ಅಮೃತಕಾಲ
ಲೀನಾ ಜೋಶಿ
ಗಾಜಾದಲ್ಲಿ ಒಂದು ಮಗು ತನ್ನ ಮನೆಯ ಅವಶೇಷಗಳ ನಡುವೆ ನಿಂತಿದೆ. ಅದೀಗ ಮನೆಯಲ್ಲ, ವಿಳಾಸವೂ ಅಲ್ಲ. ಒಂದು ನೆನಪು ಮಾತ್ರ. ಇಂದು ಅಲ್ಲಿ ಕೇವಲ ಕಲ್ಲು, ಧೂಳು ಮತ್ತು ಮೌನ ಮಾತ್ರ ಉಳಿದಿದೆ. ಶಾಲೆಗೆ ಹೋಗಬೇಕಿದ್ದ ಮಕ್ಕಳೀಗ ನಿರಾಶ್ರಿತರ ಶಿಬಿರಗಳಲ್ಲಿ ಸಾಲಿನಲ್ಲಿ ನಿಂತಿzರೆ. ಜೀವನ ಕಟ್ಟಿಕೊಳ್ಳಬೇಕಿದ್ದ ಯುವಕರು ಅವಶೇಷಗಳ ನಡುವೆ ತಮ್ಮ ಭವಿಷ್ಯವನ್ನು ಹುಡುಕು ತ್ತಿದ್ದಾರೆ. ಆದರೆ ಜಗತ್ತಿನ ಮತ್ತೊಂದು ಮೂಲೆಯಲ್ಲಿ, ಇದೇ ಸಮಯದಲ್ಲಿ, ಕೆಲವು ಕಂಪನಿಗಳ ವಾರ್ಷಿಕ ವರದಿಗಳು ಅತ್ಯದ್ಭುತ ಬೆಳವಣಿಗೆಯನ್ನು ದಾಖಲಿಸುತ್ತಿವೆ.
ಯುದ್ಧ ಒಂದು ವಿಚಿತ್ರ ಆರ್ಥಿಕತೆ. ಅದು ಒಂದು ನಗರದ ದುಃಖವನ್ನು ಮತ್ತೊಂದು ನಗರದ ಆದಾಯವಾಗಿ ಪರಿವರ್ತಿಸುತ್ತದೆ. ಒಂದು ಕುಟುಂಬದ ನಾಶವನ್ನು ಮತ್ತೊಂದು ಕಂಪನಿಯ ಲಾಭವಾಗಿ ದಾಖಲಿಸುತ್ತದೆ. ಮಧ್ಯಪ್ರಾಚ್ಯದ ಮೇಲೆ ಬೀಳುವ ಪ್ರತಿಯೊಂದು ಬಾಂಬ್‌ನ ಹಿಂದೆ ರಾಜಕೀಯದ ಜೊತೆಗೆ ಒಂದು ಬೃಹತ್ ಉದ್ಯಮವೂ ಇದೆ. ಅದೇ ಆಯುಧಗಳ ಉದ್ಯಮ. ಜಾಗತಿಕ ವಾಗಿ ದೇಶಗಳು ತಮ್ಮ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಹೆಚ್ಚಿನ ಶೇಕಡಾವಾರು ಪ್ರಮಾಣ ವನ್ನು ಮಿಲಿಟರಿ ವೆಚ್ಚಕ್ಕಾಗಿ ಕಂಡು ಕೇಳರಿಯದ ಮಿತಿಗೆ ಏರಿಸಿವೆ.
ಕಳೆದ ಕೆಲವರ್ಷಗಳಲ್ಲಿ ಮಿಲಿಟರಿ ವೆಚ್ಚವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ೨೦೨೫ ರಲ್ಲಿ ಜಾಗತಿಕ ಮಿಲಿಟರಿ ವೆಚ್ಚ ದಾಖಲೆಯ 2.88 ಟ್ರಿಲಿಯನ್ (ಸುಮಾರು 271 ಲಕ್ಷ ಕೋಟಿ) ತಲುಪಿದೆ. ಇರಾನ್, ಲೆಬನಾನ್, ಉಕ್ರೇನ್ ಮತ್ತು ಗಾಜಾ ಯುದ್ಧಗಳು ಸೇರಿದಂತೆ ಹಲವು ಸಂಘರ್ಷ ಗಳು ಈ ಬೇಡಿಕೆಯನ್ನು ಹೆಚ್ಚಿಸಿವೆ.
ಲಾಕ್ಹೀಡ್ ಮಾರ್ಟಿನ್, ಆರ್‌ಟಿಎಕ್ಸ್, ನಾತ್ರೋಪ್ ಗ್ರುಮನ್, ಬಿಎಇ ಸಿಸ್ಟಮ್ಸ್, ಎಲ್ಬಿಟ್ ಸಿಸ್ಟಮ್ಸ್- ಇವು ಶಸ್ತ್ರಾಸ್ತ್ರಗಳನ್ನು ಪೂರೈಸುವ ಬೃಹತ್ ಕಂಪೆನಿಗಳು. ಇವು ಜಾಗತಿಕ ರಾಜಕೀಯ ಮತ್ತು ಯುದ್ಧದ ದಿಕ್ಕನ್ನು ನಿಯಂತ್ರಿಸುವ ಶಕ್ತಿಶಾಲಿ ವ್ಯವಸ್ಥೆಗಳು ಸಹ. ಮುಂದಿನ ಹತ್ತು ವರ್ಷಗಳಿಗೆ ಈ ಕಂಪೆನಿಗಳ ಆರ್ಡರ್ ಬುಕ್ ತುಂಬಿ ತುಳುಕುತ್ತಿದೆ.
ಇವು ಕಾನೂನುಬದ್ಧ ವ್ಯವಹಾರಗಳು. ರಾಷ್ಟ್ರಗಳು ತಮ್ಮ ಭದ್ರತೆಗಾಗಿ ಆಯುಧಗಳನ್ನು ಖರೀದಿಸು ತ್ತವೆ. ಯುದ್ಧದ ನೆರಳಿನಲ್ಲಿ ಖರೀದಿಯ ಆರ್ಭಟಗಳು ಹೆಚ್ಚುತ್ತವೆ. ಖರೀದಿ ಹೆಚ್ಚಾದಾಗ, ಆದಾಯ ವೂ ಹೆಚ್ಚುತ್ತದೆ. ಆದಾಯ ಹೆಚ್ಚಾದಾಗ, ಡಿವಿಡೆಂಡ್ ವಿತರಿಸಲಾಗುತ್ತದೆ, ಬೋನಸ್ ಶೇರ್ ಹಂಚಲಾಗುತ್ತದೆ.
ಇದನ್ನೂ ಓದಿ: Leena Joshi Column: ಕಂಪನಿ ತೋರಿಸುವ ಆದಾಯ ನೋಡಿ ಮೋಸ ಹೋಗಬೇಡಿ !
ಷೇರುದಾರರು ಸಂತೋಷಪಡುತ್ತಾರೆ. ಜಗತ್ತಿನಲ್ಲಿ ಶಾಂತಿ ಮತ್ತು ಭದ್ರತೆ ಕಡಿಮೆಯಾದಷ್ಟೂ, ಈ ರಕ್ಷಣಾ ವಲಯದ ಕಾರ್ಪೊರೇಟ್ ಕಂಪನಿಗಳ ಲಾಭ ಮತ್ತು ಮಾರುಕಟ್ಟೆ ಮೌಲ್ಯ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿಯೇ ಇದನ್ನು ಯುದ್ಧದ ಆರ್ಥಿಕ ವ್ಯವಸ್ಥೆ (War Economy) ಎಂದು ಕರೆಯ ಲಾಗುತ್ತದೆ.
ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಇಂಜಿನಿಯರ್‌ಗಳು, ತಂತ್ರಜ್ಞರು ಮತ್ತು ಕಾರ್ಮಿಕರಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಪ್ರಸ್ತುತ ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯ ತಲೆಗೆ ಸರಾಸರಿ 352 (ಸುಮಾರು ರೂ.29,000) ಮಿಲಿಟರಿ ವೆಚ್ಚವಾಗುತ್ತಿದೆ.
ಪುನರ್ನಿರ್ಮಾಣ ಮಾರುಕಟ್ಟೆ
ಬಾಂಬ್‌ಗಳು ಬೀಳುವುದನ್ನು ನಿಲ್ಲಿಸಿದ ನಂತರ ಮತ್ತೊಂದು ಉದ್ಯಮ ಆರಂಭವಾಗುತ್ತದೆ- ಅದೇ ಪುನರ್ನಿರ್ಮಾಣ. ಧ್ವಂಸಗೊಂಡ ನಗರವನ್ನು ಮತ್ತೆ ಕಟ್ಟಬೇಕು. ಕುಸಿದ ಆಸ್ಪತ್ರೆಗಳನ್ನು ಎಬ್ಬಿಸ ಬೇಕು. ನೆಲಸಮವಾದ ಶಾಲೆಗಳಿಗೆ ಮತ್ತೆ ಮೇಲ್ಛಾವಣಿ ಹಾಕಬೇಕು. ಕುಡಿಯುವ ನೀರು, ವಿದ್ಯುತ್, ರಸ್ತೆಗಳು, ಮನೆಗಳು- ಎಲ್ಲವನ್ನೂ ಮತ್ತೆ ನಿರ್ಮಿಸಬೇಕು. ಅಲ್ಲಿಂದ ಆರಂಭವಾಗುತ್ತದೆ
ಪುನರ್ನಿರ್ಮಾಣದ ಉದ್ಯಮ. ಬಿಲಿಯನ್‌ಗಳಷ್ಟು ಡಾಲರ್ ನೆರವು ಬರುತ್ತದೆ. ಅಂತಾರಾಷ್ಟ್ರೀಯ ಬ್ಯಾಂಕ್‌ಗಳು ಸಾಲ ನೀಡುತ್ತವೆ. ಶ್ರೀಮಂತ ರಾಷ್ಟ್ರಗಳು ನೆರವು ಘೋಷಿಸುತ್ತವೆ. ನಂತರ ದೊಡ್ಡ ದೊಡ್ಡ ಗುತ್ತಿಗೆಗಳು ಹೊರ ಬೀಳುತ್ತವೆ. ನಿರ್ಮಾಣ ಕಂಪನಿಗಳು, ಎಂಜಿನಿಯರಿಂಗ್ ಸಂಸ್ಥೆಗಳು, ಸಲಹಾ ಸಂಸ್ಥೆಗಳಿಗೆ ದಶಕಗಳಿಗಾಗುವಷ್ಟು ಕೈತುಂಬ ಕೆಲಸ. ಮತ್ತೆ ಹಣ ಹರಿಯಲು ಆರಂಭ ವಾಗುತ್ತದೆ.
ಅದೇ ಭೂಮಿಯಲ್ಲಿ. ಅದೇ ಅವಶೇಷಗಳ ಮೇಲೆ. ಅದೇ ಜನರ ಕಣ್ಣೀರಿನ ಮಧ್ಯೆ. ಪುನರ್ನಿರ್ಮಾಣ ದ ಹೆಸರಿನಲ್ಲಿ ಇದೊಂದು ಸುವರ್ಣಾವಕಾಶ. ಯುರೋಪಿಯನ್ ಯೂನಿಯನ್, ವಿಶ್ವಸಂಸ್ಥೆ ಮತ್ತು ವಿಶ್ವಬ್ಯಾಂಕ್‌ನ 2026ರ ಮೌಲ್ಯಮಾಪನದ ಪ್ರಕಾರ, ಗಾಜಾದ ಪುನರ್ನಿರ್ಮಾಣ ಮತ್ತು ಆರ್ಥಿಕ ಚೇತರಿಕೆಗೆ ಮುಂದಿನ ಹತ್ತು ವರ್ಷಗಳಲ್ಲ ಸುಮಾರು 71.4 ಬಿಲಿಯನ್ (ಸುಮಾರು 7000 ಕೋಟಿ) ಅಗತ್ಯವಿದೆ.
ನಾಶವಾದ ಮನೆಗಳು, ಆಸ್ಪತ್ರೆಗಳು, ಶಾಲೆಗಳು, ರಸ್ತೆ, ನೀರು ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಮರುನಿರ್ಮಿಸಲು ಜಾಗತಿಕ ನಿರ್ಮಾಣ ಮತ್ತು ಎಂಜಿನಿಯರಿಂಗ್ ಕಂಪನಿಗಳಿಗೆ ದೊಡ್ಡ ಅವಕಾಶ ಗಳು ಸೃಷ್ಟಿಯಾಗುತ್ತವೆ. Bechtel, fluor, Parsons, Louis Berger, Halliburton ಇವು ಇರಾಕ್ ಮತ್ತು ಆಫ್ಘಾನಿಸ್ತಾನ ಯುದ್ಧಗಳ ನಂತರ ದೊಡ್ಡ ಗುತ್ತಿಗೆಗಳನ್ನು ಪಡೆದ ಕಂಪನಿಗಳು. ಈ ಕಂಪನಿಗಳು ರಸ್ತೆ, ವಿದ್ಯುತ್ ಜಾಲ, ತೈಲ ಸೌಲಭ್ಯಗಳು, ನೀರಿನ ಯೋಜನೆಗಳು ಮತ್ತು ಸರಕಾರಿ ಮೂಲ ಸೌಕರ್ಯಗಳನ್ನು ಪುನರ್ನಿಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಯುದ್ಧದಿಂದ ಉಂಟಾದ ವಿನಾಶವನ್ನು ಸರಿಪಡಿಸಲು ಬೇಕಾದ ಹಣ ಎಲ್ಲಿಂದ ಬರುತ್ತದೆ? ಸಾಮಾನ್ಯವಾಗಿ ಅದು, ತೆರಿಗೆದಾರರ ಹಣ, ಅಂತರರಾಷ್ಟ್ರೀಯ ನೆರವು,ಅಭಿವೃದ್ಧಿ ಬ್ಯಾಂಕ್ ಸಾಲಗಳು, ದಾನಿ ರಾಷ್ಟ್ರಗಳ ಕೊಡುಗೆಗಳು. ಅಂದರೆ, ಯುದ್ಧದ ವೆಚ್ಚವನ್ನು ಸಮಾಜ ಭರಿಸುತ್ತದೆ. ಪುನರ್ನಿರ್ಮಾಣದ ಗುತ್ತಿಗೆಗಳಿಂದ ಖಾಸಗಿ ಕಂಪನಿಗಳು ಆದಾಯ ಗಳಿಸುತ್ತವೆ. ಈ ಕಾರಣದಿಂದ ಅರ್ಥಶಾಸ್ತ್ರಜ್ಞರು ಯುದ್ಧವನ್ನು Destruction- Reconstruction Economy ಎಂದು ಕರೆಯುತ್ತಾರೆ. ಮೊದಲು ಆಯುಧ ಉದ್ಯಮ ಬೆಳೆಯುತ್ತದೆ; ನಂತರ ನಿರ್ಮಾಣ ಉದ್ಯಮ ಬೆಳೆಯುತ್ತದೆ.
ಇರಾನ್ ಮುಂದಿನ ಗಾಜಾ
ಇರಾನ್‌ನಲ್ಲಿ ತೈಲ ಸೌಲಭ್ಯಗಳು, ವಿದ್ಯುತ್ ಜಾಲಗಳು, ಕೈಗಾರಿಕಾ ಕೇಂದ್ರಗಳು ಮತ್ತು ಸಾರಿಗೆ ಮೂಲಸೌಕರ್ಯಗಳಿಗೆ ಬೃಹತ್ ಹಾನಿಯಾಗಿದೆ. ಭವಿಷ್ಯದಲ್ಲಿ ಅಲ್ಲಿಯೂ ಬಹುಬಿಲಿಯನ್ ಡಾಲರ್ ಪುನರ್ನಿರ್ಮಾಣ ಮಾರುಕಟ್ಟೆ ರೂಪುಗೊಳ್ಳಬಹುದು. ಇತಿಹಾಸ ಹೇಳುವುದೇನೆಂದರೆ, ಯುದ್ಧದ ನಂತರ ಪುನರ್ನಿರ್ಮಾಣಕ್ಕೆ ಹಣದ ಕೊರತೆ ಇರುವುದಿಲ್ಲ. ಆದರೆ ಆ ಹಣದ ಬಹು ಪಾಲು ಸ್ಥಳೀಯ ಜನರ ಕೈಗೆ ಹೋಗದೆ ಜಾಗತಿಕ ಗುತ್ತಿಗೆ ವ್ಯವಸ್ಥೆಯ ಮೂಲಕ ದೊಡ್ಡ ಕಂಪನಿಗಳ ಕಡೆ ಹರಿಯುತ್ತದೆ. ಆರ್ಥಿಕ ಬೆಳವಣಿಗೆಯ ಅಂಕಿಅಂಶಗಳಲ್ಲಿ ಪುನರ್ನಿರ್ಮಾಣ ಚಟುವಟಿಕೆಗಳು ಸಕಾರಾತ್ಮಕ ಪರಿಣಾಮವನ್ನು ತೋರಬಹುದು. ನಿರ್ಮಾಣ ಕ್ಷೇತ್ರದಲ್ಲಿ ಉದ್ಯೋಗಗಳು ಸೃಷ್ಟಿ ಯಾಗಬಹುದು, ಹೂಡಿಕೆಗಳು ಹೆಚ್ಚಾಗಬಹುದು ಮತ್ತು ಜಿಡಿಪಿ ವೃದ್ಧಿಯಾಗಬಹುದು. ಆದರೆ ಇದು ಹೊಸ ಸಂಪತ್ತಿನ ಸೃಷ್ಟಿಯಲ್ಲ; ಈಗಾಗಲೇ ನಾಶವಾದ ಸಂಪತ್ತನ್ನು ಮರುಸ್ಥಾಪಿಸುವ ಪ್ರಕ್ರಿಯೆ ಮಾತ್ರ. ಅಂದರೆ ಯುದ್ಧವಿಲ್ಲದೆ ಸಮಾಜವು ಹೊಂದಿರಬಹುದಾದ ಸಂಪತ್ತಿನ ಮಟ್ಟಕ್ಕಿಂತ ಇದು ಹೆಚ್ಚಿನದ್ದಲ್ಲ. ದೇಶಗಳು ಮಿಲಿಟರಿಗಾಗಿ ತಮ್ಮ ಜಿಡಿಪಿಯ ಹೆಚ್ಚಿನ ಶೇಕಡಾವಾರು ಹಣವನ್ನು ಖರ್ಚು ಮಾಡುವುದರಿಂದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ರೀತಿಯ ದೀರ್ಘಕಾಲೀನ ಪರಿಣಾಮಗಳು ಉಂಟಾಗುತ್ತವೆ.
ಇದನ್ನು ಬಂದೂಕುಗಳು ಮತ್ತು ಬೆಣ್ಣೆ (Guns vs Butter) ಸಿದ್ಧಾಂತ ಎನ್ನುತ್ತಾರೆ. ಅಂದರೆ, ರಕ್ಷಣಾ ವಲಯಕ್ಕೆ ಹೆಚ್ಚು ಹಣ ನೀಡಿದರೆ, ಜನ ಕಲ್ಯಾಣ ಯೋಜನೆಗಳಿಗೆ ಹಣದ ಕೊರತೆಯಾಗುತ್ತದೆ. ಮಿಲಿಟರಿಗೆ ಖರ್ಚು ಮಾಡುವ ಪ್ರತಿಯೊಂದು ರೂಪಾಯಿಯೂ ಶಿಕ್ಷಣ, ಆರೋಗ್ಯ, ರಸ್ತೆಗಳು ಮತ್ತು ಕೃಷಿ ವಲಯಕ್ಕೆ ಸಿಗಬೇಕಾದ ಹಣವನ್ನು ಕಸಿದುಕೊಳ್ಳುತ್ತದೆ. ಇದು ಮಾನವ ಸಂಪನ್ಮೂಲದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ.
ಮಿಲಿಟರಿ ವೆಚ್ಚ ಹೆಚ್ಚಾದಾಗ ಸರಕಾರಗಳು ಕೊರತೆಯನ್ನು ಸಾಲದ ಮೂಲಕ, ಹೊಸ ತೆರಿಗೆಗಳ ಮೂಲಕ ಮತ್ತು ಅಭಿವೃದ್ಧಿ ವಲಯಗಳ ಬಜೆಟ್ ಕಡಿತಗೊಳಿಸುವ ಮೂಲಕ ಸರಿದೂಗಿಸುತ್ತವೆ. ಯುದ್ಧಗಳಿಗೆ ರಾಜಕೀಯ, ಭದ್ರತೆ, ಇತಿಹಾಸ, ಧರ್ಮ, ಗಡಿಗಳು ಮತ್ತು ಅನೇಕ ಸಂಕೀರ್ಣ ಕಾರಣ ಗಳಿವೆ. ಆದರೆ ಒಂದು ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ.
ಯುದ್ಧಗಳು ಕೆಲವರಿಗೆ ಮಾರುಕಟ್ಟೆಗಳನ್ನು ಸೃಷ್ಟಿಸುತ್ತವೆ. ಮೊದಲು ಕ್ಷಿಪಣಿಗಳ ಮಾರುಕಟ್ಟೆ, ನಂತರ ಸಿಮೆಂಟ್‌ನ ಮಾರುಕಟ್ಟೆ. ಮೊದಲು ವಿನಾಶದ ವ್ಯವಹಾರ. ನಂತರ ಪುನರ್ನಿರ್ಮಾಣದ ವ್ಯವಹಾರ. ಈ ಎರಡರ ನಡುವೆ ಸಿಕ್ಕಿಹಾಕಿಕೊಳ್ಳುವವರು ಸಾಮಾನ್ಯ ಜನರು. ಅವರ ಮನೆಗಳು ಲಾಭದ ಅಂಕಿಅಂಶಗಳಾಗುತ್ತವೆ. ಅವರ ಕನಸುಗಳು ಹಾನಿಯ ಅಂದಾಜುಗಳಾಗುತ್ತವೆ. ಅವರ ಬದುಕು ಪುನರ್ನಿರ್ಮಾಣ ಯೋಜನೆಗಳಾಗಿ ಮಾರ್ಪಡುತ್ತದೆ.
ಲೆಬನಾನ್, ಇರಾನ್, ಉಕ್ರೇನ್ ಪುನರ್ನಿರ್ಮಾಣಕ್ಕೆ ದಶಕಗಳು ಬೇಕಾಗುತ್ತವೆ. ಬಿಲಿಯನ್‌ಗಳಷ್ಟು ಡಾಲರ್ ಬೇಕಾಗಬಹುದು. ಯುದ್ಧಪೀಡಿತ ದೇಶಗಳು ಸಾಲದ ಚಕ್ರಗಳಲ್ಲಿ ಸಿಲುಕಿಕೊಳ್ಳುತ್ತವೆ, ದೀರ್ಘಕಾಲೀನ ಸಂಘರ್ಷವು ಅವುಗಳ ತೆರಿಗೆ ಮೂಲ ಮತ್ತು ರಫ್ತು ಆದಾಯವನ್ನು ನಾಶ ಪಡಿಸುತ್ತದೆ.
ಯುದ್ಧದ ಸಮಯದಲ್ಲಿ, ಅಗತ್ಯ ಮೂಲಸೌಕರ್ಯಗಳು (ಕಾರ್ಖಾನೆಗಳು, ಬಂದರುಗಳು, ವಿದ್ಯುತ್ ಗ್ರಿಡ್ʼಗಳು) ನಾಶವಾಗುತ್ತವೆ. ಇದು ದೇಶದ ಆದಾಯವನ್ನು ಗಳಿಸುವ, ತೆರಿಗೆಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಅಳಿಸಿ ಹಾಕುತ್ತದೆ.
ವಿನಾಶದ ನಂತರ ಮೂಲಭೂತ ಸೇವೆಗಳನ್ನು ಪುನಃ ಸ್ಥಾಪಿಸಲು, ನಿರಾಶ್ರಿತರಿಗೆ ವಸತಿ ಕಲ್ಪಿಸಲು ಮತ್ತು ಸೈನಿಕರನ್ನು ಸಜ್ಜುಗೊಳಿಸಲು ಸರಕಾರವು ಭಾರಿ ಸಾಲವನ್ನು ಮಾಡಬೇಕಾಗುತ್ತದೆ. ಪುನರ್ನಿರ್ಮಿಸಲು, ವಿದೇಶಿ ಸಾಲಗಳ ಮೇಲೆ ಅವಲಂಬನೆ. ಬಡ್ಡಿ ಸಂಗ್ರಹವಾಗುತ್ತಿದ್ದಂತೆ, ಮರುಪಾವತಿಗಳು ಆರ್ಥಿಕ ಬೆಳವಣಿಗೆಯನ್ನು ಮೀರಿಸುತ್ತದೆ, ಹಳೆಯ ಸಾಲವನ್ನು ತೀರಿಸಲು ಆರೋಗ್ಯ ಮತ್ತು ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚ ಕಡಿತಗೊಳ್ಳುತ್ತದೆ.
ಹಳೆಯ ಸಾಲಗಳ ಮೇಲಿನ ಬಡ್ಡಿಯನ್ನು ಪಾವತಿಸಲು ಹೊಸ ಸಾಲಗಳನ್ನು ತೆಗೆದುಕೊಳ್ಳ ಲಾಗುತ್ತದೆ. ಇದು ಡೀಫಾಲ್ಟ್ ತಪ್ಪಿಸಲು ಸಾಲ ಪಡೆಯುವ ಶಾಶ್ವತ ಚಕ್ರವನ್ನು ಸೃಷ್ಟಿಸುತ್ತದೆ.
ಸಂಘರ್ಷದ ನಂತರದ ದೇಶಗಳನ್ನು ಹೆಚ್ಚಿನ ಆರ್ಥಿಕ ಅಪಾಯಗಳೆಂದು ಗ್ರಹಿಸಲಾಗಿರುವು ದರಿಂದ, ಅವು ಕಡಿಮೆ-ಬಡ್ಡಿ, ದೀರ್ಘಾವಧಿಯ ರಿಯಾಯಿತಿ ಸಾಲಗಳಿಗೆ ಅರ್ಹತೆ ಪಡೆಯಲು ಹೆಣಗುತ್ತವೆ. ಬದಲಾಗಿ, ಖಾಸಗಿ ಬಾಂಡ್ ಹೋಲ್ಡರ್‌ಗಳು ಅಥವಾ ವಾಣಿಜ್ಯ ಸಾಲದಾತರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯಲಾಗುತ್ತದೆ.
ರಾಷ್ಟ್ರಗಳು ಈ ಸಾಲದ ಬಿಕ್ಕಟ್ಟಿಗೆ ಸಿಲುಕಿದಾಗ, ಅವು ತುರ್ತು ಬೇಲ್ ಔಟ್‌ಗಳಿಗಾಗಿ ಅಂತರ ರಾಷ್ಟ್ರೀಯ ಹಣಕಾಸು ನಿಧಿಯ ಮೊರೆ ಹೋಗುತ್ತವೆ. ಐಂಎಫ್ ಕಠಿಣ ಶರತ್ತುಗಳನ್ನು ವಿಧಿಸುತ್ತದೆ- ತೆರಿಗೆಗಳನ್ನು ಹೆಚ್ಚಿಸುವುದು, ಸಾರ್ವಜನಿಕ ಸಬ್ಸಿಡಿಗಳನ್ನು ಕಡಿತಗೊಳಿಸುವುದು ಇತ್ಯಾದಿ. ಬಜೆಟ್ ಅನ್ನು ಸಮತೋಲನಗೊಳಿಸುವ ಉದ್ದೇಶವನ್ನು ಹೊಂದಿದ್ದರೂ, ಈ ಕ್ರಮಗಳು ಆರ್ಥಿಕ ಚೇತರಿಕೆ ಯನ್ನು ಹತ್ತಿಕ್ಕುತ್ತವೆ.
ಒಂದು ದೇಶವು ಮರುಪಾವತಿಸಲು ಸಾಧ್ಯವಾಗದಿದ್ದರೆ, ಸಾಲ ನೀಡುವವರು ದೀರ್ಘಾವಧಿಯ ಗುತ್ತಿಗೆಗಳು ಅಥವಾ ರಾಷ್ಟ್ರೀಯ ಸ್ವತ್ತುಗಳ (ಉದಾಹರಣೆಗೆ ಬಂದರುಗಳು ಅಥವಾ ಗಣಿಗಾರಿಕೆ) ಮೇಲೆ ನಿಯಂತ್ರಣವನ್ನು ಸಾಧಿಸುತ್ತವೆ.
ಹೊಸ ಮನೆಗಳು ನಿರ್ಮಾಣವಾಗಬಹುದು. ಹೊಸ ರಸ್ತೆಗಳು ಬರಬಹುದು. ಹೊಸ ಆಸ್ಪತ್ರೆಗಳು ಎದ್ದುನಿಲ್ಲಬಹುದು. ಆದರೆ ಒಂದು ಮಗುವಿನ ಕಳೆದುಹೋದ ಬಾಲ್ಯವನ್ನು ಯಾವ ಗುತ್ತಿಗೆಯೂ ಮರಳಿ ತರಲಾರದು. ಒಬ್ಬ ತಾಯಿಯ ಖಾಲಿಯಾದ ಮಡಿಲನ್ನು ಯಾವ ಅಭಿವೃದ್ಧಿ ಯೋಜನೆ ಯೂ ತುಂಬಲಾರದು. ಒಂದು ಕುಟುಂಬದ ಚೂರಾದ ಕನಸುಗಳನ್ನು ಯಾವ ಬಿಲಿಯನ್ ಡಾಲರ್ ಪ್ಯಾಕೇಜೂ ಮರುನಿರ್ಮಿಸಲಾರದು. ನಗರಗಳನ್ನು ಮತ್ತೆ ಕಟ್ಟಬಹುದು.
ಕಳೆದುಹೋದ ಬಾಲ್ಯವನ್ನು, ಒಂದು ತಾಯಿಯ ಕಣ್ಣೀರನ್ನು, ಒಂದು ಕುಟುಂಬದ ಕನಸುಗಳನ್ನು ಯಾವ ಪುನರ್ನಿರ್ಮಾಣ ಯೋಜನೆಯೂ ಮರಳಿ ಕಟ್ಟಲು ಸಾಧ್ಯವಿಲ್ಲ. ಇತಿಹಾಸ ಮರು ಕಳಿಸು ತ್ತಲೇ ಇರುತ್ತದೆ. ಯುದ್ಧದ ಬೂದಿಯಿಂದ ಹೊಸ ಗುತ್ತಿಗೆಗಳು ಹುಟ್ಟುತ್ತವೆ. ಹೊಸ ಹೂಡಿಕೆಗಳು ಬರುತ್ತವೆ. ಹೊಸ ಲಾಭಗಳು ಸೃಷ್ಟಿಯಾಗುತ್ತವೆ. ನಿನ್ನೆ ಉಕ್ರೇನ್, ಇಂದು ಇರಾನ್... ನಾಳೆ ಬಹುಶಃ ಮತ್ತೊಂದು ನಗರ, ಮತ್ತೊಂದು ದೇಶ, ಮತ್ತೊಂದು ಜನಾಂಗ.