G Palaniswamy Jaageri : ರಾಷ್ಟ್ರೀಯ ಶಿಕ್ಷಣಕ್ಕೆ ಬುನಾದಿ ಹಾಡಿದ ಭಾರತ ಸೇವಾದಳ ಸ್ಥಾಪಕ ಡಾ.ಹರ್ಡೀಕರ್
1923ರಲ್ಲಿ ಹಿಂದೂ ಸ್ಥಾನಿ ಸೇವಾದಳವನ್ನು ಸ್ಥಾಪಿಸಿ ಅದರ ಕಾರ‍್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹರ್ಡೀ ಕರ್ ಅವರು 1931ರಲ್ಲಿ ಈ ಸಂಘಟನೆಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಸ್ವಾತಂತ್ರ್ಯ ಚಳವಳಿಗೆ ಕಸುವು ತುಂಬಿದವರು. ಸ್ವಾತಂತ್ರ್ಯದ ನಂತರ 1950ರಲ್ಲಿ ಭಾರತ ಸೇವಾದಳ ಸಂಸ್ಥೆ ಯನ್ನು ಹುಟ್ಟು ಹಾಕಿ ಮಕ್ಕಳಲ್ಲಿ ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಮತ್ತು ನೈತಿಕ ಶಿಕ್ಷಣವನ್ನು ತುಂಬಲು ಶ್ರಮಿಸಿದರು


ಹರ್ಡೀಕರ್ ನೆನಪು
ಜಿ.ಪಳನಿಸ್ವಾಮಿ ಜಾಗೇರಿ
ತೆಂಗಿನ ಮರ ಬೆಳೆದಂತೆ ತನ್ನ ಗರಿಗಳನ್ನು ಬಿಚ್ಚಿಡುತ್ತಾ ಆ ಗರಿಯ ಗುರುತುಗಳನ್ನು ಉಳಿಸುತ್ತಲೇ ಹೋಗುತ್ತದೆ. ಹಾಗೆಯೇ ದೇಶ ಪ್ರಗತಿ ಹೊಂದುತ್ತಲೇ ಹಿರಿಯರ ಸಾಧನೆ, ತ್ಯಾಗ-ಬಲಿದಾನಗಳ ಕುರುಹುಗಳು ಕಾಣಸಿಗುತ್ತಲೇ ಹೋಗುತ್ತವೆ. ಸ್ವಾತಂತ್ರ್ಯ ಸೇನಾನಿ, ಭಾರತ ಸೇವಾದಳದ ಸ್ಥಾಪಕ ಡಾ.ನಾ.ಸು. ಹರ್ಡೀಕರ್ ಅವರ ಕೊಡುಗೆ ಎಂದೂ ಮರೆಯಲಾಗದ್ದು. ಸ್ವಾತಂತ್ರ್ಯ ಚಳುವಳಿಯ ವೇಳೆ ಮತ್ತು ಸ್ವಾತಂತ್ರ್ಯಾನಂತರ ಅವರ ಸಂಘಟನಾ ಚಾತುರ್ಯ ಸ್ಮರಣೀಯ. 1923ರಲ್ಲಿ ಹಿಂದೂ ಸ್ಥಾನಿ ಸೇವಾದಳವನ್ನು ಸ್ಥಾಪಿಸಿ ಅದರ ಕಾರ‍್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹರ್ಡೀಕರ್ ಅವರು 1931ರಲ್ಲಿ ಈ ಸಂಘಟನೆಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿ ಸ್ವಾತಂತ್ರ್ಯ ಚಳವಳಿಗೆ ಕಸುವು ತುಂಬಿದವರು. ಸ್ವಾತಂತ್ರ್ಯದ ನಂತರ 1950ರಲ್ಲಿ ಭಾರತ ಸೇವಾದಳ ಸಂಸ್ಥೆ ಯನ್ನು ಹುಟ್ಟು ಹಾಕಿ ಮಕ್ಕಳಲ್ಲಿ ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಮತ್ತು ನೈತಿಕ ಶಿಕ್ಷಣವನ್ನು ತುಂಬಲು ಶ್ರಮಿಸಿದರು.
ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರೀಯ ಗೀತೆ, ಯೋಗ, ವ್ಯಾಯಾಮ, ವಾಯತುಗಳನ್ನು ಸೇವಾದಳ ಶಿಕ್ಷಣದ ಭಾಗವಾಗಿ ಮಾಡಿಕೊಳ್ಳಲಾಗಿದೆ. ಸ್ವಾಮಿ ವಿವೇಕಾನಂದರ ಚಿಂತನೆಗಳು, ಮಹಾತ್ಮಗಾಂಧೀಜಿಯವರ ರಚನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ಇಂದಿಗೂ ಸೇವಾದಳ ಶ್ರಮಿಸುತ್ತಿದೆ.
ಹರ್ಡೀಕರ್ ಅವರ ಬಾಲ್ಯಜೀವನವೇ ನಮ್ಮ ಯುವಕರು ಮತ್ತು ಮಕ್ಕಳಿಗೆ ಸೂರ್ತಿದಾಯಕ ನೈತಿಕ ಶಿಕ್ಷಣವಾಗಿದೆ. ಅವರು ಧಾರವಾಡ ಜಿಲ್ಲೆಯ ತಿಳುವಳ್ಳಿ ಗ್ರಾಮದಲ್ಲಿ, ತಂದೆ ಸುಬ್ಬರಾವ್ -ತಾಯಿ ಯಮುನಾಬಾಯಿ ದಂಪತಿಗೆ ಏಳನೇ ಪುತ್ರನಾಗಿ 1889 ಮೇ 7ರಂದು ಜನಿಸಿದರು. ಹುಟ್ಟುತ್ತಲೇ ಪ್ಲೇಗ್ ಕಾಯಿಲೆಯಿಂದಾಗಿ ತಂದೆಯನ್ನು ಕಳೆದುಕೊಂಡರು.
ಇದನ್ನೂ ಓದಿ: Vishweshwar Bhat Column: ಹಣ ಗಳಿಸುವುದಷ್ಟೇ ಅಲ್ಲ, ಉಳಿಸುವುದೂ ಒಂದು ಕಲೆ !
ಕುಟುಂಬ ನಿರ್ವಹಣೆ ಕಷ್ಟವಾದಾಗ ತಮ್ಮ ಚಿಕ್ಕಮ್ಮ ದುಂಡುಬಾಯಿ ಅವರ ಆಶ್ರಯದಲ್ಲಿ ಶಿಕ್ಷಣ ಪಡೆದರು. ವಿದ್ಯಾರ್ಥಿ ದೆಸೆಯಿಂದಲೇ ಬಾಲಗಂಗಾಧರ ತಿಲಕ್ ಇವರ ಮರಾಠ ಮತ್ತು ಕೇಸರಿ ಪತ್ರಿಕೆಯಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳುವಳಿಯ ಕಿಚ್ಚನ್ನು ಮೈಗೂಡಿಸಿಕೊಂಡರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಶಾರೀರಿಕ, ಮಾನಸಿಕ, ಬೌದ್ಧಿಕ ಕಸರತ್ತು ಬಹುಮುಖ್ಯ ವೆಂದು ಭಾವಿಸಿ 1903ರಲ್ಲಿ ಆರ್ಯಬಾಲ ಸಂಘವನ್ನು ಸ್ಥಾಪಿಸಿದರು. ಆಗ ಅವರ ವಯಸ್ಸು ಕೇವಲ 14. ತಮ್ಮ ಸಹಪಾಠಿಗಳನ್ನು ಬೆಳಗ್ಗಿನ ಜಾವ ೪ ಗಂಟೆಗೆ ಕರೆದುಕೊಂಡು ಹೋಗಿ ಕುಲಕರ್ಣಿ ಎಂಬ ದೈಹಿಕ ಶಿಕ್ಷಕರ ಮೂಲಕ ಶಾರೀರಿಕ ಶಿಕ್ಷಣ ತರಬೇತಿ ಕೊಡಿಸುತಿದ್ದರು.
ಅವರಿಗೆ ಗೌರವ ಧನ ನೀಡಲು ಮುಷ್ಟಿ ಧಾನ್ಯವನ್ನು ಮನೆ ಮನೆಯಿಂದ ಸಂಗ್ರಹಿಸುತ್ತಿದ್ದರು. ಗ್ರಂಥಾಲಯ ಸ್ಥಾಪಿಸಿ ಸಹಪಾಠಿಗಳಲ್ಲಿ ಓದುವ ಹವ್ಯಾಸ ಬೆಳೆಸಿದರು, ಸ್ವಾತಂತ್ರ್ಯ ಚಳುವಳಿಗಾರರ ಕರಪತ್ರವನ್ನು, ಬೈಸಿಕಲ್ ನಲ್ಲಿ ಸೋಪ್ ಡಬ್ಬಿ ಮಾರುವ ನೆಪದಲ್ಲಿ ಹಂಚುತ್ತಿದ್ದರು, ಸ್ವದೇಶಿ ವಸ್ತು ಗಳನ್ನೇ ಉಪಯೋಗಿಸಿ ಎಂಬ ಸ್ವಾತಂತ್ರ್ಯ ಹೋರಾಟಗಾರರ ಕರೆಗೆ ಓಗೊಟ್ಟು ಶಾಲೆಯಲ್ಲಿ ಅಳವಡಿಸಿರುವ ವಿದೇಶಿ ತಯಾರಿಕೆಯ ಗಾಜು ಕಿಟಕಿಗಳನ್ನು ಒಡೆದು ಹಾಕಿ ಬ್ರಿಟೀಷರ ಕೆಂಗಣ್ಣಿಗೆ ಗುರಿಯಾದರು!
ಸರ್ಕಸ್ ನಲ್ಲಿ ಸೇರಿಕೊಂಡು ಪ್ರಚಾರ ನಡೆಸಿದರು. 16 ವರ್ಷ ತುಂಬುತ್ತಲೇ ತಾಯಿಯು ಸಹ ಪ್ಲೇಗ್ ಕಾಯಿಲೆಗೆ ತುತ್ತಾಗಿ ತೀರಿಕೊಂಡರು. ಆದರೆ ಚಿಕ್ಕಮ್ಮನ ಆಸರೆಯಲ್ಲಿ ಶಿಕ್ಷಣ ಮುಂದುವರಿಸಿದ ಹರ್ಡೀಕರ್, ವೈದ್ಯನಾಗಿ ಜನರ ಸೇವೆ ಮಾಡಬೇಕೆಂದು ನಿರ್ಧರಿಸಿ ಬ್ರಿಟಿಷರ ಕಣ್ಣುತಪ್ಪಿಸಿ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಇಂದಿನ ಎಂಬಿಎಸ್‌ಗೆ ಸಮಾನವಾದ ಎಂಸಿಪಿಎಸ್ ಪದವಿ ಪಡೆದರು.
ವಿದೇಶದಲ್ಲಿ ಖರ್ಚಿಗಾಗಿ ಹಣವಿಲ್ಲದೆ, ರಜೆಯಲ್ಲಿ ಚರ್ಚುಗಳಿಗೆ ಬಣ್ಣ ಹಚ್ಚಲು ಮತ್ತು ಹೋಟಲ್ ಗಳ ಕೆಲಸಕ್ಕೆ ಸೇರಿಕೊಂಡರು. ಡಾ.ನಾರಾಯಣ ಸುಬ್ಬರಾವ್ ಹರ್ಡೀಕರ್ ಎಂಬ ನಾಮಧೇಯ ದೊಂದಿಗೆ ಹಿಂದೂಸ್ತಾನ್ ಅಸೋಷಿಯೇಷಸ್ ಆ- ಅಮೆರಿಕ ಎಂಬ ಸಂಘವನ್ನು ಅಮೆರಿಕ ದಲ್ಲಿಯೇ ಸ್ಥಾಪಿಸಿದರು. ಅವರು ಹಿಂದೂಸ್ತಾನ್ ಅಸೋಸಿಯೇಷನ್ ಆಫ್ ಅಮೆರಿಕದ ಅಧ್ಯಕ್ಷರೂ ಆಗಿದ್ದರು.
ಅವರ ಕರಪತ್ರ ಇಂಡಿಯಾ - ಎ ಗ್ರೇವ್ ಯಾರ್ಡ್ ಅಂದು ವಿಶ್ವದ ಹಲವಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿತ್ತು.ಯಂಗ್ ಇಂಡಿಯಾ ಜರ್ನಲ್‌ನ ವ್ಯವಸ್ಥಾಪಕ ಸಂಪಾದಕರಾಗಿಯೂ ಅವರು ಕಾರ‍್ಯ ನಿರ್ವಹಿಸಿದ್ದರು.
ಲಾಲಾಲಜಪತರಾಯರ ಕೋರಿಕೆಯ ಮೆರೆಗೆ 1921ರಲ್ಲಿ ಭಾರತಕ್ಕೆ ಮರಳಿ ಸ್ವಾತಂತ್ರ್ಯ ಚಳುವಳಿ ಯಲ್ಲಿ ಪಾಲ್ಗೊಂಡರು. ಬಳಿಕ ಗಾಂಧೀಜಿಯವರ ಸಂಪರ್ಕ ಹೊಂದಿ ಅವರ ಅನುಯಾಯಿ ಯಾದರು. 1923ರ ಧ್ವಜ ಸತ್ಯಾಗ್ರಹ ಚಳುವಳಿಯ ವೈಫಲ್ಯ ಅರಿತು, ಜವಹಾರ್ ಲಾಲ್ ನೆಹರು ಅಧ್ಯಕ್ಷತೆಯ ಕಾಕಿನಾಡದ ಕಾಂಗ್ರೆಸ್ ಅಽವೇಶನದಲ್ಲಿ ಹಿಂದೂಸ್ಥಾನಿ ಸೇವಾದಳವನ್ನು ಸ್ಥಾಪಿಸಿದರು.
ಭಾರತದ ತುಂಬೆ ಗಾಂಧಿ ಟೋಪಿಗಳ ಸೈನ್ಯ ಕಟ್ಟಿ ಬ್ರಿಟಿಷರ ಎದೆ ನಡುಗಿಸಿದರು. ಇವರ ಪ್ರಾಬಲ್ಯ ಹೆಚ್ಚಿದಂತೆ ಕಾಂಗ್ರೆಸ್ ದುರ್ಬಲವಾಗತೊಡಗಿದಾಗ, ಗಾಂಽಜಿ ಕಾಂಗ್ರೆಸ್ ಜೊತೆಗೆ ಸಂಘಟನೆಯನ್ನು ವಿಲೀನಗೊಳಿಸಿದರು. ಗಾಂಧೀಜಿಯ ಸತ್ಯಾಗ್ರಹ ಚಳುವಳಿಗೆ ಸೇವಾದಳವೇ ಬೆನ್ನೆಲುಬಾಗಿ ನಿಂತಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಮಾಸಿಕ ಜರ್ನಲ್ ವಾಲಂಟಿಯರ್ ಅನ್ನು ಪ್ರಕಟಿಸಿದ್ದರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಸತ್ಯಾಗ್ರಹಿಗಳಾಗಿ, ಸೇನಾನಿಗಳಾಗಿ, ಸಂಘಟಕರಾಗಿ ದುಡಿದ ಇವರಿಗೆ ಭಾರತ ಸರಕಾರ 1958 ರಲ್ಲಿ ಪದ್ಮಭೂಷಣ ನೀಡಿ ಗೌರವಿಸಿತು. ಸ್ವಾತಂತ್ರ್ಯಾನಂತರ ಡಾ. ಹರ್ಡಿಕರ್ ಅವರು ಘಟಪ್ರಭಾದಲ್ಲಿ ಕರ್ನಾಟಕ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲು ಸಹಾಯ ಮಾಡಿದರು. 1952ರಿಂದ 1962 ರವರೆಗೆ ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಕ್ರಿಯಾಶೀಲ ಬದುಕನ್ನು ಹರ್ಡೀಕರ್ 1975ರ ಆಗಷ್ಟ್ 26ರಂದು ಕರ್ನಾಟಕ ಆರೋಗ್ಯಧಾಮದಲ್ಲಿ ನಿಧನರಾದರು.
ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ ಅಂಚೆ ಇಲಾಖೆ 1989ರಲ್ಲಿ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ. ಈ ಮಹಾನ್ ಚೇತನನಿಗೆ ಇಂದಿಗೆ 134ನೇ ಹುಟ್ಟುದಿನ. ಅವರ ಸೇವಾದಳ ಸಂಸ್ಥೆಯನ್ನು ಇನ್ನಷ್ಟು ಬೆಳಸುವ ಅವಶ್ಯಕತೆಯನ್ನು ಅರಿತು ಸರ್ಕಾರ ಗೌರವಿಸ ಬೇಕಿದೆ.