Ranjith H Ashwath Column: ಪ್ರತಿಷ್ಠೆಯಿಂದಾಗಿ ಬಡವಾಗುತ್ತಿರುವ ಪಕ್ಷ ಸಂಘಟನೆ
ಕೆಲವರು ‘ಒದ್ದು’ ಪಡೆದರೆ, ಇನ್ನು ಕೆಲವರು ‘ಒದೆಸುವ’ ಮೂಲಕ ತಮ್ಮ ಸ್ಥಾನವನ್ನು ಖಾತ್ರಿ ಮಾಡಿ ಕೊಳ್ಳುತ್ತಾರೆ. ಈ ಒದೆಯುವ, ಒದೆಸಿಕೊಳ್ಳುವ ಪ್ರಕ್ರಿಯೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸಹಜ. ಆದರೆ ಈ ಪ್ರಕ್ರಿಯೆಯ ಸಮಯದಲ್ಲಿ ಪಕ್ಷ ಹಾಗೂ ಸಂಘಟನೆಯ ಮೇಲೆ ಯಾವ ರೀತಿಯ ಪರಿಣಾಮ ವಾಗುತ್ತದೆ ಎನ್ನುವುದರ ಮೇಲೆ ಆಯಾ ನಾಯಕರ ಜಾಣ್ಮೆ, ತಂತ್ರಗಾರಿಕೆಯ ಕೌಶಲ ನಿರ್ಧಾರವಾಗು ತ್ತದೆ
Source : Vishwavani Daily News Paper
ರಾಜಕೀಯದಲ್ಲಿ ಯಾರೂ ಸನ್ಯಾಸಿಗಳಲ್ಲ’ ಎನ್ನುವುದು ಎಲ್ಲರೂ ಒಪ್ಪುವ ಮಾತು. ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು, ದಶಕಗಳ ಕಾಲ ಅಽಕಾರದ ಗದ್ದುಗೆಯಲ್ಲಿಯೇ ಕಾಲ ಕಳೆದ ನಾಯಕ ನವರೆಗೆ ಅಧಿಕಾರದಲ್ಲಿಯೇ ಇರಬೇಕೆಂಬ ಸಹಜ ಬಯಕೆಯಿರುತ್ತದೆ. ಈ ವಿಷಯದಲ್ಲಿ ಒಬ್ಬೊಬ್ಬರ ತಂತ್ರಗಾರಿಕೆ ಒಂದೊಂದು ರೀತಿಯಿರುತ್ತದೆ.
ಕೆಲವರು ‘ಒದ್ದು’ ಪಡೆದರೆ, ಇನ್ನು ಕೆಲವರು ‘ಒದೆಸುವ’ ಮೂಲಕ ತಮ್ಮ ಸ್ಥಾನವನ್ನು ಖಾತ್ರಿ ಮಾಡಿಕೊಳ್ಳುತ್ತಾರೆ. ಈ ಒದೆಯುವ, ಒದೆಸಿಕೊಳ್ಳುವ ಪ್ರಕ್ರಿಯೆ ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಸಹಜ. ಆದರೆ ಈ ಪ್ರಕ್ರಿಯೆಯ ಸಮಯದಲ್ಲಿ ಪಕ್ಷ ಹಾಗೂ ಸಂಘಟನೆಯ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ ಎನ್ನುವುದರ ಮೇಲೆ ಆಯಾ ನಾಯಕರ ಜಾಣ್ಮೆ, ತಂತ್ರಗಾರಿಕೆಯ ಕೌಶಲ ನಿರ್ಧಾರವಾಗುತ್ತದೆ.
ರಾಜಕೀಯದಲ್ಲಿ ಅಧಿಕಾರ ಪಡೆಯುವುದಕ್ಕಾಗಿ ತಂತ್ರಗಾರಿಕೆ ಮಾಡುವುದು ಒಂದು ಭಾಗವಾದರೆ, ಇನ್ನೊಬ್ಬರನ್ನು ಅಧಿಕಾರದಿಂದ ಕೆಳಗಿಳಿಸುವುದಕ್ಕೂ ತಂತ್ರಗಾರಿಕೆ ಮಾಡುವುದಿದೆ. ಸದ್ಯ ಕರ್ನಾ ಟಕದ ಮಟ್ಟಿಗೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಧಿಕಾರ ಪಡೆಯುವ ಹಾಗೂ ಉಳಿಸಿ ಕೊಳ್ಳುವ ಸಲುವಾಗಿ ‘ಬಣ ರಾಜಕೀಯ’ ನಡೆಯುತ್ತಿದ್ದರೆ, ಪ್ರತಿಪಕ್ಷ ಬಿಜೆಪಿಯಲ್ಲಿ ತಮಗೆ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ, ಇನ್ನೊಬ್ಬರನ್ನು ಅಧಿಕಾರದಿಂದ ಇಳಿಸಬೇಕು ಎನ್ನುವ ಕಾರಣಕ್ಕೆ ಕೆಲವರು ಸಮರ ಸಾರಿದ್ದಾರೆ. ಈ ಪ್ರತಿಷ್ಠೆಯ ಸಮರದಲ್ಲಿ ನಾಯಕರು ಗೆಲ್ಲುವರೋ ಸೋಲು ವರೋ ಎನ್ನುವುದಕ್ಕೆ ‘ಹೈಕಮಾಂಡ್’ ಉತ್ತರಿಸಲಿದೆ.
ಆದರೆ ಈ ಬಡಿದಾಟದಲ್ಲಿ ಪಕ್ಷ ಹಾಗೂ ಕಾರ್ಯಕರ್ತರು ಬಡವಾಗುವುದಂತೂ ಸ್ಪಷ್ಟ. ಕರ್ನಾಟಕ ದಲ್ಲಿ ಸದ್ಯ ಆಡಳಿತ, ಪ್ರತಿಪಕ್ಷ ಎರಡರಲ್ಲಿಯೂ ಬಣ ಬಡಿದಾಟಕ್ಕೆ ಕೊನೆಯಿಲ್ಲವಾಗಿದೆ. ಆಡಳಿತಾ ರೂಢ ಕಾಂಗ್ರೆಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ‘ಅಂತಿಮ ಎಚ್ಚರಿಕೆ’ಯ ಬಳಿಕ ಇಡೀ ಪ್ರಹಸನ ಬೂದಿ ಮುಚ್ಚಿದ ಕೆಂಡವಾಗಿ, ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಬಿದ್ದಿದೆ.
ಆದರೆ ಪ್ರತಿಪಕ್ಷ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯತ್ನಾಳ್ ಬಣ ಬಡಿದಾಟಕ್ಕೆ ಕೊನೆಯಿಲ್ಲವಾಗಿದೆ. ಕೆಲ ದಿನಗಳ ಹಿಂದೆ, ಯಾವುದೇ ಬಹಿರಂಗ ಹೇಳಿಕೆ ನೀಡುವಂತಿಲ್ಲ ಎನ್ನುವ ಸಂದೇಶವನ್ನು ರಾಜ್ಯ ನಾಯಕರಿಗೆ ದೆಹಲಿಯ ವರಿಷ್ಠರು ರವಾನಿಸಿದ್ದರು ಎನ್ನುವ ಮಾತಿತ್ತು. ಆ ಸಂದೇಶದ ಬಳಿಕ ಒಂದು ವಾರ ಯಾವ ನಾಯಕರೂ ಮಾತಾಡಿರಲಿಲ್ಲ. ಆದರೀಗ ವರಿಷ್ಠರ ಮಧ್ಯ ಪ್ರವೇಶದ ಹೊರತಾಗಿಯೂ ಎರಡೂ ಬಣದವರು ಏಕವಚನದಲ್ಲಿ ವಾಗ್ದಾಳಿ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ಹಾಗೆ ನೋಡಿದರೆ, ವಿಜಯೇಂದ್ರ ವಿರುದ್ಧವಿರುವ ಬಣದಲ್ಲಿ ಮೇಲ್ನೋಟಕ್ಕೆ ಹತ್ತಾರು ಮಂದಿಯ ಮುಖವಷ್ಟೇ ಕಾಣಿಸಿದರೂ, ನೈತಿಕ ಬೆಂಬಲಕ್ಕೆಂದು ಅನೇಕರಿದ್ದಾರೆ. ಅದರಲ್ಲಿ ದೆಹಲಿಯ ಕೆಲ ನಾಯಕರಿರುವುದು ನಿಶ್ಚಿತ. ಇದರೊಂದಿಗೆ ಯತ್ನಾಳ್ ಬಣವನ್ನು ವಿರೋಧಿಸುವ ನೆಪದಲ್ಲಿ ವಕ್ ಹೋರಾಟಕ್ಕೆ ಅಡ್ಡಿಪಡಿಸಲು ವಿಜಯೇಂದ್ರ ಮುಂದಾಗಿದ್ದು ಯತ್ನಾಳ್ ಬಣಕ್ಕೆ ಸಿಕ್ಕ ಬಹುದೊಡ್ಡ ಮುನ್ನಡೆ ಎಂದರೆ ತಪ್ಪಾಗುವುದಿಲ್ಲ.
ವಕ್ಫ್ ಹೋರಾಟವನ್ನು ಯತ್ನಾಳ್ ಬಣ ಆರಂಭಿಸುತ್ತಿದ್ದಂತೆ, ಅದನ್ನು ವಿರೋಧಿಸದೇ ತಾವೇ ಹೋಗಿ ಕೂತಿದ್ದರೆ ಇಡೀ ಆಂದೋಲನದ ‘ಮೈಲೇಜ್’ ಅವರಿಗೆ ಸಿಗುತ್ತಿತ್ತು. ಆದರೆ ಆ ರೀತಿ ಮಾಡಿ ದರೆ ಯತ್ನಾಳ್ ಹಾಗೂ ತಂಡದ ಮುಂದೆ ತಲೆಬಾಗಬೇಕಾಗುತ್ತದೆ ಎನ್ನುವ ಕಾರಣಕ್ಕೆ ವಿಜಯೇಂದ್ರ ಇಡೀ ಹೋರಾಟವನ್ನು ವಿರೋಧಿಸಿದರು. ಇದರಿಂದಾಗಿ, ಕೇವಲ ರಾಜ್ಯದಲ್ಲಿ ಮಾತ್ರ ವಲ್ಲದೇ, ರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಸಂದೇಶ ರವಾನೆಯಾಯಿತು.
ಸರಕಾರಿ, ಮಠ-ಮಾನ್ಯಗಳ ಜಮೀನು, ಹಿಂದೂ ರೈತರ ಜಮೀನಿಗೆ ವಕ್ಫ್ ಆಸ್ತಿಯೆಂದು ನೋಟಿಸ್ ಬಂದಿದ್ದರಿಂದ ಸಹಜವಾಗಿಯೇ ಯತ್ನಾಳ್ ಬಣಕ್ಕೆ ಸ್ಥಳೀಯ ಮಟ್ಟದಲ್ಲಿ ಬೆಂಬಲ ಸಿಕ್ಕಿತ್ತು. ಹಿಂದುತ್ವ ಅಜೆಂಡಾದಲ್ಲಿಯೇ ಇಡೀ ಪ್ರಕ್ರಿಯೆ ನಡೆಸಿದ್ದರಿಂದ ಸಹಜವಾಗಿಯೇ ರಾಷ್ಟ್ರೀಯ ನಾಯಕರು ಶಹಬಾಸ್‌ಗಿರಿ ನೀಡಿದ್ದರು. ಒಂದು ವೇಳೆ ವಿಜಯೇಂದ್ರ ‘ರಾಜ್ಯಾಧ್ಯಕ್ಷನಾಗಿ ಈ ಹೋರಾಟವನ್ನು ಮುಂದುವರಿಸುವೆ’ ಎನ್ನುವ ಸಂದೇಶ ರವಾನಿಸಿದ್ದರೆ, ಇಡೀ ಯೋಚನೆಯ ಕ್ರೆಡಿಟ್ ವಿಜಯೇಂದ್ರ ಪಾಲಾಗಿರುತ್ತಿತ್ತು. ಆದರೆ ಪ್ರತಿಷ್ಠೆಗೆ ಬಿದ್ದಿದ್ದರಿಂದ ‘ಅದ್ಭುತ’ ಅವಕಾಶ ವೊಂದನ್ನು ಅವರು ಕೈಚೆಲ್ಲಿದರು ಎಂದರೆ ತಪ್ಪಾಗುವುದಿಲ್ಲ.
ಬಿಜೆಪಿಯಲ್ಲಿನ ಸಮಸ್ಯೆ ಇದಾದರೆ, ಕಾಂಗ್ರೆಸ್‌ನಲ್ಲಿ ಸ್ಪಷ್ಟ ಬಹುಮತವಿದ್ದರೂ ಬಣ ರಾಜಕೀಯ, ಡಿನ್ನರ್ ಪಾಲಿಟಿಕ್ಸ್‌ಗೆ ಕೊನೆಯಿಲ್ಲವಾಗಿದೆ. ದಶಕದ ಬಳಿಕ ‘ಸುಭದ್ರ’ ಸರಕಾರ ರಾಜ್ಯದಲ್ಲಿ ಬಂದಿ ದ್ದರೂ, ಅಧಿಕಾರ ಹಂಚಿಕೆಯ ನೆಪದಲ್ಲಿ ಶುರುವಾದ ಬಡಿದಾಟ ಇದೀಗ, ‘ನನ್ನ ಒಂದು ಕಣ್ಣು
ತೆಗೆದರೆ, ನಿನ್ನ ಎರಡು ಕಣ್ಣು ತೆಗೆಯುವೆ’ ಎನ್ನುವ ಮನಸ್ಥಿತಿಯಲ್ಲಿ ಕೆಲ ನಾಯಕರು ತಂತ್ರಗಾರಿಕೆ ರೂಪಿಸುವ ಮಟ್ಟವನ್ನು ಮುಟ್ಟಿದೆ. 136 ಸೀಟುಗಳನ್ನು ಗೆಲ್ಲುವಲ್ಲಿ, ತರುವಾಯದ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರಗಳನ್ನು ಕಬ್ಜ ಮಾಡುವಲ್ಲಿ ಯಾರ ಪಾತ್ರವಿದೆ ಎನ್ನುವ ‘ಕ್ರೆಡಿಟ್’ ಪಾಲಿಟಿಕ್ಸ್‌ನಲ್ಲಿಯೇ ಭಿನ್ನಮತ ಕಾಣುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಜೋಡೆತ್ತಿನ ರೀತಿ ಕಾರ್ಯ ನಿರ್ವಹಿಸಿದ್ದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ನಡೆದಿದೆ ಎನ್ನಲಾದ ‘ಪವರ್ ಶೇರಿಂಗ್’ ಅಂದಾಜಿನ ಮೇಲೆಯೇ ಬಹುತೇಕ ನಾಯಕರು ಮಾತನಾಡುತ್ತಿದ್ದಾರೆ.
ಅಧಿಕಾರ ಹಂಚಿಕೆಯ ವಿಷಯದಲ್ಲಿಯೇ ಮುಳುಗಿರುವ ನಾಯಕರು, ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರನ್ನು ಸಂಪೂರ್ಣವಾಗಿ ಮರೆತಿರುವುದು ಸುಳ್ಳಲ್ಲ. ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ಇದಾಗಿದ್ದರೆ ಜೆಡಿಎಸ್ ಅಸ್ತಿತ್ವದ ಹೋರಾಟದಲ್ಲಿದೆ. ಎನ್‌ಡಿಎ ಜತೆಗೆ ಕೇಂದ್ರದಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕೇಂದ್ರದ ಪ್ರಮುಖ ಸಚಿವಾಲಯ ಸಿಕ್ಕಿದೆ. ಇದರೊಂದಿಗೆ ಬಿಜೆಪಿಯ ಆಯಕಟ್ಟಿನ ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದಾರೆ. ಆದರೆ ಪಕ್ಷವಾಗಿ ಜೆಡಿಎಸ್ ಎಲ್ಲಿ ಉಳಿದಿದೆ ಎನ್ನುವ ಪ್ರಶ್ನೆ ಮೂಡುತ್ತಿದೆ.
ದೇವೇಗೌಡರ ಬಳಿಕ ಗೌಡರ ಕುಟುಂಬಕ್ಕೆ ಹೊರತಾದ ನಾಯಕತ್ವವನ್ನು ಬೆಳೆಸುವಲ್ಲಿ ಎಡವಿದ್ದ ಪರಿಣಾಮ ಒಂದೊಂದೇ ಭದ್ರಕೋಟೆಗಳನ್ನು ಜೆಡಿಎಸ್ ಕಳೆದುಕೊಂಡಿದೆ. ಅದರಲ್ಲಿಯೂ ಕೆಲ ತಿಂಗಳ ಹಿಂದೆ ನಡೆದ ಉಪಚುನಾವಣೆಯಲ್ಲಿ, ದೇವೇಗೌಡರ ಸರಣಿ ಪ್ರಚಾರದ ಹೊರತಾಗಿಯೂ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯವರಿಗೆ ಹ್ಯಾಟ್ರಿಕ್ ಸೋಲು ಒದಗಿತು.
ಇದು ಗೌಡರ ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ. ಇದರೊಂದಿಗೆ ಕೋರ್ ಕಮಿಟಿ ಅಧ್ಯಕ್ಷ ರಾಗಿದ್ದ ಜಿ.ಟಿ.ದೇವೇಗೌಡರ ಬಂಡಾಯ ಮತ್ತೊಂದು ತಲೆಬಿಸಿಯನ್ನು ತಂದೊಡ್ಡಿದೆ. ಈ ಎರಡ ಕ್ಕಿಂತ ಮುಖ್ಯವಾಗಿ, ರಾಜ್ಯ ಕಾಂಗ್ರೆಸ್‌ನಲ್ಲಾಗಿರುವ ಕೆಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಆಪರೇಷನ್ ಹಸ್ತ’ದ ಭಾಗವಾಗಿ ಜೆಡಿಎಸ್ ಪಕ್ಷವನ್ನೇ ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವ ಕಸರತ್ತಿಗೆ ಮುಂದಾಗಿರುವುದು ಕುಮಾರಸ್ವಾಮಿ ಅವರ ಆತಂಕಕ್ಕೆ ಕಾರಣ ವಾಗಿದೆ.
ಒಂದು ವೇಳೆ ಇದು ನಿಜವೇ ಆದರೆ, ಜೆಡಿಎಸ್ ಪಕ್ಷದ ಅಧಿಕೃತ ಚಿಹ್ನೆಯೇ ಗೌಡರ ಕುಟುಂಬದ ಕೈತಪ್ಪಲಿದೆ. ಈ ಮೂರೂ ಪಕ್ಷದಲ್ಲಿ ಸಾಮಾನ್ಯವಾಗಿ ಕಾಣುತ್ತಿರುವ ಸಂಗತಿ ಎಂದರೆ, ವರಿಷ್ಠರ ಸೂಚನೆಯ ಹೊರತಾಗಿಯೂ ನಾಯಕರು ಮಾತನಾಡುತ್ತಿರುವುದು. ಈ ಹಿಂದೆ ಬಲಿಷ್ಠ ಹೈ ಕಮಾಂಡ್ ಹೊಂದಿದ್ದ ಕಾಂಗ್ರೆಸ್‌ನಲ್ಲಿ ಹಾಕಿದ ‘ಗೆರೆ’ ದಾಟಿದರೆ, ಪಕ್ಷದಿಂದ ಹೊರಕ್ಕೆ ಎನ್ನುವ ಪರಿಸ್ಥಿತಿಯಿತ್ತು. ಆದರೆ ಇತ್ತೀಚಿನ ದಿನದಲ್ಲಿ ದೆಹಲಿಯಲ್ಲಿ ಹಿಡಿತವು ಸಡಿಲವಾಗುತ್ತಿರುವು ದರಿಂದಾಗಿ ಕರ್ನಾಟಕದ ನಾಯಕರಿಗೆ ಲಾಭವಾಗುತ್ತಿದೆ.
ಈ ಹಿಂದೆ ಎಲ್ಲ ರಾಜ್ಯ ಉಸ್ತುವಾರಿಗಳ ಮಾತೆಂದರೆ, ಅದನ್ನು ಕಾಂಗ್ರೆಸ್ ನಾಯಕರು ಶಾಸನದಂತೆ ಪಾಲಿಸುತ್ತಿದ್ದರು. ಆದರೆ 2025ರ ಮೊದಲ ದಿನದಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಡೆದ ಪ್ರಹಸನ ವನ್ನು ಇತ್ಯರ್ಥ ಪಡಿಸಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಸರಣಿ ಸಭೆ ನಡೆಸಿದರೂ, ಹಿಡಿತಕ್ಕೆ ಬರಲಿಲ್ಲ.
ಅಂತಿಮವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಮಧ್ಯಸ್ಥಿಕೆ ವಹಿಸಿ, ಸುಮ್ಮನಾಗ ದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಬೇಕಾಗಿ ಬಂತು. ಈ ಎಚ್ಚರಿಕೆಯ ಬೆನ್ನಲ್ಲೇ, ರಾಜ್ಯ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಆದರೆ ಈ ಮೌನದಲ್ಲಿಯೂ ಒಂದು ‘ಅಪಸ್ವರ’ ಕೇಳಿಸು ತ್ತಿರುವುದು ಸ್ಪಷ್ಟ.
ಬೂದಿಮುಚ್ಚಿದ ಕೆಂಡದಂಥ ಈ ಪರಿಸ್ಥಿತಿ ಎಷ್ಟು ದಿನ ಹಾಗೇ ಇರುತ್ತದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ. ಇನ್ನು ಕಾಂಗ್ರೆಸ್‌ನ ವಿರುದ್ಧ ದಿಕ್ಕಿನಲ್ಲಿ ‘ಬಲಿಷ್ಠ’ ವರಿಷ್ಠರನ್ನು ಬಿಜೆಪಿ ಹೊಂದಿ ದ್ದರೂ ಅಂದುಕೊಂಡಂತೆ ಏನೂ ನಡೆಯುತ್ತಿಲ್ಲ. ಯಡಿಯೂರಪ್ಪ ಅವರ ಕಾರಣಕ್ಕೆ ಅವರ ಪುತ್ರ ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನದ ಪಟ್ಟಾಭಿಷೇಕ ಮಾಡಿ ವರ್ಷ ಕಳೆದರೂ, ಸಂಘಟನೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ವಿಜಯೇಂದ್ರ ಅವರಿಗೆ ಸಾಧ್ಯವಾಗಿಲ್ಲ.
ಬಿಜೆಪಿಯಲ್ಲಿ ಸದ್ಯಕ್ಕೆ ಬಲಿಷ್ಠ ಹೈಕಮಾಂಡ್ ಇರುವುದರಲ್ಲಿ ಎರಡನೇ ಮಾತಿಲ್ಲ. ಆದರೆ ದೆಹಲಿಯ ವರಿಷ್ಠರಲ್ಲಿ ರಾಜ್ಯ ನಾಯಕತ್ವದ ಬಗ್ಗೆಯಿರುವ ಗೊಂದಲದಿಂದಾಗಿ, ರಾಜ್ಯ ಬಿಜೆಪಿ ಯಲ್ಲಿನ ಭಿನ್ನಮತ ಹಾದಿ-ಬೀದಿಯಲ್ಲಿ ಚರ್ಚೆಯಾಗುತ್ತಿದ್ದರೂ, ಯಾರಿಗೂ ಯಾವುದೇ ಲಗಾಮು ಹಾಕುವ ಗೊಡವೆಗೆ ವರಿಷ್ಠರು ಹೋಗುತ್ತಿಲ್ಲ.
ಯಡಿಯೂರಪ್ಪ ಬಳಿಕ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಗೋಜಲನ್ನು ಸರಿಪಡಿಸುವ ಬದಲಿಗೆ, ಯಾವ ಹಂತಕ್ಕೆ ಇಡೀ ವಿವಾದ ತಲುಪಲಿದೆ ಎಂದು ಕಾದು ನೋಡುವ ತಂತ್ರಕ್ಕೆ ರಾಷ್ಟ್ರೀಯ ನಾಯಕರು ತಲುಪಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈ ರೀತಿ ಎರಡೂ ರಾಷ್ಟ್ರೀಯ ಪಕ್ಷದ ಹೈಕಮಾಂಡ್‌ಗಳ ಭಿನ್ನ ನಡೆಯಿಂದ ರಾಜ್ಯ ರಾಜಕೀಯ ಒಟ್ಟಾರೆ ಗೊಂದಲದ ಗೂಡಾಗಿದೆ.
ಆದರೆ ರಾಷ್ಟ್ರೀಯ ಪಕ್ಷಗಳಲ್ಲಿರುವ ಈ ಗೊಂದಲದ ‘ಲಾಭ’ ಪಡೆಯಲು ಕರ್ನಾಟಕದಲ್ಲಿ ಸದ್ಯ ಮೂರನೇ ಪಕ್ಷದ ಕೊರತೆಯಿರುವುದರಿಂದ ಎರಡೂ ಪಕ್ಷದ ನಾಯಕರಿಗೆ ಭವಿಷ್ಯದ ನಷ್ಟದ ಚಿಂತೆಯಿಲ್ಲ. ಈ ಎಲ್ಲ ಗೋಜಲಿನ ನಡುವೆ ಮಂಕಾಗಿರುವುದು ಮಾತ್ರ ಪಕ್ಷದ ಸಂಘಟನೆ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಡೆ. ಮುಂದಿನ ಚುನಾವಣೆವರೆಗೆ ಈ ಎರಡು ಅಂಶಗಳೂ ಪಕ್ಷದ ನಾಯಕರಿಗೆ ಬೇಡವಾಗಿರುವುದರಿಂದ, ಈ ವಿಷಯದ ಕಡೆಗೆ ಗಮನಹರಿಸಲು ಅವರಿಗೆ ಸಮಯ ಸಿಕ್ಕಿಲ್ಲ ಎನ್ನುವುದಷ್ಟೇ ವಾಸ್ತವ.
ಇದನ್ನೂ ಓದಿ: Ranjith H Ashwath Column: ಯಾರಿಗೂ ಬೇಡವಾದವೇ ಸ್ಥಳೀಯ ಸಂಸ್ಥೆಗಳು ?