ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanand Sharma Column: ಕಸ ಸುರಿಯುವ ಹಬ್ಬ: ಇದು ಅತಿರೇಕದ ಕ್ರಮವೇ ?

ಬೇಕಾಬಿಟ್ಟಿಯಾಗಿ ಕಸ ಎಸೆಯುವವರನ್ನು ನಿಖರವಾಗಿ ಗುರುತಿಸಲು ನಗರಪಾಲಿಕೆಯ ಮಾರ್ಷಲ್‌ ಗಳ ಸೇವೆಯನ್ನು ಮತ್ತು ಸಿಸಿಟಿವಿಗಳನ್ನು ‘ಜಿಬಿಎ‘ ಬಳಸುತ್ತಿದೆ. ಮನೆಮನೆಯಿಂದ ಕಸ/ತ್ಯಾಜ್ಯದ ಸಂಗ್ರ ಹಣೆಗೆ ಹೆಚ್ಚುವರಿ ಟಿಪ್ಪರ್ ಗಳನ್ನು ಸಜ್ಜುಗೊಳಿಸಲು, ರಾತ್ರಿ ವೇಳೆ ಕೂಡ ಅವುಗಳ ಸೇವೆಯನ್ನು ಒದಗಿಸಲು, ನಿಗದಿತ ಸ್ಥಳಗಳಲ್ಲಿ ಕಸದ ‘ಕಿಯೋಸ್ಕ್’ಗಳನ್ನು ಸ್ಥಾಪಿಸಲು ‘ಜಿಬಿಎ’ ಮುಂದಾಗಿದೆ.

ಯಕ್ಷ ಪ್ರಶ್ನೆ

ರಮಾನಂದ ಶರ್ಮ

ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆದುಹೋಗುವ ವಿಷಯದಲ್ಲಿ ಸಾಮಾನ್ಯವಾಗಿ ಸಮಾಜದ ಕೆಳಸ್ತರದ ಮತ್ತು ಆರ್ಥಿಕವಾಗಿ ದುರ್ಬಲರಾದ ಜನರನ್ನು ದೂಷಿಸಲಾಗುತ್ತದೆ ಹಾಗೂ ಸುಶಿಕ್ಷಿತರು, ಆರ್ಥಿಕವಾಗಿ ಸಬಲರು ಎನಿಸಿಕೊಂಡವರಿಗೆ ‘ಕ್ಲೀನ್ ಚಿಟ್’ ನೀಡಲಾಗು ತ್ತದೆ. ವಿಚಿತ್ರವೆಂದರೆ, ವಿದ್ಯಾ ವಂತರು/ಪ್ರಜ್ಞಾವಂತರು ಎನಿಸಿಕೊಂಡ ಸಾಕಷ್ಟು ಮಂದಿಯೂ ಈ ಬಾಬತ್ತಿನಲ್ಲಿ ಪಾಲುದಾರರೇ.

ಬೆಂಗಳೂರಿನಲ್ಲಿ ರಸ್ತೆಬದಿ, ಚರಂಡಿ, ರಾಜಕಾಲುವೆ, ಖಾಲಿ ನಿವೇಶನ ಹೀಗೆ ಎಲ್ಲೆಂದರಲ್ಲಿ ಕಸ/ತ್ಯಾಜ್ಯವನ್ನು ಬಿಸಾಡುವವರ ಮನೆಗಳನ್ನು ಪತ್ತೆಮಾಡಿ, ಅವರ ಮನೆಬಾಗಿಲಿನಲ್ಲಿಯೇ ಕಸ ಸುರಿದು ದಂಡ ವಿಧಿಸುವ ಕಾರ್ಯಾಚರಣೆಯನ್ನು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ವು (ಜಿಬಿಎ) ಆರಂಭಿ ಸಿದೆ, ಇದಕ್ಕೆ ‘ಕಸ ಸುರಿಯುವ ಹಬ್ಬ’ ಎಂದೂ ಹೆಸರಿಟ್ಟಿದೆ!

ಮನೆ ಬಾಗಿಲಿಗೆ ಬರುವ ಕಸದ ಆಟೋ-ಟಿಪ್ಪರ್‌ಗಳಿಗೆ ಕಸ ನೀಡದೆ, ತಮ್ಮ ಬೈಕುಗಳನ್ನೇರಿ ಕಸ ತುಂಬಿದ ಚೀಲಗಳನ್ನು ತಂದು ಬೇಕಾಬಿಟ್ಟಿ ಬಿಸಾಡುವ ಮತ್ತು ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳುವ ಈ ಕಾರ್ಯಾಚರಣೆಯನ್ನು ‘ಜಿಬಿಎ’ ಗಂಭೀರವಾಗಿ ಪರಿಗಣಿಸಿದೆ.

ಬೇಕಾಬಿಟ್ಟಿಯಾಗಿ ಕಸ ಎಸೆಯುವವರನ್ನು ನಿಖರವಾಗಿ ಗುರುತಿಸಲು ನಗರಪಾಲಿಕೆಯ ಮಾರ್ಷಲ್‌ ಗಳ ಸೇವೆಯನ್ನು ಮತ್ತು ಸಿಸಿಟಿವಿಗಳನ್ನು ‘ಜಿಬಿಎ‘ ಬಳಸುತ್ತಿದೆ. ಮನೆಮನೆಯಿಂದ ಕಸ/ತ್ಯಾಜ್ಯದ ಸಂಗ್ರಹಣೆಗೆ ಹೆಚ್ಚುವರಿ ಟಿಪ್ಪರ್ ಗಳನ್ನು ಸಜ್ಜುಗೊಳಿಸಲು, ರಾತ್ರಿ ವೇಳೆ ಕೂಡ ಅವುಗಳ ಸೇವೆ ಯನ್ನು ಒದಗಿಸಲು, ನಿಗದಿತ ಸ್ಥಳಗಳಲ್ಲಿ ಕಸದ ‘ಕಿಯೋಸ್ಕ್’ಗಳನ್ನು ಸ್ಥಾಪಿಸಲು ‘ಜಿಬಿಎ’ ಮುಂದಾಗಿದೆ.

ಇದನ್ನೂ ಓದಿ: Ramanand Sharma Column: ಒಂದು ದೇಶ ಒಂದು ಬ್ಯಾಂಕ್‌ ಆಶಯದ ನೆರವೇರಿಕೆಯೇ ?

ಆಶ್ಚರ್ಯವೆಂದರೆ, ಈ ಕಾರ್ಯಾಚರಣೆಯನ್ನು ಆರಂಭಿಸಿದ ದಿನವೇ 300 ಮನೆಗಳಿಗೆ ಕಸವನ್ನು ಹಿಂದಿರುಗಿಸಲಾಗಿದೆ ಅಥವಾ ಸರಿಯಲಾಗಿದೆ ಮತ್ತು ೩ ಲಕ್ಷ ರು. ದಂಡವನ್ನು ವಸೂಲು ಮಾಡಲಾಗಿದೆ. ಇದಕ್ಕೆ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರವನ್ನೂ ನೀಡಲಾಗಿದೆ. ಈ ಕ್ರಮವನ್ನು ಬಹುತೇಕರು ಮುಕ್ತಕಂಠದಿಂದ ಹೊಗಳುತ್ತಿರುವುದರ ಜತೆಗೆ, ‘ಇದು ಅನ್ಯಥಾ ಶರಣಂ ನಾಸ್ತಿ ಪರಿಸ್ಥಿತಿಯ ಕೊಡುಗೆ’ ಎನ್ನುತ್ತಿದ್ದಾರೆ.

‘ಜಿಬಿಎ’ ದಿಢೀರ್ ಎಂಬಂತೆ ಈ ಕ್ರಮವನ್ನು ಕೈಗೊಂಡಿಲ್ಲ; ಈ ಸಮಸ್ಯೆಗೆ ಅಂತ್ಯಹಾಡಲು ಈ ಹಿಂದೆ ಸಾಕಷ್ಟು ಚಿಂತನ-ಮಂಥನವನ್ನು ಅದು ನಡೆಸಿದ್ದುಂಟು, ಹಲವು ರೀತಿಯ ಪ್ರಯೋಗಗಳನ್ನು ಮಾಡಿದ್ದುಂಟು. ಇವು ನಿರೀಕ್ಷಿತ ಫಲ ನೀಡಲು ವಿಫಲವಾಗಿದ್ದರಿಂದ, ಇಂಥ ಕಠಿಣ ಹೆಜ್ಜೆಯನ್ನಿ ಡಲು ‘ಜಿಬಿಎ’ ಒಲ್ಲದ ಮನಸ್ಸಿನಿಂದ ಮುಂದಾಗಿದೆ.

ಒಂದು ಕಾಲಕ್ಕೆ, ಬೀದಿಯ ಕೊನೆಯಲ್ಲಿ ತೊಟ್ಟಿ ಇರಿಸಿ, ಜನರು ಕಸವನ್ನು ಅದರಲ್ಲಿ ಹಾಕುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದು ಕೆಲ ಕಾಲ ಚೆನ್ನಾಗಿಯೇ ನಡೆಯಿತು. ಕಾಲಕ್ರಮೇಣ ಮನೆಗಳ ಸಂಖ್ಯೆ ಹೆಚ್ಚಲು, ‘ವಾಸನೆ ಬೀರುವ ಈ ತೊಟ್ಟಿಗಳು ನಮ್ಮ ಮನೆಯ ಹತ್ತಿರ ಬೇಡ, ಬೇರೆಲ್ಲಾದರೂ ಇರಲಿ’ ಎನ್ನುವವರ ಸಂಖ್ಯೆಯೂ ಹೆಚ್ಚಾಯಿತು. ಹಾಗೆಯೇ ತೊಟ್ಟಿಯನ್ನು ಇರಿಸಲು ಸ್ಥಳದ ಸಮಸ್ಯೆಯೂ ಎದುರಾಯಿತು. ಜನರ ಆಕ್ಷೇಪದಲ್ಲೂ ಅರ್ಥವಿತ್ತು; ಕೆಲವರು ಈ ತೊಟ್ಟಿಯಲ್ಲಿ ಕಸವನ್ನು ಸರಿಯಾಗಿ ಹಾಕದ ಕಾರಣ, ಹೊರಗೇ ಹೆಚ್ಚು ಕಸ ಬಿದ್ದು ಚೆಲ್ಲಾಪಿಲ್ಲಿಯಾಗುತ್ತಿತ್ತು.

garbaze

ಸಾಲದೆಂಬಂತೆ ಬೀದಿನಾಯಿಗಳು ಈ ಕಸವನ್ನು ಬೇಕಾಬಿಟ್ಟಿ ಎಳೆದುಹಾಕುವುದೂ ಇತ್ತು. ಕಸದ ತೊಟ್ಟಿ ತುಂಬಿ ತುಳುಕಿದರೂ, ಅದನ್ನು ದಿನಂಪ್ರತಿ ಹೊರ ಸಾಗಿಸಲು ಸಾಕಷ್ಟು ಅಡಚಣೆಗಳಿದ್ದವು. ಈ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಮತ್ತು ದೂರುಗಳನ್ನು ವಿಶ್ಲೇಷಿಸಿದ ನಗರಪಾಲಿಕೆಯು, ಈ ತೊಟ್ಟಿ ವ್ಯವಸ್ಥೆಗೆ ‘ಗುಡ್ ಬೈ’ ಹೇಳಿ ಮನೆಮನೆಯಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಜಾರಿಗೊಳಿಸಿತು.

ಈ ವ್ಯವಸ್ಥೆಯನ್ನು ಸುಗಮವಾಗಿಸಲು, ಒಣಕಸ ಮತ್ತು ಹಸಿಕಸವನ್ನು ವಿಂಗಡಿಸಿ ಬೇರ್ಪಡಿಸಲು ಪ್ರತಿಯೊಂದು ಮನೆಗೂ ಎರಡೆರಡು ಕಸದ ಬುಟ್ಟಿಗಳನ್ನು ಅದು ವಿತರಿಸಿತು. ಟಿಪ್ಪರ್‌ನವರು ಪ್ರತಿದಿನ ನಿಗದಿತ ಸಮಯದಲ್ಲಿ ಹಸಿಕಸ ಮತ್ತು ಒಣಕಸವನ್ನು ಸಂಗ್ರಹಿಸಲು ಪ್ರತ್ಯೇಕವಾಗಿ ಬರುವಂತೆ ವ್ಯವಸ್ಥೆಗೊಳಿಸಲಾಗಿತ್ತು, ಜನರೂ ಈ ವ್ಯವಸ್ಥೆಯನ್ನು ಶ್ಲಾಘಿಸಿದ್ದರು. ಆದರೆ, ಯಾವುದೇ ವ್ಯವಸ್ಥೆಯು ದೋಷರಹಿತವಾಗಿರುವುದು ಕೊಂಚ ವಿರಳವೇ, ಅಂತೆಯೇ ಈ ವ್ಯವಸ್ಥೆ ಕೂಡ. ಹಲವರು ಈ ವ್ಯವಸ್ಥೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದರೆ, ಮತ್ತೆ ಕೆಲವರು ಈ ಗಾಡಿ ಗಳು ಮನೆಬಾಗಿಲಿಗೆ ಬಂದು ಹಾರ್ನ್ ಮಾಡಿದರೂ ಕಸ ನೀಡದಷ್ಟು ಉದಾಸೀನ ತೋರಲು ಶುರುಮಾಡಿದರು.

ಕೆಲವರು (ಬಹುತೇಕ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು), ‘ನಾವಿನ್ನೂ ಹಾಸಿಗೆಯಿಂದ ಮೇಲೇಳುವ ಮೊದಲೇ ಇವರು ಬಂದಿರುತ್ತಾರೆ’ ಎಂದು ಗೊಣಗಿದರೆ, ಇನ್ನು ಕೆಲವರು ‘ಕಸದವರು ಬಂದಾಗ ನಾವು ತಿಂಡಿ ತಯಾರಿಯಲ್ಲಿ ವ್ಯಸ್ತರಾಗಿರುತ್ತೇವೆ’ ಎಂದೋ, ‘ಅಷ್ಟು ಹೊತ್ತಿಗೇ ಮನೆಯ ಕಸ ರೆಡಿಯಾಗಿರುವುದಿಲ್ಲ’ ಎಂದೋ ನೆಪಗಳನ್ನು ಹೇಳತೊಡಗಿದರು.

ಟಿಪ್ಪರ್‌ನವರು ಬರುವ ಸಮಯ ಬದಲಾಗಲಿ ಎಂದು ಸಲಹೆ ನೀಡಿದವರೂ ಉಂಟು. ಹಸಿ ಮತ್ತು ಒಣಕಸವನ್ನು ವಿಂಗಡಣೆ ಮಾಡದವರು ಸಾಕಷ್ಟು ಮಂದಿ. ಒಟ್ಟಿನಲ್ಲಿ ಈ ಸಮಸ್ಯೆ ತಾರಕಕ್ಕೇರಲು ಸಾಕಷ್ಟು ಕಾರಣಗಳಿದ್ದವು. ಹೀಗೆ ಟಿಪ್ಪರ್‌ಗಳಿಗೆ ಕಸ ಹಾಕಲು ವಿಫಲರಾದವರೆಲ್ಲಾ ಅದನ್ನು ರಸ್ತೆಬದಿಯಲ್ಲೋ, ಹತ್ತಿರದ ಖಾಲಿ ನಿವೇಶನದಲ್ಲೋ, ಬೀಗ ಹಾಕಿರುವ ಮನೆಯ ಎದುರಿಗೋ, ಕೂಡುರಸ್ತೆಯಲ್ಲೋ ಎಸೆದು ಕೈತೊಳೆದುಕೊಳ್ಳುತ್ತಿದ್ದರು. ಈ ಘನಂದಾರಿ ಕೆಲಸ ಬಹುತೇಕ ನೆರವೇರುತ್ತಿದ್ದುದು ‘ಜಗವೆಲ್ಲ ಮಲಗಿರುವ’ ಮಧ್ಯರಾತ್ರಿಯಲ್ಲಿ.

ಇಷ್ಟಾಗಿಯೂ ಯಾರಾದರೂ ಪ್ರಶ್ನಿಸಿದರೆ, ‘ಅದನ್ನು ಕೇಳಲು ನೀವ್ಯಾರು? ಪಾಲಿಕೆಯವರು ಇದನ್ನು ನೋಡಿಕೊಳ್ಳುತ್ತಾರೆ, ಅವರಿಗೆ ನಾವು ಉತ್ತರಿಸುತ್ತೇವೆ’ ಎಂಬ ಉದ್ಧಟ ಪ್ರತಿಕ್ರಿಯೆ! ಜನರು ಹೀಗೆ ಬೇಕಾಬಿಟ್ಟಿಯಾಗಿ ಕಸವನ್ನು ಎಸೆಯುವ ಸ್ಥಳಗಳಲ್ಲಿ ‘ಇಲ್ಲಿ ಕಸವನ್ನು ಎಸೆದರೆ ದಂಡ ವಿಧಿಸಲಾಗುವುದು, ಈ ಸ್ಥಳವು ಸಿಸಿಟಿವಿಯ ಕಣ್ಗಾವಲಿನಲ್ಲಿದೆ’ ಎಂದು ದಪ್ಪಕ್ಷರಗಳಲ್ಲಿ ಬರೆದಿದ್ದರೂ ಅದನ್ನು ಲೆಕ್ಕಿಸುತ್ತಿದ್ದವರು ಕಮ್ಮಿಯೇ.

ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ, ‘ಜಿಬಿಎ’ ವತಿಯಿಂದ ‘ಕಸ ಸುರಿಯುವ ಹಬ್ಬ’ ಶುರುವಾಯಿತು ಎನ್ನಿ. ‘ಜಿಬಿಎ’ ಕೈಗೊಂಡ ಈ ಕ್ರಮ ಮೇಲ್ನೋಟಕ್ಕೆ ಸ್ವಲ್ಪ ಅತಿರೇಕದ್ದು ಎನಿಸಬಹುದು; ಪ್ರಜ್ಞಾ ವಂತರು ಎಂಬ ಹಣೆಪಟ್ಟಿ ನೇತು ಹಾಕಿಕೊಂಡವರು ಇದನ್ನು ವಿರೋಧಿಸಬಹುದು, ‘ಪರ್ಯಾಯ ಮಾರ್ಗವನ್ನು ಹುಡುಕಬಹುದಿತ್ತು’ ಎಂದು ವಾದಿಸಬಹುದು.

ಆದರೆ, ‘ಇದು ಅನ್ಯಮಾರ್ಗವಿಲ್ಲದೆ ಕೈಗೊಂಡ ಕ್ರಮ’ ಎನ್ನುತ್ತದೆ ‘ಜಿಬಿಎ’. ಅದು ಹೇಳುವುದರಲ್ಲೂ ಅರ್ಥವಿದೆ. ಏಕೆಂದರೆ ಇಂಥ ಕ್ರಮವನ್ನು ಕೈಗೊಳ್ಳುವುದಕ್ಕೂ ಮುನ್ನ ‘ಜಿಬಿಎ’ ಸಾಕಷ್ಟು ಆಲೋಚಿಸಿದೆ, ಜನರನ್ನೂ ಎಚ್ಚರಿಸಿದೆ. ಕೊನೆಗೆ ಏನೂ ಫಲ ಸಿಕ್ಕದ ಕಾರಣ, ಅನಿವಾರ್ಯವಾಗಿ ಈ ಹಾದಿಯನ್ನು ‘ಜಿಬಿಎ’ ತುಳಿದಿದೆ. ಬೆಂಗಳೂರು ರಸ್ತೆಗಳಲ್ಲಿ ಮುಖಕ್ಕೆ ರಾಚುವಂತಿರುವ ಹೊಂಡ ಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿರುವುದಕ್ಕೆ ಮಹಾನಗರ ಪಾಲಿಕೆ ಅಥವಾ ‘ಜಿಬಿಎ’ ದೋಷಿ ಇರಬಹುದು; ಆದರೆ ನಗರದಾದ್ಯಂತ ಕಸ/ ತ್ಯಾಜ್ಯವು ಚೆಲ್ಲಾಪಿಲ್ಲಿಯಾಗಿ ಬೀಳುವಂತಾಗಿರುವು ದರಲ್ಲಿ ಜನರ ಪಾತ್ರವೇ ಹೆಚ್ಚು.

ಇದು ಜನರಲ್ಲಿ ನಾಗರಿಕ ಪ್ರಜ್ಞೆಯು ಕುಸಿತವಾಗಿರುವುದರ ಸಂಕೇತ ಎನ್ನಬಹುದು. ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆದುಹೋಗುವ ವಿಷಯದಲ್ಲಿ ಸಾಮಾನ್ಯವಾಗಿ ಸಮಾಜದ ಕೆಳಸ್ತರದ ಮತ್ತು ಆರ್ಥಿಕವಾಗಿ ದುರ್ಬಲರಾದ ಜನರನ್ನು ದೂಷಿಸಲಾಗುತ್ತದೆ ಹಾಗೂ ಸುಶಿಕ್ಷಿತರು, ಆರ್ಥಿಕ ವಾಗಿ ಸಬಲರು ಎನಿಸಿಕೊಂಡವರಿಗೆ ‘ಕ್ಲೀನ್ ಚಿಟ್’ ನೀಡಲಾಗುತ್ತದೆ.

ವಿಚಿತ್ರವೆಂದರೆ, ವಿದ್ಯಾವಂತರು/ಪ್ರಜ್ಞಾವಂತರು ಎನಿಸಿಕೊಂಡ ಸಾಕಷ್ಟು ಮಂದಿಯೂ ಈ ಬಾಬತ್ತಿನಲ್ಲಿ ಪಾಲುದಾರರೇ; ಇಂಥವರು ಬೈಕ್‌ನಲ್ಲಿ ಹೋಗುತ್ತಾ ಕಸದ ಚೀಲವನ್ನು ಮೆಲ್ಲಗೆ ರಸ್ತೆಯ ಬದಿಗೆ ಒಗೆಯುವುದು, ಕಾರ್‌ನಲ್ಲಿ ಹೋಗುವಾಗ ಕಿಟಕಿಯ ಗಾಜನ್ನು ಮೆಲ್ಲಗೆ ಇಳಿಸಿ ಕಸದ ಚೀಲವನ್ನು ಗಟಾರಕ್ಕೆ ಒಗೆಯುವುದು ತೀರಾ ಸಾಮಾನ್ಯವಾದ ದೃಶ್ಯ.

ಇತ್ತೀಚೆಗೆ ಬಡಾವಣೆಯೊಂದರಲ್ಲಿ, ಕಸದ ಚೀಲವನ್ನೆಸೆದ ಕಾರನ್ನು ತಡೆದು ನಿಲ್ಲಿಸಿ, ಅವರು ಒಗೆದ ಕಸವನ್ನು ಅವರ ಕಾರಿನಲ್ಲಿಯೇ ತುರುಕಿ ಕಳಿಸಿದ ಘಟನೆ ನಡೆದಿದೆ. ಆ ಕಾರಿನವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ, ಈ ದೃಶ್ಯಾವಳಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಿಲ್ಲ.

ಇಂಥ ಬೆಳವಣಿಗೆಗಳು ನಿಲ್ಲಬೇಕು ಎಂದಾದಲ್ಲಿ, ಪ್ರತಿದಿನವೂ ನಿಗದಿತ ಸಮಯಕ್ಕೆ ಮನೆ ಮುಂದೆಯೇ ಬರುವ ಆಟೋ-ಟಿಪ್ಪರ್‌ಗಳಿಗೆ ಕಸವನ್ನು ಹಾಕಬೇಕು, ಹಸಿ ಮತ್ತು ಒಣಕಸವನ್ನು ವಿಂಗಡಣೆ ಮಾಡಿ ಹಾಕಬೇಕು. ಜತೆಗೆ, ಟಿಪ್ಪರ್‌ಗಳ ಸಮಯಪಾಲನೆ ಹಾಗೂ ಕಾರ್ಯನಿರ್ವಹಣೆ ಯ ಮೇಲೆ ಹದ್ದಿನಕಣ್ಣು ಇಡುವ ಅಗತ್ಯವೂ ಇದೆ.

ಕಸದ ವಿಲೇವಾರಿಯು ನಗರಪಾಲಿಕೆ ಮತ್ತು ಜನತೆಯ ಜಂಟಿ ಹೊಣೆಯಾಗಿರುತ್ತದೆ ಎಂಬುದನ್ನು ಮರೆಯದಿರೋಣ.

(ಲೇಖಕರು ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)