ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ಅಮೆರಿಕ ಬೀಸಿದ ದೊಣ್ಣೆಯಿಂದ ಭಾರತ ತಪ್ಪಿಸಿಕೊಂಡಿತೇ?

ಟ್ರಂಪ್ ಟಾರಿಫ್ ಬಾಂಬ್ ಬಿದ್ದ ಬಳಿಕ, ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾ ದರೆ, ಅಮೆರಿಕ ಬೀಸಿದ ದೊಣ್ಣೆಯಿಂದ ಭಾರತ ತಪ್ಪಿಸಿಕೊಂಡಿತೇ? ಅಥವಾ ಈ ತೆರಿಗೆ ದೊಣ್ಣೆಯ ಏಟಿಗೆ ಸ್ವತಃ ಅಮೆರಿಕನ್ನರೇ ಪೆಟ್ಟು ತಿನ್ನುವರೇ? ಇದು ‘ಲಿಬರೇಶನ್ ಡೇ’ ಆಗಲಿದೆಯೇ, ‘ರಿಸೆಶನ್ ಡೇ’ ಆಗಲಿ‌ ದೆಯೇ ಎಂಬ ಟೀಕಾಸ್ತ್ರಗಳು ಸಿಡಿದಿವೆ.

ಅಮೆರಿಕ ಬೀಸಿದ ದೊಣ್ಣೆಯಿಂದ ಭಾರತ ತಪ್ಪಿಸಿಕೊಂಡಿತೇ?

ಹಿರಿಯ ಪತ್ರಕರ್ತ, ಅಂಕಣಕಾರ ಕೇಶವ್‌ ಪ್ರಸಾದ್‌ ಬಿ.

ಮನಿ ಮೈಂಡೆಡ್

ಡೊನಾಲ್ಡ್ ಟ್ರಂಪ್ ಯಾವ ಸಂದರ್ಭದಲ್ಲೂ ಹಾಸ್ಯಪ್ರಜ್ಞೆಯನ್ನು ಮರೆಯುವುದಿಲ್ಲ. ಅಮೆರಿಕದ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಐತಿಹಾಸಿಕ ತೆರಿಗೆ ಬದಲಾವಣೆಯ ಮುಹೂರ್ತವನ್ನು ಪ್ರಕಟಿ ಸುವಾಗ, “ನಾನು ಏಪ್ರಿಲ್ 1ಕ್ಕೇ ಹೊಸ ತೆರಿಗೆಗಳ ಜಾರಿಗೆ ಬಯಸಿದ್ದೆ. ಆದರೆ ‘ಮೂರ್ಖರ ದಿನ’ದ ಜೋಕ್ ಆಗಿರಬಹುದು ಎಂದು ಜನ ಭಾವಿಸಬಹುದು. ಹೀಗಾಗಿ ಒಂದು ದಿನ ನಷ್ಟವಾಗುತ್ತಿದ್ದರೂ, ಏಪ್ರಿಲ್ 2ನ್ನು ಆಯ್ಕೆ ಮಾಡಿದ್ದೇನೆ" ಎಂದು ಚಟಾಕಿ ಹಾರಿಸಿದ್ದರು. ಹೀಗಿದ್ದರೂ, ಟ್ರಂಪ್ ಟಾರಿಫ್ ಬಾಂಬ್ ಬಿದ್ದ ಬಳಿಕ, ಅದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದರೆ, ಅಮೆರಿಕ ಬೀಸಿದ ದೊಣ್ಣೆಯಿಂದ ಭಾರತ ತಪ್ಪಿಸಿಕೊಂಡಿತೇ? ಅಥವಾ ಈ ತೆರಿಗೆ ದೊಣ್ಣೆಯ ಏಟಿಗೆ ಸ್ವತಃ ಅಮೆರಿಕನ್ನರೇ ಪೆಟ್ಟು ತಿನ್ನುವರೇ? ಇದು ‘ಲಿಬರೇಶನ್ ಡೇ’ ಆಗಲಿ ದೆಯೇ, ‘ರಿಸೆಶನ್ ಡೇ’ ಆಗಲಿ ದೆಯೇ ಎಂಬ ಟೀಕಾಸ್ತ್ರಗಳು ಸಿಡಿದಿವೆ.

ಜತೆಗೆ ಜಾಗತೀಕರಣ ಯುಗ ಮುಗಿಯಿತೇ? ಡಾಲರ್ ಪ್ರಾಬಲ್ಯ ಕುಸಿಯಲಿದೆಯೇ? ವಿಶ್ವ ಸಮುದಾಯದಲ್ಲಿ ಮುಂದೆ ಅಮೆರಿಕ ಏಕಾಂಗಿಯಾಗಲಿದೆಯೇ? ಬೆಲೆ ಏರಿಕೆಯ ಹೊಡೆತಕ್ಕೆ ಅಮೆರಿಕನ್ನರು ತತ್ತರಿಸಿ ಹೋಗಲಿದ್ದಾರೆಯೇ? ಅಥವಾ ಟ್ರಂಪ್ ಹೇಳಿರುವಂತೆ, ಅಮೆರಿಕದ ಬೊಕ್ಕಸಕ್ಕೆ ಟ್ರಿಲಿಯನ್‌ಗಟ್ಟಲೆ ಡಾಲರ್ ಹಣವು ಆಮದು ತೆರಿಗೆಯ ರೂಪದಲ್ಲಿ ಹರಿದು ಬರಲಿದೆಯೇ? ಕಾಲವೇ ಇದಕ್ಕೆ ಉತ್ತರಿಸಲಿದೆ.

ಇದನ್ನೂ ಓದಿ: Keshav Prasad B Column: ಭಾರತದ ಜಿಡಿಪಿಯ ಲಾಭ ಪಡೆಯಲು ಏನು ಮಾಡಬೇಕು ?!

ಇನ್ನು ಮುಂದೆ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳ ಮೇಲೆ ಶೇ.26ರಷ್ಟು ತೆರಿಗೆ ಕಟ್ಟ ಬೇಕಾಗುತ್ತದೆ. ವ್ಯಾಪಾರದ ಸಮತೋಲನ ಕಾಯ್ದುಕೊಳ್ಳಲು ಇದು ಅನಿವಾರ್ಯ ಎಂದಿದ್ದಾರೆ ಟ್ರಂಪ್. ಆದರೆ ಇದರಿಂದ ಔಷಧ, ಇಲೆಕ್ಟ್ರಾನಿಕ್ಸ್ ಮತ್ತು ಜವಳಿ ಕ್ಷೇತ್ರಗಳಲ್ಲಿ ಭಾರತ ತನ್ನ ಸ್ಥಾನ ಮಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಹಾದಿ ಸುಗಮವಾಗಲಿದೆ ಎನ್ನುತ್ತಾರೆ ತಜ್ಞರು. ಅಮೆರಿ ಕಕ್ಕೆ ರಫ್ತಾಗುವ ವಸ್ತುಗಳಿಗೆ ಕನಿಷ್ಠ ಶೇ.10ರಷ್ಟು ತೆರಿಗೆಯನ್ನು ಯಾವ ದೇಶವಾದರೂ ಕೊಡ ಬೇಕಾಗುತ್ತದೆ.

ಭಾರತದ ವಿರುದ್ಧದ ಶೇ.26ರ ತೆರಿಗೆಯು ಉನ್ನತ ಮಟ್ಟದ್ದಾಗಿದ್ದರೂ, ಅಮೆರಿಕದ ಜತೆಗೆ ವಾಣಿಜ್ಯ ಸಂಘರ್ಷದ ಬದಲಿಗೆ, ಮತ್ತಷ್ಟು ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಬಹುದು. ಸ್ಟಾಕ್ ಮಾರ್ಕೆಟ್ ಮೇಲೆ ಈಗ ಒಂದಷ್ಟು ನಕಾರಾತ್ಮಕ ಪ್ರಭಾವವಾದರೂ, ವರ್ಷದ ದ್ವಿತೀ ಯಾರ್ಧದಲ್ಲಿ ಚೇತರಿಸಿಕೊಳ್ಳಬಹುದು ಎಂದಿದೆ ಪ್ರೈವೇಟ್ ವೆಲ್ತ ಮ್ಯಾನೇಜ್ಮೆಂಟ್ ಸಂಸ್ಥೆ ಬರ್ನ್‌ ಸ್ಟೀನ್ ವರದಿ. ವಾಣಿಜ್ಯ ಮಂಡಳಿ ಪಿಎಚ್ ಡಿಸಿಸಿಐ ಪ್ರಕಾರ ಟ್ರಂಪ್ ಟಾರಿಫ್‌ ನಿಂದ ಭಾರತದ ಜಿಡಿಪಿಗೆ ತಾತ್ಕಾಲಿಕವಾಗಿ ಶೇ.0.1ರಷ್ಟು ಮಾತ್ರ ನಷ್ಟವಾಗಬಹುದು.

Donald Trump (7)

ಅದನ್ನು ಕೂಡ ಭವಿಷ್ಯದಲ್ಲಿ ಭರಿಸಿಕೊಳ್ಳಬಹುದು. ಇದಕ್ಕೆ ಕಾರಣ ಭಾರತದ ಆತ್ಮನಿರ್ಭರ, ಮೇಕ್ ಇನ್ ಇಂಡಿಯಾ, ಉತ್ಪಾದನೆ ಆಧರಿತ ಇನ್ಸೆಂಟಿವ್ ಯೋಜನೆಗಳು (PLI) ಎಂದಿದ್ದಾರೆ ಮಂಡಳಿಯ ಅಧ್ಯಕ್ಷ ಹೇಮಂತ್ ಜೈನ್. ಮೊದಲಿನಿಂದಲೂ ಭಾರತವು ತನ್ನದೇ ವಿಶಾಲ ಮಾರುಕಟ್ಟೆಯನ್ನು ಹೊಂದಿರುವುದರಿಂದ ತೊಂದರೆ ಆಗದು ಎಂದಿವೆ ಅಸೊಚೆಮ, ಮೋರ್ಗಾನ್ ಸ್ಟ್ಯಾನ್ಲಿ ಇತ್ಯಾದಿ ಸಂಸ್ಥೆಗಳು.

ಅಮೆರಿಕದ ವಸ್ತುಗಳಿಗೆ ಭಾರಿ ತೆರಿಗೆ ವಿಧಿಸುತ್ತಿರುವ ದೇಶಗಳ ವಿರುದ್ಧ ನಾವು ಕೂಡ ಅಷ್ಟೇ ತೆರಿಗೆ ವಿಧಿಸುತ್ತೇವೆ. ಆಗ ವ್ಯಾಪಾರದಲ್ಲಿ ಸಮತೋಲನ ಸಾಧ್ಯವಾಗುತ್ತದೆ. ಅಮೆರಿಕಕ್ಕೂ ಹಣದ ಹೊಳೆ ಹರಿದುಬರಲಿದೆ ಎಂಬುದು ಟ್ರಂಪ್ ವಾದ. ಏಷ್ಯಾ ಮತ್ತು ಯುರೋಪಿನ ಹಲವು ದೇಶಗಳ ವಿರುದ್ಧ ‘ರೆಸಿಪ್ರೋಕಲ್ ಟಾರಿಫ್’ ಅನ್ನು ಟ್ರಂಪ್ ಘೋಷಿಸಿದ್ದಾರೆ. ಚೀನಾ ವಿರುದ್ಧ ಶೇ.34ರಷ್ಟು ತೆರಿಗೆ ಹೇರ ಲಾಗಿದೆ. ವಿಯೆಟ್ನಾಂಗೆ ಶೇ.32, ಥಾಯ್ಲೆಂಡ್‌ಗೆ ಶೇ.36, ಬಾಂಗ್ಲಾದೇಶಕ್ಕೆ ಶೇ.37ರಷ್ಟು ತೆರಿಗೆ ವಿಧಿಸ ಲಾಗಿದೆ.

ಈ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತಕ್ಕೆ ಕಡಿಮೆಯಾಗಿದ್ದು, ಜಾಗತಿಕ ವ್ಯಾಪಾರ ಮತ್ತು ಉತ್ಪಾ ದನಾ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಅವಕಾಶ ಸಿಕ್ಕಿದೆ. ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಉಕ್ಕು, ಅಲ್ಯುಮಿನಿಯಂ ಮತ್ತು ಆಟೊಮೊಬೈಲ್ ಸಂಬಂಧಿತ ಸರಕುಗಳ ಮೇಲೆ ಶೇ.25ರಷ್ಟು ತೆರಿಗೆ ಬೀಳಲಿದೆ.

ಆದರೆ ಔಷಧ, ಸೆಮಿಕಂಡಕ್ಟರ್, ಇಂಧನ ವಲಯದ ಉತ್ಪನ್ನಗಳ ರಫ್ತಿನ ಮೇಲೆ ಈ ತೆರಿಗೆ ಇರುವು ದಿಲ್ಲ. ಇದು ಭಾರತಕ್ಕೆ ಅನುಕೂಲಕರವಾಗಲಿದೆ. ಒಂದು ವೇಳೆ ಔಷಧದ ರಫ್ತಿಗೂ ಸುಂಕ ಹೇರಿದ್ದರೆ ಹೆಚ್ಚಿನ ನಷ್ಟವಾಗುತ್ತಿತ್ತು. ಉಕ್ಕು ಮತ್ತು ಅಲ್ಯುಮಿನಿಯಂ ಅನ್ನು ಅಮೆರಿಕ ಖರೀದಿಸದಿದ್ದರೂ, ಭಾರತವು ಪರ್ಯಾಯ ಮಾರುಕಟ್ಟೆಯನ್ನೂ ಕಂಡುಕೊಳ್ಳಬಹುದು.

ಚೀನಾದ ಹಲವು ವಸ್ತುಗಳಿಗೆ ಅಮೆರಿಕ ಪ್ರವೇಶಕ್ಕೆ ಮುನ್ನ ಶೇ.50ಕ್ಕೂ ಹೆಚ್ಚು ತೆರಿಗೆ ಬೀಳುವು ದರಿಂದ, ಭಾರತದ ವಸ್ತುಗಳಿಗೆ ಬೇಡಿಕೆ ಸೃಷ್ಟಿಯಾಗಬಹುದು ಅಥವಾ ಈ ಅವಕಾಶವನ್ನು ಬಳಸಿ ಕೊಳ್ಳಬಹುದು. ಅಮೆರಿಕದ ಮೈತ್ರಿಕೂಟದಲ್ಲಿರುವ ಐರೋಪ್ಯ ಒಕ್ಕೂಟ (ಶೇ.20), ಜಪಾನ್‌ಗೆ (ಶೇ.24) ಹೋಲಿಸಿದರೆ ಭಾರತಕ್ಕೆ ಹಾಕಿರುವುದು ಸ್ವಲ್ಪ ಜಾಸ್ತಿ ಎನ್ನಿಸಬಹುದು. ಆದರೆ ಚೀನಾಕ್ಕೆ ಹಾಕಿರುವ 54 ಪರ್ಸೆಂಟ್ ಗೆ ಹೋಲಿಸಿದರೆ ಭಾರತಕ್ಕೆ ಕಡಿಮೆ.

ಬ್ರಿಟನ್ ಮತ್ತು ಸ್ವಿಜರ್ಲೆಂಡ್‌ಗೆ ಕಡಿಮೆ ತೆರಿಗೆ ವಿಧಿಸಿದ್ದರೂ, ಭಾರತದ ರಫ್ತು ಸಾಮರ್ಥ್ಯದ ಎದುರು ಸ್ಪರ್ಧಿಸಲು ಅವುಗಳಿಗೆ ಅಸಾಧ್ಯ. ಏಷ್ಯಾದ ಇಕಾನಮಿಗಳ ಪೈಕಿ ಮಲೇಷ್ಯಾ ಮಾತ್ರ (ಶೇ.24) ಭಾರತದ ಜತೆಗೆ ಕೆಲ ಕ್ಷೇತ್ರಗಳಲ್ಲಿ ಸ್ಪರ್ಧಿಸಬಲ್ಲದು. ಹೀಗಿದ್ದರೂ, ಟ್ರಂಪ್ ಟಾರಿಫ್‌ ನಿಂದ ಉಂಟಾಗಬಲ್ಲ ಪ್ರತಿಕೂಲ ಪರಿಣಾಮಗಳನ್ನೂ ಭಾರತ ಕಡೆಗಣಿಸುವಂತಿಲ್ಲ.

ಮುಖ್ಯವಾಗಿ ಜವಳಿ, ಎಂಜಿನಿಯರಿಂಗ್ ಸರಕು, ಇಲೆಕ್ಟ್ರಾನಿಕ್ಸ್, ಜ್ಯುವೆಲ್ಲರಿಗಳ ರಫ್ತಿನಲ್ಲಿ ವಿನಾಯಿತಿ ಪಡೆಯುವ ನಿಟ್ಟಿನಲ್ಲಿ ಟ್ರಂಪ್ ಸರಕಾರದ ಜತೆಗೆ ಮಾತುಕತೆ ಅಗತ್ಯ. ಭಾರತಕ್ಕೆ ಸಿಕ್ಕಿರುವ ದೊಡ್ಡ ರಿಲೀಫ್ ಎಂದರೆ, ಔಷಧಗಳ ರಫ್ತಿಗೆ ಟಾರಿಫ್‌ ನಿಂದ ವಿನಾಯಿತಿ ಕೊಟ್ಟಿರುವುದು. ಏಕೆಂದರೆ ಭಾರತ‌ ದಿಂದ ಅಮೆರಿಕಕ್ಕೆ ಹೆಚ್ಚು ರಫ್ತಾಗುವ ವಸ್ತುಗಳಲ್ಲಿ ಔಷಧಗಳೂ ಇವೆ.

ಆರ್ಥಿಕ ತಜ್ಞ ಅಶೋಕ್ ಗುಲಾಟಿಯವರ ಪ್ರಕಾರ, ಭಾರತದ ಕೃಷಿ ಉತ್ಪನ್ನಗಳ ರಫ್ತಿಗೆ ಕೂಡ ಶೇ.26ರ ತೆರಿಗೆಯಿಂದ ಅಂಥ ಸಮಸ್ಯೆ ಆಗದು. ಏಷ್ಯಾದ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅನುಕೂಲವೇ ಆಗಲಿದೆ. ಸೀಫುಡ್ ಮತ್ತು ಅಕ್ಕಿಯ ರಫ್ತಿನ ಮೇಲೆ ಸ್ವಲ್ಪ ಪ್ರತಿಕೂಲ ಪರಿಣಾಮವಾಗ ಬಹುದು. ಉಳಿದಂತೆ ತೊಂದರೆ ಇಲ್ಲ. ಚೀನಾ, ವಿಯೆಟ್ನಾಂಗೆ ಹೋಲಿಸಿದರೆ ಭಾರತಕ್ಕೆ ವಿಧಿಸಿರುವ ತೆರಿಗೆ ಕಡಿಮೆಯಾಗಿರುವುದರಿಂದ ಇಲೆಕ್ಟ್ರಾನಿಕ್ಸ್ ಉದ್ದಿಮೆಗೂ ಅಂಥ ಹೊಡೆತ ಬೀಳದು ಎಂದಿದೆ ಇಂಡಿಯಾ ಸೆಲ್ಯುಲರ್ ಆಂಡ್ ಇಲೆಕ್ಟ್ರಾನಿಕ್ಸ್ ಅಸೋಸಿಯೇಶನ್. ‌

ಮೋದಿಯವರ ನೇತೃತ್ವದಲ್ಲಿ ಭಾರತೀಯ ರಾಜತಾಂತ್ರಿಕರು ಮತ್ತು ಅಧಿಕಾರಿಗಳ ನಿಯೋಗ ನಡೆಸಿದ ಮಾತುಕತೆಗಳು ಫಲ ನೀಡಿವೆ ಎಂದು ಐಸಿಇಎ ತಿಳಿಸಿದೆ. ಜವಳಿ ರಫ್ತಿನಲ್ಲೂ ಭಾರತಕ್ಕೆ ಲಾಭವಾಗಲಿದೆ. ಏಕೆಂದರೆ ಟ್ರಂಪ್, ಪ್ರಮುಖ ಜವಳಿ ರಫ್ತು ರಾಷ್ಟ್ರಗಳಾದ ವಿಯೆಟ್ನಾಂ, ಬಾಂಗ್ಲಾ, ಕಾಂಬೋಡಿಯಾ, ಪಾಕಿಸ್ತಾನ, ಚೀನಾಕ್ಕೆ ಭಾರತಕ್ಕಿಂತಲೂ ಹೆಚ್ಚು ತೆರಿಗೆ ವಿಧಿಸಿರುವುದರಿಂದ ಭಾರತದ ಉಡುಪುಗಳು ಅಮೆರಿಕನ್ನರಿಗೆ ಅಗ್ಗದಲ್ಲಿ ಸಿಗಲಿವೆ.

ಆದ್ದರಿಂದ ಇದು ಕೂಡ ಭಾರತದ ಪರವಾಗಿದೆ. ಅಮೆರಿಕವು ಭಾರತದ ಅಲ್ಯುಮಿನಿಯಂ ಮತ್ತು ಉಕ್ಕಿನ ಉತ್ಪನ್ನಗಳ ಆಮದಿಗೆ ತೆರಿಗೆಯನ್ನು ಕಳೆದ ತಿಂಗಳೇ ವಿಧಿಸಿತ್ತು. ಹೊಸತಾಗಿ ಅದರ ಮೇಲೆ ಟ್ಯಾಕ್ಸ್ ಸಾಧ್ಯತೆ ಇಲ್ಲ. ಹಾಗಾದರೆ ಟ್ರಂಪ್ ಟಾರಿಫ್‌ ಐಟಿ ಕಂಪನಿಗಳ ಮೇಲೆ ಪ್ರಭಾವ ಬೀರುವುದೇ? ಏಕೆಂದರೆ ಭಾರತದ ಐಟಿ ರಫ್ತಿನಲ್ಲಿ ಶೇ.70ರಷ್ಟು ಅಮೆರಿಕದ್ದಾಗಿದೆ.

ಆದರೆ ಅದಕ್ಕೂ ಆತಂಕ ಅನಗತ್ಯ. ಏಕೆಂದರೆ ಟ್ರಂಪ್ ಟಾರಿಫ್‌ ಗಳು ಸರಕುಗಳ ರಫ್ತಿಗೆ ಸಂಬಂಧಿ ಸಿವೆ, ಸೇವಾ ವಲಯದ ರಫ್ತಿಗೆ ಬರುವುದಿಲ್ಲ. ಹೀಗಾಗಿ ಭಾರತದ ಐಟಿ ಸೇವೆಗಳ ರಫ್ತಿಗೆ ಯಾವುದೇ ತೊಡಕಾಗುವುದಿಲ್ಲ. 2024ರಲ್ಲಿ ಭಾರತವು 205 ಶತಕೋಟಿ ಡಾಲರ್ ಮೌಲ್ಯದ ಐಟಿ ಸೇವಾ ರಫ್ತು ದಾಖಲಿಸಿತ್ತು.

ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯುರಿಟಿ, ಎಂಟರ್‌ಪ್ರೈಸ್ ಟೆಕ್ ಸಲ್ಯೂಷನ್ಸ್ ವಿಷಯಗಳಿಗೆ ಸಂಬಂಧಿಸಿ ಭಾರತ ಮುಂಚೂಣಿಯಲ್ಲಿದೆ, ಅಮೆರಿಕದಿಂದ ಭಾರಿ ಬೇಡಿಕೆಯೂ ಇದೆ. ಹಾಗಾದರೆ ನಿಜವಾದ ಆತಂಕವೇನು? ಮೊದಲನೆಯದಾಗಿ ಟ್ರಂಪ್ ನೀತಿ ಅವರಿಗೇ ಮುಳುವಾದರೆ ಅದರ ಪರಿಣಾಮ ವನ್ನು ಕಾದುನೋಡಬೇಕು. ಅಮೆರಿಕದಲ್ಲಿ ಹಣದುಬ್ಬರದ ಹೆಚ್ಚಳ, ಆರ್ಥಿಕ ಹಿಂಜರಿತ ಸಂಭವಿಸಿ ದರೆ ಅದರ ಪರಿಣಾಮ ಭಾರತದ ಐಟಿ ವಲಯವನ್ನೂ ಕಾಡುವ ಸಾಧ್ಯತೆಯಿದೆ.

ಟ್ರಂಪ್ ಅವರೇನೋ ಅಮೆರಿಕ ಮೂಲದ ಕಂಪನಿಗಳು ತವರಿಗೆ ಮರಳಬೇಕು ಎಂದು ಬಯಸು ತ್ತಿದ್ದಾರೆ. ವಿದೇಶಗಳಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಬದಲಿಗೆ ಅಮೆರಿಕದ ಮಾಡಬೇಕು ಎಂಬುದು ಅವರ ಒತ್ತಾಯ. ಆದರೆ ಅದು ಸುಲಭವಲ್ಲ. ಜಾಗತೀಕರಣದ ಪ್ರಯೋಜನದ ರುಚಿ ಯನ್ನು ಜಗತ್ತು ಈಗಾಗಲೇ ಕಂಡಿದೆ. ಮುಖ್ಯವಾಗಿ ಅಮೆರಿಕದ ಬಲಾಢ್ಯ ತಂತ್ರಜ್ಞಾನ ಕಂಪನಿಗಳು ಜಾಗತೀಕರಣದ ಲಾಭವನ್ನು ಗಳಿಸಿ ಬೆಳೆದಿವೆ.

ಹೀಗಾಗಿಯೇ ಅರ್ಥಶಾಸ್ತ್ರಜ್ಞ ಸ್ವಾಮಿನಾಥನ್ ಅಯ್ಯರ್ ಅವರು, “ಇದು ಲಿಬರೇಶನ್ ಡೇ ಅಲ್ಲ, ರಿಸೆಶನ್ ಡೇ" ಎಂದು ಟೀಕಿಸಿದ್ದಾರೆ. ಟ್ರಂಪ್ ಟಾರಿ- 1930ರ ಅಮೆರಿಕದ ಅನಾಹುತಕಾರಿ ರಕ್ಷಣಾ ತ್ಮಕ ನೀತಿಗಳಿಗೆ (Protectionist) ಸಮವಾಗಿದ್ದು ಸಪ್ಲೈ ಚೈನ್‌ಗಳನ್ನು ಹಳಿ ತಪ್ಪಿಸಲಿದೆ, ಜಾಗತಿಕ ಆರ್ಥಿಕ ಬೆಳವಣಿಗೆಗೆ ಧಕ್ಕೆ ತರಲಿದೆ ಎಂದು ಎಚ್ಚರಿಸಿದ್ದಾರೆ. 1930ರ ರಕ್ಷಣಾತ್ಮಕ ನೀತಿಗಳ ಪರಿಣಾಮ ಜಗತ್ತು ಮಹಾ ಆರ್ಥಿಕ ಹಿಂಜರಿತಕ್ಕೆ ಸಿಲುಕಿತ್ತು. ಆಗ ಅಮೆರಿಕವು ತನ್ನ ರೈತರು ಮತ್ತು ಉದ್ಯಮಿಗಳ ಹಿತಾಸಕ್ತಿಯ ಹೆಸರಿನಲ್ಲಿ ಆಮದು ತೆರಿಗೆಗಳನ್ನು ಶೇ.20ರಷ್ಟು ಹೆಚ್ಚಿಸಿತ್ತು.

ಆದರೆ ಇದರ ಪರಿಣಾಮ ಜಾಗತಿಕ ವ್ಯಾಪಾರಗಳು ಹಳಿ ತಪ್ಪಿ ಮಹಾ ಆರ್ಥಿಕ ಹಿಂಜರಿತ ಸಂಭವಿ ಸಿತ್ತು. ಇಂಥ ಅನಾಹುತ ಆಗದಿರಲಿ ಎಂದು ಹಾರೈಸುವುದಷ್ಟೇ ಈಗ ಉಳಿದಿರುವುದು. ಇದುವರೆಗೆ ಜಗತ್ತು ಅಮೆರಿಕವನ್ನು ‘ದೊಡ್ಡಣ್ಣ’ ಎನ್ನುತ್ತಿತ್ತು. ಆದರೆ ಈಗ ಟ್ರಂಪ್ ಹೇಳುತ್ತಿರುವುದೇನು? “ಅಮೆರಿಕದ ಸುವರ್ಣ ಯುಗ ಇನ್ನು ಆರಂಭವಾಗಲಿದೆ, ಆಮದು ತೆರಿಗೆ ಸಂಗ್ರಹಿಸಿ ಅಮೆರಿಕನ್ನರ ತೆರಿಗೆ ಹೊರೆ ಇಳಿಸುತ್ತೇನೆ, ಅಮೆರಿಕವನ್ನು ಮತ್ತೆ ಸಂಪದ್ಭರಿತವಾಗಿಸುತ್ತೇನೆ.

MAKE AMERICA WEALTHY AGAIN" ಎಂದು ಟ್ರಂಪ್ ಘೋಷಿಸಿದ್ದಾರೆ! ಇದೆಂಥ ವಿಚಿತ್ರ ವಲ್ಲವೇ? ವಿಶ್ವದ ಅತಿ ದೊಡ್ಡ ಆರ್ಥಿಕತೆಯಾಗಿ, ಜಗತ್ತಿನ ಶೇ.25ರಷ್ಟು ಇಂಧನವನ್ನು ಬಳಸುತ್ತಿರುವ ಅಮೆರಿಕಕ್ಕೆ ಸಂಪತ್ತಿನ ದಾಹ ಇನ್ನೂ ನೀಗಿಲ್ಲವೇ, ತೃಪ್ತಿಯಾಗಿಲ್ಲವೇ?