ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ಭಾರತದ ಜಿಡಿಪಿಯ ಲಾಭ ಪಡೆಯಲು ಏನು ಮಾಡಬೇಕು ?!

ಬದಲಾವಣೆಯ ಪ್ರವೃತ್ತಿಯನ್ನು ಸ್ಪಷ್ಟವಾಗಿ ಗಮನಿಸಬಹುದು. ಬೆಂಗಳೂರಿನಂಥ ಮಹಾ ನಗರಗಳಿಂದ ಶುರುವಾಗಿ ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮುಂತಾದ ಇತರ ನಗರ-ಪಟ್ಟಣಗಳಲ್ಲಿ ಹಲವು ವಿಧದ, ನವೀನ ಮಾದರಿಯ ಉದ್ಯೋಗಗಳು, ಸ್ವಂತ ಉದ್ಯೋಗ ಗಳು, ಅರೆಕಾಲಿಕ ಉದ್ಯೋಗಗಳು ಸಿಗುತ್ತಿವೆ.

ಭಾರತದ ಜಿಡಿಪಿಯ ಲಾಭ ಪಡೆಯಲು ಏನು ಮಾಡಬೇಕು ?!

ಹಿರಿಯ ಪತ್ರಕರ್ತ, ಅಂಕಣಕಾರ ಕೇಶವ್‌ ಪ್ರಸಾದ್‌ ಬಿ.

ಮನಿ ಮೈಂಡೆಡ್

ಮಾರ್ಚ್ 30ಕ್ಕೆ ಚಾಂದ್ರಮಾನ ಯುಗಾದಿಯ ಸಂಭ್ರಮ. ಹಿಂದೂಗಳಿಗೆ ಇದು ಹೊಸ ವರ್ಷದ ಮೊದಲ ದಿನ. ಅದರ ಬೆನ್ನಲ್ಲೇ ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ 2025-26 ಕೂಡ ಆರಂಭವಾಗುತ್ತದೆ. ಈ ನಡುವೆ, ‘ಐಎಂಎಫ್’ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ವತಿಯಿಂದ ಶುಭ‌ ಸುದ್ದಿ ಬಂದಿದೆ. “ಭಾರತದ ಆರ್ಥಿಕತೆಯ ಗಾತ್ರ ಕಳೆದ ಹತ್ತೇ ವರ್ಷ ಗಳಲ್ಲಿ ಇಮ್ಮಡಿಯಾಗಿದೆ. ಜಿಡಿಪಿ ಈಗ 4.3 ಟ್ರಿಲಿಯನ್ ಡಾಲರ್‌ಗೆ (4.3 ಲಕ್ಷ ಕೋಟಿ ಡಾಲರ್‌ಗೆ) ಬೆಳೆದಿದ್ದು, ಶೇ.103 ರಷ್ಟು ಏರಿಕೆಯಾಗಿದೆ. ಸದ್ಯಕ್ಕೆ ಅಮೆರಿಕ, ಚೀನಾ, ಜರ್ಮನಿ ಮತ್ತು ಜಪಾನ್ ಬಳಿಕ 5ನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು, 2026ರಲ್ಲಿ ಜಪಾನನ್ನೂ, 2027ರಲ್ಲಿ ಜರ್ಮನಿಯನ್ನೂ ಹಿಂದಿಕ್ಕಿ 3ನೇ ಸ್ಥಾನಕ್ಕೇರಲಿದೆ" ಎಂದಿದೆ ಐಎಂಎಫ್ ವರದಿ. ‌

ದೇಶವು ಸ್ವತಂತ್ರವಾದ ಬಳಿಕ, ಮೊದಲ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು 2007ರ ತನಕ, ಬರೋಬ್ಬರಿ 60 ವರ್ಷಗಳನ್ನು ತೆಗೆದುಕೊಂಡಿತ್ತು. 2014ರ ವೇಳೆಗೆ ಅದು 2 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಯಿತು. ಕೋವಿಡ್ ಅಪ್ಪಳಿಕೆಯ ಹೊರತಾಗಿಯೂ 2021ರಲ್ಲಿ 3 ಟ್ರಿಲಿಯನ್ ಡಾಲರ್ ಆಯಿತು. ಆದರೆ ಕೇವಲ 4 ವರ್ಷಗಳಲ್ಲಿ, 2025 ರಲ್ಲಿ ಅದು 4 ಟ್ರಿಲಿಯನ್ ಡಾಲರ್‌ಗೆ ಜಿಗಿದಿದೆ.

ಇದನ್ನೂ ಓದಿ: Keshav Prasad B Column: ಸಾಲದ ರೈಟ್‌ ಆಫ್‌, ಮನ್ನಾ ಒಂದೇನಾ?, ಯಾವುದು ಉತ್ತಮ ?

ಈಗಿನ ವೇಗವನ್ನು ಗಮನಿಸಿದರೆ ಮುಂದಿನ ಪ್ರತಿ ಒಂದೂವರೆ ವರ್ಷಕ್ಕೊಮ್ಮೆ 1 ಟ್ರಿಲಿ ಯನ್ ಡಾಲರ್ ಮೌಲ್ಯವು ಸೇರ್ಪಡೆಯಾಗಿ, 2032ರ ವೇಳೆಗೆ ಭಾರತವು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ. ಜಾಗತಿಕವಾಗಿ ಮೊದಲ ಸ್ಥಾನದಲ್ಲಿರುವ ಅಮೆರಿಕ 30.3 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ್ದರೆ, 2ನೇ ಸ್ಥಾನದಲ್ಲಿರುವ ಚೀನಾ 19.5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ.

ಭಾರತದ ಆರ್ಥಿಕ ಬೆಳವಣಿಗೆಯು ಹೀಗೆಯೇ ವೇಗವಾಗಿ ಮುಂದುವರಿಯುತ್ತಿದ್ದರೆ, ಮುಂದಿನ ದಶಕದಲ್ಲಿ ಈ ಆರ್ಥಿಕ ಸೂಪರ್‌ಪವರ್‌ಗಳು ಮತ್ತು ಭಾರತದ ನಡುವಣ ಅಂತರ ಗಣನೀಯವಾಗಿ ಕಡಿಮೆಯಾಗಲಿದೆ ಎಂದಿದೆ ಐಎಂಎಫ್ ವರದಿ. ಹಿಂದೊಮ್ಮೆ ಜಗತ್ತಿನ ಶ್ರೀಮಂತ ರಾಷ್ಟ್ರವಾಗಿದ್ದ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆಯಲೆಂದೇ ಪರಕೀಯರ ದಾಳಿಯಾಯಿತು. ‌

ಬ್ರಿಟಿಷ್ ವಸಾಹತುಶಾಹಿಯು ಭಾರತವನ್ನು ಹೇಗೆ ಬಡರಾಷ್ಟ್ರವಾಗಿಸಿತು ಎಂಬುದನ್ನು ಸಂಸದ ಶಶಿ ತರೂರ್ 2015ರಲ್ಲಿ ಆಕ್ಸ್ ಫರ್ಡ್ ಯೂನಿಯನ್‌ನ ಚರ್ಚಾಗೋಷ್ಠಿಯಲ್ಲಿ ವಿವರಿಸಿದ್ದರು. ಅವರು ಹೇಳಿದ್ದರಲ್ಲಿ ಹೊಸದೇನೂ ಇರಲಿಲ್ಲ, ಎಲ್ಲವೂ ಇತಿಹಾಸದ ಕರಾಳ ಅಧ್ಯಾಯಗಳೇ ಆಗಿದ್ದವು. ಆದರೆ, ಹೇಳಬೇಕಾದವರಿಗೆ ಅವರ ಮನೆಯಂಗಳದಲ್ಲೇ, ಅವರದ್ದೇ ಭಾಷೆಯಲ್ಲಿ ಹೇಳಿ ಬಂದಿದ್ದರು!

“18ನೇ ಶತಮಾನದಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತದ ಪಾಲು ಶೇ.23ರಷ್ಟಿತ್ತು; ಆದರೆ 1947ರ ವೇಳೆಗೆ ಇದು ಶೇ.4ಕ್ಕೆ ಕುಸಿಯಿತು. ಏಕೆ? ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಆರಂಭವಾಗಿದ್ದ ಬ್ರಿಟಿಷರ 2 ಶತಮಾನಗಳ ಲೂಟಿಯೇ ಈ ದುರಂತಕ್ಕೆ ಪ್ರಮುಖ ಕಾರಣ. ಭಾರತದ ಉದ್ದಿಮೆಗಳನ್ನು ಧೂಳೀಪಟಗೊಳಿಸಿದ್ದರಿಂದಲೇ ಬ್ರಿಟನ್ನಿನ ಕೈಗಾರಿಕಾ ಕ್ರಾಂತಿ ಯಶಸ್ವಿಯಾಯಿತು.

ಉದಾಹರಣೆಗೆ, ಬ್ರಿಟಿಷ್ ಸಾಮ್ರಾಜ್ಯದ ಕುಟಿಲ ವ್ಯಾಪಾರ ನೀತಿಯಿಂದಲೇ ಭಾರತದ ವಿಶ್ವ ವಿಖ್ಯಾತ ಕೈಮಗ್ಗ ವಲಯ ನಾಶವಾಯಿತು. ಭಾರತದಿಂದಲೇ ಅಗ್ಗದ ದರದಲ್ಲಿ ಕಚ್ಚಾ ಸಾಮಗ್ರಿಗಳನ್ನು ತರಿಸಿಕೊಂಡ ಬ್ರಿಟನ್, ಜವಳಿ ಉದ್ದಿಮೆಯಲ್ಲಿ ಮುಂಚೂಣಿಗೆ ಬಂತು. ಹೀಗಾಗಿ, ಸಿದ್ಧಪಡಿಸಿದ ಬಟ್ಟೆಗಳನ್ನು ರಫ್ತು ಮಾಡುತ್ತಿದ್ದ ಭಾರತವು ಅದನ್ನೂ ಆಮದು ಮಾಡಿಕೊಳ್ಳುವಂತಾಯಿತು, ಆರ್ಥಿಕತೆ ನೆಲಕಚ್ಚಿತು.

ಇಂಗ್ಲಿಷ್‌ನ ‘ಲೂಟ್’ ಪದವನ್ನು ಬ್ರಿಟಿಷರು ತಮ್ಮ ಎಂದಿನ ಚಾಳಿಯಂತೆ ಹಿಂದಿಯಿಂದ ಲೂಟಿ ಹೊಡೆದರು. ಈ ಲೂಟಿಕೋರತನಕ್ಕಾಗಿ ಬ್ರಿಟಿಷರು ಕನಿಷ್ಠ ಕ್ಷಮೆಯನ್ನಾದರೂ ಕೋರಬೇಕು ಹಾಗೂ ಮುಂದಿನ 200 ವರ್ಷಗಳವರೆಗೆ ಭಾರತಕ್ಕೆ ಪ್ರತಿವವರ್ಷ 1 ಪೌಂಡ್ ಹಣವನ್ನು ಸಾಂಕೇತಿಕವಾಗಿ ನೀಡಬೇಕು" ಎಂದಿದ್ದರು ಶಶಿ ತರೂರ್.

ಭಾರತದ ಆರ್ಥಿಕತೆಯ ಇತಿಹಾಸದಲ್ಲಿ 2014-15ರಿಂದ 2024-25ರವರೆಗಿನ ದಶಕವನ್ನು ‘ಸುವರ್ಣಯುಗದ ನಾಂದಿ’ ಎನ್ನಬಹುದು. ಅಂಕಿ-ಅಂಶಗಳೇ ಇದನ್ನು ಸಾಬೀತು ಪಡಿಸು ತ್ತಿವೆ. ಕೆಲವರು ಇದನ್ನು ‘ಭಾರತದಲ್ಲಿನ ಉದ್ಯೋಗರಹಿತ ಬೆಳವಣಿಗೆ’ ( Jobless growth in India) ಎಂದೂ ಟೀಕಿಸುವುದಿದೆ. ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಕಳೆದ ವರ್ಷ ಸಂಸತ್ತಿ ನಲ್ಲಿ, “ದೇಶ ಇಷ್ಟೊಂದು ವೇಗವಾಗಿ ಜಿಡಿಪಿ ಬೆಳವಣಿಗೆ ದಾಖಲಿಸು ತ್ತಿದ್ದರೂ, ಉದ್ಯೋಗ ಸೃಷ್ಟಿಯಲ್ಲೇಕೆ ಹಿಂದುಳಿದಿದೆ? ಭಾರತದಲ್ಲಿ ಉದ್ಯೋಗಿಗಳ/ಕಾರ್ಮಿಕರ ಸಂಖ್ಯೆ ಶೇ.46 ರಷ್ಟಿದ್ದು ಇದು ಬಹಳ ಕಡಿಮೆಯಾಗಿದೆ.

ಇದರಲ್ಲೂ ಪುರುಷರ ಸಂಖ್ಯೆ ಶೇ.69ರಷ್ಟಿದ್ದರೆ ಮಹಿಳೆಯರ ಸಂಖ್ಯೆ ಕೇವಲ ಶೇ.22ರಷ್ಟು. ಈ ಕೆಲಸಗಾರರಲ್ಲಿ ಶೇ.50ರಷ್ಟು ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ನೀವು ಶೇ.46ರಲ್ಲಿ ಶೇ.50ರಷ್ಟು ಮಂದಿ ಮಾತ್ರ ಕೆಲಸ ಮಾಡುತ್ತಿದ್ದರೆ, ವಾಸ್ತವವಾಗಿ ಶೇ.22 ಮಂದಿಗೆ ಮಾತ್ರ ಕೆಲಸವಿದೆ ಎಂದರ್ಥ. ಯಾಕೆ ಈ ಅಂಕಿ-ಅಂಶಗಳು ಸುಧಾರಿಸುತ್ತಿಲ್ಲ?" ಎಂದು ಪ್ರಶ್ನಿಸಿ ದ್ದರು.

ಹೀಗಿದ್ದರೂ, ಇಪಿಎಫ್‌ ಒ ಅಥವಾ ಇಎಸ್‌ಐಸಿಯ ಅಂಕಿ-ಅಂಶಗಳನ್ನು ನೋಡಿದರೆ, ಸಂಘಟಿತ ವಲಯದಲ್ಲಿ ಈ ವರ್ಷದ ಜನವರಿಯಲ್ಲಿ 18 ಲಕ್ಷ ಹೊಸಬರಿಗೆ ಉದ್ಯೋಗ ಸಿಕ್ಕಿದೆ. ‘ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್’ನ ಪೇರೋಲ್ ಡೇಟಾದ ಪ್ರಕಾರ, ಕಳೆದ 7 ವರ್ಷಗಳಲ್ಲಿ 6 ಕೋಟಿ ಹೊಸಬರು ‘ಇಪಿಎಫ್‌ ಒ’ಗೆ ಸಬ್‌ಸ್ಕ್ರೈಬರ್ ಗಳಾಗಿದ್ದಾರೆ.

ಒಂದು ಕಡೆ ಸಂಘಟಿತ ಅಥವಾ ಔಪಚಾರಿಕ ವಲಯದಲ್ಲಿ ಉದ್ಯೋಗಿಗಳ ಸಂಖ್ಯೆ ಏರಿಕೆ ಯಾಗಿದೆ. ಇದನ್ನು ಮತ್ತೊಂದು ಆಯಾಮದಲ್ಲೂ ನೋಡಬಹುದು. ಅಸಂಘಟಿತ ವಲಯದ ಉದ್ದಿಮೆಗಳು ಕ್ರಮೇಣ ಪಿಎಫ್, ಇಎಸ್‌ಐ ಇತ್ಯಾದಿ ಸೌಲಭ್ಯಗಳನ್ನು ನೀಡುವ ಮೂಲಕ ಸಂಘಟಿತ ವಲಯದ ಚೌಕಟ್ಟಿಗೆ ಬರುತ್ತಿವೆ. ‌ಹಾಗಿದ್ದರೆ ಉಳಿದವರು ಜೀವನೋ ಪಾಯಕ್ಕಾಗಿ ಏನು ಮಾಡುತ್ತಿದ್ದಾರೆ? ಈಗ ಬದಲಾವಣೆಯ ಟ್ರೆಂಡ್‌ಗಳನ್ನು ಸ್ಪಷ್ಟವಾಗಿ ಗಮನಿಸಬಹುದು.

ಬೆಂಗಳೂರಿನಂಥ ಮಹಾನಗರಗಳಿಂದ ಶುರುವಾಗಿ ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಮುಂತಾದ ಇತರ ನಗರ ಮತ್ತು ಪಟ್ಟಣಗಳಲ್ಲಿ ಹಲವು ವಿಧದ, ನವೀನ ಮಾದರಿಯ ಉದ್ಯೋಗಗಳು, ಸ್ವಂತ ಉದ್ಯೋಗಗಳು, ಅರೆಕಾಲಿಕ ಉದ್ಯೋಗಗಳು ಸಿಗುತ್ತಿವೆ. ಕಾಲೇಜು ಹುಡುಗರು-ಹುಡುಗಿಯರು ಶಾಪಿಂಗ್ ಮಾಲ್, ಪೆಟ್ರೋಲ್ ಪಂಪ್, ಸೂಪರ್ ಮಾರ್ಕೆಟ್, ರೆಸ್ಟೋರೆಂಟ್‌ಗಳಲ್ಲಿ ಅರೆಕಾಲಿಕ ಕೆಲಸಗಳನ್ನು ಮಾಡುತ್ತಾರೆ. ಅನೇಕರು ತಮ್ಮದೇ ಮನೆಯ ಅಂಗಡಿಗಳಲ್ಲಿ ಸಹಕರಿಸುತ್ತಾರೆ.

ಬೆಂಗಳೂರಿನಲ್ಲಿ ಇ-ಕಾಮರ್ಸ್ ಕಾರುಬಾರು ಹೆಚ್ಚು, ಅಲ್ಲೂ ಡೆಲಿವರಿ ಸಿಬ್ಬಂದಿಯಾಗಿ, ಓಲಾ, ಊಬರ್, ರೆಂಟಲ್ ಬೈಕ್ ಸೇವೆಗಳಲ್ಲಿ ಅರೆಕಾಲಿಕ ಕೆಲಸ ಮಾಡುವ ಅನೇಕ ಯುವ ಜನರಿದ್ದಾರೆ. ಎಷ್ಟೋ ಮಂದಿ ಮದುವೆ-ಮುಂಜಿ, ಸಭೆ-ಸಮಾರಂಭಗಳಲ್ಲಿ ಸ್ವಾಗತ, ಅಲಂಕಾರ, ಮೇಕಪ್, ಅತಿಥಿ ಸತ್ಕಾರ, ಭೋಜನ ವ್ಯವಸ್ಥೆ, ಸಾರಿಗೆ ಹೀಗೆ ವಿವಿಧ ಕೆಲಸ ಗಳಲ್ಲಿ ಸಂಕೋಚ ಬಿಟ್ಟು ಅರೆಕಾಲಿಕ ಕೆಲಸ ಮಾಡುತ್ತಾರೆ.

ಇಂಥ ಅರೆಕಾಲಿಕ/ ಫ್ರೀಲ್ಯಾನ್ಸ್ ದುಡಿಮೆಗಳಿಗೆ ಕಿಮ್ಮತ್ತೂ ಸಿಗುತ್ತಿದ್ದು ಅದು ಅನೇಕ ಮಂದಿಗೆ ಮತ್ತೊಂದು ಆದಾಯದ ಮೂಲವನ್ನೇ ಸೃಷ್ಟಿಸಿದೆ. ತಮ್ಮ ಕ್ರಿಯಾಶೀಲತೆ ಯಿಂದಾಗಿ ಯುಟ್ಯೂಬ್, ಡಿಜಿಟಲ್ ಮೀಡಿಯಾಗಳಲ್ಲೂ ಯಶಸ್ಸು ಗಳಿಸುವವರಿದ್ದಾರೆ. ವಿಡಿಯೋ ಎಡಿಟರ್, ಛಾಯಾಗ್ರಾಹಕರಿಗೆ, ಸಣ್ಣ ಪುಟ್ಟ ಲೋಕಲ್ ಮೀಡಿಯಾ ಸಂಸ್ಥೆ ಗಳಿಗೆ ಜಾಹೀರಾತು ತಂದುಕೊಡುವವರಿಗೆ ಕೂಡ ಬೇಡಿಕೆಯಿದೆ.

‘ಗಿಗಾ ಇಕಾನಮಿ’ ಎಂಬ ಹೊಸ ಪರಿಕಲ್ಪನೆಯ ಬಗ್ಗೆ ನೀವು ಕೇಳಿರಬಹುದು. ಕೇಂದ್ರ ಸರಕಾರದ ‘ಇ-ಶ್ರಮ್’ ವೆಬ್ ಪೋರ್ಟಲ್‌ನಲ್ಲಿ 2021ರಿಂದೀಚೆಗೆ 30 ಕೋಟಿಗೂ ಹೆಚ್ಚು ‘ಗಿಗ್’ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ನಿಮ್ಮ ಆಸಕ್ತಿ-ಅಭಿರುಚಿಯನ್ನೇ ವೃತ್ತಿಯಾಗಿಸಿಕೊಳ್ಳುವ ಅವಕಾಶಗಳಿಗೇನೂ ಕೊರತೆಯಿಲ್ಲ.

ಕೌಶಲ ಇರುವವರು, ಇಲ್ಲದವರು ಕೂಡ ಹುಡುಕಿದರೆ ಏನಾದರೊಂದು ಗಳಿಕೆಯ ಹಾದಿ ತೆರೆದುಕೊಳ್ಳುವ ಸಮಯವಿದು. ಏಕೆಂದರೆ ಭಾರತದ ಆರ್ಥಿಕತೆಯೀಗ ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಹೀಗಾಗಿ, “ಸರಕಾರಿ ಕೆಲಸವೇ ಸಿಗಬೇಕು, ದೊಡ್ಡ ಸಂಬಳದ ಕೆಲಸವೇ ಆಗಬೇಕು, ಖಾಸಗಿ ವಲಯವಾಗಿದ್ದರೆ ದೊಡ್ಡ ಬ್ರ್ಯಾಂಡ್‌ನ ಕಂಪನಿಯೇ ಆಗಬೇಕು" ಎಂಬಿತ್ಯಾದಿ ಭ್ರಮೆಗಳ ಪೊರೆಯನ್ನು ಕಳಚುವುದು ಉತ್ತಮ.

ಗಳಿಕೆಗೆ ನೂರಾರು ದಾರಿಗಳಿರುವಾಗ ಏನೂ ಮಾಡದೆ ಕೈಚೆಲ್ಲುವುದೇಕೆ? ಮುಖ್ಯವಾಗಿ ಮಧ್ಯಮ ವರ್ಗದ ಯುವಜನರು ಕೆಲಸದ ಬಗೆಗಿನ ಭ್ರಮೆ-ಕೀಳರಿಮೆ-ಮೇಲರಿಮೆಗಳನ್ನು ತ್ಯಜಿಸಬೇಕು. “ಡಿಗ್ರಿ ಓದಿ ಪಕೋಡಾ ಮಾರಬೇಕಾ?" ಎಂಬ ಪ್ರಶ್ನೆಯೇ ಬರಕೂಡದು. ನ್ಯಾಯವಾಗಿ ಗಳಿಸುವ ದಾರಿಯಲ್ಲಿ ನಡೆಯಲು ಪೋಷಕರೂ ಮಕ್ಕಳನ್ನು ಉತ್ತೇಜಿಸ ಬೇಕು.

ಅಮೆಜಾನ್‌ನಂಥ ದೊಡ್ಡ ಕಾರ್ಪೊರೇಟ್ ಕಂಪನಿಯಲ್ಲೂ 14000 ಮ್ಯಾನೇಜರ್‌ಗಳ ವಜಾಕ್ಕೆ ಇತ್ತೀಚೆಗೆ ಚಿಂತನೆ ನಡೆದಿದೆ. ಅಂದರೆ, ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ‘ಉದ್ಯೋಗ ಸುರಕ್ಷಿತ’ ಎಂಬ ಖಾತ್ರಿ ಈಗಿಲ್ಲ. ಇಂಥ ಸವಾಲುಗಳನ್ನು ಎದುರಿಸುವುದು ಹೇಗೆ? ಮೊದಲನೆಯದಾಗಿ, ಗಳಿಕೆಯ ದಾರಿ ಮತ್ತು ಉಳಿಕೆಯ ವಿಚಾರದಲ್ಲಿ ಸಾಧ್ಯ ವಾದಷ್ಟು ನಿಯಂತ್ರಣ ಸಾಧಿಸುವುದೇ ಈ ಸವಾಲುಗಳನ್ನು ಎದುರಿಸಲು ಇರುವ ಏಕೈಕ ದಾರಿ.

ಹೆಸರಾಂತ ಉದ್ಯಮಿ ಡಾ. ಎ.ವೇಲುಮಣಿ ಅವರು ಇತ್ತೀಚೆಗೆ ‘ಎಕ್ಸ್’ ಖಾತೆಯಲ್ಲಿ, “ಬೆಂಗಳೂರಿನಲ್ಲಿ ಟೆಕ್ಕಿಯೊಬ್ಬ ತಿಂಗಳಿಗೆ ಒಂದೂವರೆ ಲಕ್ಷ ರು. ಸಂಪಾದಿಸುತ್ತಿದ್ದರೂ, ಕುಟುಂಬದ ಪೋಷಣೆ ಸಾಲುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾನೆ. ಮಿತವ್ಯಯ ಸಾಧಿಸದಿದ್ದರೆ ಬದುಕು ಕಷ್ಟಕರವಾಗುತ್ತದೆ. ನೀವೆಷ್ಟು ಗಳಿಸುತ್ತೀರಿ ಎಂಬುದೇ ಯಶಸ್ಸಲ್ಲ, ನಿಮಗೆಷ್ಟು ಸಾಕಾಗುತ್ತದೆ ಎಂಬುದು ನಿರ್ಣಾಯಕ" ಎಂದು ಬರೆದುಕೊಂಡಿದ್ದಾರೆ. ಈ ಸತ್ಯವನ್ನು ಮನನ ಮಾಡಿಕೊಳ್ಳಬೇಕು.

ಎರಡನೆಯದಾಗಿ, ಗಳಿಕೆಯಲ್ಲಿ ಉಳಿಸಿದ್ದನ್ನು ವಿವೇಚನಾಯುತವಾಗಿ ಹೂಡಿಕೆ ಮಾಡು ವುದು ಮುಖ್ಯ. ಉದಾಹರಣೆಗೆ, ಹೊಸ ಆರ್ಥಿಕ ವರ್ಷದಿಂದ ವಾರ್ಷಿಕ 12 ಲಕ್ಷ ರು.ವರೆಗಿನ (ವೇತನದಾರರಿಗೆ 12.75 ಲಕ್ಷ ರು. ವರೆಗಿನ) ಆದಾಯಕ್ಕೆ ವೈಯಕ್ತಿಕ ಆದಾಯ ತೆರಿಗೆಯಿಲ್ಲ. ಹಾಗಾದರೆ ತೆರಿಗೆ ಉಳಿತಾಯದ ಹಣವನ್ನು ಹೇಗೆ ಹೂಡಿಕೆ ಮಾಡಬಹುದು? ಇದಕ್ಕಾಗಿ ಉಳಿತಾಯ ಮತ್ತು ಹೂಡಿಕೆಯ ವಿಧಾನಗಳನ್ನು ತಿಳಿದುಕೊಳ್ಳುವುದು, ಮಾರುಕಟ್ಟೆಯ ಟ್ರೆಂಡ್‌ಗಳನ್ನು ಗಮನಿಸುವುದು, ಹಣಕಾಸು ತಜ್ಞರ ಸಲಹೆ ಪಡೆಯುವುದು, ಸ್ವಂತ ಅಧ್ಯ ಯನ ಅವಶ್ಯಕ.

2025-26ರ ಆರ್ಥಿಕ ವರ್ಷದ ಮೊದಲ ದಿನದಿಂದಲೇ ಈ ನಿಟ್ಟಿನಲ್ಲಿ ಸಂಕಲ್ಪಿಸಿದರೆ ಅದು ಬದುಕಿನ ಪಥ ಬದಲಿಸುವ ಶ್ರೇಷ್ಠ ನಿರ್ಣಯವಾಗಬಹುದು. ಭಾರತದ ಜಿಡಿಪಿ ಬೆಳವಣಿಗೆಯ ಲಾಭ ಪಡೆಯಲು ಇದು ಅಗತ್ಯ.