ಸಂಪಾದಕರ ಸದ್ಯಶೋಧನೆ
ಜಪಾನಿನಲ್ಲಿ ಜನಪ್ರಿಯವಾಗಿರುವ ’ಜಪಾನ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಪ್ರಸಂಗ ವಿದು. ಒಮ್ಮೆ ಆ ಪತ್ರಿಕೆಯು ತನ್ನ ಓದುಗರಿಗೆ, ’ಜಪಾನಿನಲ್ಲಿ ನಿಮಗೆ ಮುಜುಗರಕ್ಕೆ ಕಾರಣವಾದ ಘಟನೆ ಯಾವುದು?’ ಎಂಬ ಪ್ರಶ್ನೆ ಕೇಳಿತ್ತು. ಅದು ಕಾಲ್ಪನಿಕವಾಗಿರದೇ, ನೈಜ ಪ್ರಸಂಗವಾಗಿರಬೇಕು’ ಎಂದು ಹೇಳಿತ್ತು. ಸಾವಿರಾರು ಓದುಗರು ತಮ್ಮ ಅನಿಸಿಕೆಗಳನ್ನು ಕಳಿಸಿದರು. ಆ ಪೈಕಿ ಒಬ್ಬರು ಹಂಚಿಕೊಂಡ ಒಂದು ಪ್ರಸಂಗ ಹೀಗಿದೆ. ಓದುಗರ ಹೆಸರು ಇಲ್ಲಿ ಮುಖ್ಯವಲ್ಲ. ಅದು ಸೆಪ್ಟೆಂಬರ್ 2014 ರ ದಿನ. ನಾನು ಟೋಕಿಯೋಕ್ಕೆ ಭೇಟಿ ನೀಡಿದಾಗ ನಡೆದ ಒಂದು ತಮಾಷೆಯ ಘಟನೆ. ನಾನು, ನನ್ನ ಸ್ನೇಹಿತ ಮತ್ತು ಆತನ ಗರ್ಲ್ ಫ್ರೆಂಡ್ ಟೋಕಿಯೋ ಟವರ್‌ನಲ್ಲಿರುವ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದೆವು.
ನಾವು ಮೂವರೂ ನಮಗೆ ಬೇಕಾದ ಫುಡ್ ಐಟಂಮ್‌ಗಳನ್ನು ಆರ್ಡರ್ ಮಾಡಿದೆವು. ವೇಟರ್ ಒಂದೊಂದೇ ಐಟಮ್ಮುಗಳನ್ನು ತಂದಿಡಲಾರಂಭಿಸಿದ. ನಾವು ಮೂವರೂ ಸಂತೋಷದಿಂದ ಆಹಾರ ಸೇವಿಸಲಾರಂಭಿಸಿದೆವು. ಈ ಮಧ್ಯೆ, ನನ್ನ ಸ್ನೇಹಿತ, ’ದಯವಿಟ್ಟು ಕ್ಷಮಿಸಿ, ನಾನು ರೆಸ್ಟ್ ರೂಮಿಗೆ ಹೋಗಿ ಬರುತ್ತೇನೆ, ನೀವು ಊಟ ಮುಂದುವರಿಸಿ’ ಎಂದು ಹೇಳಿ ಎದ್ದು ಹೋದ.
ನಾನು ಮತ್ತು ನನ್ನ ಸ್ನೇಹಿತನ ಜಪಾನಿ ಗರ್ಲ್ ಫ್ರೆಂಡ್ ಇಬ್ಬರೇ ಇದ್ದೆವು. ನಾನು ಆಕೆಯನ್ನು ಭೇಟಿ ಯಾಗಿದ್ದೇ ಅದೇ ಮೊದಲು. ಹೀಗಾಗಿ ನನಗೆ ಅವಳ ಹೆಚ್ಚಿನ ಪರಿಚಯವಿರಲಿಲ್ಲ. ನಾವಿಬ್ಬರೂ ಊಟ ಸೇವಿಸದೇ, ಆತ ಬರುವುದನ್ನೇ ಕಾಯುತ್ತಾ ಇದ್ದೆವು. ಸುಮಾರು ಹತ್ತು ನಿಮಿಷವಾದರೂ ಆತ ಬರಲಿಲ್ಲ. ನಮ್ಮಿಬ್ಬರ ನಡುವಿನ ಮಾತುಕತೆ ಖಾಲಿಯಾಗಿತ್ತು.
ಇದನ್ನೂ ಓದಿ: Vishweshwar Bhat Column: ಸುಶಿ ಕುರಿತು ಒಂದಿಷ್ಟು...
ಅಪರಿಚಿತ ಯುವತಿ ಜತೆ ಮಾತಾಡುವುದೆಂದರೆ ನನಗೆ ವಿಪರೀತ ಸಂಕೋಚ ಬೇರೆ. ಇನ್ನೇನು ಬರಬಹುದು ಎಂದು ನಾವು ಕಾದರೂ ಆತನ ಸುಳಿವೇ ಇಲ್ಲ. ಇಪ್ಪತ್ತು ನಿಮಿಷವಾದರೂ ಆತನ ಪತ್ತೆಯೇ ಇಲ್ಲ. ಆತನಿಗೆ ಕರೆ ಮಾಡಿ ವಿಚಾರಿಸೋಣ ಅಂದ್ರೆ ಆತ ತನ್ನ ಮೊಬೈಲನ್ನು ಟೇಬಲ್ ಮೇಲೆಯೇ ಬಿಟ್ಟು ಹೋಗಿದ್ದ.
ಆತ ಹೋಗಿ ಅರ್ಧ ಗಂಟೆ ಆಗುತ್ತಾ ಬಂದಾಗ, ನಮ್ಮಿಬ್ಬರಿಗೂ ಆತಂಕವಾಯಿತು. ಪುಣ್ಯಾತ್ಮ ಎಲ್ಲಿಗೆ ಹೋಗಿರಬಹುದು, ಏನಾಗಿರಬಹುದು ಎಂದು ಕಳವಳಕ್ಕೀಡಾದೆವು. ಏನಾದರೂ ಕೆಟ್ಟದಾಗಿರ ಬಹುದು ಎಂದು ನನ್ನ ಮನಸ್ಸು ಯೋಚಿಸುತ್ತಿತ್ತು. ನನ್ನ ಸ್ನೇಹಿತನ ಗರ್ಲ್ ಫ್ರೆಂಡಿಗೆ, ’ನೀನು ಇಲ್ಲಿಯೇ ಇರು, ನಾನು ಹೋಗಿ ವಿಚಾರಿಸಿಕೊಂಡು ಬರುತ್ತೇನೆ’ ಎಂದು ಹೇಳಿ ರೆಸ್ಟ್ ರೂಮಿನ ಕಡೆ ಧಾವಿಸಿದೆ. ಆ ರೆಸ್ಟೋರೆಂಟಿನಲ್ಲಿ ಒಂದೇ ರೆಸ್ಟ್ ರೂಮ್ ಇತ್ತು.
ಅದು ಬಾಗಿಲು ಮುಚ್ಚಿದ್ದರಿಂದ, ಒಳಗೆ ಹೋಗಲು ಸಾಧ್ಯವಾಗದೇ ಅದರ ಮುಂದೆ ಹತ್ತಾರು ಜನ ನಿಂತಿದ್ದರು. ಏನಾಗಿರಬಹುದು ಎಂದು ನನ್ನ ಮನಸ್ಸು ಯೋಚಿಸುತ್ತಿತ್ತು. ನಾನು ಬಾಗಿಲು ಬಡಿ ಯುತ್ತ ನನ್ನ ಸ್ನೇಹಿತನ ಹೆಸರನ್ನು ಕೂಗಿದೆ. ಆತ ಪ್ರತಿಕ್ರಿಯಿಸಿದ. ನನಗೆ ಹೋದ ಜೀವ ಬಂದಂತಾ ಯಿತು. ’ಏನಾಯಿತು ನಿನಗೆ? ಏನು ಸಮಸ್ಯೆ?’ ಎಂದು ಕೂಗಿದೆ.
’ನಾನು ಅರ್ಧ ಗಂಟೆಯಿಂದ ಬಾಗಿಲು ತೆರೆದು ಹೊರಬರಲು ಪ್ರಯತ್ನಿಸುತ್ತಿದ್ದೇನೆ, ಆದರೆ ಅದು ಮುಚ್ಚಿಹೋಗಿದೆ’ ಎಂದು ಆತ ಉದ್ವೇಗದಲ್ಲಿ ಹೇಳಿದ. ನಾನು ಹೊರಗಿನಿಂದ ಪ್ರಯತ್ನಿಸಿದೆ, ಆದರೆ ಬಾಗಿಲು ತೆರೆಯಲು (ಅನ್ಲಾಕ್) ಸಾಧ್ಯವಾಗಲಿಲ್ಲ. ನಾನು ವೇಟರ್‌ನನ್ನು ಕರೆದೆ. ಆತನೂ ಪ್ರಯತ್ನಿ ಸಿದ. ಪ್ರಯೋಜನ ಆಗಲಿಲ್ಲ. ಆತ ಮ್ಯಾನೇಜರನನ್ನು ಕರೆದ. ಈ ಮಧ್ಯೆ ಜನ ಒಳ ಹೋಗಲು ಚಡಪಡಿಸುತ್ತಿದ್ದರು. ಮ್ಯಾನೇಜರ್ ಬಾಗಿಲಿನ ಬಳಿ ಬಂದು ಅದನ್ನು ತೆರೆಯಲು ಪ್ರಯತ್ನಿಸಿದ.
ಅವನಿಂದಲೂ ಸಾಧ್ಯವಾಗಲಿಲ್ಲ. ಕಂಟ್ರೋಲ್ ರೂಮಿಗೆ ಫೋನ್ ಮಾಡುವಂತೆ ಮ್ಯಾನೇಜರ್ ಸೂಚಿಸಿದ. ಆಗ ಅಲ್ಲಿಗೆ ಕಟ್ಟಡ ನಿರ್ವಹಣಾ ವಿಭಾಗದ ಮುಖ್ಯಸ್ಥ ಬಂದ. ಆತ ಬಂದವನೇ ಬಾಗಿಲ ನ್ನು ಪರಿಶೀಲಿಸಿದ. ಸರಿಯಾಗಿತ್ತು. ’ನೀವು ಕ್ಷೇಮವಾಗಿದ್ದೀರಾ?’ ಎಂದು ಒಳಗಿದ್ದ ಸ್ನೇಹಿತನಿಗೆ ಕೇಳಿದ. ಆತ ’ಕಳೆದ ಒಂದು ಗಂಟೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ, ಆದರೆ ಆಗುತ್ತಿಲ್ಲ’ ಎಂದ. ಆಗ ಕಟ್ಟಡ ನಿರ್ವಹಣಾ ವಿಭಾಗದ ಮುಖ್ಯಸ್ಥ ’ಮೊದಲು ಫ್ಲಶ್ ಮಾಡಿ. ಬಾಗಿಲು ಓಪನ್ ಆಗುತ್ತೆ’ ಎಂದ. ಹಾಗೆ ಹೇಳಿದ್ದೇ ತಡ, ಒಳಗಿದ್ದ ನನ್ನ ಸ್ನೇಹಿತ ಫ್ಲಶ್ ಮಾಡಿದ ಸದ್ದು ಕೇಳಿಸಿತು.
ನಿಧಾನವಾಗಿ ಬಾಗಿಲು ತೆರೆಯಿತು. ಆಗ ಅಲ್ಲಿ ರೆಸ್ಟೋರೆಂಟಿನಲ್ಲಿದ್ದವರೆಲ್ಲ ಜಮಾಯಿಸಿದ್ದರು. ಅವರನ್ನು ನೋಡುತ್ತಾ ನನ್ನ ಸ್ನೇಹಿತ ಸಂಕೋಚದಿಂದ ತಲೆ ತಗ್ಗಿಸಿದರೆ, ಉಳಿದವರೆಲ್ಲ ಜೋರಾಗಿ ನಗುತ್ತಿದ್ದರು. ಫ್ಲಶ್ ಮಾಡದಿದ್ದರೆ ಬಾಗಿಲು ಓಪನ್ ಆಗದ ತಂತ್ರಜ್ಞಾನ ಗೊತ್ತಿಲ್ಲದ ನನ್ನ ಸ್ನೇಹಿತ ಅಷ್ಟು ಹೊತ್ತು ಆತಂಕವನ್ನುಂಟು ಮಾಡಿದ್ದ.