ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ?!

ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅಕ್ಕಿಯೇ ಪ್ರಧಾನವಾದ ದ್ರವ್ಯ. ಎಲ್ಲರ ಮನೆ ಯಲ್ಲೂ ಅಕ್ಕಿಯ ಬಳಕೆ ಸರ್ವೇಸಾಮಾನ್ಯ. ಆದರೆ ಈ ಅಕ್ಕಿಯ ಬಗ್ಗೆ ನಮಗೆಷ್ಟು ಗೊತ್ತು? ಯಾವ ರೀತಿ ಬಳಸಿದರೆ ಯಾವ ಪರಿಣಾಮವಾಗುತ್ತದೆ ಎಂಬ ಅರಿವಿದೆಯೇ? ನಮಗೆ ಈ ಜ್ಞಾನ ವಿಲ್ಲದ ಕಾರಣವೇ ಅಕ್ಕಿಯ ಮೇಲೆ ಬರುವ ಅಪವಾದಗಳಿಗೆ ನಾವು ತಲೆ ಬಾಗಿ ಅಕ್ಕಿಯನ್ನು ನಮ್ಮ ದಿನನಿತ್ಯದ ಆಹಾರ ದಿಂದ ವರ್ಜಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿರುವುದು.

ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ?!

ಆರೋಗ್ಯ ಪಾಲನೆಯಲ್ಲಿ ‘ಆಹಾರ’ದ ಮಹತ್ವವನ್ನು ಕಂಡುಕೊಂಡ ನಮ್ಮ ಆಯುರ್ವೇದ ಆಚಾರ್ಯರು ಆಯುರ್ವೇದ ಸಂಹಿತೆಗಳಲ್ಲಿ ಆಹಾರ ವಿeನವೆಂಬ ಜ್ಞಾನ ಭಂಡಾರವನ್ನೇ ತೆರೆದಿಟ್ಟಿದ್ದಾರೆ. ಕಾರಣ, ನಾವು ಬಳಸುವ ಆಹಾರದ ಗುಣ-ಕರ್ಮಗಳನ್ನು ತಿಳಿಯದೆ, ನಮ್ಮ ದೇಹದಲ್ಲಿ ಅದು ಉಂಟುಮಾಡಬಹುದಾದ ಪರಿಣಾಮವನ್ನು ಅರಿಯದೆ ನಾವು ಆಹಾರವನ್ನು ಸೇವಿಸಿದರೆ ಅನಾರೋಗ್ಯವು ಕಟ್ಟಿಟ್ಟ ಬುತ್ತಿ. ಉದಾಹರಣೆಗೆ- ನಾವು ‘ಬನಾನ ಮಿಲ್ಕ್ ಶೇಕ್’ ಅನ್ನು ಬಹಳ ಇಷ್ಟಪಟ್ಟು ಸೇವಿಸುತ್ತೇವೆ. ಅದರಲ್ಲೂ ಬಿಸಿಲು ಕಾಲದಲ್ಲಿ ನಿತ್ಯವೂ ಸೇವಿಸಬೇಕೆಂಬ ಇಚ್ಛೆ. ಆದರೆ, ಬಾಳೆಹಣ್ಣು ಮತ್ತು ಹಾಲನ್ನು ಒಟ್ಟಿಗೆ ಸೇರಿಸಿದರೆ ಅದು ‘ವಿರುದ್ಧ ಆಹಾರ’ವಾಗಿ ಪರಿಣಮಿಸುತ್ತದೆ.

ದೇಹದಲ್ಲಿ ಆಮ ವಿಷವನ್ನು ಉತ್ಪಾದನೆ ಮಾಡಿ ಅನೇಕ ರೀತಿಯ ರೋಗಗಳಿಗೆ ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಆಹಾರದ ಗುಣ-ಕರ್ಮಗಳನ್ನು ತಿಳಿದುಕೊಳ್ಳದೆ ಕೇವಲ ರುಚಿಯಾಗಿದೆ ಎಂದು ಸೇವಿಸಿದಾಗ ನಮ್ಮ ಆರೋಗ್ಯ ಹಾಳಾಗಲು ನಾವೇ ಕಾರಣರಾಗುತ್ತೇವೆ.

ಒಂದು ದ್ರವ್ಯವನ್ನು ಉಪಯೋಗಿಸುವ ಮೊದಲು, ಇದು ನನಗೆ ಸೂಕ್ತವೇ? ಇದನ್ನು ಸೇವಿಸಿದರೆ ನನ್ನ ದೇಹದಲ್ಲಿ ಏನಾಗುತ್ತದೆ? ಯಾವಾಗ ಸೇವಿಸಿದರೆ ಒಳ್ಳೆಯದು? ಎಷ್ಟು ಸೇವಿಸಿದರೆ ಹಿತ? ಯಾವ ರೂಪದಲ್ಲಿ ಸೇವಿಸಿದರೆ ಸ್ವಾಸ್ಥ್ಯಕರ? ನನ್ನ ಜಠರಾಗ್ನಿಗೆ ಈ ಆಹಾರವನ್ನು ಜೀರ್ಣ ಮಾಡಲು ಕ್ಷಮತೆ ಇದೆಯೇ? ಎಂಬ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡು, ಅದಕ್ಕೆ ಸಮಾಧಾನಕರವಾದ, ಶಾಸ್ತ್ರ ಸಮ್ಮತವಾದ ಉತ್ತರ ಸಿಕ್ಕ ನಂತರವೇ ಆಹಾರ ದ್ರವ್ಯಗಳನ್ನು ನಮ್ಮ ದಿನನಿತ್ಯ ಬಳಕೆಗೆ ಅಳವಡಿಸಿಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ: Dr Sadhanashree Column: ಹೃದಯ ಆಗಲಿ ನಿಮ್ಮ ಜೀವದ ಗೆಳೆಯ

ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅಕ್ಕಿಯೇ ಪ್ರಧಾನವಾದ ದ್ರವ್ಯ. ಎಲ್ಲರ ಮನೆಯಲ್ಲೂ ಅಕ್ಕಿಯ ಬಳಕೆ ಸರ್ವೇಸಾಮಾನ್ಯ. ಆದರೆ ಈ ಅಕ್ಕಿಯ ಬಗ್ಗೆ ನಮಗೆಷ್ಟು ಗೊತ್ತು? ಯಾವ ರೀತಿ ಬಳಸಿದರೆ ಯಾವ ಪರಿಣಾಮವಾಗುತ್ತದೆ ಎಂಬ ಅರಿವಿದೆಯೇ? ನಮಗೆ ಈ ಜ್ಞಾನ ವಿಲ್ಲದ ಕಾರಣವೇ ಅಕ್ಕಿಯ ಮೇಲೆ ಬರುವ ಅಪವಾದಗಳಿಗೆ ನಾವು ತಲೆಬಾಗಿ ಅಕ್ಕಿಯನ್ನು ನಮ್ಮ ದಿನನಿತ್ಯದ ಆಹಾರದಿಂದ ವರ್ಜಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿರುವುದು.

ಅಕ್ಕಿಯ ಮಹತ್ವವನ್ನು ಅರಿಯದೆ, ಇದು ನನಗೆ ಕೆಟ್ಟದ್ದು ಎಂದು ತೀರ್ಮಾನಿಸುವುದು ಮೂರ್ಖ ತನ. ಅಕ್ಕಿಯನ್ನು ಹೇಗೆ ಬಳಸಿದರೆ ಯಾವ ತೊಂದರೆಯೂ ಇಲ್ಲದೆ ಅದರ ಸಂಪೂರ್ಣ ಲಾಭವನ್ನು ಪಡೆಯಬಹುದು ಎಂಬ ಜಾಣ್ಮೆಯನ್ನು ಆಯುರ್ವೇದವು ನಮಗೆ ತಿಳಿಸಿಕೊಟ್ಟಿದೆ. ಇದು ನಾವೆಲ್ಲರೂ ತಿಳಿಯಲೇಬೇಕಾದಂಥ ವಿಷಯ.

ಹಾಗಾಗಿ, ಬನ್ನಿ ಅಕ್ಕಿಯ ಬಗ್ಗೆ ಸ್ವಲ್ಪ ಗಮನಹರಿಸೋಣ.. ಸ್ನೇಹಿತರೆ, ಆಯುರ್ವೇದವು ಆಹಾರ ದ್ರವ್ಯಗಳನ್ನು ವಿವಿಧ ರೀತಿಯಲ್ಲಿ ವರ್ಗೀಕರಣ ಮಾಡಿದೆ. ಉದಾಹರಣೆಗೆ- ಧಾನ್ಯ ವರ್ಗ, ಫಲ ವರ್ಗ, ಕ್ಷೀರ ವರ್ಗ ಇತ್ಯಾದಿ. ಈ ರೀತಿಯ ವರ್ಗೀಕರಣವನ್ನು ಮಾಡಿ ಆ ವರ್ಗದಲ್ಲಿ ಬರುವ ಎಲ್ಲಾ ದ್ರವ್ಯಗಳನ್ನು ಸವಿಸ್ತಾರವಾಗಿ ವಿವರಿಸಿದೆ.

Rice R

ಉದಾಹರಣೆಗೆ- ‘ತೈಲ ವರ್ಗ’ದಲ್ಲಿ ಜಗತ್ತಿನಲ್ಲಿ ಹೆಚ್ಚಾಗಿ ಬಳಸುವ/ಲಭ್ಯವಿರುವ ಎಲ್ಲ ತೈಲಗಳನ್ನು ವಿವರಿಸಿ, ಅವುಗಳು ಯಾರಿಗೆ ಹಿತ, ಯಾರಿಗೆ ಅಹಿತ ಎಂಬ ವಿವರಗಳನ್ನು ತೆರೆದಿಟ್ಟಿದೆ. ಅದೇ ರೀತಿಯಾಗಿ, ಧಾನ್ಯ ವರ್ಗದಲ್ಲಿ ಎಲ್ಲ ರೀತಿಯ ಕಾಳುಗಳನ್ನು ಬೇಳೆಗಳನ್ನು ವಿವರಿಸಿದೆ. ಪುರಾತನ ಕಾಲದಿಂದ ಬಳಕೆಯಲ್ಲಿರುವ ಅಕ್ಕಿಯಿಂದ ಹಿಡಿದು ಇಂದು ಪ್ರಚಲಿತದಲ್ಲಿರುವ ಮಿಟ್ಸ್ ತನಕ ಎಲ್ಲ ಧಾನ್ಯಗಳ ವಿಷಯವು ಈ ವರ್ಗದಲ್ಲಿ ಸಿಗುತ್ತದೆ. ಈ ಧಾನ್ಯ ವರ್ಗದಲ್ಲಿ ಬರುವ ಪ್ರಮುಖ ಆಹಾರವೇ ‘ಅಕ್ಕಿ’.

ನಮ್ಮ ಆರ್ಷ ಗ್ರಂಥಗಳಾದ ಚರಕ ಸಂಹಿತೆ, ಸುಶ್ರುತ ಸಂಹಿತೆ ಮತ್ತು ಅಷ್ಟಾಂಗ ಹೃದಯಗಳಲ್ಲಿ ಅಕ್ಕಿಯ ವಿವಿಧ ಗುಣಗಳನ್ನು ಮತ್ತು ಪ್ರಯೋಗಗಳನ್ನು ವಿಶಿಷ್ಟವಾಗಿ ಹೇಳಿದ್ದಾರೆ. ಬೇರೆಯವರು ಅಕ್ಕಿಯ ಬಗ್ಗೆ ಏನು ಹೇಳುತ್ತಾರೆ ಅನ್ನುವುದನ್ನು ತಿಳಿದುಕೊಳ್ಳುವ ಮೊದಲು ನಮ್ಮ ಶಾಸ್ತ್ರದ ಚೌಕಟ್ಟಿನಲ್ಲಿ ಅಕ್ಕಿಯ ವಿವರಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ.

ಈ ನಿಟ್ಟಿನಲ್ಲಿ ಅಕ್ಕಿಯ ಗುಣಗಳನ್ನು ಮೊದಲು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಅಕ್ಕಿ ಜೀರ್ಣಕ್ಕೆ ಜಡ, ಅಕ್ಕಿ ತಿಂದರೆ ದೇಹದ ಭಾರ ಹೆಚ್ಚಾಗುತ್ತದೆ, ಅಕ್ಕಿಯಿಂದ ಡಯಾಬಿಟಿಸ್ ಬರುತ್ತದೆ ಅನ್ನುವ ಹಲವಾರು ಗುಮಾನಿಗಳನ್ನು ನೀವು ಕೇಳಿರಬಹುದು.

ಆದರೆ, ವೇದದಲ್ಲಿರುವ ಸತ್ಯ ಇಲ್ಲಿದೆನೋಡಿ: ‘ಮಧುರಾ ವೀರ್ಯತಃ ಶೀತಾ ಲಘು ಪಾಕಾ ಬಲಾವಹಾಃ ಪಿತ್ತಘ್ನಾಲ್ಪಾನಿಲಕ-ಃ ಸ್ನಿಗ್ಧಾಲ್ಪವರ್ಚಸಃ|’ ಅಕ್ಕಿಯು ರುಚಿಯಲ್ಲಿ ಸಿಹಿ, ಜೀರ್ಣವಾದ ನಂತರವೂ ಇದು ಸಿಹಿ. ಅಕ್ಕಿಯು ಸ್ವಲ್ಪ ಜಿಡ್ಡಿನಿಂದ ಕೂಡಿದೆ. ಅಕ್ಕಿಯು ವೀರ್ಯವರ್ಧಕ ಹಾಗೂ ಬಲವನ್ನು ಹೆಚ್ಚಿಸುವಂಥದ್ದು.

ಅಕ್ಕಿಯು ಖಂಡಿತವಾಗಿಯೂ ‘ಲಘು’ ಅಂದರೆ ಜೀರ್ಣಕ್ಕೆ ಹಗುರವಾದದ್ದು. ಶರೀರದಲ್ಲಿ ಪಿತ್ತವನ್ನು ಶಮನ ಮಾಡಿ ಸ್ವಲ್ಪ ಮಟ್ಟಿಗೆ ವಾತ ಕಫಗಳನ್ನು ಉಂಟುಮಾಡಬಹುದು. ಇದು ಮಲಪ್ರವೃತ್ತಿ ಯನ್ನು ಕಡಿಮೆ ಮಾಡಿ ಮೂತ್ರ ಪ್ರವೃತ್ತಿಯನ್ನು ಹೆಚ್ಚಿಸುವುದು. ಈ ಅಕ್ಕಿಯನ್ನು ನಮ್ಮ ದಿನನಿತ್ಯ ಜೀವನದಲ್ಲಿ ರೋಗಾರೋಗ ಅವಸ್ಥೆಗಳಲ್ಲಿ ಹೇಗೆ ಬಳಸಬಹುದು ಅನ್ನುವ ಬಹಳ ಉಪಯುಕ್ತ ವಾದ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.

ಆಯುರ್ವೇದದಲ್ಲಿ ಅಕ್ಕಿಯಿಂದ ತಯಾರಿಸಬಹುದಾದ ಕೃತಾನ್ನಗಳನ್ನು ವಿಶೇಷವಾಗಿ ನಾಲ್ಕು ರೀತಿಯಾಗಿ ವಿಭಾಗ ಮಾಡಲಾಗಿದೆ. 1.ಮಂಡ 2. ಪೇಯಾ 3. ವಿಲೇಪಿ 4. ಓದನ ಮಂಡವು ಜೀರ್ಣಕ್ಕೆ ಅತ್ಯಂತ ಹಗುರವಾಗಿದ್ದು, ಕ್ರಮೇಣವಾಗಿ ಉಳಿದವು ಜೀರ್ಣಕ್ಕೆ ಅದಕ್ಕಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತವೆ.

1. ಮಂಡ: ಸಿಕ್ಥೈರ್ವಿರಹಿತೋ ಮಂಡಃ, ಅಂದರೆ ಕನಿಷ್ಠ 14 ಪಟ್ಟು ನೀರನ್ನು ಹಾಕಿ, ಮುಚ್ಚಳ ಇಲ್ಲದ ಪಾತ್ರೆಯಲ್ಲಿ ಬೇಯಿಸಿದ, ಅಗುಳುಗಳಿಲ್ಲದ ತಿಳಿ ಗಂಜಿಯನ್ನು ಆಯುರ್ವೇದದಲ್ಲಿ ಮಂಡ ಎನ್ನುವರು. ಸಾಮಾನ್ಯ ಭಾಷೆಯಲ್ಲಿ ‘ಗಂಜಿ ತಿಳಿ’ ಎನ್ನುವರು. ಈ ‘ಗಂಜಿತಿಳಿ’ಯ ಗುಣಕರ್ಮ ಗಳೆಂದರೆ- ಇದು ಪಚನಕ್ಕೆ ಹಗುರ, ಬಹಳ ಕ್ಷಿಪ್ರವಾಗಿ ಹಸಿವೆಯನ್ನು ಹೆಚ್ಚಿಸುತ್ತದೆ, ಮಲ-ಮೂತ್ರ ಗಳ ಪ್ರವೃತ್ತಿಯು ಸರಾಗವಾಗಿ ಆಗುವ ಹಾಗೆ ಮಾಡುತ್ತದೆ. ಹೃದಯ-ಮನಸ್ಸುಗಳಿಗೆ ತೃಪ್ತಿಕರ. ಜ್ವರ, ಬೇಧಿ, ವಾಂತಿ, ಅಜೀರ್ಣ ರೋಗಗಳಲ್ಲಿ ಹಸಿವೆಯೇ ಇಲ್ಲದಿದ್ದಾಗ ಮಂಡವನ್ನು ಸೇವಿಸಿದರೆ ಅದು ಶರೀರಕ್ಕೆ ಬಲವನ್ನು ಕೊಡುತ್ತದೆ.

ಸಾಮಾನ್ಯವಾಗಿ, ಜ್ವರಾದಿ ರೋಗಗಳಲ್ಲಿ ಹುರಿದಕ್ಕಿ ಗಂಜಿ ಅಥವಾ ಅರಳು ಗಂಜಿ ಉತ್ತಮವಾದ ಪಥ್ಯ. ಮೇಲೆ ಹೇಳಿದ ರೀತಿಯಲ್ಲಿ ತಯಾರಿಸಿದ ಗಂಜಿಯನ್ನು ಬಿಸಿಯಾಗಿ ಕುಡಿಯುವುದರಿಂದ ದೇಹವು ಚೆನ್ನಾಗಿ ಬೆವರಿ ಜ್ವರದ ಲಕ್ಷಣಗಳು ಕಡಿಮೆಯಾಗುತ್ತವೆ. ಇದನ್ನು ಮಕ್ಕಳಲ್ಲಿಯೂ ವಾಂತಿ, ಬೇಧಿ, ಬಾಯಾರಿಕೆ ಮತ್ತು ಅಜೀರ್ಣವಿದ್ದಾಗ ನೀಡಬಹುದು.

ರೋಗಗಳಲ್ಲಿ, ಅಕ್ಕಿಯನ್ನು ಬೇಯಿಸಿದ ನಂತರ ಧಾನ್ಯದ ಅಗುಳನ್ನು ತೆಗೆದು ತಿಳಿ ಮಾತ್ರ ಕುಡಿಯುವುದು ಮೊದಲ ಪಥ್ಯಾಹಾರ. ಜೀರ್ಣಶಕ್ತಿ ವರ್ಧನೆಯಾಗುತ್ತಾ ಹೋದಂತೆ ಅಗಳು ಕೂಡ ಸೇವಿಸುವಷ್ಟು ದೇಹವು ಶಕ್ತವಾಗುತ್ತದೆ. ಇದಾದ ನಂತರ ಗಂಜಿ ಬಸಿಯದೆ ಅನ್ನವನ್ನು ಸೇವಿಸು ವುದು ವ್ಯಾಧಿಯಿಂದ ಬೇಗ ಗುಣಮುಖರಾಗಲು ಸಹಾಯಕಾರಿ.

2. ಪೇಯಾ: ಪೇಯಾಸಿಕ್ಥ ಸಮನ್ವಿತಃ, ಅಂದರೆ ಅಗಳು ಮತ್ತು ದ್ರವ ಸಮವಾಗಿರುವ, ಆರುಪಟ್ಟು ನೀರು ಹಾಕಿ ತಯಾರಿಸಿದ ಗಂಜಿ. ಇದು ಬೆವರನ್ನು ಹೆಚ್ಚು ಮಾಡುತ್ತದೆ, ಅಂತೆಯೇ ಹಸಿವನ್ನು ಉತ್ತಮಗೊಳಿಸುತ್ತದೆ. ಜೀರ್ಣಕ್ಕೆ ಹಗುರವಾಗಿರುವ ಈ ಪೇಯಾ ಬಸ್ತಿಯನ್ನು ಶುದ್ಧಗೊಳಿಸುತ್ತದೆ. ಜ್ವರ ಬಿಡುವ ತನಕ ಮಂಡವನ್ನು ಸೇವಿಸಿ, ಜ್ವರ ಬಿಟ್ಟ ಮೇಲೆ ಉಂಟಾಗುವ ಹಸಿವೆ ನೀರಡಿಕೆ ಮತ್ತು ಕಿರಿಕಿರಿಗಳಿಂದ ಆಗುವ ದುರ್ಬಲತೆಯನ್ನು ಕಡಿಮೆ ಮಾಡಲು ಇದನ್ನು ಸೇವಿಸಬಹುದು. ಇದು ಹಸಿವನ್ನು ಹೆಚ್ಚಿಸಿ, ಮಲ ಮೂತ್ರಗಳ ಪ್ರವೃತ್ತಿಯನ್ನು ಉತ್ತಮಗೊಳಿಸುತ್ತದೆ. ವಾತಾದಿ ದೋಷಗಳನ್ನು ಸಹ ಅನುಲೋಮನ ಮಾಡುತ್ತದೆ.

3. ವಿಲೇಪಿ: ವಿಲೇಪಿ ಬಹುಸಿಕ್ಥಾಸ್ಯಾತ್, ಅಂದರೆ ಅನ್ನದ ಅಗಳು ಹೆಚ್ಚಾಗಿದ್ದು ತಿಳಿ ಕಡಿಮೆ ಇರುವ ಗಟ್ಟಿ ಗಂಜಿ, 4-5 ಪಟ್ಟು ನೀರು ಹಾಕಿ ತಯಾರಿಸಿದ ಗಂಜಿಯನ್ನು ವಿಲೇಪಿ ಎನ್ನುವರು. ವಿಲೇಪಿಯು ಬಲಕರ ಮತ್ತು ಜ್ವರದ ಬಾಯಾರಿಕೆಯನ್ನು ನಿವಾರಿಸುತ್ತದೆ. ಇದು ಹೃದಯಕ್ಕೆ ಹಿತಕರ ಮತ್ತು ತೃಪ್ತಿಯನ್ನು ಉಂಟುಮಾಡುತ್ತದೆ. ಜ್ವರ ಬಿಟ್ಟ ಮೇಲೆ ಸಾಮಾನ್ಯವಾಗಿ ಎಲ್ಲರೂ ಸೇವಿಸುವ ಪಂಚಾನ್ನವನ್ನು ವಿಲೇಪಿ ವರ್ಗಕ್ಕೆ ಸೇರಿಸಬಹುದು.

ಇದನ್ನು ಮಾಡುವ ವಿಧಾನವೆಂದರೆ- ಅಕ್ಕಿಯನ್ನು ತುಪ್ಪದಲ್ಲಿ ಹುರಿದು, ಅದಕ್ಕೆ ಹುರಿದ ಹೆಸರು ಬೇಳೆ, ಕಾಳು ಮೆಣಸು, ಜೀರಿಗೆ, ಶುಂಠಿ ಹಾಕಿ ಬೇಯಿಸಿ, ನೀರಿನಂಶ ಸ್ವಲ್ಪ ಇದ್ದಾಗಲೇ ಸೇವಿಸಬೇಕು. ಇದು ಜ್ವರದಿಂದ ದುರ್ಬಲವಾದ ಶರೀರಕ್ಕೆ ಹಿತವನ್ನು ಉಂಟುಮಾಡುತ್ತದೆ.

ವಿಲೇಪಿಯ ಮತ್ತೊಂದು ಉದಾಹರಣೆಯಾಗಿ ಕಾಯಿಹಾಲು ಗಂಜಿಯನ್ನು ತೆಗೆದುಕೊಳ್ಳಬಹುದು. ಇದನ್ನು ಮಾಡುವ ವಿಧಾನವೆಂದರೆ- ಅಕ್ಕಿಯನ್ನು ಹುರಿದು, ಬೇಯಿಸಿ, ಗಂಜಿಯ ಹಾಗೆ ಮಾಡಿ ಕೊಂಡು, ಇದಕ್ಕೆ ಕಾಯಿತುರಿ, ಏಲಕ್ಕಿ, ಲವಂಗ, ಶುಂಠಿಗಳ ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಬೆಲ್ಲವನ್ನು ಸೇರಿಸಿ ಮತ್ತೆ ಕುದಿಸಿದರೆ ಕಾಯಿ ಹಾಲು ಗಂಜಿ ಸಿದ್ಧ.

4. ಓದನ: ಅದ್ರವಾಣಿ ಸಿಕ್ಥಾನಿ, ಅಂದರೆ ಮೂರರಿಂದ ನಾಲ್ಕು ಪಟ್ಟು ನೀರು ಹಾಕಿ ಬೇಯಿಸಿ, ಗಂಜಿ ಬಸಿದ/ಬಸಿಯದ, ಕೇವಲ ಅಗಳು ಇರುವ ಸ್ಥಿತಿಯನ್ನು ಓದನ ಎಂದು ಕರೆಯುತ್ತಾರೆ. ಇದೇ ನಾವೆಲ್ಲರೂ ಸಾಮಾನ್ಯವಾಗಿ ಸೇವಿಸುವ ‘ಅನ್ನ’ ವೆಂದು ಪ್ರಸಿದ್ಧ. ಅನ್ನವನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದನ್ನು ನಾವು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಕಾರಣ, ಇದನ್ನು ತಯಾರಿಸುವ ವಿಧಾನದಲ್ಲಿಯೇ ಇದರ ಗುಣಗಳು ಅಡಗಿವೆ. ಆಯುರ್ವೇದದ ಪ್ರಕಾರ ಅಕ್ಕಿಯನ್ನು ಕನಿಷ್ಠ ಮೂರು ಬಾರಿ ನೀರಿನಲ್ಲಿ ತೊಳೆದು, ಸ್ವಲ್ಪ ಸಮಯ ನೆನೆ ಇಡಬೇಕು. ನಂತರ ಕನಿಷ್ಠ ಎರಡರಿಂದ ಮೂರು ಪಟ್ಟು ನೀರು ಸೇರಿಸಿ, ಚೆನ್ನಾಗಿ ಬೇಯಿಸಿ, ಬೆಂದ ನಂತರ ತಿಳಿಯನ್ನು ಬಸಿಯಬೇಕು. ಹೀಗೆ ತಯಾರಾದ ಅನ್ನವು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ.

ಇದು ಜೀರ್ಣಕ್ಕೆ ಹಗುರವಾಗಿರುವುದರಿಂದ ಬಾಲಕರಿಗೆ ಮತ್ತು ವೃದ್ಧರಿಗೂ ಉಪಯುಕ್ತ. ಹುರಿದಕ್ಕಿ ಯಿಂದ ಅನ್ನವನ್ನು ಮಾಡಿ, ಗಂಜಿಯನ್ನು ಬಸಿದು, ಬಿಸಿಯಿರುವಾಗಲೇ ಸೇವಿಸುವುದು ಪ್ರಮೇಹಿ ಗಳಿಗೂ ತೊಂದರೆ ಉಂಟುಮಾಡದು! ನೆನಪಿನಲ್ಲಿ ಇಡಬೇಕಾದ ವಿಷಯವೆಂದರೆ, ಅಕ್ಕಿಯನ್ನು ತೊಳೆಯದೆ, ಸ್ವಲ್ಪ ಸಮಯ ನೆನೆಸದೆ ಹಾಗೂ ಬೇಯಿಸುವಾಗ ಅದರ ಗಂಜಿಯನ್ನು ಬಸಿಯದೆ ಮಾಡಿದ ಅನ್ನವು/ಕುಕ್ಕರಿನಲ್ಲಿ ಮಾಡಿದ ಅನ್ನವು ಜೀರ್ಣಕ್ಕೆ ಜಡ. ಸ್ಥೂಲರಿಗೆ, ಪ್ರಮೇಹಿಗಳಿಗೆ ಈ ರೀತಿ ತಯಾರಿಸಿದ ಅನ್ನವು ಹಿತವಲ್ಲ. ಆದರೆ, ಜೀರ್ಣಶಕ್ತಿ ಉತ್ತಮವಾಗಿರುವವರಿಗೆ ಮತ್ತು ಮಧ್ಯಮ ವಯಸ್ಕರಿಗೆ ಇದು ಒಳ್ಳೆಯದು. ಅಂತೆಯೇ ತಣ್ಣಗಾಗಿರುವ ಅನ್ನ/ಹಿಂದಿನ ದಿನ ತಯಾರು ಮಾಡಿದ ಅನ್ನವು ದೇಹದಲ್ಲಿ ಕಫವನ್ನು ಹೆಚ್ಚು ಮಾಡುವುದಲ್ಲದೆ ಅದು ಜೀರ್ಣಕ್ಕೆ ಜಡ ಮತ್ತು ದೇಹದ ತೂಕವನ್ನು ಹೆಚ್ಚಿಸುತ್ತದೆ.

ಅವಲಕ್ಕಿ: ಇದನ್ನು ಸಂಸ್ಕೃತದಲ್ಲಿ ‘ಪೃಥುಕ’ ಎನ್ನುತ್ತಾರೆ. ಭತ್ತವನ್ನು ನೆನೆಸಿ, ಹಸಿ ಇzಗಲೇ ಹುರಿದರೆ ಅವಲಕ್ಕಿ ಎಂಬ ಪದಾರ್ಥ ಸಿದ್ಧವಾಗುತ್ತದೆ ನಾವೆಲ್ಲರೂ ಸರ್ವೇಸಾಮಾನ್ಯವಾಗಿ ಬಳಸುವ ಅವಲಕ್ಕಿ ಕೂಡ ಅಕ್ಕಿಯಿಂದ ಆದ ಆಹಾರವೇ. ನಾವೆಲ್ಲರೂ ಸಾಮಾನ್ಯವಾಗಿ ಅವಲಕ್ಕಿ ಜೀರ್ಣಕ್ಕೆ ಬಹಳ ಹಗುರ ಎಂದು ತಿಳಿದುಕೊಂಡಿರುತ್ತೇವೆ.

ಆದರೆ, ವಾಸ್ತವವಾಗಿ ಅವಲಕ್ಕಿಯು ಜೀರ್ಣಕ್ಕೆ ಜಡ. ಇದು ಬಲಕರ ಮತ್ತು ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ. ಕೆಲವರಿಗೆ ಇದು ವಾತವನ್ನು ಹೆಚ್ಚಿಸಿ ಮಲಾವರೋಧವನ್ನು ಸಹ ಉಂಟು ಮಾಡುತ್ತದೆ. ಅವಲಕ್ಕಿಯನ್ನು ಬೇಯಿಸಿ ಗಂಜಿಯ ರೂಪದಲ್ಲೂ ಸೇವಿಸಬಹುದು.

ಮುಗಿಸುವ ಮುನ್ನ ಒಂದು ಕಿವಿಮಾತು: ತಲೆಮಾರಿನಿಂದ ನಮ್ಮ ಕುಟುಂಬದಲ್ಲಿ ಪಾರಂಪರಿ ಕವಾಗಿ ಯಾವ ಧಾನ್ಯವನ್ನು ನಿತ್ಯವೂ ಸೇವಿಸುವ ಅಭ್ಯಾಸವಿರುತ್ತದೆಯೋ ಅದನ್ನೇ ನಾವು ಸೇವಿಸಿಕೊಂಡು ಮುಂದುವರಿಸುವುದು, ದೇಹ- ಮನಸ್ಸುಗಳಿಗೆ ಸದಾ ಕ್ಷೇಮ ಮತ್ತು ಆರೋಗ್ಯಕರ. ನೂರಾರು ವರ್ಷಗಳಿಂದ ಆನುವಂಶಿಕವಾಗಿ ಸಾತ್ಮ್ಯವಾಗಿರುವ ಅನ್ನವನ್ನು ತ್ಯಜಿಸಿ ಏಕಾಏಕಿ ಯಾವುದೋ ವಿದೇಶಿ ಧಾನ್ಯವನ್ನು ಸೇವಿಸುವುದು ಎಂದಿಗೂ ಹಿತವಲ್ಲ.

ದೇಹಕ್ಕೆ ಸಾತ್ಮ್ಯವಿರುವ ಆಹಾರ ಮಾತ್ರ ಪ್ರಾಣವನ್ನು ಸ್ಥಿರಗೊಳಿಸಿ, ಮನಸ್ಸನ್ನು ಸತ್ವಯುತವಾಗಿಸಿ ಮನೋಬಲವನ್ನು ವೃದ್ಧಿ ಮಾಡುತ್ತದೆ. ನಮ್ಮ ಶರೀರದ ರಸ ರಕ್ತಾದಿ ಧಾತುಗಳನ್ನು ಪೋಷಿಸಿ, ಇಂದ್ರಿಯಗಳನ್ನು ತೃಪ್ತಿಪಡಿಸುತ್ತದೆ. ದೇಹಕ್ಕೆ ಅಭ್ಯಾಸವಿಲ್ಲದ ಆಹಾರವು ನಾಲಿಗೆಗೆ ಸಿಹಿಯಾದರೂ ಆರೋಗ್ಯಕ್ಕೆ ಮಾತ್ರ ಕಹಿಯೇ.

ಹಾಗಾಗಿ, ಯಾವುದೋ ಸಂಶೋಧನೆ ಹೇಳಿತೆಂದು ಅನ್ನವನ್ನು ತ್ಯಜಿಸುವ ಮುನ್ನ ನಿಧಾನವಾಗಿ ಆಲೋಚಿಸಿ. ಅದಕ್ಕೆ ಅಲ್ವಾ ಹೇಳುವುದು: “ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ, ಅನ್ನ ಇರುವ ತನಕ ಪ್ರಾಣವು ಜಗದೊಳಗೆ, ಅನ್ನವೇ ದೈವ ಸರ್ವಜ್ಞ".