ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌ನಟನೆ-ನಡೆಯಲ್ಲಿ ಅನುಕರಣೀಯ ಡಾ.ರಾಜ್

ಸರಕಾರ ಅವರಿಗೆ ಪೊಲೀಸ್ ಬೆಂಗಾವಲನ್ನು ಕೊಟ್ಟರೂ ಬೇಡವೆನ್ನುತ್ತಿದ್ದರು. ಅವರ ಜತೆ ಚೆನ್ನ ಎಂಬು ವರು ಮಾತ್ರ ತಮ್ಮ ಸಹಾಯಕ್ಕೆ ಇರುತ್ತಿದ್ದರು. ಅವರ ಸಾಧನೆಯ ಕುರಿತು ಯಾರಾದರೂ ಪ್ರಶ್ನೆ ಮಾಡಿ ದ್ದೇಯಾದರೆ ‘ಇದರಲ್ಲಿ ನನ್ನ ಪಾತ್ರ ಏನಿಲ್ಲ. ಅದೇನಿದ್ದರೂ ತಂದೆ-ತಾಯಿಯಿಂದ ಬಂದ ಬಳುವಳಿ ಮತ್ತು ಅಭಿಮಾನಿಗಳ ಆಶೀರ್ವಾದ’ ಎಂದು ಹೇಳಿ ಸುಮ್ಮನಾಗಿ ಬಿಡುತ್ತಿದ್ದರು.

ಡಾ.ರಾಜ್‌ ಜನ್ಮದಿನ

ರವೀಂದ್ರ ಸಿಂಗ್‌, ಕೋಲಾರ

ರಾಜಕುಮಾರ್ ಕೇವಲ ನಟರಲ್ಲ, ವಿನಯವಂತಿಕೆಯ ಮಹಾಗಣಿ. ಅವರ ವ್ಯಕ್ತಿತ್ವ ವಿಭಿನ್ನ. ವಿನಯವಂತಿಕೆಯ ಸರಳ ಜೀವನ. ತಾನು ದೊಡ್ಡ ನಟನೆಂದು ಅವರೆಂದಿಗೂ ಅಂದುಕೊಳ್ಳಲೇ ಇಲ್ಲ. ಅಭಿಮಾನಿಗಳು ಅವರನ್ನು ಆ ರೀತಿಯಾಗಿ ಮೆರೆಸಿದರೆ ಹೊರತು ತಮ್ಮನ್ನು ತಾವು ಯಾವತ್ತೂ ದೊಡ್ಡವರೆಂದು ಭಾವಿಸಲಿಲ್ಲ.

ಸರಕಾರ ಅವರಿಗೆ ಪೊಲೀಸ್ ಬೆಂಗಾವಲನ್ನು ಕೊಟ್ಟರೂ ಬೇಡವೆನ್ನುತ್ತಿದ್ದರು. ಅವರ ಜತೆ ಚೆನ್ನ ಎಂಬುವರು ಮಾತ್ರ ತಮ್ಮ ಸಹಾಯಕ್ಕೆ ಇರುತ್ತಿದ್ದರು. ಅವರ ಸಾಧನೆಯ ಕುರಿತು ಯಾರಾದರೂ ಪ್ರಶ್ನೆ ಮಾಡಿದ್ದೇಯಾದರೆ ‘ಇದರಲ್ಲಿ ನನ್ನ ಪಾತ್ರ ಏನಿಲ್ಲ. ಅದೇನಿದ್ದರೂ ತಂದೆ-ತಾಯಿಯಿಂದ ಬಂದ ಬಳುವಳಿ ಮತ್ತು ಅಭಿಮಾನಿಗಳ ಆಶೀರ್ವಾದ’ ಎಂದು ಹೇಳಿ ಸುಮ್ಮನಾಗಿ ಬಿಡುತ್ತಿದ್ದರು.

ರಾಜಕುಮಾರ್ ಎಂಬ ವ್ಯಕ್ತಿ ಸಿನಿಮಾದಲ್ಲಿ ಯಶಸ್ವಿ ಪಾತ್ರಗಳನ್ನು ಮಾಡಿದ್ದಾರೆ ಅನ್ನುವುದಕ್ಕಿಂತ ಒಬ್ಬ ಹಳ್ಳಿಗಾಡಿನ ಹುಡುಗ ರಾಜಕುಮಾರ್ ಎಂಬ ಪಾತ್ರವನ್ನು ಎಷ್ಟು ಚೆನ್ನಾಗಿ ನಿರ್ವಹಿಸಿದರು ಎಂಬುದು ಬಹಳ ಮುಖ್ಯ ಎಂದು ಸಾಹಿತಿ ದೇವನೂರ ಮಹದೇವ ಅವರು ಹೇಳುವ ಮಾತು ಇಲ್ಲಿ ಗಮನಾರ್ಹ!

ಇದನ್ನೂ ಓದಿ:Dr Rajkumar Birthday: ಅಣ್ಣಾವ್ರ ಹಾಡು ಹಾಡಿ ಅಭಿಮಾನಿಗಳ ಮನ ಗೆದ್ದ ಮೋಹನ್​ಲಾಲ್; ವಿಡಿಯೋ ವೈರಲ್‌

ಬಾವಿಯೊಳಗೆ ಇಳಿಯುವಾಗ ಅವರು ಗೊತ್ತಿಲ್ಲದೆ ಚಪ್ಪಲಿಗಳನ್ನು ಹಾಕಿಕೊಂಡು ಇಳಿದಿದ್ದಕ್ಕೆ ರೈತನಿಗೆ ಕೈ ಜೋಡಿಸಿ ‘ತಪ್ಪಾಯ್ತು ದಯವಿಟ್ಟು ಕ್ಷಮಿಸಿ’ ಎಂದು ವಿನಯದಿಂದ ನಮಸ್ಕರಿಸಿ ದ್ದುಂಟು. ಇದು ಅವರ ಉದಾರ ವಿನಮ್ರತೆಗೆ ಉದಾಹರಣೆ. ಅವರದು ತೀರ ಸಜ್ಜನಿಕೆಯ ವ್ಯಕ್ತಿತ್ವ. ಸದ್ಗುಣಗಳ ವಿಚಾರಕ್ಕೆ ಬಂದಾಗ ನಾವು ಆ ಜಾಗದಲ್ಲಿ ಬೇರೆ ಯಾವ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಮರ್ಯಾದೆ, ಶಿಷ್ಟಾಚಾರಗಳನ್ನು ನಾವು ಎಲ್ಲೂ ಕಲಿಯಬೇಕಿಲ್ಲ. ರಾಜ್ ರವರ ಹೃದಯದಿಂದ ಹೊರಡುವ ಕೆಲವೇ ಮಾತುಗಳು ನಮ್ಮ ಕಿವಿಗೆ ಬಿದ್ದರೆ ಸಾಕು! ನಾಗರೀಕನಾದವನು ಹೇಗೆ ನಡೆದು ಕೊಳ್ಳಬೇಕೆಂದು ತಿಳಿಯುತ್ತದೆ. ಅವರು ಒಮ್ಮೆ ವಿಮಾನ ನಿಲ್ದಾಣದವನ್ನು ಪ್ರವೇಶಿಸಿದಾಗ ಎದುರಿಗೆ ಸಿಕ್ಕ ಸೆಕ್ಯೂರಿಟಿ ಗಾರ್ಡಿನ ಮಾತಿಗೆ ಒಪ್ಪಿ, ನಂತರದಲ್ಲಿ ಅವರು ತಮ್ಮ ವೇಷಭೂಷನವನ್ನೇ ಬದಲಾಯಿಸಿಕೊಂಡರು.

ಇಡೀ ಜೀವಮಾನ ದುದ್ದಕ್ಕೂ ಬಿಳಿ ಪಂಚೆ ಮತ್ತು ಅಂಗಿಯನ್ನು ತಮ್ಮ ನಿತ್ಯದ ಧಿರಿಸನ್ನಾಗಿ ಮಾಡಿಕೊಂಡರು. ಯಾವ ವ್ಯಕ್ತಿಯನ್ನೂ ಕನಿಷ್ಠರೆಂದು ಭಾವಿಸಿದ್ದೇ ಇಲ್ಲ. ಅಭಿಮಾನಿಗಳು ಪ್ರೀತಿಯಿಂದ ಅಣ್ಣಾವ್ರು ಅಂತಾನೇ ಇದುವರೆಗೂ ಕರಿಯುತ್ತಾ ಬಂದಿದ್ದಾರೆ. ಅವರು ಬದುಕಿದ್ದ ಕೆಲ ವರ್ಷಗಳ ಹಿಂದೆ, ಅಭಿಮಾನಿಯೊಬ್ಬ ಯಾವುದೋ ಒಂದು ವಿಷಯಕ್ಕೆ ಹಿರಿಯ ನಿರ್ದೇಶಕರ ಎದುರಿಗೆ ರಾಜಕುಮಾರ್ ನಮ್ಮ ಅಣ್ಣಾವ್ರು ಎಂದಿದ್ದಾನೆ.

ಆ ನಿರ್ದೇಶಕ ‘ಅಣ್ಣಾವ್ರು ಅಂದ್ರೆ ನಿನಗೆ ಅಣ್ಣಾವರಾಗಬಹುದು ನನಗಲ್ಲ’ ಎಂದು ನಿಷ್ಠುರವಾಗಿ ನುಡಿದು ಬಿಟ್ಟಿದ್ದಾರೆ. ಈ ವಿಷಯ ಪತ್ರಿಕೆಯಲ್ಲೂ ಪ್ರಕಟವಾಯಿತು. ವಿಷಯ ಗೊತ್ತಾದರೂ ಅವರು ಇದಕ್ಕೆ ಕಿಂಚಿತ್ತು ಪ್ರತಿಕ್ರಿಯೆ ನೀಡಿರಲಿಲ್ಲ. ‘ಆ ನಿರ್ದೆಶಕರು ಹೇಳಿದ್ದು ಸರಿಯೇ!’ ಅಂತ ಸುಮ್ಮನಿದ್ದುಬಿಟ್ಟಿದ್ದರು. ತಮ್ಮ ಬಗ್ಗೆ ಯಾರು ಏನೇ ಹೇಳಿದರೂ ಅವರು ಒಂದು ಚೂರು ಕೋಪ ಮಾಡಿಕೊಳ್ಳುತ್ತಿರಲಿಲ್ಲ. ಅದರ ಕುರಿತು ಎಂದು ಆರೋಪ ಪ್ರತ್ಯಾರೋಪ ಮಾಡಲು ಹೋಗು ತ್ತಿರಲಿಲ್ಲ.

ಎಂಥ ಸಂಧಿಗ್ಧ ಸಂದರ್ಭ ದಲ್ಲೂ ಅವರು ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಸಮಯದ ಗೊಂಬೆ ಚಿತ್ರೀಕರಣ ಸಂದರ್ಭದಲ್ಲಿ ಊಟಿಯಲ್ಲಿ ಅವರ ಮೇಲೆ ಹಲ್ಲೆ ಪ್ರಯತ್ನ ನಡೆಯಿತು. ಅವರು ಈ ವಿಷಯವನ್ನು ಅಭಿಮಾನಿಗಳಿಗೆ ತಿಳಿದರೆ ಅನಾಹುತಕ್ಕೆ ಎಡೆ ಆಗುತ್ತದೆ ಎಂದು ಈ ವಿಷಯ ಕರ್ನಾಟಕದಲ್ಲಿ ಪ್ರಸ್ತಾಪವಾಗದಂತೆ ಗೌಪ್ಯವಾಗಿ ಇಟ್ಟರು. ತಮ್ಮ ಗೌರವ ಅಭಿಮಾನಕ್ಕಿಂತ ನಾಡಿನ ಮತ್ತು ಅಭಿಮಾನಿಗಳ ಕ್ಷೇಮವೇ ಮುಖ್ಯವಾಗಿತ್ತು. ಈ ರೀತಿ ಯೋಚನೆ ಮಾಡುವ ನಟರು ನಮಗೆ ಎಷ್ಟು ಮಂದಿ ಕಾಣಸಿಗುತ್ತಾರೆ ಹೇಳಿ? ಅಭಿಮಾನ-ಪ್ರೀತಿಗಳಿಗೆ ಅವರು ಸಂಪೂರ್ಣ ಮನ ಸೋಲು ತ್ತಿದ್ದರು.

ಒಂದೊಮ್ಮೆ ಅಭಿಮಾನಿಯೊಬ್ಬರು ಅವರನ್ನು ಮದುವೆಗೆ ಆಹ್ವಾನಿಸಿದ್ದರು. ರಾಜಕುಮಾರ್ ಆ ಮದುವೆಗೆ ಬರ‍್ತಾರೆ ಅಂತ ಆತ ಗಂಭೀರವಾಗಿ ಯೋಚಿಸಿಯೂ ಇರಲಿಲ್ಲ. ಆದರೆ ಅಲ್ಲಿ ನಡೆದಿದ್ದೇ ಬೇರೆ. ರಾಜ್ ಅವರು ಅಭಿಮಾನಕ್ಕೆ ಕಟ್ಟುಬಿದ್ದು ಮದುವೆ ಮನೆಗೆ ತೆರಳಿಯೇ ಬಿಟ್ಟರು. ಜೀವನ ದುದ್ದಕ್ಕೂ ಯಾರನ್ನೂ ನೋಯಿಸದೆ ಬಂದ ಅವರಲ್ಲಿದ್ದ ಪ್ರೀತಿ-ವಿನಯವಂತಿಕೆಗಳು ಬೆಲೆಕಟ್ಟ ಲಾಗದಂಥವು. ನಟನೆಯಷ್ಟೇ ಅಲ್ಲ, ನಡೆಯಲ್ಲೂ ಜೀವ ಹೂವಾಗಿಸಿಕೊಂಡ ಡಾ. ರಾಜಕುಮಾರ್ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲೂ ಧೃವತಾರೆಯಂತೆ ಕಂಗೊಳಿಸಿದವರು.