ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

R‌oopa Gururaj Column: ಸ್ವಾಭಿಮಾನವನ್ನು ಎಂದಿಗೂ ಬಿಡದ ಡಾಲಿ ಪಾರ್ಟನ್

ಟೆನ್ನೆಸ್ಸೀಯ ಸ್ಮೋಕಿ ಪರ್ವತಗಳ ನಡುವಿನ ಆ ಪುಟ್ಟ ಮರದ ಗುಡಿಸಲು, ವಿದ್ಯುತ್ ನೀರಿನ ಅನುಕೂಲ ವೂ ಅಲ್ಲಿ ಇರಲಿಲ್ಲ. ಚಳಿಗಾಲ ಬಂದರೆ ಬೆಚ್ಚಗಿರಲು ಮನೆಯ ಮೂರ್ನಾಲ್ಕು ಮಕ್ಕಳು ಒಂದೇ ಹಾಸಿಗೆಯಲ್ಲಿ ಮುದುರಿ ಮಲಗಬೇಕಾದಂತಹ ಕಡುಬಡತನ. 1946ರಲ್ಲಿ ಆ ಹೆಣ್ಣುಮಗಳು ಜನಿಸಿದಾಗ, ಅವಳ ತಂದೆಯ ಬಳಿ ವೈದ್ಯರಿಗೆ ಫೀಸ್ ಕಟ್ಟಲು ಹಣವಿರಲಿಲ್ಲ; ಬದಲಾಗಿ ಒಂದು ಚೀಲ ಜೋಳದ ಹಿಟ್ಟನ್ನು ನೀಡಿದ್ದರು. ಆಕೆಯೇ ಮುಂದೆ ಜಗತ್ಪ್ರಸಿದ್ಧ ಗಾಯಕಿಯಾದ ‘ಡಾಲಿ ಪಾರ್ಟನ್.’

ಒಂದೊಳ್ಳೆ ಮಾತು

ಟೆನ್ನೆಸ್ಸೀಯ ಸ್ಮೋಕಿ ಪರ್ವತಗಳ ನಡುವಿನ ಆ ಪುಟ್ಟ ಮರದ ಗುಡಿಸಲು, ವಿದ್ಯುತ್ ನೀರಿನ ಅನುಕೂಲವೂ ಅಲ್ಲಿ ಇರಲಿಲ್ಲ. ಚಳಿಗಾಲ ಬಂದರೆ ಬೆಚ್ಚಗಿರಲು ಮನೆಯ ಮೂರ್ನಾಲ್ಕು ಮಕ್ಕಳು ಒಂದೇ ಹಾಸಿಗೆಯಲ್ಲಿ ಮುದುರಿ ಮಲಗಬೇಕಾದಂತಹ ಕಡುಬಡತನ. 1946ರಲ್ಲಿ ಆ ಹೆಣ್ಣುಮಗಳು ಜನಿಸಿದಾಗ, ಅವಳ ತಂದೆಯ ಬಳಿ ವೈದ್ಯರಿಗೆ ಫೀಸ್ ಕಟ್ಟಲು ಹಣವಿರಲಿಲ್ಲ; ಬದಲಾಗಿ ಒಂದು ಚೀಲ ಜೋಳದ ಹಿಟ್ಟನ್ನು ನೀಡಿದ್ದರು. ಆಕೆಯೇ ಮುಂದೆ ಜಗತ್ಪ್ರಸಿದ್ಧ ಗಾಯಕಿಯಾದ ‘ಡಾಲಿ ಪಾರ್ಟನ್.’

ಬಡತನವಿದ್ದರೂ ಆಕೆಯ ಬಳಿ ದೈವದತ್ತವಾದ ಅದ್ಭುತ ಕಂಠವಿತ್ತು. ಹದಿಹರೆಯದ ತನ್ನ ಹಾಡುಗಳ ಗಂಟನ್ನು ಕಟ್ಟಿಕೊಂಡು, ಹಳೆಯದಾದ ಒಂದು ಸೂಟ್‌ಕೇಸ್ ಹಿಡಿದು ನ್ಯಾಶ್ವಿ ನಗರಕ್ಕೆ ಬಂದಾಗ ಎಲ್ಲರೂ ಅವಳನ್ನು ಹೀಯಾಳಿಸಿದರು. ನೀನೊಬ್ಬಳು ದಡ್ಡ ಸುಂದರಿ, ನಿನ್ನನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ, ವಾಪಸ್ ಊರಿಗೆ ಹೊರಟುಹೋಗು ಎಂದು ಮೂದ ಲಿಸಿದರು. ಆದರೆ ಅವಳು ಆ ಮಾತುಗಳಿಗೆ ಕಿವಿಗೊಡಲಿಲ್ಲ.

ಸಂಗೀತ ಲೋಕದ ದೊಡ್ಡ ಗುಟ್ಟೊಂದು ಆಕೆಗೆ ತಿಳಿದಿತ್ತು. ‘ಹಣವಿರುವುದು ಕೇವಲ ಹಾಡುವು ದರಲ್ಲಲ್ಲ, ಆ ಹಾಡಿನ ಮಾಲೀಕತ್ವವನ್ನು ಉಳಿಸಿಕೊಳ್ಳುವುದರಲ್ಲಿ’ ಎಂಬ ಸತ್ಯ ಆಕೆಗೆ ಅರಿವಾಗಿತ್ತು. ಹೀಗಾಗಿಯೇ ತನ್ನದೇ ಆದ ಪಬ್ಲಿಷಿಂಗ್ ಕಂಪನಿಯನ್ನು ಹುಟ್ಟುಹಾಕಿದಳು. ತಾನು ಬರೆದ ಪ್ರತಿಯೊಂದು ಪದದ ಹಕ್ಕೂ ತನ್ನದೇ ಆಗಿರಬೇಕೆಂದು ನಿರ್ಧರಿಸಿದಳು.

ಇದನ್ನೂ ಓದಿ: Roopa Gururaj Column: ಕ್ಷಮೆಯ ಹಿರಿಮೆ ಸಾರುವ ಗೃಷ್ಣೇಶ್ವರ ಜ್ಯೋತಿರ್ಲಿಂಗದ ಕಥೆ

1967ರಲ್ಲಿ ಪೋರ್ಟರ್ ವ್ಯಾಗನರ್ ಎಂಬ ಪ್ರಸಿದ್ಧ ಗಾಯಕ ತನ್ನ ಜನಪ್ರಿಯ ಟಿವಿ ಶೋನಲ್ಲಿ ಆಕೆಗೆ ಅವಕಾಶ ನೀಡಿದ. ಡಾಲಿಯ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಿತು. ಆದರೆ ಏಳು ವರ್ಷಗಳ ಕಾಲ ಆತನ ನೆರಳಿನ ಬೆಳೆದ ಆಕೆಗೆ, ತನ್ನದೇ ಆದ ಸ್ವತಂತ್ರ ಸಾಮ್ರಾಜ್ಯ ಕಟ್ಟುವ ಹಂಬಲ ಶುರುವಾ ಯಿತು.

ಪೋರ್ಟರ್ ಇದಕ್ಕೆ ಒಪ್ಪಲಿಲ್ಲ. ಆಗ ಆಕೆ ಒಂದೇ ದಿನದಲ್ಲಿ Jolene ಮತ್ತು I Will Always Love You ಎಂಬ ಎರಡು ಅದ್ಭುತ ಗೀತೆಗಳನ್ನು ರಚಿಸಿದಳು. ಅದರಲ್ಲಿ ಎರಡನೆಯ ಹಾಡು ಕೇವಲ ಪ್ರೇಮ ಗೀತೆ ಯಾಗಿರಲಿಲ್ಲ; ಅದು ಪೋರ್ಟರ್‌ಗೆ ಆಕೆ ನೀಡಿದ ಕಾವ್ಯಾತ್ಮಕ ‘ರಾಜೀನಾಮೆ ಪತ್ರ’ವಾಗಿತ್ತು.

1974ರಲ್ಲಿ ಈ ಹಾಡು ಭಾರಿ ಜನಪ್ರಿಯವಾಯಿತು. ಆ ಜನಪ್ರಿಯತೆ ಎಷ್ಟಿತ್ತೆಂದರೆ, ಸಾಕ್ಷಾತ್ ‘ಕಿಂಗ್ ಆಫ್ ರಾಕ್ ಆಂಡ್ ರೋಲ್’ ಖ್ಯಾತಿಯ ಎಲ್ವಿಸ್ ಪ್ರೀಸ್ಲಿ ಆ ಹಾಡನ್ನು ತಾನು ಹಾಡಬೇಕೆಂದು ಆಸೆಪಟ್ಟ. ಗುಡಿಸಲಿನಲ್ಲಿ ಹುಟ್ಟಿದ ಡಾಲಿಗೆ ಇದಕ್ಕಿಂತ ದೊಡ್ಡ ಅದೃಷ್ಟ ಇನ್ನೇನಿದೆ? ಆದರೆ ರೆಕಾರ್ಡಿಂಗ್‌ನ ಹಿಂದಿನ ದಿನ ರಾತ್ರಿ ಎಲ್ವಿಸ್‌ನ ಮ್ಯಾನೇಜರ್ ಕರ್ನಲ್ ಟಾಮ್ ಪಾರ್ಕರ್ ಕರೆ‌ ಮಾಡಿ, ಹಾಡಿನ ಶೇಕಡಾ 50ರಷ್ಟು ಹಕ್ಕುಗಳನ್ನು ನಮಗೆ ಬರೆದುಕೊಡಬೇಕು, ಇಲ್ಲದಿದ್ದರೆ ಎಲ್ವಿಸ್ ಹಾಡುವುದಿಲ್ಲ ಎಂಬ ಕಠಿಣ ಷರತ್ತು ವಿಧಿಸಿದ. ಅದು ಆಕೆಯ ಜೀವಮಾನದ ಕನಸು. ಆದರೆ, ಆಕೆ ತನ್ನ ಹಾಡಿನ ಹಕ್ಕನ್ನು ಬಿಟ್ಟುಕೊಡಲು ಸಿದ್ಧಳಿರಲಿಲ್ಲ.

ಭಾರವಾದ ಹೃದಯ ದಿಂದ, ‘ಇಲ್ಲ’ ಎಂದುಬಿಟ್ಟಳು. ಎಲ್ವಿಸ್ ಆ ಹಾಡನ್ನು ಹಾಡಲಿಲ್ಲ. ಆ ರಾತ್ರಿಯಿಡೀ ಆಕೆ ಬಿಕ್ಕಿ ಬಿಕ್ಕಿ ಅತ್ತಳು. ಶೋ ಬಿಟ್ಟು ಬಂದಿದ್ದಕ್ಕಾಗಿ ಆಕೆಯ ಹಳೆಯ ಗುರು ಪೋರ್ಟರ್ ಕೂಡ 3 ಮಿಲಿಯನ್ ಡಾಲರ್ ಮೊಕದ್ದಮೆ ಹೂಡಿದ. ಎಲ್ಲವನ್ನೂ ಆಕೆ ಒಂಟಿಯಾಗಿ ಎದುರಿಸಿದಳು, ದಂಡ ಕಟ್ಟಿದಳು, ಆದರೆ ತನ್ನ ಸ್ವಾಭಿಮಾನವನ್ನು ಮಾತ್ರ ಬಿಟ್ಟುಕೊಡಲಿಲ್ಲ.

ಕಾಲ ಉರುಳಿತು. ಡಾಲಿ ತನ್ನದೇ ಸ್ವಂತ ಶ್ರಮದಿಂದ ಜಾಗತಿಕ ಬ್ರ್ಯಾಂಡ್ ಆಗಿ ಬೆಳೆದಳು. 1992ರಲ್ಲಿ ‘ದಿ ಬಾಡಿಗಾರ್ಡ್’ ಚಿತ್ರಕ್ಕಾಗಿ ಖ್ಯಾತ ಗಾಯಕಿ ವಿಟ್ನಿ ಹೂಸ್ಟನ್ ಆಕೆಯ ಅದೇ ಹಾಡನ್ನು ಹಾಡಿ ದಾಗ, ಅದು ಜಗತ್ತಿನಾದ್ಯಂತ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ತನ್ನ ಹಾಡಿನ ಸಂಪೂರ್ಣ ಮಾಲೀಕತ್ವ ಉಳಿಸಿಕೊಂಡಿದ್ದ ಡಾಲಿಗೆ, ಆ ಒಂದೇ ಹಾಡು ಕೋಟ್ಯಂತರ ಡಾಲರ್ ಸಂಪತ್ತನ್ನು ತಂದುಕೊಟ್ಟಿತು. ಆಕೆ ಒಮ್ಮೆ ನಗುತ್ತಾ ಹೇಳಿದ್ದಳು, ‘ಆ ಹಾಡಿನಿಂದ ಬಂದ ಹಣದಲ್ಲಿ ನಾನು ಎಲ್ವಿಸ್ ಪ್ರೀಸ್ಲಿಯ ಇಡೀ ಅರಮನೆಯನ್ನೇ ಖರೀದಿಸಬಲ್ಲೆ!’ ಎಂದು.

ಇಂದು ಅವಳು ನೂರಾರು ಮಿಲಿಯನ್ ಡಾಲರ್‌ಗಳ ಒಡತಿ. ತನ್ನದೇ ಆದ ‘ಡಾಲಿವುಡ್’ ಸಾಮ್ರಾಜ್ಯ ಕಟ್ಟಿದ್ದಾಳೆ. ತಂದೆಯ ನೆನಪಿನಲ್ಲಿ ಬಡಮಕ್ಕಳಿಗೆ ಕೋಟ್ಯಂತರ ಪುಸ್ತಕಗಳನ್ನು ಹಂಚಿದ್ದಾಳೆ.

ಜೀವನದಲ್ಲಿ ಬೆಳೆಯುವ ಸಲುವಾಗಿ ನಾವು ಅನೇಕ ಬಾರಿ ನಮ್ಮ ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಂಡು ಬಿಡುತ್ತೇವೆ. ಕೆಲವೊಮ್ಮೆ ಇಷ್ಟವಿಲ್ಲದ ಕೆಲಸಗಳನ್ನು ಕೂಡ ಮಾಡಿ ಬಿಡುತ್ತೇವೆ. ಆದರೆ ಅಂತಹ ಬೆಳವಣಿಗೆಯಿಂದ ನಮ್ಮ ನಿಜವಾದ ಅಸ್ತಿತ್ವ ಇರುತ್ತದೆಯೇ ಯೋಚಿಸಬೇಕು. ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸವಿದ್ದಾಗ , ಆತ್ಮ ಗೌರವವನ್ನು ನಾವು ಎಂದೂ ಕಳೆದುಕೊಳ್ಳುವು ದಿಲ್ಲ. ಜೀವನದ ಯಾವ ನಿರ್ಧಾರವೂ ಕೂಡ ಮುಂದೆ ನಾವು ಪಶ್ಚಾತ್ತಾಪ ಪಡುವಂತೆ ಇರಬಾರದು. ಕೆಲವೊಮ್ಮೆ, ನಾವು ಹೇಳುವ ಒಂದು ಖಂಡಿತವಾದ ‘ಇಲ್ಲ’ ಎಂಬ ಪದವೇ, ನಮ್ಮ ಭವಿಷ್ಯದ ಭದ್ರ ಬುನಾದಿಯಾಗಬಲ್ಲದು.

ರೂಪಾ ಗುರುರಾಜ್

View all posts by this author