Leena Joshi Column: ಕಂಪನಿ ತೋರಿಸುವ ಆದಾಯ ನೋಡಿ ಮೋಸ ಹೋಗಬೇಡಿ !
ಹರ್ಷದ್ ಮೆಹ್ತಾ ಬ್ಯಾಂಕಿಂಗ್ ರಸೀದಿಗಳನ್ನು ಕೃತಕವಾಗಿ ಸೃಷ್ಟಿಸಿ ಮಾರುಕಟ್ಟೆಯನ್ನು ನಿಯಂತ್ರಿಸಿ ದರೆ, ರಾಜೇಶ್ ಮೆಹ್ತಾ ಕಂಪನಿಯ ಆದಾಯದ ಲೆಕ್ಕಪುಸ್ತಕಗಳನ್ನೇ ಕೃತಕವಾಗಿ ಸೃಷ್ಟಿಸಿ ಹೂಡಿಕೆದಾರ ರನ್ನು ದಾರಿ ತಪ್ಪಿಸಿದ್ದಾರೆ. ಭಾರತದ ಮಾರುಕಟ್ಟೆ ನಿಯಂತ್ರಕ ಸೆಬಿ ದೇಶದ ಅತಿ ದೊಡ್ಡ ಚಿನ್ನದ ಆಭರಣ ರಫ್ತು ಕಂಪನಿಯಾದ ರಾಜೇಶ್ ಎಕ್ಸ್‌ಪೋರ್ಟ್ಸ್ ಮತ್ತು ಅದರ ಮುಖ್ಯಸ್ಥ ರಾಜೇಶ್ ಮೆಹ್ತಾ ವಿರುದ್ಧ ಭಾರೀ ಆರ್ಥಿಕ ಅವ್ಯವಹಾರಗಳ ಆರೋಪ ಹೊರಿಸಿದೆ.
-
ಅಮೃತಕಾಲ
ಲೀನಾ ಜೋಶಿ
ಭಾರತೀಯ ಹಣಕಾಸು ಇತಿಹಾಸವನ್ನು ನಡುಗಿಸಿದ ಹರ್ಷದ್ ಮೆಹ್ತಾ ಹಗರಣ (1992) ಮತ್ತು ಪ್ರಸ್ತುತ ಚರ್ಚೆಯಲ್ಲಿರುವ ರಾಜೇಶ್ ಮೆಹ್ತಾ ಹಗರಣ ನಡುವೆ ಹಲವು ಸಾಮ್ಯಗಳು ಹಾಗೂ ಪ್ರಮುಖ ವ್ಯತ್ಯಾಸಗಳಿವೆ. ಇಬ್ಬರೂ ಮೆಹ್ತಾ ಎಂಬ ಒಂದೇ ಉಪನಾಮ ಹೊಂದಿದ್ದರೂ, ಇವರ ವಂಚನೆಯ ತಂತ್ರಗಳು ಮತ್ತು ಕ್ಷೇತ್ರಗಳು ವಿಭಿನ್ನ.
ಹರ್ಷದ್ ಮೆಹ್ತಾ ಬ್ಯಾಂಕಿಂಗ್ ರಸೀದಿಗಳನ್ನು ಕೃತಕವಾಗಿ ಸೃಷ್ಟಿಸಿ ಮಾರುಕಟ್ಟೆಯನ್ನು ನಿಯಂತ್ರಿದರೆ, ರಾಜೇಶ್ ಮೆಹ್ತಾ ಕಂಪನಿಯ ಆದಾಯದ ಲೆಕ್ಕಪುಸ್ತಕಗಳನ್ನೇ ಕೃತಕವಾಗಿ ಸೃಷ್ಟಿಸಿ ಹೂಡಿಕೆದಾರರನ್ನು ದಾರಿ ತಪ್ಪಿಸಿದ್ದಾರೆ. ಭಾರತದ ಮಾರುಕಟ್ಟೆ ನಿಯಂತ್ರಕ ಸೆಬಿ ದೇಶದ ಅತಿ ದೊಡ್ಡ ಚಿನ್ನದ ಆಭರಣ ರಫ್ತು ಕಂಪನಿಯಾದ ರಾಜೇಶ್ ಎಕ್ಸ್‌ಪೋರ್ಟ್ಸ್ ಮತ್ತು ಅದರ ಮುಖ್ಯಸ್ಥ ರಾಜೇಶ್ ಮೆಹ್ತಾ ವಿರುದ್ಧ ಭಾರೀ ಆರ್ಥಿಕ ಅವ್ಯವಹಾರಗಳ ಆರೋಪ ಹೊರಿಸಿದೆ.
ಕಂಪನಿಯು ಸುಮಾರು 15 ಲಕ್ಷ ಕೋಟಿ ನಕಲಿ ಆದಾಯವನ್ನು ತೋರಿಸಿದೆ ಎಂದು ಸೆಬಿ ಆರೋಪಿಸಿದೆ. ಸೆಬಿ ಬಿಡುಗಡೆ ಮಾಡಿರುವ ಮಧ್ಯಂತರ ಆದೇಶದ ಪ್ರಕಾರ ಕಂಪನಿಯ ವ್ಯವಸ್ಥಾ ಪಕ ನಿರ್ದೇಶಕ ರಾಜೇಶ್ ಮೆಹ್ತಾರನ್ನು ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ಸೆಬಿ ನಿರ್ಬಂಧಿಸಿದೆ.
ರಾಜೇಶ್ ಮೆಹ್ತಾ ಬೆಂಗಳೂರು ಮೂಲದ ಪ್ರಸಿದ್ಧ ಉದ್ಯಮಿ ಹಾಗೂ ಭಾರತದ ಅತಿ ದೊಡ್ಡ ಚಿನ್ನದ ಆಭರಣ ರಫ್ತು ಕಂಪನಿಯಾದ ‘ರಾಜೇಶ್ ಎಕ್ಸ್‌ಪೋರ್ಟ್ಸ್’ ಸಂಸ್ಥಾಪಕ. ಸೆಬಿ ನಡೆಸಿದ ತನಿಖೆ ಪ್ರಕಾರ, ರಾಜೇಶ್ ಮೆಹ್ತಾ ಹೂಡಿಕೆದಾರರನ್ನು ನಂಬಿಸಲು ಹಂತ- ಹಂತವಾಗಿ ವ್ಯವಸ್ಥಿತ ಜಾಲ ಹೆಣೆದಿದ್ದರು.
ಕಂಪನಿಯು 5 ವರ್ಷಗಳಲ್ಲಿ ತೋರಿಸಿದ ಒಟ್ಟು ಆದಾಯದಲ್ಲಿ 99%ರಷ್ಟು ಭಾಗ ಕೇವಲ ಕಾಗದದ ಮೇಲಿತ್ತು. ಇದಕ್ಕೆ ಯಾವುದೇ ನೈಜ ಬಿಲ್‌ಗಳು, ಸರಕು ದಾಸ್ತಾನು (Inventory) ಮತ್ತು ಗ್ರಾಹಕರ ದಾಖಲೆಗಳು ಇರಲಿಲ್ಲ. ರಾಜೇಶ್ ಎಕ್ಸ್‌ಎಕ್ಸ್‌ಪೋರ್ಟ್ಸ್ ಸ್ವಿಜರ್ಲ್ಯಾಂಡ್‌ನ ‘ವಾಲ್ಕಾಂಬಿ’ (Valcambi) ಎಂಬ ಪ್ರಸಿದ್ಧ ಚಿನ್ನದ ಸಂಸ್ಕರಣಾ ಕಂಪನಿಯನ್ನು ಖರೀದಿಸಿತ್ತು.
ಭಾರತದ ಲೆಕ್ಕಪುಸ್ತಕದಲ್ಲಿ ಆ ಚಿನ್ನದ ಸಂಪೂರ್ಣ ಮೌಲ್ಯವನ್ನೇ ಕಂಪನಿಯ ಲಾಭ ಎಂದು ಸುಳ್ಳು ಲೆಕ್ಕ ತೋರಿಸಿ ಹೂಡಿಕೆದಾರರನ್ನು ದಾರಿ ತಪ್ಪಿಸಲಾಯಿತು. ಆಫ್ರಿಕಾದಲ್ಲಿ ಚಿನ್ನದ ಗಣಿ ಗಳನ್ನು ಖರೀದಿಸುತ್ತಿದ್ದೇವೆ ಎಂದು ಹೇಳಿ 1035 ಕೋಟಿ ಹಣವನ್ನು ಹೂಡಿಕೆದಾರರಿಂದ ಸೆಳೆಯ ಲಾಗಿತ್ತು. ಆದರೆ ತನಿಖಾಧಿಕಾರಿಗಳಿಗೆ ಆಫ್ರಿಕಾದಲ್ಲಿ ಅಂತಹ ಯಾವುದೇ ಗಣಿಯ ಮೂಲ ಸಿಗಲಿಲ್ಲ.
ಕಂಪನಿಯಲ್ಲಿದ್ದ 11486 ಕೋಟಿಗೂ ಅಧಿಕ ಸಾರ್ವಜನಿಕರ ಹಣವನ್ನು ಯಾವುದೇ ಬೋರ್ಡ್ ಅನುಮತಿ ಇಲ್ಲದೆ ರಾಜೇಶ್ ಮೆಹ್ತಾ ಅವರ ವೈಯಕ್ತಿಕ ಟ್ರೇಡಿಂಗ್ ಖಾತೆಗೆ ವರ್ಗಾಯಿಸಲಾಗಿತ್ತು. ಆ ಹಣವನ್ನು ಅವರು ತಮ್ಮ ಸ್ವಂತ ಮಾರುಕಟ್ಟೆ ನಷ್ಟಗಳನ್ನು ಸರಿದೂಗಿಸಲು ಬಳಸಿಕೊಂಡಿದ್ದರು. ಈ ಹಗರಣ ಹೊರಬೀಳುತ್ತಿದ್ದಂತೆ ಕಂಪನಿಯ ಷೇರು ಬೆಲೆ 80%ಕ್ಕಿಂತ ಹೆಚ್ಚು ಕುಸಿತ ಕಂಡು, ಸಾಮಾನ್ಯ ಹೂಡಿಕೆದಾರರ 12725 ಕೋಟಿಗೂ ಅಧಿಕ ಹಣ ಮಣ್ಣು ಪಾಲಾಯಿತು.
ಸ್ವಿಜರ್ಲ್ಯಾಂಡ್‌ನ ರಹಸ್ಯ ಕಾಯ್ದೆಗಳು!
ಸೆಬಿ ತನಿಖಾಧಿಕಾರಿಗಳು ರಾಜೇಶ್ ಎಕ್ಸ್‌ಪೋರ್ಟ್ಸ್‌ನ ವಿದೇಶಿ ವಹಿವಾಟುಗಳ ದಾಖಲೆಗಳನ್ನು ಕೇಳಿದಾಗ, ಕಂಪನಿಯು ಸ್ವಿಸ್ ಡೇಟಾ ಪ್ರೊಟೆಕ್ಷನ್ ಮತ್ತು ಗೌಪ್ಯತೆ ಕಾಯ್ದೆಗಳ (Swiss Data Protection Confidentiality Laws) ನೆಪವೊಡ್ಡಿ ತಪ್ಪಿಸಿಕೊಳ್ಳಲು ಯತ್ನಿಸಿತು. ಕಂಪನಿಯು ತನ್ನ ಸ್ವಿಜರ್ಲ್ಯಾಂಡ್ ಅಂಗಸಂಸ್ಥೆಯಾದ ವಾಲ್ಕಾಂಬಿ ಮೂಲಕವೇ 99%ರಷ್ಟು ಆದಾಯ ಬರುತ್ತಿದೆ ಎಂದು ಹೂಡಿಕೆದಾರರಿಗೆ ತೋರಿಸಿತ್ತು. ಆದರೆ, ಸೆಬಿ ಅಧಿಕಾರಿಗಳು ಆ ಆದಾಯಕ್ಕೆ ಸಂಬಂಧಿಸಿದ ಗ್ರಾಹಕರ ಪಟ್ಟಿ, ಇನ್‌ವಾಯ್ಸ್‌ಗಳು ಮತ್ತು ಲೆಕ್ಕಪುಸ್ತಕಗಳನ್ನು ಕೇಳಿದಾಗ, ಸ್ವಿಸ್ ಕಾಯ್ದೆಗಳ ಪ್ರಕಾರ ನಾವು ಈ ರಹಸ್ಯ ಮಾಹಿತಿಯನ್ನು ಭಾರತೀಯ ಅಧಿಕಾರಿ ಗಳಿಗೆ ನೀಡಲು ಕಾನೂನಿನಲ್ಲಿ ಅವಕಾಶ ವಿಲ್ಲ ಎಂದು ರಾಜೇಶ್ ಮೆಹ್ತಾ ವಾದಿಸಿದ್ದರು. ಸ್ವಿಸ್ ಗೌಪ್ಯತೆ ಕಾಯ್ದೆಗಳು ಕೇವಲ ವೈಯಕ್ತಿಕ ವ್ಯಕ್ತಿಗಳ ಖಾಸಗಿತನವನ್ನು ರಕ್ಷಿಸಲು ಇವೆಯೇ ಹೊರತು, ಕಾರ್ಪೊರೇಟ್ ಕಂಪನಿಗಳ ಆರ್ಥಿಕ ವಂಚನೆಯನ್ನು ಮುಚ್ಚಿಡಲಿಕ್ಕಲ್ಲ ಎಂದು ಸೆಬಿ ಸ್ಪಷ್ಟ ಪಡಿಸಿತು. ಭಾರತದ ಷೇರು ಮಾರುಕಟ್ಟೆ ಯಲ್ಲಿ ಸಾರ್ವಜನಿಕರಿಂದ ಹಣ ಪಡೆದು ಪಟ್ಟಿಯಾದ (Listed) ಕಂಪನಿಯು, ವಿದೇಶಿ ಕಾನೂನು ಗಳ ಹಿಂದೆ ಅಡಗಿ ಕುಳಿತು ಭಾರತದ ಸೆಕ್ಯೂರಿಟಿಸ್ ಕಾನೂನುಗಳನ್ನು ಉಲ್ಲಂಘಿಸುವಂತಿಲ್ಲ.
ಕಂಪನಿಯು ಉದ್ದೇಶಪೂರ್ವಕವಾಗಿ ತನಿಖಾಧಿಕಾರಿಗಳಿಗೆ ಯಾವುದೇ ಪ್ರಮುಖ ಇಆರ್‌ಪಿ ಸಿಸ್ಟಮ್/ ಪ್ರೈಮರಿ ಅಕೌಂಟಿಂಗ್ ರೆಕಾರ್ಡ್ಸ್ ವೀಕ್ಷಿಸಲು ಅವಕಾಶ ನೀಡದೆ ಒಂದು ‘ಮಾಹಿತಿ ಬ್ಲಾಕ್ ಬಾಕ್ಸ್’ ಸೃಷ್ಟಿಸಿತ್ತು.
ಈ ಬೃಹತ್ 15.15 ಲಕ್ಷ ಕೋಟಿ ರೂಪಾಯಿಗಳ ಲೆಕ್ಕಪತ್ರ ಗೊಂದಲ ಮತ್ತು ವಂಚನೆ ಸತತ 5 ವರ್ಷಗಳ ಕಾಲ ಮಾರುಕಟ್ಟೆಯಲ್ಲಿ ಯಾರಿಗೂ ತಿಳಿಯದಂತೆ ನಡೆದಿದ್ದರ ಹಿಂದೆ ಕಂಪನಿಯ ಆಡಿಟರ್‌ಗಳ ನಿರ್ಲಕ್ಷ /ಕೈವಾಡ ಎದ್ದು ಕಾಣುತ್ತಿದೆ. ತನಿಖೆಯ ಅವಧಿಯಲ್ಲಿ ರಾಜೇಶ್ ಎಕ್ಸ್ ಪೋರ್ಟ್ಸ್ ಕಂಪನಿ ದೇಶದ ಪ್ರಮುಖ ಆಡಿಟಿಂಗ್ ಸಂಸ್ಥೆಗಳ ಬದಲಾಗಿ, ಹೆಚ್ಚು ಜನಪ್ರಿಯ ವಲ್ಲದ ‘ಪಿ.ವಿ. ರಮಣ ರೆಡ್ಡಿ ಆಂಡ್ ಕೋ’ ಮತ್ತು ‘ಬಿಎಸ್‌ಡಿ ಆಂಡ್ ಕೋ’ ಎಂಬ ಸಂಸ್ಥೆಗಳಿಂದ ಆಡಿಟ್ ನಡೆಸಿದೆ.
ಎಲ್ಐಸಿ ಸಂಸ್ಥೆಯ ನಷ್ಟ
ರಾಜೇಶ್ ಎಕ್ಸ್‌ಪೋಟ್ಸ ಕಂಪನಿಯಲ್ಲಿ ಎಲ್ಐಸಿ ಸಂಸ್ಥೆಯು ಶೇಕಡಾ 10.8%ರಷ್ಟು ಭಾರಿ ಷೇರು ಹೂಡಿಕೆಯನ್ನು ಹೊಂದಿತ್ತು. ಕಂಪನಿಯ ಷೇರು ಬೆಲೆ ಕುಸಿದಾಗ, ಎಲಐಸಿ ಹೊಂದಿದ್ದ ಷೇರುಗಳ ಮೌಲ್ಯ ಸಂಪೂರ್ಣ ಕರಗಿಹೋಯಿತು. ಇದರಿಂದ ಸಾರ್ವಜನಿಕರ ವಿಮಾ ಹಣದಲ್ಲಿ ಸುಮಾರು ರೂ.1600 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಂಪನಿಯ ಜಾಗತಿಕ ವ್ಯವಹಾರಗಳ ಬಗ್ಗೆ ಯಾವುದೇ ಸರಿಯಾದ ಆಡಿಟ್ ವರದಿಗಳು ಇಲ್ಲದಿದ್ದರೂ, ಎಲ್ಐಸಿ ಮ್ಯಾನೇಜ್ಮೆಂಟ್ ಕಣ್ಣುಮುಚ್ಚಿ ಈ ಕಂಪನಿಯ ಷೇರುಗಳನ್ನು ದೀರ್ಘಕಾಲದವರೆಗೆ ಮಾರಾಟ ಮಾಡದೆ ಉಳಿಸಿಕೊಂಡಿದ್ದು ಅನುಮಾನಾಸ್ಪದ.
ಷೇರು ಮಾರುಕಟ್ಟೆಯಲ್ಲಿ ಒಂದು ಅಪಾಯಕಾರಿ ಮನೋಭಾವ ನಿಧಾನವಾಗಿ ಬೆಳೆಯುತ್ತಿದೆ - ದೊಡ್ಡ ಆದಾಯ ಎಂದರೆ ದೊಡ್ಡ ಸುರಕ್ಷತೆ ಎಂಬ ತಪ್ಪು ಕಲ್ಪನೆ. ಭಾರತದ ಚಿನ್ನ ಸಂಸ್ಕರಣೆ ಮತ್ತು ರಫ್ತು ವಲಯದಲ್ಲಿ ಪ್ರಮುಖ ಕಂಪೆನಿ ರಾಜೇಶ್ ಎಕ್ಸ್‌ಪೋರ್ಟ್ಸ್ ಈಗ ಚರ್ಚೆಯ ಕೇಂದ್ರ ದಲ್ಲಿರುವ ಕಾರಣ ಷೇರು ಮಾರುಕಟ್ಟೆಯಲ್ಲಿ ಇದರ ರೆವಿನ್ಯೂ ಅಂಕಿಗಳು ಬಹಳ ದೊಡ್ಡದಾಗಿ ಕಾಣುತ್ತವೆ. ಆದರೆ ಈ ರೆವಿನ್ಯೂ ನಿಜವಾಗಿಯೂ ಕಂಪನಿಯ ಗಳಿಕೆ ಆಗಿದೆಯೇ, ಅಥವಾ ಲೆಕ್ಕ ಪತ್ರದ ಪ್ರಸ್ತುತಿಯ ಪರಿಣಾಮವೇ? ಈ ಪ್ರಶ್ನೆಗೆ ಉತ್ತರ ತಿಳಿಯದೆ ಹೂಡುವುದು, ಕತ್ತಲಲ್ಲಿ ಓಡುವಂತೆಯೇ.
ಹಣಕಾಸು ಜಗತ್ತಿನಲ್ಲಿರುವುದು ಮೂರೇ ಮೂರು ಪದಗಳು. ರೆವಿನ್ಯೂ (ಒಟ್ಟು ವ್ಯವಹಾರ ಮೌಲ್ಯ), ಟರ್ನ್‌ಓವರ್ (ವ್ಯಾಪಾರದ ಹರಿವು) ಹಾಗೂ ಪ್ರಾಫಿಟ್ (ನಿಜವಾದ ಲಾಭ). ಆದರೆ ಮಾರುಕಟ್ಟೆ ಯಲ್ಲಿ ಈ ಮೂರು ಪದಗಳನ್ನು ಒಂದೇ ಸಾಲಿನಲ್ಲಿ ಓದಲಾಗುತ್ತದೆ. ಇದೊಂದು ಬಲೆ. ರೆವಿನ್ಯೂ ದೊಡ್ಡದಾದರೂ ಪ್ರಾಫಿಟ್ ಕಡಿಮೆಯಾಗಬಹುದು, ಸ್ಥಿರವಾಗಿರದೇ ಇರಬಹುದು, ಸಾಲದ ಮೊತ್ತ ದೊಡ್ದದಿರಬಹುದು.
ಸರ್ವಿಸ್ ಸೆಂಟರ್‌ನ ಸುಳ್ಳು ಲೆಕ್ಕ
ಕಾರಿನ ಮೌಲ್ಯ 15 ಲಕ್ಷ, ಸರ್ವಿಸ್ ಶುಲ್ಕ 2 ಲಕ್ಷ. ಅಂದರೆ ವಾಸ್ತವವಾಗಿ, ಸರ್ವಿಸ್ ಸೆಂಟರ್ ಆದಾಯ 2 ಲಕ್ಷ. 17 ಲಕ್ಷವಲ್ಲ. ಈ ತರ್ಕ ರಾಜೇಶ್ ಎಕ್ಸ್‌ಪೋರ್ಟ್ ವ್ಯವಹಾರಕ್ಕೂ ಅನ್ವಯಿಸು ತ್ತದೆ. ಇದು ಚಿನ್ನ ಸಂಸ್ಕರಣ ಕಂಪನಿ. ಚಿನ್ನದ ಬೆಲೆ 5000 ಕೋಟಿ,ಸಂಸ್ಕರಣ ವೆಚ್ಚ 500 ಕೋಟಿ ಇರುವಾಗ ರಾಜೇಶ್ ಎಕ್ಸ್‌ಪೋರ್ಟ್
ಆದಾಯ 500 ಕೋಟಿ. 5500 ಕೋಟಿ ಅಲ್ಲ. ಆದರೆ ಕಂಪನಿ ಕಳೆದ 5 ವರ್ಷಗಳಲ್ಲಿ ತಮ್ಮ ಆದಾಯ ವನ್ನು ಚಿನ್ನ ಮತ್ತು ಸಂಸ್ಕರಣೆ ಎರಡನ್ನೂ ಸೇರಿಸಿ ತೋರಿಸುತ್ತ ಇತ್ತು. ಅದರಿಂದಾಗಿ ಅವರು ಆದಾಯವನ್ನು 15 ಲಕ್ಷ ಕೋಟಿಗೆ ಏರಿಸಿಕೊಂಡಿದ್ದು. ಈ ಅವ್ಯವಹಾರವೇ ಇವತ್ತಿನ ಗೊಂದಲಕ್ಕೆ ಕಾರಣ. ಇದರಿಂದ ಹೂಡಿಕೆದಾರರಿಗೆ ಕಂಪನಿ ಹೆಚ್ಚು ಗಳಿಸುತ್ತಿದೆ ಎಂಬ ಭ್ರಮೆ ಉಂಟಾಗಿತ್ತು. ಹಣಕಾಸು ವರದಿಗಳಲ್ಲಿ ಕೆಲವು ಪದಗಳು ಹೂಡಿಕೆದಾರರನ್ನು ದಾರಿ ತಪ್ಪಿಸುತ್ತವೆ: Gross value, Export turnover, Consolidated revenue ಮೊದಲಾದವು.
ನೆನಪಿಡಿ, ಇವು ನಗದು ಲಾಭ ಅಲ್ಲ. ಇವು ಕೇವಲ ಲೆಕ್ಕಪತ್ರದ ವರ್ಗೀಕರಣ, ಕಾಗದದಲ್ಲಿ ಮೊತ್ತ ದೊಡ್ಡದು, ಬ್ಯಾಂಕ್ ಖಾತೆಯಲ್ಲಿ ಬೇರೆ. ದೊಡ್ಡ ಚಿನ್ನದ ಕಂಪನಿಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಲಸ ಮಾಡುತ್ತವೆ, ವಿವಿಧ ದೇಶಗಳಲ್ಲಿ ರಫ್ತು ವ್ಯವಸ್ಥೆ ಹೊಂದಿರುತ್ತವೆ, ವಿಭಿನ್ನ ಅಕೌಂಟಿಂಗ್ ಮಾನದಂಡ ಅನುಸರಿಸುತ್ತವೆ. ಈ ಜಟಿಲತೆ ಹೂಡಿಕೆದಾರರಿಗೆ ಪಾರದರ್ಶಕತೆಯ ಭ್ರಮೆ ನೀಡಬಹುದು.
ಸಂಕೀರ್ಣತೆ ಹೆಚ್ಚಿದಾಗ, ಅರ್ಥಮಾಡಿಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಇದು ಮಾರುಕಟ್ಟೆಯ ದೊಡ್ಡ ಅಪಾಯ. ದೊಡ್ಡ ಸಾಂಸ್ಥಿಕ ಹೂಡಿಕೆದಾರರು ದೀರ್ಘಾವಧಿಯ ಸಂಪರ್ಕ ನೋಡಿ, ಹಣದ ಹರಿವು ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಚಿಲ್ಲರೆ ಹೂಡಿಕೆದಾರ, ತಕ್ಷಣದ ಆದಾಯ ನೋಡುತ್ತಾನೆ. ಅಂತರ್ಗತ ಹಣದ ಹರಿವು ನೋಡುವುದಿಲ್ಲ. ಇದೇ ಅಂತರ. ಷೇರು ಬೆಲೆ ಏರಿಕೆ ಅಥವಾ ಇಳಿಕೆ, ಚಿನ್ನದ ಬೆಲೆ ಚಕ್ರ, ಜಾಗತಿಕ ಬಡ್ಡಿ ದರ, ನಗದು ಚಲಾವಣೆ, ಸೆಂಟಿಮೆಂಟ್ ಟ್ರೇಡಿಂಗ್ ಇವುಗಳಿಂದ ನಿರ್ಧಾರವಾಗುತ್ತದೆ. ಮಾರುಕಟ್ಟೆಯ ಅತ್ಯಂತ ಅಪಾಯಕಾರಿ ಟ್ರ್ಯಾಪ್- ದೊಡ್ಡ ರೆವಿನ್ಯೂ ಅಂದರೆ ಸುರಕ್ಷತೆ ಎಂದು ನಂಬುವುದು. ಶೀರ್ಷಿಕೆ ಬೆಳವಣಿಗೆ ನೋಡಿ ಹೂಡು ವುದು. ನಗದು ಹರಿವು ಕಡೆಗಣಿಸುವುದು.
ಬ್ಯಾಂಕಿಂಗ್ ವ್ಯವಸ್ಥೆಯ ಲೂಟಿ
ಹರ್ಷದ್ ಮೆಹ್ತಾ ಅವರು ಬ್ಯಾಂಕುಗಳ ನಡುವೆ ನಡೆಯುವ ಸರಕಾರಿ ಬಾಂಡ್‌ಗಳ ವಹಿವಾಟನ್ನು ಬಳಸಿಕೊಂಡರು. ‘ರೆಡಿ ಫಾರ್ವರ್ಡ್ ಡೀಲ್ಸ್’ ಮತ್ತು ಬ್ಯಾಂಕುಗಳು ನೀಡುತ್ತಿದ್ದ ನಕಲಿ ‘ಬ್ಯಾಂಕ್ ರಸೀದಿ’ಗಳನ್ನು ಬಳಸಿ ಸಾರ್ವಜನಿಕ ಬ್ಯಾಂಕುಗಳಿಂದ ನೂರಾರು ಕೋಟಿ ರೂಪಾಯಿಗಳನ್ನು ಅನಧಿಕೃತವಾಗಿ ಪಡೆದರು. ಆ ಹಣವನ್ನು ನೇರವಾಗಿ ಷೇರು ಮಾರುಕಟ್ಟೆಗೆ ಹರಿಸಿ, ಷೇರುಗಳ ಬೆಲೆಯನ್ನು ಕೃತಕವಾಗಿ ಆಕಾಶಕ್ಕೆ ಮುಟ್ಟಿಸಿದರು.
ರಾಜೇಶ್ ಮೆಹ್ತಾ ಬ್ಯಾಂಕುಗಳಿಂದ ಹಣ ಕದಿಯಲಿಲ್ಲ, ಬದಲಿಗೆ ತಮ್ಮ ಕಂಪನಿಯಲ್ಲಿ ಇರದ ಲಾಭವನ್ನು ಇದೆ ಎಂದು ತೋರಿಸಿದರು. ಭಾರತದ ಲೆಕ್ಕಪುಸ್ತಕದಲ್ಲಿ ಸತತ 5 ವರ್ಷ 99%ರಷ್ಟು ಕೃತಕವಾಗಿ ಹೆಚ್ಚಿಸಿ ತೋರಿಸಿದರು. ಕಂಪನಿ ಜಾಗತಿಕವಾಗಿ ಬೃಹತ್ ಸಾಮ್ರಾಜ್ಯದಂತೆ ಕಾಣುವಂತೆ ಸಾರ್ವಜನಿಕರನ್ನು ನಂಬಿಸಿದರು.
ಹರ್ಷದ್ ಮೆಹ್ತಾ ಹಗರಣ ಬಯಲಾದಾಗ ಮುಂಬೈ ಷೇರು ಮಾರುಕಟ್ಟೆ ಒಂದೇ ಬಾರಿಗೆ ಕುಸಿಯಿತು ರಾಜೇಶ್ ಮೆಹ್ತಾ ಹಗರಣ ಇಡೀ ಮಾರುಕಟ್ಟೆಯನ್ನು ಬೀಳಿಸದಿದ್ದರೂ, ಅವರ ಸ್ವಂತ ಕಂಪನಿಯ ಹೂಡಿಕೆದಾರರ ರೂ.12,725 ಕೋಟಿಗೂ ಅಧಿಕ ಸಂಪತ್ತನ್ನು ಸಂಪೂರ್ಣವಾಗಿ ನಾಶಮಾಡಿತು. ಹೂಡಿಕೆದಾರರು ಲೆಕ್ಕಪತ್ರದ ವಾಸ್ತವವನ್ನು ಓದಲು ಕಲಿಯಬೇಕು.