ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌Turuvekere Prasad Column: ಉಚಿತ ಗ್ಯಾರಂಟಿ ಸಹವಾಸ: ವಿಜಯ ವಿʼಲಾಸಾʼ ?

ತಮಿಳುನಾಡಿನಲ್ಲಿ ಒಟ್ಟಾರೆ 4 ಲಕ್ಷ 76 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿವೆ. ಈ ಜಾಲ ದಲ್ಲಿ 90 ಲಕ್ಷ ಮಹಿಳೆಯರು ತೊಡಗಿಕೊಂಡಿದ್ದಾರೆ. ಈ ಗುಂಪುಗಳಿಗೆ ತಲಾ 5 ಲಕ್ಷ ಸಾಲ ನೀಡಲು ಸುಮಾರು 2500 ಕೋಟಿ ರೂಪಾಯಿಗಳನ್ನು ತೆಗೆದಿರಿಸಬೇಕಾಗುತ್ತದೆ. ಇನ್ನು ಈ ಹಣಕ್ಕೆ ಬಡ್ಡಿಯನ್ನೂ ಸರ್ಕಾರವೇ ಕಟ್ಟಬೇಕು.

ಉಚಿತ ಅನುಚಿತ

ತುರುವೇಕೆರೆ ಪ್ರಸಾದ್

ನಟ ವಿಜಯ್ ಈಗ ಕೇವಲ ತಮಿಳುನಾಡಿನಲ್ಲಷ್ಟೇ ಸ್ಟಾರ್ ಅಲ್ಲ, ಈಗವರು ರಾಷ್ಟ್ರ ಮಟ್ಟದ ಪೊಲಿಟಿಕಲ್ ಸೂಪರ್ ಸ್ಟಾರ್! ಎಂಜಿಆರ್ ಹಾಗೂ ಕರುಣಾನಿಧಿ ಮಾಡಿದ್ದ ಮೋಡಿಯನ್ನು ಮತ್ತೊಮ್ಮೆ ವಿಜಯ್ ಮತದಾರರ ಮೇಲೆ ಮಾಡಿದ್ದಾರೆ. ರಾಜಕೀಯ ಸ್ಟಾರ್ಟಪ್‌ನ ಯುವಕರೂ ಯಶಸ್ವಿಯಾಗಿ ಕಟ್ಟಬಹುದು ಎನ್ನುವ ಕೇಜ್ರಿವಾಲರ ತತ್ವ, ಸಿದ್ಧಾಂತದ ಮುಂದುವರೆದ ಭಾಗದಂತೆ ವಿಜಯ್ ವಿಜೃಂಭಿಸಿದ್ದಾರೆ.

ಕೇಜ್ರಿವಾಲರೂ ಆರಂಭದಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಸಾಮಾಜಿಕ ನ್ಯಾಯ ಹಾಗೂ ದಕ್ಷ ಆಡಳಿತ ಎಂದುಕೊಂಡೇ ಬಂದವರು. ಕೊನೆಗೂ ಅವರೂ ಎಲ್ಲಾ ತತ್ವ ಸಿದ್ಧಾಂತಕ್ಕೆ ತಿಲಾಂಜಲಿಯಿತ್ತು ಗ್ಯಾರಂಟಿಗಳಿಗೆ ಮೊರೆ ಹೋದರು.

ಆದರೆ ವಿಜಯ್ ನೇರವಾಗಿ ಎಲ್ಲರಿಗೂ ಸಲ್ಲುವ ಗ್ಯಾರಂಟಿ ಟೂಲ್ ಕಿಟ್ಟನ್ನೇ ಮುಂದಿಟ್ಟು ಕೊಂಡು ಎಲೆಕ್ಷನ್ ಗೆದ್ದಿದ್ದಾರೆ. ಭಾರತದಂತಹ ದೇಶದಲ್ಲಿ ಅದರಲ್ಲೂ ದಕ್ಷಿಣ ಭಾರತ ದಲ್ಲಿ ಸಿನಿಮಾ ನಾಯಕರೇ ಅಭಿಮಾನಿಗಳ ದೇವರಾಗಿ ಬಿಡುತ್ತಾರೆ. ಅಷ್ಟೊಂದು ಪ್ರೀತಿ, ಭಕ್ತಿ, ಅರಾಧನಾ ಮನೋಭಾವ, ಸಮರ್ಪಣಾ ಭಾವ ಇವೆ ವಾಸ್ತವ ಸತ್ಯಗಳನ್ನು ಮರೆಸಿ ಒಂದು ಭ್ರಾಮಕ ಜಗತ್ತನ್ನೇ ಸೃಷ್ಟಿಸಿಬಿಡುತ್ತದೆ. ಈ ಉನ್ಮಾದವೇ ರಾಜಕೀಯ ಹಾಗೂ ಆಡಳಿತ ಬದಲಾವಣೆಗಳಿಗೂ ಕಾರಣವಾಗುವ ಅಂಶವು ಅಚ್ಚರಿಯಷ್ಟೇ ಅಲ್ಲದೆ ಅಪಾಯ ಕಾರಿಯೂ ಹೌದು!

ವಿಜಯ್ ಸಹ ಅಂತಹ ಒಂದು ವ್ಯವಸ್ಥೆಯನ್ನೇ ಪ್ರತಿನಿಧಿಸುವ ಸಾಮಾನ್ಯ ರಾಜಕೀಯ ವ್ಯಕ್ತಿಯಾಗಿಬಿಡುತ್ತಾರಾ ಎನಿಸುತ್ತದೆ. ವಿಜಯ್ ತಮ್ಮ ವಿಜಯ್ ಮಕ್ಕಳ ಇಯಕ್ಕಂ ಸಂಘಟನೆಯ ಮೂಲಕ ಸೇವಾ ಚಟುವಟಕೆಗಳನ್ನು ನಡೆಸಿಕೊಂಡು ಬಂದವರು ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: Turuvekere Prasad Column: ಹಿಡಿಹೃದಯ ನಿಲ್ಲದೆ ಮಿಡಿ ಹೃದಯ, ಇದು ಹೃದಯಗಳ ವಿಷಯ...

ಆದರೆ ರಾಜಕೀಯಕ್ಕೆ ಬೇಕಾದ ಪ್ರಬುದ್ಧತೆ, ಆಡಳಿತಾತ್ಮಕ ಲೆಕ್ಕಾಚಾರಗಳು, ಅಭಿವೃದ್ಧಿಯ ಚಿಂತನೆ, ಮಾದರಿಗಳು, ದೂರದರ್ಶಿತ್ವ ಇವುಗಳಲ್ಲಿ ಅವರು ಇನ್ನಷ್ಟೇ ಪಳಗಬೇಕಿದೆ. ಭ್ರಷ್ಟಾಚಾರ ನಿರ್ಮೂಲನೆ, ಆಡಳಿತ ಸುಧಾರಣೆ ಎಂದೆ ಅವರು ಡೈಲಾಗ್‌ಗಳನ್ನು ಹೇಳಿ ಜನರನ್ನು ಮೆಚ್ಚಿಸಿದ್ದರೂ, ಚುನಾವಣೆ ಗೆದ್ದಿದ್ದರೂ ಅವರೂ ರಾಷ್ಟ್ರೀಯ ಪಕ್ಷಗಳ ಜೊತೆ ಹಠಕ್ಕೆ ಬಿದ್ದವರಂತೆ ಭರಪೂರ ಗ್ಯಾರಂಟಿಯ ಆಮಿಷಗಳನ್ನು ಒಡ್ಡಿಯೇ ಗೆದ್ದಿದ್ದಾರೆ.

ಹೀಗೇ ಸುಮ್ಮನೆ ಅವರು ನೀಡಿರುವ ಚುನಾವಣಾ ಆಶ್ವಾಸನೆಗಳತ್ತ ಒಮ್ಮೆ ಕಣ್ಣು ಹಾಯಿ ಸೋಣ. ತಮಿಳುನಾಡಿನಲ್ಲಿ 8.5 ಕೋಟಿ ಜನಸಂಖ್ಯೆ ಇದೆ. ಒಟ್ಟಾರೆ ಮತದಾರರು 5.67 ಕೋಟಿ, ಇದರಲ್ಲಿ ಮಹಿಳೆಯರು 2.89 ಕೋಟಿ. ವಿಜಯ್ ಮಹಿಳೆಯರಿಗಾಗಿಯೇ 5 ಭರ್ಜರಿ ಭರವಸೆಗಳನ್ನು ನೀಡಿದ್ದಾರೆ.

ಮನೆ ಯಜಮಾನಿಗೆ ತಿಂಗಳಿಗೆ ರೂ.2500 ಸಹಾಯಧನ ನೀಡುವ ಯೋಜನೆಗೆ ವಾರ್ಷಿಕ ಸುಮಾರು 30 ಸಾವಿರ ಕೋಟಿ (ಕರ್ನಾಟಕದ್ದೇ ರೂ.28 ಸಾವಿರ ಕೋಟಿ. ತಮಿಳುನಾಡಿನಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ), ವರ್ಷಕ್ಕೆ ಒಂದು ಕುಟುಂಬಕ್ಕೆ 6 ಉಚಿತ ಸಿಲಿಂಡರ್ ಎಂದರೆ ವಾರ್ಷಿಕ ರೂ.306 ಕೋಟಿ ಮೀಸಲಿಡಬೇಕಾಗುತ್ತದೆ. ಅದೂ ಬಡತನದ ರೇಖೆಯ ಕೆಳಗಿರುವ 5.10 ಲಕ್ಷ ಕುಟುಂಬಗಳಿಗೆ ಮಾತ್ರ ಕೊಡುವುದಾದರೆ!

ಇಲ್ಲವಾದರೆ ಇದೂ ಸಾವಿರಾರು ಕೋಟಿ ಲೆಕ್ಕದ ಬಾಬ್ತೇ! ಇನ್ನು ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಕನಿಷ್ಠ 10 ಸಾವಿರ ಕೋಟಿಯಾದರೂ ಬೇಕು(40 ಲಕ್ಷ ಮಹಿಳೆಯರು, 20 ಸಾವಿರ ಬಸ್ ಲೆಕ್ಕದಲ್ಲಿ ಕರ್ನಾಟಕದಲ್ಲಿ ಈ ಸ್ತ್ರೀ ಶಕ್ತಿ ವೆಚ್ಚ 8 ಸಾವಿರ ಕೋಟಿ ಸಮೀಪಿಸು ತ್ತಿದೆ) ವಿಜಯ್ ನೂತನ ವಧುವಿಗೆ ಕಂಕಣಭಾಗ್ಯವೆಂದು 8 ಗ್ರಾಂ ಚಿನ್ನ, ಜೊತೆಗೆ ಒಂದು ರೇಷ್ಮೆ ಸೀರೆ ಉಡುಗೊರೆ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ.

Vijay makes first appearance after TVK scripts historic performance in 2026 greets fans

ಬಿಪಿಎಲ್ ಕುಟುಂಬಗಳಲ್ಲಿ ವರ್ಷಕ್ಕೆ ಅರ್ಧದಷ್ಟು ಕುಟುಂಬಗಳ ವಿವಾಹಕ್ಕೇ ಉಡುಗೊರೆ ನೀಡುವುದಾದರೂ ಒಂದು ಮದುವೆಗೆ ರೂ.1.10 ಲಕ್ಷದಂತೆ 2.5 ಲಕ್ಷ ಕುಟುಂಬಗಳಿಗೆ ವಾರ್ಷಿಕ ರೂ. 3000 ಕೋಟಿ ಬೇಕು. ಮಧ್ಯಮ ವರ್ಗದವರಿಗೂ ಈ ಯೋಜನೆ ವಿಸ್ತರಿಸಿದರೆ 18.5 ಲಕ್ಷ ಕುಟುಂಬಗಳಲ್ಲಿ ಸುಮಾರು 7 ಲಕ್ಷ ಕುಟುಂಬಗಳು ಈ ಸೌಲಭ್ಯ ಪಡೆಯುತ್ತವೆ ಎಂದುಕೊಂಡರೂ 8 ಸಾವಿರ ಕೋಟಿ ರೂ ಬೇಕಾಗುತ್ತದೆ.

ತಮಿಳುನಾಡಿನಲ್ಲಿ ಒಟ್ಟಾರೆ 4 ಲಕ್ಷ 76 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿವೆ. ಈ ಜಾಲದಲ್ಲಿ 90 ಲಕ್ಷ ಮಹಿಳೆಯರು ತೊಡಗಿಕೊಂಡಿದ್ದಾರೆ. ಈ ಗುಂಪುಗಳಿಗೆ ತಲಾ 5 ಲಕ್ಷ ಸಾಲ ನೀಡಲು ಸುಮಾರು 2500 ಕೋಟಿ ರೂಪಾಯಿಗಳನ್ನು ತೆಗೆದಿರಿಸಬೇಕಾಗುತ್ತದೆ. ಇನ್ನು ಈ ಹಣಕ್ಕೆ ಬಡ್ಡಿಯನ್ನೂ ಸರ್ಕಾರವೇ ಕಟ್ಟಬೇಕು.

ಇದಿಷ್ಟೇ ಅಲ್ಲ, ವಿಜಯ್ ಹಿರಿಯ ನಾಗರಿಕರಿಗೆ ನೀಡುತ್ತಿರುವ ಪಿಂಚಣಿಯನ್ನು ರೂ.1200 ರಿಂದ 3000ಕ್ಕೆ ಏರಿಸುವ ಭರವಸೆ ನೀಡಿದ್ದಾರೆ. ಇಡೀ ದೇಶದ ಹೆಚ್ಚು ಅಂದರೆ ಸುಮಾರು 1 ಕೋಟಿಗೂ ಮೀರಿ (ಶೇ.14) ತಮಿಳು ನಾಡಿನಲ್ಲಿ ಹಿರಿಯ ನಾಗರಿಕರಿದ್ದಾರೆ.

ಇದರಲ್ಲಿ 25 ಲಕ್ಷ ಜನರಿಗೆ ಪಿಂಚಣಿ ಎಂದರೂ ಸುಮಾರು 10 ಸಾವಿರ ಕೋಟಿ ರೂ.ಗಳನ್ನು ಮಾಸಾಶನಕ್ಕೆ ಮೀಸಲಿಡಬೇಕಾಗುತ್ತದೆ. ಇನ್ನು ಉದ್ಯೋಗ ಭತ್ಯೆ ವಿಷಯಕ್ಕೆ ಬಂದರೆ ಜನಸಂಖ್ಯೆಯ ಶೇ. 5.2ರಷ್ಟು ನಿರುದ್ಯೋಗಿಗಳಿದ್ದಾರೆ.

ತಮಿಳುನಾಡು ಔದ್ಯೋಗಿಕ ಕ್ಷೇತ್ರದಲ್ಲಿ ದೇಶದಲ್ಲಿ ಹೆಚ್ಚು ಅಂದರೆ ಸುಮಾರು ಶೇ.15 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಆದರೂ ಅಲ್ಲಿ ಪದವೀಧರರ ಸಂಖ್ಯೆ ದಿನೇ ದಿನೇ ಹೆಚ್ಚಾ ಗುತ್ತಿದೆ. ಸುಮಾರು 54 ಲಕ್ಷ ಜನ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೊಂದಣಿ ಮಾಡಿಸಿ ಕೊಂಡಿದ್ದಾರಂತೆ.

ಇವರಲ್ಲಿ 14 ಲಕ್ಷ ಜನ ಹಾಲಿ ಉದ್ಯೋಗ ಇರುವವರು ಎಂದಾದರೂ ಉಳಿದ 40 ಲಕ್ಷ ಜನಕ್ಕೆ ಮಾಹೆಯಾನ ತಲಾ ರೂ.4000ದಂತೆ ವಾರ್ಷಿಕ 2000 ಕೋಟಿ ರೂ ಖರ್ಚು ಬರುತ್ತದೆ. ವಿಜಯ್ ನವಜಾತ ಶಿಶುಗಳಿಗೂ ಚಿನ್ನದ ಉಂಗುರದ ಉಡುಗೊರೆ ನೀಡಲು ಹೊರಟಿದ್ದಾರೆ (ಇದೊಂದು ರೀತಿ ಜನಸಂಖ್ಯಾ ಸ್ಪೋಟವನ್ನು ಪ್ರೋತ್ಸಾಹಿಸಿದಂತೆಯೇ!) ತಮಿಳುನಾಡಿನಲ್ಲಿ ಪ್ರತಿದಿನ 2300 ಮಕ್ಕಳು ಜನಿಸುತ್ತವೆ. ತಲಾ 2 ಗ್ರಾಂ ಚಿನ್ನದ ಉಂಗುರ ಎಂದರೂ ವಾರ್ಷಿಕವಾಗಿ ಇದು 2000 ಕೋಟಿ ರೂಪಾಯಿಗಳ ಖರ್ಚಿನ ಬಾಬ್ತು.

ತಮಿಳುನಾಡು ಹಿಂದಿನಿಂದಲೂ ಕೃಷಿ ಆಧಾರಿತ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಇಂದಿಗೂ ಅಲ್ಲಿ ಕೃಷಿ ಕೋಟ್ಯಂತರ ಜನಕ್ಕೆ ಬದುಕು ಕಟ್ಟಿ ಕೊಟ್ಟಿದೆ. ಅದಕ್ಕೇ ಯಾವುದೇ ಸರ್ಕಾರ ಬಂದರೂ ಕಾವೇರಿ ನೀರಿನ ವಿವಾದವನ್ನು ಸದಾ ಕಾಲ ಜೀವಂತವಾಗಿಟ್ಟಿರುತ್ತಾರೆ. ಹಾಗೇ ದೇಶದ ಅತಿ ಹೆಚ್ಚು ಕೃಷಿ ಸಾಲದ ಹೊರೆ ಇರುವ ರಾಜ್ಯವು ತಮಿಳುನಾಡೇ!

ಸುಮಾರು 3.47 ಲಕ್ಷ ಕೋಟಿಯಷ್ಟು ಸಾಲ ಬಾಕಿ ನಿಂತಿದೆ. 2026-27ನೇ ಸಾಲಿಗೆ 17 ಸಾವಿರ ಕೋಟಿ ಬೆಳೆ ಸಾಲಕ್ಕೆ ಮತ್ತು 3 ಸಾವಿರ ಕೋಟಿ ಪಶುಸಂಗೋಪನಾ ಸಾಲಕ್ಕೆ ಒಟ್ಟು ರೂ. 20000 ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈಗ ಈ ಕೃಷಿ ಸಾಲದಲ್ಲಿ ಶೇ.50 ಮನ್ನಾ ಮಾಡುವುದೆಂದರೆ ಸುಮಾರು ರೂ. 1.75 ಲಕ್ಷ ಕೋಟಿಗಳನ್ನು ಸರ್ಕಾರ ಸಹಕಾರಿ, ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೀಡಬೇಕಾಗುತ್ತದೆ.

ಇನ್ನು ಉಚಿತ ವಿದ್ಯುತ್, ನೀರಿನ ಬಾಬ್ತು 18.5 ಲಕ್ಷ ಕುಟುಂಬಗಳಿಗೆ ಕ್ರಮವಾಗಿ ವಾರ್ಷಿಕ ರೂ.2500 ಕೋಟಿ ಮತ್ತು ರೂ.1500 ಕೋಟಿ ಆಗಬಹುದು. ವಿಜಯ್ ಮಕ್ಕಳ ಶಿಕ್ಷಣಕ್ಕೆ ರೂ.15 ಸಾವಿರ ಕೊಡುವುದಾಗಿ ಭರವಸೆ ನೀಡಿದ್ದಾರೆ. ಬಿಪಿಎಲ್ ವರ್ಗದ 2.5 ಲಕ್ಷ ಕುಟುಂಬದ ಒಂದೊಂದು ಮಗುವಿನ ಲೆಕ್ಕ ತೆಗೆದುಕೊಂಡರೂ ಸುಮಾರು ರೂ.400 ಕೋಟಿಯನ್ನು ತೆಗೆದಿರಿಸಬೇಕಾಗುತ್ತದೆ.

ಮೀನುಗಾರರಿಗೆ ವಸತಿ, ಅವರಿಗೆ ಸಹಾಯ ಧನ, ಡೀಸಲ್ ಸಬ್ಸಿಡಿಗೆ 10 ಸಾವಿರ ಕೋಟಿ ಬೇಕಾಗಬಹುದು. ಒಟ್ಟಾರೆ ವಿಜಯ್ ಸಿಎಂ ಕುರ್ಚಿ ಅಲಂಕರಿಸಿದ ತಕ್ಷಣ ಭರವಸೆಗಳನ್ನು ಪೂರೈಸಲೆಂದೇ ಸುಮಾರು 75 ಸಾವಿರ ಕೋಟಿ ರೂಪಾಯಿಗಳು ಬೇಕು. ತಮಿಳುನಾಡಿನ ಪ್ರಸಕ್ತ ಆರ್ಥಿಕ ಪರಿಸ್ಥಿತಿಯಲ್ಲಿ ಇದು ಅಷ್ಟು ಸುಲಭದ ತುತ್ತಲ್ಲ. ಇದರ ಜೊತೆಗೆ ರೈತರ ಸಾಲ ಮನ್ನಾ ಬಾಬ್ತು ರೂ.1.75 ಲಕ್ಷ ಕೋಟಿಯನ್ನು ಹಂತ ಹಂತವಾಗಿಯಾದರೂ ಭರಿಸಬೇಕು. ಸಿಎಂ ಕುರ್ಚಿ ವಿಜಯ್ ಪಾಲಿಗೆ ಹೂವಿನ ಹಾಸಿಗೆಯಲ್ಲ, ಕಲ್ಲು ಮುಳ್ಳಿನ ಹಾದಿ. ಅಷ್ಟೇನೂ ರಾಜಕೀಯ ಅನುಭವ ಇಲ್ಲದ ವಿಜಯ್‌ಗೆ ಇದು ಅಗ್ನಿಪರೀಕ್ಷೆ, ಕತ್ತಿಯ ಅಲುಗಿನ ಮೇಲೆ ನಡೆದಂತೆ!

ತಾವು ಕೊಟ್ಟ ಆಶ್ವಾಸನೆ ಜೊತಗೆ ಡಿಎಂಕೆ ಸರ್ಕಾರದ ಹಾಲಿ ಕಲ್ಯಾಣ ಕಾರ್ಯಕ್ರಮ ಗಳನ್ನೂ ಕೈ ಬಿಡದೆ ಮುಂದುವರೆಸಬೇಕೆಂದು ಸ್ಟಾಲಿನ್ ಒತ್ತಾಯಿಸಿದ್ದಾರೆ. ಹಾಗೆ ನೋಡಿ ದರೆ ವಿಜಯ್ ಆಶ್ವಾಸನೆ ಕೊಟ್ಟಿರುವ ಎಷ್ಟೋ ಸೌಲಭ್ಯಗಳು ಈಗಾಗಲೇ ತಮಿಳುನಾಡಿ ನಲ್ಲಿ ಜಾರಿಯಲ್ಲಿವೆ. ವಿಜಯ್ ಈ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಯಾವ ಆದಾಯದ ಮೂಲ ಹುಡುಕುತ್ತಾರೋ ಗೊತ್ತಿಲ್ಲ. ಅವರು ಭಾವಿಸಿರುವಂತೆ ಆಳವಾಗಿ ಬೇರು ಬಿಟ್ಟ ಅಧಿಕಾರಶಾಹಿ ಭ್ರಷ್ಟತೆಯನ್ನು ಬುಡಸಮೇತ ಕಿತ್ತು ಹಾಕುವುದು ಅಷ್ಟು ಸುಲಭವಲ್ಲ. ಅದಕ್ಕೆ ಕರ್ನಾಟಕವೇ ಉದಾಹರಣೆ. 40 ಪರ್ಸೆಂಟ್ ಕಮಿಶನ್ ಹತ್ತಿಕ್ಕುತ್ತೇವೆ ಎಂದು ಕಂಕಣ ಕಟ್ಟಿ ಹೊರಟ ಕೈ ಸರ್ಕಾರದ ಪರ್ಸೆಂಟೇಜ್ ರೇಟ್ 40 ಮೀರಿದೆ ಎಂದು ಗುತ್ತಿಗೆದಾರರೇ ಆರೋಪಿಸಿದ್ದಾರೆ.

ಅದಕ್ಕೇ ನಾಯಕರು, ಪಕ್ಷದ ದಳಪತಿಗಳು ಗ್ಯಾರಂಟಿಗಳನ್ನು ಘೋಷಿಸುವಾಗ ಅದಕ್ಕೆ ಪೂರಕವಾದ ಆದಾಯದ ಮೂಲಗಳನ್ನೂ ಜನಕ್ಕೆ ತಿಳಿಸುವಂತಾಗಬೇಕು. ಈ ಜನಪ್ರಿಯ ಗ್ಯಾರಂಟಿಗಳ ಹೊರತಾಗಿಯೂ ಅಭಿವೃದ್ಧಿಗೆ ತಮ್ಮ ಸರ್ಕಾರ ಹೇಗೆ ಹಣ ಹೊಂದಿಸುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕು. ಕೆನಡಾ, ಜಮೈಕಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿರುವಂತೆ ಅಭಿವೃದ್ಧಿ ಕುರಿತು ಚುನಾವಣಾ ಚರ್ಚೆಗಳು ಬಹಿರಂಗ ವಾಗಿ ನಡೆಯಬೇಕು.

ದುರದೃಷ್ಟವೆಂದರೆ ನಮ್ಮ ರಾಜಕೀಯ ನಾಯಕರು ಜಾತಿ, ಮತ, ಓಟು ಆಧಾರಿತ ಕೆಸರೆರ ಚಾಟ ಮತ್ತು ಗ್ಯಾರಂಟಿಗಳ ಕಡೆ ಕೊಡುವ ಪ್ರಾಮುಖ್ಯತೆಯನ್ನು ಸಮಷ್ಟಿ ಅಭಿವೃದ್ಧಿಯ ಯೋಜನೆಗಳಿಗೆ ನೀಡುವುದಿಲ್ಲ. ಈಗ ನೋಡಿ, ತಮಿಳುನಾಡು ಸರ್ಕಾರದ ಸಾಲ 2026-27ನೇ ಸಾಲಿನ ಅಂತ್ಯಕ್ಕೆ ರೂ.10.71 ಲಕ್ಷ ಕೋಟಿ ಮೀರಲಿದೆ.

ಇದು ಭಾರತದ ರಾಜ್ಯವೊಂದು ಮಾಡಿದ ಗರಿಷ್ಠಸಾಲ! ಭಾರತ ಸರ್ಕಾರದ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಪಳನಿಸ್ವಾಮಿ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿ ನೀಡಿದ ಮಾಹಿತಿ ಪ್ರಕಾರ ತಮಿಳುನಾಡು ಸರ್ಕಾರಗಳು ಕಳೆದ 73 ವರ್ಷಗಳಲ್ಲಿ ರೂ.5 ಲಕ್ಷ ಕೋಟಿ ಸಾಲ ಮಾಡಿದ್ದರೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಒಂದೇ ನಾಲ್ಕೇ ವರ್ಷದ ಅವಧಿಯಲ್ಲಿ ರೂ.4 ಲಕ್ಷ ಕೋಟಿ ಸಾಲ ಮಾಡಿದೆ.

ಈ ಒಳಹೊರಗೆ ಚಾಣಾಕ್ಷ ರಾಜಕಾರಣಿ ಸ್ಟಾಲಿನ್ ಗೆ ಗೊತ್ತು. ಅದಕ್ಕೇ ಅವರು ವಿಜಯ್ ಸರ್ಕಾರ ನಡೆಸಲಿ, 6 ತಿಂಗಳು ತೊಂದರೆ ಕೊಡದೆ ಕಾದು ನೋಡುತ್ತೇವೆ ಎಂದಿರುವುದು. ಆದರೆ ಜನರಿಗೆ ಕಾದು ನೋಡುವಷ್ಟು ಸಹನೆ ಖಂಡಿತಾ ಇಲ್ಲ. ಹಿಂದಿನಂತೆ ಆಶ್ವಾಸನೆ ಕೊಟ್ಟು ಮರೆಯಲಾಗದು. ಅವರು ಗ್ಯಾರಂಟಿಗಳ ಈಡೇರಿಕೆಗೆ ವಿಜಯ್ ಬೆನ್ನು ಹತ್ತುವುದು ಗ್ಯಾರಂಟಿ!

ಇನ್ನು ಮುಂದೆ ವ್ಯಕ್ತಿಗತ ಆಮಿಷಗಳ ಈಡೇರಿಕೆಯೇ ಅಭಿವೃದ್ಧಿಯ ಹೊಸ ಮಾದರಿ ಎಂದು ಎಲ್ಲರೂ ಒಪ್ಪಿಯಾರು! ಇತ್ತೀಚೆಗೆ ನಮ್ಮ ರಾಜ್ಯದ ನಿವೃತ್ತ ಅಧಿಕಾರಿಯೊಬ್ಬರು ‘ರಾಜ್ಯದ ಸಾಲದ ತಲಾವಾರು ಜವಾಬ್ದಾರಿಯನ್ನು ನಾನು ಹೊರಲು ರೆಡಿ. ಅದೆಷ್ಟು ತಿಳಿಸಿ, ಪಾವತಿಸುವೆ’ ಎಂದು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರಂತೆ. ಸರ್ಕಾರದಿಂದ ಗ್ಯಾರಂಟಿ ಪಡೆವ ಜನ ಹೀಗೆ ಋಣ ತೀರಿಸುವ ಮರುಗ್ಯಾರಂಟಿಯನ್ನು ಸರ್ಕಾರಕ್ಕೂ ಕೊಡಬೇಕೇನೋ?