ಸಂಪಾದಕರ ಸದ್ಯಶೋಧನೆ
ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸನಾತನ ಧರ್ಮದ ಇತಿಹಾಸದಲ್ಲಿ ಗೋರಖಪುರದ ಗೀತಾ ಪ್ರೆಸ್‌ಗೆ ಅತ್ಯಂತ ಮಹತ್ವದ ಸ್ಥಾನವಿದೆ. ಇದು ಕೇವಲ ಒಂದು ಮುದ್ರಣಾಲಯ ಅಥವಾ ಪ್ರಕಾಶನ ಸಂಸ್ಥೆಯಲ್ಲ, ಇದು ಕಳೆದ ಒಂದು ಶತಮಾನದಿಂದ ಭಾರತೀಯ ಮೌಲ್ಯಗಳನ್ನು ಮನೆಮನೆಗೆ ತಲುಪಿಸುತ್ತಿರುವ ಒಂದು ಸಾಂಸ್ಕೃತಿಕ ಆಂದೋಲನವಾಗಿದೆ.
ಶ್ರೀಮದ್ ಭಗವದ್ಗೀತೆ, ರಾಮಾಯಣ, ಉಪನಿಷತ್ತುಗಳು ಮತ್ತು ಪುರಾಣಗಳಂಥ ಪವಿತ್ರ ಗ್ರಂಥಗಳನ್ನು ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಗೀತಾ ಪ್ರೆಸ್ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಗೀತಾ ಪ್ರೆಸ್ ಅನ್ನು 1923ರಲ್ಲಿ ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ಹಿಂದೆ ಒಂದು ಆಸಕ್ತಿದಾಯಕ ಕಥೆಯಿದೆ. ಮೂಲತಃ ರಾಜಸ್ಥಾನದವ ರಾದ ಮತ್ತು ಕೋಲ್ಕತ್ತಾದಲ್ಲಿ ವ್ಯಾಪಾರ ಮಾಡುತ್ತಿದ್ದ ಜಯದಯಾಲ್ ಗೋಯಂದಕಾ ಅವರು ಗೀತೆಯ ಪರಮ ಭಕ್ತರಾಗಿದ್ದರು. ಅವರು ಗೀತೆಯ ಸಾರವನ್ನು ಪ್ರಚಾರ ಮಾಡಲು ಸತ್ಸಂಗಗಳನ್ನು ನಡೆಸುತ್ತಿದ್ದರು.
ಒಮ್ಮೆ ಅವರು ಮುದ್ರಿಸಿದ ಗೀತೆಯ ಪ್ರತಿಯಲ್ಲಿ ಅನೇಕ ತಪ್ಪುಗಳನ್ನು ಕಂಡು ಬೇಸರ ಗೊಂಡರು. ಪರಿಶುದ್ಧವಾದ ಮತ್ತು ದೋಷರಹಿತವಾದ ಧಾರ್ಮಿಕ ಗ್ರಂಥಗಳನ್ನು ಮುದ್ರಿಸ ಬೇಕೆಂಬ ಸಂಕಲ್ಪವನ್ನು ಅವರು ಮಾಡಿದರು. ಈ ಉದ್ದೇಶಕ್ಕಾಗಿ, ಉತ್ತರ ಪ್ರದೇಶದ ಗೋರಖಪುರದಲ್ಲಿ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ಕೇವಲ ಹತ್ತು ರುಪಾಯಿ ಬಾಡಿಗೆಯೊಂದಿಗೆ ಗೀತಾ ಪ್ರೆಸ್ ಅನ್ನು ಪ್ರಾರಂಭಿಸಲಾಯಿತು.
ಇದನ್ನೂ ಓದಿ: Vishweshwar Bhat Column: ಎಂ.ಜಿ.ದೇವಸಹಾಯಂ ಗೊತ್ತಾ ?
ಅಂದಿನಿಂದ ಇಂದಿನವರೆಗೆ, ಈ ಸಂಸ್ಥೆಯು ಕೋಟ್ಯಂತರ ಪುಸ್ತಕಗಳನ್ನು ಮುದ್ರಿಸಿ ವಿತರಿಸಿದೆ. ಗೀತಾ ಪ್ರೆಸ್‌ನ ಯಶಸ್ಸಿನ ಹಿಂದೆ ಇಬ್ಬರು ಮಹಾನ್ ದಾರ್ಶನಿಕರ ತ್ಯಾಗ ಮತ್ತು ಪರಿಶ್ರಮವಿದೆ. ಒಬ್ಬರು ಸೇಠ್ ಜಯದಯಾಲ್ ಗೋಯಂದಕಾ. ಇವರು ಸಂಸ್ಥೆಯ ಸಂಸ್ಥಾ ಪಕರು. ಇವರ ದೂರದೃಷ್ಟಿಯಿಂದಾಗಿ ಇಂದು ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿ ಯೂ ಗೀತಾ ಪ್ರೆಸ್‌ನ ಪುಸ್ತಕಗಳು ಕಂಡುಬರುತ್ತಿವೆ.
ಇನ್ನೊಬ್ಬರು ಹನುಮಾನ್ ಪ್ರಸಾದ್ ಪೋದಾರ್. ಇವರು ಗೀತಾ ಪ್ರೆಸ್‌ನ ಪ್ರಸಿದ್ಧ ಮಾಸ ಪತ್ರಿಕೆಯಾದ ‘ಕಲ್ಯಾಣ’ನ ಸ್ಥಾಪಕ ಸಂಪಾದಕರಾಗಿದ್ದರು. ತಮ್ಮ ಜೀವಿತಾವಧಿ ಯನ್ನು ಧಾರ್ಮಿಕ ಸಾಹಿತ್ಯದ ಸೇವೆಗಾಗಿ ಮುಡಿಪಾಗಿಟ್ಟ ಇವರು, ಗೀತಾ ಪ್ರೆಸ್ ಅನ್ನು ವಿಶ್ವವಿಖ್ಯಾತ ಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗೀತಾ ಪ್ರೆಸ್ ಲಾಭೋದ್ದೇಶವಿಲ್ಲದ ಒಂದು ಸಂಸ್ಥೆಯಾಗಿದೆ. ಇದರ ಮುಖ್ಯ ಉದ್ದೇಶ- ಸನಾತನ ಧರ್ಮದ ಪ್ರಚಾರ. ಧಾರ್ಮಿಕ ಗ್ರಂಥಗಳನ್ನು ಜನಸಾಮಾನ್ಯರಿಗೆ ತಲುಪಿಸು ವುದು. ಅತ್ಯಂತ ಉತ್ತಮ ಗುಣಮಟ್ಟದ ಕಾಗದ ಮತ್ತು ಬೈಂಡಿಂಗ್ ಬಳಸಿದರೂ, ಪುಸ್ತಕಗಳ ಬೆಲೆ ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆಯಿರುತ್ತದೆ.
ಬಡವರಿಗೂ ಧಾರ್ಮಿಕ ಜ್ಞಾನ ಸಿಗಬೇಕು ಎಂಬುದು ಮತ್ತು ಗ್ರಂಥಗಳಲ್ಲಿ ಯಾವುದೇ ಮುದ್ರಣ ದೋಷಗಳಿಲ್ಲದಂತೆ ನೋಡಿಕೊಳ್ಳುವುದು, ಮೂಲ ಸಂಸ್ಕೃತ ಶ್ಲೋಕಗಳೊಂದಿಗೆ ನಿಖರವಾದ ಅನುವಾದವನ್ನು ನೀಡುವುದು ಇದರ ಆಶಯ. ಗೀತಾ ಪ್ರೆಸ್‌ನ ಅತ್ಯಂತ ಜನಪ್ರಿಯ ಪ್ರಕಟಣೆಯೆಂದರೆ ‘ಕಲ್ಯಾಣ’ ಮಾಸಪತ್ರಿಕೆ.
1927ರಲ್ಲಿ ಪ್ರಾರಂಭವಾದ ಈ ಹಿಂದಿ ಪತ್ರಿಕೆಯು ಇಂದಿಗೂ ಲಕ್ಷಾಂತರ ಚಂದಾದಾರ ರನ್ನು ಹೊಂದಿದೆ. ಇದರಲ್ಲಿ ಬರುವ ಲೇಖನಗಳು ಭಕ್ತಿ, ಜ್ಞಾನ, ವೈರಾಗ್ಯ ಮತ್ತು ಧರ್ಮದ ವಿಷಯಗಳನ್ನು ಒಳಗೊಂಡಿರುತ್ತವೆ. ಮಹಾತ್ಮ ಗಾಂಧಿ, ಡಾ.ರಾಜೇಂದ್ರ ಪ್ರಸಾದ್ ಅವರಂಥ ಗಣ್ಯರು ಕೂಡ ಈ ಪತ್ರಿಕೆಗೆ ಲೇಖನಗಳನ್ನು ಬರೆದಿದ್ದಾರೆ.
ಇಂಗ್ಲಿಷ್ ಓದುಗರಿಗಾಗಿ ‘ಕಲ್ಯಾಣ್-ಕಲ್ಪತರು’ ಎಂಬ ಪತ್ರಿಕೆಯನ್ನು ಸಹ ಪ್ರಕಟಿಸಲಾಗು ತ್ತದೆ. ಗೀತಾ ಪ್ರೆಸ್ ಇತರ ಪ್ರಕಾಶನ ಸಂಸ್ಥೆಗಳಿಗಿಂತ ಏಕೆ ಭಿನ್ನವಾಗಿದೆ ಎಂಬುದಕ್ಕೆ ಕೆಲವು ಕಾರಣಗಳಿವೆ. ಕಳೆದ ನೂರು ವರ್ಷಗಳಲ್ಲಿ, ಗೀತಾ ಪ್ರೆಸ್ ತನ್ನ ಪುಸ್ತಕಗಳಲ್ಲಿ ಅಥವಾ ‘ಕಲ್ಯಾಣ್’ ಪತ್ರಿಕೆಯಲ್ಲಿ ಯಾವುದೇ ಹೊರಗಿನ ಜಾಹೀರಾತನ್ನು ಪ್ರಕಟಿಸಿಲ್ಲ.
ಆದಾಯಕ್ಕಾಗಿ ಜಾಹೀರಾತನ್ನು ಅವಲಂಬಿಸದಿರುವುದು ಇಂದಿನ ವಾಣಿಜ್ಯ ಯುಗದಲ್ಲಿ ಒಂದು ವಿಸ್ಮಯವೇ ಸರಿ. ಸಂಸ್ಥೆಯು ತನ್ನ ನಿರ್ವಹಣಾ ವೆಚ್ಚಕ್ಕಾಗಿ ಸಾರ್ವಜನಿಕರಿಂದ ದೇಣಿಗೆಯನ್ನು ಯಾಚಿಸುವುದಿಲ್ಲ. ಪುಸ್ತಕಗಳ ಮಾರಾಟದಿಂದ ಬರುವ ಅಲ್ಪ ಆದಾಯ ಮತ್ತು ಟ್ರಸ್ಟಿಗಳ ನೆರವಿನಿಂದಲೇ ಇದು ನಡೆಯುತ್ತದೆ.
ಇಲ್ಲಿ ಪುಸ್ತಕಗಳು ಕೇವಲ ಹಿಂದಿ ಅಥವಾ ಸಂಸ್ಕೃತದಲ್ಲಿ ಮಾತ್ರವಲ್ಲದೆ, ಕನ್ನಡ, ತಮಿಳು, ತೆಲುಗು, ಮರಾಠಿ, ಗುಜರಾತಿ, ಒಡಿಯಾ, ಬಂಗಾಳಿ, ಇಂಗ್ಲಿಷ್ ಸೇರಿದಂತೆ ನೇಪಾಳಿ ಭಾಷೆ ಯಲ್ಲಿಯೂ ಲಭ್ಯವಿವೆ. ಇಲ್ಲಿನ ವಾತಾವರಣವು ದೇವಸ್ಥಾನದಷ್ಟೇ ಪವಿತ್ರವಾಗಿದೆ. ಪ್ರತಿದಿನ ಕೆಲಸ ಪ್ರಾರಂಭಿಸುವ ಮೊದಲು ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ.