿರುವ ಅನೇಕ ಬಿಜೆಪಿಗರೇ ಈ ರೀತಿ ಎರಡು ಕೋಟಿ ಕೊಟ್ಟು ವಿವಿ ಆರಂಭಿಸುವುದಕ್ಕಿಂತ ಸುಮ್ಮನಿರುವುದು ಲೇಸು ಎಂದು ಈ ಹಿಂದೆಯೇ ಹೇಳಿದ್ದರು. ಆದರೂ ಈಗ ವಿರೋಧಿಸುತ್ತಿರುವುದಕ್ಕೆ ‘ರಾಜಕೀಯ’ವಲ್ಲದೇ ಮತ್ತೇನೂ ಕಾರಣವಿಲ್ಲ. ರಾಜಕೀಯ ಕಾರಣಕ್ಕೆ ಮಣಿದು ನೂತನ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಪ್ರಕ್ರಿಯೆ ಯನ್ನು ಸರಕಾರ ಯಾವ ರೀತಿ ಮುಂದುವರಿಸಲಿದೆ ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ.

ಆದರೆ ರಾಜ್ಯ ಸರಕಾರ ಇನ್ನಾದರೂ ವಿಶ್ವವಿದ್ಯಾಲಯಗಳನ್ನು ಸಂಶೋಧನೆ-ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಕೆಯಾಗುವಂತೆ ಮಾಡಬೇಕಿದೆ. ಯಾರದ್ದೋ ಹಿತಾಸಕ್ತಿಗೆ, ಒಬ್ಬ ಕುಲಪತಿ, ಇಬ್ಬರಿಂದ ಮೂರು ಕುಲಸಚಿವರು ಸೇರಿದಂತೆ ಒಂದಿಷ್ಟು ಸಿಂಡಿಕೇಟ್ ಸದಸ್ಯರ ನೇಮಕ ಅಥವಾ ಇನ್ಯಾವುದೋ ಕಾರಣಕ್ಕೆ ವಿಶ್ವವಿದ್ಯಾಲಯಗಳನ್ನು ಆರಂಭಿಸುವ ಬದಲು, ಕರ್ನಾಟಕದಲ್ಲಿ ಈಗಿರುವ ಸರಕಾರಿ ವಿಶ್ವವಿದ್ಯಾಲಯಗಳನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ, ಸೂಕ್ತ ಮೂಲಸೌಕರ್ಯ ಒದಗಿಸುವ ಬಗ್ಗೆ ಗಮನಹರಿಸಲಿ.

ಹತ್ತು ವಿಶ್ವವಿದ್ಯಾಲಯ ಆರಂಭಿಸಿ, ಎಲ್ಲ ವಿವಿಗಳಿಗೆ ‘ಎರಡೆರಡು ಕೋಟಿಯಂತೆ ‘ಮಂತ್ರಾ ಕ್ಷತೆ’ ಹಾಕುವ ಬದಲು ಈಗಿರುವ ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸಲಿ. ಬಿಜೆಪಿಯು ರಾಜಕೀಯ ಕಾರಣಕ್ಕೆ ವಿಶ್ವವಿದ್ಯಾಲಯಗಳು ಉಳಿಯಲಿ ಎಂದು ‘ಟ್ವಿಟರ್ ಪೋಸ್ಟ್’ ಮಾಡುವುದನ್ನು ಬಿಟ್ಟು, ಹಾಲಿ ವಿಶ್ವವಿದ್ಯಾಲಯಗಳ ಅಭಿ ವೃದ್ಧಿಗೆ ಏನು ಮಾಡಬೇಕು ಎನ್ನುವ ಬಗ್ಗೆ ‘ಮಾರ್ಗದರ್ಶನ’ ಮಾಡುವ ಮೂಲಕ ಸರಕಾರದ ಕಣ್ಣುತೆರೆಸುವ ಕೆಲಸವನ್ನು ಮಾಡಲಿ.