ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ನಿಮ್ಮ ನೇತ್ರಗಳ ಶತ್ರು- ಮಿತ್ರರ ಬಗ್ಗೆ ಬಲ್ಲಿರಾ... ?

ಮಧ್ಯಮ ವಯಸ್ಸಿನಲ್ಲಿ ವೃತ್ತಿಪರ ತೊಂದರೆಗಳಾದ ಕಣ್ಣುರಿ, ಕಣ್ಣುಗಳ ಸುತ್ತ ಕಪ್ಪು ಕಲೆ, ತಲೆನೋವು ನಿದ್ರಾಹೀನತೆ ಸರ್ವೇಸಾಮಾನ್ಯವಾಗಿದೆ. ಕೆಲವರ ಜತೆ ನಾನು ಚರ್ಚೆ ಮಾಡುವಾಗ, ಕಣ್ಣಿನ ಆರೋಗ್ಯದ ಕುರಿತಾಗಿ ಮಾತನಾಡುವಾಗ ಅವರು, ‘ಈಗಿನ ಕಾಲದಲ್ಲಿ ಕನ್ನಡಕ ಹಾಕಿ ಕೊಳ್ಳಲೇಬೇಕು, ಏನೂ ಮಾಡಕ್ಕಾಗಲ್ಲ. ನಾರ್ಮಲ್ ಆಗ್ಬಿಟ್ಟಿದೆ!’ ಅಂತ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ನಿಮ್ಮ ನೇತ್ರಗಳ ಶತ್ರು- ಮಿತ್ರರ ಬಗ್ಗೆ ಬಲ್ಲಿರಾ... ?

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ನಾನೊಬ್ಬ ಭರತನಾಟ್ಯ ಕಲಾವಿದೆ. ಸುಮಾರು 25ಕ್ಕೂ ಹೆಚ್ಚಿನ ವರ್ಷಗಳಿಂದ ಈ ಶಾಸ್ತ್ರೀಯ ನೃತ್ಯ ಪ್ರಕಾರವನ್ನು ಅಭ್ಯಾಸ ಮಾಡುತ್ತಿದ್ದೇನೆ. ಹಾಗೆಯೇ, ಆಸಕ್ತರಿಗೆ ನೃತ್ಯವನ್ನು ಕಲಿಸುತ್ತೇನೆ. ಭರತ ನಾಟ್ಯ ಕಲೆಯಲ್ಲಿ ದೈಹಿಕ ಚಲನೆಯಷ್ಟೇ ಮುಖ್ಯ ‘ಅಭಿನಯ’. ಅಭಿನಯದ ಮೂಲಕವೇ ಮನಸ್ಸಿನ ಭಾವನೆಗಳ ಅಭಿವ್ಯಕ್ತಿ. ವಿವಿಧ ಸನ್ನಿವೇಶಗಳಲ್ಲಿರುವ ಭಾವವನ್ನು ಮತ್ತು ಭಾವನೆ ಗಳನ್ನು ನೃತ್ಯ ಕಲಾವಿದರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರಿಗೆ ತಲುಪಿಸಿ, ಅವರಲ್ಲಿ ರಸಾನು ಭೂತಿ ಆಗುವ ಹಾಗೆ ಮಾಡಬಲ್ಲರು. ಇದೇ ಕಲೆಯ ಶಕ್ತಿ. ಕಲೆಯನ್ನು ನೋಡುವಾಗ ನಮ್ಮ ಜೀವನದಲ್ಲಿರುವ ಎಲ್ಲಾ ದುಃಖ-ನೋವು ಗಳನ್ನು ಮರೆತು ಕೆಲಕಾಲವಾದರೂ ಪರಮಾನಂದದ ಸ್ಥಿತಿಯನ್ನು ಅನುಭವಿಸುವ ಕಾರಣ, ಕಲೆಗೆ ಅಷ್ಟೊಂದು ಮಹತ್ವ.

ಹಾಗಾಗಿಯೇ, ನಮ್ಮ ಸನಾತನ ಪರಂಪರೆಯಲ್ಲಿ ಕಲೆಯನ್ನು ಆರಾಧಿಸು ವುದು. ಕಲಾವಿದರು ಇಂಥ ದೈವಿಕ ಆನಂದವನ್ನು ಪ್ರೇಕ್ಷಕರಿಗೆ ನೀಡಬೇಕಾದರೆ ಹಲವಾರು ವರ್ಷಗಳ ತಪಸ್ಸು ಮತ್ತು ಸಾಧನೆ ಅವಶ್ಯಕ.

ಒಬ್ಬ ಕಲಾವಿದ ಅತ್ಯಂತ ಸೂಕ್ಷ್ಮವಾದ ಭಾವಾಭಿವಹನಕ್ಕೆ ತನ್ನ ಸಂಪೂರ್ಣ ಕಾಯವನ್ನೇ ಸಾಧನ ವಾಗಿಸಿದರೂ ಅದರಲ್ಲಿ ‘ಕಣ್ಣುಗಳೇ’ ಪ್ರಧಾನ. ಕಣ್ಣುಗಳ ಮೂಲಕ ವ್ಯಕ್ತಪಡಿಸಲಾಗದ ರಸವುಂಟೆ? ಭಾವವುಂಟೆ? ಕೇವಲ ಒಂದು ಕಣ್ಣ ಸನ್ನೆಯಿಂದ ಎಷ್ಟೋ ಕಥೆಗಳನ್ನು ಹೇಳಿಬಿಡಬಹುದು. ಹಾಗಾಗಿಯೇ, ನಾಟ್ಯದಲ್ಲಿ ‘ದೃಷ್ಟಿ’ಗೆ ಅಷ್ಟು ಮಹತ್ವ. ಜಗನ್ಮಾತೆಯಾದ ಭಗವತಿಯು ಅವಳ ಕೃಪಾ ‘ಕಟಾಕ್ಷ’ದಿಂದಲೇ ಸಂಪೂರ್ಣ ಸೃಷ್ಟಿಗೆ ಸಂಚಲನ ನೀಡುತ್ತಾಳೆ.

ಇದನ್ನೂ ಓದಿ: Dr Sadhanashree Column: ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ?!

ಹಾಗೆಯೇ, ಸೃಷ್ಟಿಯ ಪ್ರಳಯವು ಆಗುವುದು ಶಿವನ ಮೂರನೇ ‘ಕಣ್ಣು’ ತೆರೆದಾಗ. ಅಂತೆಯೇ, ಆಯುರ್ವೇದ ಶಾಸ್ತ್ರದಲ್ಲಿಯೂ ಸರ್ವೇಂದ್ರಿಯಗಳಲ್ಲಿ ನಮ್ಮ ನಯನಗಳಿಗೇ ಮೊದಲ ಸ್ಥಾನ. ಎಲ್ಲ ಇಂದ್ರಿಯಗಳಲ್ಲಿಯೂ ಪ್ರಧಾನವಾದದ್ದು ನಮ್ಮ ಕಣ್ಣುಗಳು.

ಆದರೆ, ವರ್ಷಗಳು ಕಳೆದಂತೆ ಈ ನಯನೇಂದ್ರಿಯಗಳು ತಮ್ಮ ಕಾಂತಿಯನ್ನು ಕಳೆದು ಕೊಳ್ಳುತ್ತಿರು ವುದಕ್ಕೆ ಕಾರಣವೇನು? ಐದು ವರ್ಷದ ಬಾಲಕ ಬಾಲಕಿಯರಿಗೆ ಅವರ ಮುಖಕ್ಕಿಂತ ದೊಡ್ಡದಾಗಿ ರುವ ಕನ್ನಡಕಗಳೇ ಆಭರಣಗಳಾಗಿವೆ. 30 ವರ್ಷ ದಾಟುತ್ತಲೇ ಸರ್ಜರಿಗಳಿಗೆ ಮೊರೆ ಹೋಗುವ ಪರಿಸ್ಥಿತಿ. 60ರ ಆಸುಪಾಸಿನ ಪೊರೆಯ ಪಿಡುಗು. ಕನ್ನಡಕ ಇಲ್ಲದೆ ಜೀವನ ನಿರ್ವಹಣೆಯೇ ಅಸಾಧ್ಯ ಎನ್ನುವವರ ಸಂಖ್ಯೆ ಎಷ್ಟೋ.

ಮಧ್ಯಮ ವಯಸ್ಸಿನಲ್ಲಿ ವೃತ್ತಿಪರ ತೊಂದರೆಗಳಾದ ಕಣ್ಣುರಿ, ಕಣ್ಣುಗಳ ಸುತ್ತ ಕಪ್ಪು ಕಲೆ, ತಲೆನೋವು ನಿದ್ರಾಹೀನತೆ ಸರ್ವೇಸಾಮಾನ್ಯವಾಗಿದೆ. ಕೆಲವರ ಜತೆ ನಾನು ಚರ್ಚೆ ಮಾಡುವಾಗ, ಕಣ್ಣಿನ ಆರೋಗ್ಯದ ಕುರಿತಾಗಿ ಮಾತನಾಡುವಾಗ ಅವರು, ‘ಈಗಿನ ಕಾಲದಲ್ಲಿ ಕನ್ನಡಕ ಹಾಕಿ ಕೊಳ್ಳಲೇಬೇಕು, ಏನೂ ಮಾಡಕ್ಕಾಗಲ್ಲ. ನಾರ್ಮಲ್ ಆಗ್ಬಿಟ್ಟಿದೆ!’ ಅಂತ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಇದು ಕಾಲದ ದುಷ್ಪರಿಣಾಮವೆಂದು ಅದನ್ನು ಒಪ್ಪಿಕೊಂಡು ಅನುಭವಿಸಬೇಕು ಎಂದು ಸುಮ್ಮನಿರುವುದು ಸರಿಯೇ? ಅಥವಾ ಈ ಪರಿಸ್ಥಿತಿ ಇನ್ನೂ ಹಾಳಾಗದ ಹಾಗೆ ನೋಡಿಕೊಳ್ಳಲು ಸಾಧ್ಯವಿದೆಯೇ? ನಮ್ಮ ದಿನನಿತ್ಯದ ಆಹಾರ-ವಿಹಾರ-ವಿಚಾರಗಳ ಮೂಲಕ ನಮ್ಮ ನೇತ್ರ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೇ? ಆಯುರ್ವೇದ ಶಾಸ್ತ್ರ ಏನು ಹೇಳುತ್ತದೆ? ಎಂದು ನೋಡೋಣ!

ಆಯುರ್ವೇದದ ಪ್ರಕಾರ, ಕಣ್ಣಿನ ಸಮಸ್ಯೆಗಳನ್ನು ಉಂಟುಮಾಡುವ ಸಾಮಾನ್ಯ ಕಾರಣ ಗಳು ಹೀಗಿವೆ:

ಅತಿ ಹತ್ತಿರದ ಅಥವಾ ಅತಿ ದೂರದ ವಸ್ತುಗಳನ್ನು ಬಹಳ ಕಾಲ ವೀಕ್ಷಿಸುವುದು.

ಉಷ್ಣ ವಾತಾವರಣದಿಂದ ಶರೀರವು ಬಿಸಿಯಾದಾಗ ತಕ್ಷಣವೇ ತಣ್ಣೀರು ಸ್ನಾನ ಮಾಡುವುದು ಅಥವಾ ತಣ್ಣಗಿನ ಪಾನೀಯಗಳನ್ನು ಸೇವಿಸುವುದು ಕಣ್ಣನ್ನು ಹಾನಿ ಮಾಡುತ್ತದೆ.

ಅಕಾಲ ನಿದ್ರೆಯ ಅಭ್ಯಾಸವು ದೃಷ್ಟಿ ದೋಷವನ್ನು ಉಂಟುಮಾಡುತ್ತದೆ. ರಾತ್ರಿ ಜಾಗರಣೆ ಮಾಡುವುದು ಅಥವಾ ಹಗಲು ಹೊತ್ತು ನಿದ್ರೆ ಮಾಡುವುದು ಸದಾ ಅನಾರೋಗ್ಯಕರ.

ಅತಿಯಾದ ಅಶ್ರುಧಾರೆ/ ಪದೇಪದೆ ಅಳುವುದು ಸಹ ಕಣ್ಣುಗಳ ಸ್ವಾಸ್ಥ್ಯವನ್ನು ಕೆಡಿಸುತ್ತದೆ.

ಸಿಟ್ಟು ಬಂದಾಗ ಕಣ್ಣು ಕೆಂಪಾಗುವುದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಅಂದರೆ ಸಿಟ್ಟಿಗೂ ಕಣ್ಣಿಗೂ ಏನೋ ಸಂಬಂಧವಿದೆ ಎಂದಾಯಿತು. ಸದಾ ಕೋಪಗ್ರಸ್ತರಾಗಿರುವುದು ಅಥವಾ ಅತಿ ಯಾದ ಕ್ರೋಧವು, ದೇಹದಲ್ಲಿ ಪಿತ್ತವನ್ನು ಕೆರಳಿಸಿ ತನ್ಮೂಲಕ ಕಣ್ಣನ್ನು ದೂಷಿಸುತ್ತದೆ.

ಮಾನಸಿಕ ಶೋಕವು ವಾತವನ್ನು ಕೆರಳಿಸಿ ವಾತಜ ನೇತ್ರ ವಿಕಾರಗಳನ್ನು ಉಂಟುಮಾಡುತ್ತದೆ.

ಕ್ಲೇಶ ಮತ್ತು ಉದ್ವೇಗಗಳು ಸಹ ಕಣ್ಣಿಗೆ ಹಾನಿಕರ.

ರಾತ್ರಿಚರ್ಯವನ್ನು ಪಾಲಿಸದೆ, ಋತು ಬದಲಾವಣೆಗಳನ್ನು ಗಮನಿಸದೆ ಮಾಡುವ ಅತಿಯಾದ ಮೈಥುನವು ಧಾತು ಕ್ಷಯವನ್ನು ಉಂಟು ಮಾಡಿ ಕಣ್ಣಿನ ಆರೋಗ್ಯವನ್ನು ಕ್ಷೀಣಿಸುತ್ತದೆ.

ಆರೋಗ್ಯವನ್ನು ಕಾಪಾಡಿಕೊಳ್ಳುವ ಹೆಸರಿನಲ್ಲಿ ಅತಿಯಾದ ಸ್ವೇದ/ಬೆವರು ಬರುವ ಕಸರತ್ತುಗಳಿಗೆ ಒಡ್ಡಿಕೊಳ್ಳುವುದರಿಂದ, ಸೌನಬಾತ್/ಸ್ಟೀಮ್ ಬಾತ್ ಗಳಿಂದ ನೇರವಾಗಿ ಕಣ್ಣಿನ ತೊಂದರೆ ಉಂಟಾಗುತ್ತದೆ. ನಮ್ಮ ಹೆಣ್ಣುಮಕ್ಕಳು ಬ್ಯೂಟಿ ಪಾರ್ಲರ್‌ಗಳಲ್ಲಿ ಫೇಶಿಯಲ್‌ನ ಮುಂಚೆ ತೆಗೆದು ಕೊಳ್ಳುವ ಸ್ಟೀಮ್ ಕೂಡ ಇದಕ್ಕೆ ಉದಾಹರಣೆ.

ಕಣ್ಣುಗಳನ್ನು ಸತತವಾಗಿ ಅತಿಯಾದ ಹೊಗೆ, ಧೂಳು ಮತ್ತು ಗಾಳಿಗೆ ಒಡ್ಡುವುದು ಒಳ್ಳೆಯದಲ್ಲ.

ವಾಂತಿಯನ್ನು ಅವರೋಧಿಸುವುದು/ಬಲವಂತವಾಗಿ ತಡೆಯುವುದು ಸಹ ಕಣ್ಣಿನ ರೋಗಕ್ಕೆ ಕಾರಣವಾಗಬಹುದು.

ಅಂತೆಯೇ, ಅಳು ಬಂದಾಗ ಕಣ್ಣೀರನ್ನು ತಡೆಯುವುದು ಸಹ ತೊಂದರೆಕಾರಕ.

ಅತಿ ಸಣ್ಣ ವಸ್ತುಗಳನ್ನು/ಚಿಕ್ಕ ಅಕ್ಷರಗಳಲ್ಲಿ ಬರೆದಿರುವ ಪುಸ್ತಕಗಳನ್ನು ಹೆಚ್ಚು ಸಮಯ ನೋಡು ವುದು/ ಓದುವುದು ಸಹ ತೊಂದರೆದಾಯಕ.

ಅಂತೆಯೇ, ಚಲಿಸುವ ವಾಹನಗಳಲ್ಲಿ ಮೊಬೈಲ್ ನೋಡುವುದು ಕಣ್ಣುಗಳಿಗೆ ಸುತರಾಂ ಒಳ್ಳೆಯದಲ್ಲ.

ದಿನನಿತ್ಯವೂ ನಮ್ಮ ದಿನಚರಿಯಲ್ಲಿ ತಲೆಗೆ ಎಣ್ಣೆ ಹಾಕುವ ಅಭ್ಯಾಸ ಇಲ್ಲದಿರುವುದು ಸಹ ಕಣ್ಣಿನ ಸಮಸ್ಯೆಗೆ ಇಂದು ಬಹಳ ಮುಖ್ಯವಾದ ಕಾರಣವಾಗಿದೆ. ನಿತ್ಯವೂ ಶಿರೋ ಅಭ್ಯಂಗ ಮಾಡುವುದು ನೇತ್ರರಕ್ಷಕ.

ಆಯುರ್ವೇದ ಆಚಾರ್ಯರ ಪ್ರಕಾರ ಬಾಯಾರಿಕೆ ಇಲ್ಲದೆ ಅತಿಯಾದ ದ್ರವಗಳನ್ನು ಸೇವಿಸುವುದು ಸಹ ಕಣ್ಣಿಗೆ ಹಾನಿಕರ.

ಪಾದರಕ್ಷೆಗಳನ್ನು ಧರಿಸದೆ ಓಡಾಡುವುದು ದೃಷ್ಟಿಗೆ ತೊಂದರೆ ಮಾಡಬಹುದು.

ಅತಿಯಾದ ಪ್ರಕಾಶಮಾನವಾದ ಕಂಪ್ಯೂಟರ್ ಸ್ಕ್ರೀನ್, ಟಿವಿ ಸ್ಕ್ರೀನ್, ಮೊಬೈಲ್‌ ಗಳನ್ನು ಬಿಡುವಿಲ್ಲದೆ ನೋಡುವುದಂತೂ ನೇತ್ರಶತ್ರು!

ಮಲಬದ್ಧತೆ ಇದ್ದಲ್ಲಿ ಗುಣಪಡಿಸಿಕೊಳ್ಳದೇ ಇರುವುದು.

ಆಹಾರದಲ್ಲಿ ಅತಿಯಾದ ಉಪ್ಪು-ಖಾರ- ಹುಳಿಗಳನ್ನು ಸೇವಿಸುವುದು.

ಜೀರ್ಣಕ್ಕೆ ಜಡವಾದ ಆಹಾರ, ಬೇಕರಿ ತಿನಿಸುಗಳು, ಫ್ರಿಜ್‌ನಲ್ಲಿಟ್ಟ ತಂಗಳು, ಉಪ್ಪಿನಕಾಯಿಗಳ ಬಳಕೆ.

ನಿತ್ಯವೂ ಉದ್ದು-ಹುರುಳಿಗಳ ಅತಿಯಾದ ಬಳಕೆ. ಹುಳಿ ಬಂದಿರುವ, ಫ್ರಿಜ್‌ನಲ್ಲಿ ಇಟ್ಟಿರುವ ಹಿಟ್ಟುಗಳಿಂದ ತಯಾರಿಸಿದ ಖಾದ್ಯಗಳ ನಿತ್ಯ ಸೇವನೆ.

ಮದ್ಯಪಾನ-ಧೂಮ್ರಪಾನ ಮಾಡುವುದು.

ಸದಾ ಎಣ್ಣೆ-ಮಸಾಲೆಗಳಿಂದ ಕೂಡಿದ ಆಹಾರ ಸೇವನೆ.

ತುಪ್ಪ-ಬೆಣ್ಣೆಗಳಂಥ ಒಳ್ಳೆಯ ಜಿಡ್ಡುಗಳನ್ನು ತ್ಯಜಿಸುವುದು.

ತಲೆಗೆ ಸ್ನಾನ ಮಾಡುವಾಗ/ಮುಖ ತೊಳೆಯುವಾಗ ಬಿಸಿನೀರನ್ನು ಬಳಸುವುದು ಕಣ್ಣುಗಳಿಗೆ ಬಹಳ ಕೆಟ್ಟದ್ದು. ತಲೆಸ್ನಾನಕ್ಕೆ ಸದಾ ತಣ್ಣೀರು ಬಳಸಿ.

ಅಲಂಕಾರಕ್ಕಾಗಿ ಬಳಸುವ ಐಲೈನರ್, ಮಸ್ಕರಾ, ಕಾಜಲ್ ಇತ್ಯಾದಿ ಕೃತಕ ಪ್ರಸಾದನಗಳು ವಿಷಕರ.

ಕಣ್ಣಿನ ರಕ್ಷಣೆಗಾಗಿ ನಮ್ಮ ದಿನಚರಿಯಲ್ಲಿ ಪಾಲಿಸಬೇಕಾದ ವಿಷಯಗಳು:

ಪ್ರತಿನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ಯಾವುದೇ ಬಾಹ್ಯ ಪ್ರಚೋದನೆ ಇಲ್ಲದೆ ಮಲ ವಿಸರ್ಜನೆ ಆಗುವಂತೆ ನೋಡಿಕೊಳ್ಳುವುದು ಮುಖ್ಯ.

ಹಲ್ಲುಜ್ಜಿ, ನಾಲಗೆಯನ್ನು ತಿಕ್ಕಿದ ನಂತರ, ತುಪ್ಪದ ತಿಳಿಯ ಭಾಗವನ್ನು ಬೆರಳಿನ ಸಹಾಯದಿಂದ ಕಣ್ಣುಗಳಿಗೆ ಕಾಡಿಗೆಯನ್ನು ಹಚ್ಚುವ ಹಾಗೆ ಹಚ್ಚುವುದು. ಸ್ನಾನ ಮಾಡುವ ತನಕ ಇದನ್ನು ಹಾಗೆ ಯೇ ಬಿಡಬೇಕು. ತುಪ್ಪ ಕಣ್ಣನ್ನು ಪೋಷಿಸುತ್ತದೆ. ವಾರಕ್ಕೊಮ್ಮೆ, ತುಪ್ಪದ ತಿಳಿಯ ಬದಲು ಶುದ್ಧ ವಾದ ಜೇನುತುಪ್ಪವನ್ನು ಕಾಡಿಗೆಯಂತೆ ಹಚ್ಚುವುದು ಕಣ್ಣನ್ನು ಶುದ್ಧಗೊಳಿಸುತ್ತದೆ.

ನಂತರ, ತುಪ್ಪದ ತಿಳಿಯ ಭಾಗದ ಎರಡು ಹನಿಗಳಷ್ಟು ಎರಡೂ ಮೂಗಿನಹೊಳ್ಳೆಗಳಿಗೆ ಹಾಕಿ ಕೊಳ್ಳುವುದು. ಇದು ಕಣ್ಣನ್ನು ರಕ್ಷಿಸುವುದರ ಜತೆಗೆ, ಗಾಳಿಯಲ್ಲಿರುವ ವಿಷದಿಂದ ತೊಂದರೆ ಆಗದಂತೆ ನಮ್ಮನ್ನು ಕಾಪಾಡುತ್ತದೆ. ವಿವಿಧ ರೀತಿಯ ಅಲರ್ಜಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ಮೊಡವೆಗಳನ್ನು ನಿವಾರಿಸಿ ಮುಖದ ಚರ್ಮಕ್ಕೆ ಒಳ್ಳೆಯ ಕಾಂತಿಯನ್ನು ಸಹ ನೀಡುತ್ತದೆ.

ನಂತರ, ಬಾಯಿ ತುಂಬಾ ಬೆಚ್ಚಗಿನ ನೀರನ್ನು ತುಂಬಿಕೊಂಡು ಸ್ವಲ್ಪ ಸಮಯ ಮುಕ್ಕಳಿಸುವುದು. ಇದರ ಬದಲಿಗೆ ಕೊಬ್ಬರಿ ಎಣ್ಣೆಯನ್ನು ಬಳಸಿ ಬಾಯಿಯನ್ನು ಮುಕ್ಕಳಿಸಬಹುದು. ಇದು ಕಣ್ಣಿಗೆ ಶಕ್ತಿಯನ್ನು ನೀಡುವುದರ ಜತೆಗೆ ಹಲ್ಲು, ವಸಡು ಮತ್ತು ನಾಲಗೆಯನ್ನು ಸಹ ಕಾಪಾಡುತ್ತದೆ. ಹಲ್ಲಿನ ಮತ್ತು ವಸಡಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ವಾರಕ್ಕೆ ಎರಡು ಬಾರಿಯಾದರೂ ತಲೆಗೆ ಚೆನ್ನಾಗಿ ಎಣ್ಣೆಯನ್ನು (ಶಿರೋ ಅಭ್ಯಂಗ) ಹಚ್ಚಿ 45 ನಿಮಿಷಗಳನ್ನು ಬಿಟ್ಟು ನಂತರ ತಣ್ಣೀರಿನಲ್ಲಿ ತಲೆ ಸ್ನಾನ ಮಾಡಬೇಕು. ಎಣ್ಣೆ ಹಾಕುವಾಗ ನೆತ್ತಿ ಯನ್ನು ಚೆನ್ನಾಗಿ ಎಣ್ಣೆಯಿಂದ ನೆನೆಸುವುದು ಕಣ್ಣುಗಳಿಗೆ ಹಿತ. ಆದರೆ ನೆನಪಿಡಿ ಅತಿಯಾಗಿ ಎಣ್ಣೆ ಹಚ್ಚಿ ರಾತ್ರಿ ಬಿಡುವುದು ಒಳ್ಳೆಯ ಅಭ್ಯಾಸವಲ್ಲ. ಬಿಸಿನೀರಿನ ತಲೆಸ್ನಾನವೂ ಕಣ್ಣುಗಳಿಗೆ ಅಹಿತ.

ನಿತ್ಯವೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಸಮಯ ವ್ಯಾಯಾಮ ಮಾಡಿ, ಪ್ರಾಣಾಯಾಮ ಮತ್ತು ಧ್ಯಾನಗಳಿಂದ ಮನಸ್ಸಿನ ಉದ್ರೇಕ ಮತ್ತು ಉದ್ವೇಗಗಳನ್ನು ಸ್ಥಿಮಿತದಲ್ಲಿಟ್ಟುಕೊಂಡರೆ, ಶಾಂತಿ ಮತ್ತು ಪ್ರೀತಿಯ ಅಭ್ಯಾಸ ಮಾಡಿದರೆ ನೇತ್ರಗಳು ಸದಾ ತೇಜೋಮಯವಾಗಿರುತ್ತವೆ.

ದಿನಪೂರ್ತಿ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಕನಿಷ್ಠ ಪ್ರತಿ ಒಂದು ಗಂಟೆಗೊಮ್ಮೆ ಐದು ನಿಮಿಷಗಳ ಬ್ರೇಕ್ ತೆಗೆದುಕೊಂಡು, ಕಣ್ಣು ಮುಚ್ಚಿ ವಿಶ್ರಮಿಸಬೇಕು. ಅತಿಯಾಗಿ ಹತ್ತಿರದ ಸ್ಕ್ರೀನ್ ಅನ್ನು ನೋಡುತ್ತಿದ್ದರೆ ಸ್ವಲ್ಪ ಸಮಯ ದೂರದ ಯಾವುದಾದರೂ ವಸ್ತುವನ್ನು ದಿಟ್ಟಿಸಿ ನೋಡುವುದು, ಕಣ್ಣನ್ನು ಹಿಸುಕಿ (ಸ್ಕ್ವೀಜ್) ಮುಚ್ಚಿ-ಬಿಡುವುದು, ವೇಗವಾಗಿ ಬ್ಲಿಂಕ್ ಮಾಡುವುದು- ಇದರಿಂದ ಕಣ್ಣಿನ ಪೇಶಿಗಳು ರಿಲ್ಯಾಕ್ಸ್ ಆಗುತ್ತವೆ. ಅಂತೆಯೇ, ಕಂಪ್ಯೂಟರ್ ಕೆಲಸ ಪ್ರಾರಂಭ ಮಾಡುವ ಮುನ್ನ, ಕಣ್ಣುಗಳಿಗೆ ತುಪ್ಪದ ಹನಿಯನ್ನು ಕಾಡಿಗೆಯಂತೆ ಸವರಿಕೊಂಡು ಕೆಲಸ ಮಾಡುವುದು ಅಥವಾ ಕೆಲಸ ಮುಗಿದ ಮೇಲೆ ಕಣ್ಣುಗಳಿಗೆ ಒಂದು ಹನಿ ತುಪ್ಪದ ತಿಳಿಯನ್ನು ಹಾಕಿಕೊಂಡು ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು.

ರಾತ್ರಿ ಮಲಗುವ ಮುನ್ನ ನೆತ್ತಿಗೆ, ಅಂಗಾಲುಗಳ ಮಧ್ಯ ಭಾಗಕ್ಕೆ, ರೆಪ್ಪೆಗಳ ಮೇಲೆ ತುಪ್ಪದ ತಿಳಿ ಸವರಿಕೊಂಡು ಮಲಗುವುದು ಹಿತಕರ. ಇದು ಒಳ್ಳೆಯ ನಿದ್ದೆಯನ್ನು ಸಹ ನೀಡುತ್ತದೆ. ಸ್ನೇಹಿತರೆ, ನೆನಪಿಡಿ- ಪ್ರತಿನಿತ್ಯವೂ ಮಲಗುವ ಮುನ್ನ ಪಾದಗಳಿಗೆ ಅಭ್ಯಂಗ/ಎಣ್ಣೆ ಸವರಿಕೊಂಡು ಮಲಗು ವುದು ಕಣ್ಣಿನ ಸ್ವಾಸ್ಥ್ಯವನ್ನು ವೃದ್ಧಿಸುತ್ತದೆ.

ವಾರಕ್ಕೊಮ್ಮೆ ನೆನೆಸಿ ರುಬ್ಬಿದ ಮೆಂತ್ಯ, ನೆಲ್ಲಿ ಪುಡಿ ಮತ್ತು ಮಜ್ಜಿಗೆಯನ್ನು ಸೇರಿಸಿ, ತಲೆಯ ನೆತ್ತಿಗೆ ಹಚ್ಚಿ ಒಂದು ಗಂಟೆ ನಂತರ ಸ್ನಾನ ಮಾಡುವುದು ನೇತ್ರರಕ್ಷಕ.

ನಿತ್ಯ ಆಹಾರದಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮಗಳು:

ಬಿಸಿ ಆಹಾರದೊಂದಿಗೆ ನಿಯಮಿತ ಪ್ರಮಾಣದಲ್ಲಿ ತುಪ್ಪ/ಬೆಣ್ಣೆಯ ಬಳಕೆ ಅವಶ್ಯಕ. ತುಪ್ಪವು ನೇರವಾಗಿ ಕಣ್ಣನ್ನು ಪೋಷಿಸುವ ಸಾಮರ್ಥ್ಯ ಹೊಂದಿರುವ ಆಹಾರ ದ್ರವ್ಯ.

ನಿತ್ಯ ನಮ್ಮ ಆಹಾರದಲ್ಲಿ ಒಣದ್ರಾಕ್ಷಿ, ಬೆಟ್ಟದ ನೆಲ್ಲಿಕಾಯಿ, ದಾಳಿಂಬೆ, ಖರ್ಜೂರಗಳನ್ನು ಬಳಸು ವುದು ಕಣ್ಣಿನ ಆರೋಗ್ಯಕ್ಕೆ ಹಿತ.

ತರಕಾರಿಗಳಲ್ಲಿ ಸಾಮಾನ್ಯವಾಗಿ ಬಳ್ಳಿಯಲ್ಲಿ ಬೆಳೆದ ತರಕಾರಿಗಳು ಹಿತ. ಪಡವಲಕಾಯಿ, ಹೀರೆಕಾಯಿ, ಸೋರೆಕಾಯಿ, ಬೂದುಗುಂಬಳ, ಅಂತೆಯೇ ಜೀವಂತಿ ಸೊಪ್ಪು, ನುಗ್ಗೆ ಸೊಪ್ಪು, ಅಗಸೆ ಸೊಪ್ಪುಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು. ಭೂಮಿಯ ಕೆಳಗೆ ಬೆಳೆಯುವ ತರಕಾರಿಗಳು ನೇತ್ರಕ್ಕೆ ಒಳ್ಳೆಯದಲ್ಲ (ಕ್ಯಾರೆಟ್ ಅನ್ನು ಹೊರತುಪಡಿಸಿ). ಹಸಿಮೆಣಸಿನಕಾಯಿ, ಟೊಮೆಟೊ, ಹುಣಸೆ ಹಣ್ಣು, ದೊಣ್ಣೆ ಮೆಣಸಿನ ಕಾಯಿಗಳನ್ನು (ಕ್ಯಾಪ್ಸಿಕಂ) ಪ್ರತಿನಿತ್ಯವೂ ಅಡುಗೆಯಲ್ಲಿ ಬಳಸುವುದು ಬೇಡ. ಖಾರಕ್ಕೆ ಕಾಳು ಮೆಣಸು ಮತ್ತು ಒಣ ಮೆಣಸಿನಕಾಯಿಗಳನ್ನು ಬಳಸಿ. ಹುಳಿಗೆ ನೆಲ್ಲಿಕಾಯಿ ಹುಳಿ, ದಾಳಿಂಬೆ ಹುಳಿಗಳು ಒಳ್ಳೆಯದು.

ಹೆಚ್ಚಾಗಿ ಬಿಳಿ ಸಕ್ಕರೆಯನ್ನು ತ್ಯಜಿಸಿ, ಕೆಂಪು ಕಲ್ಲು ಸಕ್ಕರೆಯನ್ನು ಬಳಸಬೇಕು. ಬೇಳೆಗಳಲ್ಲಿ ಹೆಚ್ಚಾಗಿ ಹೆಸರುಬೇಳೆ ನೇತ್ರಗಳ ಆರೋಗ್ಯವನ್ನು ಕಾಪಾಡುತ್ತದೆ. ಜತೆಗೆ, ಭತ್ತದ ಅರಳು, ಬಾರ್ಲಿಯ ಪ್ರಯೋಗಗಳು ಕಣ್ಣಿನ ಆರೋಗ್ಯಕ್ಕೆ ಹಿತಕರ.

ಸ್ನೇಹಿತರೆ, ‘ಪ್ರತಿನಿತ್ಯ ಮೊಳಕೆ ಕಾಳುಗಳ ಸೇವನೆ ಅತ್ಯಂತ ಒಳ್ಳೆಯದು; ಇದರಿಂದ ನಾವು ಬಲಿಷ್ಠ ರಾಗುತ್ತೇವೆ’ ಎಂಬುದು ಹಲವರ ನಂಬಿಕೆ. ಆದರೆ ಮೊಳಕೆ ಕಾಳುಗಳ ಪ್ರಯೋಗದಿಂದ ಉಪಯೋಗ ಕ್ಕಿಂತ ತೊಂದರೆಯೇ ಹೆಚ್ಚು ಅನ್ನುವುದು ಆಯುರ್ವೇದದ ಶಾಸ್ತ್ರವಾಕ್ಯ. ಆಯುರ್ವೇದದ ಪ್ರಕಾರ ಮೊಳಕೆ ಕಾಳುಗಳ ನಿತ್ಯ ಬಳಕೆಯು ಧಾತುಗಳನ್ನು ಒಣಗಿಸಿ ದೃಷ್ಟಿ ಯನ್ನು ಹಾಳುಮಾಡುತ್ತದೆ. ಹಾಗಾಗಿ, ಮೊಳಕೆಕಾಳನ್ನು ನಿತ್ಯ ಬಳಸುವುದು ಒಳ್ಳೆಯದಲ್ಲ. ಬದಲಿಗೆ, ಕಾಳುಗಳನ್ನು ರಾತ್ರಿ ನೆನೆಹಾಕಿ, ಮೊಳಕೆಬರುವ ಮುನ್ನವೇ ಬೆಳಗ್ಗೆ ಅದನ್ನು ಚೆನ್ನಾಗಿ ಬೇಯಿಸಿ, ಒಳ್ಳೆಯ ಜಿಡ್ಡಿನಿಂದ ಒಗ್ಗರಣೆ ಕೊಟ್ಟು, ಪಲ್ಯ ಅಥವಾ ಸಾಂಬಾರ್ ರೂಪದಲ್ಲಿ, ಚಳಿಗಾಲದಲ್ಲಿ, ಹಸಿವೆ ಚೆನ್ನಾಗಿದ್ದಾಗ ಸೇವಿಸುವುದು ಉತ್ತಮ, ಬೇಸಗೆಯಲ್ಲಿ ಮತ್ತು ಮಳೆಗಾಲ ದಲ್ಲಿ ಜೀರ್ಣಶಕ್ತಿ ಕಡಿಮೆ ಇದ್ದಾಗ ಮೊಳಕೆ ಕಾಳುಗಳ ಪ್ರಯೋಗ ನಿಷಿದ್ಧ.

ಕಣ್ಣಿನ ಸ್ವಾಸ್ಥ್ಯಕ್ಕಾಗಿ ಪ್ರತಿನಿತ್ಯವೂ ಮನೆಯಲ್ಲಿ ಮಾಡಿಕೊಳ್ಳಬಹುದಾದ ಸುಲಭ ಔಷಧಿ:

ತ್ರಿಫಲಾ ಚೂರ್ಣ 1/4 ಚಮಚ + 4 ಹನಿ ತುಪ್ಪದ ತಿಳಿ + ಕಾಲು ಚಮಚ ಜೇನುತುಪ್ಪವನ್ನು ಸೇರಿಸಿ, ಕಲಸಿ, ರಾತ್ರಿ ಮಲಗುವ ಮುನ್ನ ನಿಧಾನವಾಗಿ ನೆಕ್ಕುವುದು.

ಒಂದು ಲೋಟ ಕುದಿಯುವ ನೀರಿಗೆ, 2-4 ಚಿಟಿಕೆ ನೆಲ್ಲಿಕಾಯಿ ಪುಡಿಯನ್ನು ಸೇರಿಸಿ, ಬಾಯಾರಿದಾಗ ಅಥವಾ ಆಹಾರದ ಜತೆಗೆ ಇದೇ ನೀರನ್ನು ಕುಡಿಯುವುದು. ಸ್ನೇಹಿತರೆ, ಕಂಪ್ಯೂಟರ್ ಬಳಕೆ, ಮೊಬೈಲ್ ಬಳಕೆ ಈಗ ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದೆ.

ಇದರ ಉಪಯೋಗವು ಅನಿವಾರ್ಯವಾದಂಥ ಪರಿಸ್ಥಿತಿ. ಹಾಗಾಗಿ, ಕನಿಷ್ಠಪಕ್ಷ ನಾವು ಆಯುರ್ವೇದ ಹೇಳಿದ ಉಪಾಯಗಳನ್ನು ಅಳವಡಿಸಿಕೊಳ್ಳುವುದರಿಂದ ಕಣ್ಣು ಗಳ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಬಹುದು. ಸ್ವಸ್ಥವಿದ್ದಾಗಲೂ ಈ ನಿಯಮಗಳನ್ನು ಅನುಸರಿಸುವುದರಿಂದ ದೃಷ್ಟಿ ಯನ್ನು ವೃದ್ಧಿಸಿಕೊಂಡು, ಕಣ್ಣುಗಳ ಸ್ವಾಸ್ಥ್ಯವನ್ನೂ ಸದಾಕಾಲ ಕಾಪಾಡಿಕೊಳ್ಳಬಹುದು.

ಕೊನೆಯದಾಗಿ, ಇವೆಲ್ಲದರ ಜತೆ ಈ ಒಂದು ಪ್ರಾರ್ಥನೆಯನ್ನು ಸದಾ ನಾವು ಮಾಡೋಣ: “ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ | ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ|"- ಓ ದೇವತೆಗಳೇ, ಮಂಗಳಕರವಾದುದನ್ನು ಸದಾ ನಾವು ಕಿವಿಯಿಂದ ಕೇಳೋಣ. ಓ ದೇವತೆಗಳೇ, ಪೂಜೆಗೆ ಅರ್ಹರೇ, ಮಂಗಳಕರವಾದುದನ್ನು ನಾವು ನಮ್ಮಕಣ್ಣುಗಳಿಂದ ಸದಾ ನೋಡುವ ಹಾಗೆ ಅನುಗ್ರಹಿಸಿ!