Vishweshwar Bhat Column: ಡಿಜೆಐ ನಿಯೋ ಡ್ರೋನ್
ಅಸಲಿಗೆ ಈ ಡ್ರೋನ್ ಹಾರಿಸಲು ರಿಮೋಟ್ ಕಂಟ್ರೋಲರ್ ( RC ) ಬೇಕಾಗಿಲ್ಲ. ನಮ್ಮ ಮೊಬೈಲನ್ನೇ RC ಆಗಿ ಪರಿವರ್ತಿಸಿಕೊಳ್ಳಬಹುದು. RC ಸಹಾಯದಿಂದಲೂ ಹಾರಿಸಬಹುದು. ಇದಕ್ಕಿಂತ ಸರಳವಾಗಿ ಒಂದು ಡ್ರೋನನ್ನು ರೂಪಿಸಲು ಸಾಧ್ಯವೇ ಇಲ್ಲ. 16 ವರ್ಷಕ್ಕಿಂತ ಮೇಲ್ಪಟ್ಟವರು ಇದನ್ನು ಬಳಸ ಬಹುದು ಎಂದು ಡಿಜೆಐ ಸಂಸ್ಥೆ ಹೇಳಿದ್ದರೂ, ಅಸಲಿಗೆ ಇದು ಅದಕ್ಕಿಂತ ಕಡಿಮೆ ವಯಸ್ಸಿನವರಿಗೇ ಹೆಚ್ಚು ಖುಷಿ ಕೊಡಬಹುದು


ಸಂಪಾದಕರ ಸದ್ಯಶೋಧನೆ
ಡಿಜೆಐ ಬಿಡುಗಡೆ ಮಾಡಿರುವ ನಿಯೋ (Neo) ಎಂಬ 135 ಗ್ರಾಂ ತೂಕದ ಡ್ರೋನ್ ನನ್ನ ಬಳಿಯಿದೆ. ಇದು ಇಲ್ಲಿ ತನಕ ಡಿಜೆಐ ಬಿಡುಗಡೆ ಮಾಡಿರುವ ಡ್ರೋನ್‌ಗಳ ಪೈಕಿ ಅತ್ಯಂತ lightest and most compact aerial videographer ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಈ ಡ್ರೋನ್‌ನ ಟೇಕಾಫ್ ಮತ್ತು ಲ್ಯಾಂಡಿಂಗ್ ಅನ್ನು ಸುರಕ್ಷಿತವಾಗಿ ನಿಮ್ಮ ಹಸ್ತದಿಂದಲೇ ಮಾಡಬಹುದು. ಇದು ಸದಾ ನಮ್ಮನ್ನೇ ಫೋಕಸ್ ಮಾಡುತ್ತದೆ. ಈ ಡ್ರೋನನ್ನು ಅಂಗೈಯಲ್ಲಿಟ್ಟು ಕೊಂಡು, ಕೆಮರಾ ವನ್ನು ನಮ್ಮ ಕಡೆಗೆ ಮುಖ ಮಾಡಿ ಹಿಡಿದರೆ, ಅದು ನಮ್ಮನ್ನೇ ಕೇಂದ್ರೀಕರಿಸಿ, ಸಿನಿಮ್ಯಾಟಿಕ್ ದೃಶ್ಯಗಳನ್ನು ಶೂಟ್ ಮಾಡುತ್ತದೆ. ಇಲ್ಲಿ ತನಕ ಡಿಜೆಐ ಅಭಿವೃದ್ಧಿಪಡಿಸಿದ ಡ್ರೋನ್‌ನ ಅತಿ ಕಡಿಮೆ ತೂಕ 249 ಗ್ರಾಂ ಇತ್ತು.
ನಿಯೋ ಅದಕ್ಕಿಂತ 114 ಗ್ರಾಂ ಕಡಿಮೆ ಭಾರ ಅಥವಾ ಹಗುರ! ಡಿಜೆಐ ನಿಯೋ ಡ್ರೋನನ್ನು ಇನ್ಸ್ಟಾ ಅಥವಾ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರುಗಳಿಗಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಮನೆಯೊಳಗೂ ಸುಲಭವಾಗಿ ಹಾರಿಸಬಹುದು. ಗೋಡೆ, ಮರ, ಕಂಬ ಅಥವಾ ಇನ್ನಿತರ ಅಡೆ-ತಡೆಗೆ ಡಿಕ್ಕಿ ಹೊಡೆಯಬಹುದು ಎಂಬ ಚಿಂತೆಯಿಲ್ಲ. ಕಾರಣ ಇದರ ರೆಕ್ಕೆಗಳಿಗೆ ಕವಚಗಳಿವೆ. ಡಿಕ್ಕಿ ಹೊಡೆದರೂ ಏನೂ ಆಗುವುದಿಲ್ಲ.
ಇದನ್ನೂ ಓದಿ: Vishweshwar Bhat Column: ಸುರಕ್ಷತೆ ಮತ್ತು ಆರಾಮ ವಿಮಾನ ಪ್ರಯಾಣದ ಓನಾಮ
ಒಂದು ವೇಳೆ ಮನುಷ್ಯರಿಗೆ ಡಿಕ್ಕಿ ಹೊಡೆದರೂ ಗಾಯವಾಗುವುದಿಲ್ಲ. ಅಸಲಿಗೆ ಈ ಡ್ರೋನ್ ಹಾರಿಸಲು ರಿಮೋಟ್ ಕಂಟ್ರೋಲರ್ ( RC ) ಬೇಕಾಗಿಲ್ಲ. ನಮ್ಮ ಮೊಬೈಲನ್ನೇ RC ಆಗಿ ಪರಿವರ್ತಿಸಿ ಕೊಳ್ಳಬಹುದು. RC ಸಹಾಯದಿಂದಲೂ ಹಾರಿಸಬಹುದು. ಇದಕ್ಕಿಂತ ಸರಳವಾಗಿ ಒಂದು ಡ್ರೋನನ್ನು ರೂಪಿಸಲು ಸಾಧ್ಯವೇ ಇಲ್ಲ. 16 ವರ್ಷಕ್ಕಿಂತ ಮೇಲ್ಪಟ್ಟವರು ಇದನ್ನು ಬಳಸಬಹುದು ಎಂದು ಡಿಜೆಐ ಸಂಸ್ಥೆ ಹೇಳಿದ್ದರೂ, ಅಸಲಿಗೆ ಇದು ಅದಕ್ಕಿಂತ ಕಡಿಮೆ ವಯಸ್ಸಿನವರಿಗೇ ಹೆಚ್ಚು ಖುಷಿ ಕೊಡಬಹುದು. ಡಿಜೆಐ ನಿಯೋ ಡ್ರೋನ್ RC ಸಹಾಯದಿಂದ, ಸೆಕೆಂಡಿಗೆ 8 ಮೀಟರ್ ವೇಗದಲ್ಲಿ ಸುಮಾರು 7 ಕಿ.ಮೀ. ದೂರದವರೆಗೆ ಹಾರಬಲ್ಲುದು.
ಇದು ಅತ್ಯಂತ ಹಗುರಾದ ಡ್ರೋನ್ ಆಗಿರುವುದರಿಂದ ಬಲವಾದ ಗಾಳಿ ಬೀಸಿದರೆ, ಕ್ರ್ಯಾಶ್ ಆಗುವ ಸಂಭವವಿರುತ್ತದೆ. ನಮ್ಮ ಸುತ್ತಮುತ್ತ 10 ಮೀ. ಒಳಗೆ, 10 ಮೀ. ಎತ್ತರದವರೆಗೆ ಈ ಡ್ರೋನ್ ಬಳಸುವುದು ವಾಸಿ. ಅಷ್ಟಕ್ಕೂ ಇದರ ರೇಂಜ್ 50 ಮೀಟರ್. ಸೈಕ್ಲಿಂಗ್, ಸ್ಕೇಟ್ ಬೋರ್ಡಿಂಗ್, ರನ್ನಿಂಗ್, ಹೈಕಿಂಗ್ ಮಾಡುವಾಗ ಈ ಡ್ರೋನ್ ಬಳಸಬಹುದು. ಅದು ನಿಮ್ಮ ವೇಗದಲ್ಲಿಯೇ ನಿಮ್ಮನ್ನು ಹಿಂಬಾಲಿಸುತ್ತಾ ಅದ್ಭುತ ಎನಿಸುವ ದೃಶ್ಯಗಳನ್ನು ಸೆರೆಹಿಡಿಯಬಲ್ಲದು.
ದೃಶ್ಯಗಳನ್ನು ಈ ಡ್ರೋನ್, ಹಾರಿಜಾಂಟಲ್ ಮತ್ತು ವರ್ಟಿಕಲ್ ರೂಪದಲ್ಲಿ ಚಿತ್ರೀಕರಿಸಬಲ್ಲುದು. ಡಿಜೆಐ ನಿಯೋಗೆ ಕೆಲವು ಮಿತಿಗಳೂ ಇವೆ. ಇದರ ದೊಡ್ಡಣ್ಣಂದಿರಿಗೆ ಫಾರ್ವರ್ಡ್, ಬ್ಯಾಕ್‌ವರ್ಡ್ ಮತ್ತು ಸೈಡ್ ಸೆನ್ಸರ್‌ಗಳಿವೆ. ಆದರೆ ಆ ಭಾಗ್ಯ ಇದಕ್ಕಿಲ್ಲ. ಹೀಗಾಗಿ ಇದನ್ನು ಜಾಗರೂಕವಾಗಿ ಹಾರಿಸ ಬೇಕು. ಅಂದ ಹಾಗೆ ಈ ಡ್ರೋನ್‌ನ ಗರಿಷ್ಠ ಹಾರಾಟದ ಸಮಯ 18 ನಿಮಿಷ. ನಂತರ ಬ್ಯಾಟರಿ ಬದಲಿಸಿಕೊಳ್ಳಬೇಕು.
ಸಾಮಾನ್ಯವಾಗಿ ಎಲ್ಲರೂ ಅವಶ್ಯ ಕೇಳುವ ಪ್ರಶ್ನೆ- ಈ ಡ್ರೋನ್ ಬೆಲೆ ಎಷ್ಟು, ಎಲ್ಲಿ ಸಿಗುತ್ತದೆ? ರಿಮೋಟ್ ಕಂಟ್ರೋಲ್ ಮತ್ತು ಹೆಚ್ಚುವರಿ ಬ್ಯಾಟರಿ ಇರುವ (ಇದಕ್ಕೆ Fly By Combo ಅಂತಾರೆ) ಡ್ರೋನ್‌ಗೆ (ಅಮೆರಿಕದಲ್ಲಿ) 30 ಸಾವಿರ ರುಪಾಯಿ. ಆದರೆ ಬೆಂಗಳೂರಿನಲ್ಲಿ 45 ಸಾವಿರ ರುಪಾಯಿ. ರಿಮೋಟ್ ಕಂಟ್ರೋಲ್ ಮತ್ತು ಹೆಚ್ಚುವರಿ ಬ್ಯಾಟರಿ ಇರದ ಡ್ರೋನ್‌ಗೆ 15 ಸಾವಿರ ರುಪಾಯಿ, ಬೆಂಗಳೂರಿನಲ್ಲಿ 28-30 ಸಾವಿರ ರುಪಾಯಿ. ಇದು ಪಿಕ್‌ನಿಕ್‌ಗೆ ಹೇಳಿ ಮಾಡಿಸಿದ ಡ್ರೋನ್. ಇದನ್ನು ಬಳಸಲು ಯಾರ ಅನುಮತಿ ಬೇಕಿಲ್ಲ. ಮನೆಯೊಳಗಿನ ಸಣ್ಣ-ಪುಟ್ಟ ಸಮಾರಂಭಗಳ ದೃಶ್ಯ ಸೆರೆಹಿಡಿಯಲು ಸಹ ಉಪಯುಕ್ತ.