ಸಂಪಾದಕರ ಸದ್ಯಶೋಧನೆ
1975ರ ಜೂನ್ 25ರಂದು ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ದಾಗ, ಪ್ರತಿಪಕ್ಷದ ಪ್ರಮುಖ ನಾಯಕರನ್ನೆಲ್ಲ ಜೈಲಿಗಟ್ಟಲಾಯಿತು. ಆದರೆ, ಅಪ್ರತಿಮ ಕಾರ್ಮಿಕ ನಾಯಕ ಜಾರ್ಜ್ ಫರ್ನಾಂಡಿಸ್ ಅವರು ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡು ಭೂಗತರಾದರು.
ಇಡೀ ದೇಶದಲ್ಲಿ ಇಂದಿರಾ ಸರಕಾರದ ವಿರುದ್ಧ ಸಶಸ್ತ್ರ ಹಾಗೂ ರಹಸ್ಯ ಪ್ರತಿಭಟನೆಯನ್ನು ಸಂಘಟಿಸಲು ಅವರು ನಿರ್ಧರಿಸಿದರು. ಪೊಲೀಸ್ ಕಣ್ಣಿಗೆ ಮಣ್ಣೆರಚಲು ಅವರು ಆರಿಸಿಕೊಂಡಿದ್ದು ‘ಸರದಾರಜೀ’ (ಸಿಖ್ ವೇಷ) ವೇಷವನ್ನು. ಉದ್ದನೆಯ ಗಡ್ಡ, ತಲೆಗೊಂದು ಪೇಟ (ಟರ್ಬನ್) ಧರಿಸಿ, ಕಣ್ಣಿಗೆ ದಪ್ಪ ಕನ್ನಡಕ ಹಾಕಿಕೊಂಡು ಬೇರೆ ಬೇರೆ ಹೆಸರುಗಳಲ್ಲಿ ಅವರು ದೇಶಾದ್ಯಂತ ಓಡಾಡುತ್ತಿದ್ದರು. ಕರ್ನಾಟಕದವರೇ ಆದ ಜಾರ್ಜ್‌ಗೆ ಬೆಂಗಳೂರು ಮತ್ತು ಮಂಗಳೂರು ಹೋರಾಟದ ಪ್ರಮುಖ ಕೇಂದ್ರಗಳಾಗಿದ್ದವು.
ಇದನ್ನೂ ಓದಿ: Vishweshwar Bhat Column: ಸೋರೆನ್ ಮತ್ತು ಪದ್ಮಭೂಷಣ
ಆ ದಿನಗಳಲ್ಲಿ ಜಾರ್ಜ್ ಅವರು ರಹಸ್ಯವಾಗಿ ಬೆಂಗಳೂರಿಗೆ ಬಂದಾಗ ಭೇಟಿ ನೀಡಿದ ಪ್ರಮುಖ ಜಾಗಗಳಲ್ಲಿ ‘ಸಂಯುಕ್ತ ಕರ್ನಾಟಕ’ ಪತ್ರಿಕಾ ಕಚೇರಿಯೂ ಒಂದು. ಅಂದು ಕರ್ನಾಟಕದಲ್ಲಿ ದೇವರಾಜ ಅರಸು ಕಾಂಗ್ರೆಸ್ ಸರಕಾರವಿತ್ತು. ಆ ಸರಕಾರದಲ್ಲಿ ಅತ್ಯಂತ ಪ್ರಭಾವಿ ಮತ್ತು ದಕ್ಷ ಸಚಿವರಾಗಿದ್ದವರು ಎಂ.ವೈ.ಘೋರ್ಪಡೆ. ಅವರು ಸಂಡೂರಿನ ರಾಜಮನೆತನಕ್ಕೆ ಸೇರಿದವರಾಗಿದ್ದು, ಅತ್ಯುತ್ತಮ ಅರ್ಥಶಾಸ್ತ್ರಜ್ಞರಾಗಿದ್ದರು ಹಾಗೂ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಮುನ್ನಡೆಸುತ್ತಿದ್ದ ಲೋಕಶಿಕ್ಷಣ ಟ್ರಸ್ಟ್ʼನ ಮುಖ್ಯಸ್ಥರೂ ಆಗಿದ್ದರು.
ಹೀಗಾಗಿಯೇ, ಅವರ ಅಧಿಕೃತ ಅಥವಾ ವೈಯಕ್ತಿಕ ಅಂಬಾಸಿಡರ್ ಕಾರು ಜಾರ್ಜ್ ಫರ್ನಾಂಡಿಸ್ ರಹಸ್ಯ ಓಡಾಟಕ್ಕೆ ಬಳಕೆಯಾಗುತ್ತಿತ್ತು. ಒಮ್ಮೆ ಘೋರ್ಪಡೆಯವರ ಕಾರಿನಲ್ಲಿ ಕುಳಿತು ಜಾರ್ಜ್ ಮೈಸೂರಿಗೆ ಪಯಣಿಸಿದ್ದರು. ಅದು ಅಕ್ಷರಶಃ ಅಂದಿನ ಸಿಐಡಿ ಮತ್ತು ಗುಪ್ತಚರ ಇಲಾಖೆಯ ಕಣ್ಣಿಗೆ ಮಣ್ಣೆರಚುವ ಸಾಹಸವಾಗಿತ್ತು. ಸಚಿವರ ಕಾರು ಎಂಬ ಕಾರಣಕ್ಕೆ ಪೊಲೀಸರು ಎಲ್ಲೂ ತಪಾಸಣೆ ನಡೆಸುತ್ತಿರಲಿಲ್ಲ. ಇದನ್ನು ಜಾರ್ಜ್ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡಿದ್ದರು. ತುರ್ತು ಪರಿಸ್ಥಿತಿ ಮುಗಿದು, ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಅಂದಿನ ಖ್ಯಾತ ಪತ್ರಕರ್ತ ಮತ್ತು ಜಾರ್ಜ್ ಅವರ ಆಪ್ತ ಒಡನಾಡಿಯಾಗಿದ್ದ ಸಿ.ಜಿ.ಕೆ.ರೆಡ್ಡಿ ಅವರು ಒಂದು ಸ್ಫೋಟಕ ಲೇಖನ ಬರೆದರು. ರೆಡ್ಡಿ ಸ್ವತಃ ‘ಬರೋಡಾ ಡೈನಮೈಟ್ ಸಂಚು’ ಪ್ರಕರಣದಲ್ಲಿ ಜಾರ್ಜ್ ಜತೆ ಆರೋಪಿಯಾಗಿ ಜೈಲು ವಾಸ ಅನುಭವಿಸಿದವರು.
ರೆಡ್ಡಿ ಅವರು ಜಾರ್ಜ್ ಅವರ ಪ್ರತಿಯೊಂದು ನಿಕಟ ನಡೆಯನ್ನು ಯೋಜಿಸುತ್ತಿದ್ದರು. ವಿದೇಶಿ ಪತ್ರಕರ್ತರನ್ನು ಸಂಪರ್ಕಿಸುವುದು, ಇಂದಿರಾ ಗಾಂಧಿ ಸರಕಾರದ ದಬ್ಬಾಳಿಕೆಯ ಸುದ್ದಿಗಳನ್ನು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಲುಪಿಸುವುದು ರೆಡ್ಡಿಯವರ ಜವಾಬ್ದಾರಿಯಾಗಿತ್ತು. ತಮ್ಮ ಲೇಖನದಲ್ಲಿ ರೆಡ್ಡಿಯವರು ಒಂದು ರೋಮಾಂಚನಕಾರಿ ವಿಷಯವನ್ನು ಬಹಿರಂಗಪಡಿಸಿದ್ದರು- ‘ತುರ್ತು ಪರಿಸ್ಥಿತಿಯ ಉತ್ತುಂಗದ ಸಮಯದಲ್ಲಿ, ಇಡೀ ದೇಶದ ಪೊಲೀಸರು ಯಾರನ್ನು ಹುಡುಕುತ್ತಿದ್ದರೋ ಅಂಥ ಜಾರ್ಜ್ ಫರ್ನಾಂಡಿಸ್, ಕರ್ನಾಟಕದ ಪ್ರಭಾವಿ ಸಚಿವರೊಬ್ಬರ ಸರಕಾರಿ/ವೈಯಕ್ತಿಕ ಕಾರಿನಲ್ಲೇ ರಾಜಾರೋಷವಾಗಿ ಬೆಂಗಳೂರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದರು!
ಆದರೆ ಅರಸು ಸರಕಾರದ ಪೊಲೀಸರಿಗೆ ಇದರ ಸುಳಿವೇ ಇರಲಿಲ್ಲ.’ ಈ ಲೇಖನ ಅಂದು ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿತ್ತು. ಘೋರ್ಪಡೆಯವರ ಅಂಬಾಸಿಡರ್ ಕಾರಿನಲ್ಲಿ ಮೈಸೂರು ರಸ್ತೆಗೆ ಹೋದಾಗ ಜಾರ್ಜ್ ಅವರು, ಬಹುಶಃ ಅಂದಿನ ರೈಲ್ವೇ ಕಾರ್ಮಿಕ ಸಂಘಟನೆಯ ಮುಖಂಡರನ್ನು ಅಥವಾ ಡೈನಮೈಟ್ ಸಂಚಿಗೆ ಬೆಂಬಲ ನೀಡಬಲ್ಲ ಭೂಗತ ಕಾರ್ಯಕರ್ತರನ್ನು ಭೇಟಿ ಮಾಡಿದ್ದರು. ಸಚಿವ ಘೋರ್ಪಡೆಯವರು ತಮಗೆ ತಿಳಿಯದೆಯೋ ಅಥವಾ ವ್ಯವಸ್ಥೆಯ ಒಳಗಿದ್ದುಕೊಂಡೇ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡುತ್ತಿದ್ದ ಜಾರ್ಜ್‌ಗೆ ರಹಸ್ಯವಾಗಿ ಸಹಾಯ ಮಾಡಿದ್ದರಾ ಎಂಬ ಚರ್ಚೆ ಇಂದಿಗೂ ನಿಗೂಢ. ಮೈಸೂರು ರಸ್ತೆಯಲ್ಲಿ ಸಂಚರಿಸಿದ ಕೇವಲ ಎಂಟೇ ದಿನಗಳಲ್ಲಿ (1976ರ ಜೂನ್ 10ರಂದು) ಜಾರ್ಜ್ ಫರ್ನಾಂಡಿಸ್ ಕೋಲ್ಕತ್ತಾ ಸೇಂಟ್ ಪಾಲ್ಸ್ ಚರ್ಚ್ ಬಳಿ ಬಂಧನಕ್ಕೊಳಗಾದರು. ಬಂಧನದ ಸಮಯದಲ್ಲಿಯೂ ಜಾರ್ಜ್ ಸರದಾರಜೀ ವೇಷದಲ್ಲಿದ್ದರು. ದೀರ್ಘಕಾಲದವರೆಗೆ ಗುಪ್ತಚರ ಇಲಾಖೆಗೆ ಸಿಗದೆ ಡೈನಮೈಟ್ ಪೂರೈಕೆ ಮತ್ತು ಪತ್ರಿಕೆಗಳ ರಹಸ್ಯ ಮುದ್ರಣ ಮಾಡುತ್ತಿದ್ದ ಜಾರ್ಜ್ ಅವರನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿದರು. ಅವರ ಜಾಲದಲ್ಲಿದ್ದ ಕೆಲವರನ್ನು ಪೊಲೀಸರು ಬಂಧಿಸಿದ್ದ ರಿಂದ ಜಾರ್ಜ್ ಪತ್ತೆ ಹಚ್ಚುವುದು ಸಾಧ್ಯವಾಯಿತು.