Vishweshwar Bhat Colum: ನಮ್ಮ ಅಂಗಳ ಗುಡಿಸಿ, ನಮ್ಮ ಮಲ್ಲಿಗೆ ನಮಗೇ ಮುಡಿಸಿದರು !
ದೇಹಕ್ಕೆ ವಯಸ್ಸಾಗಿತ್ತು, ಕಣ್ಣುಗಳೊಳಗಿನ ಬೆಳಕು ಸಾಯಂಕಾಲದ ನೆರಳಿನಂತೆ ಮಂಕಾಗುತ್ತಾ ಬಂದಿತ್ತು. ಎಷ್ಟೋ ವರ್ಷಗಳ ಕಾಲ ತಾಳೆಗರಿಗಳ ಸೂಕ್ಷ್ಮ ಕೆತ್ತನೆಯಂಥ ಅಕ್ಷರಗಳನ್ನು ಭೂತಗನ್ನಡಿ ಹಿಡಿದು ಶೋಧಿಸಿದ ಕಣ್ಣುಗಳವು. ಕನ್ನಡದ ಒಂದೊಂದು ಅಕ್ಷರದ ಸುಳಿಯಲ್ಲೂ ಕಳೆದುಹೋಗಿ, ಕಣ್ಣಿನ ನರಗಳೆಲ್ಲ ಬತ್ತಿ ಹೋಗಿದ್ದವು. ವೈದ್ಯರು ‘ಇನ್ನು ಸಾಕು, ಪುಸ್ತಕಗಳನ್ನು ಮುಚ್ಚಿಡಿ. ಇಲ್ಲವಾದರೆ ಕತ್ತಲ ಬದುಕಬೇಕಾದೀತು’ ಎಂದು ಎಚ್ಚರಿಸಿದ್ದರು.
-
ನೂರೆಂಟು ವಿಶ್ವ
ಕಿಟೆಲ್ ದೇಹವನ್ನು ಮಣ್ಣು ಮಾಡಿದ ಆ ಜರ್ಮನಿಯ ರುದ್ರಭೂಮಿಯ ಕಲ್ಲು ಕೂಡ ಇವತ್ತಿಗೂ ಕನ್ನಡದ ಕಂಪನ್ನು ಸೂಸುತ್ತಿರಬೇಕು. ಯಾಕೆಂದರೆ, ಅಲ್ಲಿ ಮಲಗಿರುವ ವ್ಯಕ್ತಿ ಕೇವಲ ರಕ್ತಮಾಂಸದ ಒಬ್ಬ ಜರ್ಮನ್ ಪಾದ್ರಿಯಲ್ಲ. ಆತ ಕನ್ನಡದ ಕಣ್ವ, ಪರಭಾಷಿಕ ನೊಬ್ಬ ತನ್ನ ತಾಯ್ನಾಡನ್ನು ಮರೆತು ಇನ್ನೊಂದು ನಾಡಿನ ನುಡಿಯನ್ನು ಎದೆಗಪ್ಪಿ ಕೊಂಡು ಮಡಿದ ಅಪರೂಪದ ಪ್ರೇಮಕತೆ.
ಜರ್ಮನಿಯ ಟ್ಯೂಬಿಂಗನ್ನ ಆ ಚಳಿಗಾಲದ ಸಂಜೆಗಳಲ್ಲಿ ಕಿಟಕಿಯ ಆಚೆ ಮೌನವಾಗಿ ಅಲ್ಲಲ್ಲಿ ಹಿಮ ಉದುರುತ್ತಿತ್ತು. ಗಾಜಿನ ಮೇಲೆ ನಿಧಾನವಾಗಿ ಜಿನುಗುವ ಹಿಮದ ಹನಿಗಳು, ಆತನಿಗೆ ಎಷ್ಟೋ ಮೈಲುಗಳ ಆಚೆ ಮಂಗಳೂರಿನ ಹಂಚಿನ ಮಾಡಿನಿಂದ ತೊಟ್ಟಿಕ್ಕುತ್ತಿದ್ದ ಮುಂಗಾರಿನ ಹನಿಗಳಂತೆಯೇ ಕಾಣಿಸುತ್ತಿದ್ದವು. ಆ ಪುಟ್ಟ ಕೋಣೆಯ ಮೂಲೆಯ ಮೇಜಿನ ಮೇಲೆ ಒಂದು ಮಣ್ಣಿನ ಹಣತೆಯ ನೆನಪಿನಂತೆ ಸಣ್ಣದೊಂದು ಲ್ಯಾಂಪು ಉರಿಯುತ್ತಿತ್ತು.
ಆ ಬೆಳಕಿನ ವೃತ್ತದೊಳಗೆ ಮುದುರಿಕೊಂಡು ಕುಳಿತಿದ್ದ ಮುದಿಯನೊಬ್ಬನಿಗೆ ಜರ್ಮನಿಯ ಕಡುಚಳಿಯ ನಡುವೆಯೂ ಮೈಯೊಳಗೆ ಧಾರವಾಡದ ಬಿಸಿಲ ಧಗೆ, ಬೆಟಗೇರಿಯ ಧೂಳು, ಗಾಮನಗಟ್ಟಿಯ ವಾಸನೆ, ಕೆಮ್ಮಣ್ಣಿನ ಹಾದಿಯ ಬಿಸಿ ಉಸಿರಾಟ ಜೀವಂತವಾಗಿ ಹರಿಯುತ್ತಿತ್ತು. ಆತನ ಹೆಸರು ಫಾದರ್ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಎಂದಷ್ಟೇ ಆಗಿರಲಿಲ್ಲ. ಆತ ಆ ಹೊತ್ತಿಗೆ ಇಡೀ ಕನ್ನಡವೇ ತಾನಾಗಿ ಬದುಕುತ್ತಿದ್ದ ಒಬ್ಬ ಮುದಿ ತಪಸ್ವಿ.
ದೇಹಕ್ಕೆ ವಯಸ್ಸಾಗಿತ್ತು, ಕಣ್ಣುಗಳೊಳಗಿನ ಬೆಳಕು ಸಾಯಂಕಾಲದ ನೆರಳಿನಂತೆ ಮಂಕಾಗುತ್ತಾ ಬಂದಿತ್ತು. ಎಷ್ಟೋ ವರ್ಷಗಳ ಕಾಲ ತಾಳೆಗರಿಗಳ ಸೂಕ್ಷ್ಮ ಕೆತ್ತನೆಯಂಥ ಅಕ್ಷರಗಳನ್ನು ಭೂತಗನ್ನಡಿ ಹಿಡಿದು ಶೋಧಿಸಿದ ಕಣ್ಣುಗಳವು. ಕನ್ನಡದ ಒಂದೊಂದು ಅಕ್ಷರದ ಸುಳಿಯಲ್ಲೂ ಕಳೆದುಹೋಗಿ, ಕಣ್ಣಿನ ನರಗಳೆಲ್ಲ ಬತ್ತಿ ಹೋಗಿದ್ದವು. ವೈದ್ಯರು ‘ಇನ್ನು ಸಾಕು, ಪುಸ್ತಕಗಳನ್ನು ಮುಚ್ಚಿಡಿ. ಇಲ್ಲವಾದರೆ ಕತ್ತಲ ಬದುಕಬೇಕಾದೀತು’ ಎಂದು ಎಚ್ಚರಿಸಿದ್ದರು. ಆದರೆ ಆ ಮನುಷ್ಯ ನಿಗೆ ಕನ್ನಡವನ್ನು ನೋಡದೇ ಇರುವುದು ಎಂದರೆ ಉಸಿರು ಕಟ್ಟಿಕೊಂಡಂತೆ.
ಇದನ್ನೂ ಓದಿ: Vishweshwar Bhat Column: ಹಂಟರ್ ಎಸ್. ಥಾಂಪ್ಸನ್ ನೆನಪು
ಮೇಜಿನ ಮೇಲಿದ್ದ ಕನ್ನಡ ವ್ಯಾಕರಣದ ಹಸ್ತಪ್ರತಿಯ ಹಾಳೆಗಳನ್ನು ಕೈಬೆರಳುಗಳಿಂದ ನೇವರಿಸು ತ್ತಿದ್ದಾಗ, ಕಣ್ಣಿಗೆ ಕಾಣಿಸದ ಅಕ್ಷರಗಳು ಆತನ ಬೆರಳ ತುದಿಯ ಸ್ಪರ್ಶಕ್ಕೇ ಪಿಸುಗುಡುತ್ತಿದ್ದವು. ಕಣ್ಣು ಮುಚ್ಚಿದರೂ ಎದೆಯೊಳಗೆ ಕನ್ನಡದ ಅಕ್ಷರಮಾಲೆ ದೀಪಾವಳಿಯ ಸಾಲುದೀಪಗಳಂತೆ ಮಿನುಗುತ್ತಲೇ ಇತ್ತು.
ಬೆಳಗಾಗುತ್ತಲೇ ಆ ಮುರುಕು ಮೇಜಿನ ಮುಂದೆ ಆತ ಕುಳಿತು ಬಿಡುತ್ತಿದ್ದ. ಕೈಗಳು ನಡುಗುತ್ತಿದ್ದವು, ಲೇಖನಿ ಹಿಡಿದ ಬೆರಳುಗಳಲ್ಲಿ ಮೊದಲಿನ ಬಿಗಿ ಇರಲಿಲ್ಲ. ಆದರೂ ಮಣಿಕಟ್ಟಿನ ಕೀಲುನೋವನ್ನು ಮರೆತು, ಎಡಗೈಯಿಂದ ಬಲಗೈಯನ್ನು ಅದುಮಿ ಹಿಡಿದು ಕಾಗದದ ಮೇಲೆ ಅಕ್ಷರಗಳನ್ನು ಮೂಡಿಸುತ್ತಿದ್ದ. ಅವನ ಪಾಲಿಗೆ ಕನ್ನಡ ಕೇವಲ ಒಂದು ಭಾಷೆಯಾಗಿರಲಿಲ್ಲ. ಅದು ಆತ ಪ್ರೀತಿಸಿ, ಆರಾಧಿಸಿ, ಎದೆಯೊಳಗೆ ಇಟ್ಟುಕೊಂಡು ಸಾಕಿ ಬೆಳೆಸಿದ ಅನೂಹ್ಯ ಜೀವ.
ದೂರದ ಟ್ಯೂಬಿಂಗನ್ನ ಆ ಒಂಟಿ ಕೋಣೆಯಲ್ಲಿ ಕುಳಿತಾಗಲೂ, ಆತನ ಕಿವಿಗಳಲ್ಲಿ ಕರಾವಳಿಯ ನಡುಮನೆಯಲ್ಲಿ ಅಜ್ಜಿ ಹೇಳುತ್ತಿದ್ದ ಒಗಟುಗಳು, ಧಾರವಾಡದ ಹೊಲಗಳಲ್ಲಿ ರೈತರು ಆಡುತ್ತಿದ್ದ ಭಾಷೆ, ಬಯಲಾಟದ ಹಾಡುಗಳ ರಾಗಗಳು ನಾದತರಂಗಗಳಾಗಿ ತೇಲಿ ಬರುತ್ತಿದ್ದವು. ಬದುಕಿನ ಸಂಧ್ಯಾಕಾಲದಲ್ಲಿ ಮನುಷ್ಯ ತನ್ನ ಬಾಲ್ಯದ ಕಡೆಗೆ ಮುಖ ಮಾಡುತ್ತಾನೆ ಅಂತಾರೆ. ಆದರೆ ಕಿಟೆಲ್ಗೆ ಆ ಬಾಲ್ಯವಿಡೀ ಕರ್ನಾಟಕದ ಹಳ್ಳಿಹಳ್ಳಿಗಳ ಮರುಹುಟ್ಟು ಪಡೆದಿತ್ತು. ಅವನ ಬಳಿ ಆಗಾಗ ಬಂದು ಹೋಗುತ್ತಿದ್ದವರು ಆತನ ಹಠಮಾರಿತನವನ್ನು ಕಂಡು ಬೆರಗಾಗುತ್ತಿದ್ದರು.
ನಿಘಂಟಿನ ಕೆಲಸ ಮುಗಿದು ಎಷ್ಟೋ ವರ್ಷಗಳಾಗಿದ್ದವು, ಜಗತ್ತು ಆತನನ್ನು ಕೊಂಡಾಡಿ ಮುಗಿಸಿತ್ತು. ಆದರೆ ಆತನಿಗೆ ಒಳಗಿನ ದಾಹ ತೀರಿರಲಿಲ್ಲ. ‘ನನ್ನ ಕನ್ನಡ ಜನರಿಗೆ ಇನ್ನೂ ಒಂದು ಒಳ್ಳೆಯ ವ್ಯಾಕರಣ ಗ್ರಂಥವನ್ನು ಕೊಡಬೇಕು’ ಎಂದು ಆತ ದಿನವೂ ಹಂಬಲಿಸುತ್ತಿದ್ದ.
‘Grammar of the Kannada Language’ ಕೃತಿಯ ಒಂದೊಂದು ಪುಟವೂ ಆತನ ಆಯಸ್ಸಿನ ಒಂದೊಂದು ದಿನವನ್ನು ಕಸಿದುಕೊಳ್ಳುತ್ತಿತ್ತು. ಆದರೂ ಆತ ದಣಿಯಲಿಲ್ಲ. ಹಳಗನ್ನಡದ ಕೇಶಿರಾಜನ ಸೂತ್ರಗಳು, ನಾಗವರ್ಮನ ಛಂದಸ್ಸಿನ ಲೆಕ್ಕಾಚಾರಗಳು ಆತನ ನಿದ್ದೆಯಲ್ಲೂ ಕನಸಾಗಿ ಬರುತ್ತಿದ್ದವು. ಮಧ್ಯರಾತ್ರಿ ಎದ್ದು ಕುಳಿತು, ಮರೆತು ಹೋದ ಪದವೊಂದನ್ನು ನೆನಪಿಸಿಕೊಂಡು, ಹಳೆಯ ಕಾಗದದ ಚೂರಿನಲ್ಲಿ ನಡುಗುವ ಕೈಗಳಿಂದ ಗುರುತು ಹಾಕಿಟ್ಟುಕೊಳ್ಳುತ್ತಿದ್ದ. ಅಲ್ಲಿ ಯೂರೋಪಿನಲ್ಲಿ ಎಷ್ಟೋ ಜನರಿಗೆ ಈ ಮನುಷ್ಯ ಯಾಕಾಗಿ ಹೀಗೆ ಕರಗುತ್ತಿದ್ದಾನೆ ಎಂದು ಅರ್ಥ ವಾಗುತ್ತಿರಲಿಲ್ಲ.
‘ನಿನ್ನ ದೇಶವಲ್ಲದ, ನಿನ್ನ ಜನವಲ್ಲದ ಆ ಯಾವುದೋ ನಡುಗಪ್ಪಿನ ಜನರ ಭಾಷೆಗಾಗಿ ನಿನ್ನ ದೇಹವನ್ನು ಹೀಗೆ ದಂಡಿಸಿಕೊಳ್ಳುತ್ತಿದ್ದೀಯ?’ ಎಂದು ಕೆಲವರು ಮೂದಲಿಸುತ್ತಿದ್ದರು. ಕಿಟೆಲ್ ಮುಗುಳುನಗುತ್ತಿದ್ದ. ಆ ನಗುವಿನಲ್ಲಿ ಸಮುದ್ರದಷ್ಟು ಆಳವಾದ ಒಂದು ಮೌನವಿರುತ್ತಿತ್ತು. ಪ್ರೀತಿಗೆ ಯಾವತ್ತಾದರೂ ದೇಶ, ಗಡಿ, ಚರ್ಮದ ಬಣ್ಣಗಳು ಇರುತ್ತವೆಯೇ? ಕನ್ನಡ ಆತನಿಗೆ ರಕ್ತ ಹಂಚಿಕೊಂಡ ತಾಯಿಯಂತಾಗಿತ್ತು.
ಮಡಿಕೇರಿಯ ಬೆಟ್ಟಗಳ ಹಸಿರು, ಮಂಗಳೂರಿನ ಕಡಲಬ್ಬರ, ಗದಗ-ಬೆಟಗೇರಿಯ ಬಯಲು ಸೀಮೆಯ ಜನಪದರ ಮುಗ್ಧ ಪ್ರೀತಿ-ಇವೆಲ್ಲವೂ ಆತನ ಧಮನಿಗಳಲ್ಲಿ ಜರ್ಮನಿಯ ರಕ್ತಕ್ಕಿಂತ ಹೆಚ್ಚಾಗಿ ಹರಿಯುತ್ತಿದ್ದವು. ತಾನು ಕನ್ನಡಿಗನಲ್ಲ ಎಂಬ ಕೀಳರಿಮೆ ಆತನಿಗಿರಲಿಲ್ಲ, ತಾನು ಕನ್ನಡಿಗನಾಗಿಯೇ ಉಳಿಯುತ್ತೇನೆಂಬ ಧನ್ಯತೆಯಷ್ಟೇ ಆ ಮುಖದಲ್ಲಿ ತುಂಬಿ ತುಳುಕುತ್ತಿತ್ತು.
ಪತ್ನಿ ಪೌಲಿನ್ ಬಂದು ಚಹಾ ಕಪ್ ಮುಂದಿಟ್ಟು, ‘ಸ್ವಲ್ಪ ಹೊತ್ತು ಮಲಗಬಾರದೇ?’ ಎಂದು ಗೋಗರೆದಾಗ, ಆತ ಮುಗುಳ್ನಕ್ಕು ಆಕೆಯ ಕೈಗಳನ್ನು ಹಿಡಿದುಕೊಳ್ಳುತ್ತಿದ್ದ. ಆ ಕಣ್ಣುಗಳಲ್ಲಿ ನಿಸ್ತೇಜತೆಯ ನಡುವೆಯೂ ಒಂದು ಅಪೂರ್ವ ಕಾಂತಿ ಮಿನುಗುತ್ತಿತ್ತು. ‘ನೋಡು ಪೌಲಿನ್, ನಾನು ಕಣ್ಣು ಮುಚ್ಚಿದರೆ ಸಾಕು, ನೂರಾರು ಕನ್ನಡ ಪದಗಳು ನನ್ನ ಮುಂದೆ ಬಂದು ಕೈಮುಗಿದು ನಿಲ್ಲುತ್ತವೆ.
‘ನಮ್ಮನ್ನು ಸರಿಯಾಗಿ ಜೋಡಿಸದೆ ಹೋಗಿಬಿಡುತ್ತೀಯಾ ಕಿಟೆಲ್?’ ಎಂದು ಮುದ್ದಾಗಿ ಕೇಳುತ್ತವೆ. ಅವುಗಳಿಗೆ ನ್ಯಾಯ ಸಲ್ಲಿಸದೇ ನಾನು ಹೇಗೆ ನಿದ್ದೆ ಮಾಡಲಿ?’ ಎನ್ನುತ್ತಿದ್ದ. ಆತನಿಗೆ ಪ್ರತಿಯೊಂದು ಶಬ್ದವೂ ಜೀವಂತ ಮನುಷ್ಯನಂತೆ ಕಾಣುತ್ತಿತ್ತು. ‘ಕಂಪು’, ‘ಇಂಪು’, ‘ಬೆಡಗು’, ‘ತಣ್ಣಗೆ’- ಈ ಪದಗಳನ್ನು ಉಚ್ಚರಿಸುವಾಗ ಆತನ ಜರ್ಮನ್ ನಾಲಿಗೆಗೆ ತುಪ್ಪ ಸವರಿದ ರೊಟ್ಟಿಯ ಸವಿಯೋ, ಅರಳಿದ ಮಲ್ಲಿಗೆಯ ಪರಿಮಳವೋ ತಾಗಿದಂತಾಗುತ್ತಿತ್ತು.
ಸಂಜೆಯಾಗುತ್ತಿದ್ದಂತೆ ದೇಹ ಜಡವಾಗುತ್ತಿತ್ತು. ಎದೆಯೊಳಗೆ ಸಣ್ಣದೊಂದು ಕೆಮ್ಮು, ಉಸಿರಾಟದ ಏರಿಳಿತ ಗಳು ಹೆಚ್ಚಾಗುತ್ತಿದ್ದವು. ಆದರೆ ಕೋಣೆಯ ಗೋಡೆಯ ಮೇಲಿದ್ದ ಕರ್ನಾಟಕದ ನಕ್ಷೆಯನ್ನು ದಿಟ್ಟಿಸಿ ನೋಡುತ್ತಿzಗ ಮಾತ್ರ ಆತನ ಸುಕ್ಕುಗಟ್ಟಿದ ಮುಖದಲ್ಲಿ ಹೊಸದೊಂದು ನೆಮ್ಮದಿ ಹರಡು ತ್ತಿತ್ತು. ಆ ನಕ್ಷೆಯ ಕಾವೇರಿಯಿಂದ ಗೋದಾವರಿಯವರೆಗಿನ ನೆಲ ಆತನ ನೆನಪಿನ ಅಂಗಳದಲ್ಲಿ ಹಚ್ಚಹಸುರಾಗಿ ಹರಡಿಕೊಂಡಿತ್ತು.
ತಾನು ನಡೆದು ಬಂದ ಹಾದಿಗಳು, ನದಿಯ ದಡದಲ್ಲಿ ಕೂತು ಹಳಗನ್ನಡದ ತಾಳೆಗರಿ ಬಿಡಿಸಿ ಓದಿದ ಮಧ್ಯಾಹ್ನಗಳು, ಹಳ್ಳಿಯ ಹರಟೆಕಟ್ಟೆಯ ಮೇಲೆ ಕುಳಿತು ಗಾದೆಗಳನ್ನು ಕೇಳಿ ಬರೆದುಕೊಂಡ ಸಂಜೆಗಳು- ಎಲ್ಲವೂ ಒಂದಾದ ಮೇಲೊಂದರಂತೆ ಚಲನಚಿತ್ರದ ತುಣುಕುಗಳಂತೆ ಆತನ ಕಣ್ಮುಂದೆ ಹಾದುಹೋಗುತ್ತಿದ್ದವು. ಆ ಕ್ಷಣಗಳಲ್ಲಿ ಆತ ಜರ್ಮನಿಯ ಮಣ್ಣಿನಲ್ಲಿದ್ದರೂ, ಆತನ ಆತ್ಮ ಮಾತ್ರ ಸಹ್ಯಾದ್ರಿಯ ತಪ್ಪಲಿನಲ್ಲಿ ವಿಹರಿಸುತ್ತಿತ್ತು.
1903ರ ಡಿಸೆಂಬರ್ ತಿಂಗಳು ಹತ್ತಿರವಾಗುತ್ತಿದ್ದಂತೆ ಚಳಿಯ ತೀವ್ರತೆ ವಿಪರೀತವಾಯಿತು. ಕಿಟೆಲ್ ಹಾಸಿಗೆಯ ಸುತ್ತಲೂ ಕಾಗದಗಳು, ನಿಘಂಟಿನ ಪುರಾವೆಗಳು, ತಿದ್ದಿದ ಕರಡು ಪ್ರತಿಗಳೇ ಹರಡಿ ಕೊಂಡಿದ್ದವು. ಕೊನೆಯ ದಿನಗಳಲ್ಲಿ ದೇಹ ಸಂಪೂರ್ಣವಾಗಿ ಮಾತು ಕೇಳುವುದನ್ನು ನಿಲ್ಲಿಸಿತ್ತು. ಆದರೂ ಬಾಯಲ್ಲಿ ಗೊಣಗುತ್ತಿದ್ದ ಮಾತುಗಳು ಜರ್ಮನ್ ಭಾಷೆಯಲ್ಲಾಗಿರಲಿಲ್ಲ. ಅವು ಅಸ್ಪಷ್ಟ ವಾದ ಕನ್ನಡದ ನುಡಿಗಳಾಗಿದ್ದವು.
‘ಶಬ್ದಮಣಿದರ್ಪಣ’ದ ಯಾವುದೋ ಸೂತ್ರ, ‘ಛಂದೋಂಬುಧಿ’ಯ ಯಾವುದೋ ಪದ್ಯದ ತುಣುಕು ಆ ಒಣಗಿದ ತುಟಿಗಳ ನಡುವಿಂದ ಪಿಸುದನಿಯಲ್ಲಿ ತೇಲಿ ಬರುತ್ತಿತ್ತು. ಸಾವು ಮೆಲ್ಲಗೆ ಹೆಜ್ಜೆ ಇಡುತ್ತಾ ಆ ಕೋಣೆಯ ಹೊಸ್ತಿಲ ಬಳಿ ಬಂದು ನಿಂತಾಗಲೂ, ಈ ಮನುಷ್ಯ ಕನ್ನಡದ ಧ್ಯಾನದ ಪರಾಕಾಷ್ಠೆ ಯಲ್ಲಿದ್ದ. ಡಿಸೆಂಬರ್ 18ರ ಆ ಮುಂಜಾನೆ, ಹಿಮದ ಪರದೆಯಾಚೆಯಿಂದ ಮಂದ ಬೆಳಕು ಕಿಟಕಿಯ ಮೂಲಕ ಒಳಗೆ ಹರಿದುಬಂದಿತ್ತು.
ಕೋಣೆಯಲ್ಲಿ ಅಸಾಮಾನ್ಯವಾದ ನಿಶ್ಯಬ್ದ ಆವರಿಸಿತ್ತು. ಮೇಜಿನ ಮೇಲಿದ್ದ ಲೇಖನಿ ಮೌನವಾಗಿ ಬಿದ್ದಿತ್ತು. ಕೈಬರಹದ ಕೊನೆಯ ಹಾಳೆಯ ಮೇಲೆ ಕನ್ನಡದ ಅಕ್ಷರಗಳು ಇನ್ನೂ ಒಣಗದ ಶಾಯಿ ಯಂತೆ ಜೀವಂತವಾಗಿದ್ದವು. ಫರ್ಡಿನಾಂಡ್ ಕಿಟೆಲ್ ಕಣ್ಣುಗಳು ಶಾಶ್ವತವಾಗಿ ಮುಚ್ಚಿದ್ದವು. ಆ ಮುಖದಲ್ಲಿ ಯಾವುದೇ ನೋವಿನ ಗೆರೆಗಳಿರಲಿಲ್ಲ.
ಬದಲಿಗೆ ಒಂದು ತಪಸ್ಸು ಮುಗಿದ ನಂತರ ಋಷಿಯ ಮುಖದಲ್ಲಿ ಮೂಡುವ ಅನಿರ್ವಚನೀಯ ತೃಪ್ತಿ, ಪ್ರಶಾಂತತೆ ಮಡುಗಟ್ಟಿತ್ತು. ಜರ್ಮನಿಯ ನೆಲದಲ್ಲಿ ಉಸಿರು ನಿಂತರೂ, ಆ ಕೊನೆಯ ಉಸಿರಿನ ಜತೆಗೇ ಹಾರಿಹೋದ ಪ್ರಾಣವಾಯು ಕನ್ನಡದ ಮಣ್ಣಿಗೆ ಬಂದು ಸೇರಿಕೊಂಡಂತಿತ್ತು. ಕಿಟೆಲ್ ದೇಹವನ್ನು ಮಣ್ಣು ಮಾಡಿದ ಆ ಜರ್ಮನಿಯ ರುದ್ರಭೂಮಿಯ ಕಲ್ಲು ಕೂಡ ಇವತ್ತಿಗೂ ಕನ್ನಡದ ಕಂಪನ್ನು ಸೂಸುತ್ತಿರಬೇಕು.
ಯಾಕೆಂದರೆ, ಅಲ್ಲಿ ಮಲಗಿರುವ ವ್ಯಕ್ತಿ ಕೇವಲ ರಕ್ತಮಾಂಸದ ಒಬ್ಬ ಜರ್ಮನ್ ಪಾದ್ರಿಯಲ್ಲ. ಆತ ಕನ್ನಡದ ಕಣ್ವ, ಪರಭಾಷಿಕನೊಬ್ಬ ತನ್ನ ತಾಯ್ನಾಡನ್ನು ಮರೆತು ಇನ್ನೊಂದು ನಾಡಿನ ನುಡಿ ಯನ್ನು ಎದೆಗಪ್ಪಿಕೊಂಡು ಮಡಿದ ಅಪರೂಪದ ಪ್ರೇಮಕತೆ. ಇವತ್ತಿಗೂ ನಾವು ‘ಕಿಟೆಲ್ ಕೋಶ’ದ ಪುಟಗಳನ್ನು ತಿರುವಿ ನೋಡಿದಾಗ, ಕೇವಲ ಶಬ್ದಗಳ ಅರ್ಥಗಳು ಮಾತ್ರ ಸಿಗುವುದಿಲ್ಲ. ಬದಲಿಗೆ, ಕೊನೆಯುಸಿರಿ ನವರೆಗೂ ಕಣ್ಣು ಬತ್ತಿ ಹೋದರೂ ಕನ್ನಡದ ಕನಸನ್ನೇ ಹೊದ್ದು ಮಲಗಿದ ಆ ಮುದಿ ಜೀವದ ಬೆಚ್ಚನೆಯ ಉಸಿರಾಟ, ಆ ಕಾಗದದ ಎಳೆಎಳೆಗಳಲ್ಲೂ ನಮ್ಮ ಬೆರಳುಗಳಿಗೆ ತಣ್ಣಗೆ ತಾಗುತ್ತಲೇ ಇರುತ್ತದೆ.
ಮೌನ ತುಂಬಿದ್ದ ಆ ಕೋಣೆಯ ಗಾಳಿಯಲ್ಲೂ ಕನ್ನಡದ ಗಂಧವೊಂದು ಕರಗಿಹೋಗದೇ ಉಳಿದು ಕೊಂಡಿತ್ತು. ಕಿಟೆಲ್ ಪ್ರಾಣಪಕ್ಷಿ ಹಾರಿಹೋದ ನಂತರ, ಅವರ ಮೇಜಿನ ಡ್ರಾಯರ್ ತೆರೆದಾಗ ಅಂದು ಹಳೆಯ, ಮಡಚಿದ ಕರವಸ ಸಿಕ್ಕಿತು. ಅದರೊಳಗೆ ಕಟ್ಟಿಟ್ಟಿದ್ದು ಬಂಗಾರವೋ ಬೆಳ್ಳಿಯೋ ಅಲ್ಲ. ಧಾರವಾಡದ ಬಯಲಿನಲ್ಲಿ ಹೆಕ್ಕಿ ತಂದಿದ್ದ ಒಣಗಿದ ಬೇವಿನೆಲೆ ಮತ್ತು ಕರಾವಳಿಯ ನದಿಯ ದಂಡೆಯ ಸಣ್ಣದೊಂದು ನುಣುಪಾದ ಬೆಣಚುಕಲ್ಲು.
ಜರ್ಮನಿಯ ಅತ್ಯಾಧುನಿಕ ಪುಸ್ತಕಗಳ ನಡುವೆ ಆ ಮಣ್ಣಿನ ವಸ್ತುಗಳು ಇಡೀ ಬದುಕಿನ ಅತಿದೊಡ್ಡ ಆಸ್ತಿಯಂತೆ ಮುದುರಿಕೊಂಡಿದ್ದವು. ಆ ಒಣ ಎಲೆಯ ಮೇಲೆ ಆತ ಬೆರಳುಗಳನ್ನಿಟ್ಟು ಕಣ್ಣು ಮುಚ್ಚಿದಾಗಲೆಲ್ಲ, ಕನ್ನಡಿಗರ ಕೈಗಳು ತನ್ನನ್ನು ಬೆನ್ನುತಟ್ಟಿ ಹರಸಿದ ಅನುಭವ ಆ ಮುದುಕನಿಗೆ ದಕ್ಕುತ್ತಿತ್ತೇನೋ. ಆ ಊರಿನ ಜನರಿಗೆ ಇವನ ಶವಯಾತ್ರೆ ಒಂದು ಬೆರಗಿನ ದೃಶ್ಯವಾಗಿತ್ತು.
ಜರ್ಮನಿಯ ಆ ಪುಟ್ಟ ರುದ್ರಭೂಮಿಯ ಕಡೆಗೆ ಹೆಣ ಹೊತ್ತು ಸಾಗುತ್ತಿದ್ದಾಗ, ಜಿಟಿಜಿಟಿ ಹಿಮದ ಹನಿಗಳು ಆ ಶವಪೆಟ್ಟಿಗೆಯ ಮೇಲೆ ನಿಧಾನವಾಗಿ ಬೀಳುತ್ತಿದ್ದವು. ಆ ಹೊತ್ತಿಗೆ ಅಲ್ಲಿ ನೆರೆದಿದ್ದ ಕೆಲವೇ ಆಪ್ತರಿಗೆ ಮಾತ್ರ ಗೊತ್ತಿತ್ತು- ಈ ಮನುಷ್ಯನ ಎದೆಯ ಕಪಾಟಿನಲ್ಲಿ ಯೂರೋಪಿನ ಯಾವ ಹೆಮ್ಮೆಯೂ ಉಳಿದಿರಲಿಲ್ಲ ಎಂದು.
ಬದಲಿಗೆ, ಆ ಶವದ ಮುಖದ ಮೇಲೆ ಮಡಿಕೇರಿಯ ಬೆಟ್ಟಗಳಲ್ಲಿ ತಾನು ಕೇಳಿಸಿಕೊಂಡಿದ್ದ ಕೊಡವರ ಹಾಡಿನ ತೇವವಿತ್ತು. ಮಂಗಳೂರಿನ ಕೇರಿಯ ಮನೆಯಲ್ಲಿ ಕುಳಿತು ಕನ್ನಡ ಪುಸ್ತಕ ಗಳನ್ನು ಓದಿ ಹೇಳುವಾಗ ನೆರೆದಿದ್ದ ಬಡ ಕನ್ನಡಿಗರ ಕಣ್ಣಂಚಿನ ಹನಿಗಳ ನೆನಪಿತ್ತು. ಶವಪೆಟ್ಟಿಗೆ ನೆಲಕ್ಕಿಳಿಯುವಾಗ, ಕನ್ನಡದ ಅರ್ಧಂಬರ್ಧ ಅಕ್ಷರಗಳೇ ಆ ಮಣ್ಣಿನ ಹೆಂಟೆಗಳ ಕೆಳಗೆ ಸದ್ದಿಲ್ಲದೆ ಅಡಗಿ ಕೂತಂತಾಗಿತ್ತು. ನಿಜಕ್ಕೂ ಒಂದು ಭಾಷೆಯೆಂದರೆ ಕೇವಲ ವ್ಯಾಕರಣದ ಸೂತ್ರಗಳಲ್ಲ, ಅದೊಂದು ರಕ್ತಗತವಾಗುವ ಅನುರಾಗ ಎಂಬುದು ಕಿಟೆಲ್ ಅವರ ಇಡೀ ಬದುಕಿನ ಕೊನೆಯ ಕ್ಷಣಗಳಲ್ಲಿ ಸಾಬೀತಾಗಿತ್ತು.
ಸ್ವಂತ ತಾಯ್ನುಡಿಯಾದ ಜರ್ಮನ್ ಭಾಷೆಯನ್ನೇ ಅವರು ಕೊನೆಯ ದಿನಗಳಲ್ಲಿ ಮರೆತುಬಿಟ್ಟಿ ದ್ದರು ಎಂದು ಅವರ ಆರೈಕೆ ಮಾಡಿದವರು ಪಿಸುಗುಡುತ್ತಿದ್ದರು. ಯಾರಾದರೂ ಬಂದು ಜರ್ಮನ್ ನಲ್ಲಿ ಕುಶಲ ಪ್ರಶ್ನೆ ಕೇಳಿದರೆ, ಕಿಟೆಲ್ ಮಾತ್ರ ಮಂದಹಾಸ ಬೀರುತ್ತಾ ‘ಆಯ್ತು... ಸೌಖ್ಯವೇ?’ ಎಂದು ಕನ್ನಡದ ಉತ್ತರಿಸುತ್ತಿದ್ದರಂತೆ. ಗಂಟಲಿನ ನರಗಳೆಲ್ಲ ಸಡಿಲಾಗಿ, ಮಾತುಗಳು ಕರಗಿ ಹೋಗುವಾ ಗಲೂ, ಆ ನಾಲಿಗೆಯ ತುದಿಯಲ್ಲಿ ನಲಿದಾಡಿದ್ದು ಹಳಗನ್ನಡದ ಗಂಭೀರ ನಾದ ಮತ್ತು ಉತ್ತರ ಕರ್ನಾಟಕದ ಹಳ್ಳಿಯ ಆಡುನುಡಿಯ ಆಪ್ತ ಸೊಗಡು. ಟ್ಯೂಬಿಂಗನ್ ನಗರದ ಆ ಗಂಟೆಗೋಪುರದ ನಾದ ಬಾರಿಸಿದಾಗಲೆಲ್ಲ, ಕಿಟೆಲ್ಗೆ ಹಂಪಿಯ ಮುರಿದ ಕಂಬಗಳ ನಡುವೆ ಬೀಸುವ ಗಾಳಿಯ ಸದ್ದು ಕೇಳಿಸುತ್ತಿತ್ತು.
ಎಷ್ಟೋ ಸಾವಿರ ಮೈಲಿಗಳಾಚೆ ಕರ್ನಾಟಕದ ಯಾವುದೋ ಮೂಲೆಯಲ್ಲಿ, ಶಾಲೆಗೆ ಹೋಗುವ ಪುಟ್ಟ ಹುಡುಗನೊಬ್ಬ ತನ್ನ ಚೀಲದಲ್ಲಿ ಕಿಟೆಲ್ ತಿದ್ದಿದ ಪುಸ್ತಕವನ್ನು ಇಟ್ಟುಕೊಂಡು ಓಡುತ್ತಿದ್ದ ಹೊತ್ತಿನ, ಇಲ್ಲಿ ಆ ವೃದ್ಧನ ಕಣ್ಣುಗಳು ಶಾಶ್ವತವಾಗಿ ಮುಚ್ಚಿದ್ದವು. ಒಬ್ಬ ಮನುಷ್ಯ ತಾನು ಹುಟ್ಟಿದ ನೆಲವನ್ನು ಬಿಟ್ಟು, ಇನ್ಯಾವುದೋ ದೇಶದ ಭಾಷೆಯನ್ನೇ ತನ್ನ ಆತ್ಮವಾಗಿಸಿಕೊಂಡು, ಆ ನುಡಿಯ ಶಬ್ದಕೋಶಕ್ಕಾಗಿಯೇ ತನ್ನ ರಕ್ತದ ಕಣಕಣವನ್ನೂ ತೇಯ್ದು ತೀರಿದ ಈ ಕತೆ-ಜಗತ್ತಿನ ಯಾವ ಮಹಾಕಾವ್ಯಕ್ಕಿಂತಲೂ ಕಡಿಮೆಯದಲ್ಲ. ಆ ಮುದುಕ ತೀರಿಹೋದ ಮಾರನೆಯ ದಿನ, ಜರ್ಮನಿಯ ಟ್ಯೂಬಿಂಗನ್ನ ಆ ಆಸ್ಪತ್ರೆಯ ನರ್ಸ್ ಆತನ ಅಂಗಿಯ ಜೇಬನ್ನು ತಡಕಿದಾಗ ಅಂದು ಪುಟ್ಟ ಕಾಗದದ ಚೂರು ಸಿಕ್ಕಿತ್ತಂತೆ. ಅದರ ಮೇಲೆ ಜರ್ಮನ್ ಭಾಷೆಯಲ್ಲಲ್ಲ, ಗೀಚಿದಂಥ ದುಂಡನೆಯ ಕನ್ನಡ ಲಿಪಿಯಲ್ಲಿ ಒಂದೇ ಒಂದು ಸಾಲು ಬರೆದಿತ್ತು- ‘ಸಿರಿಗನ್ನಡಂ ಗೆಲ್ಗೆ’.
ತನ್ನ ರಕ್ತದ ಕೊನೆಯ ಹನಿಯಲ್ಲೂ, ನಾಲಗೆಯ ಕೊನೆಯ ತಿರುವಿನಲ್ಲೂ ಆತ ಉಳಿಸಿಕೊಂಡು ಹೋದ ಈ ಹಾರೈಕೆ ಕೇವಲ ಒಂದು ಘೋಷಣೆಯಾಗಿರಲಿಲ್ಲ. ಕತ್ತಲ ರಾತ್ರಿಯಲ್ಲಿ ಆಕಾಶಕ್ಕೆ ಮುಖ ಮಾಡಿ ಹಾರಿಸಿದ ಪುಟ್ಟದೊಂದು ನಕ್ಷತ್ರದ ಕಿಡಿಯಂತಿತ್ತು. ಈ ಮನುಷ್ಯ ತಾನು ಕಣ್ಣು ಮುಚ್ಚುವ ಕ್ಷಣದಲ್ಲೂ, ಇಡೀ ಕರ್ನಾಟಕದ ಕಣ್ಣುಗಳಿಗೆ ತನ್ನ ಕನಸಿನ ಬೆಳಕನ್ನು ತುಂಬಿ ಶಾಂತವಾಗಿ ಮಲಗಿಬಿಟ್ಟಿದ್ದ.
ಕಾಲ ಎಷ್ಟು ನದಿಯಂತೆ ಹರಿದುಹೋದರೂ, ಭಾಷೆಯ ಅಲೆಗಳು ಮಾತ್ರ ನಿಲ್ಲುವುದಿಲ್ಲ. ಇಂದು ಕನ್ನಡಿಗನೊಬ್ಬ ತನ್ನ ಅಂತರಂಗದ ಸಂಕಟಕ್ಕೋ, ಸಂಭ್ರಮಕ್ಕೋ ಒಂದು ಅಪ್ಪಟ ದೇಶಿ ಪದವನ್ನು ಹುಡುಕಿಕೊಂಡು ನಿಘಂಟಿನ ಬಾಗಿಲು ತಟ್ಟಿದಾಗಲೆಲ್ಲ, ಆ ಪುಟಗಳ ಹಿಂದಿನಿಂದ ಮುಗುಳುನಗುವುದು ಕಿಟೆಲ್ ಅವರ ಆ ಸುಕ್ಕುಗಟ್ಟಿದ, ಬೆಳ್ಳನೆಯ ಮುಖವೇ. ಒಬ್ಬ ಪರಕೀಯ ಬಂದು ನಮ್ಮ ಮನೆಯ ಅಂಗಳವನ್ನು ನಮಗಿಂತ ಚೆನ್ನಾಗಿ ಗುಡಿಸಿ, ನಮ್ಮದೇ ಮಲ್ಲಿಗೆಯನ್ನು ನಮಗೆ ಮುಡಿಸಿ ಹೋದ ಈ ವಿಸ್ಮಯ- ಕನ್ನಡವಿರುವ ತನಕ, ಕನ್ನಡಿಗ ತನ್ನ ತಾಯ್ನುಡಿಯ ಕಿವಿಯಲ್ಲಿ ಪಿಸುಗುಟ್ಟುವ ತನಕ ಎಂದಿಗೂ ಹಳೆಯದಾಗದ ಒಂದು ಅಮರ ಕಾವ್ಯ.
ಇಂದಿಗೂ ಯಾರಾದರೂ ಕನ್ನಡದ ಅಪರೂಪದ ಹಳೆಯ ಪದವೊಂದನ್ನು ಹುಡುಕುತ್ತಾ ‘ಕಿಟ್ಟೆಲ್ ಕೋಶ’ದ ದಪ್ಪ ಪುಟಗಳನ್ನು ಮಗುಚಿದಾಗ, ಆ ಕಾಗದದ ಸರಪರ ಸದ್ದಿನ ನಡುವೆ ಸಣ್ಣದೊಂದು ನಡುಕ ತಂತಾನೇ ಬೆರಳುಗಳಿಗೆ ದಾಟುತ್ತದೆ. ಅದು ಶತಮಾನದ ಹಿಂದೆ ತನ್ನ ದೃಷ್ಟಿಯನ್ನೇ ಬಲಿಕೊಟ್ಟು, ರಾತ್ರಿಯಿಡೀ ಲಾಟೀನು ಬೆಳಕಿನಲ್ಲಿ ಪದಗಳ ಮೂಲವನ್ನು ಅರಸಿದ ಆ ವೃದ್ಧನ ಕಣ್ಣೀರ ಹನಿಯಿರಬಹುದು ಅಥವಾ ಆತ ನಮಗಾಗಿ ಬಿಟ್ಟುಹೋದ ನಿಸ್ವಾರ್ಥ ಪ್ರೇಮದ ತಣ್ಣನೆಯ ನೆರಳಿರಬಹುದು.
ಕಿಟೆಲ್ ಕೊನೆಯುಸಿರೆಳೆದರೂ ತೀರದ ಆ ಕನ್ನಡದ ಧ್ಯಾನ, ಕನ್ನಡಿಗರ ನಾಲಿಗೆಯ ಮೇಲೆ ಹೊಸ ಪದವೊಂದು ಮೊಳೆಯುವ ಪ್ರತಿ ಮುಂಜಾನೆಯಲ್ಲೂ ಮರುಹುಟ್ಟು ಪಡೆಯುತ್ತಲೇ ಇರುತ್ತದೆ. ಇವತ್ತು ನವೆಂಬರ್ನ ಈ ಸಂಜೆಗಳಲ್ಲಿ ಕರ್ನಾಟಕದ ಗಲ್ಲಿಗಲ್ಲಿಗಳಲ್ಲಿ ಹಳದಿ-ಕೆಂಪು ಬಾವುಟಗಳು ಹಾರಾಡುವಾಗ, ಎಲೆಯಡಿಕೆ ಹಾಕಿದ ಮುದುಕರ ಹರಟೆಯಲ್ಲಿ, ಪೇಟೆಯ ಆಟೋಗಳ ಹಿಂಬದಿಯ ಬರಹಗಳಲ್ಲಿ, ಕಾಲೇಜು ಹುಡುಗರ ಚರ್ಚೆಯಲ್ಲಿ ಕನ್ನಡ ಜೀವಂತವಾಗಿ ನುಲಿದು- ನಲಿದಾಡು ತ್ತಿರುತ್ತದೆ. ಆ ಪ್ರತಿ ಯೊಂದು ಜೀವಂತ ಉಸಿರಿನ ಆಳದಲ್ಲೂ, ದೂರದ ಜರ್ಮನಿಯ ಹಿಮದ ನೆಲದಲ್ಲಿ ಮಣ್ಣಾಗಿಹೋದ ಆ ಬಿಳಿಯ ಋಷಿಯ ಸಣ್ಣದೊಂದು ನಗು ಬೆರೆತು ಹೋಗಿದೆ.
ಕಿಟೆಲ್ ಎಂದರೆ ಕೇವಲ ನಿಘಂಟಿನ ದಪ್ಪ ರಟ್ಟಿನ ಮೇಲಿನ ಹೆಸರಲ್ಲ. ಕನ್ನಡವನ್ನು ಕನ್ನಡಿಗರೇ ಮರೆತು ಹೋಗಬಹುದಾಗಿದ್ದ ಕಾಲಘಟ್ಟದಲ್ಲಿ, ತನ್ನ ಕಣ್ಣಿನ ದೃಷ್ಟಿಯನ್ನೇ ನಂದಾದೀವಿಗೆಯಂತೆ ಉರಿಸಿ ನಮಗೆ ನಮ್ಮದೇ ಭಾಷೆಯ ಶ್ರೀಮಂತಿಕೆಯನ್ನು ತೋರಿದ ಅಪ್ಪಟ ಕನ್ನಡಿಗ!
ಯಾಕೋ ಗೊತ್ತಿಲ್ಲ, ಅಂದು ಕಿಟೆಲ್ ವಾಸವಿದ್ದ ಟ್ಯೂಬಿಂಗನ್ ನ ಬೀದಿಯಲ್ಲಿ ನಡೆದ, ಆತನ ಸಮಾಧಿಯ ಮುಂದೆ ನಿಂತು ಧೇನಿಸಿದ, ಆತನ ಜೀವನದ ಅಂತಿಮ ದಿನಗಳ ಕಥೆ ಕೇಳಿದ ಕ್ಷಣ ಗಳೆಲ್ಲ ಒಂದೊಂದಾಗಿ ನೆನಪಾದವು. ದೃಷ್ಟಿ ಮಂಕಾದರೂ ಕನ್ನಡದ ಕಾಗದಗಳನ್ನೇ ಬೆರಳು ಗಳಿಂದ ಸವರುತ್ತಾ, ಮೈಯೆಲ್ಲ ನಡುಗುತ್ತಿದ್ದರೂ ಕನ್ನಡದ ವ್ಯಾಕರಣದ ಲೆಕ್ಕಾಚಾರದ ಕೊನೆಯು ಸಿರನ್ನೆಳೆದ ಆ ವೃದ್ಧನ ಕತೆ ಕೇವಲ ಒಂದು ಚರಿತ್ರೆಯಾಗಿ ಉಳಿಯುವುದಿಲ್ಲ. ಅದು ಎದೆಯ ಕಂದಕದಲ್ಲಿ ಬೆಚ್ಚಗೆ ಕೂತ ಹಸಿ ಗಾಯದಂತೆ, ಕಣ್ಣೆದುರು ಕದಲದೇ ಧರಣಿ ಕುಳಿತ ನೆನಪಿನಂತೆ ನಿಂತುಬಿಟ್ಟಿದೆ.
ಹೀಗಾಗಿಯೇ, ಆ ಮೌನವನ್ನು ಅಕ್ಷರಗಳಾಗಿಸಿ ಬಿಚ್ಚಿಡದೆ ನನಗೆ ಬೇರೆ ದಾರಿಯೇ ಇರಲಿಲ್ಲ. ಈ ಹೊತ್ತಿನಲ್ಲಿ ಆ ಜೀವವನ್ನು ನೆನೆಯದಿದ್ದರೆ, ನಮ್ಮಂಥ ಕೃತಘ್ನರು ಮತ್ಯಾರೂ ಇಲ್ಲ! ನಮ್ಮ ಎದೆಯಲ್ಲಿ ನಿಘಂಟೆಂಬ ಕನ್ನಡದ ಅಣೆಕಟ್ಟನ್ನು ಕಟ್ಟಿಕೊಟ್ಟ ‘ಕಿಟೆಲ’ ಎಂಬ ಜೀವಕ್ಕೆ ಕೋಟಿ ಕೋಟಿ ನಮನಗಳು!