Turuvekere Prasad Column: ಹಿಡಿಹೃದಯ ನಿಲ್ಲದೆ ಮಿಡಿ ಹೃದಯ, ಇದು ಹೃದಯಗಳ ವಿಷಯ...
ಮತ್ತೆ ದಿಕ್ಕೇ ತೋಚದೆ ಈ ಲೋಕದಲ್ಲಿ ಅಸ್ತಿತ್ವವೇ ಇಲ್ಲದೆ ಕಳೆದುಹೋಗಬೇಕು. ಹೀಗೆ ಯೋಚಿಸು ವುದೇ ನಿದ್ದೆ ಸುಳಿಯಲು ಆಸ್ಪದನೀಡದ ಒಂದು ಭಯಂಕರ ಒತ್ತಡವಾಗಿ ಬಿಡುತ್ತದೆ. ಇನ್ನು, ಈ ಒತ್ತಡದ ಬದುಕಿಗೆ ತಕ್ಕನಾಗಿಯೇ ನಮ್ಮ ಆಹಾರ ಪದ್ಧತಿಯೂ ಬದಲಾಗಿದೆ. ನಮ್ಮ ಅವಶ್ಯಕತೆಗಳು ಹಾಸಿಗೆ ದಾಟಿ ಆಚೆ ಹೋಗಿರುವುದರಿಂದ ಮನೆ ಮಂದಿಯೆಲ್ಲಾ ದುಡಿಯಬೇಕು.


ಹೃದಯ ಪಲ್ಲವಿ
ತುರುವೇಕೆರೆ ಪ್ರಸಾದ್
ಸಾಲು ಸಾಲು ಒತ್ತಡಗಳಲ್ಲಿ ಯಾವುದನ್ನು ಕಡಿಮೆ ಮಾಡಿಕೊಳ್ಳುವುದು? ಯಾವುದನ್ನು ಬಿಟ್ಟು ಬಿಡುವುದು? ಈ ವ್ಯವಸ್ಥೆಗೆ ನಾವು ದುಡಿಮೆ ಎಂದು ಹೆಸರಿಟ್ಟು ಹೊಂದಿಕೊಂಡು ಬಿಟ್ಟಿದ್ದೇವೆ. ಈ ದುಡಿಮೆ, ಅದರಿಂದ ಬರುವ ಹಣ ಇದಕ್ಕೆಲ್ಲ ಸರಿಹೊಂದುವ ಅತಿಶಯದ ಐಷಾರಾಮಿ ಬದುಕನ್ನೇ ನಾವು ಆಯ್ಕೆ ಮಾಡಿಕೊಂಡುಬಿಟ್ಟಿದ್ದೇವೆ. ವಾಸದ ಮನೆ, ವಾಹನ, ಸಂಗಾತಿ, ಜೀವನಕ್ರಮ ಎಲ್ಲವೂ ದುಬಾರಿಯೇ, ಪ್ರತಿಷ್ಠಿತವೇ! ಎಲ್ಲವೂ ಅಂತಸ್ತು ಗೌರವ ಪ್ರೇರಿತವೇ! ಹೀಗಿರುವಾಗ ಒತ್ತಡ ಎಂದು ಯಾವುದನ್ನು ಕೈಬಿಟ್ಟರೂ ಅದೊಂದು ಸೋಲು, ಪಲಾಯನ!
ಕೆಲ ದಿನಗಳಿಂದ, ಹೃದಯಾಘಾತದ ಸಾವಿನ ಸುದ್ದಿಗಳು ಮೇಲಿಂದ ಮೇಲೆ ಬರುತ್ತಿದ್ದು ಜನ ಆತಂಕಿತರಾಗಿದ್ದಾರೆ. ರಕ್ತದೊತ್ತಡ, ಸಕ್ಕರೆ ಕಾಯಿಲೆ ಇತರೆ ಏನಾದರೂ ಹೃದಯ ಸಂಬಂಧಿ ಕಾಯಿಲೆಗಳಿರಬಹುದಾ ಎಂದು ತಪಾಸಣೆ ಮಾಡಿಸಿಕೊಳ್ಳಲು ಆಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ.
ಇವರಿಗೆಲ್ಲಾ ತಪಾಸಣೆ, ಚಿಕಿತ್ಸೆಯ ನಂತರ ತಜ್ಞ ವೈದ್ಯರು ಮೂರು ಅಂಶಗಳ ಕುರಿತು ಸಲಹೆ ನೀಡುತ್ತಿದ್ದಾರೆ. ಅವೆಂದರೆ: ೧. ಒತ್ತಡರಹಿತ ಜೀವನ (ಸ್ಟ್ರೆಸ್‌ಲೆಸ್ ಲೈ-); ೨. ಜಂಕ್ ಅಲ್ಲದ ಪ್ರೋಟೀನ್ ಯುಕ್ತ ಆರೋಗ್ಯಕರ ಆಹಾರ ಸೇವನೆ; ೩. ಜೀವನಶೈಲಿ ಯ ಬದಲಾವಣೆ. ಇದೇ ಅಂಶಗಳನ್ನು ಹಲವು ತಜ್ಞ ವೈದ್ಯರು ಮಾಧ್ಯಮಗಳ ಮೂಲಕವೂ ಜನರಿಗೆ ತಲುಪಿಸುತ್ತಿದ್ದಾರೆ.
ಇವು ನಿಜಕ್ಕೂ ಪ್ರತಿಯೊಬ್ಬರೂ ತಮ್ಮ ತಮ್ಮ ಆರೋಗ್ಯದ ದೃಷ್ಟಿಯಿಂದ ಅಳವಡಿಸಿಕೊಳ್ಳ ಬೇಕಾದ ಅಂಶಗಳೇ ಎಂಬುದರ ಬಗ್ಗೆ ಎರಡು ಮಾತಿಲ್ಲ. ಆದರೆ ಈ ಮೂರೂ ಅಂಶಗಳನ್ನು ಈಗ ನಾವಿರುವ ಪರಿಸ್ಥಿತಿಯಲ್ಲಿ ಅಳವಡಿಸಿಕೊಳ್ಳುವುದು ಅಷ್ಟು ಸುಲಭವಾ? ನಮ್ಮಲ್ಲಿ ಇಚ್ಛಾಶಕ್ತಿ, ಆರೋಗ್ಯದ ಕುರಿತು ಅರಿವು ಮತ್ತು ಕಾಳಜಿ ಇದ್ದರೂ, ಈ ಆಂಶಗಳನ್ನು ಥಟ್ಟನೆ ನಮ್ಮ ಜೀವನ ದಲ್ಲಿ ಅಳವಡಿಸಿಕೊಳ್ಳುವಂಥ ವಾತಾವರಣದಲ್ಲಿ ನಾವು ಬದುಕುತ್ತಿದ್ದೇವೆಯೇ ಎಂದು ಆತ್ಮಾವ ಲೋಕನ ಮಾಡಿಕೊಳ್ಳಬೇಕಾಗಿದೆ.
ಇದನ್ನೂ ಓದಿ: Srivathsa Joshi Column: ಆತ್ತಿಚ್ಚೂಡಿ: ತಮಿಳು ವರ್ಣಮಾಲೆಯಲ್ಲಿ ನೀತಿವಾಕ್ಯಗಳ ಸೂಡಿ
ಬೆಳಗ್ಗೆ ಏಳುವಾಗಲೇ ಹಿಂದಿನ ದಿನದ ಒತ್ತಡಗಳನ್ನು ಕ್ಯಾರಿಫಾರ್ವಡ್ ಮಾಡಿಕೊಂಡೇ ಏಳುತ್ತೇವೆ. ಎದ್ದ ನಂತರ ಯಂತ್ರಗಳಂತೆ ದೈನಂದಿನ ಬದುಕಿಗೆ ತಯಾರಿ ನಡೆಸುತ್ತೇವೆ. ಆ ನಂತರ ಟ್ರಾಫಿಕ್ ಜಾಮ್ ಒಡ್ತಡ, ಆಫೀಸು, ಅಲ್ಲಿನ ವ್ಯವಸ್ಥೆಯ ನಿರ್ವಹಣೆಯ ಒತ್ತಡಗಳು, ತಂತ್ರ- ಪ್ರತಿತಂತ್ರ-ಕಾರ್ಯತಂತ್ರಗಳ ಒತ್ತಡಗಳು, ಮೇಲಿನ ಮತ್ತು ಕೆಳಗಿನ ಅಧಿಕಾರ ಶ್ರೇಣಿಯ ತರತಮದ ಒತ್ತಡಗಳು, ಹೊರಗಿನ ಕಂಪನಿಗಳ ನಡುವಿನ ಸ್ಪರ್ಧೆಗಳ ಒತ್ತಡ, ಅದು ಸಾಲದೆಂಬಂತೆ ತನ್ನ ಪಕ್ಕದಲ್ಲಿರು ವವನ ಜತೆಯೇ ಸ್ಪರ್ಧೆ, ಅವನಿಗಿಂತ ಹೆಚ್ಚು ಸಾಮರ್ಥ್ಯ ತೋರಬೇಕಾದ ಒತ್ತಡ, ತನ್ನನ್ನು ತಾನು ಬಲಿಷ್ಠ, ಬುದ್ದಿವಂತ, ಚಲಾವಣೆಯಲ್ಲಿ ಇರುವವ, ಅಪ್ಟೇಡ್ ಆದವ, ಎಲ್ಲದಕ್ಕೂ ತಾಳಿಕೊಳ್ಳುವವ (ಸಸೆಪ್ಟಬಲ್) ಎಂದು ನಿರೂಪಿಸಿಕೊಳ್ಳಬೇಕಾದ ಒತ್ತಡಗಳು.
ಮತ್ತೆ ವಾಪಸ್ ಮನೆಗೆ! ಮತ್ತೆ ಅದೇ ಟ್ರಾಫಿಕ್ ಜಾಮ್ ಒತ್ತಡ, ಮಳೆ, ಗಾಳಿ, ನೈಸರ್ಗಿಕ ಏರು ಪೇರುಗಳ ಮಧ್ಯೆ ವಾಹನ ನಿರ್ವಹಣೆ, ಚಾಲನೆಯ ಸವಾಲು, ಬೇಗನೆ ಮನೆಸೇರುವ ಒತ್ತಡ. ಮನೆ ಸೇರಿದ ಮೇಲಾದರೂ ನೆಮ್ಮದಿಯಾಗಿರುತ್ತೇವೆಯೇ? ನಾಳಿನ ಒತ್ತಡದ ಬದುಕಿಗೆ ಈಗಲೇ ತಯಾರಿ. ಇದರ ಮಧ್ಯೆ ಸಂಬಂಧಗಳ ಸಂಘರ್ಷಗಳ ಒತ್ತಡ, ಮನೆ ನಿರ್ವಹಣೆಯ ಒತ್ತಡ, ಯಾವುದೋ ಅನಪೇಕ್ಷಿತ ಸುದ್ದಿಗಳು, ಎಲ್ಲಿಯೋ ನಡೆದ ಯುದ್ಧ, ಆತಂಕ, ತಲ್ಲಣಗಳು, ನಿರಂತರ ಸದ್ದುಗಳು, ಭಯಾನಕ ಶಬ್ದಗಳು, ಯಾರದ್ದೋ ಫೋನು, ಯಾವುದೋ ಸಾಲದ ವಿಷಯ, ಥಟ್ಟನೆ ನಿರೀಕ್ಷೆಯೇ ಇಲ್ಲದೆ ಬಂದೆರಗುವ ಆಘಾತಗಳು ಹೀಗೆ ಈ ಒತ್ತಡದ ಬದುಕಿಗೆ ಕೊನೆ ಮೊದಲೇ ಇಲ್ಲ.
ಈ ಒತ್ತಡದ ಮನಸ್ಥಿತಿಯಲ್ಲೇ ಮಲಗಿ ಅರೆನಿದ್ದೆಯಲ್ಲಿ ಕನವರಿಸಿ ಮತ್ತೊಂದು ರಾತ್ರಿ ದೂಡಿ ಹಗಲು ಹುಟ್ಟಲು ಕಾಯುವ ಜಂಜಡದ ಬದುಕು! ಹೀಗೆಂದು ಈ ಸಾಲು ಸಾಲು ಒತ್ತಡಗಳಲ್ಲಿ ಯಾವುದನ್ನು ಕಡಿಮೆ ಮಾಡಿಕೊಳ್ಳುವುದು? ಯಾವುದನ್ನು ಬಿಟ್ಟುಬಿಡುವುದು? ಯಾವೊಂದನ್ನೂ ಒಂದಿನಿತೂ ಅತ್ತಿತ್ತ ಜರುಗಿಸಲು ಸಾಧ್ಯವಿಲ್ಲ. ಇದ್ಯಾವುದೂ ನಮ್ಮ ಕೈಲಿಲ್ಲ. ಈ ವ್ಯವಸ್ಥೆಗೆ ನಾವು ದುಡಿಮೆ ಎಂದು ಹೆಸರಿಟ್ಟು ಹೊಂದಿಕೊಂಡುಬಿಟ್ಟಿದ್ದೇವೆ. ನಾವು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಜೀವನ ಮಾಡಲು ಇದೆಲ್ಲಾ ಬೇಕೇ ಬೇಕು.
ಈ ದುಡಿಮೆ, ಅದರಿಂದ ಬರುವ ಹಣ ಇದಕ್ಕೆಲ್ಲ ಸರಿ ಹೊಂದುವ ಅತಿಶಯದ ಐಷಾರಾಮಿ ಬದುಕನ್ನೇ ನಾವು ಆಯ್ಕೆ ಮಾಡಿಕೊಂಡು ಬಿಟ್ಟಿದ್ದೇವೆ. ವಾಸದ ಮನೆ, ವಾಹನ, ಸಂಗಾತಿ, ಜೀವನ ಕ್ರಮ ಎಲ್ಲವೂ ದುಬಾರಿಯೇ, ಪ್ರತಿಷ್ಠಿತವೇ! ಎಲ್ಲವೂ ಅಂತಸ್ತು ಗೌರವ ಪ್ರೇರಿತವೇ! ಹೀಗಿರುವಾಗ ಒತ್ತಡ ಎಂದು ಯಾವುದನ್ನು ಕೈಬಿಟ್ಟರೂ ಅದೊಂದು ಸೋಲು, ಪಲಾಯನ!
ಮತ್ತೆ ದಿಕ್ಕೇ ತೋಚದೆ ಈ ಲೋಕದಲ್ಲಿ ಅಸ್ತಿತ್ವವೇ ಇಲ್ಲದೆ ಕಳೆದುಹೋಗಬೇಕು. ಹೀಗೆ ಯೋಚಿಸು ವುದೇ ನಿದ್ದೆ ಸುಳಿಯಲು ಆಸ್ಪದನೀಡದ ಒಂದು ಭಯಂಕರ ಒತ್ತಡವಾಗಿ ಬಿಡುತ್ತದೆ. ಇನ್ನು, ಈ ಒತ್ತಡದ ಬದುಕಿಗೆ ತಕ್ಕನಾಗಿಯೇ ನಮ್ಮ ಆಹಾರ ಪದ್ಧತಿಯೂ ಬದಲಾಗಿದೆ. ನಮ್ಮ ಅವಶ್ಯಕತೆಗಳು ಹಾಸಿಗೆ ದಾಟಿ ಆಚೆ ಹೋಗಿರುವುದರಿಂದ ಮನೆ ಮಂದಿಯೆಲ್ಲಾ ದುಡಿಯಬೇಕು. ಎಲ್ಲರೂ ಬೆಳಗ್ಗೆ ಎದ್ದು ಕಾಲಿಗೆ ಚಕ್ರ ಕಟ್ಟಿಕೊಂಡು ಹೋಗುವವರೇ!
ಎಲ್ಲಾ ಹೊತ್ತು ಮುಳುಗಿದ ಮೇಲೆ ಕಾಲೆಳೆಯುತ್ತಾ ಬರುವವರೇ! ರುಚಿ, ಶುಚಿಯಾದ ಪೌಷ್ಟಿಕಾಂಶ ಯುಕ್ತ ಅಡುಗೆ ಯಾರು ಮಾಡಬೇಕು? ಯಾರಿಗೆ ಮಾಡಬೇಕು? ಅದನ್ನು ಆಸ್ವಾದಿಸುತ್ತಾ ಉಣ್ಣುವ ವ್ಯವಧಾನವಾದರೂ ಯಾರಿಗಿದೆ? ಇಷ್ಟಕ್ಕೂ ಬೆಳಗ್ಗೆ ಎದ್ದು ಮೇಲೋಗರ, ತರಕಾರಿ ಕೂಟು, ಮಜ್ಜಿಗೆ ಹುಳಿ, ದಮ್ರೋಟು, ಹೀಗೆ ಬಗೆಬಗೆಯ ರುಚಿಕರ ಅಡುಗೆ ಮಾಡಲು ಯಾರಿಗೆ ಪುರಸೊತ್ತಿರುತ್ತದೆ.
ಹಾಗಾಗಿ ಮಕ್ಕಳ ಬಾಕ್ಸಿಗೂ ಬ್ರೆಡ್ ಜಾಮೇ ಬೀಳುತ್ತದೆ. ಗಂಡಸರು ಹೆಂಗಸರಾದಿಯಾಗಿ ಎಲ್ಲರ ಲಂಚ್ ಬಾಕ್ಸಲ್ಲೂ ಅದೇ ಇಡ್ಲಿ, ಅದೇ ಬೂಸಾ ಉಪ್ಪಿಟ್ಟು, ಅದೇ ಗಂಟಲಲ್ಲಿಳಿಯದ ಶಾವಿಗೆ, ಚಿತ್ರಾನ್ನ! ಬೆಳಗ್ಗೆ ಟೈಮಿಲ್ಲ, ರಾತ್ರಿಯಾದರೆ “ಅಯ್ಯೋ ಇಷ್ಟೊತ್ತಲ್ಲಿ ಯಾರು ಪಾಂಗಿತವಾಗಿ ಅಡುಗೆ ಮಾಡ್ತಾರೆ? ಫ್ರಿಜ್ಜಲ್ಲಿರೋ ನಿನ್ನೆದೋ, ಮೊನ್ನೆದೋ ತಿಂದು ಮಲಗಿದ್ರೆ ಸಾಕು, ನಾಕು ದಿನ ಹಳೇ ದೋಸೆ ಹಿಟ್ಟಲ್ಲೇ ಪೂರೈಸಿದರಾಯ್ತು" ಎಂಬ ಅಸಹಾಯಕ ಧೋರಣೆ!
ದಾರಿಯಲ್ಲೇ ಪಾನಿಪೂರಿಯನ್ನೋ, ಪಫ್ ಗಳನ್ನೋ ತಿಂದು ಬಂದು ಮಲಗುವವರಿದ್ದಾರೆ. ಇದು ತೀರಾ ಅನಿವಾರ್ಯ ಅನಿಸುವಷ್ಟರ ಮಟ್ಟಿಗೆ ರೂಢಿಯಾಗಿ ಹೋಗಿದೆ. ಇದನ್ನೇ ತಿಂದು ಸಾಕಾದ ನಾಲಗೆ ಹೊರಗಿನದನ್ನು ಬೇಡುತ್ತದೆ. ಹೋಟೆಲ್ ತಿಂಡಿ, ಊಟಗಳು, ಜಂಕ್ ಫುಡ್‌ಗಳು ನಾಲಗೆಗೆ ಇಳಿಯುತ್ತವೆ. ಹಾಗೇ ಅಭ್ಯಾಸವಾಗಿ ಹೋಗುತ್ತವೆ. ಎಷ್ಟೋ ಜನರು ರಜಾದಿನಗಳಂದು ಸಹ ಮನೆ ಯಲ್ಲಿ ರುಚಿ ರುಚಿಯಾಗಿ ತಿಂಡಿ ಮಾಡಿಕೊಳ್ಳಲಾಗದೆ ಹೋಟೆಲ್, ಬೇಕರಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

ಉಳ್ಳವರಿಗೆ ಪುರಸೊತ್ತಿಲ್ಲ, ಬಡವರಿಗೆ ಇಷ್ಟ ಪಟ್ಟಿದ್ದನ್ನು ತಿನ್ನಲು ರೊಕ್ಕವಿಲ್ಲ. ಹೀಗಾಗಿ ನಾವು ಬಿಡುತ್ತೇವೆಂದರೂ ಜಂಕ್ ಫುಡ್ಡೇ ನಮ್ಮನ್ನು ಬಿಡದ ಅಂಟಿನ ನಂಟಾಗಿದೆ. ಇನ್ನು ಜೀವನಶೈಲಿ (ಲೈಫ್ ಸ್ಟೈಲ್) ಬದಲಾವಣೆ. ಇದೊಂದು ತುಂಬಾ ಸೂಕ್ಷ್ಮ ಹಾಗೂ ಅಷ್ಟೇ ಸಂಕೀರ್ಣವಾದ ಸಂಗತಿ. ಒಂದು ವಾಕ್ ಹೋಗಿಬಂದರೆ, ಒಂದಿಷ್ಟು ಯೋಗ, ವ್ಯಾಯಾಮ ಮಾಡಿಬಿಟ್ಟರೆ, ಸಂಗೀತ ಕೇಳಿ ನಿದ್ದೆ ಮಾಡಿಬಿಟ್ಟರೆ ಜೀವನ ಕ್ರಮ ಬದಲಾಗುವುದಿಲ್ಲ.
ಅದೊಂದು ಧ್ಯಾನ, ತಪಸ್ಸು ಎನ್ನುವಂತೆ ಹಠ ಹಿಡಿದು ಮಾಡಬೇಕು. ಅದು ಅಷ್ಟು ಸುಲಭವಲ್ಲ. ನಮ್ಮ ಜೈವಿಕ ಕ್ರಿಯೆಗಳು ಹಾಗೂ ಮಾನಸಿಕ ಕ್ರಿಯೆಗಳು ಈ ಎರಡರ ಮೇಲೆ ಹತೋಟಿ ಹೊಂದ ಬೇಕು. ನಮ್ಮ ಬೇಕು-ಬೇಡಗಳನ್ನು ಸ್ಪಷ್ಟವಾಗಿ ಗುರುತಿಸಿಕೊಳ್ಳಬೇಕು. ‘ಬೇಡ, ಆಗಲ್ಲ’ ( Say No) ತತ್ವಕ್ಕೆ ನಿಷ್ಠುರವಾದರೂ ಪರವಾಗಿಲ್ಲ ಎಂದು ನಿಷ್ಠರಾಗಿರಬೇಕು.
‘ಥಿಂಕ್ ಹೈ, ಲಿವ್ ಸಿಂಪಲ್’ ಎಂಬಂತೆ ಆದಷ್ಟೂ ನಮ್ಮ ಜೀವನಕ್ರಮವನ್ನು ಸರಳಗೊಳಿಸುತ್ತಾ ಹೋಗಬೇಕು. ನಮ್ಮ ಅಗತ್ಯಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋಗಬೇಕು. ಎಲ್ಲರೂ ಇದ್ದಷ್ಟೇ ಸಾಕು ಎನ್ನಲು ಸಾಧ್ಯವಿಲ್ಲ, ಕನಿಷ್ಠ ಈಗಿರುವಷ್ಟು ಸಾಕು ಎಂಬ ಹಂತಕ್ಕಾದರೂ ತಲುಪಿದರೆ ಒಳ್ಳೆಯದು.
ಒತ್ತಡದ ಬದುಕಿಗೂ ಈ ಜೀವನಶೈಲಿಗೂ ನೇರಾನೇರ ಸಂಬಂಧವಿದೆ. ನಾವು ಏಕಾಏಕಿ ನಮ್ಮೆಲ್ಲಾ ಒತ್ತಡಗಳಿಂದ ಪಾರಾಗಲಂತೂ ಸಾಧ್ಯವಿಲ್ಲ. ಇಡೀ ಜಗತ್ತೇ ದಾಪುಗಾಲಿಟ್ಟು ಓಡುತ್ತಿರುವಾಗ ನಾವು ಬೆನ್ನು ಹಾಕಿ ಹಿಂದೆ ಓಡುವುದು ನಮ್ಮ ಅಸ್ತಿತ್ವವನ್ನೇ ನುಂಗಿಬಿಡುತ್ತದೆ. ಹಾಗಾಗಿ ನಾವೂ ಈ ಜನಜಂಗುಳಿಯ ಸಂಭ್ರಮದ ವ್ಯಾಪಾರದಲ್ಲಿ ಸಂತೆಯಲ್ಲಿ ನಿಂತ ಸಂತನಂತಿರಬೇಕು.
ಒತ್ತಡಗಳಿಂದ ಮುಕ್ತಿ ಇಲ್ಲದಿದ್ದರೂ ಅವನ್ನು ನಿಭಾಯಿಸುವ ಕಲೆ, ಮನಸ್ಥಿತಿ ಬೆಳೆಸಿಕೊಂಡರೆ ಆಗ ನಾವು ಈ ಯುದ್ಧದಲ್ಲಿ ಅರ್ಧ ಗೆದ್ದಂತೆ! ಒತ್ತಡ (ಸ್ಟ್ರೆಸ್)ಎಂದು ದುರಭ್ಯಾಸಗಳಿಗೆ ಶರಣಾಗುವುದು ತುಂಬಾ ಸುಲಭದ ದಾರಿ. ನಾವು ಒತ್ತಡ ನಿರ್ವಹಣೆಗೆ ಮಾದಕ ವಸ್ತುಗಳಿಗೆ, ಅಗ್ಗದ ಮನರಂಜನಾ ವಿಧಾನಗಳಿಗೆ, ಪಾಶ್ಚಾತ್ಯ ವೈಭೋಗಗಳಿಗೆ ದಾಸರಾಗಿದ್ದೇವೆ.
ಇವು ನಮಗೆ ತಕ್ಷಣದ ಖುಷಿ, ಉನ್ಮಾದವನ್ನಷ್ಟೇ ನೀಡಿ ವಾಪಸ್ ಬೆಳಗ್ಗೆ ನಮ್ಮನ್ನು ನಾವಿದ್ದ ಜಾಗ ದಲ್ಲೇ ಇನ್ನೂ ಹೆಚ್ಚು ಒತ್ತಡ ಹೇರಿ ನಿಲ್ಲಿಸಿರುತ್ತವೆ. ನಾವು ಶಾಶ್ವತ ಆನಂದ ಮಾರ್ಗಗಳನ್ನು, ಮನಸ್ಸಿಗೆ ಮುದ ನೀಡುವ, ಒತ್ತಡಗಳನ್ನು ತಿಳಿಗೊಳಿಸುವ ಮೌಲ್ಯಯುತ ವಿಧಾನಗಳನ್ನು ರೂಢಿಸಿ ಕೊಳ್ಳಬೇಕು.
‘ಬೇಕೇ ಬೇಕು’ ಎನ್ನುವ ನಿರಂತರ ಹಪಾಹಪಿಯಿಂದ ‘ಸಾಕೋ ಸಾಕು’ ಎನ್ನುವ ತೃಪ್ತಿಯ ಮನಸ್ಥಿತಿಗೆ ನಾವು ಬಂದು ನಿಲ್ಲಬೇಕು. ಅದಕ್ಕೆ ನಮ್ಮ ಜೀವನದಲ್ಲಿ ನಾವು ರೂಢಿಸಿಕೊಂಡು ಬಂದ ಮೌಲ್ಯಗಳು ತುಂಬಾ ಸಹಕಾರಿಯಾಗುತ್ತವೆ. ಮೌಲ್ಯಾಧಾರಿತ ಜೀವನ ನಮ್ಮನ್ನು ಒತ್ತಡದಿಂದ ದೂರವಿಟ್ಟು ಆರೋಗ್ಯಕರ ಬದುಕನ್ನು ಬಾಳಲು ಅನುವು ಮಾಡಿಕೊಡುತ್ತದೆ. ಉದಾರತೆ, ಕೃತಜ್ಞತೆ, ಸಹಬಾಳ್ವೆ ಯ ತತ್ವಗಳು ನಮ್ಮಲ್ಲಿ ಧನ್ಯತೆ ಮೂಡಿಸುತ್ತವೆ.
ನಮ್ಮ ಮನಸ್ಸಿನಲ್ಲಿ ದೃಢನಿಶ್ಚಯ ಮತ್ತು ಶ್ರದ್ಧೆ ಇರಬೇಕು. ಬಹಳಷ್ಟು ಜನರ ಸಮಸ್ಯೆಗಳಿರುವುದು ಅವರು ಸಂಬಂಧಗಳನ್ನು ನಿಭಾಯಿಸುವ ವಿಧಾನದಲ್ಲಿ! ಗಂಡ, ಹೆಂಡತಿ, ಅಪ್ಪ, ಮಕ್ಕಳು, ಅಣ್ಣ, ತಂಗಿ, ಅತ್ತೆ-ಸೊಸೆ, ಅತ್ತಿಗೆ, ನಾದಿನಿ, ವಾರಗಿತ್ತಿ ಹೀಗೆ ಸಂಬಂಧಗಳು ಮುಕ್ಕಾಗುತ್ತಾ ಹೋಗಿವೆ. ಒತ್ತಡ ನಿರ್ವಹಣೆಗೆ ಮಠ-ಮಂದಿರಗಳಿಗೆ ಹೋಗುವುದಕ್ಕಿಂತ ಮನೆಯನ್ನೇ ಒಂದು ಸುಂದರ ದೇಗುಲವಾಗಿಸಿಕೊಳ್ಳಬೇಕು.
ನಮ್ಮ ಮನೆಯೆಂಬ ಭಾವನಾತ್ಮಕ ಮಂದಿರದಲ್ಲಿನ ಸಂಬಂಧಗಳು ಸೌಹಾರ್ದಯುತವಾಗಿರಬೇಕು. ಸುಖ,ದುಃಖಗಳ ವಿನಿಮಯವಾಗಬೇಕು. ಕ್ಯಾಂಟೀನಿನಲ್ಲಿ, ಆಫೀಸಲ್ಲಿ ಗಂಟೆಗಟ್ಟಲೆ ಮಾತಾಡಿರು ತ್ತೇವೆ. ಆದರೆ ಮನೆಯವರೊಡನೆ ಮಾತಾಡಲು ಪುರಸೊತ್ತೇ ಇರುವುದಿಲ್ಲ. ಈ ಧೋರಣೆ ಬಿಟ್ಟು ಹತ್ತು ನಿಮಿಷ ಕೂತು ಗಂಡನು ಹೆಂಡತಿಯ, ಹೆಂಡತಿಯು ಗಂಡನ ಕಷ್ಟ-ಸುಖ (ದುಡ್ಡು, ವ್ಯವಹಾರ ಬಿಟ್ಟು) ವಿಚಾರಿಸಬೇಕು. ಮಕ್ಕಳೊಂದಿಗೆ ಮನೆಯಲ್ಲೇ ಅಡುಗೆ ಮಾಡಿ ಊಟ ಮಾಡಬೇಕು.
ಅವರಿಗೊಂದು ಕತೆ ಹೇಳಬೇಕು. ಪರಸ್ಪರ ಪ್ರೀತಿಸುವ, ಗೌರವಿಸುವ ಮನಸ್ಸುಗಳ ಬೆಂಬಲ ಮನಸ್ಸಿಗೆ ಅಗಾಧವಾದ ಶಕ್ತಿ, ಸ್ಥೈರ್ಯ ನೀಡುತ್ತದೆ. ಬಾಂಧವ್ಯದ ಭಾವನಾತ್ಮಕ ಅಲೆಗಳು, ಬದುಕಬೇಕೆನ್ನುವ ಉತ್ಕಟ ಉತ್ಸಾಹ, ಲವಲವಿಕೆ ತುಂಬಿ ಜೀವನ್ಮುಖಿಯಾಗಿಸುತ್ತವೆ. ಮನೆಯೊಳ ಗಿನ ಸಾಮರಸ್ಯ ಹಾಗೂ ಮನಃಶಾಂತಿ, ಬದುಕಿನ ಅರ್ಧ ಒತ್ತಡಗಳನ್ನು ಹಗುರಾಗಿಸುತ್ತವೆ.
ಇಂಥ ಪ್ರೀತಿಸುವ ಹೃದಯದ ಮಿಡಿತ-ತುಡಿತಗಳು ನಮ್ಮ ಹೃದಯದ ಬಡಿತವನ್ನು ಏರುಪೇರಾ ಗದಂತೆ ಕಾಪಾಡುತ್ತವೆ. ಇದರ ಜತೆಗೆ ನಮ್ಮ ಬದುಕಿನ ದಿನನಿತ್ಯದ ಆದ್ಯತೆಗಳನ್ನು ಗುರುತಿಸಿ ಕೊಳ್ಳಬೇಕು (prioritization ). ಅದಕ್ಕೆ ತಕ್ಕಂತೆ ಹೊಸ ಹೊಸ ಜೀವನ ಕ್ರಮಗಳನ್ನು ಅಳವಡಿಸಿ ಕೊಳ್ಳಬೇಕು. ಅಡುಗೆ ಕಪಾಟುಗಳು, ಕಸದ ಬುಟ್ಟಿಗಳನ್ನು ಖಾಲಿ ಮಾಡುವಂತೆ ಮನಸ್ಸನ್ನೂ ಆಗಾಗ್ಗೆ ಖಾಲಿ ಮಾಡುವ ( Emptying mind ) ತಂತ್ರಗಳನ್ನು ಕಲಿಯಬೇಕು.
ಇಷ್ಟಾಗಿಯೂ ಹೃದಯದ ಬಡಿತಾ ನಿಲ್ಲುತ್ತದಾ? ನಿಲ್ಲಲಿ ಬಿಡಿ.. ಎಂದಾದರೊಂದು ದಿನ ನಿಲ್ಲಲೇ ಬೇಕು. ಅದು ಹತ್ತು ಜನರಿಗೆ ಮಿಡಿದು ಸಾರ್ಥಕವಾಗಿ ಮಡಿದು ಹೃದಯದೀಪವಾಗಿ ಬೆಳಗುತ್ತದೆ.
(ಲೇಖಕರು ನ್ಯೂರೋ ಲಿಂಗ್ವಿಸ್ಟಿಕ್
ಪ್ರೋಗ್ರಾಮಿಂಗ್ ತರಬೇತುದಾರರು)