ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಅರೆಗಿವುಡರ ಬಾಳು ಬೆಳಗಿದ ಡಿಜಿಟಲ್‌ ಶ್ರವಣ ಸಾಧನಗಳು

ಒಬ್ಬನ ಕಣ್ಣು ಪೂರ್ಣ ಕಾಣದಾದರೆ ಅವನು ಅಂಧನಾಗುತ್ತಾನೆ. ನಮ್ಮ ಸಮಾಜವು ಕುರುಡರನ್ನು ಸಹಾನುಭೂತಿಯಿಂದ ಕಾಣುವಷ್ಟು ಕಿವುಡರನ್ನು ಕಾಣುವುದಿಲ್ಲ. ಅರೆಗಿವುಡರನ್ನು ಹಾಸ್ಯ ಮಾಡುವ ನಾಟಕಗಳು ಹಾಗೂ ಚಲನಚಿತ್ರಗಳು ನಮ್ಮಲ್ಲಿ ಸಾಕಷ್ಟು ಇವೆ. ಅರೆಗಿವುಡರು ನಮ್ಮ ಸಮಾಜದ ನಡುವೇ ತಮ್ಮ ಅಪಹಾಸ್ಯವನ್ನು ನಗುನಗುತ್ತಲೇ ಸಹಿಸಿಕೊಂಡು ಬದುಕನ್ನು ನಡೆಸುವುದು ಅನಿವಾರ್ಯವಾಗಿರುತ್ತದೆ.

ಹಿಂದಿರುಗಿ ನೋಡಿದಾಗ

ನಾವು ನಮ್ಮ ಹೊರಜಗತ್ತಿನ ಅನುಭವವನ್ನು ಪ್ರಧಾನವಾಗಿ ಐದು ವಿಶೇಷ ಇಂದ್ರಿಯಗಳ ಮೂಲಕ ಪಡೆಯುತ್ತೇವೆ. ಕಣ್ಣು ದರ್ಶನೇಂದ್ರಿಯ, ದೃಶ್ಯ ರೂಪದ ಮಾಹಿತಿಯನ್ನು ಮಿದುಳಿಗೆ ದಾಖಲಿಸು ತ್ತದೆ.

ಕಿವಿ ಶ್ರವಣೇಂದ್ರಿಯ, ಅದು ಆಲಿಸುವುದರ ಮೂಲಕ ಶಬ್ದ ಮಾಹಿತಿಯನ್ನು ಮಿದುಳಿಗೆ ರವಾನಿಸು ತ್ತದೆ. ನಂತರದ್ದು ಚರ್ಮ, ಅದು ಸ್ಪರ್ಶೇಂದ್ರಿಯ. ನಾನಾ ರೀತಿಯ ಸ್ಪರ್ಶಜ್ಞಾನವನ್ನು ಒದಗಿಸುವು ದರ ಜೊತೆಯಲ್ಲಿ, ನಮ್ಮ ಹಲವು ವಿಧದ ಕುಶಲ ಕಲಿಕೆಗೆ-ಅದು ಬರೆಯುವುದು ಆಗಿರಬಹುದು, ಚಿತ್ರ ಬಿಡಿಸುವುದಾಗಿರಬಹುದು, ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡುವುದು ಆಗಿರಬಹುದು ಇಲ್ಲವೇ, ಶಸ್ತ್ರಕ್ರಿಯಾ ವೈದ್ಯ ಮಾಡುವ ಆಪರೇಶನ್ ಆಗಿರಬಹುದು.

ಈ ಎಲ್ಲಾ ಸ್ಪರ್ಶಾನುಭವಗಳನ್ನು ನಮ್ಮ ಚರ್ಮದಲ್ಲಿ ವಿಶೇಷ ಗ್ರಾಹಕಗಳು ಮಿದುಳಿಗೆ ಒದಗಿಸು ತ್ತವೆ. ಹಾಗೆಯೇ ನಮ್ಮ ಘ್ರಾಣೇಂದ್ರಿಯ ಹಾಗೂ ರಸನೇಂದ್ರಿಯಗಳೂ ಸಹ ಕ್ರಮವಾಗಿ ವಾಸನೆ ಅಥವಾ ರುಚಿಯನ್ನು ಮಿದುಳಿಗೆ ತಿಳಿಸುತ್ತವೆ.

ಸಾಂಪ್ರದಾಯಿಕ ಜಗತ್ತಿನ ಈ ಐದೂ ಇಂದ್ರಿಯಗಳಲ್ಲದೆ, ಇನ್ನೂ ಹಲವು ಸೂಕ್ಷ್ಮಾತಿಸೂಕ್ಷ್ಮ ಇಂದ್ರಿಯಗಳು ನಮ್ಮ ಒಡಲಲ್ಲಿ ಇವೆ. ನಮ್ಮ ಯಶಸ್ವೀ ಬದುಕಿಗೆ ಈ ಐದೂ ಇಂದ್ರಿಯಗಳು ಕರಾರುವಾಕ್ಕಾಗಿ ಕೆಲಸವನ್ನು ಮಾಡಬೇಕು. ಆದರೆ ಯಾವುದಾದರೂ ಒಂದು ಕಾರಣದಿಂದ ಒಂದು ವಿಶೇಷ ಇಂದ್ರಿಯ ಅರೆಬರೆ ಕೆಲಸವನ್ನು ಮಾಡುವಂತಾದರೆ ಇಲ್ಲವೇ ಪೂರ್ಣ ಸ್ಥಗಿತವಾದರೆ ಅವರ ಬದುಕನ್ನು ಕಲ್ಪಿಸಿಕೊಳ್ಳಲು ದುಸ್ತರವಾಗುತ್ತದೆ.

ಒಬ್ಬನ ಕಣ್ಣು ಪೂರ್ಣ ಕಾಣದಾದರೆ ಅವನು ಅಂಧನಾಗುತ್ತಾನೆ. ನಮ್ಮ ಸಮಾಜವು ಕುರುಡರನ್ನು ಸಹಾನುಭೂತಿಯಿಂದ ಕಾಣುವಷ್ಟು ಕಿವುಡರನ್ನು ಕಾಣುವುದಿಲ್ಲ. ಅರೆಗಿವುಡರನ್ನು ಹಾಸ್ಯ ಮಾಡುವ ನಾಟಕಗಳು ಹಾಗೂ ಚಲನಚಿತ್ರಗಳು ನಮ್ಮಲ್ಲಿ ಸಾಕಷ್ಟು ಇವೆ. ಅರೆಗಿವುಡರು ನಮ್ಮ ಸಮಾಜದ ನಡುವೇ ತಮ್ಮ ಅಪಹಾಸ್ಯವನ್ನು ನಗುನಗುತ್ತಲೇ ಸಹಿಸಿಕೊಂಡು ಬದುಕನ್ನು ನಡೆಸುವುದು ಅನಿವಾರ್ಯವಾಗಿರುತ್ತದೆ. ಆದರೆ ಪೂರ್ಣ ಕಿವುಡರ ಪಾಡು ಹೇಳತೀರದು, ಏಕೆಂದರೆ ಸಹಜ ಸಾಮಾಜಿಕ ಬದುಕನ್ನು ನಡೆಸಬೇಕಾದರೆ ಸಂಭಾಷಣಾ ಸಾಮರ್ಥ್ಯವಿರಬೇಕಾಗುತ್ತದೆ.

ಇದನ್ನೂ ಓದಿ: Dr N Someshwara Column: ತಂಬಾಕು ವಿಶ್ವವ್ಯಾಪಿಯಾಗಲು ಗ್ರಹಣಗಳೇ ಕಾರಣವಾದವು !

ಮತ್ತೊಬ್ಬರು ಏನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳಲು ಆಗದಿದ್ದರೆ, ಅವರು ಏನು ತಾನೇ ಮಾತನಾಡಿಯಾರು? ಹಾಗಾಗಿ ಅವರು ಏಕಾಂಗಿಗಳಾಗಿ ಸಂಪೂರ್ಣ ಮೌನಕ್ಕೆ ಶರಣಾಗಬೇಕಾಗು ತ್ತದೆ, ಸಮಾಜದಿಂದ ವಿಮುಖರಾಗಬೇಕಾಗುತ್ತದೆ. ಅರೆಗಿವುಡರ ಬದುಕನ್ನು ಸಾಧ್ಯವಾದಷ್ಟು ಸುಗಮಗೊಳಿಸುವ ಪ್ರಯತ್ನಗಳು ಇತಿಹಾಸದಲ್ಲಿ ಸಾಕಷ್ಟು ನಡೆದಿವೆ.

ಈ ದಿಶೆಯಲ್ಲಿ ಮೊದಲ ಪ್ರಯತ್ನವು 1600ರ ಯೂರೋಪಿನಲ್ಲಿ ನಡೆಯಿತು. ಅರೆಗಿವುಡರು ತಮ್ಮ ಅಂಗೈಯನ್ನು ಕಿವಿಯ ಹಾಲೆಯ ಹಿಂದೆ ಇಟ್ಟುಕೊಂಡು, ಮಾತನಾಡುವವರ ಧ್ವನಿಯನ್ನು ಸಂಗ್ರಹಿಸಲು ಅವರ ಕಡೆಗೆ ತುಸು ಬಾಗಿದರು. ಬಹುಶಃ ಅರೆಗಿವುಡುತನಕ್ಕೆ ನಮ್ಮ ಹಿರಿಯರು ರೂಪಿಸಿದ ಮೊದಲ ಪರಿಹಾರ. ನಂತರ ದನದ ಇಲ್ಲವೇ ಟಗರಿನ ಕೊಂಬನ್ನು ತೆಗೆದುಕೊಂಡರು.

ಅದರ ಚೂಪುತುದಿಯನ್ನು ಸವರಿ ನಯಗೊಳಿಸಿದರು. ಅದನ್ನು ತಮ್ಮ ಕಿವಿಯೊಳಗೆ ಇಟ್ಟು ಕೊಂಡು, ಮಾತನಾಡುವವರ ಕಡೆಗೆ ಕೊಂಬಿನ ಮತ್ತೊಂದು ತುದಿಯನ್ನು ತಿರುಗಿಸಿದರು. ಮಾತನಾಡುವವರ ಶಬ್ದವನ್ನು ಸಂಗ್ರಹಿಸುವುದು ಸುಲಭವಾಯಿತು. ಕಿವಿಯು ಸ್ವಲ್ಪ ಚೆನ್ನಾಗಿ ಕೇಳಲಾರಂಭಿಸಿತು. ಕೂಡಲೇ ಶ್ರೀಮಂತ ಅರೆಗಿವುಡರು ಬೆಳ್ಳಿ ಇಲ್ಲವೇ ಚಿನ್ನದಿಂದ ಮಾಡಿದ ಆಲಿಕೆಯಾಕಾರದ ತುತ್ತೂರಿಗಳನ್ನು ಹೋಲುವ ಟ್ರಂಪೆಟ್ ಸಂಗ್ರಾಹಕ ಶ್ರವಣ ಸಾಧನಗಳನ್ನು ಬಳಸಲು ಆರಂಭಿಸಿದರು. ಈ ವೈಯುಕ್ತಿಕ ತುತ್ತೂರಿ ಶ್ರವಣ ಸಾಧನವು ಎರಡು ಸಮಸ್ಯೆಗಳನ್ನು ಒಳಗೊಂಡಿತ್ತು.

Screenshot_2 R

ಮೊದಲನೆಯದು ಇದು ಸುತ್ತಮುತ್ತಲಿನ ಎಲ್ಲ ಶಬ್ದಗಳನ್ನು ಸಂಗ್ರಹಿಸಿ ಕಿವಿಗೆ ಊಡುತ್ತಿದ್ದ ಕಾರಣ, ಎಲ್ಲ ಗದ್ದಲದ ನಡುವೆ ಎದುರು ಮಾತನಾಡುತ್ತಿದ್ದವರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಎರಡನೆಯದು ಆಂ!... ಕೇಳಿಸಲಿಲ್ಲ. ಸ್ವಲ್ಪ ಜೋರಾಗಿ ಮಾತನಾಡಿ ಎಂದು ಪದೇ ಪದೇ ಬಿನ್ನವಿಸಿ ಕೊಳ್ಳಬೇಕಾಗಿತ್ತು. ಇದು ಬಹುಶಃ ಅರೆಗಿವುಡುತನ ಪರಿಹಾರಕ್ಕೆ ನಮ್ಮ ಹಿರಿಯರು ನಡೆಸಿದ ಮೊದಲ ಪ್ರಾಮಾಣಿಕ ಪ್ರಯತ್ನ.

ಇದೇ ತತ್ತ್ವದ ಮೇಲೆ, ವಿಶ್ವದ ಮೊದಲನೆಯ ಮಹಾ ಯುದ್ಧದಲ್ಲಿ, ಬೃಹತ್ ಶ್ರವಣ ಟ್ರಂಪೆಟ್‌ ಗಳನ್ನು ಸ್ಥಾಪಿಸಿ, ಶತ್ರುಗಳ ವಿಮಾನವು ಬರುತ್ತಿರುವುದನ್ನು ಪತ್ತೆಹಚ್ಚಬಲ್ಲ ಶಬ್ದ ಸಂಗ್ರಾಹಕ ರಡಾರನ್ನೂ ರೂಪಿಸಿ ಬಳಸಿದರು. ಲಡ್ವಿಗ್ ವಾನ್ ಬೀಥೋವೆನ್ (1770-1827), ಬಹುಶಃ ಈ ಜಗತ್ತು ಕಂಡ ಅತ್ಯಂತ ಪ್ರತಿಭಾನ್ವಿತ ಸಂಗೀತ ಸಂಯೋಜಕರಲ್ಲಿ ಒಬ್ಬ. ಅವನು ಪಿಯಾನೋ ವಾದಕ ನಾಗಿರುವುದರ ಜೊತೆಯಲ್ಲಿ ಅರೆಗಿವುಡನಾಗಿದ್ದ.

ಸಂಗೀತ ತಜ್ಞನಿಗೆ ಅತ್ಯಂತ ಮುಖ್ಯವಾಗಿ ಬೇಕಾದದ್ದು ಸೂಕ್ಷ್ಮ ಶ್ರವಣ ಸಾಮರ್ಥ್ಯ. ಅದುವೇ ಅವನಿಗೆ ಇರಲಿಲ್ಲ. ಅವನು ನಾನಾ ರೀತಿಯ ತುತ್ತೂರಿ ಶ್ರವಣ ಸಾಧನಗಳನ್ನು ಬಳಸಿದ. ಅವು ಅವನಿಗೆ ತೃಪ್ತಿಯನ್ನು ನೀಡಲಿಲ್ಲ. ಕೊನೆಗೆ ಅವನು ಶಬ್ದದ ವಿಶಿಷ್ಠ ಪ್ರತಿಫಲಿಸುವ ಗುಣವನ್ನು ಗಮನಿಸಿದ. ಹಾಗಾಗಿ ವಿವಿಧ ಗಾತ್ರದ ಕೋಣೆಗಳಲ್ಲಿ, ಕೇಳುತ್ತಿದ್ದ ಶಬ್ದಗಳ ಸ್ಪಷ್ಟತೆ ಭಿನ್ನವಾಗಿರು ತ್ತಿತ್ತು.

ಹಾಗಾಗಿ ತನಗೆ ಚೆನ್ನಾಗಿ ಕೇಳಿಸಬಹುದಾದ ಕೋಣೆಯಲ್ಲಿ ಅವನು ಸಂಗೀತ ಸಂಯೋಜನೆಯನ್ನು ನಡೆಸಲಾರಂಭಿಸಿದ. ಕೊನೆಗೆ ಅವನನ್ನು ಕಿವುಡುತನವು ಪೂರ್ಣವಾಗಿ ಆವರಿಸಿತು. ಆಗ ಅವನು ಶಬ್ದವನ್ನು ವರ್ಧಿಸುವ ಎಲ್ಲ ಕೃತಕ ಪ್ರಯತ್ನಗಳನ್ನು ಬಿಟ್ಟು ಸಂಪೂರ್ಣ ಮೌನ ಜಗತ್ತಿನಲ್ಲಿಯೇ ಸಂಗೀತ ಸಂಯೋಜನೆಯನ್ನು ಮಾಡಲಾರಂಭಿಸಿದ. ಅವನ ಸಂಯೋಜನೆಗಳು ಇಂದಿಗೂ ಜಗತ್ತಿನ ಸರ್ವಶ್ರೇಷ್ಠ ಸಂಯೋಜನೆಗಳಲ್ಲಿ ಒಂದಾಗಿವೆ.

1800ರ ಕೊನೆಯ ವರ್ಷಗಳು. ವಿದ್ಯುತ್ ಅನೇಕ ಪವಾಡಗಳ ಭರವಸೆಯನ್ನು ನೀಡಿತ್ತು. ಮಿಲ್ಲರ್ ರೀಸ್ ಹಚಿನ್ಸನ್ (1876-1944) ಎಂಬ ಅಮೆರಿಕದ ಎಲೆಕ್ಟ್ರಿಕಲ್ ಇಂಜಿನಿಯರ್. ಇವನು ಅಕೌ ಫೋನ್ ಎಂಬ ಜಗತ್ತಿನ ಮೊದಲ ವಿದ್ಯುತ್ ಚಾಲಿತ ಶ್ರವಣ ಸಾಧನವನ್ನು ರೂಪಿಸಿದ.

ಇದರಲ್ಲಿ ಒಂದು ಮೈಕ್ರೋಫೋನ್, ಒಂದು ಶ್ರವಣ ವರ್ಧಕ ಅಥವ ಆಂಪ್ಲಿಯೈಯರ್ ಹಾಗೂ ಒಂದು ಹೆಡ್ ಫೋನ್ ಇರುತ್ತಿದ್ದವು. ಮೈಕ್ರೋಫೋನ್ ಶಬ್ದವನ್ನು ಗ್ರಹಿಸಿದರೆ, ಆಂಪ್ಲಿಫೈಯರ್ ಅದನ್ನು ವರ್ಧಿಸುತ್ತಿತ್ತು. ವರ್ಧಿಸಿದ್ದನ್ನು ಹೆಡ್ ಫೋನ್ ಕೇಳಿಸುತ್ತಿತ್ತು. ಇದು ಬ್ಯಾಟರಿಯ ನೆರವಿ ನಿಂದ ಕೆಲಸ ಮಾಡುತ್ತಿತ್ತು. ಆಗ ಮೇಜಿನ ಮೇಲೆ ಇಡಬಹುದಾದ ದೊಡ್ಡ ಸಾಧನದಿಂದ ಹಿಡಿದು, ಅಂಗಿಯ ಕಿಸೆಯಲ್ಲಿ ಇಟ್ಟುಕೊಳ್ಳಬಹುದಾದಂತಹ ಸಂಚಾರಿ ಸಾಧನವೂ ರೂಪುಗೊಂಡಿತು.

ದೊಡ್ಡ ತುತ್ತೂರಿಗಳನ್ನು ತಮ್ಮೊಡನೆ ಒಯ್ಯುತ್ತಿದ್ದವರಿಗೆ ಈ ಆದಿ ಶಬ್ದ ವರ್ಧಕವು ಒಂದು ಮಹಾನ್ ಕೊಡುಗೆಯಾಗಿ ಕಂಡುಬಂದಿತು. ಇವು ಶಬ್ದಗಳನ್ನು ಸಂಗ್ರಹಿಸುವುದರ ಜೊತೆಯಲ್ಲಿ, ಅವನ್ನು ವರ್ಧಿಸುತ್ತಿತ್ತು. ಹಾಗಾಗಿ ಆಲಿಸುವ ಗುಣಮಟ್ಟ ಉತ್ತಮವಾಗಿತ್ತು. ಹಾಗಾಗಿ ಅತ್ಯಲ್ಪ ಕಾಲದಲ್ಲಿಯೇ ಅದು ಜನಪ್ರಿಯವಾಯಿತು.

1920-1930ರ ದಶಕ. ನೌಕಾಸೇನೆಯ ಇಂಜಿನಿಯರ್ ಅರ್ಲ್ ಹ್ಯಾನ್ಸನ್ ಮೊದಲ ವ್ಯಾಕ್ಯೂಂ ಟ್ಯೂಬ್‌ಗಳನ್ನು ಆವಿಷ್ಕರಿಸಿದ. ಇವನು ಟೆಲಿಫೋನುಗಳಲ್ಲಿ ಬಳಸುವ ಶಬ್ದ ಪ್ರೇಷಕ (ಟ್ರಾನ್ಸ್‌ ಮಿಟರ್) ಹಾಗೂ ಶಬ್ದ ಗ್ರಾಹಕಗಳನ್ನು (ರಿಸೀವರ್) ಸೂಕ್ಷ್ಮರೂಪದಲ್ಲಿ ಬಳಸಿ ವಕ್ಟೂಫೋನ್ ಎಂಬ ಶ್ರವಣ ಸಾಧನವನ್ನು ರೂಪಿಸಿ, ಆಲಿಸುವ ಗುಣಮಟ್ಟವನ್ನು ಸುಧಾರಿಸಿದ.

ಆನಂತರ ಬಂದ ಸಾಧನ ಟಿ-ಕಾಯಿಲ್ ಅಥವ ಟೆಲಿಕಾಯಿಲ್. ಚರ್ಚುಗಳಲ್ಲಿ ಹಾಗೂ ರಂಗ ಮಂದಿರದಲ್ಲಿ ಹಿಯರಿಂಗ್ ಲೂಪ್ಸ್ ಅಳವಡಿಸಿದರು. ಇವು ಮಾತನಾಡುವವರ ಧ್ವನಿಯನ್ನು ಅಯಸ್ಕಾಂತೀಯ ಅಲೆಗಳ ರೂಪದಲ್ಲಿ ಹೊರಡಿಸುತ್ತಿದ್ದವು. ಆ ಅಲೆಗಳು ಶ್ರವಣ ಸಾಧನವನ್ನು ಧರಿಸುವವರ ಕಿವಿಯನ್ನು ನೇರವಾಗಿ ತಲುಪುತ್ತಿತ್ತು.

ಆಗ ಮಾತನಾಡುವವರ ಧ್ವನಿಯು ಅವರಿಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಹಿನ್ನೆಲೆಯ ಇತರ ಶಬ್ದಗಳು ಕೇಳಿಸುತ್ತಿರಲಿಲ್ಲ. ೧೯೫೨ರಲ್ಲಿ ಮೊತ್ತ ಮೊದಲ ಟ್ರಾನ್ಸಿಸ್ಟರನ್ನು ರೂಪಿಸಿದರು. ದೊಡ್ಡ ವ್ಯಾಕ್ಯೂಮ್ ಟ್ಯೂಬ್‌ಗಳ ಸ್ಥಾನವನ್ನು ಆಕ್ರಮಿಸಿದ ಟ್ರಾನ್ಸಿಸ್ಟರ್ ಚಿಕ್ಕದಾಗಿ ಹಾಗೂ ಅಡಕವಾಗಿ ಯೂ ಇದ್ದವು. ವಿಜ್ಞಾನಿಗಳು ಟ್ರಾನ್ಸಿಸ್ಟರ್ ಬಳಸಿ ರೇಡಿಯೊವನ್ನು ರೂಪಿಸುವ ಮೊದಲು ಶ್ರವಣ ಸಾಧನವನ್ನು ರೂಪಿಸಿದರು.

ಸೋನೋಟೋನ್-೧೦೧೦ ಎಂಬ ಸಾಧನದಲ್ಲಿ ಎರಡು ಮಿನಿ ವ್ಯಾಕ್ಯೂಂ ಟ್ಯೂಬ್‌ಗಳ ಜೊತೆ ಯಲ್ಲಿ ಟ್ರಾನ್ಸಿಸ್ಟರ್ ಬಳಸಿ ಮಾರುಕಟ್ಟೆಗೆ ಬಿಟ್ಟರು. ಅದು ಅಪಾರ ಜನಪ್ರಿಯತೆಯನ್ನು ಗಳಿಸಿತು. ನಂತರ ಸಂಪೂರ್ಣ ಟ್ರಾನ್ಸಿಸ್ಟರಿಂದ ಶ್ರವಣ ಸಾಧನಗಳನ್ನು ರೂಪಿಸಿದರು. ಇದು ಅತ್ಯಂತ ಪುಟ್ಟ ಶ್ರವಣ ಸಾಧನ. ಅದರೊಳಗೆಯೇ ಇತ್ತು ಬ್ಯಾಟರಿ. ಹೆಚ್ಚು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಇಂತಹದ್ದನ್ನು ಯಾರ ಕಣ್ಣಿಗೂ ಕಾಣದಂತೆ, ಕಿವಿಯ ಹಾಲೆಯ ಹಿಂದೆ ಕೂರಿಸಬಹುದಾಗಿತ್ತು. ಇನ್ನು ಕೆಲವು ನಮೂನೆಗಳನ್ನು ಕನ್ನಡಕದ ಫ್ರೇಮಿನ ಒಳಗಡೆಯೇ ಅಳವಡಿಸಿದರು. 1970ರ ದಶಕ. ಮೈಕ್ರೋ ಪ್ರೊಸೆಸರನ್ನು ರೂಪಿಸಿದರು.

ಎಡ್ಗರ್ ವಿಲ್ಚೂರ್ (1917-2011) ಒಂದು ಮಲ್ಟಿಚಾನಲ್ ಅನಲಾಗ್ ಆಂಪ್ಲಿಟ್ಯೂಡ್ ಕಂಪ್ರೆಶನ್ ಡಿವೈಸ್ ರೂಪಿಸಿದ. ಇದು ಶಬ್ದ ಸಂಜ್ಞೆಗಳನ್ನು ಅವುಗಳ ತರಂಗಾಂತರಕ್ಕೆ ಅನುಗುಣವಾಗಿ ಪ್ರತ್ಯೇಕಿಸಿ, ವರ್ಧಿಸುತ್ತಿದ್ದವು. ಇದು ಹಿನ್ನೆಲೆ ಶಬ್ದಗಳನ್ನು ಕಡಿಮೆ ಮಾಡಿ, ಮಾತನಾಡುವವರ ಶಬ್ದಗಳು ಮಾತ್ರ ಸ್ಪಷ್ಟವಾಗಿ ಕೇಳುವಂತೆ ಮಾಡಿತು. ಶಬ್ದ ತರಂಗಗಳು ಗಾಳಿಯ ಮೂಲಕ ನಮ್ಮ ಕಿವಿಯನ್ನು ಸೇರುವಂತೆ, ನಮ್ಮ ಮುಖದ ಮೂಳೆಗಳು ಅವನ್ನು ವರ್ಧಿಸಿ ಕಿವಿಗೆ ಕೇಳಿಸುತ್ತವೆ.

ಇದನ್ನು ಗಮನಿಸಿದ ಸ್ವೀಡಿಶ್ ಶಸ್ತ್ರವೈದ್ಯ ಆಂಡರ್ಸ್ ಜೆಲ್‌ಸ್ಟ್ರಾಮ್ 1977ರಲ್ಲಿ ಕಿವಿಯ ಹಿಂಭಾಗದಲ್ಲಿರುವ ಸ್ತನರೂಪಿ ಮೂಳೆಯಲ್ಲಿ (ಮ್ಯಾಸ್ಟಾಯ್ಡ್) ಶಸ್ತ್ರಚಿಕಿತ್ಸೆಯ ಮೂಲಕ ಒಂದು ಸ್ಪಂದಕವನ್ನು (ವೈಬ್ರೇಟರ್) ಅಳವಡಿಸಿ, ಮಾತುಗಳು ಚೆನ್ನಾಗಿ ಕೇಳಿಸುವಂತೆ ಮಾಡಿದ. ಇದನ್ನು ಅಸ್ಥಿಸ್ಥಾಪಿತ ಶ್ರವಣ ಸಾಧನ (ಬಾಹಾ=ಬೋನ್ ಆಂಕರ್ಡ್ ಹಿಯರಿಂಗ್ ಏಡ್) ಎಂದು ಕರೆದರು. ಈ ಶ್ರವಣ ಸಾಧನಗಳು ಉತ್ತಮ ಗುಣಮಟ್ಟದ ಆಲಿಸುವ ಸಾಮರ್ಥ್ಯವನ್ನು ನೀಡಿದರೂ ಸಹ, ಶಸಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಜನರು ಹಿಂದೆಗೆದ ಕಾರಣ, ಅಷ್ಟು ಜನಪ್ರಿಯವಾಗಲಿಲ್ಲ.

ಕೊನೆಗೆ 1996ರಲ್ಲಿ ವೈಡೆಕ್ಸ್ ಸಂಸ್ಥೆಯು ಸೆನ್ಸೋ ಎಂಬ ಸಂಪೂರ್ಣ ಡಿಜಿಟಲ್ ಶ್ರವಣ ಸಾಧನ ವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದು ನಿಜವಾದ ಅರ್ಥದಲ್ಲಿ ಕ್ರಾಂತಿಯನ್ನು ಉಂಟು ಮಾಡಿತು. ಇದುವರೆಗೂ ಬಂದ ಎಲ್ಲ ಶ್ರವಣ ಸಾಧನಗಳು ತಲೆಗೆಲ್ಲ ಒಂದೇ ಮಂತ್ರ ಎಂಬಂತೆ ಎಲ್ಲ ರೀತಿಯ ಶಬ್ದಗಳನ್ನು ಕಿವಿಯೊಳಗೆ ರವಾನಿಸುತ್ತಿದ್ದವು.

ಈ ಸಾಧನವನ್ನು ಮೊದಲ ಬಾರಿಗೆ ವ್ಯಕ್ತಿಗತವಾಗಿ ರೂಪಿಸಲು ಸಾಧ್ಯವಾಯಿತು. ಶ್ರವಣ ತಜ್ಞನು (ಆಡಿಯಾಲಜಿಸ್ಟ್) ವ್ಯಕ್ತಿಯ ಶ್ರವಣ ಸಾಮರ್ಥ್ಯವನ್ನು ಪರೀಕ್ಷಿಸಿ, ಯಾವ ಯಾವ ಶಬ್ದ ಆವರ್ತನ ಗಳು (ಫ್ರೀಕ್ವೆನ್ಸಿ) ವ್ಯಕ್ತಿಗೆ ಕೇಳಿಸುತ್ತಿಲ್ಲ ಎನ್ನುವುದರ ಮೌಲ್ಯ ಮಾಪನವನ್ನು ಮಾಡಿ, ಆ ಆವರ್ತನ ಗಳಿಗೆ ಹೊಂದುವ ರೀತಿಯಲ್ಲಿ ಡಿಜಿಟಲ್ ಶ್ರವಣ ಸಾಧನವನ್ನು ಹೊಂದಿಸಿ ನೀಡಿದರು. ಇದು ಅತ್ಯುತ್ತಮ ಗುಣಮಟ್ಟದ ಆಲಿಸುವಿಕೆಯ ಅನುಭವವನ್ನು ನೀಡಲಾರಂಭಿಸಿತು.

ಇದನ್ನು ಕಿವಿಯ ಹಾಲೆಯ ಹಿಂಭಾಗದಲ್ಲಿ ಅಳವಡಿಸಬಹುದಾಗಿತ್ತು. ಕಿವಿಯ ಒಳಗೆ ತೂರಿಸ ಬಹುದಾದಂತಹ ಪುಟ್ಟ ಸಾಧನಗಳೂ ಮಾರುಕಟ್ಟೆಗೆ ಬಂದವು 2014ರಲ್ಲಿ ಜಿಎನ್ ರಿಸೌಂಡ್ ಸಂಸ್ಥೆಯು ಲಿಂಕ್ಸ್ ಶ್ರವಣ ಸಾಧನವನ್ನು ಬಿಡುಗಡೆಮಾಡಿತು. ಇದನ್ನು ವ್ಯಕ್ತಿ ಬಳಸುವ ಐಫೋನ್ ಜೊತೆಯಲ್ಲಿ ಸಮೀಕರಿಸಿದ್ದರು. ಹಾಗಾಗಿ ಐಫೋನಿಗೆ ಬರುವ ಕರೆಗಳೆಲ್ಲ ನೇರವಾಗಿ ಶ್ರವಣ ಸಾಧನಗಳಿಗೆ ರವಾನೆಯಾದವು. ಹಾಗಾಗಿ ಅತ್ಯುತ್ತಮ ಗುಣಮಟ್ಟದ ಶಬ್ದಗಳು ಕೇಳಲಾರಂಭಿಸಿ ದರು.

ಐಫೋನಿನ ಸಂಗೀತವು ನೇರವಾಗಿ ಕಿವಿಗಳಿಗೆ ರವಾನೆಯಾಗಲಾರಂಬಿಸಿದವು. ಯಾವುದೇ ರೀತಿಯ ಡಾಂಗಲ್ ಆಗಲಿ, ನೆಕ್ ಲೂಪ್ ಆಗಲಿ ಅಗತ್ಯವಿರಲಿಲ್ಲ. ಅರೆಗಿವುಡರ ಬದುಕನ್ನು 99%ರಷ್ಟು ಸುಧಾರಿಸಿದವು. ಅಮೆರಿಕದ ಎಫ್‌ ಡಿಎ, ೨೦೨೨ರಿಂದ ಶ್ರವಣಸಾಧನಗಳನ್ನು ವೈದ್ಯರ ನೆರವಿಲ್ಲದೆ ಕೊಳ್ಳಲು ಅನುಕೂಲತೆಯನ್ನು ಮಾಡಿಕೊಟ್ಟಿತು.

ಸೌಮ್ಯ ಅಥವಾ ಮಧ್ಯಮ ಪ್ರಮಾಣದ ಶ್ರವಣ ವೈಕಲ್ಯ ಉಳ್ಳವರು ಅಂಗಡಿಗೆ ಹೋಗಿ ತಮಗೆ ಅಗತ್ಯವಾದ ಸಾಧನವನ್ನು ಕೊಳ್ಳುವುದು ಸುಲುಭವಾಯಿತು. ಕೊನೆಗೆ 2024ರಲ್ಲಿ ಎಫ್‌ ಡಿಎ ಓಟಿಸಿ ಹಿಯರಿಂಗ್ ಏಡ್ ಸಾಫ್ಟ್‌ ವೇರ್‌ನ್ನು ಬಿಡುಗಡೆ ಮಾಡಿತು. ಈ ಸಾಫ್ಟ್‌ ವೇರನ್ನು ಆಪಲ್ ಏರ್-ಪಾಡ್‌ಗಳಲ್ಲಿ ಅಳವಡಿಸಬಹುದಾಗಿತ್ತು. ಏರ್ ಪಾಡುಗಳು ಸಂಗೀತವನ್ನೇ ಕೇಳಲೆಂದೇ ರೂಪಿಸಿರುವ ವೈಯಕ್ತಿಕ ಶ್ರವಣ ಸಾಧನಗಳು. ಇವುಗಳಲ್ಲಿ ಈ ಸಾಫ್ಟ್‌ ವೇರನ್ನು ಅಳವಡಿಸಿದರೆ, ಸಂಗೀತದ ಜೊತೆಯಲ್ಲಿ ಎಲ್ಲ ಟೆಲಿಫೋನ್ ಕರೆಗಳನ್ನು ನೇರವಾಗಿ ಏರ್ ಪಾಡುಗಳ ಮೂಲಕವೇ ಸ್ವೀಕರಿಸಬಹುದು. ಎಷ್ಟೇ ಗದ್ದಲಮಯ ಪರಿಸರದಲ್ಲಿಯೂ, ಫೋನಿನಲ್ಲಿ ಮಾತನಾಡುತ್ತಿರುವವರ ಶಬ್ದವು ಸ್ಪಷ್ಟವಾಗಿ ಕೇಳಿಸುತ್ತದೆ.

ಇವು ಸ್ವಲ್ಪ ದುಬಾರಿಯಾದರೂ ಸರಿ, ಅರೆಗಿವುಡರ ಬದುಕನ್ನು ಬಂಗಾರನ್ನಾಗಿಸಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಈಗ ಮಾರುಕಟ್ಟೆಯಲ್ಲಿ ರಿ-ಸೌಂಡ್ ಶ್ರವಣ ಸಾಧನಗಳನ್ನು ತಮ್ಮ ಮೊಬೈಲ್ ಫೋನಿನಲ್ಲಿರುವ ಬ್ಲೂಟೂತಿಗೆ ಸರಿಹೊಂದಿಸಿ, ಕರೆಗಳನ್ನು ನೇರವಾಗಿ ಸ್ವೀಕರಿಸಬಹು ದಾದ ಸರಳ, ಹೆಚ್ಚು ಖರ್ಚಿಲ್ಲದ ಹಾಗೂ ಪರಿಣಾಮಕಾರಿಯಾದ ಅನುಕೂಲತೆಯೂ ದೊರೆಯು ತ್ತಿದೆ, ಹಾಗಾಗಿ ಅರೆವುಡುತನವು ಇಂದು ಖಂಡಿತ ಒಂದು ಶಾಪವಲ್ಲ ಎನ್ನಬಹುದು.

ಡಾ.ನಾ. ಸೋಮೇಶ್ವರ

View all posts by this author