ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishweshwar Bhat Column: ಮಾಜಿ ಮುಖ್ಯಮಂತ್ರಿಗಳ ಜನತಾ ಪರಿವಾರದ ನೆನಪು

ಬೊಮ್ಮಾಯಿ ಸರಕಾರವನ್ನು ತರಾಟೆಗೆ ತೆಗೆದು ಕೊಳ್ಳುವ ಒಂದು ಅವಕಾಶವನ್ನೂ ತಪ್ಪಿಸಿ ಕೊಂಡವರಲ್ಲ. ಮದುವೆ ಕರೆಯೋಲೆ ಕೊಡುವ ಶಾಸ್ತ್ರ ಮುಗಿದಿದ್ದೇ ತಡ, ಇಬ್ಬರ ನಡುವಿನ ಮಾತುಕತೆ ಸಹಜವಾಗಿಯೇ ‘ಜನತಾ ಪರಿವಾರ’ ಎಂಬ ಹಳೆಯ ಆಲದ ಮರದ ಕೆಳಗೆ ಬಂದು ನಿಂತಿತು. ರಾಜಕೀಯದಲ್ಲಿ ಈಗ ಬೇರೆ ಬೇರೆ ದಿಕ್ಕುಗಳಲ್ಲಿ ಪಯಣಿಸುತ್ತಿದ್ದರೂ, ಇವರಿಬ್ಬರ ರಾಜಕೀಯ ಜೀವನದ ಬೇರುಗಳು ಒಂದೇ ಮಣ್ಣಿನಲ್ಲಿ ಬೆಳೆದವು ಗಳಲ್ಲವೇ? ಅದರಲ್ಲೂ ಸಿದ್ದರಾಮಯ್ಯ ನವರಿಗೆ ಬಸವರಾಜ ಬೊಮ್ಮಾಯಿ ಅವರ ತಂದೆ, ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಅವರೊಂದಿಗಿನ ಒಡನಾಟದ ನೆನಪುಗಳು ಗರಿಗೆದರಿದವು.

ಅಧಿಕಾರದ ಹಾದಿ ಬೇರೆಯಾದರೂ, ಇಬ್ಬರು ನಾಯಕರ ಬಾಂಧವ್ಯದ ಬೇರು ಒಂದೇ!

ರಾಜಕೀಯ ಎಂಬುದು ಒಂದು ವಿಚಿತ್ರ ರಂಗಭೂಮಿ. ಇಲ್ಲಿ ಸದನದ ಒಳಗೆ ಬದ್ಧ ವೈರಿಗಳಂತೆ ಕತ್ತಿ ಮಸೆಯುವವರು, ಸದನದ ಹೊರಗೆ ಕಾಫಿ ಕಪ್ಪಿನ ಮುಂದೆ ಕುಳಿತಾಗ ಹಳೆಯ ಕಾಲೇಜು ಗೆಳೆಯ ರಂತೆ ಹರಟೆ ಹೊಡೆಯುತ್ತಾರೆ. ಕರ್ನಾಟಕ ರಾಜಕಾರಣದ ಇಬ್ಬರು ಪ್ರಭಾವಿ ನಾಯಕರೂ, ಮಾಜಿ ಮುಖ್ಯಮಂತ್ರಿಗಳೂ ಆದ ಸಿದ್ದರಾಮಯ್ಯ ಮತ್ತು ಬಸವರಾಜ ಬೊಮ್ಮಾಯಿ ಅವರ ನಿನ್ನೆಯ ಭೇಟಿಯೂ ಇದಕ್ಕೆ ಹೊರತಾಗಿರಲಿಲ್ಲ.

ತಮ್ಮ ಪುತ್ರಿಯ ವಿವಾಹದ ಆಮಂತ್ರಣ ಪತ್ರಿಕೆ ನೀಡುವ ನೆಪದಲ್ಲಿ ಬೊಮ್ಮಾಯಿಯವರು ಸಿದ್ದರಾಮಯ್ಯನವರ ನಿವಾಸಕ್ಕೆ ಕಾಲಿಟ್ಟಾಗ, ಅಂದು ರಾಜಕೀಯೇತರ, ಆದರೆ ಸಂಪೂರ್ಣ ರಾಜಕೀಯದ ಘಮಲಿರುವ ತಿಳಿ ವಾತಾವರಣ ನಿರ್ಮಾಣವಾಯಿತು. ರಾಜಕೀಯದ ವೇದಿಕೆ ಗಳಲ್ಲಿ ಒಬ್ಬರನ್ನೊಬ್ಬರು ತರಾಟೆಗೆ ತೆಗೆದುಕೊಳ್ಳುವ ಈ ಇಬ್ಬರು ನಾಯಕರು ವೈಯಕ್ತಿಕವಾಗಿ ಪರಸ್ಪರ ಗೌರವ - ಸಲುಗೆ ಹೊಂದಿರುವವರು. ಬಸವ ರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ, ಸಿದ್ದರಾ ಮಯ್ಯನವರು ಪ್ರತಿಪಕ್ಷ ನಾಯಕರು.

ಬೊಮ್ಮಾಯಿ ಸರಕಾರವನ್ನು ತರಾಟೆಗೆ ತೆಗೆದು ಕೊಳ್ಳುವ ಒಂದು ಅವಕಾಶವನ್ನೂ ತಪ್ಪಿಸಿ ಕೊಂಡವರಲ್ಲ. ಮದುವೆ ಕರೆಯೋಲೆ ಕೊಡುವ ಶಾಸ್ತ್ರ ಮುಗಿದಿದ್ದೇ ತಡ, ಇಬ್ಬರ ನಡುವಿನ ಮಾತುಕತೆ ಸಹಜವಾಗಿಯೇ ‘ಜನತಾ ಪರಿವಾರ’ ಎಂಬ ಹಳೆಯ ಆಲದ ಮರದ ಕೆಳಗೆ ಬಂದು ನಿಂತಿತು. ರಾಜಕೀಯದಲ್ಲಿ ಈಗ ಬೇರೆ ಬೇರೆ ದಿಕ್ಕುಗಳಲ್ಲಿ ಪಯಣಿಸುತ್ತಿದ್ದರೂ, ಇವರಿಬ್ಬರ ರಾಜಕೀಯ ಜೀವನದ ಬೇರುಗಳು ಒಂದೇ ಮಣ್ಣಿನಲ್ಲಿ ಬೆಳೆದವು ಗಳಲ್ಲವೇ? ಅದರಲ್ಲೂ ಸಿದ್ದರಾಮಯ್ಯ ನವರಿಗೆ ಬಸವರಾಜ ಬೊಮ್ಮಾಯಿ ಅವರ ತಂದೆ, ಮಾಜಿ ಸಿಎಂ ಎಸ್.ಆರ್. ಬೊಮ್ಮಾಯಿ ಅವರೊಂದಿಗಿನ ಒಡನಾಟದ ನೆನಪುಗಳು ಗರಿಗೆದರಿದವು.

ಇದನ್ನೂ ಓದಿ: Vishweshwar Bhat Colum: ನಮ್ಮ ಅಂಗಳ ಗುಡಿಸಿ, ನಮ್ಮ ಮಲ್ಲಿಗೆ ನಮಗೇ ಮುಡಿಸಿದರು !

‘ನೋಡಪ್ಪ ಬೊಮ್ಮಾಯಿ, ನಿಮ್ಮ ತಂದೆಯವರ ಸಂಪುಟದಲ್ಲಿ ನಾನು ಮಂತ್ರಿಯಾಗಿದ್ದೆ, ಆಗಿನ ಶಿಸ್ತು, ರಾಜಕೀಯದ ಗಾಂಭೀರ್ಯವೇ ಬೇರೆ ಇತ್ತು’ ಎಂದು ಸಿದ್ದರಾಮಯ್ಯನವರು ತಮ್ಮ ವಿಶಿಷ್ಟ ಶೈಲಿಯಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದರೆ, ಬೊಮ್ಮಾಯಿಯವರು ಆ ಕಾಲದ ರಾಜಕೀಯ ಪಟ್ಟುಗಳನ್ನು ನೆನೆದು ಮುಗುಳ್ನಗುತ್ತಿದ್ದರು.

ಮಾತುಕತೆ ಮುಂದುವರಿದಂತೆ, ನೇರವಾಗಿ ವಿಧಾನಪರಿಷತ್ತಿನ ಹಳೆಯ ಸಭಾಂಗಣಕ್ಕೆ ಜಿಗಿಯಿತು. ಜೆ.ಎಚ್.ಪಟೇಲರು ಮುಖ್ಯ ಮಂತ್ರಿಯಾಗಿದ್ದ, ಸಿದ್ದರಾಮಯ್ಯನವರು ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಕಾಲವದು. ಆಗ ಮೇಲ್ಮನೆಯ ಸಭಾಪತಿ ಸ್ಥಾನದಲ್ಲಿ ಡಿ.ಬಿ. ಕಲಮಣಕರ ಅವರು ಕುಳಿತಿದ್ದರು. ಬಸವರಾಜ ಬೊಮ್ಮಾಯಿ ಅವರು ಆಗ ತಾನೇ ಮೇಲ್ಮನೆ ಪ್ರವೇಶಿಸಿದ್ದ ಉತ್ಸಾಹಿ ಯುವ ಸದಸ್ಯ.

ಸದನದಲ್ಲಿ ವಿಷಯವೊಂದರ ಬಗ್ಗೆ ಮಾತನಾಡಲು ಬೊಮ್ಮಾಯಿಯವರು ಎದ್ದು ನಿಂತಾಗ, ಸಮಯದ ಅಭಾವದಿಂದ ಸಭಾಪತಿ ಕಲಮಣಕರ ಅವರು ಅವಕಾಶ ನೀಡಲು ನಿರಾಕರಿಸಿದ್ದರಂತೆ. ಆಗ ಮಧ್ಯಪ್ರವೇಶಿಸಿದ್ದ ಹಣಕಾಸು ಸಚಿವ ಸಿದ್ದರಾಮಯ್ಯನವರು, ‘ಸಭಾಪತಿಗಳೇ, ನನ್ನ ಉತ್ತರದ ಸಮಯದಲ್ಲಿ ಹತ್ತು ನಿಮಿಷವನ್ನು ಬಸವರಾಜ ಬೊಮ್ಮಾಯಿ ಅವರಿಗೆ ಕೊಡಿ, ಅವರು ಏನು ಮಾತನಾಡುತ್ತಾರೆ ಎಂದು ನಾನೂ ಕೇಳಬೇಕು’ ಎಂದು ಹೇಳಿ ಅವಕಾಶ ಕೊಡಿಸಿದ್ದರಂತೆ! ಈ ಘಟನೆಯನ್ನು ಇಬ್ಬರೂ ನೆನಪಿಸಿಕೊಂಡರು.

‘ಅಂದು ನೀವು ಹತ್ತು ನಿಮಿಷ ಸಮಯ ಕೊಡಿಸಿದ್ದಕ್ಕೆ, ಇಂದು ನಾನು ಸದನದಲ್ಲಿ ನಿಮ್ಮನ್ನೇ ಪ್ರಶ್ನೆ ಮಾಡುವ ಮಟ್ಟಕ್ಕೆ ಬೆಳೆದೆ ಸಾರ್’ ಎಂದು ಬೊಮ್ಮಾಯಿ ಚಟಾಕಿ ಹಾರಿಸಿದಾಗ, ಸಿದ್ದರಾಮಯ್ಯ ನವರು ‘ಅದಕ್ಕೆ ನಾನು ಪಶ್ಚಾತ್ತಾಪ ಪಡಬೇಕೋ ಅಥವಾ ಹೆಮ್ಮೆ ಪಡಬೇಕೋ ಗೊತ್ತಾಗುತ್ತಿಲ್ಲ’ ಎಂದು ತಮ್ಮದೇ ಧಾಟಿಯಲ್ಲಿ ಹೇಳಿದಾಗ ಇಬ್ಬರೂ ಜೋರಾಗಿ ನಕ್ಕರು.

ಅಂದಿನ ಮತ್ತು ಇಂದಿನ ರಾಜಕಾರಣದ ವರಸೆಗಳ ನಡುವಿನ ಅಜಗಜಾಂತರ ವ್ಯತ್ಯಾಸದ ಬಗ್ಗೆ ಇಬ್ಬರೂ ನಾಯಕರು ಸ್ವಾರಸ್ಯಕರವಾಗಿ ವಿಶ್ಲೇಷಣೆ ನಡೆಸಿದರು. ‘ಆಗೆಲ್ಲ ಸದನದಲ್ಲಿ ಎಷ್ಟೇ ಜೋರಾಗಿ ವಾಗ್ವಾದ ನಡೆದರೂ, ಹೊರಗೆ ಬಂದ ಮೇಲೆ ಎಲ್ಲರೂ ಒಟ್ಟಿಗೆ ಕುಳಿತು ಮಸಾಲೆ ದೋಸೆ ತಿನ್ನುತ್ತಾ ಹರಟೆ ಹೊಡೆಯುತ್ತಿದ್ದೆವು. ಈಗಿನ ರಾಜಕಾರಣದಲ್ಲಿ ವೈಯಕ್ತಿಕ ಟೀಕೆಗಳೇ ಜಾಸ್ತಿ ಯಾಗಿವೆ, ಸೈದ್ಧಾಂತಿಕ ಚರ್ಚೆಗಳು ಕಡಿಮೆ ಯಾಗಿವೆ’ ಎಂಬ ಅಭಿಪ್ರಾಯ ಇಬ್ಬರ ಮಾತಿ ನಲ್ಲೂ ವ್ಯಕ್ತವಾಯಿತು.

ಸದನದಲ್ಲಿ ಅಂಕಿ- ಅಂಶಗಳ ಸಮೇತ ಮಾತನಾಡುವುದು ಹೇಗೆ, ಪ್ರತಿಪಕ್ಷದವರ ಬಾಯಿ ಮುಚ್ಚಿಸು ವುದು ಹೇಗೆ ಎಂಬ ಹಳೆಯ ಪಟ್ಟುಗಳನ್ನು ನೆನಪಿಸಿಕೊಳ್ಳುತ್ತಾ, ಇಂದಿನ ತಲೆಮಾರಿನ ಶಾಸಕರ ಕಾರ್ಯವೈ ಖರಿಯ ಬಗ್ಗೆ ಇಬ್ಬರೂ ತಮಾಷೆಯಾಗಿ ಕಾಲೆಳೆದುಕೊಂಡರು. ಮಾತು ಹೀಗೆಯೇ ಸಾಗುತ್ತಾ, ಕರ್ನಾಟಕ ರಾಜಕಾರಣದ ದಿಕ್ಕನ್ನೇ ಬದಲಿಸಿದ ’ಅಹಿಂದ’ ಹೋರಾಟದ ಹಿನ್ನೆಲೆಯತ್ತ ಹೊರಳಿತು.

ತಾವು ಜನತಾದಳದಿಂದ ಹೊರಬಂದ ಸಂದರ್ಭ, ಅಹಿಂದ ಸಮಾವೇಶಗಳನ್ನು ಸಂಘಟಿಸಿದ ರೀತಿ ಮತ್ತು ಅದಕ್ಕೆ ಎದುರಾದ ರಾಜಕೀಯ ಸವಾಲುಗಳನ್ನು ಸಿದ್ದರಾಮಯ್ಯನವರು ರಸವತ್ತಾಗಿ ವಿವರಿಸುತ್ತಿದ್ದರೆ, ಬೊಮ್ಮಾಯಿಯವರು ಆ ಕಾಲಘಟ್ಟದ ರಾಜಕೀಯ ಬೆಳವಣಿಗೆಗಳನ್ನು ತಮ್ಮದೇ ದೃಷ್ಟಿಕೋನದಿಂದ ಮೆಲುಕು ಹಾಕಿದರು.

‘ನೀವು ಅಹಿಂದ ಹೋರಾಟ ಶುರು ಮಾಡಿದಾಗ, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸುನಾಮಿಯೇ ಏಳುತ್ತದೆ ಎಂದು ನಮಗೆ ಆಗಲೇ ಅಂದಾಜಾಗಿತ್ತು’ ಎಂದು ಬೊಮ್ಮಾಯಿ ಹೇಳಿದಾಗ, ಸಿದ್ದರಾಮಯ್ಯನವರು ತಮ್ಮ ಹುಬ್ಬೇರಿಸಿ, ‘ರಾಜಕೀಯದಲ್ಲಿ ಯಾವಾಗ ಯಾವ ಗಾಳಿ ಬೀಸುತ್ತದೆ ಎಂದು ಊಹಿಸುವುದು ಕಷ್ಟ, ಆದರೆ ಜನರ ನಾಡಿಮಿಡಿತ ಹಿಡಿಯುವುದು ಮುಖ್ಯ’ ಎಂದು ಮಾರ್ಮಿಕವಾಗಿ ನುಡಿದರು.

ಜನತಾ ಪರಿವಾರದ ಮಾತು ಬಂದ ಮೇಲೆ, ‘ಮಣ್ಣಿನ ಮಗ’ ಎಚ್.ಡಿ. ದೇವೇಗೌಡರ ರಾಜಕೀಯ ವರಸೆಗಳ ಪ್ರಸ್ತಾಪ ಬಾರದಿರಲು ಸಾಧ್ಯವೇ? ದೇವೇಗೌಡರ ರಾಜಕೀಯ ತಂತ್ರಗಾರಿಕೆ, ಅವರ ಅನಿರೀಕ್ಷಿತ ನಡೆಗಳು ಮತ್ತು ಅವರೊಂದಿಗೆ ಕೆಲಸ ಮಾಡಿದ ದಿನಗಳ ಸ್ವಾರಸ್ಯಕರ ಪ್ರಸಂಗಗಳನ್ನು ಇಬ್ಬರೂ ನೆನಪಿಸಿಕೊಂಡರು.

ದೇವೇಗೌಡರ ಗರಡಿಯಲ್ಲಿ ಪಳಗಿದ ಈ ಇಬ್ಬರು ನಾಯಕರು, ತಮ್ಮ ‘ಗುರು’ವಿನ ರಾಜಕೀಯ ಚಾಣಾಕ್ಷತೆಯನ್ನು ಹಾಸ್ಯಮಯವಾಗಿ ಬಣ್ಣಿಸುತ್ತಿದ್ದರೆ, ಅದು ಯಾವುದೋ ರಾಜಕೀಯ ಹಾಸ್ಯ ನಾಟಕದ ಸಂಭಾಷಣೆಯಂತೆ ಭಾಸವಾಗುತ್ತಿತ್ತು. ತದನಂತರ ರಾಜ್ಯ ರಾಜಕಾರಣದಲ್ಲಿ ಆದ ಅನಿರೀಕ್ಷಿತ ತಿರುವುಗಳು, ಸಮ್ಮಿಶ್ರ ಸರ್ಕಾರಗಳ ಸರ್ಕಸ್, ಆಪರೇಷನ್ ಕಮಲದಂಥ ಬೆಳವಣಿಗೆಗಳು ಮತ್ತು ಇಬ್ಬರೂ ಬೇರೆ ಬೇರೆ ಪಕ್ಷಗಳ ಮೂಲಕ ಮುಖ್ಯಮಂತ್ರಿ ಗಾದಿಗೇರಿದ ರೋಚಕ ಪಯಣದ ಬಗ್ಗೆ ಮಾತುಕತೆ ಸಾಗಿತು.

‘ನಾವಿಬ್ಬರೂ ಒಂದೇ ಪಕ್ಷದಲ್ಲಿದ್ದವರು, ಆದರೆ ವಿಧಿ ನಮ್ಮನ್ನು ಬೇರೆ ಬೇರೆ ಪಕ್ಷಗಳ ಮೂಲಕ ಒಂದೇ ಕುರ್ಚಿಯ ಮೇಲೆ ಕೂರಿಸಿತು’ ಎಂದು ಬೊಮ್ಮಾಯಿಯವರು ಮಾರ್ಮಿಕವಾಗಿ ಹೇಳಿದಾಗ, ಸಿದ್ದರಾಮಯ್ಯನವರು ‘ಕುರ್ಚಿ ಒಂದೇ, ಆದರೆ ಅದನ್ನು ಉಳಿಸಿಕೊಳ್ಳಲು ಮಾಡುವ ಸರ್ಕಸ್ ಮಾತ್ರ ಬೇರೆ ಬೇರೆ’ ಎಂದು ನಗೆಚಟಾಕಿ ಹಾರಿಸಿದರು.

ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶಾಶ್ವತ ಶತ್ರುಗಳೂ ಅಲ್ಲ ಎಂಬ ಮಾತಿಗೆ ಇವರಿಬ್ಬರ ಈ ಸ್ನೇಹಪರ ಸಂಭಾಷಣೆ ಜೀವಂತ ಸಾಕ್ಷಿಯಂತಿತ್ತು. ಹೀಗೆ ಹಳೆಯ ನೆನಪುಗಳ ಬುತ್ತಿಯನ್ನು ಬಿಚ್ಚಿಟ್ಟು, ರಾಜಕೀಯದ ಏಳುಬೀಳುಗಳನ್ನು ಹಾಸ್ಯದ ಲೇಪನದೊಂದಿಗೆ ಮೆಲುಕು ಹಾಕುತ್ತಾ ಕುಳಿತ ಈ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ.

ಕೇವಲ ಹತ್ತು ನಿಮಿಷ ಮದುವೆ ಆಮಂತ್ರಣ ಕೊಟ್ಟು ಹೊರಡಲು ಬಂದಿದ್ದ ಬಸವರಾಜ ಬೊಮ್ಮಾಯಿ ಅವರು, ಸಿದ್ದರಾಮಯ್ಯನವರೊಂದಿಗೆ ಹರಟೆಗೆ ಬಿದ್ದು ಬರೋಬ್ಬರಿ ಒಂದೂಕಾಲು ಗಂಟೆ ಕಳೆದುಹೋಗಿತ್ತು. ಹೊರಗೆ ಕಾಯುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಆಪ್ತ ಸಹಾಯಕರು ‘ಒಳಗೆ ಏನಪ್ಪಾ ಇಷ್ಟೊಂದು ಗಹನವಾದ ಚರ್ಚೆ ನಡೆಯುತ್ತಿದೆ, ಹೊಸ ರಾಜಕೀಯ ಸಮೀಕರಣ ವೇನಾದರೂ ಸಿದ್ಧವಾಗುತ್ತಿದೆಯೇ?’ ಎಂದು ತಲೆಕೆಡಿಸಿಕೊಂಡಿದ್ದರೆ, ಒಳಗೆ ಮಾತ್ರ ಹಳೆಯ ಗೆಳೆಯರ ನಗೆಯ ಅಲೆಗಳು ಎದ್ದಿದ್ದವು.

ಗಡಿಯಾರದ ಮುಳ್ಳು ಮಧ್ಯಾಹ್ನದ ಎರಡು ಗಂಟೆ ದಾಟಿರುವುದನ್ನು ಗಮನಿಸಿದ ಬೊಮ್ಮಾಯಿ ಯವರು, ‘ಸಾರ್, ಎಂಗೇಜ್ಮೆಂಟ್‌ಗೆ ಬಂದಾಗ, ಮದುವೆಗೆ ತಪ್ಪದೇ ಬರುತ್ತೇನೆ ಅಂತ ಹೇಳಿದ್ದೀರಿ. ಮದುವೆಗೆ ತಪ್ಪದೇ ಬರಬೇಕು’ ಎಂದು ಎದ್ದು ನಿಂತರು. ಅದಕ್ಕೆ ಸಿದ್ದರಾಮಯ್ಯನವರು ನಗುತ್ತಾ, ‘ಖಂಡಿತಾ ಬರುತ್ತೇನೆ’ಎಂದು ಹೇಳಿ ಬೀಳ್ಕೊಟ್ಟರು. ರಾಜಕೀಯದ ಜಂಜಾಟಗಳ ನಡುವೆ ಈ ಇಬ್ಬರು ನಾಯಕರ ಈ ಆತ್ಮೀಯ ಭೇಟಿ, ಕರ್ನಾಟಕದ ರಾಜಕೀಯ ಸಂಸ್ಕೃತಿಯಲ್ಲಿ ಇನ್ನೂ ಜೀವಂತವಾಗಿರುವ ಸೌಹಾರ್ದತೆಗೆ ಒಂದು ಸುಂದರ ನಿದರ್ಶನವಾಗಿ ಉಳಿಯಿತು.

ರಾಜಕೀಯ ಭಿನ್ನಾಭಿಪ್ರಾಯಗಳಿಗಿಂತ ಮಾನವೀಯ ಸಂಬಂಧ ಮತ್ತು ಸೌಹಾರ್ದತೆಯೇ ದೊಡ್ಡದು. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಾತುಕತೆಯಲ್ಲಿ ನನ್ನಂಥ ಸಂಪಾದಕನೂ ಇದ್ದರೆ, ಮುಂದೆ ಯಾವಾಗಲೋ ಬರೆಯಲು ಸಾಕಷ್ಟು ವಿಷಯಗಳು ಜಮಾ ಆಗುತ್ತವೆ

ವಿಶ್ವೇಶ್ವರ ಭಟ್‌

View all posts by this author