ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಡಾ.ರಾಜಾರಾಮಣ್ಣ ಎಂಬ ನಿತ್ಯ ನೆನಪಿನ ಸ್ಥಾವರ

ಜನವರಿ 28. ಖ್ಯಾತ ಅಣುವಿಜ್ಞಾನಿ, ಪದ್ಮವಿಭೂಷಣ ಡಾ.ರಾಜಾ ರಾಮಣ್ಣ ಅವರ ಜನ್ಮದಿನ. ಅವರು ಬದುಕಿದ್ದಿದ್ದರೆ ಅವರಿಗೆ ನಿನ್ನೆ 101 ವರ್ಷ ಆಗುತ್ತಿತ್ತು. ನನಗೆ ಅವರೊಂದಿಗೆ ಸುಮಾರು ಹನ್ನೆರಡು ವರ್ಷಗಳ ಅನ್ಯೋನ್ಯ ಸಂಬಂಧವಿತ್ತು. ಅಣುವಿಜ್ಞಾನಿಯಾಗಿದ್ದ ಕಾರಣದಿಂದಲೋ, ಅವರು ಏರಿದ ಎತ್ತರದಿಂದಲೋ, ನನಗೆ ಅವರ ಜತೆ ಬೆರೆಯುವುದು ಆರಂಭದಲ್ಲಿ ಸುಲಭವಾಗಿರ ಲಿಲ್ಲ. ನಮ್ಮಿಬ್ಬರ ನಡುವಿನ ಅಂತರವನ್ನು ಕಿರಿದು ಮಾಡಿದವರು ಅವರೇ.

ನೂರೆಂಟು ವಿಶ್ವ

ಜನವರಿ 28. ಖ್ಯಾತ ಅಣುವಿಜ್ಞಾನಿ, ಪದ್ಮವಿಭೂಷಣ ಡಾ.ರಾಜಾ ರಾಮಣ್ಣ ಅವರ ಜನ್ಮದಿನ. ಅವರು ಬದುಕಿದ್ದಿದ್ದರೆ ಅವರಿಗೆ ನಿನ್ನೆ 101 ವರ್ಷ ಆಗುತ್ತಿತ್ತು. ನನಗೆ ಅವರೊಂದಿಗೆ ಸುಮಾರು ಹನ್ನೆರಡು ವರ್ಷಗಳ ಅನ್ಯೋನ್ಯ ಸಂಬಂಧವಿತ್ತು. ಅಣುವಿಜ್ಞಾನಿಯಾಗಿದ್ದ ಕಾರಣದಿಂದಲೋ, ಅವರು ಏರಿದ ಎತ್ತರದಿಂದಲೋ, ನನಗೆ ಅವರ ಜತೆ ಬೆರೆಯುವುದು ಆರಂಭದಲ್ಲಿ ಸುಲಭವಾಗಿರ ಲಿಲ್ಲ. ನಮ್ಮಿಬ್ಬರ ನಡುವಿನ ಅಂತರವನ್ನು ಕಿರಿದು ಮಾಡಿದವರು ಅವರೇ.

‘ಭಟ್ರೇ, ನೀವು ನನ್ನನ್ನು ಆಗಾಗ ಭೇಟಿ ಮಾಡದಿದ್ದರೆ, ನಾವು ಆತ್ಮೀಯರಾಗುವುದು ಸಾಧ್ಯವೇ ಇಲ್ಲ’ ಎಂದು ಅವರು ಆರಂಭದಲ್ಲಿ ಹೇಳುತ್ತಿದ್ದ ಮಾತುಗಳು ಅವರ ಹತ್ತಿರಕ್ಕೆ ಕರೆದೊಯ್ಯಿತು. ಆದರೆ ಒಮ್ಮೆ ಅವರಿಗೆ ಫೋನ್ ಮಾಡಿದಾಗ, ‘ಮಹತ್ವದ ವಿಷಯವಿಲ್ಲದಿದ್ದರೆ ಫೋನ್ ಮಾಡಬೇಡಿ’ ಎಂದು ಅಂದುಬಿಟ್ಟಿದ್ದರು.

ನಾನು ಸುಮಾರು ನಾಲ್ಕು ತಿಂಗಳು ಅವರ ಸಹವಾಸಕ್ಕೇ ಹೋಗಿರಲಿಲ್ಲ. ಅನಂತರ ಅವರು ಕೋಟೆ ಮೈದಾನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಿಕ್ಕಾಗ, ‘ಬನ್ನಿ, ಈಗ ನಮ್ಮ ಮನೆಗೆ ಹೋಗೋಣ’ ಎಂದು ವರಾತ ಮಾಡಿ ಅವರ ಕಾರಿನಲ್ಲಿ ಕುಳ್ಳಿರಿಸಿಕೊಂಡು ಹೋಗಿದ್ದರು. ಅಂದು ಅವರ ಮನೆಯಲ್ಲಿ ಕಪ್ಪಾದ ನಿಲುವಂಗಿ ಧರಿಸಿ, ಒಂದು ಗ್ಲಾಸ್ ಸ್ಕಾಚ್ ಇಟ್ಟುಕೊಂಡು ಸುಮಾರು ಮುಕ್ಕಾಲು ಗಂಟೆ ಪಿಯಾನೋ ನುಡಿಸಿದ್ದರು.

ನನಗೆ ಪಿಯಾನೋ ಅಂದ್ರೆ ಗ್ರೀಕ್ ಇದ್ದಂತೆ. ‘ಪಿಯಾನೋ ಅರ್ಥ ಮಾಡಿಕೊಳ್ಳಲು ಒಳ್ಳೆಯ ಕಿವಿ ಗಳಿದ್ದರೆ ಸಾಕು, There's nothing remarkable about it. All one has to do is hit the right keys at the right time and the instrument plays itself' ಎಂದು ಅವರು ಹೇಳಿದ್ದು ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ.

ಇದನ್ನೂ ಓದಿ: Vishweshwar Bhat Column: ಹದಿನೇಳು ವರ್ಷಗಳ ದ್ವೇಷ ಮತ್ತು ಸ್ನೇಹದ ಮರುಜನ್ಮ

‘ಎಲ್ಲ ಗುಂಡುಗಳ ಪೈಕಿ ಸ್ಕಾಚ್ ಶ್ರೇಷ್ಠ ಅಂತಾರೆ. ಎಲ್ಲ ಸಂಗೀತವಾದನಗಳಲ್ಲಿ ಪಿಯಾನೋ’ ಎಂಬ ಮಾತನ್ನು ಅವರ ಬಾಯಿಯಿಂದ ಅನೇಕ ಸಲ ಕೇಳಿದ್ದೇನೆ. ಒಮ್ಮೆ ಅರ್ಧ ಗಂಟೆ ಪಿಯಾನೋ ವಾದನದಲ್ಲಿ ತಲ್ಲೀನರಾದ ಡಾ.ರಾಮಣ್ಣ, ಒಂದೇ ಗುಟುಕಿಗೆ ಸ್ಕಾಚ್ ಗ್ಲಾಸ್ ಖಾಲಿ ಮಾಡಿ, ‘ಭಟ್ರೇ, ನಿಮಗೆ ಏನು ಅರ್ಥವಾಯಿತು ಹೇಳಿ’ ಎಂದು ತಬ್ಬಿಬ್ಬು ಮಾಡಿಬಿಟ್ಟಿದ್ದರು.

ಅದಕ್ಕೆ ನಾನು, ’ನನಗೆ ಅರ್ಥವಾಗಿದ್ದು ಇಷ್ಟೇ ಸರ್... ನೀವು ಪಿಯಾನೋ ಬಾರಿಸುವಾಗ ಕೈಗಳಿಗೆ ಕೆಲಸ ಕೊಡ್ತೀರಿ, ಸ್ಕಾಚ್ ಕುಡಿಯುವಾಗ ಗಂಟಲಿಗೆ ಕೆಲಸ ಕೊಡ್ತೀರಿ. ಆದರೆ ಎರಡೂ ಮುಗಿದ ಮೇಲೆ ತಬ್ಬಿಬ್ಬು ಆಗೋಕೆ ನನ್ನ ತಲೆಗೆ ಕೆಲಸ ಕೊಡ್ತೀರಲ್ಲ, ಅದು ಮಾತ್ರ ಎಲ್ಲ ‘ಶಾಸ್ತ್ರ’ವನ್ನೂ ಮೀರಿದ್ದು.’ ಎಂದು ಹೇಳಿ ಬಚಾವ್ ಆಗಿದ್ದೆ.

ಕೆಲವೊಮ್ಮೆ ನನ್ನ ಮತ್ತು ಅವರ ಮಧ್ಯೆ ಆ ಹಾಳು ಪಿಯಾನೋ ಅಡ್ಡ ಬಂದಿರಬಹುದಾ ಎಂದು ನನಗೆ ಅನೇಕ ಸಲ ಅನಿಸಿದ್ದುಂಟು. ಪಿಯಾನೋ ಮುಂದೆ ನನ್ನನ್ನು ಕುಳ್ಳಿರಿಸಿಕೊಂಡು, ಮಂಗಾ ಮಾಡಿ ಇವರು ಮಜಾ ತೆಗೆದುಕೊಳ್ಳುತ್ತಿರಬಹುದಾ ಎಂದೂ ಅಂದುಕೊಂಡಿದ್ದಿದೆ. ‘ನೀವು ಈ ಜನ್ಮದಲ್ಲಿ ನನಗೆ ಪಿಯಾನೋ ಕಲಿಸಬೇಕು ಅಂತ ನಿರ್ಧರಿಸಿದ್ದರೆ, ನಾನು ನಿಮಗೆ ಯಾವ ರೀತಿ ಯಲ್ಲೂ ಸಹಕರಿಸಲಾರೆ’ ಎಂದು ಅವರಿಗೆ ಆಗಾಗ ಹೇಳುತ್ತಿದ್ದೆ.

'When you play Piano, never mind who listens to you' ಎಂದು ಡಾ.ರಾಮಣ್ಣ ಹೇಳುತ್ತಿದ್ದರು. ಅದಕ್ಕಾಗಿಯೇ ನೀವು ನನ್ನನ್ನು ಕುಳ್ಳಿರಿಸಿಕೊಂಡು, ನಾನು ಇದ್ದರೆಷ್ಟು, ಬಿಟ್ಟರೆಷ್ಟು ಎಂಬ ರೀತಿ ಯಲ್ಲಿ ಪಿಯಾನೋ ನುಡಿಸುತ್ತಿರಬೇಕಲ್ಲ?’ ಎಂದು ಹೇಳಿದರೆ ಬಾಯ್ತುಂಬಾ ನಗುತ್ತಿದ್ದರು.

Book

‘ನಿಮ್ಮ ಮೂಡು ಈ ಹಾಳು ಪೆಟ್ಟಿಗೆಯನ್ನು ಅವಲಂಬಿಸಿದೆ’ ಎಂದು ನಾನು ಕೆಲವು ಸಲ ಅವರಿಗೆ ಹೇಳಿದ್ದಿದೆ. ಆ ಪಿಯಾನೋಕ್ಕೆ ಏನಾದರೂ ಮಾತಾಡಲು ಬರುತ್ತಿದ್ದರೆ, ಖಂಡಿತವಾಗಿಯೂ ಅದು ‘ಈ ಭಟ್ಟನನ್ನು ಕುಳ್ಳಿರಿಸಿಕೊಂಡು ನನ್ನ ಮತ್ತು ನಿಮ್ಮ ಟೈಮ್ ವೇಸ್ಟ್ ಮಾಡ್ತಾ ಇದ್ದೀರಿ ಎಂದು ಹೇಳುತ್ತಿತ್ತೇನೋ’ ಎಂದು ನಾನು ಅವರಿಗೆ ಹೇಳಿದ್ದಿದೆ.

ಅವರು ಪಿಯಾನೋ ಮುಂದೆ ಕುಳಿತಾಗ ಅವರಾಗಿರುತ್ತಿರಲಿಲ್ಲ. ಯಾವುದೋ ಲೋಕದಲ್ಲಿ ವಿಹರಿಸುತ್ತಿದ್ದಂತೆ ಭಾಸವಾಗುತ್ತಿತ್ತು. ನಾನು ಪಿಯಾನೋದ ಕೀಲಿಗಳನ್ನು ಒತ್ತಿದಾಗ ಸಿಗುವ ಆನಂದ ಮತ್ತು ಪರಮಾಣುವಿನ ರಹಸ್ಯವನ್ನು ಭೇದಿಸಿದಾಗ ಸಿಗುವ ತೃಪ್ತಿ ಎರಡೂ ಒಂದೇ. ಇವೆರಡೂ ಬ್ರಹ್ಮಾಂಡದ ಲಯವನ್ನು ಅರ್ಥಮಾಡಿಕೊಳ್ಳುವ ದಾರಿಗಳು’ ಎಂದು ಅವರು ಹೇಳಿದ್ದರು.

ಒಮ್ಮೆ ಮಾತಾಡುವಾಗ, ಸಾರ್, ನಾನು ಕಾಲೇಜಿನಲ್ಲಿ ಓದುವಾಗ, ಕೈಗಾ ಅಣು ಸ್ಥಾವರವನ್ನು ವಿರೋಧಿಸಿ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವಾರಗಟ್ಟಲೆ ಜಾಥಾ ಮಾಡಿ, ಭಾಷಣದಲ್ಲಿ ನಿಮ್ಮನ್ನು ಬೈದಿದ್ದೆ. ಆ ದಿನಗಳಲ್ಲಿ ನಾವು ನಿಮ್ಮ ಪ್ರತಿಕೃತಿಯನ್ನು ಸುಟ್ಟಿದ್ದೆವು’ ಎಂದು ಹೇಳಿದಾಗ, ‘ನೀವು ನನ್ನ ಸ್ನೇಹಿತರಾಗಲು ಲಾಯಕ್ಕು ಬಿಡಿ’ ಎಂದು ಹೇಳಿ ಬೆನ್ನು ತಟ್ಟಿದ್ದರು.

ಒಬ್ಬರ ಬಗ್ಗೆ ಅಂಧ ಪ್ರೀತಿಯಷ್ಟೇ ಇರಬಾರದು, ವಿರೋಧಗಳೂ ಇರಬೇಕು’ ಎಂದು ಹೇಳಿ ಅಚ್ಚರಿ ಯುಂಟು ಮಾಡಿದ್ದರು. ಡಾ.ರಾಮಣ್ಣನವರು ಕೇಂದ್ರ ಸರಕಾರದಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ರಾಗಿದ್ದಾಗ, ದಿಲ್ಲಿಯ ಅವರ ಮನೆಯಲ್ಲಿ ನಾನು ಮೂರು ದಿನ ತಂಗಿದ್ದೆ. ಅಲ್ಲಿಂದ ಅವರು ರಕ್ಷಣಾ ಹೆಲಿಕಾಪ್ಟರ್ ನಲ್ಲಿ ನನ್ನನ್ನು ಲಡಾಖ್ ಗೂ ಕರೆದುಕೊಂಡು ಹೋಗಿದ್ದರು. ನಮ್ಮಿಬ್ಬರ ಮಧ್ಯೆ ಒಂದು ಅದ್ಭುತ ಕೆಮಿಸ್ಟ್ರಿ ಇತ್ತು.

ಅದು ಏನು ಎಂಬುದನ್ನು ಈಗಲೂ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಕಾರಣ ನಮ್ಮಿಬ್ಬರ ಮಧ್ಯೆ ಕಾಮನ್ ಆದ ಯಾವ ವಿಷಯಗಳೂ ಇರಲಿಲ್ಲ. ‘ಯಾರ ಮಧ್ಯೆ ಕಾಮನ್ ಇಂಟರೆಸ್ಟ್ ಇರುವುದಿಲ್ಲವೋ ಅವರೇ ಉತ್ತಮ pair (ಜತೆಗಾರ) ಆಗುತ್ತಾರೆ. ಉದಾಹರಣೆಗೆ, ಗಂಡ- ಹೆಂಡತಿ’ ಎಂದು ಹೇಳಿ ಅವರು ಜೋರಾಗಿ ನಕ್ಕಿದ್ದು ನೆನಪಾಗುತ್ತದೆ.

ಡಾ.ರಾಜಾರಾಮಣ್ಣ ಭಾರತ ಕಂಡ ಅತ್ಯಂತ ಪ್ರತಿಭಾವಂತ ವಿಜ್ಞಾನಿಗಳಲ್ಲಿ ಒಬ್ಬರು. ಭಾರತದ ಪರಮಾಣು ಕಾರ್ಯಕ್ರಮದ ಪಿತಾಮಹ ಎಂದು ಕರೆಯಲ್ಪಡುವ ಇವರು, 1974ರ ‘ಪೋಖ್ರಾನ್-1’ ಅಣು ಪರೀಕ್ಷೆಯ ರೂವಾರಿಯಾಗಿದ್ದರು. ಡಾ.ರಾಮಣ್ಣ ಕೇವಲ ಅಣುವಿಜ್ಞಾನಿ ಎಂದಷ್ಟೇ ಅನೇಕರು ಭಾವಿಸಿದ್ದಾರೆ.

ಆದರೆ, ಅವರ ವ್ಯಕ್ತಿತ್ವದ ಮತ್ತೊಂದು ಮಗ್ಗುಲು ಅವರ ವಿeನದ ಸಾಧನೆಗಿಂತಲೂ ಕುತೂಹಲಕಾರಿ ಯಾದದ್ದು. ಡಾ.ರಾಮಣ್ಣ ಕೇವಲ ಲ್ಯಾಬೊರೇಟರಿ ಅಥವಾ ರಿಯಾಕ್ಟರ್‌ಗಳ ನಡುವೆ ಜೀವನ ಕಳೆದವರಲ್ಲ. ಅವರು ಒಬ್ಬ ಪೂರ್ಣ ಪ್ರಮಾಣದ ಕಲಾಪ್ರೇಮಿ, ಪಿಯಾನೋ ವಾದಕ ಮತ್ತು ಸಂಸ್ಕೃತ ಸಾಹಿತ್ಯದ ಅಪ್ಪಟ ಆರಾಧಕರಾಗಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ.

ಡಾ.ರಾಜಾರಾಮಣ್ಣಗೆ ಸಂಗೀತದ ನಂಟು ಬಾಲ್ಯದ ಆರಂಭವಾಯಿತು. ಮೈಸೂರಿನ ಅರಮನೆಯ ವಾತಾವರಣ ಮತ್ತು ಅಲ್ಲಿನ ಸಂಗೀತ ಸಂಸ್ಕೃತಿ ಅವರ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ಬಾಲ್ಯದಲ್ಲಿ ಅವರು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ಕಡೆಗೆ ಆಕರ್ಷಿತರಾಗಿ ಪಿಯಾನೋ ಕಲಿಯಲು ಪ್ರಾರಂಭಿಸಿದರು. ಇದು ಕೇವಲ ಒಂದು ಹವ್ಯಾಸವಾಗಿ ಉಳಿಯದೆ, ಅವರ ಬದುಕಿನ ಅವಿಭಾಜ್ಯ ಅಂಗವಾಯಿತು.

ಅವರು ಪಿಯಾನೋ ನುಡಿಸುವುದರಲ್ಲಿ ಎಷ್ಟು ಪ್ರವೀಣರಾಗಿದ್ದರೆಂದರೆ, ಪ್ರಮುಖ ವೇದಿಕೆಗಳಲ್ಲಿ ಅವರು ಸಂಗೀತ ಕಚೇರಿಗಳನ್ನು ನೀಡುತ್ತಿದ್ದರು. ಬಿಥೋವನ್, ಮೊಜಾಟರ್, ಬಾಕ್, ಫ್ರೆಡೆರಿಕ್ ಚಾಪಿನ್, ಫ್ರಾಂಜ್ ಲಿಸ್ಟ್, ಪಯೋಟರ್ ಇಲಿಚ್ ಚೈಕೋವ್ಸ್ಕಿ ಅವರಂಥ ಪಾಶ್ಚಾತ್ಯ ಸಂಗೀತ ದಿಗ್ಗಜರ ರಚನೆಗಳನ್ನು ಅವರು ಲೀಲಾಜಾಲವಾಗಿ ನುಡಿಸುತ್ತಿದ್ದರು.

ವಿಶೇಷವೆಂದರೆ, ಅವರು ಪಾಶ್ಚಾತ್ಯ ಸಂಗೀತಕ್ಕೆ ಮಾತ್ರ ಸೀಮಿತವಾಗಲಿಲ್ಲ. ಅವರು ಭಾರತೀಯ ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತವನ್ನೂ ಆಳವಾಗಿ ಪ್ರೀತಿಸುತ್ತಿದ್ದರು. ತಮ್ಮ 'The Structure of Music in Raga and Western Systems' ಎಂಬ ಕೃತಿಯಲ್ಲಿ ಅವರು ಸಂಗೀತದ ವ್ಯಾಕರಣ ಮತ್ತು ವಿಜ್ಞಾನವನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದ್ದಾರೆ.

ಒಬ್ಬ ವಿಜ್ಞಾನಿಯಾಗಿ ಸಂಗೀತದಲ್ಲಿರುವ ಗಣಿತದ ಸೂತ್ರಗಳನ್ನು ಅವರು ಗುರುತಿಸಿದ್ದರು. ಭಾರತೀಯ ರಾಗಗಳಲ್ಲಿರುವ ತರಂಗಾಂತರಗಳು ಮತ್ತು ಪಾಶ್ಚಾತ್ಯ ಹಾರ್ಮೋನಿ ನಡುವಿನ ಸಂಬಂಧವನ್ನು ಅವರು ವೈಜ್ಞಾನಿಕವಾಗಿ ಚರ್ಚಿಸಿದ್ದಾರೆ.

ಭಾರತೀಯ ಸಂಗೀತವು ‘ರಾಗ’ ಆಧಾರಿತವಾಗಿದ್ದು, ಅದು ಸ್ವರಗಳ ಅನುಕ್ರಮ ಮತ್ತು ಭಾವಕ್ಕೆ ಒತ್ತು ನೀಡುತ್ತದೆ. ಆದರೆ ಪಾಶ್ಚಿಮಾತ್ಯ ಸಂಗೀತವು ‘ಹಾರ್ಮೋನಿ’ ಅಥವಾ ಏಕಕಾಲದಲ್ಲಿ ನುಡಿಸುವ ಸ್ವರಗಳ ಸಮೂಹಕ್ಕೆ ಒತ್ತು ನೀಡುತ್ತದೆ. ಡಾ.ರಾಮಣ್ಣ ಅವರು ಇವೆರಡನ್ನೂ ವಿರೋಧಾಭಾಸಗಳಾಗಿ ನೋಡದೇ, ಅವುಗಳ ಹಿಂದಿರುವ ಗಣಿತದ ಸೂತ್ರಗಳನ್ನು ವಿಶ್ಲೇಷಿಸುತ್ತಾರೆ.

ವಿಜ್ಞಾನಿಯಾದ ಕಾರಣ ಅವರಿಗೆ ಸಂಗೀತದಲ್ಲಿ ಗಣಿತದ ಸ್ಪಷ್ಟತೆ ಕಾಣುತ್ತಿತ್ತು. ಸ್ವರಗಳ ನಡುವಿನ ಕಂಪನಾಂಕ (Frequency) ಮತ್ತು ಅವುಗಳ ಅನುಪಾತಗಳು ಹೇಗೆ ಮನುಷ್ಯನ ಮಿದುಳಿನ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅವರು ತಾರ್ಕಿಕವಾಗಿ ವಿವರಿಸುತ್ತಿದ್ದರು. ಈ ಪುಸ್ತಕದಲ್ಲಿ ಸಂಗೀತದ ಸೌಂದರ್ಯಕ್ಕಿಂತ ಹೆಚ್ಚಾಗಿ ಅದರ ‘ಆಕೃತಿ’ ಅಥವಾ ‘ಜ್ಯಾಮಿತಿ’ಯ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದಾರೆ.

ಈ ಕೃತಿಯಲ್ಲಿ ಅವರು ಭಾರತೀಯ ರಾಗಗಳನ್ನು ಪಾಶ್ಚಿಮಾತ್ಯ ಸಂಗೀತದ ನೋಟೇಷನ್ʼಗಳ ಮೂಲಕ ವಿವರಿಸುವ ಪ್ರಯತ್ನ ಮಾಡಿದ್ದಾರೆ. ಇದು ವಿದೇಶಿ ಸಂಗೀತಗಾರರಿಗೆ ಭಾರತೀಯ ರಾಗಗಳ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಭಾರತೀಯರಿಗೆ ಪಾಶ್ಚಿಮಾತ್ಯ ಸಂಗೀತದ ಆಳವನ್ನು ಅರಿಯಲು ಒಂದು ಸೇತುವೆಯಂತಿದೆ. ಬಿಥೋವನ್ ಅಥವಾ ಮೊಜಾರ್ಟ್ ಕೃತಿಗಳಲ್ಲಿನ ತಾರ್ಕಿಕ ಅಂತ್ಯ ಮತ್ತು ಭಾರತೀಯ ರಾಗಗಳ ವಿಸ್ತರಣೆಯ ನಡುವಿನ ಹೋಲಿಕೆಗಳು ಕುತೂಹಲ ಕಾರಿಯಾಗಿವೆ.

ಡಾ.ರಾಜಾರಾಮಣ್ಣ ಅವರು ತಮಿಳುನಾಡಿನ ಶಾಸನಗಳಲ್ಲಿರುವ ಸಂಗೀತದ ಉಲ್ಲೇಖಗಳನ್ನು ಕೂಡ ಈ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಪ್ರಾಚೀನ ಭಾರತೀಯ ಸಂಗೀತ ಪದ್ಧತಿಯು ಕಾಲಕ್ರಮೇಣ ಹೇಗೆ ವಿಕಸನಗೊಂಡಿತು ಮತ್ತು ಅದು ಜಾಗತಿಕ ಸಂಗೀತ ಪದ್ಧತಿಗಳೊಂದಿಗೆ ಹೇಗೆ ಸಂವಾದ ನಡೆಸಬಲ್ಲದು ಎಂಬುದನ್ನು ಅವರು ಸಾಕ್ಷ್ಯಾಧಾರಿತವಾಗಿ ಮಂಡಿಸಿದ್ದಾರೆ.

‘ಸಂಗೀತ ಎನ್ನುವುದು ಕೇವಲ ಮನರಂಜನೆಯಲ್ಲ, ಅದು ವಿಶ್ವದ ಅತ್ಯುನ್ನತ ಕ್ರಮಬದ್ಧವಾದ ಭಾಷೆ’ ಎಂಬ ಸಂದೇಶವನ್ನು ಈ ಕೃತಿ ನೀಡುತ್ತದೆ. ಅವರಿಗೆ ಬಿಥೋವನ್ ಇಷ್ಟವಾಗಿದ್ದಕ್ಕೆ ಕಾರಣ ಆ ಸಂಗೀತದ ಹಿಂದಿರುವ ಲೆಕ್ಕಾಚಾರ, ಶಿಸ್ತು ಮತ್ತು ಗಾಂಭೀರ್ಯ. ಅವರ ಪ್ರಕಾರ, ‘ಸಂಗೀತ ವೆಂದರೆ ಅದು ಧ್ವನಿಯ ಮೂಲಕ ಮಾಡುವ ಗಣಿತ.’ ಈ ಮಾತು ಅವರ ವಿಜ್ಞಾನದ ತರ್ಕ ಮತ್ತು ಸಂಗೀತದ ಭಾವನೆಯ ಸಮನ್ವಯಕ್ಕೆ ಕನ್ನಡಿ ಹಿಡಿಯುತ್ತದೆ.

ಡಾ.ರಾಜಾರಾಮಣ್ಣ ಅವರು ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ (ಕರ್ನಾಟಕ ಮತ್ತು ಹಿಂದೂಸ್ತಾನಿ) ಎರಡನ್ನೂ ಸಮಾನವಾಗಿ ಆರಾಧಿಸಿದವರು. ಈ ಪುಸ್ತಕದಲ್ಲಿ ಅವರು ಈ ಎರಡೂ ಪದ್ಧತಿಗಳ ನಡುವಿನ ‘ರಚನಾತ್ಮಕ’ ಸಾಮ್ಯತೆ ಮತ್ತು ವ್ಯತ್ಯಾಸ ಗಳನ್ನು ವೈಜ್ಞಾನಿಕವಾಗಿ ಚರ್ಚಿಸಿದ್ದಾರೆ.

ಒಬ್ಬ ವಿಜ್ಞಾನಿಯ ದೃಷ್ಟಿಕೋನದಲ್ಲಿ ಸಂಗೀತದ ಸ್ವರೂಪ ಹೇಗಿರುತ್ತದೆ ಎಂಬುದು ಇಲ್ಲಿನ ವಿಶೇಷ. ‘ಜಗತ್ತಿನಲ್ಲಿ ಎಷ್ಟೇ ಗೊಂದಲಗಳಿದ್ದರೂ, ಸಂಗೀತವು ಮನಸ್ಸಿಗೆ ಒಂದು ಬಗೆಯ ಸ್ಥಿರತೆ ಯನ್ನು ನೀಡುತ್ತದೆ. ಕ್ವಾಂಟಮ್ ಭೌತವಿಜ್ಞಾನದ ಅನಿಶ್ಚಿತತೆಯನ್ನು ಅರ್ಥೈಸಿಕೊಳ್ಳಲು ನನಗೆ ಸಂಗೀತದ ಸ್ವರಗಳೇ ಆಧಾರವಾಗಿದ್ದವು’ ಎಂದು ಹೇಳುತ್ತಿದ್ದ ಡಾ.ರಾಮಣ್ಣ, ‘ವಿಜ್ಞಾನವು ನಮಗೆ ಶಿಸ್ತನ್ನು ಕಲಿಸಿದರೆ, ಸಂಗೀತವು ನಮಗೆ ಸೃಜನಶೀಲತೆಯನ್ನು ನೀಡುತ್ತದೆ.

ಒಬ್ಬ ಉತ್ತಮ ವಿಜ್ಞಾನಿಯಾಗಲು ಕೇವಲ ಪ್ರಯೋಗಾಲಯದ ಜ್ಞಾನ ಸಾಕಾಗುವುದಿಲ್ಲ, ಅಲ್ಲಿ ಕಲೆಯ ಸೂಕ್ಷ್ಮ ಸಂವೇದನೆಯೂ ಇರಬೇಕು’ ಎಂದು ಬಲವಾಗಿ ನಂಬಿದ್ದರು. ಡಾ.ರಾಮಣ್ಣ ವ್ಯಕ್ತಿತ್ವದ ಇನ್ನೊಂದು ಮಗ್ಗುಲು ಅವರ ಸಂಸ್ಕೃತ ಪಾಂಡಿತ್ಯ ಮತ್ತು ಭಾರತೀಯ ದರ್ಶನಗಳ ಮೇಲಿದ್ದ ಅಪಾರ ಗೌರವ.

ವಿಜ್ಞಾನದ ತರ್ಕ ಮತ್ತು ಸಂಸ್ಕೃತದ ಸೌಂದರ್ಯ ಎರಡನ್ನೂ ಸಮತೋಲನದಲ್ಲಿರಿಸಿಕೊಂಡಿದ್ದ ಅವರು, ಭಾರತೀಯ ಪುರಾತನ ಸಾಹಿತ್ಯದಲ್ಲಿ ಅಪಾರ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಅವರ ದೃಷ್ಟಿಯಲ್ಲಿ ಸಂಸ್ಕೃತ ಎನ್ನುವುದು ಕೇವಲ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತವಾದ ಭಾಷೆ ಯಾಗಿರಲಿಲ್ಲ.

ಅದೊಂದು ಪರಿಪೂರ್ಣ ಭಾಷಾ ವಿಜ್ಞಾನ. ಸಂಸ್ಕೃತದ ವ್ಯಾಕರಣದಲ್ಲಿರುವ ಕ್ರಮಬದ್ಧತೆ ( Precision) ಅವರಿಗೆ ಆಧುನಿಕ ಕಂಪ್ಯೂಟರ್ ಪ್ರೋಗ್ರಾಮಿಂಗ್ ಭಾಷೆಗಳಿಗಿಂತಲೂ ಹೆಚ್ಚು ನಿಖರ ವೆಂದು ಅನಿಸುತ್ತಿತ್ತು. ‘ವಿeನವು ಹೊರಗಿನ ಜಗತ್ತನ್ನು ಶೋಧಿಸಿದರೆ, ಸಂಸ್ಕೃತ ಸಾಹಿತ್ಯವು ಮನುಷ್ಯನ ಒಳಗಿನ ಜಗತ್ತನ್ನು ಶೋಧಿಸುತ್ತದೆ’ ಎಂದು ಅವರು ನಂಬಿದ್ದರು.

ಉಪನಿಷತ್ತುಗಳು, ವೇದಗಳು ಮತ್ತು ಭಗವದ್ಗೀತೆಯ ಬಗ್ಗೆ ರಾಜಾರಾಮಣ್ಣ ಅವರಿಗೆ ಗಾಢವಾದ ಒಲವಿತ್ತು. ವಿಜ್ಞಾನದಲ್ಲಿ ಉನ್ನತ ಪದವಿ ಪಡೆದರೂ, ಅವರು ತಮ್ಮ ಬಿಡುವಿನ ವೇಳೆಯಲ್ಲಿ ಸಂಸ್ಕೃತದ ಮೂಲ ಪಠ್ಯಗಳನ್ನು ಅಭ್ಯಸಿಸುತ್ತಿದ್ದರು. ಅವರು ಅಣು ವಿಜ್ಞಾನದಂಥ ಜಟಿಲ ವಿಷಯಗಳನ್ನು ಚರ್ಚಿಸುವಾಗಲೂ ಉಪನಿಷತ್ತಿನ ಶ್ಲೋಕಗಳನ್ನು ಉಲ್ಲೇಖಿಸುತ್ತಿದ್ದರು.

ಸೃಷ್ಟಿಯ ಮೂಲ, ಕಾಲದ ಪರಿಕಲ್ಪನೆ ಮತ್ತು ವಿಶ್ವದ ಅಸ್ತಿತ್ವದ ಬಗ್ಗೆ ಆಧುನಿಕ ಭೌತವಿಜ್ಞಾನ ಹೇಳುವ ಸತ್ಯಗಳು ಸಾವಿರಾರು ವರ್ಷಗಳ ಹಿಂದೆಯೇ ಸಂಸ್ಕೃತ ಸಾಹಿತ್ಯದಲ್ಲಿ ಪ್ರತಿಪಾದಿಸಲ್ಪಟ್ಟಿವೆ ಎಂಬುದು ಅವರ ದೃಢವಾದ ಅಭಿಪ್ರಾಯವಾಗಿತ್ತು. ಪಿಯಾನೋ ಮತ್ತು ಪಾಶ್ಚಿಮಾತ್ಯ ಸಂಗೀತದ ಬಗ್ಗೆ ಎಷ್ಟು ಆಸಕ್ತಿ ಇತ್ತೋ, ಅಷ್ಟೇ ಆಸಕ್ತಿ ಸಂಸ್ಕೃತದ ಸ್ತೋತ್ರಗಳು ಮತ್ತು ಛಂದಸ್ಸಿನ ಮೇಲಿತ್ತು. ಸಂಸ್ಕೃತದ ಶ್ಲೋಕಗಳನ್ನು ಪಠಿಸುವಾಗ ಉಂಟಾಗುವ ಧ್ವನಿ ತರಂಗಗಳು ಮತ್ತು ಅವುಗಳ ಲಯ ( Rhythm) ಸಂಗೀತದಷ್ಟೇ ಪರಿಣಾಮಕಾರಿ ಎಂದು ಅವರು ಭಾವಿಸಿದ್ದರು.

ಅವರು ಸಂಸ್ಕೃತವನ್ನು ‘ಲಯಬದ್ಧ ಜ್ಞಾನ’ ಎಂದು ಕರೆಯುತ್ತಿದ್ದರು. ಡಾ.ರಾಜಾರಾಮಣ್ಣನವರು ವಿದೇಶಗಳಿಗೆ ಹೋದಾಗ ಅಲ್ಲಿನ ವಿಜ್ಞಾನಿಗಳಿಗೆ ಭಾರತದ ಬೌದ್ಧಿಕ ಶ್ರೀಮಂತಿಕೆಯನ್ನು ಪರಿಚಯಿ ಸಲು ಸಂಸ್ಕೃತ ಸಾಹಿತ್ಯವನ್ನು ಬಳಸುತ್ತಿದ್ದರು. ‘ನಮ್ಮಲ್ಲಿ ವಿಜ್ಞಾನ ಇರಲಿಲ್ಲ ಎಂದು ಹೇಳುವುದು ತಪ್ಪು, ನಮ್ಮ ವಿಜ್ಞಾನವು ಸಂಸ್ಕೃತದ ಶ್ಲೋಕಗಳಲ್ಲಿ ಗುಪ್ತವಾಗಿದೆ’ ಎಂಬುದು ಅವರ ವಾದ ವಾಗಿತ್ತು.

ಅವರು ಸಂಸ್ಕೃತವನ್ನು ಒಂದು ಸಂಕುಚಿತ ಚೌಕಟ್ಟಿನಿಂದ ಹೊರ ತಂದು, ಅದನ್ನು ಜಾಗತಿಕ ಜ್ಞಾನದ ಭಾಷೆಯಾಗಿ ನೋಡಲು ಬಯಸಿದ್ದರು. ಸಂಸ್ಕೃತದ ಕಾವ್ಯಗಳಲ್ಲಿರುವ ಕಲ್ಪನಾಶಕ್ತಿ ಮತ್ತು ನಾಟಕಗಳಲ್ಲಿರುವ ಮಾನವೀಯ ಮೌಲ್ಯಗಳು ಅವರನ್ನು ಸದಾ ಆಕರ್ಷಿಸುತ್ತಿದ್ದವು.

ಕಾಳಿದಾಸನ ವರ್ಣನೆಗಳಾಗಲಿ ಅಥವಾ ಶಂಕರಾಚಾರ್ಯರ ತರ್ಕಬದ್ಧ ಅದ್ವೈತ ಸಿದ್ಧಾಂತವಾಗಲಿ, ಡಾ.ರಾಜಾರಾಮಣ್ಣಗೆ ಅವುಗಳಲ್ಲಿ ಅತ್ಯುನ್ನತ ಮಟ್ಟದ ಬೌದ್ಧಿಕ ತೃಪ್ತಿ ಸಿಗುತ್ತಿತ್ತು. ವಿಜ್ಞಾನದ ಒಣ ತರ್ಕದ ನಡುವೆ ಸಂಸ್ಕೃತವು ಅವರಿಗೆ ಮಾನಸಿಕ ನೆಮ್ಮದಿ ಮತ್ತು ಸಾಂಸ್ಕೃತಿಕ ಬೇರುಗಳನ್ನು ಒದಗಿಸಿತು.

ಇದಕ್ಕೆ ಅವರು ಬರೆದ, ಭಾರತೀಯ ವಿದ್ಯಾಭವನ ಪ್ರಕಟಿಸಿದ, "Science And Sanskrit' ಪುಸ್ತಕವೇ ನಿದರ್ಶನ. ವಿಜ್ಞಾನ ಮತ್ತು ಸಂಸ್ಕೃತದ ಮೇಲೆ ಅವರಿಗೆ ಅದೆಂಥ ತಿಳಿವಳಿಕೆ ಇತ್ತು ಎಂಬುದಕ್ಕೆ ಇದೊಂದೇ ಸಾಕು. ಶಂಕರಾಚಾರ್ಯರ ಅದ್ವೈತ ಸಿದ್ಧಾಂತದಿಂದ ಪ್ರೇರಿತರಾಗಿದ್ದರು. ಅಣು ವಿಜ್ಞಾನದಂತಹ ಸಂಕೀರ್ಣ ವಿಷಯಗಳಲ್ಲಿ ತೊಡಗಿದ್ದಾಗಲೂ, ಅವರು ಮನಸ್ಸಿನ ಶಾಂತಿಗಾಗಿ ಮತ್ತು ಹೊಸ ಆಲೋಚನೆಗಳಿಗಾಗಿ ಸಂಸ್ಕೃತ ಶ್ಲೋಕಗಳ ಮೊರೆ ಹೋಗುತ್ತಿದ್ದರು.

ವೇದಾಂತ ಮತ್ತು ಆಧುನಿಕ ಭೌತವಿಜ್ಞಾನದ ನಡುವೆ ಒಂದು ಅವಿನಾಭಾವ ಸಂಬಂಧವಿದೆ ಎಂದು ಅವರು ಆಗಾಗ್ಗೆ ಪ್ರತಿಪಾದಿಸುತ್ತಿದ್ದರು. ವಿಶ್ವದ ಉಗಮ ಮತ್ತು ಅಣುಗಳ ಚಲನೆಯನ್ನು ಅರ್ಥಮಾಡಿಕೊಳ್ಳಲು ಪುರಾತನ ಸಂಸ್ಕೃತ ಗ್ರಂಥಗಳು ಒಂದು ಹೊಸ ದೃಷ್ಟಿಕೋನ ನೀಡುತ್ತವೆ ಎಂಬುದು ಅವರ ಅಭಿಪ್ರಾಯವಾಗಿತ್ತು.

1974ರ ಪೋಖ್ರಾನ್ ಅಣು ಪರೀಕ್ಷೆ ರಹಸ್ಯವಾಗಿ, ಯಶಸ್ವಿಯಾಗಿ ಪೂರೈಸಿ, ಬುದ್ಧ ಪೂರ್ಣಿಮೆಯ ದಿನದಂದೇ ಈ ಪರೀಕ್ಷೆ ನಡೆದಿದ್ದರಿಂದ ಮತ್ತು ಭಾರತದ ಶಾಂತಿ ಮಂತ್ರದ ಸಂಕೇತವಾಗಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಫೋನ್ ಮಾಡಿ ಕೇವಲ ಒಂದು ವಾಕ್ಯದಲ್ಲಿ 'The Buddha has finally smiled' ಎಂದು ಹೇಳಿದ್ದ ಡಾ.ರಾಜಾರಾಮಣ್ಣ ವಿಜ್ಞಾನ ಲೋಕದ ಧ್ರುವತಾರೆ ಯಾಗಿದ್ದರೂ, ಅವರ ವ್ಯಕ್ತಿತ್ವಕ್ಕೆ ಮೆರುಗು ನೀಡಿದ್ದು ಅವರ ಸಾಂಸ್ಕೃತಿಕ ಆಸಕ್ತಿಗಳು ಎಂದು ನನಗೆ ಬಲವಾಗಿ ಅನಿಸಿದೆ.

ವಿಜ್ಞಾನದ ತರ್ಕ, ಸಂಗೀತದ ಮಾಧುರ್ಯ ಮತ್ತು ಸಂಸ್ಕೃತದ ಗಾಂಭೀರ್ಯ ಈ ಮೂರರ ಮಿಶ್ರಣ ವೇ ಅವರಾಗಿದ್ದರು. ಇಂದಿನ ಯುವ ಪೀಳಿಗೆಗೆ ಮತ್ತು ಮುಖ್ಯವಾಗಿ ವಿಜ್ಞಾನ ಆಸಕ್ತರಿಗೆ ಡಾ.ರಾಜಾ ರಾಮಣ್ಣ ಅವರು ಒಂದು ಆದರ್ಶ ಮಾದರಿ. ಅವರು ನಮನ್ನಗಲಿ ಇಪ್ಪತ್ತೆರಡು ವರ್ಷಗಳಾದರೂ ನನ್ನ ಪಾಲಿಗೆ ಅವರು ನಿತ್ಯ ನೆನಪಿನ ಸ್ಥಾವರ !

ವಿಶ್ವೇಶ್ವರ ಭಟ್‌

View all posts by this author