ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Shesharaghavachar Column: 'ಹೋಗಿ ನಿಮ್ಮ ಮೋದಿಗೆ ಹೇಳಿʼ ಎಂದ ಆ ಮತಾಂಧ ರಾಕ್ಷಸ !

ಕಾಶ್ಮೀರದ ಸಮಸ್ಯೆಯನ್ನು ಮುನ್ನೆಲೆಗೆ ತರುವುದು ಉಗ್ರರ ಷಡ್ಯಂತ್ರವಾಗಿತ್ತು; ಇದರ ಭಾಗವಾಗಿ ಮತ್ತು ಬದಲಾಗುತ್ತಿದ್ದ ಕಾಶ್ಮೀರ ಕೈಬಿಟ್ಟು ಹೋಗುತ್ತಿರುವ ಆತಂಕದಿಂದಾಗಿ ಉಗ್ರರು ಪಹಲ್ಗಾಮ್‌ ನಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಕೊಂದರು. ತಾವು ನಿಶ್ಚಯಿಸಿದಾಗ ಅಮಾಯಕರ ಹತ್ಯೆಗೈಯಲು ಸಮರ್ಥರು ಎಂಬ ಸ್ಪಷ್ಟ ಸಂದೇಶ ಅವರು ಭಾರತ ಸರಕಾರಕ್ಕೆ ರವಾನಿಸಿದ್ದಾರೆ.

'ಹೋಗಿ ನಿಮ್ಮ ಮೋದಿಗೆ ಹೇಳಿʼ ಎಂದ ಆ ಮತಾಂಧ ರಾಕ್ಷಸ !

Profile Ashok Nayak Apr 28, 2025 6:00 AM

ಪ್ರಕಾಶಪಥ

ಪ್ರಕಾಶ್‌ ಶೇಷರಾಘವಾಚಾರ್

ಪಹಲ್ಗಾಮ್‌ನ ಬೈಸಾರನ್ ಕಣಿವೆಯಲ್ಲಿ ಭಯೋತ್ಪಾದಕರು ನರಮೇಧ ನಡೆಸಿದರಲ್ಲವೇ? ಈ ವೇಳೆ ಉಗ್ರನೊಬ್ಬ ಶಿವಮೊಗ್ಗದ ಮಂಜುನಾಥ್‌ರನ್ನು ಕೊಂದ ನಂತರ ಅವರ ಪತ್ನಿ ಪಲ್ಲವಿಯವರಿಗೆ “ಹೋಗಿ ನಿಮ್ಮ ಮೋದಿಗೆ ಹೇಳಿ..." ಎಂದನಂತೆ. ಇಸ್ಲಾಮಿಕ್ ಭಯೋತ್ಪಾದಕರ, ಕಲ್ಪನೆಗೂ ಮೀರಿದ ರಾಕ್ಷಸ ಪ್ರವೃತ್ತಿ, ಮನುಷ್ಯತ್ವದ ಲವಲೇಶವೂ ಇಲ್ಲದ ಮತಾಂಧತೆಯ ಕ್ರೂರ ವರ್ತನೆಯು ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಧರ್ಮವನ್ನು ಕೇಳಿ ಅಥವಾ ‘ಕಲ್ಮಾ ಹೇಳಿ’ ಎಂದು ಕೇಳಿ 26 ಜನರನ್ನು ಗುಂಡಿಟ್ಟು ಕೊಂದ ದುರುಳರ ಅಟ್ಟಹಾಸದಿಂದಾಗಿ ಭಾರತೀಯರ ರಕ್ತ ಕುದಿಯು ವಂತಾಗಿದೆ.

ಕಾಶ್ಮೀರದ ಆಹ್ಲಾದಕರ ವಾತಾವರಣದಲ್ಲಿ ಕುಟುಂಬದೊಂದಿಗೆ ವಿಹರಿಸಲು ಹೋಗಿದ್ದವರನ್ನು ಮಕ್ಕಳ ಮುಂದೆಯೇ ಮತ್ತು ಮಧುಚಂದ್ರಕ್ಕೆ ತೆರಳಿದ್ದ ನವಜೋಡಿಯ ಪೈಕಿ ಪತಿಯನ್ನು ಪತ್ನಿಯ ಎದುರೇ ಹತ್ಯೆಗೈದು ತಮ್ಮ ರಾಕ್ಷಸೀ ಗುಣವನ್ನು ಉಗ್ರರು ವಿಜೃಂಭಿಸಿದ್ದಾರೆ. ಗಂಡನ ಕಳೇಬರದ ಮುಂದೆ ನಿಸ್ಸಹಾಯಕಳಾಗಿ ಕಣ್ಣೀರಿಡುತ್ತ ಕುಳಿತಿದ್ದ ನವವಿವಾಹಿತೆಯ ದೃಶ್ಯವು ನಿರ್ದಯಿಯ ಕಣ್ಣನ್ನೂ ತೇವ ವಾಗಿಸುವಂಥದ್ದು. ಆದರೇನು, ಧರ್ಮದ ಅಫೀಮನ್ನು ಸೇವಿಸಿದವರಿಗೆ ರಾಕ್ಷಸೀ ಪ್ರವೃತ್ತಿಯೇ ಉಸಿರು!

ಮಕ್ಕಳ ಮುಂದೆಯೇ ತಂದೆಯನ್ನು ಕೊಂದ ಪಾತಕಿಗಳು, ಆ ಎಳೆಯ ಮನಸ್ಸಿನ ಮೇಲೆ ಮಾಡಿದ ಗಾಯವು ಊಹೆಗೆ ನಿಲುಕದ್ದು. ಕರುಣೆಯೇ ಇಲ್ಲದ ಮತಾಂಧತೆಯ ಭೂತವನ್ನು ಮೈಮೇಲೆ ಆವಾಹಿಸಿಕೊಂಡಿದ್ದ ಈ ಪಾಪಿಗಳಿಗೆ ಇಂಥ ಭೀಕರ ಕೃತ್ಯವನ್ನೆಸಗಲು ಅದಿನ್ಯಾವ ಮಟ್ಟಿಗಿನ ತರಬೇತಿ ನೀಡಿರಬೇಕು?! ಸ್ಥಳೀಯರು ಸಕ್ರಿಯವಾಗಿ ಕೈಜೋಡಿಸದೆ ಇಂಥ ಘನಘೋರ ಕೃತ್ಯವನ್ನು ಕೈಗೊಳ್ಳಲು ಅಸಾಧ್ಯ. ಅಭಿವೃದ್ಧಿಯ ಫಲವನ್ನು ಅನುಭವಿಸಿಯೂ ಪ್ರತ್ಯೇಕತಾವಾದದ ಅಮಲಿ ನಲ್ಲೇ ಇರುವ ಶಕ್ತಿಗಳು ಭಯೋತ್ಪಾದಕರಿಗೆ ನೀಡಿದ ಸಹಕಾರದಿಂದಾಗಿಯೇ ಇಂಥ ರಕ್ತದೋಕುಳಿ ಹರಿದಿದೆ ಎಂಬುದರಲ್ಲಿ ಅನುಮಾನವಿಲ್ಲ.

ಇದನ್ನೂ ಓದಿ: Prakash Shesharaghavachar Column: ನಿಮ್ಮ ರಕ್ಷಣೆಗೆ ಇವರು ಯಾರೂ ಬರುವುದಿಲ್ಲ

ಕಾಶ್ಮೀರದಲ್ಲಿ ಭಯೋತ್ಪಾದಕತೆಯು ಕೊನೆಯಾಗಿರಲಿಲ್ಲ, ಅದರ ಪ್ರಮಾಣ ತಗ್ಗಿತ್ತು. ಪಾಕ್‌ನಿಂದ ನುಸುಳಿ ಬಂದ ಉಗ್ರರು ಸುರಕ್ಷಾ ಸಿಬ್ಬಂದಿಗಳ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿದ್ದರಾದರೂ ಪ್ರವಾಸಿಗರ ತಂಟೆಗೆ ಹೋಗಿರಲಿಲ್ಲ. ಪ್ರವಾಸಿಗರ ಮೇಲೆರಗಿದರೆ ಸ್ಥಳೀಯರು ಮಣ್ಣು ತಿನ್ನಬೇಕಾ ಗುತ್ತದೆ ಎಂಬ ಕಾರಣಕ್ಕೆ ಅವರು ಹೀಗೆ ದೂರವುಳಿದಿದ್ದರು. ಕಳೆದ 5 ವರ್ಷದಿಂದ ಪ್ರವಾಸಿಗರು ಕಣಿವೆಯಲ್ಲಿ ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗಿತ್ತು, 2024ರಲ್ಲಿ 2.35 ಕೋಟಿಗೂ ಹೆಚ್ಚು ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

ಭಯೋತ್ಪಾದನೆ ಅಡಗಿ ಪರಿಸ್ಥಿತಿ ಸುಧಾರಣೆಯಾಗಿದೆ ಎಂದು ನಂಬಿ ಪ್ರವಾಸಿಗರು ಮುಗಿಬಿದ್ದು ಹೋಗುತ್ತಿದ್ದರು. ಕಾಶ್ಮೀರದ ಪ್ರವಾಸೋದ್ಯಮದಿಂದಾಗಿ ಆದಾಯವು 24000 ಕೋಟಿ ರು. ಮೀರಲಿದೆ ಎಂದು ಅಂದಾಜಿಸಲಾಗಿತ್ತು. 2020ರ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದಾಗ, ಕೇಂದ್ರ ಸರಕಾರಕ್ಕೆ ಮುಜುಗರ ಉಂಟುಮಾಡುವ ದುರು ದ್ದೇಶದೊಂದಿಗೆ ದೆಹಲಿಯಲ್ಲಿ ಕೋಮು ಗಲಭೆಯನ್ನು ಸಂಘಟಿಸಲಾಗಿತ್ತು.

ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರು ಇತ್ತೀಚೆಗೆ ಭಾರತ ಭೇಟಿಗೆ ಆಗಮಿಸಿದ್ದ ಸಂದರ್ಭ ದಲ್ಲಿ, ಕಾಶ್ಮೀರದ ಸಮಸ್ಯೆಯನ್ನು ಮುನ್ನೆಲೆಗೆ ತರುವುದು ಉಗ್ರರ ಷಡ್ಯಂತ್ರವಾಗಿತ್ತು; ಇದರ ಭಾಗವಾಗಿ ಮತ್ತು ಬದಲಾಗುತ್ತಿದ್ದ ಕಾಶ್ಮೀರ ಕೈಬಿಟ್ಟು ಹೋಗುತ್ತಿರುವ ಆತಂಕದಿಂದಾಗಿ ಉಗ್ರರು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಗುಂಡಿಟ್ಟು ಕೊಂದರು.

ತಾವು ನಿಶ್ಚಯಿಸಿದಾಗ ಅಮಾಯಕರ ಹತ್ಯೆಗೈಯಲು ಸಮರ್ಥರು ಎಂಬ ಸ್ಪಷ್ಟ ಸಂದೇಶವನ್ನು ಅವರು ಭಾರತ ಸರಕಾರಕ್ಕೆ ರವಾನಿಸಿದ್ದಾರೆ. ಸದರಿ ಉಗ್ರರ ಕುರಿತಾಗಿ ಮಕ್ಕಳು, ಹಿರಿಯರು ಹೇಳಿದ ಸಂಗತಿ ಎದೆಯನ್ನು ನಡುಗಿಸುವಂಥದ್ದು. ಶಿವಮೊಗ್ಗದ ಮಂಜುನಾಥ್ ಅವರ ಪತ್ನಿ ಈ ಕುರಿತು ಮಾತನಾಡಿ, “ನನ್ನ ಕಣ್ಣೆದುರಿಗೇ ಪತಿಯ ತಲೆಗೆ ಗುಂಡಿಟ್ಟು ಕೊಂದರು, ನೀವು ಹಿಂದೂಗಳಾ ಎಂದು ಕೇಳಿ ಮಿಕ್ಕ ಗಂಡಸರನ್ನು ಕೊಂದರು.

ಅಸ್ಸಾಂನ ಪ್ರೊಫೆಸರ್ ಒಬ್ಬರು ‘ಕಲ್ಮಾ’ ಪಠಿಸಿ ಪ್ರಾಣ ಉಳಿಸಿಕೊಂಡರು. ಸೇನಾಧಿಕಾರಿಗಳ ಪ್ರಕಾರ 20ಕ್ಕೂ ಹೆಚ್ಚು ಮಂದಿಯ ಧರ್ಮ ತಿಳಿಯಲು ಅವರ ಪ್ಯಾಂಟ್ ಅನ್ನು ಕೆಳಗೆಳೆಯಲಾಗಿತ್ತು" ಎಂದಿದ್ದಾರೆ. ಈ ಘಟನೆಯ ನಂತರದ ಪರಿಣಾಮದಿಂದ ತಲ್ಲಣಗೊಂಡಿದ್ದ ಮೋದಿ ವಿರೋಧಿಗಳು, ‘ಅಂದಿನ ಸಂಕಟದ ಸಮಯದಲ್ಲಿ ಕಾಶ್ಮೀರಿಗಳು ಪ್ರವಾಸಿಗರನ್ನು ಕಾಪಾಡಿದರು, ಬೆನ್ನ ಮೇಲೆ ಮಗುವನ್ನು ಎತ್ತಿಕೊಂಡು ಕಾಪಾಡಿದ್ದಾರೆ, ಹಿಂದೂ-ಮುಸ್ಲಿಂ ನಡುವೆ ಕಂದಕವಿರಲಿಲ್ಲ’ ಎಂಬೆಲ್ಲಾ ಸುದ್ದಿಗೆ ಒತ್ತುಕೊಟ್ಟು, ಉಗ್ರರ ಕ್ರೌರ್ಯದಿಂದಾದ 26 ಜನರ ಸಾವನ್ನು ಗೌಣವಾಗಿಸಿ ವಿಷಯಾಂತರ ಮಾಡತೊಡಗಿದ್ದಾರೆ. ಕಾಶ್ಮೀರ ಕಣಿವೆಯು ಮುಸ್ಲಿಮರ ಬಾಹುಳ್ಯವಿರುವ ಪ್ರದೇಶ. ಈಗ ತಮ್ಮದೇ ದೇಶದ ನಾಗರಿಕರು, ಅತಿಥಿಯಾಗಿ ಬಂದವರು ತೊಂದರೆಯಲ್ಲಿದ್ದಾಗ ಅವರು ನೆರವು ನೀಡಿರುವುದು ಪ್ರಶಂಸನೀಯ. ಆದರೆ ಅಮಾನುಷ ಹತ್ಯೆಯ ಪ್ರಸಂಗವನ್ನು ನೇಪಥ್ಯಕ್ಕೆ ಸರಿಸಿ, ವಿಷಯಾಂತರದ ದುರುದ್ದೇಶದಿಂದ ಕಾಶ್ಮೀರಿಗಳ ಗುಣಗಾನಕ್ಕೆ ಅದನ್ನು ಬಳಸಿಕೊಳ್ಳುತ್ತಿರುವುದು ಅಸಹ್ಯಕರವಾಗಿದೆ.

ಕಾಶ್ಮೀರದ ಆರ್ಥಿಕತೆಗೆ ಪ್ರವಾಸೋದ್ಯಮದಿಂದ ಗಮನಾರ್ಹ ಕೊಡುಗೆಯಿದೆ, ಹೀಗಾಗಿ ಅಲ್ಲಿನವರು ಹಣದ ಥೈಲಿಯ ಪ್ರವಾಸಿಗರನ್ನು ನಿರ್ಲಕ್ಷಿಸುವಷ್ಟು ಮೂರ್ಖರಲ್ಲ. ಪ್ರವಾಸಿಗರ ಹಿತ ಕಾಯು ವುದರಲ್ಲೇ ತಮ್ಮ ಭವಿಷ್ಯವಿದೆ ಎಂಬ ಸ್ಪಷ್ಟ ತಿಳಿವಳಿಕೆ ಅವರಿಗಿದೆ. ಯಾವುದೇ ಅಪಾಯಕ್ಕೆ ಸಿಲುಕದೆ, ಕಣಿವೆಯಿಂದ ಅದೃಷ್ಟವಶಾತ್ ಸುರಕ್ಷಿತವಾಗಿ ಮರಳಿದವರು ಸ್ಥಳೀಯರ ನೆರವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿದ್ದಾರೆ ಮತ್ತು ಅವರಲ್ಲಿ ಅನೇಕರು ‘ಸ್ಟಾಕ್ ಹೋಮ್ ಸಿಂಡ್ರೋಮ್’ ಗೆ ಒಳಗಾಗಿ ಹೊಗಳಿರುವುದು ಸಹಜ ವರ್ತನೆಯೇ.

ಆದರೆ, ಅಮಾನುಷವಾಗಿ ಗುಂಡೇಟಿಗೆ ಬಲಿಯಾದವರ ಬಗ್ಗೆ ಸಹಾನುಭೂತಿ ತೋರುವುದಕ್ಕಿಂತ, ಪ್ರವಾಸವನ್ನು ಮೊಟಕುಗೊಳಿಸಿ ಸುರಕ್ಷಿತವಾಗಿ ಮರಳಿದ ವರು ಕಾಶ್ಮೀರಿಗಳನ್ನು ಪ್ರಶಂಸಿಸಿದ್ದನ್ನು ಕೆಲವರು ಬಂಡವಾಳ ಮಾಡಿಕೊಂಡು, ಅಂದು ನಡೆದ ದುರ್ಘಟನೆಯನ್ನು ತೆರೆಮರೆಗೆ ತಳ್ಳುವ ಕುತಂತ್ರ ಮಾಡುತ್ತಿದ್ದಾರೆ.

ಉಗ್ರರು ಪ್ರವಾಸಿಗರ ಧರ್ಮವನ್ನು ಕೇಳಿ ಹತ್ಯೆಗೈದಿದ್ದನ್ನು ಹಲವರು ದೃಢಪಡಿಸಿದ್ದರೂ ಕೆಲವು ಕಾಂಗ್ರೆಸ್ಸಿಗರು ಇದನ್ನು ಅಲ್ಲಗಳೆದು, “ಕೇವಲ ಎರಡು ಧರ್ಮದವರ ನಡುವೆ ಕಂದಕ ನಿರ್ಮಿಸಲು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಯತ್ನಿಸುತ್ತಿವೆ" ಎಂಬ ಅಪಪ್ರಚಾರದಲ್ಲಿ ತೊಡಗಿದ್ದಾರೆ. “ಈ ರೀತಿಯ ಘಟನೆ ಸುಳ್ಳು" ಎಂಬ ಕಾಂಗ್ರೆಸ್‌ನ ನಾಯಕರೊಬ್ಬರ ಮಾತಿಗೆ ಮತ್ತೊಬ್ಬ ನಾಯಕರು ದನಿಗೂಡಿಸುತ್ತಾರೆ. ಕಾಂಗ್ರೆಸ್‌ನ ವಕ್ತಾರರೊಬ್ಬರು ಹೀಗೆಯೇ ಮಾತನಾಡಿ ಹುತಾತ್ಮರ ಕುಟುಂಬ ಗಳಿಗೆ ಅಪಮಾನ ಮಾಡಿದ್ದಾರೆ.

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯಕರ್ತರು, “ಧರ್ಮದ ಆಧಾರದ ಮೇಲೆ ಹತ್ಯೆ ನಡೆದಿಲ್ಲ, ಇದು ಬಿಜೆಪಿಯ ಕುತಂತ್ರ" ಎಂದು ಬೇಜವಾಬ್ದಾರಿಯಿಂದ ಟೀಕಿಸಿದ್ದಾರೆ. ಭೀಕರ ಕೃತ್ಯ ನಡೆಸಿದ ಉಗ್ರರ ಪರವಾಗಿ ಇವರೆಲ್ಲಾ ಹೀಗೆ ವಕಾಲತ್ತು ವಹಿಸಿ ಅವರ ವಕ್ತಾರರಂತೆ ಕೆಲಸ ಮಾಡುತ್ತಿರುವುದು ಶೋಚನೀಯ ಸಂಗತಿ. ಉಗ್ರರ ಗುಂಡಿಗೆ ಬಲಿಯಾದ ಬೆಂಗಳೂರಿನ ಭರತ್ ಭೂಷಣ್‌ರವರ ಪತ್ನಿ ಡಾ.ಸುಜಾತರವರು, “ನನ್ನ ಗಂಡನಿಗೆ ಏಕಾಏಕಿ ಗುಂಡು ಹೊಡೆದು ಕೊಂದರು, ಅವರು ಧರ್ಮ ಕೇಳಲಿಲ್ಲ" ಎಂದು ತಮ್ಮ ಅನುಭವವನ್ನು ಹೇಳಿಕೊಂಡರೆ, ಕಾಂಗ್ರೆಸ್ಸಿಗರು ಆ ವಿಡಿಯೋವನ್ನು ಹಂಚಿಕೊಂಡು, ‘ಕೊಂದವರು ಧರ್ಮವನ್ನು ಕೇಳಿಲ್ಲ’ ಎಂದು ಪ್ರಚಾರಕ್ಕಿಳಿದಿದ್ದಾರೆ.

ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ. ಆದರೆ, ಉಗ್ರರ ಕೈಯಲ್ಲಿದ್ದ ರೈಫಲ್ ಕಿತ್ತುಕೊಳ್ಳಲು ಹೋಗಿ ಪಹಲ್ಗಾಮ್ ಪೋನಿ ರೈಡರ್ ಸೈಯದ್ ಆದಿಲ್ ಹುಸೇನ್ ಶಾ ತನ್ನ ಪ್ರಾಣತ್ಯಾಗ ಮಾಡಿದ ಎಂದಾಗ, ಅದನ್ನು ಯಾರೂ ಅನುಮಾನಿಸದೆ ಅವನ ಬಲಿದಾನವನ್ನು ಗೌರವಿಸಿದ್ದೇವೆ ಎಂಬುದನ್ನು ಮರೆಯಬಾರದು.

2002ರಲ್ಲಿ, ಗೋಧ್ರಾ ರೈಲು ನಿಲ್ದಾಣದಲ್ಲಿ ಬೋಗಿಗೆ ಬೆಂಕಿ ಹಚ್ಚಿ ಕರಸೇವಕರನ್ನು ಜೀವಂತ ಸುಟ್ಟು ಹಾಕಿದ ಘಟನೆ ಗೊತ್ತಿರುವಂಥದ್ದೇ. ಈ ಸಂಬಂಧವಾಗಿ 2004ರಲ್ಲಿ ಅಂದಿನ ಯುಪಿಎ ಸರಕಾರ ಜಸ್ಟೀಸ್ ಯು.ಸಿ.ಬ್ಯಾನರ್ಜಿ ಆಯೋಗವನ್ನು ನೇಮಿಸಿ, ‘ಬೋಗಿಗೆ ಹೊರಗಡೆಯಿಂದ ಯಾರೂ ಬೆಂಕಿಯನ್ನೇ ಹಚ್ಚಿಲ್ಲ’ ಎಂಬುದಾಗಿ ವರದಿ ತರಿಸಿಕೊಂಡಿತು.

2008ರಲ್ಲಿ ನಡೆದ ದೆಹಲಿಯ ಬಾಟ್ಲಾ ಎನ್ ಕೌಂಟರ್ ವೇಳೆ ದೆಹಲಿ ಪೊಲೀಸ್ ಅಧಿಕಾರಿ ಮೋಹನ್ ಚಂದ್ ಶರ್ಮಾ ಹುತಾತ್ಮರಾದರು, ಅಡಗಿದ್ದ ನಾಲ್ವರು ಉಗ್ರರನ್ನು ಕೊಲ್ಲಲಾಯಿತು. ಆದರೆ, ‘ಇದೊಂದು ನಕಲಿ ಎನ್‌ಕೌಂಟರ್’ ಎನ್ನುವ ಮೂಲಕ ಅಂದಿನ ಕಾಂಗ್ರೆಸ್ ಮುಖಂಡರೇ ಉಗ್ರರ ಪರವಾಗಿ ನಿಂತರು. ಇಶ್ರತ್ ಜಹಾನ್ ಎಂಬ ಭಯೋತ್ಪಾದಕಿಯು ಪೊಲೀಸ್ ಎನ್‌ಕೌಂಟರ್‌‌ ನಲ್ಲಿ ಸತ್ತಾಗ, ಅವಳನ್ನು ‘ಅಮಾಯಕಿ’ ಎಂದು ಬಿಂಬಿಸಿ, ಸಿಬಿಐ ತನಿಖೆ ನಡೆಸಿ, ದೇಶದ ಬೇಹು ಗಾರಿಕಾ ಸಂಸ್ಥೆಯನ್ನು ಕಟಕಟೆಯಲ್ಲಿ ನಿಲ್ಲಿಸಲು ಯುಪಿಎ ಸರಕಾರ ಮುಂದಾಗಿತ್ತು.

ಎಂಥ ವಿಚಿತ್ರ ನೋಡಿ- ಉಗ್ರರಿಂದ ಹಿಂದೂಗಳು ಸತ್ತರೆ ಅವರ ಬಲಿದಾನಕ್ಕೆ ಬೆಲೆ ನೀಡದೆ ವಿಷಯಾಂತರ ಮಾಡಿ ಉಗ್ರರಿಗೆ ಕ್ಲೀನ್‌ಚಿಟ್ ನೀಡುತ್ತಾರೆ; ಪೊಲೀಸ್ ಎನ್‌ಕೌಂಟರ್ ನಲ್ಲಿ ಮುಸ್ಲಿಂ ಸತ್ತರೆ ಅದನ್ನು ನಕಲಿ ಎನ್‌ಕೌಂಟರ್ ಎಂದು ತಿರುಚುವ ಮೂಲಕ ಢೋಂಗಿ ಜಾತ್ಯತೀತವಾದಿಗಳು ಉಗ್ರರನ್ನು ಬೆಂಬಲಿಸುತ್ತಾರೆ! ಪ್ರಧಾನಿ ಮೋದಿಯವರು ಕಳೆದ 10 ವರ್ಷಗಳಲ್ಲಿ ಬಲಿಷ್ಠ ಭಾರತ ವನ್ನು ನಿರ್ಮಿಸಿರುವುದು, ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿಯ ಮಹಾಪೂರವಾಗಿರುವುದು, ದೇಶವನ್ನು ವಿಭಜಿಸಲು ಹವಣಿಸುತ್ತಿರುವ ಶಕ್ತಿಗಳಿಗೆ ಹತಾಶೆ ಉಂಟು ಮಾಡಿದೆ.

ಹೀಗಾಗಿಯೇ ಅಮಾಯಕರ ಮಾರಣ ಹೋಮ ನಡೆಸಿ ‘ನಿಮ್ಮ ಮೋದಿಗೆ ಹೇಳಿ’ ಎಂದು ಅವರು ಒದರಿರುವುದು! ಪಹಲ್ಗಾಮ್‌ನಲ್ಲಿನ ಮಾರಣಹೋಮ ಪ್ರತಿಯೊಬ್ಬ ಭಾರತೀಯರನ್ನೂ ವಿಚಲಿತ ಗೊಳಿಸಿದ್ದು, ಪ್ರತೀಕಾರಕ್ಕಾಗಿ ಅವರು ಹಾತೊರೆಯುತ್ತಿದ್ದಾರೆ. ಪಹಲ್ಗಾಮ್‌ನಲ್ಲಿ ರಕ್ತಹರಿಸಿ ದವರಿಗೂ, ಅವರ ಹಿಂದಿನ ಶಕ್ತಿಗಳಿಗೂ ಮರೆಯಲಾಗದ ಪೆಟ್ಟು ಬೀಳಬೇಕು ಎಂದು ನಿರೀಕ್ಷಿಸು ತ್ತಿದ್ದಾರೆ.

(ಲೇಖಕರು ಬಿಜೆಪಿಯ ವಕ್ತಾರರು)