ಸಂಗತ
ಡಾ.ವಿಜಯ್ ದರಡಾ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಿಲ್ಲಿಸಿರ ಬಹುದು. ಆದರೆ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಉಗ್ರರನ್ನು ನರಕಕ್ಕೆ ಕಳಿಸುವವರು ಯಾರು? ಉಗ್ರರನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸುವವರು ಯಾರು?
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ಅಮಾನುಷವಾಗಿ ದಾಳಿ ನಡೆಸಿದ ಬಳಿಕ ನಾನು ಇದೇ ಅಂಕಣದಲ್ಲಿ ತೀವ್ರ ಸಿಟ್ಟು ಹೊರ ಹಾಕಿದ್ದೆ. ‘ನಮ್ಮ ರಕ್ತ ಕುದಿಯು ತ್ತಿದೆ. ಇದಕ್ಕೆ ಏನಾದರೂ ಮಾಡಲೇಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ’ ಎಂದು ಬರೆದಿದ್ದೆ. ನಂತರ ಪಾಕಿಸ್ತಾನದ ಕುಚೋದ್ಯಕ್ಕೆ ಭಾರತ ನೀಡಿದ ಉತ್ತರವಿದೆಯಲ್ಲ, ಅದನ್ನು ನೋಡಿದರೆ ಪ್ರತಿಯೊಬ್ಬ ಭಾರತೀಯ ಏನು ಬಯಸುತ್ತಿದ್ದನೋ ಅದನ್ನೇ ನಮ್ಮ ಸೇನಾಪಡೆಗಳು ಮಾಡಿವೆ ಅನ್ನಿಸಿತು.
ಉಗ್ರರು ದಾಳಿ ನಡೆಸಿದ ತಕ್ಷಣವೇ ಭಾರತ ತನ್ನ ತಾಕತ್ತೇನು ಎಂಬುದನ್ನು ತೋರಿಸಲು ನಿರ್ಧರಿಸಿ ದ್ದಿರಬೇಕು. ಅದಕ್ಕೆ ತಕ್ಕಂತೆ ಪಾಕ್‌ಗೆ ಚೆನ್ನಾಗಿ ತದುಕಿತು. ಆದರೆ, ಇದ್ದಕ್ಕಿದ್ದಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿ, ಭಾರತ ಮತ್ತು ಪಾಕ್ ದೇಶಗಳು ತಕ್ಷಣ ದಿಂದ ಜಾರಿಗೆ ಬರು ವಂತೆ ಕದನ ವಿರಾಮಕ್ಕೆ ಒಪ್ಪಿವೆ ಎಂದು ಘೋಷಿಸಿಬಿಟ್ಟರು. ಅದನ್ನು ನೋಡಿ ಎಲ್ಲರಿಗೂ ಶಾಕ್ ಆಯಿತು.
ನಿಜಕ್ಕೂ ಇಲ್ಲಿ ಏನಾಗುತ್ತಿದೆ? ಭಾರತ ಮತ್ತು ಪಾಕಿಸ್ತಾನದ ಸರ್ಕಾರ ಅಥವಾ ಸೇನೆಯವರು ಘೋಷಣೆ ಮಾಡಬೇಕಿದ್ದ ಕದನ ವಿರಾಮವನ್ನು ಏಕಾಏಕಿ ಟ್ರಂಪ್ ಹೇಗೆ ಘೋಷಣೆ ಮಾಡಲು ಸಾಧ್ಯ ಎಂದು ಎಲ್ಲರೂ ಬೆರಗಾದರು. ಆದರೆ ಟ್ರಂಪ್‌ಗೆ ಹೇಗೆ ಜಾದೂ ಮಾಡಬೇಕೆಂದು ಗೊತ್ತಿದೆ. ಅವರ ಅಮೆರಿಕನ್ ಅಧಿಕಾರಿಗಳ ತಂಡ ಭಾರತ ಮತ್ತು ಪಾಕ್‌ನ ಉನ್ನತ ಅಧಿಕಾರಿಗಳು ಮತ್ತು ನಾಯಕರ ಜೊತೆಗೆ ಸತತ ಮಾತುಕತೆ ನಡೆಸಿತ್ತು.
ಇದನ್ನೂ ಓದಿ: Dr Vijay Darda Column: ಬಹಳ ವರ್ಷಗಳಿಂದ ಕಾಯುತ್ತಿದ್ದ ಜಾತಿ ಗಣತಿ
ಈಗಿನ ಒಟ್ಟಾರೆ ಬೆಳವಣಿಗೆಗಳು ಚೀನಾದ ಕಪಿಮುಷ್ಠಿಗೆ ಸಿಕ್ಕರೆ ಏನು ಅಧ್ವಾನವಾಗುತ್ತದೆ ಎಂಬು ದನ್ನು ಆ ತಂಡ ಭಾರತಕ್ಕೆ ಮನವರಿಕೆ ಮಾಡಿಕೊಟ್ಟಿತ್ತು. ಹಾಗೆ ಆಗಬಾರದು ಅಂದರೆ ಕದನ ವಿರಾಮ ಅನಿವಾರ್ಯ ಎಂದೂ ತಿಳಿಹೇಳಿತ್ತು. ಕದನ ವಿರಾಮಕ್ಕೆ ಒಪ್ಪಿಕೊಳ್ಳುವುದಕ್ಕೂ ಮೊದಲೇ ಭಾರತವು, ‘ಮುಂದೇನಾದರೂ ಭಯೋತ್ಪಾದಕ ದಾಳಿ ನಡೆದರೆ ಅದನ್ನು ನಾವು ಯುದ್ಧವೆಂದು ಪರಿಗಣಿಸುತ್ತೇವೆ’ ಎಂದು ತೀಕ್ಷ್ಣವಾದ ಘೋಷಣೆ ಮಾಡಿತ್ತು.
ಯುದ್ಧ ಒಳ್ಳೆಯದಲ್ಲ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಯುದ್ಧಕ್ಕಿಂತ ಮಾತುಕತೆಯೇ ಒಳ್ಳೆಯ ಆಯ್ಕೆ ಎಂದು ನಾನು ಯಾವತ್ತೂ ಹೇಳುತ್ತೇನೆ. ಆದರೆ ಪಾಕಿಸ್ತಾನದ ಬಾಲ ಡೊಂಕು. ಅದು ನೇರವಾಗುತ್ತದೆ ಎಂದು ಯಾರೂ ನಿರೀಕ್ಷಿಸುವಂತಿಲ್ಲ. ಅದನ್ನು ನೇರಗೊಳಿಸುವುದು ಹೇಗೆಂಬುದು ಬಹುಶಃ ಯಾರಿಗೂ ಗೊತ್ತಿಲ್ಲ. ಬೇಕಾದರೆ ನೀವೇ ನೋಡಿ, ಶನಿವಾರ ಸಂಜೆ ಕದನ ವಿರಾಮವನ್ನು ಘೋಷಿಸಿದ ನಂತರವೂ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದಿಂದ ಹಿಡಿದು ರಾಜಸ್ಥಾನದವರೆಗೆ ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿತು.
ನಮ್ಮ ಸೇನಾಪಡೆಗಳು ಆ ಡ್ರೋನ್‌ಗಳನ್ನು ಹೊಡೆದುಹಾಕಿದವು. ಆದರೆ ಪಾಕಿಸ್ತಾನದ ವಂಚಕತನ ಬಟಾಬಯಲಾಯಿತು. ನಾನು ಈ ಅಂಕಣ ಬರೆಯುವಾಗ ದೇಶದ ಗಡಿಗಳು ಶಾಂತವಾಗಿದ್ದವು. ಆದರೆ ಈ ಶಾಂತಿ ಎಷ್ಟು ದಿನ ಉಳಿಯುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥ ಜನರಲ್ ಮುನೀರ್ ಆ ದೇಶದ ಪ್ರಧಾನಿ ಶೆಹಬಾಜ್ ಷರೀಫ್ ರನ್ನು ತನ್ನ ಕಪಿಮುಷ್ಠಿಯಲ್ಲಿರಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಹಾಗೂ ಸಹೋದರ ನವಾಜ್ ಷರೀಫ್ ಕೂಡ ಶೆಹಬಾಜ್‌ಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದಾರೆ.

ಆದರೆ, ತಡರಾತ್ರಿಯಲ್ಲಿ ಪ್ರಧಾನಿ ಶೆಹಬಾಜ್ ಭಾಷಣ ಮಾಡಿ ಜನರಲ್ ಮುನೀರ್ ಬಗ್ಗೆ
ಹೊಗಳಿಕೆಯ ಮಾತನಾಡುತ್ತಾರೆ ಅಂದರೆ ಅವರು ತನ್ನ ಸರಕಾರವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರಿಗೆ ಇಮ್ರಾನ್ ಖಾನ್ ರೀತಿ ಆಗುವುದು ಬೇಕಿಲ್ಲ!
ಪ್ರಧಾನಿಯಾಗಿದ್ದ ಇಮ್ರಾನ್ ಖಾನ್‌ರನ್ನು ಪದಚ್ಯುತಗೊಳಿಸಿ ಜೈಲಿಗೆ ಹಾಕಿದ್ದು ಇದೇ ಪಾಕಿಸ್ತಾನದ ಸೇನೆ. ಪಾಕಿಸ್ತಾನದಲ್ಲಿ ಸೇನೆ ಹಾಗೂ ಗುಪ್ತಚರ ದಳವಾದ ಐಎಸ್‌ಐ ಏಜೆನ್ಸಿಯೇ ಸರಕಾರವನ್ನು ನಿಯಂತ್ರಿಸುತ್ತವೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಮುನೀರ್ ಒಬ್ಬ ವಂಚಕ. ಆತ ಏಕಕಾಲಕ್ಕೆ ಅಮೆರಿಕ ಮತ್ತು ಚೀನಾ ಎರಡೂ ದೇಶದಿಂದ ಲಾಭ ಮಾಡಿಕೊಳ್ಳಲು ನೋಡು ತ್ತಿದ್ದಾನೆ.
ಇತ್ತೀಚೆಗೆ ಐಎಂಎಫ್ ನಿಂದ ಪಾಕಿಸ್ತಾನಕ್ಕೆ ಮಂಜೂರಾದ 103 ಬಿಲಿಯನ್ ಡಾಲರ್ ಸಾಲಕ್ಕೆ ವಿಧಿಸಿರುವ ಷರತ್ತು ಏನು ಗೊತ್ತಾ? ಒಂದೋ ಪಾಕಿಸ್ತಾನವು ಕದನ ವಿರಾಮಕ್ಕೆ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಐಎಂಎ-ನ ಸಾಲಕ್ಕೆ ಎದುರು ನೋಡದೆ ತೆಪ್ಪಗಿರಬೇಕು. ಕೊನೆಗೆ ಅನಿವಾರ್ಯವಾಗಿ ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿತು. ಒಂದು ವೇಳೆ ಕದನ ವಿರಾಮಕ್ಕೆ ಪಾಕಿಸ್ತಾನ ಒಪ್ಪಿ ಕೊಂಡಿರಲಿಲ್ಲ ಅಂದುಕೊಳ್ಳಿ. ಆಗ, ಭಾರತದ ವಾಯುಪಡೆ ಪಾಕಿಸ್ತಾನದ ಮೇಲೆ ನಡೆಸಿದ ದಾಳಿ ಯನ್ನೇನಾದರೂ ಮುಂದುವರಿಸಿದ್ದರೆ ಆ ದೇಶಕ್ಕೆ ಬದುಕಲು ಸಾಧ್ಯವಿತ್ತೇ? ಪಾಕಿಸ್ತಾನದ ಏರ್ ಡಿಫೆನ್ಸ್ ಸಿಸ್ಟಮ್ ಅನ್ನೇ ಭಾರತ ಹೊಡೆದುಹಾಕಿತ್ತು.
ಈ ವಿಷಯಕ್ಕೆ ಸಂಬಂಧಿಸಿದ ಇನ್ನೊಂದು ಕುತೂಹಲಕರ ಸಂಗತಿಯೆಂದರೆ, ಭಾರತವು ಹೊಡೆದು ಹಾಕಿದ ಎಚ್‌ಕ್ಯೂ-9 ಹೆಸರಿನ ಏರ್ ಡಿಫೆನ್ಸ್ ಸಿಸ್ಟಂ ಚೀನಾದ್ದು! ಚೀನಾದವರು ಪಾಕಿಸ್ತಾನಕ್ಕೆ ಅದನ್ನು ಪೂರೈಸಿದ್ದರು. ಈ ಸಿಸ್ಟಮ್ ಅನ್ನು ಚೀನಾವು ಜಗತ್ತಿನಾದ್ಯಂತ ಮಾರಾಟ ಮಾಡಲು ಯತ್ನಿಸುತ್ತಿತ್ತು. ಈಗ ಪಾಕಿಸ್ತಾನದಲ್ಲಿ ಈ ಸಿಸ್ಟಮ್ ವಿಫಲವಾದ ಮೇಲೆ ಇನ್ನಾವ ದೇಶಗಳು ಅದನ್ನು ಕೊಳ್ಳುತ್ತವೆ? ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ಕಾಶ್ಮೀರದ ಜನರು ಬಹಿರಂಗ ವಾಗಿ ತಮ್ಮ ಬೆಂಬಲಕ್ಕೆ ಬರುತ್ತಾರೆ ಎಂದು ಪಾಕ್ ಭಾವಿಸಿತ್ತು.
ಆದರೆ ಹಾಗೆ ಆಗಲೇ ಇಲ್ಲ. ವಾಸ್ತವವಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಪಾಕಿಸ್ತಾನವನ್ನು ಬಹಿರಂಗವಾಗಿಯೇ ವಿರೋಽಸಿದರು. ನಾನಿಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರನ್ನು ಶ್ಲಾಘಿಸ ಬೇಕು. ಅವರು ಕಾಶ್ಮೀರವನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ. ಇಡೀ ಬೆಳವಣಿಗೆಯಲ್ಲಿ ಸ್ವಲ್ಪ ಹಿಂದೆ ಬಿದ್ದಿರುವುದು ಕಾಂಗ್ರೆಸ್ ಪಕ್ಷ. ದುರದೃಷ್ಟವಶಾತ್ ಕಾಶ್ಮೀರದ ಮೇಲಿನ ದಾಳಿ ಮತ್ತು ನಂತರದ ಬೆಳವಣಿಗೆಯ ಕುರಿತು ಯಾವ ನಿಲುವನ್ನು ಕಾಂಗ್ರೆಸ್ ಪಕ್ಷ ಕೈಗೊಳ್ಳಬೇಕಿತ್ತೋ ಅದನ್ನು ಕೈಗೊಳ್ಳಲಿಲ್ಲ.
ನಿಜ ಹೇಳಬೇಕೆಂದರೆ, ಒಮರ್ ಅಬ್ದುಲ್ಲಾ ಮತ್ತು ಅಸಾದುದ್ದೀನ್ ಒವೈಸಿ ಪಾಕಿಸ್ತಾನಕ್ಕೆ ಅದರ ಜಾಗ ಯಾವುದು ಎಂಬುದನ್ನು ತೋರಿಸುವ ಮೂಲಕ ಭಾರತೀಯರ ಮನ ಗೆದ್ದರು. ಭಾರತೀಯ ಸೇನೆಯಿಂದ ಕರ್ನಲ್ ಸೋಫಿಯಾ ಖುರೇಷಿ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಸಂದೇಶ ಸ್ಪಷ್ಟ ವಾಗಿದೆ: ಭಾರತದಲ್ಲಿ ಯಾರು ಯಾವ ಧರ್ಮವನ್ನು ಬೇಕಾದರೂ ಪಾಲಿಸಲಿ, ಒಗ್ಗಟ್ಟಿನ ವಿಷಯ ಬಂದಾಗ ಎಲ್ಲಾ ಭಾರತೀಯರೂ ಒಂದೇ.
ಇನ್ನು ಕದನ ವಿರಾಮದ ವಿಷಯಕ್ಕೆ ಬರೋಣ. ಇದಕ್ಕೆ ಭಾರತ ಒಪ್ಪಿಕೊಂಡಿದ್ದರಲ್ಲಿ ಯಾವುದೇ ವಿಶೇಷವಿಲ್ಲ. ಶಾಂತಿ ಹಾಗೂ ಸಂಘರ್ಷದ ವಿಷಯದಲ್ಲಿ ಶಾಂತಿಯ ಪರವಾಗಿ ನಿಲ್ಲುವುದು ಈ ದೇಶದ ಸಂಸ್ಕೃತಿಯಲ್ಲೇ ಇದೆ. ಅನಾದಿ ಕಾಲದಿಂದಲೂ ಭಾರತ ಶಾಂತಿ ಮತ್ತು ಸಂಘರ್ಷದ ಆಯ್ಕೆ ಯಲ್ಲಿ ಶಾಂತಿಯನ್ನೇ ಆತುಕೊಂಡಿದೆ. ಭಗವಾನ್ ಮಹಾವೀರ, ಭಗವಾನ್ ಬುದ್ಧ ಹಾಗೂ ಮಹಾತ್ಮ ಗಾಂಧಿಯವರ ಶಾಂತಿ ಪ್ರಿಯ ನಾಡು ನಮ್ಮದು.
ನಾವು ‘ವಸುದೈವ ಕುಟುಂಬಕಂ ಎಂಬ ಸಿದ್ಧಾಂತವನ್ನು ಪಾಲಿಸುತ್ತೇವೆ. ಜಗತ್ತೇ ಒಂದು ಕುಟುಂಬ ಎಂದು ನಂಬಿದ್ದೇವೆ. ಭಾರತ ಯಾವತ್ತೂ ತಾನಾಗಿಯೇ ಯಾವುದೇ ದೇಶದ ಮೇಲೆ ದಾಳಿ ನಡೆಸಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ‘ನೀವು ಬದುಕಿ, ಬೇರೆಯವರಿಗೂ ಬದುಕಲು ಬಿಡಿ ಎಂಬ
ಸಿದ್ಧಾಂತವನ್ನು ನಾವು ನಂಬಿದ್ದೇವೆ. ಆದರೆ ಯಾರಾದರೂ ನಮಗೆ ಸವಾಲೊಡ್ಡುವ ಧೈರ್ಯ ತೋರಿಸಿದರೆ ಅದಕ್ಕೆ ಸರಿಯಾದ ತಿರುಗೇಟು ನೀಡುವ ಶಕ್ತಿ ನಮಗಿದೆ. ನಾವು ಸುಲಭಕ್ಕೆ ಸಿಟ್ಟಾಗುವು ದಿಲ್ಲ,
ಆದರೆ ಕೆಣಕಿದರೆ ತಾಂಡವ ನೃತ್ಯವನ್ನೇ ಮಾಡಿಬಿಡುತ್ತೇವೆ! ಕಾಳಿಮಾತೆ ಹೇಗೆ ನಿರ್ದಾಕ್ಷಿಣ್ಯವಾಗಿ ರಾಕ್ಷಸರನ್ನು ಸಂಹಾರ ಮಾಡುತ್ತಿದ್ದಳೋ ಹಾಗೆಯೇ ಭಾರತ ಮಾತೆ ಕೂಡ ನಮ್ಮನ್ನು ಕೆಣಕಿದ ವರನ್ನು ಸುಮ್ಮನೆ ಬಿಡುವುದಿಲ್ಲ.
ಮೊನ್ನೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದಲ್ಲೂ ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಕೊಲ್ಲುವ ಮೂಲಕ ಪಾಕಿಸ್ತಾನವೇ ಮೊದಲಿಗೆ ರಕ್ತ ಹರಿಸಿತು. ಅದಕ್ಕೆ ಭಾರತ ಪ್ರತಿಕ್ರಿಯೆ ನೀಡಿದಾಗ ಸಿಟ್ಟಾದ ಪಾಕಿಸ್ತಾನವು ಅಂತಾರಾಷ್ಟ್ರೀಯ ಗಡಿಯ ಗುಂಟ ಶೆಲ್ ಮತ್ತು ಕ್ಷಿಪಣಿ ದಾಳಿ ನಡೆಸಿ ಪುನಃ 16 ಮಂದಿ ಭಾರತೀಯರನ್ನು ಕೊಂದಿತು. ಅದಕ್ಕೆ ಪ್ರತಿಯಾಗಿ ಭಾರತದ ಸೇನಾಪಡೆಗಳು ಪಾಕ್ ಮೇಲೆ ದಾಳಿ ನಡೆಸಿದರೂ ಆ ದೇಶದಲ್ಲಿರುವ ಒಂದೇ ಒಂದು ನಾಗರಿಕ ವಸತಿಯ ಮೇಲೆ ದಾಳಿ ನಡೆಸಲಿಲ್ಲ. ನಮ್ಮ ಪಡೆಗಳು ನಡೆಸಿದ ಅಷ್ಟೂ ದಾಳಿಗಳು ಭಯೋತ್ಪಾದಕ ರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಾಗಿದ್ದವು.
ಈಗಲೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪಾಕಿಸ್ತಾನದ ಸೇನೆಯು ಭಯೋತ್ಪಾದಕರಿಗೇ ಮೊರೆ ಹೋಗಿದೆ. ತಮ್ಮನ್ನು ಸಾಕಿ ಸಲಹುವ ಸೇನೆಯ ಋಣ ತೀರಿಸಲು ಭಯೋತ್ಪಾದಕರಿಗೆ ಇದೊಂದು ಅವಕಾಶ. ಇದನ್ನು ಅರಿತ ಭಾರತದ ಸೇನಾಪಡೆಗಳು ಭಯೋತ್ಪಾದಕರ ಮನೆಗಳ ಮೇಲೂ ದಾಳಿ ನಡೆಸಿದವು. ಅಂತಹ ಒಂದು ದಾಳಿಯಲ್ಲಿ ಕುಖ್ಯಾತ ಭಯೋತ್ಪಾದಕ ಮಸೂದ್ ಅಜರ್‌ನ ಕುಟುಂಬದ 10 ಮಂದಿ ಸಾವನ್ನಪ್ಪಿದರು.
ಇವರ ಜೊತೆಗೆ ಇನ್ನೂ ಐವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಯಿತು. ಲಷ್ಕರೆ ತಯ್ಬಾದ ಉಗ್ರ ಮುದಸ್ಸರ್ ಖದಿಯಾ ಖಾನ್ ಅಲಿಯಾಸ್ ಅಬು ಜುಂದಾಲ್‌ನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನಿ ಸೇನೆಯು ಗೌರವ ವಂದನೆ ಸಲ್ಲಿಸಿತು. ಜನರಲ್ ಮುನೀರ್, ಪಂಜಾಬ್ ಮುಖ್ಯಮಂತ್ರಿ ಮರ್ಯಾಮ್ ನವಾಜ್ ಮುಂತಾದವರು ಶ್ರದ್ಧಾಂಜಲಿ ಸಲ್ಲಿಸಿದರು.
ಪಾಕಿಸ್ತಾನದ ಮಿಲಿಟರಿ ನಾಯಕರು ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ನಾಯಕ ಹಫೀಜ್ ಮೊಹಮ್ಮದ್ ಜಮೀಲ್, ಕಂದಹಾರ್ ವಿಮಾನ ಹೈಜಾಕ್ ಪ್ರಕರಣದ ರೂವಾರಿ ಮೊಹಮ್ಮದ್ ಯೂಸು- ಅಜರ್, ಮೊಹಮ್ಮದ್ ಹಸನ್ ಖಾನ್, ಲಷ್ಕರ್ ನ ಖಾಲಿದ್ ಅಲಿಯಾಸ್ ಅಬು ಅಕಾಶಾನ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದರು.
ನಮಗೂ ಯುದ್ಧ ಬೇಕಿಲ್ಲ. ಅದರಲ್ಲೇನೂ ಅನುಮಾನವಿಲ್ಲ. ಯುದ್ಧ ನಡೆದರೆ ವ್ಯಾಪಕ ಪ್ರಮಾಣ ದಲ್ಲಿ ಹಾನಿಯಾಗುತ್ತದೆ. ಯುದ್ಧವೆಂದರೆ ವಿನಾಶ. ಹಾಗಂತ ನಾವು ಭಯೋತ್ಪಾದನೆ ಯನ್ನು ಸಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಒಂದು ವಿಷಯವನ್ನು ನಾನು ನೇರವಾಗಿ ಹೇಳುತ್ತೇನೆ. ಪಾಕಿಸ್ತಾನಕ್ಕೆ ನಿಜವಾಗಿಯೂ ಶಾಂತಿ ಬೇಕಿದ್ದರೆ ಮತ್ತು ಭಾರತದ ಉಗ್ರಾವತಾರವನ್ನು ಇನ್ನೊಮ್ಮೆ ನೋಡುವ ಆಸೆ ಇಲ್ಲದಿದ್ದರೆ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ನನ್ನು ನಮಗೆ ಕೊಟ್ಟು ಬಿಡಲಿ. ಜನರಲ್ ಮುನೀರ್, ಕೇಳಿಸಿತಾ? ಹೀಗೆ ಮಾಡುವುದು ನಿಮಗೇ ಒಳ್ಳೆಯದು. ಇಲ್ಲದಿದ್ದರೆ ನಾವು ಸುಮ್ಮನಿರುವುದಿಲ್ಲ, ನೆನಪಿಡಿ!
ಜೈ ಹಿಂದ್ !