ಅಶ್ವತ್ಥಕಟ್ಟೆ
ರಾಜಕಾರಣದಲ್ಲಿ ಯಾವುದೂ ಹೀಗೇ ನಡೆಯುತ್ತದೆ ಎಂದು ಊಹಿಸಲು ಆಗುವುದಿಲ್ಲ. ಸಿದ್ಧ ಸೂತ್ರದಲ್ಲಿ ರಾಜಕೀಯ ಮಾಡುವುದಕ್ಕೂ ಸಾಧ್ಯವಿಲ್ಲ. ಯಾವ ಸಮಯದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಬೇಕು? ಯಾವ ರೀತಿಯಲ್ಲಿ ತಮ್ಮತಮ್ಮ ಪರವಾಗಿ ರಾಜ ಕಾರಣಿಗಳು ‘ಬ್ಯಾಟ್’ ಬೀಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಲಾಭ-ನಷ್ಟಗಳು ನಿಂತಿರು ತ್ತವೆ.
ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ ಕೈಗೊಳ್ಳದೇ ಹೋದರೆ ಭವಿಷ್ಯದಲ್ಲಿ ಬಹು ವರ್ಷಗಳ ಕಾಲ ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎನ್ನುವುದು ಮಾತ್ರ ವಾಸ್ತವ. ಸುಭದ್ರ ಸರಕಾರದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನಲ್ಲಿ ಫಲಿತಾಂಶ ಬಂದ ದಿನದಿಂದಲೂ ಇದ್ದ ‘ನಾಯಕತ್ವ ಬದಲಾವಣೆ’ಯ ಕುರಿತಾದ ಗೊಂದಲ ಇಂದು ಬೃಹದಾಕಾರವಾಗಿ ಬೆಳೆದಿದೆ.
ಬಜೆಟ್ ಮುಗಿಸುವ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಅವರಿದ್ದರೆ, ‘ಒಪ್ಪಂದ’ ವಿಷಯವನ್ನು ಮುಂದಿಟ್ಟು ಎರಡೂವರೆ ವರ್ಷಕ್ಕೆ ತಮಗೆ ಸಿಎಂ ಪಟ್ಟಕಟ್ಟ ಬೇಕೆಂಬ ವಾದವನ್ನು ಡಿ.ಕೆ.ಶಿವಕುಮಾರ್ ಮಂಡಿಸುತ್ತಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಅಧಿಕಾರ ಹಂಚಿಕೆಯ ಸೂತ್ರದ ಗೊಂದಲ ಸದ್ಯ ಹೈಕಮಾಂಡ್‌ಗೂ ತಲೆಬಿಸಿಯಾಗಿದೆ.
ಇದನ್ನೂ ಓದಿ: Ranjith H Ashwath Column: ಸಿಕ್ಕ ಯಶಸ್ಸನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರೆ ?
ವಿದೇಶಕ್ಕೆ ಹಾರಬೇಕಿದ್ದ ರಾಹುಲ್ ಗಾಂಧಿಯವರು ತಮ್ಮ ಪ್ರವಾಸವನ್ನು ರದ್ದುಪಡಿಸಿ ಕೊಂಡು, ಸಿಎಂ-ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಈ ಎಲ್ಲದರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ವಿಷಯವೆಂದರೆ, ಸರಕಾರ ವು ಎರಡೂವರೆ ವರ್ಷ ಪೂರೈಸಿದ ದಿನವೇ ಡಿ.ಕೆ.ಶಿವಕುಮಾರ್ ಉಡಾಯಿಸಿದ ‘ನಾಯಕತ್ವ ಬದಲಾವಣೆ’ ಎನ್ನುವ ಕ್ಷಿಪಣಿ ಯಾವ ಪ್ರಮಾಣದಲ್ಲಿ ಪರಿಣಾಮ ಬೀರಿದೆ ಎನ್ನುವುದು.
ಕರ್ನಾಟಕದಲ್ಲಿ ಭುಗಿಲೆದ್ದಿರುವ ಈ ಗೊಂದಲ ಈ ಕ್ಷಣದಲ್ಲಿಯೇ ತಾರ್ಕಿಕವಾಗಿ ಅಂತ್ಯ ವಾಗುವುದು ಸುಲಭವಿಲ್ಲ ಎನ್ನುವುದು ರಾಜಕೀಯ ವಲಯದ ಮಾತಾಗಿದೆ. ಏಕೆಂದರೆ, ವಿಧಾನಸಭಾ ಚುನಾವಣಾ ಫಲಿತಾಂಶದ ಸಮಯದಲ್ಲಿ ದೆಹಲಿಯಲ್ಲಿ ನಡೆದ ಒಪ್ಪಂದ ಏನಾಗಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ.
ಒಂದು ವೇಳೆ, ಎರಡೂವರೆ ವರ್ಷದ ಬಳಿಕ ನಾಯಕತ್ವವು ಬದಲಾವಣೆಯಾಗುವ ಬಗ್ಗೆ ಮಾತುಕತೆಯಾಗಿದ್ದರೆ, ಇದಕ್ಕೆ ಪೂರಕವಾಗಿ ತಿಂಗಳುಗಳ ಹಿಂದೆಯೇ ‘ಅಧಿಕಾರ ಹಸ್ತಾಂ ತರ’ ಪ್ರಕ್ರಿಯೆಗೆ ಹೈಕಮಾಂಡ್ ಚಾಲನೆ ನೀಡಬೇಕಿತ್ತು. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯದೇ ಹೋದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನಷ್ಟ ಎನ್ನುವುದರ ಅರಿವು ರಾಜ್ಯ ಹಾಗೂ ರಾಷ್ಟ್ರ ನಾಯಕರಿಗಿದೆ.
ಆದ್ದರಿಂದ ಅಧಿಕಾರ ಹಸ್ತಾಂತರಕ್ಕೆ ಬೇಕಿದ್ದ ಮೂಡ್ ಅನ್ನು ತಿಂಗಳ ಹಿಂದೆಯೇ ಸಿದ್ಧ ಪಡಿಸಬೇಕಿತ್ತು. ಆದರೆ ಮೂಲಗಳ ಪ್ರಕಾರ, ರಾಜ್ಯ ಕಾಂಗ್ರೆಸ್ ಅನ್ನು ಈ ಪ್ರಕ್ರಿಯೆಗೆ ಸಿದ್ಧಪಡಿಸುವುದು ಹಾಗಿರಲಿ, ಸ್ವತಃ ಹೈಕಮಾಂಡ್ ನಾಯಕರೇ ಈ ವಿಷಯದ ಬಗ್ಗೆ ಗಂಭೀರವಾಗಿ ಪ್ರಕ್ರಿಯೆಯನ್ನು ಆರಂಭಿಸಿರಲಿಲ್ಲ.
ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಸಿದಾಗಲೂ ರಾಹುಲ್ ಗಾಂಧಿ ಅವರು ಒಪ್ಪಂದದ ಬಗ್ಗೆ ಮಾತನಾಡಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರು ‘ಕೊಟ್ಟ ಮಾತನ್ನು ಉಳಿಸಿಕೊಳ್ಳಿ’ ಎನ್ನುವ ಲೆಕ್ಕಾಚಾರದಲ್ಲಿ ಹೈಕಮಾಂಡ್ ಬಳಿ ತಮ್ಮ ವಿಷಯ ಮಂಡನೆ ಮಾಡಲು ಹೋಗಿದ್ದಾರೆ. ಆದರೆ, ಹೈಕಮಾಂಡ್ ಮಟ್ಟದಲ್ಲಿ ಈ ವಿಷಯದಲ್ಲಿ ಯಾವುದೇ ಚರ್ಚೆಯನ್ನೇ ನಡೆಸದೇ ಇದ್ದಿದ್ದರಿಂದ ಡಿ.ಕೆ.ಶಿವಕುಮಾರ್ ಉಡಾಯಿಸಿದ ಕ್ಷಿಪಣಿ ನಿರೀಕ್ಷಿತ ಮಟ್ಟದಲ್ಲಿ ಫಲ ನೀಡಿಲ್ಲ.
ಇದರೊಂದಿಗೆ ಬೆಳಗಾವಿ ಅಧಿವೇಶನವನ್ನು ಮುಂದಿಟ್ಟುಕೊಂಡು ನಾಯಕತ್ವ ಬದಲಾ ವಣೆಗೆ ಹೈಕಮಾಂಡ್ ಮುಂದಾಗುವುದು ಕಷ್ಟಸಾಧ್ಯ. ಕಲಾಪದ ಹೊಸ್ತಿಲಿನಲ್ಲಿ ಯಾವುದೇ ಬದಲಾವಣೆಗೆ ಕೈಹಾಕಿದರೂ ಪ್ರತಿಪಕ್ಷಗಳಿಗೆ ಅದು ಆಹಾರ ವಾಗಲಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದ್ದರಿಂದ ಅಧಿವೇಶನದ ಸಮಯದಲ್ಲಿ ಖಾಲಿಯಿರುವ ಎರಡು ಹುದ್ದೆಗಳನ್ನು ಭರ್ತಿ ಮಾಡಿದರೆ ಪಕ್ಷದಲ್ಲಿ ಅಸಮಾಧಾನ ಶುರುವಾಗಲಿದೆ, ಸಂಪುಟ ಪುನಾರಚನೆ ಮಾಡಿದರೆ ಭಿನ್ನಮತ ಶುರುವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ‘ಬೆಳಗಾವಿ ಅಧಿವೇಶನ ಮುಗಿಸಿಕೊಂಡು ಬನ್ನಿ’ ಎನ್ನುವ ಮಾತನ್ನು ನಾಯಕರು ಹೇಳಿದ್ದಾರೆ.
ಹೀಗಿರುವಾಗ ನಾಯಕತ್ವವನ್ನೇ ಬದಲಾಯಿಸುವ ಪ್ರಯತ್ನಕ್ಕೆ ಹೈಕಮಾಂಡ್ ಕೈಹಾಕಲಿದೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ. ಬೆಳಗಾವಿ ಅಧಿವೇಶನವಾಗಿ ಒಂದೆರಡು ವಾರ ಕಳೆದರೆ ‘ಬಜೆಟ್’ ತಯಾರಿಯ ನೆಪದಲ್ಲಿ ಈ ಎಲ್ಲವನ್ನೂ ಮುಂದೂಡುವುದು ಸುಲಭ. ಈ ಕಾರಣಕ್ಕಾಗಿಯೇ ಬೆಳಗಾವಿ ಅಧಿವೇಶನವಿದ್ದರೂ ಕೊಟ್ಟಿರುವ ‘ಮಾತನ್ನು’ ಉಳಿಸಿಕೊಳ್ಳಿ ಎನ್ನುವ ಒತ್ತಡವನ್ನು ಹೈಕಮಾಂಡ್ ಮೇಲೆ ಹೇರುವ ಪ್ರಯತ್ನ ಮಾಡಿದ್ದಾರೆ ಡಿಕೆಶಿ.
ಈ ಸಮಯದಲ್ಲಿ ಹೈಕಮಾಂಡ್ ಒಪ್ಪಿಕೊಳ್ಳದಿದ್ದರೂ, ಸಂಪುಟ ಪುನಾರಚನೆಯಾಗದಂತೆ ನೋಡಿ ಕೊಳ್ಳುವುದು ಡಿಕೆಶಿ ಅವರ ಕಾರ್ಯತಂತ್ರದ ಭಾಗವಾಗಿದ್ದರೂ ಅಚ್ಚರಿಯಿಲ್ಲ. ಹಾಗೆ ನೋಡಿದರೆ, ಡಿ.ಕೆ.ಶಿವಕುಮಾರ್ ಅವರು ನಾಯಕತ್ವ ಬದಲಾವಣೆಯ ಒತ್ತಡ ಹೇರುವುದು ಖಚಿತ ವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆಯ ದಾಳವನ್ನು ದೆಹಲಿ ನಾಯಕರ ಮುಂದೆ ಮಂಡಿಸಿದ್ದರು.
ಒಮ್ಮೆ ಸಂಪುಟ ಪುನಾರಚನೆಗೆ ಅವಕಾಶ ಸಿಕ್ಕರೆ, ನಾಯಕತ್ವ ಬದಲಾವಣೆಯ ಚರ್ಚೆ ‘ತಾತ್ಕಾಲಿಕ’ವಾಗಿ ತಣ್ಣಗಾಗಲಿದೆ ಎನ್ನುವುದು ಈ ಹಿಂದಿನ ಲೆಕ್ಕಾಚಾರವಾಗಿತ್ತು. ಆದರೆ ಈ ತಂತ್ರಕ್ಕೆ ಪ್ರತಿತಂತ್ರವಾಗಿಯೇ ‘ಅವಸರ’ದಲ್ಲಿ ನಾಯಕತ್ವ ಬದಲಾವಣೆಯ ಪ್ರಸ್ತಾಪ ವನ್ನು‘ಡಿಕೆ’ ಬಣ ಮಂಡಿಸಿತೇ? ಎನ್ನುವುದು ಪ್ರಶ್ನೆಯಾಗಿದೆ.
ಏಕೆಂದರೆ, ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬರುತ್ತಿದ್ದಂತೆ ಈ ಹಂತದಲ್ಲಿ ಪಕ್ಷದ ಹೈಕಮಾಂಡ್ ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿತ್ತು. ಆದರೂ ಡಿ.ಕೆ.ಶಿವಕುಮಾರ್ ಹಾಗೂ ಆಪ್ತರು ನಾಯಕತ್ವ ಬದಲಾವಣೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದು ಏಕೆ? ಎನ್ನುವುದು ಅನೇಕರ ಮನಸ್ಸಿನಲ್ಲಿದೆ.
ಈ ನಡೆ ‘ರಿಸ್ಕ್’ ಎನ್ನುವುದು ಗೊತ್ತಿದ್ದರೂ ನಾಯಕತ್ವ ಬದಲಾವಣೆಗೆ ಡಿಕೆಶಿ ಒತ್ತಡ ಹೇರಿದ್ದಕ್ಕೆ ಕಾರಣ ‘ಸಮಯ’. ಸರಕಾರಕ್ಕೆ ಎರಡೂವರೆ ವರ್ಷವಾಗುತ್ತಿದ್ದಂತೆ ನಾಯಕತ್ವ ಬದಲಾವಣೆಯಾಗಲಿದೆ ಎನ್ನುವ ಸುದ್ದಿ ಅದಾಗಲೇ ಪಕ್ಷದಲ್ಲಿ ಹಬ್ಬಿದೆ. ಈ ಹಂತದಲ್ಲಿ ಪಕ್ಷದ ಹೈಕಮಾಂಡ್‌ಗೂ ಒತ್ತಡವಿದೆ.
ಇದರೊಂದಿಗೆ ತಮ್ಮ ಆಪ್ತರು ದೆಹಲಿಗೆ ಹೋಗಿ (ಕಳಿಸಿ) ಒಂದು ಹಂತದಲ್ಲಿ ಒತ್ತಡವನ್ನು ಹೇರಿದ್ದಾರೆ. ಈ ಸಮಯದಲ್ಲಿ ಪಕ್ಷದ ಹೈಕಮಾಂಡ್ ರಿಲ್ಯಾಕ್ಸ್ ಆಗಲು ಸಮಯ ನೀಡಿದರೆ, ಮುಂದೆ ಇಷ್ಟೇ ಪ್ರಮಾಣದಲ್ಲಿ ಒತ್ತಡ ಹೇರಲು ಸಾಧ್ಯವಾಗದೇ ಇರಬಹುದು.
ಸಾಮಾನ್ಯವಾಗಿ ಯಾವುದೇ ಪ್ರತಿಭಟನೆ ಅಥವಾ ದಂಗೆಗಳಿಗೆ ಮೊದಲ ಬಾರಿಗೆ ಸಿಗುವ ಮಹತ್ವ, ಎರಡನೇ ಬಾರಿಗೆ ಸಿಗುವುದಿಲ್ಲ. ಈಗ ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ಸುಮ್ಮ ನಾದರೆ ಈ ಅವಧಿಯಲ್ಲಿ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಲು ಸಿಗಬಹುದಾದ ಒಂದು ಅವಕಾಶವೂ ತಪ್ಪುವ ಸಾಧ್ಯತೆಯೇ ಹೆಚ್ಚಿದೆ.
ಒಂದು ವೇಳೆ ಅವಕಾಶ ಸಿಕ್ಕರೂ ಚುನಾವಣಾ ವರ್ಷದಲ್ಲಿ ಸಿಗುತ್ತದೆ ಎನ್ನುವ ಸ್ಪಷ್ಟ ಅರಿವು ಡಿ.ಕೆ.ಶಿವಕುಮಾರ್ ಅವರಿಗಿತ್ತು. ಆದ್ದರಿಂದಲೇ, ‘ರಿಸ್ಕ್’ ಇದ್ದರೂ ತಾವು ಪ್ರಯೋಗಿಸ ಬೇಕಿದ್ದ ಕ್ಷಿಪಣಿಯನ್ನು ಅವರು ಪ್ರಯೋಗಿಸಿದ್ದಾರೆ. ಈಗಿರುವ ಪರಿಸ್ಥಿತಿಯಲ್ಲಿ ಈ ಕ್ಷಿಪಣಿ ಕಿಡಿ ಹೊತ್ತಿಸುತ್ತದೆ, ಗೊಂದಲ ಸೃಷ್ಟಿಸುತ್ತದೆ, ಅದು ಆತಂಕ ಸೃಷ್ಟಿಸುವ ಮಟ್ಟಿಗೆ ಹೋಗಿ ಕುರ್ಚಿಯನ್ನು ಅಲುಗಾಡಿಸಿರಬಹುದು. ಆದರೆ ಕುರ್ಚಿ ಬದಲಿಸುವಷ್ಟು ಶಕ್ತಿಯುತವಾಗಿಲ್ಲ ಎನ್ನುವುದು ಸ್ಪಷ್ಟ.
ಸಾಮಾನ್ಯವಾಗಿ ಯಾವುದೇ ಪಕ್ಷದಲ್ಲಿ ಟಾಪ್ ೨ ನಾಯಕರ ನಡುವೆ ತಿಕ್ಕಾಟಗಳು ಶುರು ವಾದರೆ, ಇನ್ನುಳಿದ ಹಿರಿಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸುವ ಸಂಧಾನ ಸೂತ್ರವನ್ನು ಸಿದ್ಧಪಡಿಸುತ್ತಾರೆ. ರಾಜ್ಯದಲ್ಲಿರುವ ಹಲವು ನಾಯಕರು ಈ ರೀತಿಯ ಹತ್ತಾರು ಗೊಂದಲಮಯ ಸಮಯವನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿರುವ ಉದಾಹರಣೆಯಿದೆ. ಆದರೆ ಇಂದಿನ ರಾಜ್ಯ ಕಾಂಗ್ರೆಸ್‌ನ ಗೊಂದಲ ಜಟಿಲ ವಾಗುವುದಕ್ಕೆ ಪ್ರಮುಖವಾಗಿ, ಚುನಾವಣಾ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮಧ್ಯೆ ಆಗಿದೆ ಎನ್ನಲಾಗುತ್ತಿರುವ ‘ಒಪ್ಪಂದ’ ವೇನು ಎನ್ನುವ ಸ್ಪಷ್ಟತೆ ರಾಜ್ಯ ನಾಯಕರಿಗೆ ಇಲ್ಲ.
ಸ್ಪಷ್ಟತೆ ಇರುವ ಹೈಕಮಾಂಡ್ ಬಿಹಾರ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ‘ಕಡ್ಡಿ ತುಂಡಾಗುವಂತೆ ಹೇಳುವ ಪರಿಸ್ಥಿತಿ’ಯಲ್ಲಿಲ್ಲ. ದೆಹಲಿಯಲ್ಲಿ ಖರ್ಗೆ ನಿವಾಸ ದಲ್ಲಿ ಆರು ಜನರ ನಡುವೆಯಾಗಿರುವ ‘ಗುಟ್ಟಿನ ಒಪ್ಪಂದ’ದಲ್ಲಿ ಏನಿದೆ ಎನ್ನುವ ಸ್ಪಷ್ಟತೆ ಇಲ್ಲದೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ಮಾತನ್ನು ಹಲವು ನಾಯಕರು ಈಗಾಗಲೇ ಹೇಳಿದ್ದಾರೆ.
ಇದೇ ಕಾರಣಕ್ಕೆ ಮೂರು ದಿನಗಳಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿರುವ ಹಲವು ಸಚಿವರು, ‘ಪವರ್ ಶೇರಿಂಗ್ ವಿಷಯದಲ್ಲಿ ಆಗಿರುವ ಒಪ್ಪಂದ’ವೇನು? ಎನ್ನುವು ದನ್ನು ತಿಳಿಸಿ. ಇಲ್ಲದಿದ್ದರೆ, ಈಗ ಉಂಟಾಗಿರುವ ಗೊಂದಲ ಮತ್ತಷ್ಟು ಹೆಚ್ಚಾಗಲಿದೆ ಎಂದಿದ್ದಾರೆ. ಆದರೆ ಅಂದು ಆಗಿರುವ ಒಪ್ಪಂದವನ್ನು ಬಹಿರಂಗಪಡಿಸಿದರೆ ಎದುರಾಗ ಬಹುದಾದ ‘ಪರಿಣಾಮ’ದ ಆತಂಕ ನಾಯಕರಲ್ಲಿದೆ.
ದಿನದಿಂದ ದಿನಕ್ಕೆ ಕುಸಿಯುತ್ತಿರುವ ಹೈಕಮಾಂಡ್‌ಗೆ ಬಿಹಾರ ಚುನಾವಣೆಯ ಸೋಲು, ಮಾನಸಿಕವಾಗಿ ಮತ್ತಷ್ಟು ಹೊಡೆತ ನೀಡಿದೆ. ಈ ಕಾರಣಕ್ಕೆ ಈ ಹಂತದಲ್ಲಿ ಯಾವುದೇ ತೀರ್ಮಾನ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವುದು ಈ ಎಲ್ಲ ಬಣ ಬಡಿದಾಟಕ್ಕೆ ಕಾರಣವಾಗಿದೆ ಎನ್ನುವುದು ಸ್ಪಷ್ಟ.
ಹಾಗೆ ನೋಡಿದರೆ, ಕಾಂಗ್ರೆಸ್ ಇತಿಹಾಸದಲ್ಲಿ ಈ ರೀತಿಯ ಚೌಕಾಸಿ ವ್ಯವಹಾರಕ್ಕೆ ಜಾಗ ವಿರಲಿಲ್ಲ. ಪಕ್ಷದ ಹೈಕಮಾಂಡ್ ಕಳುಹಿಸುವ ಲಕೋಟೆಯಲ್ಲಿರುವ ಹೆಸರನ್ನು ಪಕ್ಷದ ಸರ್ವಾನುಮತದ ತೀರ್ಮಾನವೆಂದು ಭಾವಿಸಿ, ಹೈಕಮಾಂಡ್ ಸೂಚಿಸಿದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಕಾಲವಿತ್ತು. ಆದರೆ ಕಳೆದ ಎರಡು ದಶಕದ ಅವಧಿ ಯಲ್ಲಿ ಹಂತ-ಹಂತವಾಗಿ ಹೈಕಮಾಂಡ್ ಶಕ್ತಿ ಕುಸಿದು, ಇಂದು ಯಾವುದೇ ತೀರ್ಮಾನ ವನ್ನು ಕೈಗೊಳ್ಳುವ ಪರಿಸ್ಥಿತಿಯಲ್ಲಿ ಅದು ಉಳಿದಿಲ್ಲ.
ರಾಷ್ಟ್ರಾದ್ಯಂತ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಶಾಸಕರನ್ನು ಒಳಗೊಂಡಿದ್ದ ಕಾಂಗ್ರೆಸ್ ಇಂದು 500ರ ಆಸುಪಾಸಿಗೆ ಬಂದು ನಿಂತಿದೆ. ಇಡೀ ದೇಶವನ್ನು ಆಳಿದ್ದ ಕಾಂಗ್ರೆಸ್ ಇಂದು ಮೂರು ರಾಜ್ಯಕ್ಕೆ ಬಂದು ನಿಂತಿದೆ. ಅದರಲ್ಲಿ ಕರ್ನಾಟಕವೇ ಬಹು ದೊಡ್ಡ ರಾಜ್ಯವೆಂದರೆ ತಪ್ಪಾಗುವುದಿಲ್ಲ.
ಹೀಗಿರುವಾಗ, ಕರ್ನಾಟಕ ಕಾಂಗ್ರೆಸ್ ನಲ್ಲಿಯೇ ಅಭಿಪ್ರಾಯ ಭುಗಿಲೆದಿದ್ದಿದೆ. ಈ ಇಬ್ಬರಲ್ಲಿ ಯಾರದ್ದೇ ಒಬ್ಬರ ಪರ ನಿಂತರೂ ಮತ್ತೊಬ್ಬರ ಮೌನ ಅಥವಾ ಕ್ರಾಂತಿಯು ಪಕ್ಷಕ್ಕೆ ಬಹುದೊಡ್ಡ ನಷ್ಟವಾಗಿ ಒದಗುತ್ತದೆ ಎನ್ನುವ ಅರಿವು ಪಕ್ಷದ ವರಿಷ್ಠರಿಗಿದೆ. ಈ ಕಾರಣ ಕ್ಕಾಗಿಯೇ, ಏನು ಮಾಡಬೇಕು ಎನ್ನುವ ಗೊಂದಲದಲ್ಲಿ ಸಮಯ ದೂಡುವ ಮನಸ್ಥಿತಿಗೆ ಪಕ್ಷದ ಹೈಕಮಾಂಡ್ ಬಂದಿದೆ.
ನಾಯಕತ್ವ ಬದಲಾವಣೆ ವಿಷಯದಲ್ಲಿ ನಾಲ್ಕು ಗೋಡೆಯ ನಡುವೆ ಆಗಿರುವ ಒಪ್ಪಂದ ನು ಎನ್ನುವ ಸ್ಪಷ್ಟತೆ ಇಲ್ಲ. ಆದರೆ ಎರಡೂವರೆ ವರ್ಷ ಪೂರ್ಣಗೊಂಡಿರುವ ಈ ಸಮಯದಲ್ಲಿ ನಾಯಕತ್ವ ಬದಲಾವಣೆಗೆ ಬೇಕಿರುವ ಸಿದ್ಧತೆಯನ್ನು ಆರಂಭಿಸಿಲ್ಲ ಎನ್ನುವುದು ವಾಸ್ತವ. ಹೀಗಿರುವಾಗ, ಡಿ.ಕೆ.ಶಿವಕುಮಾರ್ ಬಣ ದೆಹಲಿಗೆ ಹೋಗಿ ನಾಯ ಕತ್ವ ಬದಲಾವಣೆಯ ಪ್ರಸ್ತಾಪವನ್ನು ಮಾಡಿದರೆ ‘ಸಕಾರಾತ್ಮಕ’ ಪ್ರತಿಕ್ರಿಯೆ ಬರುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಈ ಸ್ಪಷ್ಟತೆ ಇದ್ದರೂ ನಾಯಕತ್ವ ಬದಲಾವಣೆಯ ‘ಕ್ಷಿಪಣಿ’ಯನ್ನು ಡಿ.ಕೆ.ಶಿವಕುಮಾರ್ ಪ್ರಯೋಗಿಸಿದ್ದು ಏಕೆ ಎನ್ನುವ ಪ್ರಶ್ನೆಗೆ ಹಲವರ ಬಳಿ ಉತ್ತರವಿಲ್ಲ. ಒಂದು ವೇಳೆ ಕ್ಷಿಪಣಿಯು ನಿಗದಿತ ಗುರಿಗೆ ತಾಗದೇ ವ್ಯರ್ಥವಾದರೂ ಪರವಾಗಿಲ್ಲ, ಕಿಡಿ ಆರದಂತೆ ನೋಡಿಕೊಳ್ಳುವ ತಂತ್ರಗಾರಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು ‘ಡಿಕೆ’ ಡಮ್ಮಿ ಕ್ಷಿಪಣಿ ಹಾರಿಸಿದ್ದಾರೆಯೇ? ಎನ್ನುವ ಪ್ರಶ್ನೆಗೆ ಶಿವಕುಮಾರ್ ಅವರು ಮಾತ್ರ ಉತ್ತರಿಸಲು ಸಾಧ್ಯ.
ಏಕೆಂದರೆ, ೨-೨= ೦ ಎನ್ನುವುದು ಎನ್ನುವುದು ಗಣಿತ ಶಾಸ್ತ್ರ. ಆದರೆ ‘೨-೨’ ಮಾಡಿದರೂ ಕೆಲವೊಮ್ಮೆ ಎರಡೇ ಉಳಿಯುವುದು ರಾಜಕೀಯ!