ರಾಜಬೀದಿ
ವಿನಾಯಕ ಮಠಪತಿ
ಅದು 2005ರ ಕಾಲಘಟ್ಟ. ಸರಿಸುಮಾರು ಎರಡು ದಶಕಗಳ ಹಿಂದೆ ನಡೆದ ಘಟನೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಆಡಳಿತಾವಽ. ಅಂದಿನ ಉಪಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಜನತಾದಳದ ನೇತಾರ ದೇವೇಗೌಡರ ಜೊತೆ ಮುನಿಸಿಕೊಂಡ ಸಂದರ್ಭ. ರಾಜಕೀಯ ಗುರುವಿನ ಮಾತಿಗೆ ತಲೆಕೊಡದೆ ಹುಬ್ಬಳ್ಳಿಯ ಅಹಿಂದ ಸಮಾವೇಶದಲ್ಲಿ ಭಾಗಿಯಾಗುವ ಮೂಲಕ ಸಿದ್ದರಾಮಯ್ಯ ರಾಜಕೀಯವಾಗಿ ಹೊಸ ಹಾದಿ ಹಿಡಿದರು. ಇವರ ಪಟ್ಟಾ ಶಿಷ್ಯರಾಗಿದ್ದ ಸತೀಶ್ ಜಾರಕಿಹೊಳಿ ಮಂತ್ರಿ ಪದವಿ ತೊರೆದು ಗುರುವಿನ ಬೆಂಬಲಕ್ಕೆ ನಿಂತಿದ್ದು ಈಗ ಇತಿಹಾಸ. ಹೌದು.
ಸತೀಶ್ ಜಾರಕಿಹೊಳಿ, ರಾಜ್ಯ ರಾಜಕಾರಣದಲ್ಲಿ ಪ್ರಭಾವಶಾಲಿ ಹೆಸರು. ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಿಕೊಂಡಿರುವ ಇವರನ್ನು ಮುಂದಿನ ಮುಖ್ಯಮಂತ್ರಿ ಎಂದೇ ಭಾವಿಸ ಲಾಗುತ್ತದೆ. ಅಹಿಂದ ಚಳುವಳಿಯ ಮೂಲಕ ಸಿದ್ದರಾಮಯ್ಯ ಜೊತೆ ಹೆಜ್ಜೆ ಹಾಕಿದ್ದಾರೆ. ಸುದೀರ್ಘ ರಾಜಕೀಯ ಬದುಕಿನುದ್ದಕ್ಕೂ ಸಿದ್ದರಾಮಯ್ಯ ಹಾಗೂ ಜಾರಕಿಹೊಳಿ ನಡುವೆ ಆಪ್ತತೆ ಎದ್ದು ಕಾಣುತ್ತದೆ.
ಒಂದು ಹೆಜ್ಜೆ ಮುಂದೆ ಹೋದ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತಿಂದ್ರ ಅವರು ತಂದೆಯ ನಂತರ ಅಹಿಂದ ಚಳುವಳಿಯ ಮುಂದಾಳತ್ವವನ್ನು ಸತೀಶ್ ಜಾರಕಿಹೊಳಿ ನಿರ್ವಹಿಸುತ್ತಾರೆ ಎಂಬಂತಹ ಮಾತನ್ನು ಆಡಿದ್ದರು. ಸತೀಶ್ ಜಾರಕಿಹೊಳಿ ಅವರು ತಮ್ಮ ಸುದೀರ್ಘ ರಾಜಕೀಯ ದಾರಿಯಲ್ಲಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡೆ ಅಹಿಂದ ಸಂಘಟನೆಯ ಸಿದ್ದರಾಮಯ್ಯ ನಂತರದ ನಾಯಕರಾಗಿ ಬೆಳೆಯುತ್ತಾ ಬಂದಿದ್ದರು.
ಇದನ್ನೂ ಓದಿ: Vinayaka Mathapathy Column: ಜಿರಳೆ ಸಹವಾಸ ಕೈ ಬಿಟ್ಟು ಸೈದ್ಧಾಂತಿಕ ದೋಣಿ ಏರಲಿ
ಅಷ್ಟೇ ಅಲ್ಲದೆ ಹಿಂದುಳಿದ ವರ್ಗಗಳನ್ನು ಒಟ್ಟುಗೂಡಿಸುವ ಮೂಲಕ ತಮ್ಮ ಪ್ರಗತಿಪರ ಚಿಂತನೆಗಳಿಂದ ವಿಭಿನ್ನ ನಾಯಕರಾಗಿ ಸತೀಶ್ ಗುರುತಿಸಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಸತೀಶ್ ಜಾರಕಿಹೊಳಿ ರಾಜಕೀಯ ಬದುಕಿನ ಉಚ್ಛ್ರಾಯ ಸ್ಥಿತಿ ನಿಧಾನಕ್ಕೆ ಕಡಿಮೆಯಾಗತೊಡಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಯಾರೂ ಊಹಿಸದ ಬೆಳವಣಿಗೆ ಕಾಂಗ್ರೆಸ್‌ನಲ್ಲಿ ನಡೆದಿವೆ.
ಸತೀಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯನವರ ನಡುವಿನ ಮುನಿಸು ಸದ್ಯ ಕೆಂಡವಾಗಿದ್ದು ಸಾಹುಕಾರರ ರಾಜಕೀಯ ಬದುಕಿಗೆ ಇದೆಷ್ಟು ಪರಿಣಾಮ ಬೀರಬಹುದು ಎಂಬುದನ್ನು ಊಹಿಸಲು ಅಸಾಧ್ಯ. ಸತೀಶ್ ಜಾರಕಿಹೊಳಿ ಹಾಗೂ ಸಿದ್ದರಾಮಯ್ಯ ನಡುವಿನ ಆಪ್ತತೆಯ ಕೊಂಡಿ ಯಾವ ಕಾರಣಕ್ಕಾಗಿ ಕಳಚಿತು ಎಂಬ ಪ್ರಶ್ನೆಗೆ ನಾನಾ ಬಗೆಯ ಊಹಾತ್ಮಕ ಉತ್ತರಗಳು ದೊರೆಯುತ್ತವೆ. ಆದರೆ ಒಬ್ಬರಿಗೊಬ್ಬರು ಮುಖ ನೋಡದ ಮಟ್ಟಿಗೆ ಸಂಬಂಧಗಳು ಹಾಳಾಗಲು ಏನೋ ದೊಡ್ಡ ಘಟನೆ ನಡೆದಿರುವುದಂತು ನಿಜ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೂಲಕ ಮುಂದಿನ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸತೀಶ್ ಜಾರಕಿಹೊಳಿ ಕೇವಲ ಮಂತ್ರಿಸ್ಥಾನಕ್ಕೆ ತೃಪ್ತಿ ಪಡುವ ಪರಿಸ್ಥಿತಿಗೆ ಸಿದ್ದು- ಸತೀಶ್ ನಡುವಿನ ಗುದ್ದಾಟವೇ ಕಾರಣ ಎಂಬ ಮಾತು ಕೇಳಿಬರುತ್ತದೆ.
ಹಾಗಾದರೆ ಸಿದ್ದರಾಮಯ್ಯ ಈ ಮಟ್ಟದಲ್ಲಿ ಪರಮಾಪ್ತ ಶಿಷ್ಯನನ್ನು ದೂರವಿಡಲು ಏನು ಕಾರಣ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಇದ್ದರೂ ಈವರೆಗೆ ಈ ಕುರಿತು ಸಿದ್ದರಾಮಯ್ಯ ಆಗಲಿ ಸತೀಶ್ ಜಾರಕಿಹೊಳಿ ಅವರಾಗಲಿ ಉತ್ತರಿಸಿಲ್ಲ. ಡಿ.ಕೆ ಶಿವಕುಮಾರ್ ಆಪ್ತ ಬಳಗದ ಸದಸ್ಯರಾದ ನಂತರ ಸತೀಶ್ ಜಾರಕಿಹೊಳಿ ಅವರನ್ನು ಸಿದ್ದರಾಮಯ್ಯ ದೂರವಿಡಲು ಕಾರಣ ಎಂಬ ಮಾತಿದೆ. ಯಾವಾಗ ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ರಾಜೀನಾಮೆಗೆ ಸೂಚಿಸಿದರೊ, ಆಗ ಇವರ ಬೆನ್ನಿಗೆ ಪರಮಾಪ್ತರು ನಿಲ್ಲದೆ ದೂರ ಉಳಿದರು ಎಂಬ ಸಿಟ್ಟಿನಿಂದ, ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರ ವಿರುದ್ಧ ಕೆಂಡ ಕಾರುವ ಮೂಲಕ ವಿರೋಧದ ನಿಲುವು ಸಾರಿರುವುದಂತೂ ನಿಜ. ಈ ಎಲ್ಲಾ ಬೆಳವಣಿಗೆ ಮಧ್ಯೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸತೀಶ್ ಜಾರಕಿಹೊಳಿ ಸೇರಿ ಶಾಸಕರ ಸಹಿ ಸಂಗ್ರಹ ಮಾಡಿರುವ ಆರೋಪವೂ ಒಂದು ವಲಯದಿಂದ ಸತೀಶ್ ಮೇಲಿದೆ. ಇದಕ್ಕೆ ಈವರೆಗೂ ಉಭಯ ನಾಯಕರಿಂದ ಉತ್ತರ ಬಂದಿಲ್ಲ. ಸದ್ಯ ಸತೀಶ್ ಜಾರಕಿಹೊಳಿ ರಾಜಕೀಯ ಬದುಕಿನ ಉತ್ತುಂಗತೆ ತಲುಪುವ ವೇಗಕ್ಕೆ ಕೊಂಚ ಅಡೆತಡೆ ಬಂದಂತೆ ಕಾಣುತ್ತಿದೆ. ಅತ್ತ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಇಲ್ಲ ಇತ್ತ ಸಿದ್ದರಾಮಯ್ಯ ನಂತರದ ಅಹಿಂದ ನಾಯಕತ್ವದ ಪಟ್ಟವೂ ಕೈಜಾರುವ ಲಕ್ಷಣ ಇದೆ. ಈ ನಡುವೆ ಸಿದ್ದರಾಮಯ್ಯ ಎಂಬ ದೊಡ್ಡ ಶಕ್ತಿಯ ಬೆಂಬಲವನ್ನು ದೂರ ತಳ್ಳಿರುವ ಸತೀಶ್ ಜಾರಕಿಹೊಳಿ ಅವರು ಸಿದ್ದು, ಡಿಕೆ ಹೊರತಾದ ಮೂರನೇ ರಂಗದ ರಚನೆಗೆ ಉತ್ಸಾಹ ತೋರಿದಂತೆ ಕಾಣುತ್ತಿದೆ. ಸಮಾನ ಮನಸ್ಕರನ್ನು ಒಟ್ಟುಗೂಡಿಸಿಕೊಂಡು ತಮ್ಮ ಮುಂದಿನ ರಾಜಕೀಯ ಹಾದಿಯನ್ನು ಗಟ್ಟಿಗೊಳಿಸುವ ಉದ್ದೇಶದಲ್ಲಿ ಸತೀಶ್ ಜಾರಕಿಹೊಳಿ ಇರುವಂತೆ ಕಾಣುತ್ತಿದ್ದು ಇದು ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
ಅಹಿಂದ ಕವಚ ಪುತ್ರನಿಗೆ? ಸದ್ಯ ರಾಜ್ಯದ ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಸಿದ್ದರಾಮಯ್ಯನವರು ತಮ್ಮ ಭವಿಷ್ಯದ ಉತ್ತರಾಧಿಕಾರಿಯನ್ನಾಗಿ ಮಗನನ್ನೇ ನೋಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ತಮ್ಮ ರಾಜಕೀಯ ಬದುಕಿನ ದೊಡ್ಡ ಹುದ್ದೆ ಹಾಗೂ ಸುದೀರ್ಘ ಅಧಿಕಾರ ಅನುಭವಿಸಿರುವ ಇವರು ಅಹಿಂದ ಸಂಘಟನೆಯಿಂದ ಪಡೆಯುವಂತದ್ದು ಏನಿಲ್ಲ. ಇನ್ನೇನಿದ್ದರೂ ತಮ್ಮ ಪುತ್ರನನ್ನು ರಾಜಕೀಯವಾಗಿ ಗಟ್ಟಿಗೊಳಿಸುವ ಉದ್ದೇಶ ಹೊಂದಿದ್ದಾರೆ ಎಂಬ ಮಾತು ಜೋರಾಗಿವೆ.
ಮುಖ್ಯಮಂತ್ರಿ ಬದಲಾವಣೆ ಸಂದರ್ಭದಲ್ಲಿ ಎಲ್ಲರೂ ಮುಂದಿನ ಬದಲಾವಣೆಯ ಜೊತೆಗೆ ಹೊಂದಿಕೊಂಡು ಹೋಗುವ, ತಮಗೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವ ಹಂಬಲದಲ್ಲೇ ಇದ್ದರು. ಇನ್ನು ಚುನಾವಣೆಗೆ ಕೇವಲ ಎರಡು ವರ್ಷ ಉಳಿದ ಹಿನ್ನೆಲೆಯಲ್ಲಿ, ರಿಸ್ಕೀ ನಡೆ ತೆಗೆದುಕೊಳ್ಳಲು ಯಾರೂ ತಯಾರಿರಲಿಲ್ಲ. ಯಾವಾಗ ತಮ್ಮ ಜೊತೆ ಆಪ್ತರು ನಿಲ್ಲಲಿಲ್ಲವೋ ಆಗಿನಿಂದ ಸಿದ್ದರಾಮಯ್ಯನವರೂ ಯಾರ ಪರವಾಗಿಯೂ ಬ್ಯಾಟ್ ಬೀಸುವ ಮನಸ್ಥಿತಿ ಹೊಂದಿಲ್ಲ ಎಂಬುದಂತೂ ಸದ್ಯದ ಬೆಳವಣಿಗೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಜೊತೆಗೆ ಅಹಿಂದ ಸಂಘಟನೆ ಮಾಡುವ ಕುರಿತು ಚಿಂತನೆ ನಡೆಸಿರುವ ಸಿದ್ದರಾಮಯ್ಯನವರು ಮತ್ತೊಮ್ಮೆ ರಾಜ್ಯ ಸುತ್ತುವ ಉತ್ಸಾಹದಲ್ಲಿದ್ದಾರೆ. ಆದರೆ ವಯಸ್ಸು ಹೆಚ್ಚುತ್ತಾ ಹೋದಂತೆ ರಾಜಕೀಯವಾಗಿ ಸಂಘಟನಾ ಶಕ್ತಿಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ದುಗುಡ ಮೂಡುವುದು ಸಹಜ. ಈಗಾಗಲೇ ಚುನಾವಣಾ ರಾಜಕೀಯದಿಂದ ದೂರ ನಿಲ್ಲುವುದಾಗಿ ಅವರು ಹೇಳಿದ್ದಾರೆ. ಈ ಎಲ್ಲಾ ಕಾರಣಕ್ಕಾಗಿ ಸಿದ್ದರಾಮಯ್ಯನವರಿಗೆ ಅಹಿಂದ ಸಂಘಟನೆಯಿಂದ ಪಡೆದುಕೊಳ್ಳುವಂತದ್ದು ಏನೂ ಉಳಿದಂತೆ ಕಾಣುತ್ತಿಲ್ಲ. ಆದರೆ ಮಗನ ರಾಜಕೀಯ ಭವಿಷ್ಯ ಗಟ್ಟಿಗೊಳಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅಹಿಂದ ಸಂಘಟನೆ ಮಾಡಬೇಕಾಗುತ್ತದೆ. ಹೊರತು ಮುಂದಿನ ಒಂದು ದಶಕದ ನಂತರ ಆಗುವ ರಾಜಕೀಯ ಪಲ್ಲಟಗಳನ್ನು ಈಗಿನಿಂದಲೇ ಅಂದಾಜಿಸಲು ಸಾಧ್ಯವಿಲ್ಲ.
ಅಷ್ಟೇ ಅಲ್ಲದೆ ಸಿದ್ದರಾಮಯ್ಯನವರ ಅಹಿಂದ ಸಂಘಟನೆ ಹಿಂದೆ ಸದಾಕಾಲವೂ ಬೆಂಬಲವಾಗಿ ನಿಂತಿರುವ ಸತೀಶ್ ಜಾರಕಿಹೊಳಿ ಹಾಗೂ ಮಹಾದೇವಪ್ಪನವರನ್ನು ಹೊರಗಿಟ್ಟು ಸಾಧಿಸು ವಂತಹದು ಶೂನ್ಯ ಎಂದರೆ ತಪ್ಪಾಗಲಾರದು. ಕುರುಬ ಸಮುದಾಯದ ಬೆಂಬಲ ಯತೀಂದ್ರ ಅವರಿಗೆ ಸಿಕ್ಕಷ್ಟು ಅಹಿಂದ ಸಮುದಾಯದ ಬೆಂಬಲ ಸಿಗುತ್ತದೆ ಎಂದೂ ಹೇಳಲಾಗದು.
ಯಾಕೆಂದ್ರೆ ಯತೀಂದ್ರ ಹಾಗೆ ತಂದೆಯಂತೆ ಎಲ್ಲರ ನಾಯಕನಾಗಿ ಗುರುತಿಸಿಕೊಂಡವರಲ್ಲ. ಆಗ ಅಹಿಂದಕ್ಕೆ ಮುಂದೆ ಯಾರು ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುವುದಂತು ಸತ್ಯ. ಸಿದ್ದರಾಮಯ್ಯ ನವರಿಗೆ ಈಗಲೂ ಅಹಿಂದ ಸಂಘಟನೆ ಮಾಡುವ ಶಕ್ತಿ ಇದೆ. ಮಗನನ್ನೂ ಸೇರಿಸಿಕೊಂಡು ತಾವೇ ಓಡಾಡಿದರೆ ತಾವಿನ್ನೂ ಸಾಕಷ್ಟು ಬಲಿಷ್ಠ ಎಂಬ ಸಂದೇಶವನ್ನೂ ರವಾನಿಸಬಹುದು. ಆದರೆ ಬದಲಾದ ರಾಜಕೀಯ ಸನ್ನಿವೇಶದ ಸಂದರ್ಭದಲ್ಲಿ ಅಹಿಂದ ವರ್ಗದ ಜನರೂ ಹೊಸ ನಾಯಕನ ಆಯ್ಕೆಯ ಕುರಿತು ಬದಲಾವಣೆ ಬಯಸಬಹುದು. ಈಗಾಗಲೇ ಅಹಿಂದ ಸಂಘಟನೆಯಿಂದ ರಾಜಕೀಯ ಲಾಭವನ್ನು ಪಡೆದಿರುವ ಸಿದ್ದರಾಮಯ್ಯ ಅಹಿಂದ ನಾಯಕತ್ವ ವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸದಿದ್ದರೆ ಅಹಿಂದ ವರ್ಗದವರ ಪ್ರತಿರೋಧ ಬರಬಹುದು. ಈ ಎಲ್ಲಾ ಕಾರಣಕ್ಕಾಗಿ ಸಿದ್ದರಾಮಯ್ಯನವರ ಅಹಿಂದ ಸಂಘಟನೆ ಒಂದು ಕಡೆಯಾದರೆ ಅದನ್ನು ಯಾರಿಗೆ, ಯಾವ ಸಂದರ್ಭದಲ್ಲಿ ಬಳಸಿಕೊಳ್ಳುತ್ತಾರೆ ಎಂಬುದು ಅಷ್ಟೇ ಮುಖ್ಯ.
ಇಕ್ಕಟ್ಟಿಗೆ ಸಿಲುಕಿದರಾ ಸಾಹುಕಾರ್? ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅವರದ್ದು ಹಾಲು, ಜೇನಿನಂತಹ ಸಂಬಂಧ. ಎರಡು ದಶಕಗಳ ಹಿಂದೆ ಸಿದ್ದರಾಮಯ್ಯನವರಿಗಾಗಿ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಿದ್ದು ಇದೇ ಸತೀಶ್ ಜಾರಕಿಹೊಳಿ. ಅಹಿಂದ ಸಂಘಟನೆ ಜವಾಬ್ದಾರಿ ಹೊತ್ತ ಸಿದ್ದರಾಮಯ್ಯನವರ ಬೆಂಬಲಕ್ಕೆ ಸದಾಕಾಲವೂ ನಿಂತಿದ್ದ ಗೋಕಾಕ್ ಸಾಹುಕಾರ ಇಂದು ಸಿದ್ದು ಆಪ್ತತೆಯಿಂದ ಹೊರನಡೆಯುವ ಮಟ್ಟಿಗೆ ಸಂಬಂಧ ಕೆಡಿಸಿಕೊಂಡಿದ್ದಾರೆ.
ಮುಖ ನೋಡಿ ಮಾತಾಡದ ಮಟ್ಟಿಗೆ ಇವರಿಬ್ಬರ ಸಂಬಂಧ ಹಾಳಾಗಿದ್ದು ಯಾಕೆ ಎಂಬ ಪ್ರಶ್ನೆ ಇಬ್ಬರೂ ನಾಯಕರ ಬೆಂಬಲಿಗರನ್ನು ಕಾಡುತ್ತಿದೆ. ಎಲ್ಲರೊಂದಿಗೆ ಒಳ್ಳೆಯವರಾಗಲು ಹೋಗಿ ಸತೀಶ್ ಜಾರಕಿಹೊಳಿ ಇಕ್ಕಟ್ಟಿಗೆ ಸಿಲುಕಿದರಾ ಎಂಬ ಮಾತು ಸಹಜವಾಗಿ ಕೇಳಿಬರುತ್ತಿದೆ. ಹೌದು, ಅತ್ತ ಸಿದ್ದರಾಮಯ್ಯ ನಂತರದಲ್ಲಿ ಅವರ ವಾರಸುದಾರ ಎಂದೇ ಬಿಂಬಿತವಾಗಿದ್ದ ಸತೀಶ್ ಜಾರಕಿಹೊಳಿ ನಿಧಾನಕ್ಕೆ ಡಿ.ಕೆ ಶಿವಕುಮಾರ್ ಕ್ಯಾಂಪಿಗೆ ಶಿಫ್ಟ್ ಆದರು. ಸಚಿವ ಸ್ಥಾನದ ಜೊತೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕನಸು ಹೊತ್ತಿದ್ದ ಸತೀಶ್ ಗೆ ಸಚಿವ ಸ್ಥಾನವಷ್ಟೇ ಸಿಕ್ಕಿತು, ಕೆಪಿಎಸ್‌ಸಿ ಅಧ್ಯಕ್ಷತೆ ದಕ್ಕಲಿಲ್ಲ. ಆ ಮೂಲಕ ಬೆಳಗಾವಿ ಜಿಲ್ಲೆಗೆ ಸೀಮಿತವಾದರು. ಇನ್ನೇನು 2028ರ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಗೋಕಾಕ್ ಸಾಹುಕಾರ್, ಈಗ ಡಿಕೆಶಿ ಅಬ್ಬರದ ನಡುವೆ ಕಳೆದುಹೋಗಿದ್ದಾರೆ.
ಈಗಲೂ ಅಹಿಂದ ಸಮುದಾಯ ಸತೀಶ್ ಜಾರಕಿಹೊಳಿ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದೆ. ಜೊತೆಗೆ ಸಿದ್ದರಾಮಯ್ಯ ನಂತರದಲ್ಲಿ ಅಹಿಂದ ಸಂಘಟನೆಯನ್ನು ಗಟ್ಟಿಯಾಗಿ ಕರೆದೊಯ್ಯುವ ನಾಯಕ ಯಾರಿದ್ದಾರೆ ಎಂದು ಹುಡುಕಿದರೆ ಸತೀಶ್ ಜಾರಕಿಹೊಳಿ ಬಿಟ್ಟು ಬೇರೆ ಹೆಸರು ಗೋಚರಿ ಸುವುದಿಲ್ಲ. ಇದೇ ಕಾರಣಕ್ಕಾಗಿ ತಮಗೆ ರಾಜಕೀಯವಾಗಿ ಎಷ್ಟೇ ಕೆಟ್ಟ ಸಮಯ ಇದಾಗಿದ್ದರೂ ಆಕ್ರೋಶದ ಮಾತು ಆಡದೆ ಸೈಲೆಂಟ್ ಆಟವನ್ನು ಸತೀಶ್ ಆಡುತ್ತಿದ್ದಾರೆ.
ಕಾಯ್ದು ನೋಡುವ ತಂತ್ರದ ಮೂಲಕ ಅಹಿಂದ ವಸ್ತ್ರವನ್ನು ಬಳಸಿಕೊಳ್ಳುವ ಮೂಡ್‌ನಲ್ಲಿ ಸತೀಶ್ ಜಾರಕಿಹೊಳಿ ಇರುವುದಂತು ಸತ್ಯ. ಸಿದ್ದರಾಮಯ್ಯನವರಂತೆ ಸತೀಶ್ ಜಾರಕಿಹೊಳಿ ಅವರಿಗೂ ಪ್ರಬಲ ಎಸ್‌ಟಿ ಸಮುದಾಯದ ಬೆಂಬಲ ಇದೆ. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹೈಕಮಾಂಡ್ ನಾಯಕರ ಬೆಂಬಲವೂ ಇದೆ. ಆದರೆ ಇವೆರಡರಿಂದ ಅಂಹಿದ ಸಂಘಟನೆ ಕಟ್ಟುತ್ತೇನೆ ಎಂದರೆ ಖಂಡಿತ ಸಾಧ್ಯವಿಲ್ಲ. ಸಿದ್ದರಾಮಯ್ಯ ಎಂಬ ದೈತ್ಯ ಶಕ್ತಿಯ ಜೊತೆಯ ಹೆಜ್ಜೆ ಹಾಕಿದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಜೊತೆಗೆ ಎಲ್ಲಾ ನಾಯಕರನ್ನು ಒಟ್ಟುಗೂಡಿಸಿಕೊಂಡು ಮುನ್ನಡೆದರೆ ಮಾತ್ರ ಸಂಘಟನೆಯಿಂದ ರಾಜಕೀಯ ಲಾಭ ಪಡೆಯಬಹುದು. ಇಲ್ಲವಾದರೆ ಡಿ.ಕೆ ಶಿವಕುಮಾರ್ ಎಂಬ ದೈತ್ಯ ಶಕ್ತಿಯ ವರ್ಚಸ್ಸಿನ ಮುಂದೆ ಸಾಹುಕಾರರ ಉತ್ಸಾಹ ಮಂಕಾಗುವುದರಲ್ಲಿ ಸಂಶಯವಿಲ್ಲ.