ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಮುಂಚೂಣಿಯಲ್ಲಿ ಮೆರೆಯುತ್ತಲೇ ಮುಕ್ಕುತ್ತಿತ್ತಾ ಮಾರ್ಜಾಲ ?!

ಸದಾಶಯದೊಂದಿಗೆ ಶುರು ಮಾಡಲಾಗಿದ್ದ ಸಮಾಜ ಸೇವಾ ಸಂಸ್ಥೆಯ ಆವರಣವು ಕಳೆಗುಂದಿದೆ, ನಕಾರಾತ್ಮಕ ಛಾಯೆ ತಾಂಡವವಾಡುತ್ತಿದೆ ಎಂಬ ಅಹವಾಲು ಹೊತ್ತು ಅವಧೂತರ ಬಳಿಗೆ ಬರುವ ಸಂಸ್ಥೆಯ ಮ್ಯಾನೇಜರ್, ಇದಕ್ಕೆ ಪರಿಹಾರೋಪಾಯವನ್ನು ಸೂಚಿಸುವಂತೆ ಅವಧೂತರಲ್ಲಿ ಕೋರಿ ಕೊಳ್ಳುತ್ತಾರೆ. ಸಂಸ್ಥೆಯ ಆವರಣದಲ್ಲಿ ಸೇರಿಕೊಂಡಿರುವ ಒಂದು ‘ಕಳ್ಳ’ಬೆಕ್ಕನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವಧೂತರು ಸೂಚಿಸುತ್ತಾರೆ. ಅಂತೆಯೇ ಸದರಿ ಕಳ್ಳಬೆಕ್ಕನ್ನು ಹುಡುಕಲು ಹರಸಾಹಸಪಟ್ಟರೂ ಸಿಗದೆ ವಿಫಲರಾದ ಮ್ಯಾನೇಜರ್, ಮತ್ತೊಮ್ಮೆ ಅವಧೂತರಲ್ಲಿಗೆ ಬಂದು ನಡೆದುದನ್ನು ಹೇಳುತ್ತಾರೆ

ಮುಂಚೂಣಿಯಲ್ಲಿ ಮೆರೆಯುತ್ತಲೇ ಮುಕ್ಕುತ್ತಿತ್ತಾ ಮಾರ್ಜಾಲ ?!

ರಸದೌತಣ (ಭಾಗ-2)

naadigru@gmail.com

ಸದಾಶಯದೊಂದಿಗೆ ಶುರು ಮಾಡಲಾಗಿದ್ದ ಸಮಾಜ ಸೇವಾ ಸಂಸ್ಥೆಯ ಆವರಣವು ಕಳೆಗುಂದಿದೆ, ನಕಾರಾತ್ಮಕ ಛಾಯೆ ತಾಂಡವವಾಡುತ್ತಿದೆ ಎಂಬ ಅಹವಾಲು ಹೊತ್ತು ಅವಧೂತರ ಬಳಿಗೆ ಬರುವ ಸಂಸ್ಥೆಯ ಮ್ಯಾನೇಜರ್, ಇದಕ್ಕೆ ಪರಿಹಾರೋಪಾಯವನ್ನು ಸೂಚಿಸುವಂತೆ ಅವಧೂತರಲ್ಲಿ ಕೋರಿ ಕೊಳ್ಳುತ್ತಾರೆ. ಸಂಸ್ಥೆಯ ಆವರಣದಲ್ಲಿ ಸೇರಿಕೊಂಡಿರುವ ಒಂದು ‘ಕಳ್ಳ’ಬೆಕ್ಕನ್ನು ಅಲ್ಲಿಂದ ಜಾಗ ಖಾಲಿ ಮಾಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಅವಧೂತರು ಸೂಚಿಸುತ್ತಾರೆ. ಅಂತೆಯೇ ಸದರಿ ಕಳ್ಳಬೆಕ್ಕನ್ನು ಹುಡುಕಲು ಹರಸಾಹಸಪಟ್ಟರೂ ಸಿಗದೆ ವಿಫಲರಾದ ಮ್ಯಾನೇಜರ್, ಮತ್ತೊಮ್ಮೆ ಅವಧೂತರಲ್ಲಿಗೆ ಬಂದು ನಡೆದುದನ್ನು ಹೇಳುತ್ತಾರೆ. ಆಗ ಅವಧೂತರು, ನಕಾರಾತ್ಮಕ ಶಕ್ತಿಯ ನಿವಾರಣಾ ಉಪಕ್ರಮದ ಒಂದು ಭಾಗವಾಗಿ ಶಿವರಾತ್ರಿಯಂದು ಸಂಸ್ಥೆಯ ಆವರಣದಲ್ಲಿ ಅಖಂಡ ಶಿವಭಜನೆ ಮಾಡಿಸುತ್ತಾರೆ.

ಜತೆಗೆ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಪ್ರಾರ್ಥಿಸಲೆಂದು ಹಾಗೂ ಉನ್ನತ ಅಧ್ಯಯನಕ್ಕೆಂದು ಅಲ್ಲಿನ ಮಠದ ಸ್ವಾಮೀಜಿಯನ್ನು ವಾರಾಣಸಿಗೆ ತೆರಳುವಂತೆ ಸೂಚಿಸಿ, “ಸಂಸ್ಥೆಯ ಆವರಣದಲ್ಲಿ ದಿವ್ಯತೆ ತುಂಬಿಕೊಳ್ಳಲಿದೆ" ಎಂದು ಮ್ಯಾನೇಜರ್‌ಗೆ ಅಭಯವಿತ್ತು ಅಲ್ಲಿಂದ ಹೊರಡುತ್ತಾರೆ. ಸಮಸ್ಯೆಯ ಪರಿಹಾರದ ಮಾರ್ಗೋಪಾಯವನ್ನು ತೋರಿದ್ದಕ್ಕೆ ಅಲ್ಲಿನ ವಿದ್ಯಾರ್ಥಿನಿಲಯದ ನಿವಾಸಿಯಾಗಿದ್ದ 14ರ ಹುಡುಗಿಯೊಬ್ಬಳು ಅವಧೂತರಿಗೆ ಕೃತಜ್ಞತೆ ಸಲ್ಲಿಸಿ ನಮಸ್ಕರಿಸುತ್ತಾಳೆ. ಮುಂದಕ್ಕೆ ಓದಿ...

***

ಕಾರಿನ ಬಳಿ ಬಂದು ಮತ್ತೊಮ್ಮೆ ನಮಸ್ಕರಿಸಿದ ಆ ಹುಡುಗಿಯ ಕಂಗಳಲ್ಲಿ ತುಂಬಿದ್ದ ಅಬೋಧ ಭಾಷೆ ಮತ್ತು ಭಾವವನ್ನು ಗ್ರಹಿಸಿ ನಸುನಕ್ಕ ಅವಧೂತರು ಮತ್ತೊಮ್ಮೆ ಹಸ್ತದಲ್ಲಿ ಅಭಯಮುದ್ರೆ ತೋರಿಸಿ, “ಇನ್ನೇನೂ ಚಿಂತೆಯಿಲ್ಲ, ಚೆನ್ನಾಗಿ ಓದಿ ಈ ಸಂಸ್ಥೆಗೂ, ನಿಮ್ಮ ಹೆತ್ತವರಿಗೂ ಹೆಸರು ತರಬೇಕು.. ಆಯ್ತಾ ತಾಯೀ?!" ಎಂದರು ಆಪ್ಯಾಯತೆಯಿಂದ. “ನೀವು ಹೇಳಿದ ಹಾಗೇ ಮಾಡ್ತೀನಿ ಬುದ್ಧೀ" ಎಂದು ನಿಧಾನ ಗತಿಯಲ್ಲಿ ಉಲಿದಳು ಆ ಹುಡುಗಿ. ಅವಳು ಹಾಗೆ ಹೇಳಿದ್ದನ್ನು ಮೊದಲ ಬಾರಿಗೆ ಕೇಳಿಸಿಕೊಂಡವರು, ‘ಈ ಹುಡುಗಿ ಈಗಷ್ಟೇ ಮಾತು ಕಲಿತಿರಬೇಕು, ಅಥವಾ ಈಕೆಯ ದನಿ ಇದುವರೆಗೂ ದಮನಿತವಾಗಿದ್ದಿರಬೇಕು’ ಎಂದು ಭಾವಿಸುವಂತಿತ್ತು. ಆಕೆಯ ವಿನಯಭರಿತ ನುಡಿಗೆ ಮೆಚ್ಚುಗೆ ಎಂಬಂತೆ ಅವಧೂತರು ತಮ್ಮ ಜೋಳಿಗೆಯಿಂದ ಒಂದು ಮುಷ್ಟಿ ಒಣದ್ರಾಕ್ಷಿಯನ್ನು ತೆಗೆದು ಆಕೆಯ ಕೈಗೆ ಹಾಕಿ, “ಒಳ್ಳೇದಾಗ್ಲಿ ತಾಯೀ..." ಎಂದು ಮತ್ತೊಮ್ಮೆ ಹರಸಿದರು. ಸಂಸ್ಥೆಯ ಆವರಣದಿಂದ ಕಾರು ಹೊರಟಿತು. ಅದು ತನ್ನ ಕಣ್ಣ ನೋಟದ ವ್ಯಾಪ್ತಿಯಿಂದ ಮಸುಕಾಗುವವ ರೆಗೂ ಆ ಹುಡುಗಿ ಕಾರಿನತ್ತಲೇ ನೋಡುತ್ತಾ ಕೈಬೀಸುತ್ತಲೇ ಇದ್ದಳು. ಕಿಟಕಿ ಪಕ್ಕ ಕೂತಿದ್ದ ಅವಧೂತರು ಅದಕ್ಕೆ ಪ್ರತಿಯಾಗಿ ಹಸನ್ಮುಖಿಯಾಗಿ ಅಭಯಮುದ್ರೆ ಯನ್ನು ತೋರಿಸುತ್ತಲೇ ಇದ್ದರು...

ಇದನ್ನೂ ಓದಿ: Yagati Raghu Naadig Column: ಮಬ್ಬಾಗಿ ಮುಸುಕಿತ್ತು ಮಠದೊಳಗಿನ ಮಾರ್ಜಾಲ..!

ಕಾರು ಪಟ್ಟಣದ ಹೊರವಲಯ ಪ್ರವೇಶಿಸುವವರೆಗೂ ಅದರೊಳಗೆ ಮೌನಸಾಮ್ರಾಜ್ಯ. ಅದನ್ನು ಮುರಿಯುವವರಂತೆ ಮಾತಿಗಿಳಿದ ಅವಧೂತರು ಶಿಷ್ಯರೊಬ್ಬರ ಕಡೆಗೆ ತಿರುಗಿ, “ಸಂಸ್ಥೆಯವರಿಂದ ಬೀಳ್ಕೊಂಡು ಕಾರು ಹತ್ತಿದಾಗ ನೀವು ಏನೋ ಕೇಳಿದ ಹಾಗಿತ್ತಲ್ಲಾ ರಾಯರೇ? ಏನದು...?" ಎಂದರು ತಮ್ಮ ಎಂದಿನ ಹಾಸ್ಯಭರಿತ ದನಿಯಲ್ಲಿ.

ಅಷ್ಟು ಹೊತ್ತಿಗೆ, ಅವಧೂತರ ನಿಗೂಢ ನಡೆಯಿಂದಾಗಿ ಅಯೋಮಯಗೊಂಡಿದ್ದ ಆ ಶಿಷ್ಯರು ಇದ್ದಬದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿ, “ಗುರುಗಳೇ, ಚಂಚಲಮನಸ್ಸು ಎಂಬ ‘ಕಳ್ಳ’ಬೆಕ್ಕನ್ನು ಸಂಸ್ಥೆಯಿಂದ ಓಡಿಸಿ, ದೈವ ಸ್ಮರಣೆಗೆ ಓಗೊಡುವ ‘ಸ್ಥಾಯಿ’ ಮನಸ್ಸನ್ನು ಗಟ್ಟಿಯಾಗಿ ಅಪ್ಪಿದರೆ ಸಂಸ್ಥೆಯ ವಾತಾವರಣ ತಾನಾಗೇ ಶುದ್ಧಿಯಾಗುತ್ತೆ ಅಂತ ಆ ಮ್ಯಾನೇಜರ್ ರಿಗೆ, ಅವರು ಒಂದು ತಿಂಗಳ ಹಿಂದೆ ಬಂದಾಗಲೇ ನೀವು ಸಲಹೆ ನೀಡಬಹುದಿತ್ತು. ಹೀಗೆ ನೇರವಾಗಿ ಹೇಳಿದ್ದಿದ್ದರೆ ಅವರು ಹಾಗೇ ಮಾಡ್ತಾ ಇದ್ರೋ ಏನೋ? ಅದನ್ನು ಬಿಟ್ಟು, ‘ಕಳ್ಳಬೆಕ್ಕನ್ನು ಹುಡುಕಿ’ ಅಂತ ಒಗಟಾಗಿ ಹೇಳಿ ದ್ದೇಕೆ?" ಎಂದು ತಮ್ಮ ಪ್ರಶ್ನೆಯನ್ನು ಪುನರಾವರ್ತಿಸಿದರು.

ಆಗ ಅವಧೂತರು, “ಅಯ್ಯಾ, ‘ಧರ್ಮಸೂಕ್ಷ್ಮ’ ಅಂತ ಇರುತ್ತೆ. ಅದನ್ನು ನಾವು ಗಮನದಲ್ಲಿ ಇಟ್ಟುಕೊಂಡಿರಬೇಕು. ಕೆಲ ವಿಷಯಗಳನ್ನು ಹಾಗೆಲ್ಲ ಬಹಿರಂಗವಾಗಿ ಹೇಳಲಾಗದು. ನೀವೆಲ್ಲಾ ನನ್ನಲ್ಲಿ ಶ್ರದ್ಧಾಭಕ್ತಿ ಇಟ್ಟಿರುವವರು, ಈ ಸೂಕ್ಷ್ಮವನ್ನು ಬಯಲುಮಾಡುವುದಿಲ್ಲ ಎಂಬ ವಿಶ್ವಾಸ ವಿರುವುದರಿಂದಲೇ ಆ ಒಗಟನ್ನು ಹೇಳ್ತೀನಿ ಕೇಳಿ. ಮ್ಯಾನೇಜರ್ ಕಳೆದ ತಿಂಗಳು ಬಂದು ಸಮಸ್ಯೆ ಹೇಳಿಕೊಂಡಾಗಲೇ, ಅದಕ್ಕೆ ಕಾರಣವೇನು ಎಂಬುದರ ಚಿತ್ರಣ ನಮ್ಮ ಕಣ್ಣೆದುರು ಮೂಡಿತ್ತು. ಆದರೆ ಅದನ್ನು ಎಲ್ಲರೆದುರು ಆ ಮ್ಯಾನೇಜರ್‌ರಿಗೆ ಹೇಳುವಂತಿರಲಿಲ್ಲ. ಹೀಗಾಗಿ, ‘ಸಂಸ್ಥೆಯ ಆವರಣದಲ್ಲಿರುವ ಕಳ್ಳಬೆಕ್ಕನ್ನು ಓಡಿಸಿದರೆ ಸಮಸ್ಯೆ ಪರಿಹಾರವಾಗುತ್ತೆ’ ಅಂತ ಸೂಚ್ಯವಾಗಿ ಹೇಳಿದ್ದೆ. ಆದರೆ ಅವರು ಸಂಸ್ಥೆಗೆ ಮರಳಿ ಅಂಥ ಬೆಕ್ಕನ್ನು ಹುಡುಕಹೊರಟರೇ ವಿನಾ ಆ ನಿಗೂಢ ಮಾತನ್ನು ವಿಶ್ಲೇಷಿಸಲು ಯತ್ನಿಸಲಿಲ್ಲ. ಸಂಸ್ಥೆಯ ಆವರಣದಲ್ಲಿ ವಿವಿಧ ಕಾರಣಗಳಿಗೆ ಆಶ್ರಯ ಪಡೆದಿರುವವರನ್ನು ಈ ಕುರಿತು ವಿಚಾರಿಸಿದ್ದರೆ ಆ ‘ಕಳ್ಳಬೆಕ್ಕು’ ಯಾವುದೆಂದು ಗೊತ್ತಾಗಿ ಬಿಡು ತ್ತಿತ್ತು..." ಎಂದು ಹೇಳುವ ಮೂಲಕ ನಿಗೂಢತೆಯ ಸಂಪುಟಕ್ಕೆ ಮತ್ತೊಂದು ಅಧ್ಯಾಯವನ್ನು ಸೇರಿಸಿಬಿಟ್ಟರು!!

72 ಋ

ಅದೇ ಅವಧೂತರ ವೈಖರಿ. ಅವರು ಯಾವ ವಿಷಯವನ್ನೂ ‘ಸುಲಭಕ್ಕೆ ಬಿಟ್ಟುಕೊಡುವವರಲ್ಲ’, ತಮ್ಮನ್ನು ಉತ್ಕಟವಾಗಿ ನೆಚ್ಚಿದವರನ್ನೂ ‘ಸುಲಭಕ್ಕೆ ಬಿಟ್ಟುಕೊಡುವವರಲ್ಲ’..! ಆದರೆ, ಅವರ ಜತೆ ಪಯಣಿಸುತ್ತಿದ್ದ ಶಿಷ್ಯಗಣದ ಪಾಲಿಗೆ ಅದು ‘ಧರ್ಮಸೂಕ್ಷ್ಮ’ದ ಲೇಪವಿರುವ ಪ್ರಸಂಗವಾಗದೆ, ನಿಗೂಢಸುಳಿಯೊಳಗೆ ಮತ್ತಷ್ಟು ಎಳೆದುಕೊಳ್ಳುವ ‘ಪತ್ತೇದಾರಿ ಪ್ರಸಂಗ’ ಆಗಿಬಿಟ್ಟಿತ್ತು! ಅವಧೂತರು ಹೀಗೆ ಲೋಕಾಭಿರಾಮವಾಗಿ ಹರಟುತ್ತಿರುವಾಗಲೇ ಆ ನಿಗೂಢತೆಗೆ ನಿರ್ಣಾಯಕ ಅಂತ್ಯ ಹಾಡಬೇಕು ಎಂದುಭಾವಿಸಿದ ಆ ಶಿಷ್ಯರು, “ಗುರುಗಳೇ, ‘ವಿದ್ಯೆಯಾಗಲೀ, ಹಣವಾಗಲೀ, ಕಾರ್ಯಕೌಶಲವಾಗಲೀ ಒಂದೇ ಗುಕ್ಕಿಗೆ ದಕ್ಕಿಬಿಡುವುದಿಲ್ಲ, ಅದಕ್ಕೆ ಸಾಕಷ್ಟು ಚಪ್ಪಲಿ ಸವೆಸಬೇಕು, ಬೆವರು ಸುರಿಸಬೇಕು ಕಣ್ರಯ್ಯಾ’ ಅಂತ ನೀವು ಹೇಳೋದನ್ನ ಕೇಳಿದ್ದೇವೆ. ಆದರೆ, ಈ ಸಂಸ್ಥೆಗೆ ಸಂಬಂಧಿಸಿ ಕಳೆದ ಒಂದು ತಿಂಗಳಿಂದ ನೀವಾಡುತ್ತಿರುವ ‘ಲೀಲಾ-ವಿನೋದ’ ಗಳಿಗೆ ಏನೋ ಕಾರಣ ಇದ್ದೇ ಇರುತ್ತೇ ಅನ್ನೋದು ಇಷ್ಟು ದಿನ ನಿಮ್ಮೊಂದಿಗೆ ಪಳಗಿರುವ ನಮಗೆ ಅಷ್ಟಿಷ್ಟಾದರೂ ಗೊತ್ತಾ ಗಿರೋ ಸೂಕ್ಷ್ಮ. ಗುರುಗಳೇ, ಸಂಸ್ಥೆಯ ಆವರಣದಲ್ಲಿರೋ ಆ ‘ಕಳ್ಳಬೆಕ್ಕು’ ಯಾವುದು? ಅದು ಸಿಕ್ಕಿ ಬೀಳುತ್ತಾ? ಪಶ್ಚಾತ್ತಾಪಪಟ್ಟು ನಿಮ್ಮ ಪಾದಕ್ಕೆರಗಿ ಕಣ್ಣೀರುಗರೆದು, ಕ್ಷಮಿಸುವಂತೆ ಕೋರುತ್ತಾ? ಈ ಕಥೆ ಮುಂದೆ ಸಾಗುವ ಪರಿಯೇನು?" ಎಂದೆಲ್ಲಾ ಸರಣಿ ಪ್ರಶ್ನೆಯನ್ನೇ ಕೇಳಿ ಬಿಟ್ಟರು.

ತಮ್ಮ ಅನುಯಾಯಿಗಳು/ಶಿಷ್ಯರು ಹೀಗೆ ಬಿಡುಬೀಸಾಗಿ ಮಾತಾಡುವುದನ್ನು ಕೆಲ ಧರ್ಮಗುರು ಗಳು, ಸ್ವಾಮೀಜಿ ಗಳು ಸಾಮಾನ್ಯವಾಗಿ ಸಹಿಸುವುದಿಲ್ಲ; ಅವರ ವಲಯದಲ್ಲಿ ಒಂದು ‘ಅಘೋಷಿತ’ ಗಂಭೀರ ವಾತಾವರಣವೇ ಕೆನೆಗಟ್ಟಿರುತ್ತದೆ. ಆದರೆ ಅವಧೂತರು ಹಾಗಲ್ಲ, ಅವರು ಲೋಕವಿಹಾರಿ, ಮನೋ ವಿಹಾರಿ. ಇಂಥ ಯಾವ ಕಟ್ಟುಪಾಡುಗಳಿಲ್ಲದ, ಯಾರಿಗೂ ಇಂಥ ಕಟ್ಟುಪಾಡು ವಿಧಿಸದ ಸೀದಾ-ಸಾದಾ ‘ಸಾಧಕರು’ ಅವರು. ಹಾಗಂತ, ‘ಸ್ವಾತಂತ್ರ್ಯ’ದ ಹೆಸರಿನಲ್ಲಿ ‘ಸ್ವೇಚ್ಛೆ’ಗೆ ಅವರು ಅವಕಾಶ ನೀಡುತ್ತಿರಲಿಲ್ಲ. ಅಂತೆಯೇ, ಶಿಷ್ಯರಿಂದ ಕಾಲಾನುಕಾಲಕ್ಕೆ ಇಂಥ ಜಿಜ್ಞಾಸೆಗಳು, ಸಂದೇಹಗಳು ಹೊಮ್ಮುವುದಕ್ಕೆ ಅವರು ಅನುವು ಮಾಡಿಕೊಡುತ್ತಿದ್ದರು. ಲೋಕಾಭಿರಾಮದ ಮಾತುಗಾರಿಕೆಯ ನೆಲೆಯಲ್ಲೇ ಅವಕ್ಕೆ ಉತ್ತರವನ್ನೂ ನೀಡಿ, ಗೊಂದಲವನ್ನು ಪರಿಹರಿಸುತ್ತಿದ್ದರು. ಅಂತೆಯೇ ಸಂಸ್ಥೆಯಲ್ಲಿನ ಬೆಳವಣಿಗೆಗೆ ಸಂಬಂಧಿಸಿ ತಮ್ಮ ಶಿಷ್ಯರು ಕೇಳಿದ ಸರಣಿ ಪ್ರಶ್ನೆಗೆ ಉತ್ತರಿಸಲು ಅವರು ಉದ್ಯುಕ್ತರಾಗು ತ್ತಿದ್ದಂತೆಯೇ, ಮತ್ತೊಬ್ಬ ಶಿಷ್ಯರ ಮೊಬೈಲ್ ಫೋನು ರಿಂಗಣಿಸಿತು. ಗುರುಗಳ ಜತೆಗಿನ ಮಾತುಕತೆ ಯಲ್ಲಿ ‘ರಹಸ್ಯದ ಉತ್ಖನನ’ಕ್ಕೆ ಇನ್ನೇನು ಸಜ್ಜಾಗಿರು ವಾಗ ಹೀಗೆ ಬಂದ ಕರೆಯನ್ನು ಸ್ವೀಕರಿಸು ವುದೋ ಬಿಡುವುದೋ ಎಂಬ ಗೊಂದಲದಲ್ಲಿ ಶಿಷ್ಯರು ಹೊಯ್ದಾಡುತ್ತಿದ್ದಾಗ ಅವಧೂತರೇ, “ಕರೆ ಸ್ವೀಕರಿಸಿ ಸ್ವಾಮೀ..." ಎನ್ನುತ್ತಾ ನಿಗೂಢ ನಗೆ ನಕ್ಕರು.

ಶಿಷ್ಯರು ಕರೆ ಸ್ವೀಕರಿಸುತ್ತಿದ್ದಂತೆ ಆ ಕಡೆಯಿಂದ, “ಸಮಾಜ ಸೇವಾ ಸಂಸ್ಥೆಯ ಮ್ಯಾನೇಜರ್ ಮಾತಾಡ್ತಾ ಇದ್ದೀನಿ. ಅವಧೂತರಿಗೆ ಸ್ವಲ್ಪ ಫೋನ್ ಕೊಡ್ತೀರಾ?" ಎಂದು ಕೇಳಿದರು ಆರ್ತರಾಗಿ. ‘ಒಂದು ನಿಮಿಷ’ ಎಂದ ಶಿಷ್ಯರು ಮೆಲುದನಿ ಯಲ್ಲಿ, “ಗುರುಗಳೇ, ಮ್ಯಾನೇಜರ್" ಎಂದರು. ‘ಸ್ಪೀಕರ್ ಆನ್ ಮಾಡಿ" ಎಂದ ಅವಧೂತರು, “ಹೇಳಿ ರಾಯರೇ, ಏನು ಸಮಾಚಾರಾ...?" ಎಂದು ಪ್ರಶ್ನಿಸಿದರು ಮತ್ತದೇ ಕಿಲಾಡಿತನದ ದನಿಯಲ್ಲಿ.

ಅತ್ತ ಕಡೆಯಿಂದ ಮ್ಯಾನೇಜರ್ ಬಿಕ್ಕಳಿಸಿ ಅಳುತ್ತಾ, “ಸಂಸ್ಥೆಯ ಆವರಣದಲ್ಲಿರೋ ಕಳ್ಳಬೆಕ್ಕನ್ನ ಹುಡುಕಿ ಹೊರ ಹಾಕಿ ಎಂದು ನೀವು ಹೇಳಿದಾಗ, ನನಗೆ ಮೊದಲು ಅರ್ಥವಾಗಲಿಲ್ಲ ಬುದ್ಧೀ. ನನ್ನ ತಪ್ಪು ಏನೆಂದು ಈಗ ಗೊತ್ತಾಯಿತು. ಹೊಟ್ಟೆಗೆ ಹಾಕ್ಕೊಳ್ಳಿ. ಇನ್ನು ಮೇಲೆ ಇಂಥ ತಪ್ಪು ನಮ್ಮ ಕಡೆಯಿಂದ ಆಗೋಲ್ಲ ಬುದ್ಧೀ. ಕರುಣೆ ತೋರಿ ನನ್ನಪ್ಪಾ..." ಎಂದು ಅಲವತ್ತುಕೊಳ್ಳತೊಡಗಿದರು. ಈ ಮಾತಿಗೆ “ಆಯ್ತು, ಆಯ್ತು" ಎಂದಷ್ಟೇ ಹೇಳಿದ ಅವಧೂತರು, ಕರೆಯನ್ನು ತುಂಡರಿಸುವಂತೆ ಶಿಷ್ಯರಿಗೆ ಸೂಚಿಸಿದರು.

ಕೆಲವೇ ಹೊತ್ತಿನ ಮುಂಚೆ, ‘ಸಂಸ್ಥೆಯೊಳಗಿನ ಕಳ್ಳಬೆಕ್ಕು ಯಾರು?’ ಎಂಬ ವಿಷಯದಲ್ಲಿನ ‘ಪತ್ತೇದಾರಿ ರಹಸ್ಯ’ವನ್ನು ಕೇಳಲು ತವಕಿಸುತ್ತಿದ್ದ ಶಿಷ್ಯರೆಲ್ಲರೂ ಅಪ್ರತಿಭರಾಗಿದ್ದರು! ಕಾರಿನೊಳಗೆ ಮತ್ತೊಮ್ಮೆ ಮೌನಸಾಮ್ರಾಜ್ಯ... ಹಾಗೇ ಕಿಟಕಿಯಿಂದಾಚೆ ಒಮ್ಮೆ ಕಣ್ಣು ಹಾಯಿಸಿದ ಅವಧೂತರಿಗೆ ರಸ್ತೆಬದಿಯಲ್ಲಿನ ಮರಗಳು ಹಿಂದಿದಕ್ಕೆ ಓಡುತ್ತಿರುವುದು ಕಾಣಿಸಿತು. ಅಂತೆಯೇ ಅವರ ಮನಸ್ಸೂ ‘-ಷ್‌ಬ್ಯಾಕ್’ಗೆ ತೆರಳಿತು...!

(ಮುಂದುವರಿಯುವುದು)