ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಆಟೋ ಪೈಲಟ್‌ ಬಗ್ಗೆ ಸಂದೇಹ

ಆಟೋ ಪೈಲಟ್ ತಂತ್ರಜ್ಞಾನ ಜಾಗತಿಕ ವಿಮಾನಗಳಲ್ಲಿ ಅತ್ಯಂತ ಪ್ರಗತಿಶೀಲವಾಗಿರುವುದು ನಿಜ. ವಿಮಾನ ಹಾರಾಟದ ವಿವಿಧ ಹಂತಗಳಲ್ಲಿ (ಟೇಕಾಫ್, ಲ್ಯಾಂಡಿಂಗ್ ಕ್ರೂಸಿಂಗ್) ಆಟೋ ಪೈಲಟ್ ವಿಶ್ವಾಸಾರ್ಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೀರ್ಘ ಪ್ರಯಾಣದ ಸಂದರ್ಭದಲ್ಲಿ ಪೈಲಟ್‌ ನ ಶ್ರಮ ಅಥವಾ ದಣಿವನ್ನು ಕಮ್ಮಿ ಮಾಡಲು ಆಟೋ ಪೈಲಟ್ ನೆರವಾಗುವುದು ಸುಳ್ಳಲ್ಲ. ‌

ಆಟೋ ಪೈಲಟ್‌ ಬಗ್ಗೆ ಸಂದೇಹ

ಸಂಪಾದಕರ ಸದ್ಯಶೋಧನೆ

ರಾತ್ರಿಯ ತಡ ಸಮಯದಲ್ಲಿ, ದೀರ್ಘಾವಧಿಯ ( (long-haul) ವಿಮಾನ ಹಾರಾಟಗಳ ವೇಳೆ, ಕೆಲವು ಪೈಲಟ್‌ಗಳು ಆಟೋ ಪೈಲಟ್ ಮೋಡ್‌ನಲ್ಲಿ ವಿಮಾನವನ್ನು ನಿರ್ವಹಿಸುತ್ತಾ, ತಮ್ಮ ವೈಯಕ್ತಿಕ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರಂತೆ, ಹೌದಾ? ಈ ಪ್ರಶ್ನೆ ಅನೇಕ ಪ್ರಯಾಣಿಕರ ಮನಸ್ಸಿನಲ್ಲಿ ಹಾದುಹೋಗಿದ್ದುಂಟು. ಆದರೆ ಇತ್ತೀಚೆಗೆ ಗಗನಸಖಿಯೊಬ್ಬಳು ಈ ಸಂಗತಿಯನ್ನು ಖಾತ್ರಿಪಡಿಸಿದ ಬಳಿಕ ಅದು ವಿಮಾನ ಹಾರಾಟದ ಸುರಕ್ಷತೆ ಬಗ್ಗೆ ಹೊಸ ಚರ್ಚೆ, ವಿವಾದ ಹುಟ್ಟುಹಾಕಿದೆ.

ಆಟೋ ಪೈಲಟ್ ತಂತ್ರಜ್ಞಾನ ಜಾಗತಿಕ ವಿಮಾನಗಳಲ್ಲಿ ಅತ್ಯಂತ ಪ್ರಗತಿಶೀಲವಾಗಿರುವುದು ನಿಜ. ವಿಮಾನ ಹಾರಾಟದ ವಿವಿಧ ಹಂತಗಳಲ್ಲಿ (ಟೇಕಾಫ್, ಲ್ಯಾಂಡಿಂಗ್ ಕ್ರೂಸಿಂಗ್) ಆಟೋ ಪೈಲಟ್ ವಿಶ್ವಾಸಾರ್ಹ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ದೀರ್ಘ ಪ್ರಯಾಣದ ಸಂದರ್ಭದಲ್ಲಿ ಪೈಲಟ್‌ ನ ಶ್ರಮ ಅಥವಾ ದಣಿವನ್ನು ಕಮ್ಮಿ ಮಾಡಲು ಆಟೋ ಪೈಲಟ್ ನೆರವಾಗುವುದು ಸುಳ್ಳಲ್ಲ. ‌

ಟರ್ಬ್ಯುಲನ್ಸ್ ಸೇರಿದಂತೆ ಹವಾಮಾನ ಬದಲಾವಣೆಯನ್ನು ಸೂಕ್ಷ್ಮವಾಗಿ ಗಮನಿಸಲು ಆಟೋ ಪೈಲಟ್ ಸಹಾಯಕ ಕೂಡ. ವಿಮಾನದ ಎತ್ತರ, ದಿಕ್ಕು, ವೇಗ ಮುಂತಾದ ಮಾಹಿತಿಯನ್ನು ಪಡೆ ಯುತ್ತಾ ಭೌತಿಕ ನಿಯಂತ್ರಣ ಸಾಧಿಸಲು ಆಟೋ ಪೈಲಟ್ ವ್ಯವಸ್ಥೆ ಅತ್ಯಂತ ಪ್ರಯೋಜನಕಾರಿ.

ಇದನ್ನೂ ಓದಿ: Vishweshwar Bhat Column: ವಿಮಾನವನ್ನು ಪಾರ್ಕ್‌ ಮಾಡುವುದು

ಮನುಷ್ಯ ಮಾಡುವ ದೋಷಗಳ ನಿವಾರಣೆಯೂ ಆಟೋ ಪೈಲಟ್‌ನ ಉದ್ದೇಶಗಳಂದು. ಆದರೆ ಈ ವ್ಯವಸ್ಥೆಗೂ ಇತಿಮಿತಿಗಳಿವೆ. ತುರ್ತು ಪರಿಸ್ಥಿತಿಗಳು, ಅವಘಡಗಳು, ಹವಾಮಾನ ತೊಂದರೆ- ಇವು‌ ಗಳಿಗೆ ತಕ್ಷಣ ಸ್ಪಂದಿಸಬೇಕಾದರೆ, ಪೈಲಟ್ ಜಾಗೃತನಾಗಿರಬೇಕು. ಆಟೋ ಪೈಲಟ್ ವ್ಯವಸ್ಥೆ ಯಲ್ಲಿ ವಿಮಾನ ಹಾರಿಸುವುದು ಅಪರಾಧವಲ್ಲ. ಅದು ಪೈಲಟ್‌ನ ಸಂಗಾತಿಯಂತೆ, ಸಹಾಯಕನಂತೆ ಕೆಲಸ ಮಾಡುತ್ತದೆ.

ಆದರೆ ಅದು ಪೈಲಟ್‌ಗೆ ಬದಲಿ ( substitute) ವ್ಯವಸ್ಥೆ ಅಲ್ಲ. ಗಗನಸಖಿ ಹೇಳಿಕೆ ಯಾಕೆ ಮಹತ್ವ ವಾಗುತ್ತದೆಂದರೆ, ಪೈಲಟ್‌ಗಳು ಇಡೀ ವಿಮಾನವನ್ನು ಆಟೋ ಪೈಲಟ್ ವ್ಯವಸ್ಥೆಗೆ ವಹಿಸಿ ತಾವು ತಮ್ಮ ಪಾಡಿಗೆ ವೈಯಕ್ತಿಕ ಕೆಲಸ-ಕಾರ್ಯಗಳಲ್ಲಿ ಮಗ್ನರಾಗಿರುತ್ತಾರೆ ಎನ್ನುವುದು.

ಕೆಲವು ಸಲ ಆಟೋ ಪೈಲಟ್ ಕೆಲವು ಸೂಕ್ಷ್ಮ ಅಥವಾ ತುರ್ತು ಸಂದೇಶಗಳನ್ನು ಪೈಲಟ್‌ಗೆ ತಿಳಿಸ ಬಹುದು. ಅದನ್ನು ಕೇಳಲು, ನೋಡಲು ಅಲ್ಲಿ ಪೈಲಟ್ ಇಲ್ಲದಿದ್ದರೆ ಅದು ಅಪಾಯಕ್ಕೆ ಅವಕಾಶ ಮಾಡಿಕೊಡುತ್ತದೆ. ವಿಮಾನಯಾನದಲ್ಲಿ ಜನರು ಸುರಕ್ಷತೆ ಮತ್ತು ತಮ್ಮ ಪ್ರಾಣಭದ್ರತೆ ಮೇಲೆ ಎಂದೆಂದಿಗೂ ಭರವಸೆ ಇಡುತ್ತಾರೆ. ಇಂಥ ಹೇಳಿಕೆಗಳು ವಿಮಾನ ಪ್ರಯಾಣದ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗುವುದು ಸಹಜ.

ಅಸಲಿಗೆ ಅನೇಕ ಪ್ರಯಾಣಿಕರಿಗೆ ಆಟೋ ಪೈಲಟ್ ಎಂಬ ವ್ಯವಸ್ಥೆ ಇರುತ್ತದೆ ಎಂಬುದೂ ಗೊತ್ತಿ ರುವುದಿಲ್ಲ. ‘ನಮ್ಮ ಜೀವವನ್ನು ಯಂತ್ರದ ಕೈಗೆ ಕೊಟ್ಟು ಪೈಲಟ್‌ಗಳು ಹಾಯಾಗಿರುತ್ತಾರೆ’ ಎಂಬ ಭಾವನೆ ಪ್ರಯಾಣಿಕರ ಮನಸ್ಸಿನಲ್ಲಿ ಮೂಡಿದರೆ ಅವರಲ್ಲಿ ವಿಮಾನ ಪ್ರಯಾಣದ ಬಗ್ಗೆ ಭೀತಿ ಆವರಿಸುವುದು ಸಹಜ.

ಪೈಲಟ್‌ಗಳು ಫ್ಲೈಟ್ ಆಟೋಮೇಷನ್ ವ್ಯವಸ್ಥೆಯನ್ನು ಯಾವತ್ತೂ ಪೂರಕವಾಗಿ ನೋಡುತ್ತಾರೆ. ನಿಯಂತ್ರಣವನ್ನು ಪೈಲಟ್‌ಗಳೇ ಮಾಡುತ್ತಾರೆ. ಆಟೊ ಪೈಲಟ್ ಅನ್ನು default substitute ಆಗಿ ಅವರು ಎಂದೂ ತೆಗೆದುಕೊಳ್ಳುವುದಿಲ್ಲ. ಅಷ್ಟಕ್ಕೂ ಪೈಲಟ್ ಸಹ ಅಸಲಿಗೆ ಪ್ರಯಾಣಿಕನೇ.

ಆತನಿಗೆ ಪ್ರಯಾಣಿಕರ ಸುರಕ್ಷತೆ ಮತ್ತು ಜೀವಕ್ಕಿಂತ ತನ್ನ ಸುರಕ್ಷತೆ ಮತ್ತು ಜೀವ ಮುಖ್ಯ. ಹೀಗಾಗಿ ಆತ ಇಡೀ ಕಾಕ್‌ಪಿಟ್ ಅನ್ನು ಯಂತ್ರಕ್ಕೆ ಒಪ್ಪಿಸಿ ತಾನು ಹಾಯಾಗಿರಲು ಸಾಧ್ಯವೇ ಇಲ್ಲ. ಅಲ್ಪ ಕಾಲ ಮೈಮರೆತರೆ ಅದೆಂಥ ಬೆಲೆ ತೆರಬೇಕಾದೀತು ಎಂಬುದರ ಪ್ರಾಥಮಿಕ ಜ್ಞಾನ ಪೈಲಟ್‌ಗೆ ಇದ್ದೇ ಇರುತ್ತದೆ.

15-18 ಗಂಟೆಗಳ ವಿಮಾನ ಪ್ರಯಾಣದಲ್ಲಿ ಪೈಲಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಒಬ್ಬ ಪೈಲಟ್‌ಗೆ ಸುಸ್ತಾದರೆ, ನಿದ್ದೆ ಬಂದರೆ, ಬೇರೆಯವರು ಆ ಕೆಲಸವನ್ನು ನಿರ್ವಹಿಸುತ್ತಾರೆ. ಪೈಲಟ್‌ ಗಳಿಗೆ ವಿಮಾನದಲ್ಲಿ ಮಲಗಲು ಕೋಣೆಗಳಿರುತ್ತವೆ. ಅವರು ದಣಿವು ಆರಿಸಿಕೊಳ್ಳಲು ಸ್ವತಂತ್ರರು. ಅದಕ್ಕಿಂತ ಹೆಚ್ಚಾಗಿ ಪೈಲಟ್‌ಗಳಿಗೆ ಇಷ್ಟೇ ಗಂಟೆ ವಿಮಾನ ಹಾರಿಸಬೇಕು ಎಂಬ ಶಿಷ್ಟಾಚಾರ, ನಿಯಮಗಳನ್ನು ಸಹ ಅಳವಡಿಸಲಾಗಿದೆ.

ಹೀಗಾಗಿ ಇಂಥ ಸೂಕ್ಷ್ಮ ವಿಷಯಗಳಲ್ಲಿ ಪೈಲಟ್‌ಗಳು ಸಾಮಾನ್ಯವಾಗಿ ಮೈಮರೆಯುವುದಿಲ್ಲ. ಗಗನ ಸಖಿ ಹೇಳಿಕೆ ಈ ವಿಷಯದ ಬಗ್ಗೆ ಚರ್ಚೆ ಹುಟ್ಟುಹಾಕಿದ್ದು, ಆಟೋ ಪೈಲಟ್ ವ್ಯವಸ್ಥೆ ಬಗ್ಗೆ ಇನ್ನಷ್ಟು ಎಚ್ಚರ ವಹಿಸುವಂತೆ ಮಾಡಿದ್ದು ಒಳ್ಳೆಯದೇ.