Vishweshwar Bhat Column: ಹದಿನೇಳು ವರ್ಷಗಳ ದ್ವೇಷ ಮತ್ತು ಸ್ನೇಹದ ಮರುಜನ್ಮ
ಯಾವಾಗ ಇಬ್ಬರು ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಅತ್ಯುನ್ನತ ಶಿಖರವನ್ನು ಏರುತ್ತಾರೋ, ಆಗ ಅವರ ನಡುವೆ ‘ನಾನು’ ಎಂಬ ಭಾವನೆ ಹೆಮ್ಮರವಾಗಿ ಬೆಳೆದು ಬಿಡುತ್ತವೆ. ದೈತ್ಯ ಪ್ರತಿಭೆಗಳ ನಡುವೆ ಎಷ್ಟೇ ಗೌರವವಿದ್ದರೂ, ಅಂತರಾಳದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ಪರ್ಧೆ ಇದ್ದರಂತೂ ಅದು ಯಾವ ಕ್ಷಣದದರೂ ಸ್ಪೋಟಗೊಳ್ಳಲು ಒಂದು ಸಣ್ಣ ಕಿಡಿಗಾಗಿ ಕಾಯುತ್ತಿರುತ್ತದೆ.
-
ನೂರೆಂಟು ವಿಶ್ವ
ಇಬ್ಬರು ಮಹಾನ್ ಚೇತನಗಳು ಅಥವಾ ದೈತ್ಯ ಪ್ರತಿಭೆಗಳು ಮುಖಾಮುಖಿಯಾದಾಗ ಅಲ್ಲಿ ಕೇವಲ ವಿಚಾರಗಳ ವಿನಿಮಯ ನಡೆಯುವುದಿಲ್ಲ; ಬದಲಿಗೆ ಮನುಷ್ಯ ಸಹಜವಾದ ಅಹಂಕಾರ, ಅಸೂಯೆ, ಪ್ರೀತಿ ಮತ್ತು ಸಂಘರ್ಷಗಳ ಒಂದು ಬೃಹತ್ ನಾಟಕವೇ ಅನಾವರಣಗೊಳ್ಳುತ್ತದೆ. ಒಂದು ಕಾಲಕ್ಕೆ ತಾವು ಅತ್ಯಾಪ್ತ ಸ್ನೇಹಿತರಾಗಿzವು ಎಂಬ ಅಂಶವೂ ಅವರಲ್ಲಿ ನಗಣ್ಯವಾಗಿಬಿಡುತ್ತವೆ.
ಯಾವಾಗ ಇಬ್ಬರು ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಅತ್ಯುನ್ನತ ಶಿಖರವನ್ನು ಏರುತ್ತಾರೋ, ಆಗ ಅವರ ನಡುವೆ ‘ನಾನು’ ಎಂಬ ಭಾವನೆ ಹೆಮ್ಮರವಾಗಿ ಬೆಳೆದು ಬಿಡುತ್ತವೆ. ದೈತ್ಯ ಪ್ರತಿಭೆಗಳ ನಡುವೆ ಎಷ್ಟೇ ಗೌರವವಿದ್ದರೂ, ಅಂತರಾಳದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ಪರ್ಧೆ ಇದ್ದರಂತೂ ಅದು ಯಾವ ಕ್ಷಣದದರೂ ಸ್ಪೋಟಗೊಳ್ಳಲು ಒಂದು ಸಣ್ಣ ಕಿಡಿಗಾಗಿ ಕಾಯುತ್ತಿರುತ್ತದೆ.
ಹಾಗೆ ಒಬ್ಬರ ಯಶಸ್ಸು ಇನ್ನೊಬ್ಬರಿಗೆ ಸವಾಲಾಗಿ ಕಂಡಾಗ, ಸಣ್ಣ ವಿಷಯವೂ ದೊಡ್ಡ ಜಗಳಕ್ಕೆ ನಾಂದಿಯಾಗುತ್ತದೆ. ಇಂಥ ಜಗಳಗಳಲ್ಲಿ ಮನುಷ್ಯನ ರೋಷ ಮತ್ತು ಆವೇಶಗಳು ಪರಾಕಾಷ್ಠೆ ತಲುಪುತ್ತವೆ. ಜಗಳದ ನಂತರದ ದೀರ್ಘ ಮೌನವು ಮಾನವ ವರ್ತನೆಯ ಇನ್ನೊಂದು ಮುಖ. ಇಬ್ಬರು ದೈತ್ಯರ ಜಗಳವು ಮನುಷ್ಯ ಎಷ್ಟು ಬಲಿಷ್ಠನೋ ಅಷ್ಟೇ ದುರ್ಬಲ ಎಂಬುದನ್ನು ಸಾಬೀತು ಪಡಿಸುತ್ತದೆ.
ಈ ಮಾತನ್ನು ಹೇಳುವಾಗ ನನಗೆ ಬಲವಾಗಿ ಕಾಡುವುದು ಹತ್ತೊಂಬತ್ತನೇ ಶತಮಾನದ ರಷ್ಯನ್ ಸಾಹಿತ್ಯದ ಇಬ್ಬರು ಧ್ರುವತಾರೆಗಳಾದ ಲಿಯೋ ಟಾಲ್‌ಸ್ಟಾಯ್ ಮತ್ತು ಇವಾನ್ ತುರ್ಗೆನೆವ್ ನಡುವಿನ ಗಾಢ ಸ್ನೇಹ ಮತ್ತು ಕಿಚ್ಚಿನ ದ್ವೇಷ. ಇಬ್ಬರೂ ಆತ್ಮೀಯ ಸ್ನೇಹಿತರು. ವಯಸ್ಸಿನಲ್ಲಿ ತುರ್ಗೆ ನೆವ್ ಹತ್ತು ವರ್ಷ ದೊಡ್ಡವರು. ಟಾಲ್‌ಸ್ಟಾಯ್ ಸಾಹಿತ್ಯ ಲೋಕಕ್ಕೆ ಅಡಿಯಿಟ್ಟಾಗ ತುರ್ಗೆನೆವ್ ಆಗಲೇ ಸ್ಥಾಪಿತ ಲೇಖಕರು.
ಇದನ್ನೂ ಓದಿ: Vishweswhar Bhat Column: ಇಸ್ರೇಲಿಗೆ ಯುದ್ದದಲ್ಲಿ ಸೋಲುವ ಆಯ್ಕೆಯೇ ಇಲ್ಲ, ಸೋತರೆ ಅಸ್ತಿತ್ವವೇ ಇಲ್ಲ !
ತುರ್ಗೆನೆವ್ ಅವರು ಟಾಲ್‌ಸ್ಟಾಯ್ ಅವರ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಮಾರ್ಗದರ್ಶಕರಂತೆ ಬೆಂಬಲ ನೀಡಿದರು. ಇಬ್ಬರೂ ಪರಸ್ಪರ ಭೇಟಿಯಾದರೆ ವಾರಗಟ್ಟಲೆ ಬಿಟ್ಟಿರುತ್ತಿರಲಿಲ್ಲ. ಎಲ್ಲ ಸಾಹಿತಿಗಳನ್ನೂ ಟೀಕಿಸುತ್ತಾ, ತಮ್ಮ ಸಾಹಿತ್ಯದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಇವರಿಬ್ಬ ರನ್ನು ಒಟ್ಟಾಗಿ ಯಾರೂ ಎದುರು ಹಾಕಿಕೊಳ್ಳುತ್ತಿರಲಿಲ್ಲ. ಆ ದಿನಗಳು ಹೇಗಿದ್ದುವೆಂದರೆ, ಇವರಿಬ್ಬರು ಹೇಳಿದ್ದೇ ವೇದ ವಾಕ್ಯ.
ಇವರನ್ನು ಪ್ರಶ್ನಿಸುವ ತಾಕತ್ತು, ಛಾತಿ ಯಾರಿಗೂ ಇರಲಿಲ್ಲ. ಇಬ್ಬರೂ ಸಾಹಿತ್ಯಿಕವಾಗಿ ಗಟ್ಟಿ ಯಾಗಿದ್ದರಿಂದ, ಬೇರೆಯವರ ಮೇಲೆ ಸವಾರಿ ಮಾಡುತ್ತಿದ್ದರು. ಆದರೆ ಇವರಿಬ್ಬರ ಮೂಲ ಸ್ವಭಾವ ಗಳೇ ಬೇರೆಯಾಗಿದ್ದವು. ಒಬ್ಬ ಮಣ್ಣಿನ ವಾಸನೆಯನ್ನು ಅರಸುತ್ತಿದ್ದ ಋಷಿ ಸದೃಶ್ಯ ಅಕ್ಷರ ಮಾಂತ್ರಿಕನಾದರೆ, ಇನ್ನೊಬ್ಬ ಪಾಶ್ಚಾತ್ಯ ಸಂಸ್ಕೃತಿಯ ಲೇಪವಿದ್ದ ಅಭಿಜಾತ ಸಾಹಿತಿ.
ತುರ್ಗೆನೆವ್ ಹತ್ತೊಂಬತ್ತನೇ ಶತಮಾನದ ರಷ್ಯಾದ ಸಾಹಿತ್ಯ ಲೋಕದಲ್ಲಿ ಒಬ್ಬ ‘ಪರಿಷ್ಕೃತ’ ದೈತ್ಯ ಎನ್ನಬಹುದು. ಇವರು ರಷ್ಯಾದ ಸಾಂಪ್ರದಾಯಿಕ ಕಟ್ಟುಪಾಡುಗಳಿಗಿಂತ ಪಾಶ್ಚಾತ್ಯ ಸಂಸ್ಕೃತಿಯ ಉದಾರವಾದ ಮತ್ತು ಆಧುನಿಕತೆಯಿಂದ ಹೆಚ್ಚು ಪ್ರಭಾವಿತರಾಗಿದ್ದರು. ರಷ್ಯಾದ ಸಮಾಜವು ಪ್ರಗತಿ ಕಾಣಬೇಕಾದರೆ ಅದು ಯುರೋಪಿಯನ್ ಮಾದರಿಯನ್ನು, ಅಂದರೆ ಅಲ್ಲಿನ ವಿಜ್ಞಾನ, ಕಲೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂಬುದು ಅವರ ದೃಢವಾದ ವಾದವಾಗಿತ್ತು.
ಇದೇ ಕಾರಣಕ್ಕೆ ಅವರನ್ನು ’ವೆಸ್ಟರ್ನೈಜರ್’ (ಪಶ್ಚಿಮದವ) ಎಂದು ಕರೆಯಲಾಗುತ್ತಿತ್ತು. ತುರ್ಗೆನೆವ್ ಅವರ ವ್ಯಕ್ತಿತ್ವವು ಅವರ ಬರವಣಿಗೆಯಷ್ಟೇ ಮೃದು ಮತ್ತು ಸುಸಂಸ್ಕೃತವಾಗಿತ್ತು. ಒಬ್ಬ ಶ್ರೀಮಂತ ಭೂಮಾಲೀಕ ಕುಟುಂಬದಲ್ಲಿ ಜನಿಸಿದ ಇವರು, ತಮ್ಮ ಜೀವನದ ಹೆಚ್ಚಿನ ಭಾಗವನ್ನು ಯುರೋಪಿನ ವಿವಿಧ ನಗರಗಳಲ್ಲಿ ಕಳೆದರು. ಅವರ ಶೈಲಿಯು ಅತ್ಯಂತ ಸುಂದರ, ಭಾವನಾತ್ಮಕ ಮತ್ತು ಕಾವ್ಯಾತ್ಮಕವಾಗಿರುತ್ತಿತ್ತು.
ಸಮಾಜದ ಬದಲಾವಣೆಯನ್ನು ಅವರು ಕ್ರಾಂತಿಯ ಮೂಲಕವಲ್ಲ, ಬದಲಿಗೆ ತಿಳಿವಳಿಕೆ ಮತ್ತು ಸುಧಾರಣೆಯ ಮೂಲಕ ಬಯಸಿದ್ದರು. ಇದೇ ವಿಚಾರಧಾರೆಗಳು ಅವರನ್ನು ಕಡು ಸಂಪ್ರದಾಯ ವಾದಿ ಮತ್ತು ಮಣ್ಣಿನ ಸಂಸ್ಕೃತಿಯ ಪ್ರತಿಪಾದಕನಾದ ಟಾಲ್‌ಸ್ಟಾಯ್‌ನಿಂದ ಭಿನ್ನವಾಗಿಸಿದ್ದವು. ತುರ್ಗೆನೆವ್ ಕೇವಲ ಒಬ್ಬ ಲೇಖಕನಾಗಿರದೇ, ರಷ್ಯಾದ ಸಾಹಿತ್ಯವನ್ನು ಜಗತ್ತಿಗೆ ಪರಿಚಯಿಸಿದ ಒಬ್ಬ ‘ಸಾಂಸ್ಕೃತಿಕ ರಾಯಭಾರಿ’ಯಂತೆ ಬದುಕಿದರು.
ಟಾಲ್‌ಸ್ಟಾಯ್ ಕೇವಲ ಒಬ್ಬ ಬರಹಗಾರನಾಗಿರಲಿಲ್ಲ, ಅವರು ರಷ್ಯಾದ ಮಣ್ಣಿನ ಅಪ್ಪಟ ಚೇತನ ಮತ್ತು ತೀವ್ರಗಾಮಿ ವಿಚಾರಧಾರೆಗಳ ಪ್ರತಿಪಾದಕರಾಗಿದ್ದರು. ತುರ್ಗೆನೆವ್ ಪಾಶ್ಚಾತ್ಯ ಸಂಸ್ಕೃತಿ ಯಲ್ಲಿ ಉದ್ಧಾರವನ್ನು ಕಂಡರೆ, ಟಾಲ್'ಸ್ಟಾಯ್ ಅದಕ್ಕೆ ತದ್ವಿರುದ್ಧವಾಗಿ ರಷ್ಯಾದ ಹಳೆಯ ಸಂಪ್ರದಾಯಗಳು, ರೈತಾಪಿ ಜೀವನ ಮತ್ತು ಆಧ್ಯಾತ್ಮಿಕ ಬೇರುಗಳಲ್ಲಿ ಬದುಕಿನ ಅರ್ಥವನ್ನು ಹುಡುಕುತ್ತಿದ್ದರು.
ಟಾಲ್‌ಸ್ಟಾಯ್‌ಗೆ ಯುರೋಪಿನ ನಯ-ವಿನಯಗಳು, ಅಲ್ಲಿನ ವಿಜ್ಞಾನ ಮತ್ತು ಸೋಗಿನ ಶಿಷ್ಟಾ ಚಾರಗಳು ಕೇವಲ ಮೇಲ್ಪದರದ ಹೊಳಪಿನಂತೆ ಕಾಣುತ್ತಿದ್ದವು. ತುರ್ಗೆನೆವ್ ಅವರ ಅತಿಯಾದ ಪಾಶ್ಚಾತ್ಯ ವ್ಯಾಮೋಹವನ್ನು ಟಾಲ್ʼಸ್ಟಾಯ್ ‘ಆಧ್ಯಾತ್ಮಿಕ ಶೂನ್ಯತೆ’ ಎಂದು ಜರೆದಿದ್ದರು.
ಟಾಲ್‌ಸ್ಟಾಯ್ ಪ್ರಕಾರ, ಒಬ್ಬ ಮನುಷ್ಯ ತನ್ನ ಮಣ್ಣಿನ ಸಂಬಂಧವನ್ನು ಕಳೆದುಕೊಂಡು ಪರಕೀಯ ಸಂಸ್ಕೃತಿಯನ್ನು ಅಪ್ಪಿಕೊಂಡರೆ, ಅಲ್ಲಿ ಆತ್ಮಕ್ಕೆ ನೆಲೆ ಇರುವುದಿಲ್ಲ. ಟಾಲ್ʼಸ್ಟಾಯ್ ದೃಷ್ಟಿಯಲ್ಲಿ ತುರ್ಗೆನೆವ್ ಅವರ ಅತಿರಂಜಿತ ಸುಸಂಸ್ಕೃತ ನಡೆವಳಿಕೆಯು ಸತ್ಯಕ್ಕೆ ದೂರವಾದ ಬೂಟಾಟಿಕೆಯಾಗಿತ್ತು.
ರಷ್ಯಾದ ರೈತ ಸಮುದಾಯದ ನೈತಿಕ ಶಕ್ತಿ ಮತ್ತು ಪ್ರಾಮಾಣಿಕತೆಯೇ ರಾಷ್ಟ್ರದ ನಿಜವಾದ ಆಸ್ತಿ ಎಂದು ಅವರು ನಂಬಿದ್ದರು. ಈ ತೀವ್ರಗಾಮಿ ನಂಬಿಕೆಯು ಅವರನ್ನು ಎಷ್ಟರಮಟ್ಟಿಗೆ ಬದಲಾಯಿಸಿತೆಂದರೆ, ಅವರು ತಮ್ಮ ಶ್ರೀಮಂತಿಕೆಯನ್ನು ತ್ಯಜಿಸಿ ರೈತನಂತೆ ಬದುಕಲು ಆರಂಭಿಸಿದರು.
ತುರ್ಗೆನೆವ್ ಅವರು ಪಾಶ್ಚಾತ್ಯ ಸಂಸ್ಕೃತಿಯನ್ನು ಆರಾಧಿಸುವವರು ಮತ್ತು ಧರ್ಮದ ಬಗ್ಗೆ ಅಷ್ಟೊಂದು ಆಸಕ್ತಿ ಇಲ್ಲದವರು. ಆದರೆ ಟಾಲ್‌ಸ್ಟಾಯ್ ರಷ್ಯಾದ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಕಟ್ಟುನಿಟ್ಟಾದ ಆಧ್ಯಾತ್ಮಿಕ ಜೀವನದಲ್ಲಿ ನಂಬಿಕೆ ಇಟ್ಟವರು. ತುರ್ಗೆನೆವ್ ಅವರ ಯುರೋಪಿಯನ್ ವ್ಯಾಮೋಹವು ಟಾಲ್‌ಸ್ಟಾಯ್ ಅವರಿಗೆ ಯಾವಾಗಲೂ ಅಸಮಾಧಾನ ತರುತ್ತಿತ್ತು.
ಆದರೂ ಸ್ನೇಹ ಅವರನ್ನು ಕಟ್ಟಿ ಹಾಕಿತ್ತು. ಒಂದು ದಿನ ಟಾಲ್‌ಸ್ಟಾಯ್ ಮತ್ತು ತುರ್ಗೆನೆವ್ ಇಬ್ಬರೂ ತಮ್ಮ ಸ್ನೇಹಿತನಾದ ಕವಿ ಅಫನಾಸಿ ಫೆಟ್ ಅವರ ಮನೆಯಲ್ಲಿ ಬೆಳಗಿನ ಉಪಾಹಾರ ಕ್ಕೆಂದು ಪರಸ್ಪರ ಭೇಟಿಯಾದರು. ಅಲ್ಲಿ ತುರ್ಗೆನೆವ್ ಅವರು ತಮ್ಮ ಪತ್ನಿಯಲ್ಲದ, ಆದರೆ ಬೇರೊಬ್ಬ ಮಹಿಳೆಯಿಂದ ಹುಟ್ಟಿದ ಮಗಳ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಆಕೆ ಬಡವರ ಹರಿದ ಬಟ್ಟೆಗಳನ್ನು ಹೊಲಿಯುವ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದಾಳೆ ಎಂದು ತುರ್ಗೆನೆವ್ ಹೊಗಳುತ್ತಿದ್ದರು.
ಇದನ್ನು ಕೇಳಿದ ಟಾಲ್‌ಸ್ಟಾಯ್ ವ್ಯಂಗ್ಯವಾಗಿ, ‘ಒಬ್ಬ ಶ್ರೀಮಂತ ಹುಡುಗಿ ಅದ್ದೂರಿ ಬಟ್ಟೆಗಳನ್ನು ಧರಿಸಿ, ಫ್ಯಾಷನ್‌ಗಾಗಿ ಹರಿದ ಬಟ್ಟೆಗಳನ್ನು ಕೈಗೆತ್ತಿಕೊಳ್ಳುವುದು ಶುದ್ಧ ನಾಟಕ. ಇದು ಕೇವಲ ಸಾರ್ವಜನಿಕವಾಗಿ ಒಳ್ಳೆಯವಳು ಎಂದು ತೋರಿಸಿಕೊಳ್ಳುವ ಚಮತ್ಕಾರ. ಇದರಂಥ ಬೂಟಾಟಿಕೆ ಮತ್ತೊಂದಿಲ್ಲ. ಇಂಥ ಕೀಳುಮಟ್ಟದ ಕೆಲಸವನ್ನು ಮಾಡುವ ಬದಲು, ಸುಮ್ಮನಿರುವುದು ಲೇಸಲ್ಲವೇ? ಇದು ಸತ್ಯವಲ್ಲದ, ಕೃತಕವಾದ ಕೆಲಸ’ ಎಂದುಬಿಟ್ಟರು.
ತನ್ನ ಮಗಳ ಬಗ್ಗೆ ಮಾಡಿದ ಈ ಟೀಕೆ ತುರ್ಗೆನೆವ್ ಅವರನ್ನು ತೀವ್ರವಾಗಿ ಕೆರಳಿಸಿಬಿಟ್ಟಿತು. ಸದಾ ಸಂಯಮದಿಂದ ಇರುತ್ತಿದ್ದ ತುರ್ಗೆನೆವ್ ಅಂದು ಕುದಿಯುವ ಜ್ವಾಲಾಮುಖಿಯಾದರು. ‘ಒಂದು ವೇಳೆ ನೀನು ಮತ್ತೊಮ್ಮೆ ಈ ರೀತಿ ಮಾತನಾಡಿದರೆ ನಿನ್ನ ಮುಖದ ಮೇಲೆ ಗುದ್ದುತ್ತೇನೆ’ ಎಂದು ಬೆದರಿಕೆ ಹಾಕಿ ಹೊರನಡೆದರು. ಅಲ್ಲಿಗೆ ಗೆಳೆತನದ ಗಾಜು ಚೂರುಚೂರಾಗಿತ್ತು.
ನಂತರ ಇಬ್ಬರೂ ಬೀದಿ ರಂಪಾಟಕ್ಕೆ ನಿಂತುಬಿಟ್ಟರು. ತಾವು ರಷ್ಯಾದ ಮಹಾನ್ ಸಾಹಿತಿಗಳು ಎಂಬುದನ್ನೂ ಲೆಕ್ಕಿಸದೇ ತೀರಾ ಕೆಳಮಟ್ಟದ ಬೈಗುಳ, ನಿಂದನೆಗೆ ಮುಂದಾದರು. ಅಷ್ಟು ದಿನಗಳ ಅವರ ಸ್ನೇಹದಲ್ಲಿ ಆ ಪರಿ ದ್ವೇಷ ಎಲ್ಲಿ ಅಡಗಿತ್ತೋ ಏನೋ, ಒಬ್ಬರನ್ನೊಬ್ಬರು ಕೊಲ್ಲುವುದಾಗಿ ಹೇಳಿಬಿಟ್ಟರು.
ಅಷ್ಟಕ್ಕೇ ನಿಲ್ಲದ ಈ ಜಗಳ, ಮುಂದೆ ಟಾಲ್‌ಸ್ಟಾಯ್ ಅವರು ತುರ್ಗೆನೆವ್ ಅವರಿಗೆ ಪ್ರಾಣಾಂತಿಕ ಹೋರಾಟಕ್ಕೆ ಆಹ್ವಾನ ನೀಡುವವರೆಗೆ ಹೋಯಿತು. ನಂತರ ಈ ಇಬ್ಬರು ಮಹಾನ್ ಸಾಹಿತಿಗಳು ಪರಸ್ಪರ ಗುಂಡು ಹೊಡೆದು ಸಾಯಿಸುವ ಹಂತಕ್ಕೆ ತಲುಪಿದ್ದರು! ರಷ್ಯಾದ ಸಾಹಿತ್ಯ ಲೋಕವೇ ಬೆಚ್ಚಿಬಿದ್ದಿತ್ತು.
ಇಬ್ಬರು ಶ್ರೇಷ್ಠ ಲೇಖಕರು ಪರಸ್ಪರ ರಕ್ತ ಚೆಲ್ಲಲು ಮುಂದಾಗಿದ್ದು ಅಕ್ಷರಶಃ ಒಂದು ದುರಂತ ಕಥೆಯ ಮುನ್ನುಡಿಯಂತಿತ್ತು. ಅಷ್ಟು ದಿನಗಳ ಕಾಲ ‘ರಷ್ಯಾದ ಸಾಹಿತ್ಯ ಗಗನದ ಸೂರ್ಯರು’ ಎಂದು ಕರೆಯಿಸಿಕೊಂಡಿದ್ದ ಅವರಿಬ್ಬರು, ಎರಡು ಸೂರ್ಯರು ಒಂದೇ ಕಡೆ ಇರಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಮಾಡಿದರು.
ಅದೃಷ್ಟವಶಾತ್ ಆ ಮಾರಾಮಾರಿ ನಡೆಯಲಿಲ್ಲ. ಆದರೆ, ಇಬ್ಬರ ನಡುವೆ ದೊಡ್ಡ ಕಂದಕ ಸೃಷ್ಟಿ ಯಾಯಿತು. ಇದು ಹದಿನೇಳು ವರ್ಷಗಳ ಸುದೀರ್ಘ ಜಟಾಪಟಿಗೆ ಕಾರಣವಾಯಿತು. ಈ ಅವಧಿ ಯಲ್ಲಿ ಇಬ್ಬರೂ ಪರಸ್ಪರ ಮಾತಾಡಲಿಲ್ಲ. ಎದುರುಬದುರು ಆದರೂ ಮುಖಮುಖ ನೋಡಿಕೊಳ್ಳ ಲಿಲ್ಲ. ಈ ಅವಧಿಯಲ್ಲಿ ಟಾಲ್‌ಸ್ಟಾಯ್ ತಮ್ಮ ಮೇರುಕೃತಿಗಳಾದ ‘ವಾರ್ ಆಂಡ್ ಪೀಸ್’ ಮತ್ತು ‘ಅನ್ನಾ ಕರೆನಿನಾ’ ಬರೆದರು. ತುರ್ಗೆನೆವ್ ಅವರು ರಷ್ಯಾ ತೊರೆದು ಪ್ಯಾರಿಸ್‌ಗೆ ಹೋಗಿ ನೆಲೆಸಿದರು.
ಆದರೆ, ದೂರವಿದ್ದರೂ ಇಬ್ಬರೂ ಪರಸ್ಪರರ ಕೃತಿಗಳನ್ನು ಗುಟ್ಟಾಗಿ ಓದುತ್ತಿದ್ದರು ಮತ್ತು ಒಬ್ಬರ ಪ್ರತಿಭೆಯ ಬಗ್ಗೆ ಇನ್ನೊಬ್ಬರು ಗೌರವಭಾವ ವ್ಯಕ್ತಪಡಿಸುತ್ತಿದ್ದರು. ಆದರೆ ಅವರಿಬ್ಬರ ಮಧ್ಯೆ ಎದ್ದಿದ್ದ ಅಹಂ ಎಂಬ ಗೋಡೆ ಮಾತ್ರ ಕುಸಿಯಲಿಲ್ಲ. ಮನುಷ್ಯನ ಅಹಂ ಎಂಬುದು ಎಂಥ ವಿಚಿತ್ರ ಸಂಕೋಲೆ ಎಂದರೆ, ಎದುರಿಗಿರುವ ಗೆಳೆಯನ ಪ್ರೀತಿ ಕಾಣಿಸುವುದಕ್ಕಿಂತ ತನ್ನೊಳಗಿನ ನಾನು ದೊಡ್ಡದಾಗಿ ಕಾಣುತ್ತದೆ. ಈ ಹದಿನೇಳು ವರ್ಷಗಳು ರಷ್ಯನ್ ಸಾಹಿತ್ಯದ ಇತಿಹಾಸದಲ್ಲಿ ಒಂದು ವಿಚಿತ್ರ ಮೌನದ ಕಾಲಘಟ್ಟ.
1878ರ ಸುಮಾರಿಗೆ ಟಾಲ್‌ಸ್ಟಾಯ್ ಜೀವನದಲ್ಲಿ ಒಂದು ಮಹತ್ತರ ಆಂತರಿಕ ಕ್ರಾಂತಿ ಸಂಭವಿಸಿತು. ಲೌಕಿಕ ಯಶಸ್ಸು, ಕೀರ್ತಿ ಮತ್ತು ಸಂಪತ್ತಿನ ಶಿಖರದಲ್ಲಿದ್ದರೂ ಅವರ ಮನಸ್ಸು ಏಕಾಂತ, ಶಾಂತಿ ಗಾಗಿ ಹಂಬಲಿಸುತ್ತಿತ್ತು. ಅವರು ಆಧ್ಯಾತ್ಮಿಕ ಅನ್ವೇಷಣೆಯತ್ತ ಹೊರಳಿದರು. ಈ ಹಂತದಲ್ಲಿ ಅವರಿಗೆ ಅರಿವಾಗಿದ್ದು ದ್ವೇಷ ಮತ್ತು ಅಹಂಕಾರಗಳು ವ್ಯಕ್ತಿತ್ವ ವಿಕಸನ ಮತ್ತು ಆತ್ಮದ ಬೆಳವಣಿಗೆಗೆ ಅಡ್ಡಿಯಾಗುತ್ತವೆ ಎಂಬುದು. ಈ ಪಶ್ಚಾತ್ತಾಪದ ಭಾಗವಾಗಿಯೇ ಅವರು ತಮ್ಮ ಹಳೆಯ ವೈರಿ ತುರ್ಗೆನೆವ್ ಅವರೊಂದಿಗಿನ ದೀರ್ಘ ಮೌನವನ್ನು ಮುರಿಯಲು ನಿರ್ಧರಿಸಿದರು.
ಒಂದು ಬೆಳಗ್ಗೆ ತಮ್ಮ ಎಲ್ಲ ಕಹಿಭಾವನೆಗಳನ್ನು ಗಂಟುಮೂಟೆ ಕಟ್ಟಿ, ಮತ್ತೊಮ್ಮೆ ಸ್ನೇಹ ಹಸ್ತ ಚಾಚಲು ಬಯಸಿ ಪತ್ರ ಬರೆಯಲು ಕುಳಿತುಕೊಂಡರು. ಆ ಪತ್ರದಲ್ಲಿ ಟಾಲ್‌ಸ್ಟಾಯ್ ಯಾವುದೇ ಮುಚ್ಚುಮರೆಯಿಲ್ಲದೇ, ‘ನಮ್ಮ ನಡುವಿನ ಹಳೆಯ ಕಹಿ ಘಟನೆಗಳನ್ನು ಮರೆತು ಬಿಡೋಣ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಬೇಡಿಕೊಂಡರು.
ಅತ್ತ ಪ್ಯಾರಿಸ್‌ನಲ್ಲಿದ್ದ ತುರ್ಗೆನೆವ್ ಈ ಪತ್ರವನ್ನು ಕಂಡು ಆಶ್ಚರ್ಯಚಕಿತರಾದರು. ಆ ಪತ್ರವನ್ನು ಅವರು ನಿರೀಕ್ಷಿಸಿರಲೇ ಇಲ್ಲ. ಅಷ್ಟೇ ಸಂತೋಷದಿಂದ ತುರ್ಗೆನೆವ್ ಅದನ್ನು ಸ್ವೀಕರಿಸಿದರು. ಹದಿನೇಳು ವರ್ಷಗಳ ಕಾಲ ಹೆಪ್ಪುಗಟ್ಟಿದ್ದ ದ್ವೇಷದ ಮಂಜುಗಡ್ಡೆ ಕೇವಲ ಒಂದು ಪತ್ರದಿಂದ ಕರಗಿ ನೀರಾಯಿತು. ಇಡೀ ರಷ್ಯನ್ ಸಾರಸ್ವತಲೋಕ ಇದನ್ನು ಸ್ವಾಗತಿಸಿತು.
1883ರಲ್ಲಿ ತುರ್ಗೆನೆವ್ ಅವರು ಪ್ಯಾರಿಸ್‌ನಲ್ಲಿ ಬೆನ್ನುಮೂಳೆಯ ಕ್ಯಾನ್ಸರ್‌ನಿಂದಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾದರು. ಸಾವಿನ ಕರೆ ಸಮೀಪಿಸುತ್ತಿದೆ ಎಂಬುದು ಅವರಿಗೆ ತಿಳಿದಿತ್ತು. ಅಂಥ ನೋವಿನ ಕ್ಷಣದಲ್ಲೂ ಅವರ ಮನಸ್ಸಿನಲ್ಲಿದ್ದುದು ತಮ್ಮ ಗೆಳೆಯ ಮತ್ತು ರಷ್ಯಾದ ಸಾಹಿತ್ಯದ ಭವಿಷ್ಯ. ಆ ಸಂದರ್ಭದಲ್ಲಿ ಅವರು ಟಾಲ್‌ಸ್ಟಾಯ್‌ಗೆ ಒಂದು ಪತ್ರ ಬರೆದರು - ‘ರಷ್ಯಾದ ಮಣ್ಣಿನ ಮಹಾನ್ ಲೇಖಕರೇ, ನನ್ನ ಈ ಕೊನೆಯ ವಿನಂತಿಯನ್ನು ಆಲಿಸಿ. ಸಾಹಿತ್ಯ ಕ್ಷೇತ್ರಕ್ಕೆ ಮರಳಿ ಬನ್ನಿ.
ನಿಮ್ಮ ಲೇಖನಿಯನ್ನು ಕೈಬಿಡಬೇಡಿ. ಆ ಶಕ್ತಿ ನಿಮಗೆ ದೇವರು ಕೊಟ್ಟ ಮಹಾನ್ ವರ. ಈ ಮನುಕುಲವನ್ನು ತಟ್ಟುವಂಥ ಸಾಹಿತ್ಯ ರಚಿಸಿದ್ದೀರಿ. ನಿಮ್ಮ ಲೇಖನಿ ಸೋಲಬಾರದು. ಅಕ್ಷರ ಲೋಕಕ್ಕೆ ನೀವು ಬೇಕು.’ ಈ ಪತ್ರವು ಕೇವಲ ಕಾಗದದ ತುಣುಕಾಗಿರಲಿಲ್ಲ, ಅದು ಒಬ್ಬ ಶ್ರೇಷ್ಠ ಸಾಹಿತಿ ಇನ್ನೊಬ್ಬ ಮಹಾನ್ ಚೇತನಕ್ಕೆ ಸಲ್ಲಿಸಿದ ಸಾಷ್ಟಾಂಗ ನಮನವಾಗಿತ್ತು.
ಆ ಸಮಯದಲ್ಲಿ ಟಾಲ್‌ಸ್ಟಾಯ್ ಬರವಣಿಗೆಯನ್ನು ಬಿಟ್ಟಿದ್ದರು. ಕೇವಲ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ತೊಡಗಿದ್ದರು. ಒಬ್ಬ ಕಲಾವಿದ ತನ್ನ ವೈಯಕ್ತಿಕ ಭಿನ್ನಾಭಿಪ್ರಾಯ ಗಳನ್ನು ಬದಿಗಿಟ್ಟು, ಇನ್ನೊಬ್ಬನ ಪ್ರತಿಭೆಯನ್ನು ಗೌರವಿಸಿ ಅದನ್ನು ಜಗತ್ತಿಗಾಗಿ ಉಳಿಸಿಕೊಡ ಬೇಕೆಂದು ಕೇಳಿಕೊಂಡಿದ್ದು ನಿಜಕ್ಕೂ ಅನನ್ಯ.
ಆ ಇಬ್ಬರು ಮಹಾನ್ ಸಾಹಿತಿಗಳ ಆ ಎರಡು ಪತ್ರಗಳು ವಿಶ್ವ ಸಾಹಿತ್ಯ ಚರಿತ್ರೆಯಲ್ಲಿ ಅಜರಾಮರ ವಾಗಿವೆ. 1883ರಲ್ಲಿ ತುರ್ಗೆನೆವ್ ತೀರಿಕೊಂಡಾಗ ಟಾಲ್‌ಸ್ಟಾಯ್ ತೀವ್ರವಾಗಿ ದುಃಖಿತರಾದರು ಮತ್ತು ಅವರನ್ನು ‘ನನ್ನ ಅತ್ಯಂತ ಪ್ರೀತಿಯ ಗೆಳೆಯ’ ಎಂದು ಕರೆದರು.
ಸೂಕ್ಷ್ಮವಾಗಿ ಅವಲೋಕಿಸಿದರೆ, ಈ ಇಬ್ಬರು ದೈತ್ಯ ಸಾಹಿತಿಗಳ ಜಗಳವು ಕೇವಲ ವ್ಯಕ್ತಿಗಳ ನಡುವಿನ ಸಂಘರ್ಷವಾಗಿರಲಿಲ್ಲ. ಅದು ಟಾಲ್‌ಸ್ಟಾಯ್ ಅವರ ಉಗ್ರ ನೈತಿಕತೆ ಮತ್ತು ತುರ್ಗೆನೆವ್ ಅವರ ಉದಾರವಾದಿ ದೃಷ್ಟಿಕೋನದ ನಡುವಿನ ಘರ್ಷಣೆಯಾಗಿತ್ತು. ಟಾಲ್‌ಸ್ಟಾಯ್ ಅವರಲ್ಲಿ ಪ್ರೀತಿ ಮತ್ತು ದ್ವೇಷದ ನಡುವೆ ಒಂದು ಸಣ್ಣ ಗೆರೆ ಮಾತ್ರ ಇತ್ತು. ಈ ಪ್ರಸಂಗವು ಸಾಹಿತ್ಯ ಲೋಕದ ಇತಿಹಾಸದಲ್ಲಿ ‘ಒಂದೇ ಒರೆಯೊಳಗೆ ಎರಡು ಕತ್ತಿಗಳು ಇರಲಾರವು’ ಎಂಬ ಮಾತಿಗೆ ಸಾಕ್ಷಿ ಯಾಯಿತು.
ಎಷ್ಟೇ ದೊಡ್ಡ ಪ್ರತಿಭಾವಂತರಾದರೂ ಅವರು ಮನುಷ್ಯ ಸಹಜವಾದ ಅಸೂಯೆ ಮತ್ತು ಸಿಟ್ಟಿಗೆ ಹೊರತಲ್ಲ. ಜಗಳವಾಡುವುದು ಮನುಷ್ಯ ಗುಣ, ಆದರೆ ಕ್ಷಮಿಸುವುದು ದೈವತ್ವ. ಅಂತಿಮವಾಗಿ ಸಾಹಿತ್ಯದ ಮೇಲಿನ ಪ್ರೇಮವೇ ಇಬ್ಬರನ್ನೂ ಮತ್ತೆ ಒಂದುಗೂಡಿಸಿತು.