ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vinayaka Mathapathy Column: ಜಿರಳೆ ಸಹವಾಸ ಕೈ ಬಿಟ್ಟು ಸೈದ್ಧಾಂತಿಕ ದೋಣಿ ಏರಲಿ

ಕಳೆದ ಒಂದು ವಾರದಿಂದ ದೇಶದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸದ್ದು ಮಾಡುತ್ತಿದೆ. ದೇಶದ ಮುಖ್ಯ ನ್ಯಾಯಮೂರ್ತಿಯೊಬ್ಬರ ಒಂದು ಹೇಳಿಕೆಯಿಂದ ಹುಟ್ಟಿ ಕೊಂಡ ಚಿಂತನೆ ಎಂದು ಕಾಕ್ರೋಚ್ ಪಕ್ಷದ ಸಂಸ್ಥಾಪಕ ಹೇಳುತ್ತಾನೆ. ಜತೆಗೆ ಪ್ರಸ್ತುತ ದೇಶದ ಆಡಳಿತ ವ್ಯವಸ್ಥೆಯ ಕುರಿತು ಗಮನ ಸೆಳೆಯಲು ಹುಟ್ಟಿಕೊಂಡ ಅಭಿಯಾನ ಎಂಬುದು ಕೆಲವರ ವಾದ. ಈ ಮಧ್ಯೆ ಸುದೀರ್ಘ ಇತಿಹಾಸ ಹೊಂದಿರುವ ಕೆಲ ರಾಜಕೀಯ ಪಕ್ಷಗಳು ಕಾಕ್ರೋಚ್‌ಗೆ ಬೆಂಬಲ ಘೋಷಿಸಿಯಾಗಿದೆ.

ಜಿರಳೆ ಸಹವಾಸ ಕೈ ಬಿಟ್ಟು ಸೈದ್ಧಾಂತಿಕ ದೋಣಿ ಏರಲಿ

-

Profile
Ashok Nayak May 27, 2026 7:17 AM

ರಾಜಬೀದಿ

ವಿನಾಯಕ ಮಠಪತಿ

ಸ್ವಾತಂತ್ರ್ಯ ನಂತರದಲ್ಲಿ ಭಾರತವನ್ನು ಸುದೀರ್ಘ ಅವಧಿಗೆ ಆಳಿದ ಪಕ್ಷ ಕಾಂಗ್ರೆಸ್. ಸಾಮಾಜಿಕ ನ್ಯಾಯ, ಶೋಷಿತರ ಪರ ಧ್ವನಿ, ಬಡವರ ಪರ ಚಿಂತನೆ ಎಂಬ ಅಂಶಗಳನ್ನು ಮುಂದಿಟ್ಟುಕೊಂಡು ದಶಕಗಳ ಕಾಲ ರಾಜಕಾರಣ ಮಾಡಿದ ಪಕ್ಷ ಈಗ ಕೇವಲ ಅಧಿಕಾರದ ಲಾಭಕ್ಕಾಗಿ ಯಾವುದೇ ಶಕ್ತಿಗಳ ಜತೆ ನಿಲ್ಲುತ್ತೇನೆ ಎಂಬ ಮನಸ್ಥಿತಿಗೆ ಬಂದಿರುವುದು ವಿಪರ್ಯಾಸವೇ ಸರಿ.

ಅಷ್ಟೇ ಅಲ್ಲ, ಹಳ್ಳಿಯಿಂದ ದಿಲ್ಲಿಯವರೆಗೆ ತಮ್ಮದೇ ಕಾರ್ಯಕರ್ತರ ಪಡೆ ಹೊಂದಿರುವ ಪಕ್ಷವೊಂದು ಸೈದ್ಧಾಂತಿಕ ನಿಲುವನ್ನು ಬದಲಿಸಿಕೊಂಡು ಸಾಗಿರುವ ಹಾದಿ ನೋಡಿದರೆ ಭವಿಷ್ಯದಲ್ಲಿ ಉಂಟಾಗುವ ಕರಾಳ ಪರಿಣಾಮಗಳು ಈಗಲೇ ಗೋಚರಿಸುತ್ತಿದೆ.

ಒಂದಾನೊಂದು ಕಾಲದಲ್ಲಿ ದೇಶದಲ್ಲಿ ಕಾಂಗ್ರೆಸ್ ಹೊರತಾದ ಪಕ್ಷವನ್ನು ಜನ ಅನುಮಾನ ದಿಂದ ನೋಡುತ್ತಿದ್ದರು. ಗಾಂಧಿ ಕುಟುಂಬ ಹೊರತುಪಡಿಸಿ ನಮ್ಮನ್ನು ಆಳುವ ವ್ಯಕ್ತಿ ಇಲ್ಲವೇನೋ ಎಂಬ ಭ್ರಮೆಯಲ್ಲಿ ಅಸಂಖ್ಯಾತ ದೇಶವಾಸಿಗಳಿದ್ದರು. ಈಗಿನ ಕಾಂಗ್ರೆಸ್ ನಾಯಕರು ಹೇಳಿಕೊಳ್ಳುವಂತೆ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ನಾವೇ ಎಂಬ ಮಾತನ್ನು ಒಪ್ಪುವುದಾದರೆ ಈ ಪಕ್ಷ ಸ್ಥಾಪನೆಯಾಗಿ ಬರೋಬ್ಬರಿ 140 ವರ್ಷಗಳಾಗಿವೆ.

ಇಂತಹ ಅದ್ಭುತ ಇತಿಹಾಸ ಹೊಂದಿರುವ ಪಕ್ಷವೊಂದು ಸದ್ಯ ಜಿರಳೆಯ ಹಿಂದೆ ಬಿದ್ದಿರು ವುದು ಏಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡುವುದು ಸಹಜ.

ಕಳೆದ ಒಂದು ವಾರದಿಂದ ದೇಶದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಸದ್ದು ಮಾಡುತ್ತಿದೆ. ದೇಶದ ಮುಖ್ಯ ನ್ಯಾಯಮೂರ್ತಿಯೊಬ್ಬರ ಒಂದು ಹೇಳಿಕೆಯಿಂದ ಹುಟ್ಟಿಕೊಂಡ ಚಿಂತನೆ ಎಂದು ಕಾಕ್ರೋಚ್ ಪಕ್ಷದ ಸಂಸ್ಥಾಪಕ ಹೇಳುತ್ತಾನೆ. ಜತೆಗೆ ಪ್ರಸ್ತುತ ದೇಶದ ಆಡಳಿತ ವ್ಯವಸ್ಥೆಯ ಕುರಿತು ಗಮನ ಸೆಳೆಯಲು ಹುಟ್ಟಿಕೊಂಡ ಅಭಿಯಾನ ಎಂಬುದು ಕೆಲವರ ವಾದ. ಈ ಮಧ್ಯೆ ಸುದೀರ್ಘ ಇತಿಹಾಸ ಹೊಂದಿರುವ ಕೆಲ ರಾಜಕೀಯ ಪಕ್ಷಗಳು ಕಾಕ್ರೋಚ್‌ಗೆ ಬೆಂಬಲ ಘೋಷಿಸಿಯಾಗಿದೆ.

ಇದನ್ನೂ ಓದಿ: Vinayaka Mathapathy Column: ಜಗತ್ತನ್ನು ಕತ್ತಲೆಗೆ ದೂಡಿ, ಬಾಯಾರಿಕೆ ತರಿಸುವುದಾ ಎಐ ?

ಇದೆಲ್ಲ ಏನೇ ಇರಬಹುದು, ದೇಶದ ಪ್ರಧಾನಿಯೊಬ್ಬರನ್ನು ಟೀಕಿಸುವ ದೃಷ್ಟಿಯಿಂದ ಹುಟ್ಟಿಕೊಂಡ ಕಾರಣಕ್ಕೆ ಕಾಕ್ರೋಚ್ ಜನತಾ ಪಕ್ಷವನ್ನು ಕಾಂಗ್ರೆಸ್ ಬಿಗಿದಪ್ಪಿ ಕೊಂಡಿರು ವುದು ಕಣ್ಣಿಗೆ ಕಾಣುವ ಸತ್ಯ. ಕೈ ನಾಯಕರು ತಮ್ಮದೊಂದು ರಾಜಕೀಯ ಪಕ್ಷ ಎಂಬುವು ದನ್ನೇ ಮರೆತು ಸೈದ್ಧಾಂತಿಕ ದೃಷ್ಟಿಕೋನ, ಗೊತ್ತು ಗುರಿ ಇಲ್ಲದ ಅಭಿಯಾನದ ಹಿಂದೆ ಬಿದ್ದಿರುವುದು ಈ ನಾಯಕರ ಮನಸ್ಥಿತಿ ಯಾವ ಮಟ್ಟಿಗೆ ಹಾಳಾಗಿದೆ ಎಂಬುದನ್ನು ತೋರಿಸುತ್ತದೆ.

ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಬದ್ಧತೆ ಈ ಮಟ್ಟಿಗೆ ಪಾತಾಳಕ್ಕೆ ಕುಸಿಯಿತಾ ಎಂಬ ಮಾತು ಕೇಳಿಬರುತ್ತಿವೆ. ಸದ್ಯ ಕಾಂಗ್ರೆಸ್ ಮನಸ್ಥಿತಿ ಯಾವ ಮಟ್ಟಿಗೆ ಇದೆ ಎಂದರೆ ನರೇಂದ್ರ ಮೋದಿ ವಿರುದ್ಧ ಜಗತ್ತಿನ ಯಾವುದೇ ಭಾಗದಲ್ಲಿ ಆಂದೋಲನ ನಡೆದರೆ ಹಿಂದೆ ಮುಂದೆ ನೋಡದೆ ವಿರೋಧಿಗಳ ಬೆಂಬಲಕ್ಕೆ ನಿಲ್ಲುವ ಅವಸರದಲ್ಲಿದೆ.

ಸುಮಾರು ಆರು ದಶಕಗಳಿಗೂ ಹೆಚ್ಚು ಅವಧಿಗೆ ಈ ದೇಶದ ಆಡಳಿತ ಚುಕ್ಕಾಣಿ ಹಿಡಿದ ಪಕ್ಷವೊಂದು ತನ್ನೆಲ್ಲಾ ಗತಕಾಲದ ಇತಿಹಾಸ ಗಾಳಿಗೆ ತೂರಿ ಇಂದು ನಡೆದುಕೊಳ್ಳುವ ಮನಸ್ಥಿತಿ ನೋಡಿದರೆ ಎಂತವರಿಗೂ ಅರ್ಥವಾಗುತ್ತದೆ, ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಚಿಂತನೆ ಕುಸಿದಿದೆ ಎಂದು.

ಇದಕ್ಕೂ ಮೀರಿ ಅಹಿಂದ ನಾಯಕನಾಗಿ ದಶಕಗಳ ಕಾಲ ಹೋರಾಟದಿಂದಲೇ ಬೆಳೆದು ಸಿಎಂ ಹುದ್ದೆ ಅಲಂಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಟ್ ಹಗರಣ ಖಂಡಿಸಿ ನಡೆದ ಹೋರಾಟದ ವೇದಿಕೆಯಲ್ಲಿ ನಾನೂ ಕಾಕ್ರೋಚ್ ಎಂಬ ಟಿ-ಶರ್ಟ್ ಬಿಡುಗಡೆ ಮಾಡುವ ಮೂಲಕ ಅವರೂ ಜಿರಳೆ ಪಕ್ಷಕ್ಕೆ ಬೆಂಬಲ ನೀಡಿದ್ದಾಗಿದೆ.

ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಕೆಲವು ಜವಾಬ್ದಾರಿಗಳನ್ನು ಇಟ್ಟುಕೊಳ್ಳ ಬೇಕಾಗುತ್ತದೆ. ಹೊಸ ಚಿಂತನೆಗಳು ನಮ್ಮ ದೇಶದಲ್ಲಿ ಹುಟ್ಟುವುದು ಸಹಜ ಆದರೆ ಸುದೀ ರ್ಘ ಅವಧಿಗೆ ದೇಶವನ್ನಾಳಿದ ಅನುಭವ ಹೊಂದಿರುವ ಇವರು ಹೊಸ ಚಿಂತನೆಗಳ ಆಳ, ಅಗಲದ ಕುರಿತು ಪರಿಶೀಲನೆ ಮಾಡಬೇಕು. ದೇಶ ಒಡೆಯುವ ಉದ್ದೇಶಕ್ಕಾಗಿ ಹುಟ್ಟಿಕೊಂಡ ಚಿಂತನೆಗಳ ಜತೆಗೆ ರಾಜಕೀಯ ಲಾಭಕ್ಕಾಗಿ ನಿಂತರೆ ಮುಂದೊಮ್ಮೆ ಇದೇ ತಿರುಗುಬಾಣ ವಾಗುವ ಸಾಧ್ಯತೆಯೂ ಹೆಚ್ಚು.

ಅಪ್ಪ, ಅಮ್ಮ ಇಲ್ಲದ, ನಾಯಕತ್ವ ಗುಣಗಳಿಲ್ಲದ, ದೇಶದ ಜನರ ಭಾವನೆಗಳಿಗೆ ಬೆಲೆ ಇಲ್ಲದ ಕೇವಲ ರಾಜಕೀಯ ವಿರೋಧ ಹಾಗೂ ಆಂತರಿಕ ಭದ್ರತೆಗೆ ಸವಾಲೆಸೆಯುವ ಕಾಕ್ರೋಚ್ ಜನತಾ ಪಕ್ಷದಂತಹ ಹೊಸ ಚಿಂತನೆಗಳ ಹಿಂದೆ ಬೀಳದೆ ಕಾಂಗ್ರೆಸ್ ದಶಕಗಳಿಂದ ಕಟ್ಟಿ ಕೊಂಡು ಬಂದ ತನ್ನ ಅದ್ಭುತ ಸೈದ್ಧಾಂತಿಕ ಬದ್ಧತೆಯ ಜತೆ ಸಾಗಿದರೆ ದೇಶಕ್ಕೂ ಒಳಿತು ಪಕ್ಷಕ್ಕೂ ಒಳಿತು. ಕಾಂಗ್ರೆಸ್ ಜಿರಳೆಯ ಸಹವಾಸ ಬಿಟ್ಟು ಸೈದ್ಧಾಂತಿಕ ದೋಣಿಯಲ್ಲಿ ಸಾಗಿದರೆ ಚೆಂದ.

ಪಕ್ಷ ಹುಟ್ಟಿದ್ದು ಭಾರತದಲ್ಲಲ್ಲ

ಮೇ.15ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಆಡಿದ ಆ ಮಾತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಪ್ರಕರಣವೊಂದರ ಕುರಿತು ನಡೆದ ವಿಚಾರಣೆ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರ ಗಳಲ್ಲಿ ಅಕ್ರಮವಾಗಿ ನುಸುಳಿಕೊಂಡು ಇಡೀ ವ್ಯವಸ್ಥೆಯನ್ನು ಹಾಳುಮಾಡಲಾಗುತ್ತಿದೆ. ಉದ್ಯೋಗದ ಕೊರತೆ ಮತ್ತು ತಮ್ಮ ವೃತ್ತಿಯಲ್ಲಿ ಸ್ಥಾನ ಪಡೆಯಲು ಅಸಮರ್ಥತೆ ಯಿಂದಾಗಿ ಕೆಲವು ಯುವಕರು ಎಡೆ ಜಿರಳೆಗಳಂತೆ ಹರಡುತ್ತಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮಗಳನ್ನು ಸೇರುತ್ತಾರೆ, ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾ ಗುತ್ತಾರೆ, ಕೆಲವರು ಆರ್‌ಟಿಐ ಕಾರ್ಯಕರ್ತರಾಗುತ್ತಾರೆ, ಕೆಲವರು ಈ ರೀತಿಯ ಕಾರ್ಯಕರ್ತರಾಗುತ್ತಾರೆ ಮತ್ತು ನಂತರ ಎಲ್ಲರ ಮೇಲೆ ದಾಳಿ ಮಾಡಲು ಪ್ರಾರಂಭಿಸು ತ್ತಾರೆ ಎಂದು ಹೇಳಿಕೆ ನೀಡಿದ್ದರು.

ಈ ಜಿರಳೆ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ನ್ಯಾಯಾಂಗ, ಶಾಸಕಾಂಗ ಹಾಗೂ ಕಾರ್ಯಾಂಗದಲ್ಲಿ ಆಗುತ್ತಿರುವ ಲೋಪಗಳ ಕೆಲ ಉದಾಹರಣೆಗಳನ್ನು ಎತ್ತಿ ತೋರಿಸುವ ಉದ್ದೇಶದಿಂದ ಕಾಕ್ರೋಚ್ ಜನತಾ ಪಾರ್ಟಿ ಹೆಸರಿನಲ್ಲಿ ‘ಅಭಿಜಿತ್ ದಿಪ್ಕೆ’ ಎಂಬ ಯುವಕ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಸೃಷ್ಟಿಸಿದ್ದಾನೆ.

ನೋಡನೋಡುತ್ತಿದ್ದಂತೆ ಇನ್ಸ್ಟಾಗ್ರಾಮ್‌ನಲ್ಲಿ 14 ದಶಲಕ್ಷ ಹಿಂಬಾಲಕರನ್ನು ಪಡೆದು ಕೊಂಡ ಪೇಜ್ ಸಾಕಷ್ಟು ಸಂಚಲನ ಹುಟ್ಟು ಹಾಕಿತ್ತು. ವಿಡಂಬನಾತ್ಮಕ ರಾಜಕೀಯ ಚಳವಳಿಗೆ ಅನೇಕರು ಕಡಿಮೆ ಅವಧಿಯಲ್ಲೇ ಅಪಾರ ಬೆಂಬಲವನ್ನೂ ಸೂಚಿಸಿ ದ್ದಾಗಿತ್ತು. ಸಮಯ ಕಳೆದಂತೆ ಈ ವಿಡಂಬನಾತ್ಮಕ ರಾಜಕೀ ಯ ಚಳವಳಿಯ ಹಿಂದೆ ಕಾಣದ ಕೈಗಳ ಆಟ ಇರುವುದೂ ಸ್ಪಷ್ಟವಾಗಿದೆ.

ಮೋದಿ ವಿರೋಧಿ ಒಕ್ಕೂಟದಿಂದ ಪ್ರಾರಂಭ ವಾದ ಚಳವಳಿಯನ್ನು ರೂಪಿಸಿರುವವರು ಇದೇ ಆಮ್ ಆದ್ಮಿ ಪಕ್ಷ ಎಂಬುವುದಂತು ಗುಟ್ಟಾಗಿ ಉಳಿದಿಲ್ಲ. ಇನ್ನೂ ಈ ಆಂದೋಲನದ ಮುಂಚೂಣಿ ವ್ಯಕ್ತಿಗಳು ಅಮೆರಿಕದಲ್ಲಿ ಕುಳಿತು ಚಳವಳಿ ನಡೆಸುತ್ತಿರುವುದು ದೇಶದ ಜನಕ್ಕೆ ತಿಳಿಯದಾಗಿದೆ. ಈ ಮಧ್ಯೆ ದೇಶದ ಆಂತರಿಕ ಭದ್ರತೆಗೆ ಸವಾಲು ಎಸೆಯುವ ಹಿನ್ನೆಲೆಯಲ್ಲಿ ಇಡೀ ಕಾಕ್ರೋಚ್ ಪಾರ್ಟಿಯ ಅಕೌಂಟ್‌ಗಳನ್ನು ಸಾಮಾಜಿಕ ಜಾಲತಾಣದಿಂದ ಅಳಿಸಿ ಹಾಕುವ ಮೂಲಕ ಬಂದ ವೇಗದ ಜಿರಳೆ ಗೂಡು ಸೇರಿಯಾಗಿದೆ.

ಜೆನ್ ಝಿ ಹೋರಾಟಕ್ಕೆ ಸಿದ್ಧತೆ

ಇತ್ತೀಚಿನ ದಿನಗಳಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳು ಜೆನ್ ಝಿ ಮಾದರಿ ಹೋರಾಟಕ್ಕೆ ತುತ್ತಾಗಿವೆ. ಇದರಲ್ಲಿ ಕೆಲ ರಾಷ್ಟ್ರಗಳಲ್ಲಿ ಆಡಳಿತಾತ್ಮಕ ಬದಲಾವಣೆಗಳಾಗಿವೆ. ಇನ್ನೂ ಕೆಲವು ಕಡೆ ಭ್ರಷ್ಟಾಚಾರ, ತೆರಿಗೆ ಹೆಚ್ಚಳ ಸೇರಿದಂತೆ ಆಡಳಿತ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕುವ ಯೋಜನಾಬದ್ಧ ಹೋರಾಟಗಳು ನಡೆದಿದ್ದು ಇವು ಯಶಸ್ವಿಯಾಗಿವೆ. ಆದರೆ, ಒಂದು ದೇಶದ ಆಂತರಿಕ ಭದ್ರತೆ ಸೇರಿದಂತೆ ಕೋಟ್ಯಂತರ ಜನರ ಭಾವನೆಗೆ ವಿರುದ್ಧವಾಗಿ ಷಡ್ಯಂತ್ರ ನಡೆಸುವುದರ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲ ಉದ್ದೇಶದಿಂದ ನಡೆಯುವ ಹೋರಾಟಗಳ ಮೇಲೆ ಒಂದು ಕಣ್ಣಿಡುವುದು ಅನಿವಾರ್ಯ. ನೇಪಾಳ, ಬಾಂಗ್ಲಾದೇಶ, ಇಂಡೋನೇಷ್ಯಾ, ಮೊರೊಕ್ಕೊ, ಪೆರು, ಕೀನ್ಯಾ ದೇಶಗಳು ಈಗಾಗಲೇ ಜೆನ್ ಝಿ ಹೋರಾಟಕ್ಕೆ ಸಿಲುಕಿ ನಲುಗಿರುವ ದೇಶಗಳು.

ಯಾವ ವ್ಯವಸ್ಥೆಯನ್ನು ಬದಲಾಯಿಸಿ ದೇಶದ ಜನರ ಸಂಕಷ್ಟ ನಿವಾರಿಸುವ ಮಾತು ಕೊಟ್ಟು ನಡೆಸಿದ ಬಾಂಗ್ಲಾದೇಶದ ಜೆನ್ ಝಿ ಹೋರಾಟ ಈಗ ಹಳ್ಳ ಹಿಡಿದಾಗಿದೆ. ಮೂಲ ಭೂತವಾದಿಗಳ ಕೈಯಲ್ಲಿ ಸಿಲುಕಿ ದೇಶ ಹಿಂದೆಂದಿಗಿಂತಲೂ ಹೆಚ್ಚು ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದುರಂತ ಉದಾಹರಣೆಗಳು ನಮ್ಮ ಮುಂದಿವೆ.

ಭಾರತದಲ್ಲಿ ಈ ರೀತಿಯ ಜೆನ್ ಝಿ ಹೋರಾಟ ನಡೆಸಿ ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಯನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿರಬಹುದು. ಆದರೆ, ಇದನ್ನು ಎಚ್ಚರಿಕೆ ಯಿಂದ ತಡೆಗಟ್ಟುವ ಪ್ರಯತ್ನ ನಿರಂತರವಾಗಿ ಸಾಗಬೇಕು.

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರಶ್ನೆ ಕೇಳಲು ಸಾಕಷ್ಟು ಅವಕಾಶಗಳಿವೆ. ಜತೆಗೆ ಪ್ರಜಾಪ್ರಭುತ್ವ ಅಡಿಯಲ್ಲಿ ಸ್ಥಾಪನೆಯಾದ ಸರಕಾರಗಳಿಗೆ ಪಾಠ ಕಲಿಸಲು ಪ್ರಜೆಗಳಿಗೆ ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ.

ಮತದಾನದ ಹಕ್ಕನ್ನು ಬಳಸಿ ರಾಜಕೀಯ ವ್ಯವಸ್ಥೆಯ ಮೂಗುದಾರವನ್ನು ಪ್ರಜೆಗಳೇ ಹಿಡಿದುಕೊಳ್ಳುವ ಅವಕಾಶ ನಮ್ಮಲಿದೆ. ಇಂತಹ ಅತ್ಯುನ್ನತ ಅವಕಾಶ ಬಳಸಿಕೊಂಡು ವ್ಯವಸ್ಥೆ ವಿರುದ್ಧ ಸಂಘಟಿತ ಹೋರಾಟ ಮಾಡುತ್ತ ಬದಲಾವಣೆ ತರುವ ಗುಣ ಭಾರತೀಯ ರಿಗೆ ರಕ್ತದ ಬಂದಿದೆ. ನಮ್ಮ ದೇಶಕ್ಕೆ ಯಾವತ್ತೂ ಜೆನ್ ಝಿ ಮಾದರಿ ಹೋರಾಟ ಸ್ಪೂರ್ತಿ ಯಾಗಲಾರದು.

ಹೋರಾಟದ ಗುಣ ಭಾರತೀಯರಿಗೆ ಹುಟ್ಟಿನಿಂದಲೂ ಇದೆ. ಪರಕೀಯರ ಆಳ್ವಿಕೆ ವಿರುದ್ಧ ದಶಕಗಳ ಕಾಲ ಹೋರಾಡಿ ಸ್ವಾತಂತ್ರ್ಯ ಪಡೆದ ಧೀಮಂತ ದೇಶ ನಮ್ಮದು. ಇಂತಹ ಮಣ್ಣಿನಲ್ಲಿ ಜೆನ್ ಝಿ ಮಾದರಿ ಹೋರಾಟ ನಡೆಸಿ ದೇಶದ ಮಾನ ಹರಾಜು ಹಾಕುವ ಪ್ರಯತ್ನಕ್ಕೆ ಎಂದಿಗೂ ಯಶಸ್ಸು ಸಿಗುವುದಿಲ್ಲ. ಜತೆಗೆ ನಮ್ಮನ್ನಾಳುವ ಸರಕಾರಗಳು ಜನರ ಬೇಡಿಕೆಗಳ ಕುರಿತು ಅರಿವು ಇಟ್ಟುಕೊಳ್ಳಬೇಕಾಗುತ್ತದೆ. ಪ್ರಧಾನಿಯೇ ಇರಲಿ, ಮುಖ್ಯಮಂತ್ರಿ ಯೇ ಇರಲಿ, ಯಾವುದೇ ಪಕ್ಷದ ಸರಕಾರ ಆಡಳಿತದಲ್ಲಿರಲಿ. ಜನರ ಭಾವನೆಗೆ ತಕ್ಕಂತೆ ಕೆಲಸ ಮಾಡುವುದನ್ನು ನಿರಂತರವಾಗಿ ಮಾಡುತ್ತಿದ್ದರೆ ಜಿರಳೆಯ ಕಾಟ ತಪ್ಪುತ್ತದೆ.