ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಔಷಧ ನಕಲಿ, ವೈದ್ಯರೂ ನಕಲಿ; ಜೀವಕ್ಕೆಲ್ಲಿ ಖಾತ್ರಿ ?

ವಿಷಕಾರಿ ಅಥವಾ ಮಾರಣಾಂತಿಕ ನಕಲಿ ಔಷಧ ಉತ್ಪಾದನೆ ಪ್ರಕರಣಗಳಲ್ಲಿ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಮಾರಣಾಂತಿಕವಲ್ಲದ ಪ್ರಕರಣಗಳಲ್ಲಿ ಕೇವಲ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಆದರೆ ಇಷ್ಟು ವರ್ಷಗಳಲ್ಲಿ ನಕಲಿ ಔಷಧ ಮಾರಾಟದ ಕಾರಣಕ್ಕಾಗಿ ಯಾವುದೇ ವ್ಯಕ್ತಿ ಜೀವಾವಧಿ ಶಿಕ್ಷೆಗೊಳಗಾದ ಒಂದೇ ಒಂದು ಪ್ರಕರಣ ಈ ದೇಶದಲ್ಲಿ ವರದಿಯಾಗಿಲ್ಲ.

ಲೋಕಮತ

ನಾವು ದೇವರನ್ನು ನಂಬಬಹುದು ಅಥವಾ ನಂಬದೇ ಇರಬಹುದು. ಆ ಸ್ವಾತಂತ್ರ್ಯ ನಮಗಿದೆ. ಆದರೆ ವೈದ್ಯರನ್ನು ನಂಬದಿರಲು ಸಾಧ್ಯವಿಲ್ಲ. ವೈದ್ಯರು ಯಾವುದೇ ಔಷಧ ಕೊಟ್ಟರೂ ಅದು ನಮ್ಮ ಕಾಯಿಲೆ ವಾಸಿ ಮಾಡಲಿದೆ ಎಂಬ ವಿಶ್ವಾಸದಲ್ಲಿಯೇ ತೆಗೆದುಕೊಳ್ಳುತ್ತೇವೆ. ಎಷ್ಟೋ ಬಾರಿ ಔಷಧಕ್ಕಿಂತಲೂ ವೈದ್ಯರ ಸಾಂತ್ವನದ ಮಾತುಗಳಿಂದಲೇ ರೋಗ ವಾಸಿಯಾಗುತ್ತದೆ. ಆದರೆ ಔಷಧ ಕೊಡುವ ವೈದ್ಯರು ನಕಲಿಯಾದರೆ ಅಥವಾ ಅವರು ಕೊಡುವ ಔಷಧ ನಕಲಿ ಅಥವಾ ಕಲಬೆರಕೆ ಯಾದರೆ ಯಾರನ್ನು ನಂಬುವುದು ? ಇದು ಊಹೆಯಲ್ಲ. ವಿಶ್ವದ ಮೂರನೇ ಅತಿ ದೊಡ್ಡ ಔಷಧ ತಯಾರಿಕಾ ಉದ್ಯಮ ಹೊಂದಿರುವ ಭಾರತದಲ್ಲಿ ನಡೆಯುತ್ತಿರುವ ವಾಸ್ತವ.

ಮಧ್ಯಪ್ರದೇಶದ ಚಿಂಧ್ವಾರ ಜಿಲ್ಲೆಯಲ್ಲಿ ‘ಕೋಲ್ಡ್ರಿಫ್’ ((Coldrif) ಕೆಮ್ಮಿನ ಸಿರಪ್ ಸೇವಿಸಿ 14 ಮಕ್ಕಳು ಸಾವಿಗೀಡಾದ ಪ್ರಕರಣ ಔಷಧಗಳ ಸುರಕ್ಷತೆ ಪ್ರಶ್ನೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ತಮಿಳುನಾಡಿನ ಕಂಚೀಪುರದಲ್ಲಿರುವ ಘಟಕ ಹೊಂದಿರುವ ಸ್ರೇಸನ್ ಫಾರ್ಮಾಸ್ಯೂಟಿಕಲ್ ಕಂಪನಿ ತಯಾರಿಸಿದ ಈ ಔಷಧಿ ನಿಗದಿತ ರಾಸಾಯನಿಕಗಳನ್ನು ಹೊಂದಿರದೆ ಕಲಬೆರಕೆಯಿಂದ ಕೂಡಿದ್ದ ಮಕ್ಕಳ ಸಾವಿಗೆ ಕಾರಣವಾಗಿದೆ. ಆದರೆ ಯಾವುದೇ ಔಷಧಿ ಮಾರುಕಟ್ಟೆಗೆ ಬರುವ ಮುನ್ನ ಕೇಂದ್ರ ಔಷಧ ಮಾನದಂಡ ನಿಯಂತ್ರಣ ಸಂಸ್ಥೆ ( CDSCO) ನಡೆಸುವ ಐದಾರು ಹಂತದ ಪರೀಕ್ಷೆ ಗಳನ್ನು ದಾಟಿ ಬರಬೇಕು. ರಾಜ್ಯದಲ್ಲಿರುವ ಔಷಧ ನಿಯಂತ್ರಣ ಇಲಾಖೆಯು ನಿಯಮಿತವಾಗಿ ಎಲ್ಲ ಔಷಧಗಳನ್ನು ಪರೀಕ್ಷೆಗೆ ಒಳಪಡಿಸಬೇಕು. ಆದರೆ ಈ ಔಷಧ ಹಲವು ವರ್ಷಗಳಿಂದ ಮಾರುಕಟ್ಟೆಯಲ್ಲಿದ್ದರೂ ವಿಷಕಾರಿ ಅಂಶ ಯಾಕೆ ಪತ್ತೆಯಾಗಲಿಲ್ಲ ? ಇದು ಇಡೀ ವಿಶ್ವಕ್ಕೆ ಔಷಧ ಪೂರೈಸುತ್ತಿರುವ ನಮ್ಮ ಔಷಧೋದ್ಯಮದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಇದನ್ನೂ ಓದಿ: Lokesh Kaayarga Column: ಕ್ರೀಡೆಯನ್ನು ಕ್ರೀಡಾಳುಗಳಿಗೆ ಬಿಟ್ಟು ಬಿಡೋಣ

ತಜ್ಞರ ಪ್ರಕಾರ ಸ್ರೇಸನ್ ಫಾರ್ಮಾ ಕಂಪನಿ ತಯಾರಿಸಿದ ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್‌ನ ಮಾದರಿಗಳನ್ನು ಪರೀಕ್ಷಿಸಿದಾಗ, ಅದರಲ್ಲಿ ಸುಮಾರು 48.6% ಡೈಥಿಲೀನ್ ಗ್ಲೈಕಾಲ್ ಅಂಶ ಪತ್ತೆಯಾಗಿದೆ. ಡೈಥಿಲೀನ್ ಗ್ಲೈಕಾಲ್ ವಿಷಕಾರಿ ರಾಸಾಯನಿಕವಾಗಿದ್ದು, ಇದು ದೇಹದೊಳಗೆ ಹೋದರೆ ಮೂತ್ರಪಿಂಡ ವೈಫಲ್ಯ ಉಂಟಾಗಿ ಸಾವಿಗೆ ಕಾರಣವಾಗುತ್ತದೆ. ಈ ಸಿರಪ್ ಸೇವಿಸಿದ ಹಲವು ಮಕ್ಕಳು ಆರಂಭದಲ್ಲಿ ಜ್ವರ ಮತ್ತು ಶೀತದಿಂದ ಬಳಲುತ್ತಿದ್ದು, ನಂತರ ಅವರಿಗೆ ಮೂತ್ರ ಪಿಂಡದ ಸಮಸ್ಯೆಗಳು ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಕಾಣಿಸಿಕೊಂಡು ಮೃತಪಟ್ಟಿ ದ್ದಾರೆ. ಈ ಔಷಧದ ಮೂಲ ಸೂತ್ರದ ಪ್ರಕಾರ ‘ಪ್ರೊಪಿಲೀನ್ ಗ್ಲೈಕಾಲ್’ ಬಳಸಬೇಕಿತ್ತು. ಆದರೆ ಇದು ದುಬಾರಿ ರಾಸಾಯನಿಕವಾದ ಕಾರಣ ಕಂಪನಿ ಅಗ್ಗದ ರಾಸಾಯನಿಕದ ಮೊರೆ ಹೋಗಿದೆ ಎನ್ನಲಾಗಿದೆ. ದುಡ್ಡಿನಾಸೆಗಾಗಿ ಅದೆಷ್ಟು ಕಂಪನಿಗಳು ಇಂತಹ ಮೋಸದಾಟ ಮಾಡಿರಲಿಕ್ಕಿಲ್ಲ ? ಅದೆಷ್ಟು ರೋಗಿಗಳು ಸಾವಿನ ಮನೆ ಸೇರಿರಲಿಕ್ಕಿಲ್ಲ ?

ನಮ್ಮ ಫಾರ್ಮಾ ಕಂಪನಿಗಳಿಗೆ ಇದೇನು ಹೊಸತಲ್ಲ. ಮೂರು ವರ್ಷಗಳ ಹಿಂದೆ ಭಾರತದಲ್ಲಿ ತಯಾರಿಸಿದ ಕೆಮ್ಮಿನ ಸಿರಪ್‌ಗಳು ಜಾಂಬಿಯಾದಲ್ಲಿ 60 ಮತ್ತು ಉಜ್ಬೇಕಿಸ್ತಾನದಲ್ಲಿ 20 ಮಕ್ಕಳ ಸಾವಿಗೆ ಕಾರಣವಾಗಿತ್ತು. 2023ರಲ್ಲಿ, ಬಾಗ್ದಾದ್‌ನ ಔಷಧಾಲಯದಲ್ಲಿ ಖರೀದಿಸಿದ ಭಾರತದ ಫಾರ್ಮಾ ಕಂಪನಿಯ ‘ಕೋಲ್ಡ್ ಔಟ್’ ಬಾಟಲಿಯಲ್ಲಿ ಶೇಕಡಾ 2.1 ರಷ್ಟು ಎಥಿಲೀನ್ ಗ್ಲೈಕಾಲ್ ಕಂಡು ಬಂದಿತ್ತು. ತಜ್ಞರ ಪ್ರಕಾರ ಇದು ನಿಯಮಿತ ಪ್ರಮಾಣಕ್ಕಿಂತ ಸುಮಾರು 21 ಪಟ್ಟು ಹೆಚ್ಚು. ವಿಶ್ವ ಆರೋಗ್ಯ ಸಂಸ್ಥೆ ಕೂಡ 2023ರ ಜುಲೈನಲ್ಲಿ, ಭಾರತೀಯ ಮೂಲದ ಕೆಮ್ಮಿನ ಸಿರಪ್‌ಗಳಲ್ಲಿ ಅಸುರಕ್ಷಿತ ಮಟ್ಟದ ಡೈಥಿಲೀನ್ ಗ್ಲೈಕಾಲ್ ಇದೆ ಎಂದು ವರದಿ ನೀಡಿತ್ತು. ಕ್ಯಾಮರೂನ್‌ನಲ್ಲಿ ಈ ಸಿರಪ್ ಸೇವಿಸಿ 12 ಮಕ್ಕಳು ಸಾವನ್ನಪ್ಪಿದ್ದನ್ನು ಈ ವರದಿ ಉಲ್ಲೇಖಿಸಿತ್ತು. ಆದರೆ ಕೇಂದ್ರ ಆರೋಗ್ಯ ಸಚಿವಾಲಯವಾಗಲಿ, ರಾಜ್ಯ ಆರೋಗ್ಯ ಇಲಾಖೆಗಳಾಗಲಿ ಈ ಬಗ್ಗೆ ತನಿಖೆ ನಡೆಸಿ ಯಾವುದೇ ಕೆಮ್ಮಿನ ಔಷಧಿ ಕಂಪನಿಯನ್ನು ನಿರ್ಬಂಧಿಸಿದ ಉದಾಹರಣೆಗಳಿಲ್ಲ.

LOkesh K 0810

ಇದೀಗ ತಮಿಳುನಾಡು ಸರಕಾರ ಕಂಚಿಪುರದಲ್ಲಿರುವ ಗುಜರಿ ವಸ್ತುಗಳ ಗೋದಾಮಿನಂತಿರುವ ಸ್ರೇಸನ್ ಫಾರ್ಮಾದ ಘಟಕಕ್ಕೆ ಬೀಗ ಮುದ್ರೆ ಜಡಿದಿದೆ. ಕಂಪನಿಯ ನಿರ್ದೇಶಕರು ನಾಪತ್ತೆ ಯಾಗಿದ್ದಾರೆ. ಮಧ್ಯಪ್ರದೇಶ ಸರಕಾರ ಮಕ್ಕಳಿಗೆ ಸಿರಪ್ ಔಷಧಿ ಶಿಫಾರಸು ಮಾಡಿದ ವೈದ್ಯರನ್ನು ಬಂಧಿಸಿದೆ. ಇದೊಂದು ರೀತಿಯಲ್ಲಿ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ. ತಪ್ಪಿತಸ್ಥ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸರಕಾರ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ದುರಂತ ಸಂಭವಿಸಿದ ಬಳಿಕ ಕೇಂದ್ರ ಆರೋಗ್ಯ ಸಚಿವಾಲಯವು 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಸಿರಪ್‌ಗಳನ್ನು ನೀಡದಂತೆ ಸಲಹೆ ನೀಡಿದೆ. ಹಾಗೆಂದು ಎಲ್ಲಾ ಕೆಮ್ಮಿನ ಸಿರಪ್‌ಗಳು ನಕಲಿಗಳಲ್ಲ. ಕೆಲವು ತಯಾರಕರು ನಿರ್ಲಕ್ಷ್ಯ ಮತ್ತು ಲಾಭದಾಸೆಯಿಂದ ಸಿರಪ್‌ಗಳನ್ನು ವಿಷಕಾರಿಯನ್ನಾಗಿ ಮಾಡಿದ್ದಾರೆ. ಆದರೆ ಈಗ ಜನರು ಎಲ್ಲ ಕೆಮ್ಮಿನ ಸಿರಪ್‌ಗಳನ್ನು ಸಂದೇಹದಿಂದ ನೋಡುವಂತಾಗಿದೆ.

2014ರಲ್ಲಿ ಅಂದಿನ ಡ್ರಗ್ ಕಂಟ್ರೋಲರ್ ಜನರಲ್ ಜಿ.ಎನ್. ಸಿಂಗ್ ಸಂದರ್ಶನವೊಂದರಲ್ಲಿ, ಭಾರತೀಯ ಮಾರುಕಟ್ಟೆಗೆ ಸರಬರಾಜಾಗುವ ಎಲ್ಲ ಔಷಧಿಗಳನ್ನು ಅಮೆರಿಕದ ಮಾನದಂಡದಲ್ಲಿ ಪರಿಶೀಲನೆಗೊಳಪಡಿಸಿದರೆ ನಮ್ಮ ದೇಶದ ಬಹುತೇಕ ಫಾರ್ಮಾ ಕಂಪನಿಗಳನ್ನು ಮುಚ್ಚ ಬೇಕಾಗುತ್ತದೆ ಎಂದು ಹೇಳಿದ್ದರು. ಈ ಪರಿಸ್ಥಿತಿ ಈಗಲೂ ಬದಲಾಗಿಲ್ಲ. ಔಟ್‌ಸೋರ್ಸಿಂಗ್ ಫಾರ್ಮಾ ಪ್ರಕಾರ, ವಿಶ್ವಾದ್ಯಂತ ಸರಬರಾಜು ಮಾಡಲಾದ ನಕಲಿ ಔಷಧಗಳಲ್ಲಿ ಶೇ.75 ಭಾರತದಿಂದ ಪೂರೈಕೆಯಾಗಿವೆ. ನೈಜೀರಿಯಾ ಶೇ.70ರಷ್ಟು ಔಷಧಗಳನ್ನು ಭಾರತ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುತ್ತದೆ. ಈ ದೇಶ ಆಮದು ಮಾಡಿಕೊಂಡ ಶೇ. 64ರಷ್ಟು ಔಷಧಿ ನಕಲಿ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ತಿಳಿಸಿದೆ.

ನಮ್ಮ ದೇಶದಲ್ಲಿ ಘಟಕಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಬ್ರ್ಯಾಂಡ್‌ನ ಫಾರ್ಮೆಸಿ ಕಂಪನಿಗಳ ಔಷಧಗಳು ಕೂಡ ಹಲವು ಬಾರಿ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ನಿಷೇಧ ಕ್ಕೊಳಗಾಗಿವೆ. ಸನ್ ಫಾರ್ಮಾ, ರ್ಯಾನ್‌ಬ್ಯಾಕ್ಸಿಯಂತಹ ಕಂಪನಿಗಳ ಪ್ರಮುಖ ಫಾರ್ಮಾ ಕಂಪನಿಗಳ ಔಷಧಗಳನ್ನು ಅಮೆರಿಕ ನಿಷೇಧಿಸಿದ ಉದಾಹರಣೆಗಳಿವೆ. ಆದರೆ ಇದೇ ಕಂಪನಿಗಳು ಬೇರೆ ದೇಶಗಳಲ್ಲಿ ಉತ್ಪಾದಿಸಿದ ಔಷಧಗಳಿಗೆ ಎಂದೂ ಈ ಸಮಸ್ಯೆ ಆಗಿಲ್ಲ. ನಮ್ಮ ಔಷಧ ಗುಣಮಟ್ಟ ಪರೀಕ್ಷೆಯ ‘ಸ್ಟ್ಯಾಡಂರ್ಡ್ ’ ಹೇಗಿದೆ ಇದರಲ್ಲಿ ಅರ್ಥೈಸಿಕೊಳ್ಳಬಹುದು.

ಭಾರತೀಯ ಉದ್ಯಮದ ಪ್ರಾತಿನಿಧಿಕ ಸಂಸ್ಥೆ ಅಸೋಚಾಮ್ (ASSOCHAM) ಭಾರತದ ಶೇ.25ರಷ್ಟು ಔಷಧಗಳು ನಕಲಿ ಅಥವಾ ಕಳಪೆ ಗುಣಮಟ್ಟದವು ಎಂದು ಈ ಹಿಂದೆ ವರದಿ ನೀಡಿತ್ತು. ಅಂದರೆ ನಕಲಿ ಔಷಧದ ಮಾರುಕಟ್ಟೆ ಸಾವಿರಾರು ಕೋಟಿ ರು.ಗಳನ್ನು ಮೀರಿದೆ. ನಿಯಮಾನುಸಾರ ಪ್ರೀ ಕ್ಲಿನಿಕಲ್ ಮತ್ತು ಪೋಸ್ಟ್‌ ಕ್ಲಿನಿಕಲ್ ಪ್ರಯೋಗಗಳನ್ನು ಪೂರ್ಣಗೊಳಿಸದೆಯೇ ಕಂಪನಿಗಳು ತಮ್ಮ ಪ್ರಭಾವ ಬಳಸಿ ಔಷಧಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಮಾಣ ಪತ್ರ ಪಡೆಯುವುದು ಗುಟ್ಟಿನ ವಿಚಾರವೇನೂ ಅಲ್ಲ. ಇದರೊಂದಿಗೆ ಬಹುತೇಕ ರಾಜ್ಯಗಳಲ್ಲಿ ಔಷಧ ನಿರೀಕ್ಷಕರ ಹುದ್ದೆಗಳು ಖಾಲಿ ಬಿದ್ದಿವೆ. ಈ ಇಲಾಖೆಯಲ್ಲಿ ಈಗಲೂ ದಶಕಗಳ ಹಿಂದೆ ನಿಗದಿಪಡಿಸಿದಷ್ಟೇ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಹಲವು ರಾಜ್ಯಗಳಲ್ಲಿ ಔಷಧಗಳ ಶುದ್ಧತೆಯನ್ನು ಪರಿಶೀಲಿಸುವ ಅತ್ಯಾಧುನಿಕ ಪ್ರಯೋಗಾಲಯ ಸೌಲಭ್ಯವಿಲ್ಲ. ಇಷ್ಟಾದರೂ ಭಾರತ ವಿಶ್ವದ ಮೂರನೇ ಅತಿ ದೊಡ್ಡ ಔಷಧಿ ತಯಾರಿಕಾ ದೇಶವಾಗಿರುವುದಕ್ಕೆ ಖುಷಿಪಡಬೇಕೋ, ಭಯಪಡಬೇಕೋ ತಿಳಿಯುತ್ತಿಲ್ಲ.

ನಕಲಿ ಔಷಧದ ಬಗ್ಗೆ ದೃಢಪಟ್ಟ ತಕ್ಷಣವೇ ರಾಜ್ಯ ಔಷಧ ನಿಯಂತ್ರಣ ಇಲಾಖೆಯು ಮಾರು ಕಟ್ಟೆಯಲ್ಲಿ, ವಿತರಕರಲ್ಲಿ ಮತ್ತು ಔಷಧ ಮಳಿಗೆಗಳಲ್ಲಿ ಲಭ್ಯವಿರುವ ನಕಲಿ ಔಷಧದ ಸಂಪೂರ್ಣ ಬ್ಯಾಚ್‌ಗಳನ್ನು ವಶಪಡಿಸಿಕೊಳ್ಳಬೇಕು. ಬಳಕೆ ಯೋಗ್ಯವಲ್ಲದ ಔಷಧವನ್ನು ತಯಾರಿಸಿದ ಕಂಪನಿಗೆ ತಕ್ಷಣವೇ ಉತ್ಪಾದನೆಯನ್ನು ನಿಲ್ಲಿಸುವಂತೆ ಆದೇಶ ನೀಡಬೇಕು. ಅದರ ಪರವಾನಗಿ ಯನ್ನು ತಕ್ಷಣ ಅಮಾನತುಗೊಳಿಸಬೇಕು. ನಿರ್ದಿಷ್ಟ ನಕಲಿ ಔಷಧದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಆದರೆ ನಿಷೇಧದ ಪಟ್ಟಿಗೆ ಸೇರಿದ ಬಳಿಕವೂ ಈ ಔಷಧಗಳು ನಮ್ಮ ಮೆಡಿಕಲ್ ಸ್ಟೋರ್‌ಗಳಲ್ಲಿ ಭದ್ರವಾಗಿ ಕುಳಿತಿರುತ್ತವೆ. ಕೆಲವು ವೈದ್ಯರು ನಿಷೇಧದ ಪಟ್ಟಿಗೆ ಸೇರಿದ ಔಷಧಗಳ ಪಟ್ಟಿಯನ್ನು ಗಮನಿಸದೆಯೇ ಈ ಔಷಧವನ್ನು ಶಿಫಾರಸು ಮಾಡುವುದುಂಟು. ಇದು ನಮ್ಮ ವ್ಯವಸ್ಥೆಯ ಲೋಪವಲ್ಲದೆ ಇನ್ನೇನು ?

ವಿಷಕಾರಿ ಅಥವಾ ಮಾರಣಾಂತಿಕ ನಕಲಿ ಔಷಧ ಉತ್ಪಾದನೆ ಪ್ರಕರಣಗಳಲ್ಲಿ 10 ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಮಾರಣಾಂತಿಕ ವಲ್ಲದ ಪ್ರಕರಣಗಳಲ್ಲಿ ಕೇವಲ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಆದರೆ ಇಷ್ಟು ವರ್ಷಗಳಲ್ಲಿ ನಕಲಿ ಔಷಧ ಮಾರಾಟದ ಕಾರಣಕ್ಕಾಗಿ ಯಾವುದೇ ವ್ಯಕ್ತಿ ಜೀವಾವಧಿ ಶಿಕ್ಷೆಗೊಳಗಾದ ಒಂದೇ ಒಂದು ಪ್ರಕರಣ ಈ ದೇಶದಲ್ಲಿ ವರದಿಯಾಗಿಲ್ಲ. ಮಾತ್ರೆಗಳ ಹೆಸರಿನಲ್ಲಿ ‘ಚಾಕ್‌ಪೀಸ್’ ಮಾರಾಟ ಮಾಡುವ ಕಂಪನಿಗಳೂ ಈ ದೇಶದಲ್ಲಿವೆ. ಹಿಮಾಚಲಪ್ರದೇಶದಲ್ಲಿರುವ ಕೆಲವು ಫಾರ್ಮಾ ಕಂಪನಿಗಳು ಪ್ರಯೋಗಾಲಯಗಳೇ ಇಲ್ಲದೆ ಔಷಧಿಗಳನ್ನು ಉತ್ಪಾದಿಸುತ್ತವೆ. ಈ ವಿಚಾರದಲ್ಲಿ ನಮ್ಮ ವ್ಯವಸ್ಥೆ ಎಷ್ಟು ಉದಾರಿ ಎನ್ನುವುದು ಈ ಅಂಶಗಳು ಸ್ಪಷ್ಟಪಡಿಸುತ್ತವೆ.

ನಕಲಿ ವೈದ್ಯರಾಗಲಿ, ನಕಲಿ ಔಷಧಗಳಾಗಲಿ ಇದಕ್ಕೆ ಬಲಿಯಾಗುವವರಲ್ಲಿ ಹೆಚ್ಚಿನವರು ಬಡ ಮತ್ತು ಮಧ್ಯಮ ವರ್ಗದ ರೋಗಿಗಳು. ಬೇರೆ ಯಾವುದೇ ಕ್ಷೇತ್ರದ ಭ್ರಷ್ಟಾಚಾರ ನೇರವಾಗಿ ನಮ್ಮ ಜೀವಕ್ಕೆ ಅಪಾಯ ತರಲಾರದು. ಆದರೆ ಆರೋಗ್ಯ ಸಚಿವಾಲಯದ ಯಾವುದೇ ಅಕ್ರಮ ನೇರವಾಗಿ ನಮ್ಮ ಜೀವಕ್ಕೆ ಕುತ್ತು ತರುವಂಥದ್ದು. ಮಧ್ಯಪ್ರದೇಶದಲ್ಲಿ 14 ಎಳೆಯ ಮಕ್ಕಳ ಸಾವಿಗೆ ಸಿರಪ್ ತಯಾರಿಕೆ ಕಂಪನಿ ಎಷ್ಟರ ಮಟ್ಟಿಗೆ ಕಾರಣವೋ ನಮ್ಮ ಭ್ರಷ್ಟ ವ್ಯವಸ್ಥೆ ಮತ್ತು ಇದನ್ನು ಪೋಷಿಸಿಕೊಂಡು ಬಂದ ಸರಕಾರಗಳೂ ಅಷ್ಟೇ ಕಾರಣ. ಔಷಧವೂ ನಕಲಿಯಾಗಿ, ವೈದ್ಯರೂ ನಕಲಿಯಾದರೆ ರೋಗಿಗಳ ಜೀವಕ್ಕೆ ಖಾತರಿ ಕೊಡುವವರಾರು ?

ಲೋಕೇಶ್​ ಕಾಯರ್ಗ

View all posts by this author