ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ಬಹಳ ವರ್ಷಗಳಿಂದ ಕಾಯುತ್ತಿದ್ದ ಜಾತಿ ಗಣತಿ

ಜನ ಗಣತಿಯ ಜೊತೆ ಜಾತಿ ಗಣತಿ ನಡೆಸಿದ ಮೇಲೆ ಕೇಂದ್ರ ಸರಕಾರಕ್ಕೆ ಸಿಗುವ ದತ್ತಾಂಶಗಳನ್ನು ವಿಶ್ಲೇಷಣೆ ನಡೆಸಿದರೆ ಅಭಿವೃದ್ಧಿಯ ಹೊಸ ಮಾದರಿಗಳನ್ನು ಹುಡುಕಬಹುದು. ನಿರ್ಲಕ್ಷಿತ ವರ್ಗಗಳಿಗೆ ಅಭಿವೃದ್ಧಿಯ ಲಾಭ ಸಿಗಬೇಕು ಅಂದರೆ ಜಾತಿ ಗಣತಿ ನಡೆಸುವುದು ಬಹಳ ಮುಖ್ಯ.

ಬಹಳ ವರ್ಷಗಳಿಂದ ಕಾಯುತ್ತಿದ್ದ ಜಾತಿ ಗಣತಿ

Profile Ashok Nayak May 8, 2025 6:46 AM

ಸಂಗತ

ಡಾ.ವಿಜಯ್‌ ದರಡಾ

ಜಾತಿ ವ್ಯವಸ್ಥೆಯನ್ನು, ವರ್ಗ ವ್ಯವಸ್ಥೆಯನ್ನೂ ನಾವು ಎಷ್ಟೇ ಟೀಕಿಸಿದರೂ ನಮ್ಮ ದೇಶದ ಸಾಮಾ ಜಿಕ ವ್ಯವಸ್ಥೆಯಲ್ಲಿ ಜಾತಿಯೆಂಬುದು ವಾಸ್ತವ, ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಕಾಲ ಎಷ್ಟೇ ಮುಂದುವರೆದರೂ, ಜಗತ್ತು ಎಷ್ಟೇ ಆಧುನೀಕರಣಗೊಂಡಿದ್ದರೂ ಸಮಾಜವು ಇವತ್ತಿಗೂ ಜಾತಿ ವ್ಯವಸ್ಥೆಯ ಸುತ್ತ ಗಿರಕಿ ಹೊಡೆಯುತ್ತಲೇ ಇದೆ. ಭಾರತೀಯ ಸಮಾಜ ಈಗಲೂ ಜಾತಿ ಆಧಾರಿತವಾಗಿ ವಿಭಜನೆಗೊಂಡೇ ಇದೆ. ಇಂತಹ ಪರಿಸ್ಥಿತಿ ಯಲ್ಲಿ ದೇಶದಲ್ಲಿರುವ ವಿವಿಧ ಜಾತಿಗಳ ಜನರ ಸಮೀಕ್ಷೆ ನಡೆಯಬೇಕು ಎಂಬ ಕೂಗು ಬಹಳ ವರ್ಷಗಳಿಂದ ಕೇಳಿ ಬರುತ್ತಿತ್ತು. ಜಾತಿಗಳ ಸಮೀಕ್ಷೆ ನಡೆಸಿ, ಯಾವ ಜಾತಿಯ ಜನರು ಎಷ್ಟಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕಾರ್ಯ ನಡೆದರೆ ಸಮಾಜದಲ್ಲಿರುವ ನಿರ್ಲಕ್ಷಿತ ವರ್ಗದವರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ದಂತಾಗುತ್ತದೆ ಎಂದು ಜಾತಿ ಗಣತಿಯ ಪರ ಆಗ್ರಹ ಮಂಡಿಸುವವರು ಹೇಳುತ್ತಾ ಬಂದಿದ್ದರು.

ಇಷ್ಟಕ್ಕೂ ನಮ್ಮ ಕೈಯಲ್ಲಿ ದತ್ತಾಂಶಗಳು ಇದ್ದರೆ ತಾನೇ ದೇಶದಲ್ಲಿ ಯಾವ ಜಾತಿಯವರು ಎಷ್ಟು ಜನರಿದ್ದಾರೆ, ಅವರು ಯಾವ ಪರಿಸ್ಥಿತಿಯಲ್ಲಿದ್ದಾರೆ, ಅವರ ಬದುಕಿನಲ್ಲಿ ಕಳೆದ ಹಲವು ದಶಕಗಳಲ್ಲಿ ಏನು ಬದಲಾವಣೆಯಾಗಿದೆ ಮತ್ತು ಅವರ ಅಗತ್ಯಗಳೇನು ಎಂಬುದು ನಮಗೆ ತಿಳಿಯುವುದು? ಈಗ ತಡವಾಗಿಯಾದರೂ ಕೇಂದ್ರದ ನರೇಂದ್ರ ಮೋದಿ ಸರಕಾರವು ಐತಿಹಾಸಿಕ ನಿರ್ಧಾರ ಕೈಗೊಂಡು ಮುಂದಿನ ಜನ ಗಣತಿಯನ್ನು ಜಾತಿ ಆಧಾರಿತವಾಗಿ ನಡೆಸಲು ತೀರ್ಮಾನಿಸಿದೆ.

ಇದು ಯಶಸ್ವಿಯಾದರೆ ಹೆಚ್ಚು-ಕಮ್ಮಿ ಒಂದು ಶತಮಾನದ ಬಳಿಕ ಇಂತಹದ್ದೊಂದು ಕಸರತ್ತನ್ನು ನಡೆಸಿದಂತಾಗುತ್ತದೆ. ಮೋದಿ ಸರಕಾರದ ಈ ನಿರ್ಧಾರವನ್ನು ನಾನು ಸಂಪೂರ್ಣವಾಗಿ ಬೆಂಬಲಿಸು ತ್ತೇನೆ. ಅದೇ ವೇಳೆ, ಅತ್ಯಂತ ಸೂಕ್ಷ್ಮವಾದ ಈ ವಿಚಾರವನ್ನು ಯಾವುದೇ ರೀತಿಯಲ್ಲೂ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳದಂತೆ ಖಾತ್ರಿಪಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂಬುದನ್ನೂ ಒತ್ತಿ ಹೇಳುತ್ತೇನೆ.

ಇದನ್ನೂ ಓದಿ: Dr Vijay Darda Column: ನಮ್ಮ ರಕ್ತ ಕುದಿಯುತ್ತಿದೆ, ಇದಕ್ಕೊಂದು ಅಂತ್ಯ ಹಾಡೋಣ !

ಅಂದರೆ, ಒಂದು ಸಲ ಜಾತಿಗಳ ಗಣತಿ ಮುಗಿದು ದತ್ತಾಂಶಗಳು ಹೊರಗೆ ಬಂದ ಮೇಲೆ ಅದರ ದುರ್ಲಾಭ ಪಡೆದುಕೊಳ್ಳಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಗಳು ಖಂಡಿತ ನಡೆಯುತ್ತವೆ. ಜಾತಿ ಗಳನ್ನು ಕೇಂದ್ರವಾಗಿರಿಸಿಕೊಂಡೇ ರಾಜಕಾರಣ ನಡೆಸುವ ರಾಜಕೀಯ ಪಕ್ಷಗಳು ಜಾತಿಗಣತಿಯ ಅಂಕಿ-ಅಂಶಗಳಿಗಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿವೆ.

ಬಿಹಾರ ಮತ್ತು ಕರ್ನಾಟಕದಲ್ಲಿ ಈಗಾಗಲೇ ನಡೆದ ಜಾತಿ ಗಣತಿಯ ಸುತ್ತಮುತ್ತ ನಡೆಯುತ್ತಿರುವ ರಾಜಕೀಯ ವಾಗ್ವಾದಗಳನ್ನು ಗಮನಿಸಿದರೆ ಇದು ನಿಚ್ಚಳವಾಗುತ್ತದೆ. ಹಾಗಂತ, ಇಂತಹದ್ದೊಂದು ಗಣತಿ ನಡೆದರೆ ಅದರ ದತ್ತಾಂಶಗಳು ದುರ್ಬಳಕೆ ಆಗಬಹುದು ಎಂಬ ಕಾರಣಕ್ಕೆ ಈಗ ಅತ್ಯಗತ್ಯ ವಾಗಿ ಆಗಲೇಬೇಕಾದ ಜಾತಿ ಗಣತಿಯನ್ನು ನಾವು ಕೈಬಿಡುವುದಕ್ಕಂತೂ ಆಗುವುದಿಲ್ಲ.

ಹಿಂದೊಮ್ಮೆ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಜಾತಿ ಮತ್ತು ಜಾತಿ ಆಧಾರಿತ ತಾರತಮ್ಯಗಳು ನಮ್ಮ ಸಮಾಜದ ಕಟು ವಾಸ್ತವಗಳು ಎಂದು ಹೇಳಿದ್ದರು, ಇದು ಬಹಳ ಸತ್ಯವಾದ ಮಾತು. ಆದರೆ ಸಾಕಷ್ಟು ವರ್ಷಗಳ ಕಾಲ ನಾವು ಇದನ್ನು ಒಪ್ಪಿಕೊಂಡಿ ರಲಿಲ್ಲ. ಕೆಲ ಜಾತಿಯವರು ಈ ದೇಶದಲ್ಲಿ ಜಾತಿ ತಾರತಮ್ಯ ಎಂಬುದು ಇಲ್ಲ, ಅದು ಕೆಲವರ ಭ್ರಮೆ ಎಂದು ಹೇಳುತ್ತಿದ್ದರು. ಆದರೆ, ಜಾತಿ ತಾರತಮ್ಯವೆಂಬುದು ಯಾವತ್ತೂ ಇತ್ತು, ಈಗಲೂ ಇದೆ.

62 R

ಆದರೆ ಈಗ ಎಲ್ಲರೂ ಒಗ್ಗಟ್ಟಿನಿಂದ ಈ ದಿಸೆಯಲ್ಲಿ ಕೆಲಸ ಮಾಡುವ ಸಮಯ ಬಂದಿದೆ. ಭಾರತವು ವೈವಿಧ್ಯಮಯ ದೇಶ. ಇಲ್ಲಿ ನಾವು ಅಧಿಕೃತ ಅಂಕಿ-ಅಂಶಗಳನ್ನು ಸಂಗ್ರಹ ಮಾಡದ ಹೊರತು, ದೇಶದ ಮತ್ತು ದೇಶವಾಸಿಗಳ ಸರ್ವತೋಮುಖ ಅಭಿವೃದ್ಧಿಗೆ ವೈಜ್ಞಾನಿಕ ರೀತಿಯಲ್ಲಿ ಮಾರ್ಗೋ ಪಾಯಗಳನ್ನು ರೂಪಿಸುವುದು ಸಾಧ್ಯವಾಗುವುದಿಲ್ಲ.

ಅಂಕಿ-ಅಂಶಗಳು ಲಭಿಸಿದರೆ ನಮಗೊಂದು ಸ್ಥೂಲ ಚಿತ್ರಣ ಸಿಗುತ್ತದೆ. ಹೀಗಾಗಿ ಜಾತಿ ಗಣತಿಯಿಂದ ಲಭಿಸುವ ಫಲಿತಾಂಶವು ದೇಶದಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಕಂದರವನ್ನು ತುಂಬಿ ಕೊಳ್ಳಲು ನಮಗೆ ಸಹಾಯ ಆಗಬಹುದು ಎಂದು ನಿರೀಕ್ಷಿಸೋಣ. ಜಾತಿ ಗಣತಿಯ ದತ್ತಾಂಶಗಳನ್ನು ಆಧಾರವಾಗಿರಿಸಿಕೊಂಡು ರೂಪಿಸುವ ಯೋಜನೆಗಳು ಸಮಾಜದ ಎಲ್ಲಾ ವರ್ಗದವರಿಗೂ ಅಧಿಕಾರ ಮತ್ತು ಸಂಪತ್ತಿನಲ್ಲಿ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಗುವಂತೆ ಮಾಡಲಿವೆ ಎಂದು ಆಶಿಸೋಣ.

ದೇಶದಲ್ಲಿ ಜಾತಿ ಗಣತಿ ನಡೆಯಬೇಕೆಂಬ ಕೂಗು ಬಹಳ ವರ್ಷಗಳಿಂದ ಇತ್ತು. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಅಭಿವೃದ್ಧಿ ಹೊಂದುವಲ್ಲಿ ಜಾತಿಯೇ ಬಹಳ ಮುಖ್ಯ ಪಾತ್ರ ವನ್ನು ನಿಭಾಯಿಸಿದೆ. ಅನೇಕ ಜಾತಿಗಳಿಗೆ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯ ಯುತವಾಗಿ ಲಭಿಸಬೆ ಕಾದ ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬ ಕೊರಗು ಸಾಕಷ್ಟು ವರ್ಷಗಳಿಂದ ಇದೆ, ಮೇಲ್ನೋಟಕ್ಕೆ ಇದು ನಿಜ ಕೂಡ.

ಆದ್ದರಿಂದಲೇ ವಿವಿಧ ರಾಜಕೀಯ ಪಕ್ಷಗಳು ಈ ವಿಷಯವನ್ನು ಪದೇಪದೇ ಚರ್ಚೆಗೆ ಎಳೆಯುತ್ತಾ ಬಂದಿದ್ದವು. ಆದರೆ ಜಾತಿ ಗಣತಿ ನಡೆಸಿದರೆ ಸಮಾಜದಲ್ಲಿ ಇನ್ನಷ್ಟು ಒಡಕು ಉಂಟಾಗಬಹುದು ಎಂಬ ಭೀತಿಯಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿದ ಅನೇಕ ಸರಕಾರಗಳು ಜಾತಿ ಗಣತಿಯನ್ನು ತಪ್ಪಿಸುತ್ತಲೇ ಬಂದಿದ್ದವು. 1979ರಲ್ಲಿ ಅಂದಿನ ಜನತಾ ಪಾರ್ಟಿ ಸರ್ಕಾರ ಮಂಡಲ ಆಯೋಗ ವನ್ನು ರಚಿಸಿ, ದೇಶದಲ್ಲಿರುವ ಹಿಂದುಳಿದ ಜಾತಿಗಳಿಗೆ ಸೂಕ್ತವಾದ ಮೀಸಲಾತಿ ನೀಡಲು ಮುಂದಾ ದಾಗ ಆ ನಿರ್ಧಾರ ದೇಶದಲ್ಲಿ ಬೆಂಕಿಯನ್ನೇ ಹಚ್ಚಿಬಿಟ್ಟಿತ್ತು.

ಬೀದಿ ಬೀದಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು ಮತ್ತು ಅಂದಿನಿಂದ ಜಾತಿ ಗಣತಿಯೆಂಬುದು ನೇರವಾಗಿ ಮೀಸಲಾತಿಯ ಜೊತೆಗೆ ತಳುಕು ಹಾಕಿಕೊಂಡಿತು. ಅದರ ಪರಿಣಾಮವಾಗಿ ಜಾತಿ ಆಧಾರಿತವಾಗಿ ಲಭಿಸಿದ ದತ್ತಾಂಶಗಳ ಆಧಾರದ ಮೇಲೆ ಸಮಾಜಕ್ಕೆ ದೊರಕಿಸಬಹುದಾಗಿದ್ದ ಲಾಭಗಳನ್ನು ಕಡೆಗಣಿಸಲಾಯಿತು. ನಂತರದ ವರ್ಷಗಳಲ್ಲಿ ಯಾವ ಸರಕಾರವೂ ಅದನ್ನು ಪುನಃ ಕೈಗೆತ್ತಿಕೊಳ್ಳುವ ಧೈರ್ಯ ತೋರಲಿಲ್ಲ.

ಜಾತಿ ಗಣತಿಯನ್ನು ವಿರೋಧಿಸುವಾಗ ಮಂಡಿಸುವ ಸಹಜವಾದ ವಾದವೇನೆಂದರೆ, ‘ನಮ್ಮ ಸಂವಿಧಾನದಲ್ಲೇ ಸಮಾನತೆಯ ತತ್ವವನ್ನು ಅಳವಡಿಸಿಕೊಳ್ಳಲಾಗಿದೆ. ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಲಭಿಸಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಮೇಲಾಗಿ ನಾವು ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿರುವ ಜಾತಿ ಮತ್ತು ವರ್ಗ ಆಧಾರಿತ ತಾರತಮ್ಯವನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ.

ಹೀಗಿರುವಾಗ ಸರಕಾರವೇ ಮುಂದಾಗಿ ಜಾತಿ ಗಣತಿಯನ್ನು ನಡೆಸುವುದು ಎಷ್ಟು ಸರಿ? ಅದಕ್ಕೆ ಸಮರ್ಥನೆ ಏನಿದೆ? ಎಂದು ಪ್ರಶ್ನಿಸಲಾಗುತ್ತದೆ. ಜಾತಿ ಆಧಾರಿತ ತಾರತಮ್ಯವು ನಮ್ಮ ಸಮಾಜಕ್ಕೆ ಅಂಟಿದ ಬಹುದೊಡ್ಡ ಶಾಪ, ಅದನ್ನು ತೊಡೆದುಹಾಕಲು ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಬೇಕು ಎಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಹೇಳಿದ್ದರು.

ಜಾತಿ ಗಣತಿಯ ವಿಷಯದಲ್ಲಿ ಭಾರತಕ್ಕೆ ಬಹಳ ಹಳೆಯ ಇತಿಹಾಸವಿದೆ. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ 1872ರಲ್ಲಿ ನಡೆದ ಜನಗಣತಿಯ ವೇಳೆ ಜನಸಂಖ್ಯೆಯನ್ನು ಜಾತಿಗಳಿಗೆ ಅನುಗುಣ ವಾಗಿ ಲೆಕ್ಕ ಹಾಕಲು ಪ್ರಯತ್ನ ನಡೆದಿತ್ತು. ಅದನ್ನು ಬ್ರಿಟಿಷರು ಯಾವ ಉದ್ದೇಶಕ್ಕೆ ನಡೆಸಿದ್ದರು ಎಂಬುದು ಈಗ ಅಪ್ರಸ್ತುತ. ಉದ್ದೇಶ ಏನೇ ಇರಲಿ, ದೇಶದಲ್ಲಿ ಜಾತಿ ಆಧಾರಿತವಾಗಿ ಜನರನ್ನು ಎಣಿಸುವ ಮೊದಲ ಪ್ರಯತ್ನ ಅದಾಗಿತ್ತು.

ನಂತರ 1931ರ ವರೆಗೆ ಇದೇ ಪದ್ಧತಿ ಪ್ರತಿ 10 ವರ್ಷಕ್ಕೊಮ್ಮೆ ಪುನರಾವರ್ತನೆ ಆಗುತ್ತಿತ್ತು. ಸ್ವಾತಂತ್ರ್ಯಾನಂತರ 1951ರಲ್ಲಿ ನಡೆದ ಜನಗಣತಿಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಸೇರಿದ ಜಾತಿಗಳ ಸಮೀಕ್ಷೆ ನಡೆಸಲಾಗಿತ್ತು. ಆದರೆ ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಅಥವಾ ಸಾಮಾನ್ಯ ವರ್ಗಗಳ ಎಷ್ಟು ಜನರಿದ್ದಾರೆ ಎಂಬುದನ್ನು ಎಣಿಸಲಿಲ್ಲ.

ಜಾತಿ ಗಣತಿಯ ವಿಷಯ ಸುಪ್ರೀಂ ಕೋರ್ಟ್‌ಗೆ ಹೋದಾಗಲೆಲ್ಲ ನ್ಯಾಯಪೀಠವು ಸಂವಿಧಾನದಲ್ಲಿ ಜಾತಿ ಆಧಾರಿತವಾಗಿ ಗಣತಿ ನಡೆಸಲು ಅವಕಾಶವಿಲ್ಲ ಎಂದು ಹೇಳುವ ಮೂಲಕ ಪ್ರಕ್ರಿಯೆಗೆ ತಡೆ ನೀಡುವ ಕಾರ್ಯವನ್ನೇ ಮಾಡಿದೆ.

2010ರಲ್ಲಿ ದೊಡ್ಡ ಸಂಖ್ಯೆಯ ಸಂಸದರು ಜಾತಿ ಗಣತಿ ನಡೆಸಬೇಕೆಂದು ಆಗ್ರಹಿಸಿದ್ದರು. ಅಂದಿನ ಕಾಂಗ್ರೆಸ್ ಸರಕಾರ ಒಪ್ಪಿಕೊಂಡಿತ್ತು. 2011ರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡೇ ಜನಗಣತಿ ನಡೆದಿತ್ತು. ಆದರೆ ಗಣತಿಯಲ್ಲಿ ಲಭಿಸಿದ ಅಂಕಿ-ಅಂಶ ಗಳನ್ನು ಸರಕಾರ ಯಾವತ್ತೂ ಬಹಿರಂಗಪಡಿಸಲಿಲ್ಲ. ದತ್ತಾಂಶಗಳೇ ಇಲ್ಲದಿದ್ದರೆ ಅವುಗಳನ್ನು ವಿಶ್ಲೇಷಿಸುವ ಅಥವಾ ಅವುಗಳ ಆಧಾರದಲ್ಲಿ ಯೋಜನೆಗಳನ್ನು ರೂಪಿಸುವ ಪ್ರಶ್ನೆಯೇ ಇರುವು ದಿಲ್ಲ.

2024ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ ಎಸ್) ತಾನು ಯಾವುದೇ ರೀತಿಯಲ್ಲೂ ಜಾತಿ ಗಣತಿಯ ವಿರುದ್ಧ ಇಲ್ಲ ಎಂದು ಹೇಳಿತು. ಬಿಜೆಪಿ ಕೂಡ ಅದನ್ನು ಬೆಂಬಲಿ ಸಿತು. ಆರ್‌ಎಸ್‌ಎಸ್‌ನ ರಾಷ್ಟ್ರೀಯ ವಕ್ತಾರ ಸುನೀಲ್ ಅಂಬೇಕರ್ ‘ಜಾತಿ ಗಣತಿಯಲ್ಲಿ ಲಭಿಸುವ ದತ್ತಾಂಶಗಳು ಸರ್ಕಾರದ ನೀತಿಗಳನ್ನು ರೂಪಿಸಲು ನೆರವಾಗಬೇಕೇ ಹೊರತು, ರಾಜಕೀಯಕ್ಕೆ ಬಳಕೆಯಾಗಬಾರದು ಎಂದು ಸರಿಯಾಗಿ ಹೇಳಿದ್ದರು. ಈಗಲೂ ಅದನ್ನೇ ನಾವು ನಿರೀಕ್ಷಿಸೋಣ.

ಇನ್ನೊಂದು ವಿಷಯ; ಈ ಜಾತಿಗಣತಿಯನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಮಾಡಿ ಮುಗಿಸಬೇಕು. ಇಲ್ಲಿಯವರೆಗೆ ಅಭಿವೃದ್ಧಿಯ ಲಾಭವನ್ನು ಪಡೆದುಕೊಳ್ಳದ ಸಮುದಾಯಗಳಿಗೆ ಜಾತಿಗಣತಿಯ ಮಹಾನ್ ಕಸರತ್ತು ಮುಗಿದ ಮೇಲೆ ಅನುಕೂಲವಾಗಲಿದೆ ಎಂಬ ನಂಬಿಕೆ ನನಗಿದೆ. ಆದರೂ ಜಾತಿ ಗಣತಿಯಿಂದಾಗಿ ಎಲ್ಲರಿಗೂ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. ಇಲ್ಲಿ ನನ್ನದೊಂದು ಸಲಹೆಯಿದೆ, ಜನಗಣತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯಿರಿ. ಆಗ ಸಮಾಜದ ಎಲ್ಲಾ ವರ್ಗದವರಿಗೂ, ಎಲ್ಲಾ ಹಿನ್ನೆಲೆಯವರಿಗೂ ಅವರ ಜಾತಿಗೆ ಸಂಬಂಧವೇ ಇಲ್ಲದಿದ್ದರೂ ಕೆಲ ಅನುಕೂಲಗಳು ಸಹಜವಾಗಿ ಲಭಿಸುತ್ತವೆ.

ಇಂತಹದ್ದೊಂದು ಧೈರ್ಯಶಾಲಿ ಹೆಜ್ಜೆಯಿರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಗಳು..! ಅದೇ ರೀತಿ ಜಾತಿಗಣತಿ ನಡೆಯಲೇಬೇಕೆಂದು ಹಠ ಹಿಡಿದು ಕುಳಿತ್ತಿದ್ದ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್ ಮುಂತಾದವರಿಗೂ ಅಭಿನಂದನೆ ಸಲ್ಲಬೇಕು. ಜಾತಿ ಗಣತಿಗೆ ಎಲ್ಲಾ ರೀತಿಯಲ್ಲೂ ನಾವು ಬೆಂಬಲಿಸುತ್ತೇವೆಂದು ಇವರು ಹೇಳಿದ್ದರು. ಆ ಧೈರ್ಯ ದಿಂದಲೇ ಕೇಂದ್ರ ಸರಕಾರ ಜಾತಿ ಗಣತಿ ನಡೆಸುವ ನಿರ್ಧಾರಕ್ಕೆ ಬಂದಿರಲೂಬಹುದು. ಒಟ್ಟಿನಲ್ಲಿ ಒಳ್ಳೆಯ ಕಸರತ್ತೊಂದು ಶುರುವಾಗುತ್ತಿದೆ, ಅದು ಯಶಸ್ವಿಯಾಗಲಿ ಎಂದು ಹಾರೈಸೋಣ..!