ಕೃಷಿರಂಗ
ಬಸವರಾಜ ಶಿವಪ್ಪ ಗಿರಗಾಂವಿ
ಕಬ್ಬು ವಿವರ ದಾಖಲಿಸುವಿಕೆ ಮತ್ತು ಕಟಾವು ಆದೇಶ ಕೊಡುವಿಕೆ ಪ್ರಕ್ರಿಯೆಗಳು ಆನ್‌ಲೈನ್ ಮುಖಾಂತರ ನಡೆಯಬೇಕು. ಇದರಿಂದ ವಾಹನಗಳು ಕೆಲಸ ನಿರ್ವಹಿಸು ತ್ತಿರುವ ನೈಜ ಸ್ಥಳಗಳನ್ನು ಮತ್ತು ತಪ್ಪು ಮಾಡಿದ ಸಿಬ್ಬಂದಿಯನ್ನು ಪಾಸ್‌ವರ್ಡ್ ಮುಖಾಂತರ ಗುರುತಿಸಲು ಸಾಧ್ಯವಿದೆ. ವಾಹನಗಳಿಗೆ ಜಿಪಿಎಸ್ ಅಳವಡಿಸುವು ದರಿಂದ ನೈಜ ವಾಹನ, ಸ್ಥಳ, ಸಮಯ ಮತ್ತು ಅಂತರವನ್ನು ಗುರುತಿಸಬಹುದು.
ಪ್ರಸಕ್ತ ದಿನಮಾನದಲ್ಲಿ ಸಕ್ಕರೆ ಕಾರ್ಖಾನೆಗಳ ‘ವೇ-ಬ್ರಿಜ್’ನಲ್ಲಿ (Weighbridge) ಕಬ್ಬು ತುಂಬಿದ ವಾಹನಗಳಿಲ್ಲದೆಯೇ ತೂಕವು ದಾಖಲಾಗಿ ಕೋಟ್ಯಂತರ ರುಪಾಯಿ ಹಣವು ಮೋಸವಾಗುತ್ತಿದೆ. ಗುಣಮಟ್ಟದ ಕಬ್ಬಿನ ಕೊರತೆಯಿಂದಾಗಿ ಮೊದಲೇ ಸಕ್ಕರೆ ಕಾರ್ಖಾನೆ ಗಳು ಹಾನಿಯಲ್ಲಿರುವಾಗ ಈ ನಕಲಿ ತೂಕಗಳಿಂದಾಗಿ ಮತ್ತಷ್ಟು ಹಾನಿಗೀಡಾಗುತ್ತಿವೆ.
ಕಾರ್ಖಾನೆಗಳ ಸಾಮರ್ಥ್ಯಕ್ಕನುಗುಣವಾಗಿ ‘ಗಾಡಿ-ಗ್ಯಾಂಗ್ ಕರಾರು’ ಹಾಗೂ ಕಬ್ಬು ಪೂರೈಕೆಯಲ್ಲಿನ ಅನಾರೋಗ್ಯ ಪೈಪೋಟಿಯು ಹೆಚ್ಚಾಗುತ್ತಿರುವುದರಿಂದ ಈ ನಕಲಿ ತೂಕಗಳು ಸಂಭವಿಸುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಮೋಸ ವನ್ನು ಅನುಭವಿಸಿದ ಕಾರ್ಖಾನೆಗಳ ಮಾಹಿತಿಯನ್ನು ಆಧರಿಸಿ ಈ ಕೆಳಗಿನ ಸಂದರ್ಭ ಗಳಲ್ಲಿ ನಕಲಿ ತೂಕವಾಗುವ ಅವಕಾಶಗಳು ಹೆಚ್ಚಾಗಿರುತ್ತವೆ.
ಜಾಮಿಂಗ್ ಸಮಯದಲ್ಲಿ ಪ್ರತಿದಿನ ಒಂದೇ ಹೆಸರಿನಲ್ಲಿ, ಒಂದೇ ಕೋಡ್ ನಂಬರ್‌ನಲ್ಲಿ ಡಬಲ್ ಟ್ರಿಪ್ ಸಾಗಣೆ ಮಾಡಿರುವ, ಡಬಲ್ ಕಟಾವು ಆದೇಶವಿರುವ, ಬಹುಬೇಗನೆ ಖಾಲಿಯಾಗಿರುವ ಹಾಗೂ ಡಬಲ್ ಟೋಕನ್ ಪಡೆದಿರುವ ವಾಹನಗಳಿಂದ ಮೋಸ ವಾಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ; ಮುಂಗಡ ಹಣ ಪಡೆದು ಗ್ಯಾಂಗ್ ರದ್ದಾಗಿ ಕೆಲಸ ನಿರ್ವಹಿಸುತ್ತಿರುವ ವಾಹನಗಳು ವಾರದಲ್ಲಿ ಒಂದೆರಡು ಟ್ರಿಪ್ ಮಾತ್ರ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ; ಟೋಕನ್‌ಗಳ ಸರತಿ ನಂಬರ್‌ಗಳಂತೆ ಖಾಲಿಯಾಗದೆ ಕಡಿಮೆ ಸಮಯದ (ಸೆಕೆಂಡುಗಳ) ಅಂತರದಲ್ಲಿ Gross Weight ಹಾಗೂ Tare Weight ಆಗಿರುವ ವಾಹನ ಗಳಿಂದ; ಒಂದು ವಾಹನದ ತೂಕವನ್ನು ಎರಡು ಸಲ ಸೇವ್ ಮಾಡುವುದು, ಅಂದರೆ ಮೊದಲು ವಾಹನವನ್ನು ವೇ-ಬ್ರಿಜ್ ಮೇಲೆ ಸ್ವಲ್ಪ ವೇಗವಾಗಿ ಅಡಿಸುವಾಗ ತೂಕವನ್ನು ಸೇವ್ ಮಾಡುವುದು, ಮತ್ತೊಮ್ಮೆ ಅದೇ ವಾಹನವನ್ನು ಅದೇ ಸಮಯದಲ್ಲಿ ಅಡಿಸದೆ ನಿಲ್ಲಿಸಿ ತೂಕವನ್ನು ಸೇವ್ ಮಾಡುವುದು.
ಇದನ್ನೂ ಓದಿ: Basavaraj Shivappa Giraganvi Column: ಮಾರಕವಾಗದಿರಲಿ ಕೇಂದ್ರದ ಎಥೆನಾಲ್ ನೀತಿ
ಒಂದೇ ವಾಹನದಿಂದಾಗುವ ಎರಡು ತೂಕಗಳಲ್ಲಿ ಸ್ವಲ್ಪ ವ್ಯತ್ಯಾಸವಿರಲೆಂದು ಹೀಗೆ ಮಾಡಲಾಗುತ್ತದೆ; ಹೆಚ್ಚು ತೂಕವಿರುವ ಕಬ್ಬು ವಾಹನಗಳು ಬಂದು ಪದ್ಧತಿಯಂತೆ ತೂಕವಾಗಿ ವೇ-ಬ್ರಿಜ್‌ನಿಂದ ಹೊರ ಹೋಗುವಾಗ ತಕ್ಷಣವೇ ಹಿಂದಿನಿಂದ ಬರುವ, ಕಡಿಮೆ ಕಬ್ಬು ತೂಕವಿರುವ ವಾಹನಕ್ಕೆ ಮೊದಲಿನ ವಾಹನದ ಹೆಚ್ಚು ತೂಕವನ್ನು ಸೇವ್ ಮಾಡುವುದು; ವೇ-ಬ್ರಿಜ್ ಮೇಲೆ ಚಾಲಕ ಸಮೇತ Gross Weight ಮಾಡುವುದು, ನಂತರ Tare Weight ಮಾಡುವಾಗ ಚಾಲಕ, ಟ್ರಾಕ್ಟರ್ ಎಂಜಿನ್ ಅಥವಾ ಮುಂದಿನ ಚಕ್ರಗಳನ್ನು ವೇ-ಬ್ರಿಜ್‌ನಿಂದ ಹೊರಗಿಟ್ಟು ತೂಕ ಮಾಡುವುದರಿಂದ; ವೇ-ಬ್ರಿಜ್‌ನಲ್ಲಿರುವ ಸಿಬ್ಬಂದಿಯು ತೂಕವನ್ನು ಮನಸೋ ಇಚ್ಛೆ ಟೈಪ್ ಮಾಡುವುದರಿಂದ; ಪಾಳಿಯ (ಶಿಫ್ಟ್) ಬದಲಾವಣೆ ಯಾಗುವ ಮೊದಲು ಒಂದು ಆದೇಶವಿರುವ ಕಬ್ಬು ವಾಹನವನ್ನು ತೂಕ ಮಾಡಿ ಹತ್ತಿರ ದಲ್ಲಿ ನಿಲ್ಲಿಸುವುದು, ಪಾಳಿ ಬದಲಾವಣೆಯ ನಂತರ ಬರುವ ಬೇರೆ ಸಿಬ್ಬಂದಿಗೆ ಏನೋ ಕಾರಣಗಳನ್ನು ಹೇಳಿ ಮತ್ತೊಂದು ಆದೇಶದ ಮೇಲೆ ಅದೇ ವಾಹನ ವನ್ನು ತೂಕ ಮಾಡಿಸುವುದು; ವೇ-ಬ್ರಿಜ್‌ನಲ್ಲಿ ಕೇವಲ ಒಬ್ಬರಿಂದ ವಂಚನೆಯಾಗುವುದು ಅಸಾಧ್ಯ; ಕ್ಷೇತ್ರ ಸಿಬ್ಬಂದಿ, ಸೆಕ್ಯೂರಿಟಿ, ಟೋಕನ್ ಕ್ಲರ್ಕ್, ವೇಮೆಂಟ್ ಕ್ಲರ್ಕ್, ರೈತರು, ಕಟಾವುದಾರರು ಮತ್ತು ವಾಹನಗಳ ಮಾಲೀಕರು ಈ ವಂಚನೆಯಲ್ಲಿ ಸೇರಿರಬಹುದಾಗಿದೆ; ಶೀಘ್ರದಲ್ಲಿ ಇನ್ನೊಂದು ಹೊಸ ಮೋಸವು ಸಂಭವಿಸುವ ದಿನಗಳು ದೂರವಿಲ್ಲ- ಅಂದರೆ ನೈಜ ಅಂತರಕ್ಕಿಂತ ಹೆಚ್ಚಿನ ಅಂತರದಿಂದ ಕಬ್ಬು ಸಾಗಾಣೆ ಮಾಡುವುದು.
ಈ ಮೇಲಿನ ಸಂದರ್ಭಗಳೆಲ್ಲವೂ ವಂಚನೆಗಳಾಗದಿದ್ದರೂ ಮೋಸವು ಹೆಚ್ಚಾಗಿ ಈ ಸಂದರ್ಭಗಳಲ್ಲಿಯೇ ಸಂಭವಿಸಬಹುದಾಗಿದೆ. ಆದ್ದರಿಂದ ಕಾರ್ಖಾನೆಗಳು ಈ ಮೇಲಿನ ಪ್ರಕ್ರಿಯೆಗಳ ಮೇಲೆ ನಿಗಾವಹಿಸಬೇಕು. ಮೋಸವನ್ನು ತಡೆಗಟ್ಟುವ ಪರಿಹಾರೋಪಾಯ ಗಳು ಹೀಗಿವೆ: ಕಬ್ಬು ವಿವರ ದಾಖಲಿಸುವಿಕೆ ಮತ್ತು ಕಟಾವು ಆದೇಶ ಕೊಡುವಿಕೆ ಪ್ರಕ್ರಿಯೆಗಳು ಕ್ಷೇತ್ರ ಸಿಬ್ಬಂದಿಯ ಮೊಬೈಲ್ (ಆನ್‌ಲೈನ್) ಮುಖಾಂತರ ನಡೆಯಬೇಕು.
ಇದರಿಂದ ವಾಹನಗಳು ಕೆಲಸ ನಿರ್ವಹಿಸುತ್ತಿರುವ ನೈಜ ಸ್ಥಳಗಳನ್ನು ಮತ್ತು ತಪ್ಪು ಮಾಡಿದ ಸಿಬ್ಬಂದಿಯನ್ನು ಪಾಸ್‌ವರ್ಡ್ ಮುಖಾಂತರ ಗುರುತಿಸಬಹುದು. ವಾಹನದ ಎಂಟ್ರಿ ಗೇಟ್, ವೇ-ಬ್ರಿಜ್ ಗೇಟ್, ಕೇನ್ ಯಾರ್ಡ್ ಹಾಗೂ ವೇ-ಬ್ರಿಜ್‌ನ ಸಂಪೂರ್ಣ ಕ್ಷೇತ್ರವು ಒಳಗೊಳ್ಳುವಂತೆ ಸಿಸಿ ಟಿವಿಯನ್ನು ಅಳವಡಿಸಬೇಕು.
ವಾಹನಗಳಿಗೆ ಜಿಪಿಎಸ್ ವ್ಯವಸ್ಥೆಯನ್ನು ಅಳವಡಿಸಬೇಕು. ಇದರಿಂದ ನೈಜ ವಾಹನ, ಸ್ಥಳ, ಸಮಯ ಮತ್ತು ಅಂತರವನ್ನು ಗುರುತಿಸಬಹುದಾಗಿದೆ.
ವಾಹನಗಳಿಗೆ ಫೇಸ್‌ಟ್ಯಾಗ್ ಮುಖಾಂತರ ಟೋಕನ್, ವೇ-ಬ್ರಿಜ್‌ನಲ್ಲಿ ಮಾನವ ರಹಿತ ಪ್ರಕ್ರಿಯೆಗಳು, ಅಟೋಮೇಷನ್ ಹಾಗೂ ಸ್ವಯಂಚಾಲಿತವಾಗಿ ತೂಕವಾಗುವ ವ್ಯವಸ್ಥೆ ಯನ್ನು ಅಳವಡಿಸಿಕೊಳ್ಳಬೇಕು.
ಪ್ರತಿ ಪಾಳಿಯಲ್ಲಿ ರಿಜಿಸ್ಟರ್‌ನಲ್ಲಿ ದಾಖಲಾಗುವ ವಾಹನಗಳನ್ನು, ವಾಹನದ ನಂಬರ್ ಗಳನ್ನು ಮತ್ತು ಸರದಿ ಸಾಲಿನಲ್ಲಿ ನಿಂತಿರುವ ವಾಹನಗಳನ್ನು ಭೌತಿಕವಾಗಿ ಪರಿಶೀಲಿಸ ಬೇಕು.
ಪ್ರತಿವಾಹನದ ಸೆಕ್ಯೂರಿಟಿ ಟೋಕನ್ ಮತ್ತು ಸಮಯ, ರಜಿಸ್ಟರ್ನಲ್ಲಿ ದಾಖಲಾದ ನಂಬರ ಮತ್ತು ಸಮಯ ಹಾಗೂ ಟೋಕನ್ ನಂಬರ್ ಮತ್ತು ಸಮಯಗಳನ್ನು ಪರಿಶೀಲಿಸಿ ತೂಕ ಮಾಡಬೇಕು.
ಪ್ರತಿ ಪಾಳಿಯಲ್ಲಿ ತೂಕವಾಗಿರುವ, ರಿಜಿಸ್ಟರ್ʼನಲ್ಲಿ ನಮೂದಾಗಿರುವ ಮತ್ತು ಕಾರ್ಖಾನೆಗೆ ಬಂದಿರುವ ವಾಹನಗಳ ಸಂಖ್ಯೆಗಳು ಸರಿಯಾಗಿವೆ ಎಂಬುದನ್ನು ಸಿಸಿ ಟಿವಿ ಮುಖಾಂತರ ಭೌತಿಕವಾಗಿ ಖಚಿತಪಡಿಸಿಕೊಳ್ಳಬೇಕು.
ಒಂದೇ ವಾಹನದಲ್ಲಿ ಇಬ್ಬರು ರೈತರ ಡಬಲ್ ವೇಮೆಂಟ್ ಇದ್ದಲ್ಲಿ ಅದನ್ನು ಸಹ ಸಂಬಂಧಿ ಸಿದ ಸಿಬ್ಬಂದಿಯ ಪತ್ರ ಹಾಗೂ ಸಿಸಿ ಟಿವಿ ಮುಖಾಂತರ ಭೌತಿಕವಾಗಿ ಖಚಿತಪಡಿಸಿಕೊಳ್ಳ ಬೇಕು.
ವೇ-ಬ್ರಿಜ್ ಮೇಲೆ Gross Weight ಅಥವಾ Tare Weight ಸಲುವಾಗಿ ಬಂದ ವಾಹನವು ಒಮ್ಮೆ ಮಾತ್ರ ಸೇವ್ ಆಗಬೇಕು. ವೇ-ಬ್ರಿಜ್ ಮೇಲಿರುವಾಗಲೇ ಮತ್ತೊಮ್ಮೆ ಸೇವ್ ಆಗಬಾರದು. ಒಮ್ಮೆ ತೂಕವಾದ ವಾಹನವು ವೇ-ಬ್ರಿಜ್‌ನಿಂದ ಹೊರ ಹೋಗಿ ವೇ-ಬ್ರಿಜ್ ‘ಝೀರೋ’ ಆಗಬೇಕು; ನಂತರದಲ್ಲಿ ಮತ್ತೊಂದು ವಾಹನವು ವೇ-ಬ್ರಿಜ್ ಮೇಲೆ ಬಂದು ಹೊಸ ತೂಕ ಸೇವ್ ಆಗಬೇಕು.
ಒಂದೇ ಶಿಫ್ಟ್ʼನಲ್ಲಿ ಒಂದೇ ಪಾಸ್‌ವರ್ಡ್‌ಲ್ಲಿ Gross Weight ಮತ್ತು Tare Weight ಆಗಿರುವ ವಾಹನಗಳನ್ನು ಪರಿಶೀಲಿಸಬೇಕು. ಒಂದರ ನಂತರ ಒಂದು ತೂಕವಾಗುವ ವಾಹನಗಳ ವೇಟಿಂಗ್ ಸಮಯ ಮತ್ತು ಟೋಕನ್ ನಂಬರ್‌ಗಳನ್ನು ಪರಿಶೀಲಿಸಬೇಕು. ವಾಹನಗಳ ವೇಟಿಂಗ್ ಸಮಯ ಮತ್ತು ಟೋಕನ್ ನಂಬರ್ ಹೆಚ್ಚು-ಕಡಿಮೆಯಾದಲ್ಲಿ ಅಂಥ ವಾಹನ ಗಳನ್ನು ಪರಿಶೀಲಿಸಬೇಕು.
ವಾಹನಗಳು ಖಾಲಿಯಾದ ತಕ್ಷಣ ಸಂಬಂಧಿಸಿದ ಕ್ಷೇತ್ರ ಸಿಬ್ಬಂದಿಗೆ ಮೆಸೇಜ್ ಬರುವಂತಾಗ ಬೇಕು. ಇದರಿಂದ ಮೋಸದಿಂದ ಖಾಲಿಯಾಗುತ್ತಿರುವ ವಾಹನಗಳ ಮಾಹಿತಿ ದೊರೆಯು ತ್ತದೆ. ಪ್ರತಿದಿನ ಡೀಸೆಲ್ ತೆಗೆದುಕೊಳ್ಳದಿರುವ ವಾಹನಗಳನ್ನು ಪರಿಶೀಲಿಸಬೇಕು. ವೇ-ಬ್ರಿಜ್ ಗೆ ಸಂಬಂಧಿಸಿರುವ ಸಿಬ್ಬಂದಿಯು ಪ್ರತಿದಿನ ಕೆಲಸ ನಿರ್ವಹಿಸುವ ಕಾಂಬಿನೇಷನ್ ಪಾಳಿ ಯನ್ನು ಬದಲಿಸುತ್ತಿರಬೇಕು. ಅಂದರೆ, ಇಂದು ಸೆಕ್ಯೂರಿಟಿಯಲ್ಲಿ, ತೂಕದಲ್ಲಿ, ಟೋಕನ್ ನಲ್ಲಿ ಕೆಲಸ ಮಾಡಿದ ಸಿಬ್ಬಂದಿಯನ್ನು ಮರುದಿನವೂ ಅದೇ ಕೆಲಸಗಳಿಗೆ ಮತ್ತು ಅದೇ ಸಮಯದಲ್ಲಿ ನಿಯುಕ್ತಿಗೊಳಿಸಬಾರದು. ಪ್ರತಿದಿನ ಸಮಪ್ರಮಾಣದಲ್ಲಿ ಅಥವಾ ಸ್ವಲ್ಪ ವ್ಯತ್ಯಾಸದಲ್ಲಿ ತೂಕವಾಗಿರುವ ವಾಹನಗಳನ್ನು ಪರಿಶೀಲಿಸಬೇಕು.
ಒಂದು ವಾಹನದ ಮೇಲೆ ಒಂದು ಕಬ್ಬು ಕಟಾವು ಆದೇಶ ಚಾಲ್ತಿಯಲ್ಲಿರಬೇಕು, ಹೊಸ ಕಟಾವು ಆದೇಶ ತಯಾರಿಸುವಾಗ ಹಿಂದಿನ ಕಟಾವು ಆದೇಶಗಳು ಸ್ವಯಂಚಾಲಿತವಾಗಿ ರದ್ದಾಗಬೇಕು.
ಒಂದೇ ವಾಹನದಲ್ಲಿ ಡಬಲ್ ವೇಮೆಂಟ್ ಇದ್ದಲ್ಲಿ ಡಬಲ್ ಟೋಕನ್ ತೆಗೆಯುವಾಗ ಅದೊಂದು ಟ್ರಿಪ್‌ಗೆ ಆ ಕ್ಷಣದಲ್ಲಿ ಮಾತ್ರ ಅನುಮತಿ ಪಡೆಯಬೇಕು. ‘ನಕಲಿ ತೂಕಗಳ ಕುರಿತು ಖಚಿತ ಮಾಹಿತಿ ಕೊಟ್ಟವರ ಹೆಸರನ್ನು ಗುಪ್ತವಾಗಿಡಲಾಗುವುದು ಮತ್ತು ಅಂಥವ ರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು; ನಕಲಿ ತೂಕಗಳಿಗೆ ಕಾರಣವಾದವರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟು ಜೈಲಿಗೆ ಹಾಕಲಾಗುವುದು’ ಎಂದು ವೇ-ಬ್ರಿಜ್ ಹತ್ತಿರ ದೊಡ್ಡ ಫಲಕ ಹಾಕಬೇಕು.
ಈ ರೀತಿಯಾಗಿ ವೇ-ಬ್ರಿಜ್ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಇವುಗಳ ಪರಿಶೀಲನೆಯನ್ನು ವಿಶೇಷ ಸಿಬ್ಬಂದಿಯು ನಿರ್ವಹಿಸಬೇಕು. ಅಂದಾಗ ಮಾತ್ರ ವೇ-ಬ್ರಿಜ್ ನಲ್ಲಿ ಸಂಭವಿಸುವ ವಂಚನೆಯನ್ನು ಗುರುತಿಸಬಹುದಾಗಿದೆ ಮತ್ತು ತಡೆಗಟ್ಟಬಹುದಾಗಿದೆ.
(ಲೇಖಕರು ಸಹಾಯಕ ಮಹಾಪ್ರಬಂಧಕರು, ಕೃಷಿ ಇಲಾಖೆ)