ವೀಕೆಂಡ್ ವಿತ್ ಮೋಹನ್
camohanbn@gmail.com
ಬ್ರಿಟಿಷರ ವಿರುದ್ಧದ ಭಾರತೀಯರ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದ ಹೆಡ್ಗೆವಾರ್, ತಮ್ಮ ವಲಯದಲ್ಲಿ ಬ್ರಿಟಿಷರ ವಿರುದ್ಧ ಯುವಕ ರನ್ನು ಒಂದುಗೂಡಿಸುವುದರಲ್ಲಿ ಯಶಸ್ವಿಯಾಗಿದ್ದರು. 1920ರವರೆಗೆ ಬ್ರಿಟಿಷರ ಆಡಳಿತದ ಕೆಳಗೆ ‘ಸ್ವಯಂ ನಿಯಮ’ ಬೇಕೆಂದು ಮಾತ್ರ ಆಗ್ರಹಿಸು ತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ, ಬ್ರಿಟಿಷರಿಂದ ‘ಸಂಪೂರ್ಣ ಸ್ವಾತಂತ್ರ್ಯ’ ಬೇಕೆಂದು ಮೊಟ್ಟ ಮೊದಲ ಬಾರಿಗೆ ಹೇಳಿದ್ದೇ ಹೆಡ್ಗೆವಾರ್ ಅವರು.
ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ (ಆರೆಸ್ಸೆಸ್) ‘ಡಾಕ್ಟರ್ ಜಿ’ ಎಂದೇ ಕರೆಯಲ್ಪಡುತ್ತಿದ್ದವರು. ಎಂಟನೇ ವಯಸ್ಸಿನಲ್ಲಿದ್ದಾಗ, ತಮ್ಮ ಶಾಲೆಯಲ್ಲಿ ಇಂಗ್ಲೆಂಡಿನ ರಾಣಿಯ ಹುಟ್ಟುಹಬ್ಬವನ್ನು ಆಚರಿಸಿ ನೀಡಿದ ಸಿಹಿತಿನಿಸನ್ನು ಮನೆಗೆ ತಂದು ಕಸದ ಬುಟ್ಟಿಗೆ ಎಸೆದು, “ಬ್ರಿಟಿಷರ ರಾಣಿಯ ಹುಟ್ಟುಹಬ್ಬವನ್ನು ನಾವೇಕೆ ಆಚರಿಸಬೇಕು?" ಎಂದು ಕೇಳಿದ್ದವರು.
ರೈಸಲೇ ಸರ್ಕ್ಯುಲರ್ ‘ವಂದೇ ಮಾತರಂ’ ಘೋಷಣೆಯನ್ನು ನಿಷೇಧಿಸಿತ್ತು. ಹತ್ತನೆಯ ತರಗತಿಯಲ್ಲಿ ಓದುತ್ತಿದ ಹೆಡ್ಗೆವಾರ್ ಶಾಲೆಯಲ್ಲಿ ತಮ್ಮ ಸಹಪಾಠಿಗಳೊಡನೆ ಸೇರಿಕೊಂಡು, ಬ್ರಿಟಿಷರ ನಿಷೇಧಕ್ಕೆ ತಲೆ ಕೆಡಿಸಿಕೊಳ್ಳದೆ ‘ವಂದೇ ಮಾತರಂ’ ಘೋಷಣೆಯನ್ನು ಕೂಗುತ್ತಿದ್ದರು. ತಿಂಗಳುಗಳ ಕಾಲ ಬ್ರಿಟಿಷರ ವಿರುದ್ಧ ತಮ್ಮ ಶಾಲೆಯಲ್ಲಿ ಹೀಗೆ ಘೋಷಣೆಗಳನ್ನು ಕೂಗಿದ್ದರ ಪರಿಣಾಮ, ಶಾಲೆಯು ಅವರನ್ನು ಅಮಾನತುಗೊಳಿಸಿಸುವ ಆದೇಶ ಹೊರಡಿಸಿತ್ತು.
ನಂತರ ಕೋಲ್ಕತ್ತಾದ ಮೆಡಿಕಲ್ ಕಾಲೇಜಿಗೆ ಸೇರಿದ ಹೆಡ್ಗೆವಾರ್, ಮತ್ತಷ್ಟು ಹೋರಾಟದ ವಿಷಯ ಗಳನ್ನು ಅಧ್ಯಯನ ಮಾಡಿದರು. ದೇಶದ ವಿವಿಧ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳ ಬಳಿ ಆಯಾ ರಾಜ್ಯಗಳಲ್ಲಿ ಬ್ರಿಟಿಷರ ವಿರುದ್ಧ ನಡೆಯುತ್ತಿರುವ ಹೋರಾಟಗಳ ಬಗ್ಗೆ ಚರ್ಚಿಸಿ, ಹೇಗೆ ತಾವೂ ಸ್ನೇಹಿತರ ಜತೆಗೂಡಿ ಬ್ರಿಟಿಷರ ವಿರುದ್ಧ ಹೋರಾಟವನ್ನು ರೂಪಿಸಬಹುದೆಂಬ ಉದ್ದೇಶ ಅವರದ್ದಾಗಿತ್ತು.
ಇದನ್ನೂ ಓದಿ: Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ
ಹೋರಾಟದ ನಡುವೆಯೂ ಹೆಡ್ಗೆವಾರ್ ತಮ್ಮ ಮೆಡಿಕಲ್ ವಿದ್ಯಾಭ್ಯಾಸವನ್ನು ಮುಂದು ವರಿಸಿದ್ದರು. ತಮ್ಮ ವೈದ್ಯಕೀಯ ಅಧ್ಯಯನ ಮುಗಿಸಿದ ಕೆಲ ವರ್ಷಗಳ ನಂತರ ಬ್ರಿಟಿಷರು, ಕೋಲ್ಕತ್ತಾದ ಮೆಡಿಕಲ್ ಕಾಲೇಜಿನಿಂದ ಹೊರಬಂದಂಥ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿ ಯನ್ನು ನಡೆಸಬಹುದು, ಆದರೆ ‘ಅನಾರೋಗ್ಯ ಪ್ರಮಾಣಪತ್ರ’ ನೀಡುವ ಹಕ್ಕನ್ನು ಹೊಂದಿಲ್ಲವೆಂಬ ನಿಯಮವನ್ನು ತಂದುಬಿಟ್ಟರು.
ಬ್ರಿಟಿಷರ ಈ ನಿಯಮದ ವಿರುದ್ಧ ಹೋರಾಟ ಮಾಡಲು ನಿರ್ಧರಿಸಿದ್ದ ಹೆಡ್ಗೆವಾರ್, ಅಂದಿನ ಕಾಲದ ದೊಡ್ಡ ದೊಡ್ಡ ದಿನಪತ್ರಿಕೆಗಳಲ್ಲಿ ಬ್ರಿಟಿಷರ ಈ ನಿಯಮದ ವಿರುದ್ಧ ವೈದ್ಯರು ಹೋರಾಟ ಮಾಡುತ್ತಿದ್ದಾರೆಂಬ ವಿಷಯಗಳನ್ನು ಪ್ರಕಟಿಸಿ ಬ್ರಿಟಿಷರ ಮೇಲೆ ಒತ್ತಡ ಹೇರಿದ್ದರು. ಅವರ ಒತ್ತಡಕ್ಕೆ ಮಣಿದ ಬ್ರಿಟಿಷ್ ಸರಕಾರ ತಕ್ಷಣ ತಾನು ಮಾಡಿದ್ದ ನಿಯಮವನ್ನು ವಾಪಾಸ್ ಪಡೆದು ಕೋಲ್ಕತ್ತಾದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ‘ಅನಾರೋಗ್ಯ ಪ್ರಮಾಣಪತ್ರ’ ನೀಡಬಹು ದೆಂದು ಹೇಳಿತು.
ಬ್ರಿಟಿಷರ ವಿರುದ್ಧದ ಭಾರತೀಯರ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದ ಹೆಡ್ಗೆವಾರ್, ತಮ್ಮ ವಲಯದಲ್ಲಿ ಬ್ರಿಟಿಷರ ವಿರುದ್ಧ ಯುವಕ ರನ್ನು ಒಂದುಗೂಡಿಸುವುದರಲ್ಲಿ ಯಶಸ್ವಿಯಾಗಿದ್ದರು. 1920ರವರೆಗೆ ಬ್ರಿಟಿಷರ ಆಡಳಿತದ ಕೆಳಗೆ ‘ಸ್ವಯಂ ನಿಯಮ’ ಬೇಕೆಂದು ಮಾತ್ರ ಆಗ್ರಹಿಸುತ್ತಿದ ಕಾಂಗ್ರೆಸ್ ಪಕ್ಷಕ್ಕೆ, ಬ್ರಿಟಿಷರಿಂದ ‘ಸಂಪೂರ್ಣ ಸ್ವಾತಂತ್ರ್ಯ’ ಬೇಕೆಂದು ಮೊಟ್ಟ ಮೊದಲ ಬಾರಿಗೆ ಹೇಳಿದ್ದೇ ಹೆಡ್ಗೆವಾರ್ ಅವರು. ಅವರ ಮಾತನ್ನು ಅಂದು ಗಂಭೀರವಾಗಿ ತೆಗೆದುಕೊಳ್ಳದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು 1929ರಲ್ಲಿ ಹೆಡ್ಗೆವಾರ್ ಹೇಳಿದ ಮಾತನ್ನೇ ಲಾಹೋರ್ ಸಮ್ಮೇಳನದಲ್ಲಿ ತಮ್ಮ ಉದ್ದೇಶವನ್ನಾಗಿ ಘೋಷಿಸಿದರು.

ಒಂಬತ್ತು ವರ್ಷಗಳ ಹಿಂದೆಯೇ, ಬ್ರಿಟಿಷರನ್ನು ಸಂಪೂರ್ಣವಾಗಿ ಓಡಿಸಬೇಕೆಂಬ ಸ್ಪಷ್ಟ ಉದ್ದೇಶ ವನ್ನು ಹೆಡ್ಗೆವಾರ್ ಹೊಂದಿದ್ದರು. ಅಂದಿನ ಕಾಲದಲ್ಲಿಯೇ ಒಂಬತ್ತು ವರ್ಷ ಮುಂದಿದ್ದ ಹೆಡ್ಗೆವಾರ್ ಅವರ ಮಾತುಗಳನ್ನು ಕೇಳಿದ್ದಿದ್ದರೆ ಬಹುಶಃ ನಮಗೆ ಸ್ವಾತಂತ್ರ್ಯವು ಒಂಬತ್ತು ವರ್ಷ ಮುಂಚೆಯೇ ಸಿಗುತ್ತಿತ್ತು.
1920ರಲ್ಲಿ ಖಿಲಾಫತ್ ಚಳವಳಿಯನ್ನು ಹೆಡ್ಗೆವಾರ್ ಅವರು ವಿರೋಧಿಸದಿದ್ದರೂ, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಹಾತ್ಮ ಗಾಂಧಿಯವರಿಗೆ ನೆರವಾಗುವುದನ್ನು ಬಿಡಲಿಲ್ಲ. ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದರು. ಈ ಚಳವಳಿಯಲ್ಲಿ ಹೆಡ್ಗೆವಾರ್ ಅವರು ಅತ್ಯುತ್ಸಾಹದಿಂದ ಗಾಂಧಿಯವರ ಪರವಾಗಿ ನಿಂತರು.
ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಭಾಷಣಗಳನ್ನು ಮಾಡುವ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ್ದರು. ಬ್ರಿಟಿಷ್ ಸರಕಾರ ಮೂರು ಬಾರಿ ನೋಟಿಸ್ ನೀಡಿದರೂ ತಲೆ ಕೆಡಿಸಿಕೊಳ್ಳದೆ, ಬ್ರಿಟಿಷರ ವಿರುದ್ಧದ ತಮ್ಮ ಭಾಷಣಗಳನ್ನು ಹೆಡ್ಗೆವಾರ್ ಮಾಡುತ್ತಲೇ ಇದ್ದರು. ಬ್ರಿಟಿಷ್ ಕೋರ್ಟ್ ಹೆಡ್ಗೆವಾರ್ ಅವರಿಗೆ, ‘ಇಂಥ ಭಾಷಣಗಳನ್ನು ಮಾಡಬಾರದು, ಜಾಮೀನಿನ ಹಣವಾಗಿ 1000 ರುಪಾಯಿಯನ್ನು ಕಟ್ಟಬೇಕು’ ಎಂದು ಆದೇಶ ಹೊರಡಿಸಿತ್ತು.
ಬ್ರಿಟಿಷ್ ಕೋರ್ಟಿನ ಈ ಆದೇಶಕ್ಕೂ ಕ್ಯಾರೆ ಅನ್ನದ ಹೆಡ್ಗೆವಾರ್ ತಮ್ಮ ಭಾಷಣಗಳನ್ನು ಮಾಡು ತ್ತಿದ್ದರು. ಹೆಡ್ಗೆವಾರ್ ಅವರನ್ನು ಬ್ರಿಟಿಷರು ಅಷ್ಟಕ್ಕೇ ಬಿಡಲಿಲ್ಲ, ಅವರನ್ನು ಬಂಧಿಸಿ ಒಂದು ವರ್ಷ ಕಾಲ ಜೈಲಿನಲ್ಲಿರಿಸಿದ್ದರು. ‘ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್‌ನವರು ಜೈಲಿಗೆ ಹೋಗಲಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನಲ್ಲಿ ಸುಳ್ಳು ಹೇಳಿದ್ದನ್ನು ಕೇಳಿ, ಹೆಡ್ಗೆವಾರ್ ಅವರನ್ನು ಬ್ರಿಟಿಷರು ಜೈಲಿಗೆ ಕಳುಹಿಸಿದ ಈ ವಿಷಯ ನೆನಪಾಯಿತು.
ಜೈಲಿಗೆ ಹೋಗುವುದರಿಂದ ಮಾತ್ರ ನಮಗೆ ಸ್ವಾತಂತ್ರ್ಯ ಬರುವುದಿಲ್ಲವೆಂಬ ವಿಷಯ ಹೆಡ್ಗೆವಾರ್ ಅವರಿಗೆ ಚೆನ್ನಾಗಿ ಗೊತ್ತಿತ್ತು. “ಜೈಲಿಗೆ ಹೋಗುವುದೊಂದೇ ಸ್ವಾತಂತ್ರ್ಯ ಹೋರಾಟದ ಭಾಗವಲ್ಲ. ದೇಶಕ್ಕಾಗಿ ಸೇವೆ ಸಲ್ಲಿಸಲು ಜೈಲಿನಿಂದ ಹೊರಗಡೆ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ" ಎಂದು ತಮ್ಮನ್ನು ನೋಡಲು ಜೈಲಿಗೆ ಬರುವವರಿಗೆ ಹೆಡ್ಗೆವಾರ್ ಅವರು ಹೇಳುತ್ತಿದ್ದರು.
ಜೈಲಿನಿಂದ ಬಿಡುಗಡೆಯಾದ ನಂತರ ಹೆಡ್ಗೆವಾರ್ ತಮ್ಮ ಛಲವನ್ನು ಬಿಡಲಿಲ್ಲ, ಹಿಂದಿಗಿಂತಲೂ ಹೆಚ್ಚಿನ ಉತ್ಸಾಹದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರು. 18-03-1922ರಲ್ಲಿ ಮಹಾತ್ಮ ಗಾಂಧಿಯವರಿಗೆ ಆರು ವರ್ಷಗಳ ಸೆರೆವಾಸವಾದಾಗ ಹೆಡ್ಗೆವಾರ್ ಅವರು ಪ್ರತಿ ತಿಂಗಳ 18ನೆಯ ದಿನದಂದು ‘ಗಾಂಧಿ ದಿನ’ವೆಂದು ಆಚರಿಸುತ್ತಿದ್ದರು.
ಖಿಲಾಫತ್ ಚಳವಳಿಯ ವೈಫಲ್ಯ ಹಾಗೂ ಮೋಪ್ಲಾ ಹತ್ಯಾಕಾಂಡದ ಪರಿಣಾಮ, 1924ರ ಹೊತ್ತಿಗೆ ಭಾರತದಲ್ಲಿ ಕೋಮುಗಲಭೆಗಳು ಹೆಚ್ಚಾಗಿದ್ದವು. ಸುಮ್ಮ ಸುಮ್ಮನೆ ಹಿಂದೂ-ಮುಸ್ಲಿಂ ಗಲಭೆ ಗಳಾಗುತ್ತಿದ್ದವು, ಸಾವಿರಾರು ಹಿಂದೂಗಳ ಹತ್ಯೆಯಾಯಿತು. ಮುಸಲ್ಮಾನರಲ್ಲಿದ್ದಂಥ ಒಗ್ಗಟ್ಟು ಹಿಂದೂಗಳಲ್ಲಿರಲಿಲ್ಲ. ಸ್ವತಃ ನೆಹರು ತಮ್ಮ ಪುಸ್ತಕವೊಂದರಲ್ಲಿ ‘ಹಿಂದೂಗಳು ಕಚೇರಿಗಳಲ್ಲಿ ಕೆಲಸ ಮಾಡುವುದರಲ್ಲಿ ಮಾತ್ರ ನಿರತರಾಗಿರುತ್ತಾರೆ’ ಎಂದು ಹೇಳಿದ್ದಾರೆ.
ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದ ಪರಿಣಾಮ ಬ್ರಿಟಿಷರು ಇಷ್ಟು ವರ್ಷಗಳ ಕಾಲ ನಮ್ಮನ್ನು ಆಳಲು ಸಾಧ್ಯವಾಗಿದೆಯೆಂಬ ವಿಷಯ ಹೆಡ್ಗೆವಾರ್ ಅವರ ಮನಸ್ಸಿನಲ್ಲಿ ಯಾವಾಗಲೂ ಕೊರೆಯುತ್ತಿತ್ತು. ಹಿಂದೂಗಳಲ್ಲಿನ ಒಗ್ಗಟ್ಟನ್ನು ಒಂದು ಸಂಘಟನೆಯ ಮೂಲಕ ಮಾಡಿಸಿದರೆ ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯಗಳಿಸುವುದು ಸುಲಭವೆಂದು ಹೆಡ್ಗೆವಾರ್ ಯೋಚಿಸಿದ್ದರು.
ಸ್ವಾತಂತ್ರ್ಯಾ ನಂತರದಲ್ಲಿ ಸುದೀರ್ಘವಾದ ಅಭಿವೃದ್ಧಿ ಹೊಂದಿದ ದೇಶವನ್ನು ಕಟ್ಟಲು ಹಿಂದೂ ಗಳ ಒಗ್ಗೂಡುವಿಗೆ ಅತಿ ಮುಖ್ಯವೆಂಬುದು ಹೆಡ್ಗೆವಾರ್ ಅವರಿಗೆ ತಿಳಿದಿತ್ತು. ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತಂದು 1925ರ ‘ವಿಜಯದಶಮಿ’ಯಂದು ಅವರು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ವನ್ನು ಸ್ಥಾಪಿಸಿದರು.
ಸಂಘವನ್ನು ಸ್ಥಾಪಿಸಿದ ನಂತರವೂ ಹೆಡ್ಗೆವಾರ್ ಅವರು ತಮ್ಮ ಸ್ವಾತಂತ್ರ್ಯ ಹೋರಾಟವನ್ನು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿಯೇ ಮಾಡಲು ನಿರ್ಧರಿಸಿದ್ದರು. ಹಿಂದೂ ಯುವಕರನ್ನು ಒಗ್ಗೂಡಿಸುವ ಕೆಲಸ ಒಂದೆಡೆ ನಡೆಯುತ್ತಿದ್ದರೆ, ಬ್ರಿಟಿಷರ ವಿರುದ್ಧ ಹೋರಾಡಲು ಮಾಡಬೇಕಾದ ಕೆಲಸಗಳನ್ನು ಹೆಡ್ಗೆವಾರ್ ಅವರು ಚಾಚೂ ತಪ್ಪದೆ ಮಾಡುತ್ತಿದ್ದರು.
ನೋಡನೋಡುತ್ತಲೇ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಪ್ರಾಧ್ಯಾಪಕರು, ವೈದ್ಯರು, ವಕೀಲರು, ವ್ಯಾಪಾರಸ್ಥರು, ದೊಡ್ಡ ದೊಡ್ಡ ವಿದ್ವಾಂಸರು ಸೇರಿಕೊಂಡರು. ಯಾರೂ ಊಹಿಸದ ರೀತಿಯಲ್ಲಿ ಸಂಘ ಬೆಳೆಯತೊಡಗಿತು. ಹೆಡ್ಗೆವಾರ್ ಅವರು 1930ರಲ್ಲಿ ಸರಸಂಘಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬ್ರಿಟಿಷರ ವಿರುದ್ಧದ ‘ಜಂಗಲ್ ಸತ್ಯಾಗ್ರಹ’ಕ್ಕೆ ಧುಮುಕಿದರು.
ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿಯೇ ಹೋರಾಟ ನಡೆಯುತ್ತಿದ್ದುದರಿಂದ ತಾವೂ ಅವರೊಟ್ಟಿಗೆ ಹೋರಾಡಬೇಕೆಂದು ಹೆಡ್ಗೆವಾರ್ ನಿರ್ಧರಿಸಿದ್ದರು. ಸಂಘದ ಸ್ವಯಂಸೇವಕರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೆ ಹೋಗಲು ತಯಾರಿದ್ದೇವೆಂದು ಹೇಳಿದಾಗ, 1920ರಲ್ಲಿ ಹೇಳಿದ ಮಾತುಗಳನ್ನೇ ಪುನಃ ಹೇಳಿದರು. ಅಂದರೆ, “ಕೇವಲ ಜೈಲಿಗೆ ಹೋಗುವುದರಿಂದ ನಮಗೆ ಸ್ವತಂತ್ರ್ಯ ಸಿಗುವುದಿಲ್ಲ, ಜೈಲಿನ ಒಳಗೆ ಹಾಗೂ ಹೊರಗೆ ಎರಡೂ ಕಡೆ ಬ್ರಿಟಿಷರನ್ನು ಓಡಿಸುವ ಕಾರ್ಯದಲ್ಲಿ ನೀವೆಲ್ಲರೂ ಪಾಲ್ಗೊಳ್ಳಬೇಕು" ಎಂದು ಹೇಳಿದ್ದರು.
ನೂರಾರು ಸ್ವಯಂಸೇವಕರ ಜತೆಗೆ ಹೆಡ್ಗೆವಾರ್ ಅವರು ಒಂಬತ್ತು ತಿಂಗಳುಗಳ ಜೈಲುವಾಸವನ್ನು ಜಂಗಲ್ ಸತ್ಯಾಗ್ರಹದಲ್ಲಿ ಅನುಭವಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಹೆಡ್ಗೆವಾರ್, ಕಾಶಿ ವಿಶ್ವನಾಥನ ಸನ್ನಿಧಿಗೆ ಭೇಟಿ ನೀಡಿದ್ದರು. ವಿಶ್ವನಾಥನ ಮಂದಿರದ ಪಕ್ಕದಲ್ಲಿದ್ದ ಮಸೀದಿಯನ್ನು ನೋಡಿದ ಹೆಡ್ಗೆವಾರ್, ಹಿಂದೂಗಳ ಮೇಲಿನ ಸತತ ಆಕ್ರಮಣಗಳನ್ನು ನೆನೆದಿದ್ದರು. ಜಂಗಲ್ ಸತ್ಯಾಗ್ರಹದ ಸೆರೆಮನೆವಾಸದ ನಂತರ ಹೆಡ್ಗೆವಾರ್ ಅವರು ‘ಉಪ್ಪಿನ ಸತ್ಯಾಗ್ರಹ’ದಲ್ಲಿಯೂ ಪಾಲ್ಗೊಂಡಿದ್ದರು.
ನಿಧಾನವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಲ್ಲೂ ಹಬ್ಬಲು ಶುರುವಾಯಿತು. 1932ರ ಹೊತ್ತಿಗೆ, ಬ್ರಿಟಿಷರಿಗೆ ಸಂಘವು ಅಪಾಯಕಾರಿಯಾಗಿ ಕಂಡಿತು. 1932ರಲ್ಲಿ ಬ್ರಿಟಿಷರು ಒಂದು ಸುತ್ತೋಲೆಯನ್ನು ಹೊರಡಿಸಿದರು. ಅದರನ್ವಯ ಸರಕಾರಿ ನೌಕರರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಿರಲಿಲ್ಲ.
ಹೆಡ್ಗೆವಾರ್ ಸುಮ್ಮನೆ ಕೂರಲಿಲ್ಲ. ಮಧ್ಯ ಪ್ರಾಂತ್ಯದ ಗೃಹ ಸಚಿವರನ್ನು ಕರೆಸಿ, ಕಾರ್ಯಕ್ರಮ ವೊಂದರಲ್ಲಿ ಸಂಘವು ಯಾವುದಾದರೊಂದು ರಾಜಕೀಯ ಚಳವಳಿಯನ್ನು ಮಾಡಿರುವ ಉದಾ ಹರಣೆಯನ್ನು ನೀಡುವಂತೆ ಹೇಳಿದರು. ಸರಕಾರದ ಬಳಿ ಉತ್ತರವಿರಲಿಲ್ಲ. ಬಳಿಕ ಬ್ರಿಟಿಷರು ಹೊರಡಿಸಿದ ಸುತ್ತೋಲೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಸಂಘವು ತನ್ನ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಲೇ ಇತ್ತು. ಇದರಿಂದ ಬೇಸತ್ತ ಬ್ರಿಟಿಷ್ ಸರಕಾರ ಮತ್ತೊಮ್ಮೆ 1933ರಲ್ಲಿ ‘ಸರಕಾರಿ ಶಾಲೆಯ ಅಧ್ಯಾಪಕರೂ ಸಂಘದ ಕೆಲಸದಲ್ಲಿ ತೊಡಗಿಸಿ ಕೊಳ್ಳಬಾರದು’ ಎಂಬ ಸುತ್ತೋಲೆಯನ್ನು ಹೊರಡಿಸಿತು. ತಾವು ಏನೇ ಮಾಡಿದರೂ ಸಂಘದ ಸ್ವಯಂಸೇವಕರು ಸ್ವಾತಂತ್ರ್ಯದ ಪರವಾಗಿ ಕೆಲಸ ಮಾಡುವುದನ್ನು ಬಿಡುವುದಿಲ್ಲವೆಂಬ ವಿಷಯ ಬ್ರಿಟಿಷರಿಗೆ ತಿಳಿಯಿತು.
1937ರಲ್ಲಿ ವೀರ ಸಾವರ್ಕರ್ ಗೃಹ ಬಂಧನದಿಂದ ಮುಕ್ತರಾದಾಗ ದೇಶದೆಡೆ ಪ್ರಯಾಣ ಮಾಡು ತ್ತಿದ್ದರು. ಆ ಸಮಯದಲ್ಲಿ ಅವರು ನಾಗಪುರಕ್ಕೆ ಬಂದಾಗ ಹೆಡ್ಗೆವಾರ್ ಅವರ ಜತೆಗೂಡಿದರು. ನಾಗಪುರದ ಅಕ್ಕಪಕ್ಕದ ಭಾಗಗಳಲ್ಲಿ ಸಾವರ್ಕರ್‌ರ ಜತೆಗಿದ್ದ ಹೆಡ್ಗೆವಾರ್, ತಮ್ಮ ಸಾವಿರಾರು ಸ್ವಯಂಸೇವಕರ ಜತೆಗೆ ಹಲವು ಕಾರ್ಯಕ್ರಮಗಳನ್ನು ಮಾಡಿಸಿದ್ದರು.
ಸಾವರ್ಕರ್ ಅವರಿಗೆ ಬೇಕಿದ್ದ ಬೆಂಬಲವನ್ನು ಹೆಡ್ಗೆವಾರ್ ತಮ್ಮ ಸ್ವಯಂಸೇವಕರ ಮೂಲಕ ನೀಡುತ್ತಿದ್ದರು. ಸಾವರ್ಕರ್‌ರ ಜತೆಗೆ ಕಳೆದ ಸಮಯವನ್ನು ಹೆಡ್ಗೆವಾರ್ ಅವರು ತಮ್ಮ ಜೀವನದ ಅಮೂಲ್ಯ ಕ್ಷಣಗಳೆಂದು ಹೇಳಿಕೊಂಡಿದ್ದಾರೆ.
‘ಆರೆಸ್ಸೆಸ್‌ನವರು ಸ್ವಾತಂತ್ರ್ಯಕ್ಕಾಗಿ ಏನು ಮಾಡಿದ್ದಾರೆ?’ ಎಂದು ಪದೇಪದೆ ಕೇಳುವ ಕಾಂಗ್ರೆಸ್ ಮತ್ತು ಎಡಚರ ಪಟಾಲಂ, ಇತಿಹಾಸವನ್ನು ಒಮ್ಮೆ ಸರಿಯಾಗಿ ತಿಳಿದುಕೊಳ್ಳಬೇಕು. ಎಡಚರು ಬರೆದಿರುವ ಇತಿಹಾಸದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಅನೇಕ ಹೋರಾಟಗಾರರ ಹೆಸರನ್ನು ಬೇಕಂತಲೇ ಕೈಬಿಡಲಾಯಿತು ಮತ್ತು ಮಕ್ಕಳ ಶಾಲಾ ಪಠ್ಯದಲ್ಲಿ ಅನೇಕ ಸತ್ಯಗಳನ್ನು ಮರೆ ಮಾಚಲಾಯಿತು.
ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾದ ಡಾ.ಹೆಡ್ಗೆವಾರ್ ಅವರ ಇತಿಹಾಸವನ್ನು, ಎಡಚರ ಮತ್ತು ಕಾಂಗ್ರೆಸ್ಸಿನ ಟೂಲ್‌ಕಿಟ್ ಭಾಗವಾಗಿ ಮರೆಮಾಚಿ, ಸಂಘದ ವಿರುದ್ಧ ಸುಳ್ಳುಸುದ್ದಿಗಳನ್ನು ಸಮಾಜದಲ್ಲಿ ಹಬ್ಬಿಸಲಾಯಿತು.