ನೂರೆಂಟು ವಿಶ್ವ
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನನ್ನ ಆಪ್ತ ಸ್ನೇಹಿತರ ಮನೆಗೆ ಹೋಗಬೇಕಿತ್ತು. ನನ್ನ ಡ್ರೈವರ್‌ಗೆ ಅವರ ಮನೆ ಗೊತ್ತಿತ್ತು. ಅಲ್ಲಿಗೆ ಹೋಗಬೇಕೆಂದಾಗ, ಆತ ನೇರವಾಗಿ ಅವರ ಮನೆ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸುತ್ತಿದ್ದ. ಅಂದು ಭಾನುವಾರ, ಡ್ರೈವರ್‌ಗೆ ರಜಾ. ನಾನು ಅಲ್ಲಿಗೆ ಹೋಗಲೇಬೇಕಾದ ಕೆಲಸ ಬಂತು. ಅವರ ಮನೆಗೆ ನಾನೇ ಡ್ರೈವ್ ಮಾಡಿಕೊಂಡು ಹೊರಟೆ. ಸಾಯಂಕಾಲ ಆರು ಗಂಟೆಗೆ ಬರುತ್ತೇನೆಂದು ಹೇಳಿದ್ದೆ. ಆ ಸ್ನೇಹಿತರು ಸಮಯದ ವಿಷಯದಲ್ಲಿ ಯಮನ ಅಪ್ಪ!
ಸ್ನೇಹಿತರ ಮನೆಯ ಹತ್ತಿರ ಬಂದು ಅಕ್ಕ-ಪಕ್ಕದ ಬೀದಿಯಲ್ಲೇ ಸುತ್ತಾಡಿದೆ. ಮನೆ ಸಿಗುತ್ತಿಲ್ಲ. ಸ್ನೇಹಿತರ ಸೆಕ್ರೆಟರಿಗೆ ಫೋನ್ ಮಾಡಿದೆ. ಆಕೆ ಹೇಳಿದಳು. ‘ಮೆಟ್ರೋ ಲೈನ್ ಕ್ರಾಸ್ ಮಾಡಿದರೆ, ನಲವತ್ತನೇ ಕ್ರಾಸ್ ಬರುತ್ತದೆ. ಅಲ್ಲಿಯೇ ಆರ್‌ವಿ ಸ್ಟೇಶನ್ ಸಿಗುತ್ತದೆ. ಆನಂತರ ಎಂಟನೇ ಮೇನ್ ನಲ್ಲಿ ಥರ್ಡ್ ರೈಟ್ ತಗೊಳ್ಳಿ. ಸುಮಾರು ಮುನ್ನೂರು ಮೀಟರ್ ಹೋದರೆ ನಲವತ್ನಾಲ್ಕನೆ ಕ್ರಾಸ್‌ನಲ್ಲಿ ಐದನೇ ಲೆಫ್ಟ್ ತಗೊಂಡ್ರೆ ಎಡಕ್ಕೆ ಆರನೇ ಮನೆ. ಮನೆ ಮುಂದೆ ಮೂರು-ನಾಲ್ಕು ಕಾರು ನಿಂತಿರುತ್ತವೆ. ಸೆಕ್ಯುರಿಟಿ ಇರ‍್ತಾನೆ ನಿಮಗೆ ಸುಲಭವಾಗಿ ಗೊತ್ತಾಗುತ್ತೆ.’
ಆಕೆ ಹೇಳಿದ್ದು ನಿಮಗೇನಾದರೂ ಅರ್ಥವಾಯಿತಾ? ನನಗೆ ತಲೆಕೆಟ್ಟು ಹೋಯಿತು. ಇನ್ನೊಂದು ಸಲ ಹೇಳಿ ಅಂದೆ. ಆಕೆ ಎರಡೆರಡು ಸಲ ಹೇಳಿದಳು. ನನಗೆ ಮತ್ತಷ್ಟು ಗೊಂದಲವಾಯಿತು. ‘ಮೇಡಂ, ಏನಾದರೂ ಲ್ಯಾಂಡ್ ಮಾರ್ಕ್ ಗೊತ್ತಿದ್ದರೆ ಹೇಳಿ’ ಎಂದೆ. ‘ಎಂಟನೇ ಮೇನ್‌ನಲ್ಲಿ ಥರ್ಡ್ ರೈಟ್ ತಗೋತೀರಲ್ಲ, ಅದಕ್ಕಿಂತ ಮೊದಲು ಟು ಎ ಕ್ರಾಸ್ ರೋಡ್ ಸಿಗುತ್ತಲ್ಲ, ಅಲ್ಲಿ ಒಂದು ರೋಡ್ ಹಂಪ್ ಇದೆ. ಅಲ್ಲಿಂದ ಹತ್ತು ಮೀಟರ್‌ನಲ್ಲಿ ವಾಟರ್ ಪೈಪ್‌ಗಾಗಿ ರಸ್ತೆ ಅಗೆದಿದ್ದಾರೆ.
ಇದನ್ನೂ ಓದಿ: Vishweshwar Bhat Column: ಲೇಪಿಸ್ ಲಜುಲಿ ಕಥೆ
ಆನಂತರ ಇಪ್ಪತ್ತು ಮೀಟರ್ ಹೋದರೆ ಥರ್ಡ್ ರೈಟ್ ತಗೋವಾಗ ಪಕ್ಕದಲ್ಲಿ ಶಿವಶಕ್ತಿ ಮಿಲ್ಕ್ ಬೂತ್ ಇದೆ. ಆದರೆ ಶಿವಶಕ್ತಿ ಎಂದು ಬರೆದಿರುವುದು ಅಳಿಸಿ ಹೋಗಿದೆ. ಹಾಗೇ ಅಲ್ಲಿ ಕೇಳಿ, ನಮ್ಮ ಬಾಸ್ ಹೆಸರು ಹೇಳಿ, ಹೇಳ್ತಾರೆ’ ಅಂದಳು. ತಲೆ ಧಿಮ್ಮೆಂದಿತು.
ನಾನು ಎಲ್ಲಿದ್ದೇನೆ ಎಂಬುದನ್ನು ಅವಳಿಗೆ ಹೇಳಿಲ್ಲ, ಅವಳೂ ಕೇಳಲಿಲ್ಲ. ಪುನಃ ಫೋನ್ ಮಾಡಿದೆ. ‘ಮೇಡಂ, ನಾನು ಈಗ ಆರನೇ ಮೇನ್ ಮೂವತ್ತೊಂದನೇ ಬಿ ಕ್ರಾಸ್‌ನಲ್ಲಿ ಇದ್ದೇನೆ. ಇಲ್ಲಿಂದ ಮುಂದೆ ಹೇಗೆ ಹೋಗಬೇಕು’ ಎಂದು ಕೇಳಿದೆ. ಆಕೆ ‘ಓ ಅಲ್ಲಿದ್ದಿರಾ? ಈಗ ಹೇಳ್ತೀನಿ ಕೇಳಿ, ಆರನೇ ಮೇನ್‌ನಲ್ಲಿ ಹಾಗೇ ಸ್ವಲ್ಪ ಹಿಂದಕ್ಕೆ ಬಂದರೆ ಒಂದು ಸರ್ವೀಸ್ ರೋಡ್ ಸಿಗುತ್ತದೆ.
ಅದೇ ರೋಡ್‌ನಲ್ಲಿ ಇನ್ನೂರು ಮೀಟರ್ ಹೋದರೆ ಎಂಟನೇ ಮೇನ್ ಸಿಗುತ್ತದೆ. ಅಲ್ಲಿ ಆರ್‌ವಿ ಸ್ಟೇಶನ್‌ನಿಂದ ಬಂದ ರೋಡ್ ಕನೆಕ್ಟ್ ಆಗುತ್ತೆ. ಸ್ವಲ್ಪ ಮುಂದೆ ಬಂದ್ರೆ ಜಯನಗರ ಆಟದ ಮೈದಾನದಿಂದ ಬಂದ ರಸ್ತೆಯಲ್ಲಿ ಕೂಡುತ್ತೆ. ಅದು ಇಪ್ಪತ್ತೊಂಬತ್ತನೇ ಕ್ರಾಸ್ ರೋಡ್. ಅಲ್ಲೊಂದು ಪೆಟ್ಟಿಗೆ ಅಂಗಡಿ ಇದೆ. ಅದರ ಎಡಕ್ಕೆ ತಿರುಗಿ ಸೀದಾ ಹೋಗಿ’ ಎಂದಳು. ನಾನೇನಾದರೂ ಚಕ್ರವ್ಯೂಹದೊಳಗೆ ಹೋಗುತ್ತಿದ್ದೆನಾ ಎಂದೆನಿಸಿತು.

ಒಂದು ನಿಮಿಷ ಕಾರು ನಿಲ್ಲಿಸಿಕೊಂಡೆ. ಅವಳು ಹೇಳಿದಂತೆ ಹೋಗಲು ಸಾಧ್ಯವೇ ಇರಲಿಲ್ಲ. ತಲೆ ಚಿಟ್ಟು ಹಿಡಿದು ಹೋಗುವಂತೆ ವಿವರಿಸಿದ್ದಳು. ‘ಮೇಡಂ, ಒಂದು ಕೆಲಸ ಮಾಡಿ, ಅವರ ಮನೆಯ ಲೊಕೇಶನ್ ವಾಟ್ಸಾಪ್ ಮಾಡಲು ಸಾಧ್ಯವಾ?’ ಎಂದು ಕೇಳಿದೆ. ‘ನನ್ನ ಬಳಿ ಇಲ್ಲ. ನಾನು ಅವರ ಮನೆಯಲ್ಲಿ ನಿಂತು ಕಳಿಸಬಹುದು. ಆದರೆ ಈಗ ನಾನು ಪುಟ್ಟಪರ್ತಿಯಲ್ಲಿದ್ದೇನೆ’ ಎಂದು ಅಸಹಾಯಕತೆ ತೋಡಿಕೊಂಡಳು.
ಅಷ್ಟಕ್ಕೇ ಸುಮ್ಮನಾಗದ ಆಕೆ, ‘ಒಂದು ಕೆಲಸ ಮಾಡಿ, ನೀವು ಅವರ ಮನೆಯಿಂದ ಕೇವಲ ಮುನ್ನೂರೋ-ನಾನೂರೋ ಮೀಟರ್ ದೂರದಲ್ಲಿದ್ದೀರಿ. ನಾನು ಮತ್ತೊಮ್ಮೆ ನಿಮಗೆ ಡೈರೆಕ್ಷನ್ ವಿವರಿಸುತ್ತೇನೆ, ಆಗಬಹುದಾ?’ ಎಂದು ಕೇಳಿದಳು.
ಅದಕ್ಕೆ ನಾನು ‘ಬೇಡ, ಬೇಡ... ನಿಮ್ಮ ಬಾಸ್‌ಗೇ ಫೋನ್ ಮಾಡಿ ಲೊಕೇಶನ್ ತೆಗೆದುಕೊಳ್ಳುತ್ತೇನೆ. ತೊಂದರೆ ಇಲ್ಲ, ಥ್ಯಾಂಕ್ಸ್’ ಎಂದೆ. ಅಷ್ಟೊತ್ತಿಗೆ ಇಪ್ಪತ್ತು ನಿಮಿಷ ಕಳೆದುಹೋಗಿತ್ತು. ನಾನು ನನ್ನ ಸ್ನೇಹಿತರಿಗೆ ಫೋನ್ ಮಾಡಿದೆ. ಅವರು ಅರ್ಧ ಗಂಟೆಯಿಂದ ಕಾಯುತ್ತಿದ್ದರು. ವಾಟ್ಸಾಪ್ ಮೂಲಕ ಲೊಕೇಶನ್ ಕಳಿಸುವಂತೆ ಹೇಳಿದೆ. ಅವರು ಕಳಿಸಿದರು.
ಆದರೂ ಒಂದು ತಿರುವಿನಲ್ಲಿ ಯಡವಟ್ಟಾಯಿತು. ಕೊನೆಗೂ ಅವರ ಮನೆ ತಲುಪಿದೆ. ಹಾಗಂತ ನಾನು ಅವರ ಮನೆಗೆ ಹೋಗಿದ್ದು ಅದೇ ಮೊದಲ ಸಲ ಆಗಿರಲಿಲ್ಲ. ನಾಲ್ಕೈದು ಸಲ ಹೋಗಿದ್ದೆ. ಆದರೆ ಈ ಬಾರಿ ಡ್ರೈವರ್ ಇಲ್ಲದ್ದರಿಂದ ಸ್ವಲ್ಪ ತೊಂದರೆಯಾಯಿತು. ಆದರೂ ಬೆಂಗಳೂರಿನಲ್ಲಿ ವಿಳಾಸ ಪತ್ತೆ ಹಚ್ಚುವುದು ಕಷ್ಟವೇ. ಈಗ ಜಿಪಿಎಸ್ ಬಂದ ನಂತರ ಸುಲಭವಾಗಿದೆ. ಜಿಪಿಎಸ್ ಬರುವುದಕ್ಕಿಂತ ಮೊದಲು ಜನ ಹೇಗೆ ವಿಳಾಸ ಪತ್ತೆ ಹಚ್ಚುತ್ತಿದ್ದರು ಎಂಬುದು ಈಗಿನ ಮಕ್ಕಳಿಗೆ ವಿವರಿಸಿದರೆ ಅರ್ಥವಾಗುವುದು ಕಷ್ಟವೇ.
ಈಗ ಯಾರೂ ವಿಳಾಸ ಕೇಳುವುದಿಲ್ಲ. ಮೊಬೈಲ್ ಜಿಪಿಎಸ್ ಆನ್ ಮಾಡಿಕೊಂಡು ಜಯನಗರ ವೇನು, ಜಗತ್ತನ್ನೇ ಸುತ್ತಿ ಜಯಶಾಲಿಯಾಗುತ್ತಾರೆ. ಆದರೂ ಕೆಲವು ಸಲ ಪಕ್ಕದ ಓಣಿಯಲ್ಲಿನ ವಿಳಾಸ ಗೊತ್ತಾಗದೇ ತಿರುಗಿದಲ್ಲಿಯೇ ಗಿರಕಿ ಹೊಡೆದು ಸುಸ್ತಾಗುತ್ತೇವೆ.
ಕೆಲ ವರ್ಷದ ಹಿಂದೆ, ದುಬೈಯಿಂದ ಒಮಾನ್‌ಗೆ ಹೋಗಿ ಇಡೀ ದೇಶ ಸುತ್ತಿ ಬಂದಾಗ, ಕಾರಿನ ಕಿಟಕಿಯಿಂದ ಕತ್ತನ್ನು ಹೊರ ಹಾಕಿ ಒಂದು ಸಲವೂ ವಿಳಾಸ ಕೇಳಲಿಲ್ಲ. ಆ ದೇಶದ ಉದ್ದಗಲಕ್ಕೆ ಐದಾರು ಸಾವಿರ ಕಿಮೀ ದೂರ ಕ್ರಮಿಸಿದರೂ ಒಂದು ಸಲವೂ ದಾರಿ ಕೇಳುವ ಪ್ರಸಂಗವೇ ಬರಲಿಲ್ಲ. ಅದೇ ಮೊನ್ನೆ ಮಲ್ಲತ್ತಳ್ಳಿಯಲ್ಲಿರುವ ನನ್ನ ಸ್ನೇಹಿತರ ಮನೆ ಹುಡುಕಲು ಆಗದೇ ವಾಪಸ್ ಬರಬೇಕಾಯಿತು. ಕಾರಣ ಮೊಬೈಲ್ ನೆಟ್ ವರ್ಕ್ ಡೌನ್ ಆಗಿ ಜಿಪಿಎಸ್ ಕೆಲಸ ಮಾಡುತ್ತಿರಲಿಲ್ಲ.
ಅಂದರೆ ಇಂದು ಜಿಪಿಎಸ್ ಇದ್ದರೆ ಯಾರ ಸಹಾಯವಿಲ್ಲದೇ ಸುತ್ತಿ ಬರಬಹುದು. ಅದೇ ಜಿಪಿಎಸ್ ಡೌನ್ ಆದರೆ, ಮೊಬೈಲ್‌ನಲ್ಲಿ ಬ್ಯಾಟರಿ ಪವರ್ ಪೂರ್ತಿ ಕರಗಿ ಹೋದರೆ, ಪಕ್ಕದ ಬೀದಿಯಲ್ಲಿನ ವಿಳಾಸ ಹುಡುಕುವುದೂ ಕಷ್ಟ. ಅಂದರೆ ಜಿಪಿಎಸ್ ಇದ್ದರೆ ಮಾತ್ರ ನಮ್ಮ ಪೊಗರು. ಇಲ್ಲದಿದ್ದರೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಂತೆ.
ನಾನು ಹೀಗೆಲ್ಲ ಯೋಚನೆ ಮಾಡುವಾಗ ನನಗೆ ನೆನಪಾಗಿದ್ದು ಒಮಾನ್ ಕಡಲ ತೀರದಲ್ಲಿ ಕಂಡ ಆಮೆಗಳು! ನಾನು ಒಮಾನ್‌ನಿಂದ ಬಂದ ನಂತರ, ಆಮೆಗಳ ಬಗ್ಗೆ ಮೂವತ್ತೊಂದು ವರ್ಷಗಳ ಕಾಲ ಸಂಶೋಧನೆ ಮಾಡಿದ, ನ್ಯಾಶನಲ್ ಜಿಯಾಗ್ರಫಿಕ್ ಪತ್ರಿಕೆ ಹಾಗೂ ಚಾನೆಲ್‌ನಲ್ಲಿ ಹಿರಿಯ ಸಂಪಾದಕನಾಗಿರುವ ರಿಚರ್ಡ್ ಹರ್ಷೆ ಎಂಬಾತ ಬರೆದ ಪುಸ್ತಕಗಳನ್ನು ಓದಿದೆ. ಆತನೇ ನಿರ್ಮಿಸಿದ, ನಿರ್ದೇಶಿಸಿದ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿದೆ.
ಅದನ್ನು ನೋಡಿದ ನಂತರ ಆಮೆಗಳ ಅದ್ಭುತ ಲೋಕವೇ ನನ್ನ ಮುಂದೆ ತೆರೆದುಕೊಂಡಿತು. ಅಲ್ಲಿಯವರೆಗೂ ನನಗೆ ಆಮೆಗಳ ಬಗ್ಗೆ ಅಂಥ ಆಸಕ್ತಿಯಾಗಲಿ, ಕುತೂಹಲವಾಗಲಿ ಇರಲಿಲ್ಲ. ಅದು ಎಂದೂ ನನ್ನ ಕಲ್ಪನೆಯ ಚಕ್ರತೀರ್ಥದಲ್ಲಿಟ್ಟು ತಿರುಗಿಸಿರಲಿಲ್ಲ. ನಾನು ಎಂದೂ ಐದು-ಹತ್ತು ನಿಮಿಷ ಕೂಡ ಆ ನಿರುಪದ್ರವಿ ಪ್ರಾಣಿ ಬಗ್ಗೆ ಯೋಚಿಸಿರಲಿಲ್ಲ. ಆಮೆಗಳು ಮೊಟ್ಟೆ ಇಡುವುದನ್ನು ನೋಡಲೆಂದು ಒಮಾನ್ ಬೀಚಿನಲ್ಲಿ ಬೆಳಗಿನ ಜಾವಕ್ಕೆ ಹೋದಾಗ, ಕಡಲಿನಿಂದ ಸಮುದ್ರ ತೀರಕ್ಕೆ ಏದುಸಿರು ಬಿಡುತ್ತಾ ತೆವಳಿಕೊಂಡು ಆಮೆಗಳು ಬರುತ್ತಿದ್ದವು. ಅವೆಲ್ಲವೂ ಗರ್ಭಿಣಿ ಆಮೆಗಳು! ಮೊಟ್ಟೆಯಿಡಲು ಅಲ್ಲಿಗೆ, ಅಂದರೆ ತವರು ಮನೆಗೆ ಆಗಮಿಸುತ್ತಿದ್ದವು! ಹಾಗಂತ ಒಮಾನ್‌ನಲ್ಲಿ ಸಾವಿರಾರು ಕಿಮೀ ಉದ್ದದ ಸಮುದ್ರ ಕಿನಾರೆಯಿದೆ. ಆದರೆ ಅವೆಲ್ಲ ಬಿಟ್ಟು ಆ ಕಡಲಾಮೆಗಳು ಅದೊಂದೇ ಜಾಗಕ್ಕೆ ಮೊಟ್ಟೆಯಿಡಲು ಬರುತ್ತವೆ. ಆ ಸಮುದ್ರ ತಟದಲ್ಲಿ ಅದೆಂಥ ಮಹಿಮೆಯಿದೆಯೋ ನಾ ಕಾಣೆ.
ತವರು ಮನೆಯೆಂಬುದು ಕೊಳಗೇರಿಯಲ್ಲಿರಲಿ, ಐಷಾರಾಮಿ ಪ್ರದೇಶದಲ್ಲಿ ಇರಲಿ, ಎಲ್ಲಿಯೇ ಇರಲಿ, ಅದು ತವರುಮನೆಯೇ. ಅದು ಹೇಗಿದ್ದರೂ ತವರುಮನೆಯೇ. ಅಲ್ಲಿ ಸಿಗುವಂಥ ಮುಕ್ತ ವಾತಾವರಣ, ಆಪ್ತ ಪರಿಸರ ಮತ್ತೆಲ್ಲೂ ಸಾಧ್ಯವಿಲ್ಲ. ಹೀಗಾಗಿ ಆ ಕಡಲಾಮೆಗಳೆಲ್ಲಿ ಅಲ್ಲಿಗೇ ಬರುತ್ತವೆ.
ಅಂದು ಹತ್ತಾರು ಆಮೆಗಳು ಬಂದು ಎರಡು ಅಡಿ ಆಳದ ಹೊಂಡ ತೋಡಿ, ತನ್ನ ರೆಕ್ಕೆಗಳಿಂದ ಉಸುಕನ್ನೆಲ್ಲ ಮೈಮೇಲೆ ಹಾಕಿಕೊಂಡು, ತನ್ನನ್ನೇ ಹೂತು ಹಾಕಿಕೊಂಡಿತು. ಕ್ಷಣಾರ್ಧದಲ್ಲಿ ಆಮೆಗಳೇ ಮಾಯ! ಸುಮಾರು ಅರ್ಧ-ಮುಕ್ಕಾಲು ಗಂಟೆ ಅರವತ್ತು-ಎಪ್ಪತ್ತು ಮೊಟ್ಟೆಗಳನ್ನು ಆ ಮರಳಿನ ಹೊಂಡದಲ್ಲಿಯೇ ಇಟ್ಟು, ಮೇಲಿಂದ ಮರಳು ಮುಚ್ಚಿ ಸಪಾಟು ಮಾಡಿ, ಅಲ್ಲಿಂದ ಎದ್ದು ನಿಧಾನವಾಗಿ ತೆವಳುತ್ತಾ ಪುನಃ ಕಡಲಿಗೆ ಇಳಿದು ಅದೃಶ್ಯವಾಯಿತು. ಅದು ಆನಂತರ ಎಲ್ಲಿಗೆ ಹೋಯಿತೋ, ಅದಕ್ಕೆಂಥ ತುರ್ತು ಕೆಲಸವೋ ಗೊತ್ತಿಲ್ಲ.
ಇದಾಗಿ ಸುಮಾರು ಮೂವತ್ತೈದು ದಿನಗಳ ನಂತರ ಅದೇ ಕಡಲಾಮೆ ಪುನಃ ಅದೇ ಬೀಚ್‌ಗೆ ಬರುತ್ತದೆ. ಆ ಬೀಚ್‌ನಲ್ಲಿ ಆಗಲೇ ಮುನ್ನೂರು-ನಾನೂರು ಆಮೆಗಳು ಮೊಟ್ಟೆ ಇಟ್ಟಿರುತ್ತವೆ. ಆದರೆ ಆ ಆಮೆಗೆ ತಾನು ಮೊಟ್ಟೆ ಇಟ್ಟಿದು ಎಲ್ಲಿ ಎಂಬುದು ಹೇಗೆ ಗೊತ್ತಾಗುವುದೋ ಆ ಭಗವಂತನೇ ಬಲ್ಲ!
ಅದು ಯಾರನ್ನೂ ಕೇಳದೇ, ಜಿಪಿಎಸ್ ಬಳಸದೇ ಒಂದು ನಿರ್ದಿಷ್ಟ ಜಾಗಕ್ಕೆ ಬಂದು ಕೆದರಿದರೆ, ಅದು ಆ ಆಮೆ ಮೊಟ್ಟೆ ಇಟ್ಟ ಜಾಗವೇ ಆಗಿರುತ್ತದೆ. ಅದೆಂಥ ವಿಸ್ಮಯವೋ ಗೊತ್ತಿಲ್ಲ. ಸರಿ, ಆಮೆ ಪುನಃ ಆ ಜಾಗವನ್ನು ಕಾಲಿಂದ ಕೆದರಿ ಎರಡು ಅಡಿ ಹೊಂಡ ಮಾಡಿ, ತನ್ನ ಮೇಲೆ ಉಸುಕು ಸುರುವಿಕೊಂಡು ಅದರೊಳಗೆ ಅವಿತು, ತಾನು ಇಟ್ಟ ಮೊಟ್ಟೆಗಳ ಮೇಲೆ ಕುಳಿತುಕೊಂಡು ಕಾವು ಕೊಡುತ್ತದೆ. ಒಂದೊಂದೇ ಮರಿಗಳು ಹೊರಬರುತ್ತವೆ.
ಬೆಂಕಿಪೊಟ್ಟಣದಷ್ಟು ಗಾತ್ರದ ಆ ಮರಿಗಳು ಆಗಷ್ಟೇ ಕಣ್ಣು ಬಿಟ್ಟು ಜಗತ್ತಿಗೆ ಬಂದಿವೆ. ಸಮುದ್ರದ ಅಲೆಗಳು ಬರುತ್ತಿರುವಂತೆ, ತೆವಳುತ್ತಾ ತೆವಳುತ್ತಾ ನೀರಿನೊಳಗಿಳಿದು ನಾಪತ್ತೆಯಾಗಿ ಬಿಡುತ್ತವೆ. ಹಾಗೆಂದು ಆಮೆಗಳ ಜತೆಗೆ ತಾಯಿ ಆಮೆ ಸಹ ಇರುವುದಿಲ್ಲ. ಹತ್ತು ಹದಿನೈದು ನಿಮಿಷಗಳ ಹಿಂದೆ, ಹುಟ್ಟಿದ ಆಮೆ ಮರಿ ತನ್ನ ಪಾಡಿಗೆ ತಾನು ಸುಮ್ಮನೆ ಸಾಗರಕ್ಕಿಳಿದು ಈಜುತ್ತಾ ಅದೆಲ್ಲಿಗೋ ಹೋಗಿ ಬಿಡುತ್ತದೆ. ತಾಯಿಯಿಲ್ಲ. ಸಂಗಡಿಗರಿಲ್ಲ, ಸಂಗಾತಿಯಲ್ಲ.
ಬರೀ ಏಕಾಂಗಿಯಾಗಿ ಆ ಹಸಿಹಸಿ ಹಸುಳೆ ಆಮೆ ಕಂದ ಸಾಗರವೆಂಬ ‘ಪ್ರಚಂಡ ಲೋಕ’ ಸೇರಿಬಿಡುತ್ತದೆ. ಅದು ಮುಂದೆ ಎಲ್ಲಿಗೆ ಹೋಗುತ್ತದೋ, ಏನು ಮಾಡುತ್ತದೋ, ಎಂಥ ಕತೆಯೋ ಯಾರಿಗೂ ಗೊತ್ತಿಲ್ಲ. ಹಾಗೆ ಈಜುತ್ತಾ ಈಜುತ್ತಾ ಆ ಆಮೆ ಹಿಂದೂ ಮಹಾಸಾಗರ, ಅಟ್ಲಾಂಟಿಕ್ ಸಾಗರ, ಮೆಡಿಟರೇನಿಯನ್ ಸಮುದ್ರ, ಕಪ್ಪು ಸಮುದ್ರ, ಕೆಂಪು ಸಮುದ್ರ, ಕ್ಯಾಸ್ಪಿಯನ್ ಸಮುದ್ರ, ಪರ್ಶಿಯನ್ ಗಲ್, ಎಡ್ರಿಯಾಟಿಕ್ ಸಮುದ್ರ, ಕೆರಿಬಿಯನ್ ಸಮುದ್ರ, ಬಾಲ್ಟಿಕ್ ಸಮುದ್ರ, ಜಾವಾ ಸಮುದ್ರ, ಲಿಯೋನಿಕ್ ಸಮುದ್ರ, ತಿಮೋರ್ ಸಮುದ್ರ, ಫಿಲಿಪ್ಪೀನ್ಸ್ ಸಮುದ್ರ, ಹಳದಿ ಸಮುದ್ರ, ಪೂರ್ವ ಚೀನಾ ಸಮುದ್ರ, ಅಂಡಮಾನ್ ಸಮುದ್ರ, ಬಂಗಾಳಕೊಲ್ಲಿ, ಮರ್ಮರ ಸಮುದ್ರ, ಸೆಲ್ಟಿಕ್ ಸಮುದ್ರ, ಅಲ್ಬೋರನ್ ಸಮುದ್ರ... ಹೀಗೆ ಎಲ್ಲ ಖಂಡಗಳನ್ನು ಆವರಿಸಿರುವ ಸಮುದ್ರದಲ್ಲಿ ಅಲೆಮಾರಿಯಂತೆ, ಮಹಾ ಪಯಣಿಗನಂತೆ, ರಿಟರ್ನ್ ಟಿಕೆಟ್ ಖರೀದಿಸದ ಪ್ರವಾಸಿಯಂತೆ ತಿರುಗುತ್ತಲೇ ಇರುತ್ತದೆ.
ಈ ಪಯಣದಲ್ಲಿ ಅದು ಹೋಗದ ದೇಶಗಳಿಲ್ಲ, ನೋಡದ ಊರುಗಳಿಲ್ಲ. ಒಂದಲ್ಲ ಎರಡಲ್ಲ, ಸುಮಾರು ನಲವತ್ತು ವರ್ಷಗಳ ಕಾಲ ಸಮುದ್ರದಲ್ಲಿ ಮಹಾ ಪಥಿಕನಂತೆ ಅಲೆಯುತ್ತಲೇ, ಈಜುತ್ತಲೇ ಇರುತ್ತದೆ. ಈ ಮಧ್ಯೆ ಆಫ್ರಿಕಾದಲ್ಲೋ, ಆಸ್ಟ್ರೇಲಿಯಾದಲ್ಲೋ ಸಂಗಾತಿಯನ್ನು ಭೇಟಿಯಾಗಿ ಗರ್ಭಧರಿಸಿದಾಗ, ಮೊಟ್ಟೆಗಳನ್ನಿಡಲು ತಾನು ಹುಟ್ಟಿದ ಒಮಾನ್‌ನ ಅದೇ ಕಡಲ ತೀರವನ್ನು ಹುಡುಕಿಕೊಂಡು ಬರುತ್ತದೆ. ಅದಕ್ಕೆ ಅಂಥ ತವರಿನ ಪಾಶ!
ಗರ್ಭದಲ್ಲಿ 60-70 ಮೊಟ್ಟೆಗಳನ್ನಿಟ್ಟುಕೊಂಡು ಆಫ್ರಿಕಾದ ಅಥವಾ ಆಸ್ಟ್ರೇಲಿಯಾದ ಕಡಲ ತೀರದಲ್ಲಿ ಅವುಗಳನ್ನು (ಮೊಟ್ಟೆಗಳನ್ನು) ಇಡಬಹುದಿತ್ತು. ನಲವತ್ತು ವರ್ಷಗಳ ಹಿಂದೆ ತಾನು ಹುಟ್ಟಿದ ಆ ಕಡಲ ಕಿನಾರೆಯನ್ನೇ ಹುಡುಕಿಕೊಂಡು ಬರಬೇಕಾದ ದರ್ದಾದರೂ ಏನಿತ್ತು? ಹತ್ತಾರು ಸಾವಿರ ಕಿಮೀ ದೂರವನ್ನು ಕ್ರಮಿಸಿಕೊಂಡಾದರೂ ಸೈ, ಒಮಾನ್‌ನ ಕಡಲಲ್ಲಿರುವ ತನ್ನ ತವರಿನಲ್ಲೇ ಮೊಟ್ಟೆಯಿಡುವ ತವಕ. ಅಷ್ಟಕ್ಕೂ ಅಷ್ಟು ದೂರದಿಂದ ಆ ಆಮೆಯನ್ನು ನಿರ್ದೇಶಿಸಿದ, ಕೈಹಿಡಿದು ಕರೆದುಕೊಂಡು ಬಂದ ಆ ಜಿಪಿಎಸ್ ಯಾವುದು? ಆ ಜಿಪಿಎಸ್ ಅನ್ನು ಡೆವೆಲಪ್ ಮಾಡಿದವರು ಯಾರು? ನನಗಂತೂ ಇದು ಅನುಗಾಲದ ವಿಸ್ಮಯವೇ.
ಉದ್ಯೋಗವನ್ನರಸಿ ಪಟ್ಟಣ, ನಗರವನ್ನು ಸೇರಿ, ನಮ್ಮ ತಾಯಿಬೇರನ್ನೂ ಕಿತ್ತು, ಅದೇ ನಗರಗಳಲ್ಲಿ ನೆಟ್ಟು, ಹುಟ್ಟಿದ ಹಳ್ಳಿಯ ಕಡೆ ತಿರುಗಿಯೂ ನೋಡದ ನಾವೆಲ್ಲಿ, ಹತ್ತಾರು ಸಾವಿರ ಕಿಮೀ ದೂರದಲ್ಲಿದ್ದರೂ, ಖಂಡದಾಚೆಯ ಅಗೋಚರ ನಾಡಿನಲ್ಲಿದ್ದರೂ ಮೊಟ್ಟೆಯನ್ನು ಇಡಲು ತವರಿಗೇ ಬರುವ ಆ ಆಮೆಯ ಕಕ್ಕುಲಾತಿ ಎಲ್ಲಿ? ಅದ್ಯಾವ ಸಂಬಂಧ, ಮಣ್ಣಿನ ವಾಸನೆ, ಹುಟ್ಟೂರಿನ ಮೋಹ, ಕರುಳು ಬಳ್ಳಿಯ ವಾತ್ಸಲ್ಯ, ಜನ್ಮ ನೀಡಿದ ಮಣ್ಣಿನ ಮಮತೆ ಆ ಆಮೆಯನ್ನು ಕೈಹಿಡಿದು ಕೊಂಡು ಅರಸಿ ಬಂದಿರಬಹುದು? ಇದು ಯಾವ ಜಿಪಿಎಸ್ ಗೂ ನಿಲುಕದ ವಿಸ್ಮಯದ ಆಪ್. ನಗರಗಳಲ್ಲಿ ಒಂದೇ ಅಪಾರ್ಟ್‌ಮೆಂಟ್‌ನಲ್ಲಿದ್ದರೂ ಎದುರಿನ ಫ್ಲ್ಯಾಟ್ ನಲ್ಲಿರುವವರ ಗುರುತು ಇಲ್ಲದೇ ಬದುಕುವ ನಾವು, ಹಿಂದಿನ ಬೀದಿಯಲ್ಲಿರುವ ಜನರ ಮುಖಪರಿ ಚಯವೇ ಇಲ್ಲದಂತೆ ಜೀವನವಿಡೀ ಬದುಕುವ ನಾವು, ಅನಾಮಧೇಯರಂತೆ ನಮ್ಮ ಬದುಕನ್ನು ಸಾಗಿಸಿ ಬಿಡುತ್ತೇವೆ.
ಹುಟ್ಟಿದೂರಿನ ಎಲ್ಲ ಸಂಬಂಧವನ್ನು ಕಡಿದು ನಮ್ಮದಲ್ಲದ ಊರಿನಲ್ಲಿ ಪರಕೀಯರಂತೆ ಬಾಳುತ್ತೇವೆ. ಆದರೆ ಈ ಆಮೆ ಮಾತ್ರ ಗರ್ಭ ಧರಿಸಿದಾಗಲೆಲ್ಲ ತನ್ನ ಊರನ್ನು ನೆನಪಿಸಿಕೊಳ್ಳುತ್ತದೆ. ಮೊಟ್ಟೆಯನ್ನಿಡುವ ನೆಪದಲ್ಲಾದರೂ ಹುಟ್ಟೂರಿಗೆ ಭೇಟಿ ಕೊಡುತ್ತದೆ. ಜಯನಗರದ ಸ್ನೇಹಿತರ ಮನೆಯ ತಿರುವಿನಲ್ಲಿ ನಿಂತಾಗ ಇವೆಲ್ಲ ನೆನಪಾಯಿತು!