ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Harish Kera Column: ಪಶ್ಚಿಮ ಘಟ್ಟಗಳ ʼಗಾಡ್‌ʼಗೀಳ್‌ ಇನ್ನು ನೆನಪು ಮಾತ್ರ

ಸುಮಾರು 1600 ಕಿಲೋಮೀಟರ್‌ಗಳಷ್ಟು ಉದ್ದ ಚಾಚಿಕೊಂಡಿರುವ ಪಶ್ಚಿಮ ಘಟ್ಟದ ಬಹುಭಾಗ ಕರ್ನಾಟಕದಲ್ಲಿ ಹರಡಿಕೊಂಡಿದೆ. ಈ ಘಟ್ಟಗಳ ಸಂರಕ್ಷಣೆ ಕುರಿತು ತಮ್ಮ ವರದಿ ತಯಾರಿಗೆ ಮುನ್ನ ಹಾಗೂ ಅದರ ನಂತರವೂ ಈ ಭಾಗದಲ್ಲಿ ಸಾಕಷ್ಟು ಓಡಾಡಿದ್ದ ಹಿರಿಯ ವಿಜ್ಞಾನಿ ಮಾಧವ ಗಾಡ್ಗೀಳ್ ಅವರಿಗೆ ಸ್ಥಳೀಯರ ಒಡನಾಟ ಚೆನ್ನಾಗಿತ್ತು. ಮರಾಠಿ ಮೂಲವಾದರೂ ಅವರಿಗೆ ಕನ್ನಡ ಚೆನ್ನಾಗಿ ಬರುತ್ತಿತ್ತು. ಗಾಡ್ಗೀಳ್ ಅವರ ಜೀವನದ ಬಹುಮುಖ್ಯ ಅಧ್ಯಾಯಗಳು ಕರ್ನಾಟಕದ ರೂಪುಗೊಂಡಿವೆ.

ಪಶ್ಚಿಮ ಘಟ್ಟಗಳ ʼಗಾಡ್‌ʼಗೀಳ್‌ ಇನ್ನು ನೆನಪು ಮಾತ್ರ

-

ಹರೀಶ್‌ ಕೇರ
ಹರೀಶ್‌ ಕೇರ Jan 9, 2026 8:07 AM

ಹರೀಶ್ ಕೇರಾ

ಪುಣೆಯಲ್ಲಿ ಬುಧವಾರ ನಿಧನರಾದ ಹಿರಿಯ ವಿಜ್ಞಾನಿ ಮಾಧವ ಗಾಡ್ಗೀಳ್ (83) ಪಶ್ಚಿಮ ಘಟ್ಟಗಳ ಆರೋಗ್ಯ, ಜೀವವೈವಿಧ್ಯ, ಜನಜೀವನ ಎಲ್ಲವನ್ನೂ ಚೆನ್ನಾಗಿ ಅರ್ಥ ಮಾಡಿ ಕೊಂಡಿದ್ದ, ಅದಕ್ಕಾಗಿ ಸದಾ ದನಿಯೆತ್ತುತ್ತಿದ್ದ ಜನರ ವಿಜ್ಞಾನಿ. ತಮ್ಮ ಮಹತ್ವದ ಕೆಲಸ ಕ್ಕಾಗಿ ಅಂತಾರಾಷ್ಟ್ರೀಯ ಮನ್ನಣೆಯನ್ನೂ ಅದೇ ಕಾಲಕ್ಕೆ ಸ್ಥಳೀಯ ಮಟ್ಟದಲ್ಲಿ ಭಾರಿ ವಿರೋಧವನ್ನೂ ಎದುರಿಸಿದ್ದ ಚಿಂತಕ. ಪಶ್ಚಿಮ ಘಟ್ಟಗಳ ಸಂರಕ್ಷಣೆಯ ನಿಟ್ಟಿನಲ್ಲಿ ಅವರು ನೀಡಿದ್ದ ವರದಿ ಮಹತ್ವದ ಮೈಲಿಗಲ್ಲು. ರಾಜಕಾರಣಿಗಳು ಸೇರಿಕೊಂಡು ಈ ವರದಿಯನ್ನು ಯಶಸ್ವಿಯಾಗಿ ಮಣ್ಣುಗೂಡಿಸಿದರೂ, ಅದು ಉಂಟು ಮಾಡಿದ ತಲ್ಲಣಗಳು, ಮೂಡಿಸಿದ ಎಚ್ಚರ ಮುಂದಿನ ಪರಿಸರ ಹೋರಾಟದ ದಿಕ್ಕನ್ನು ರೂಪಿಸಿದವು.

ಸುಮಾರು 1600 ಕಿಲೋಮೀಟರ್‌ಗಳಷ್ಟು ಉದ್ದ ಚಾಚಿಕೊಂಡಿರುವ ಪಶ್ಚಿಮ ಘಟ್ಟದ ಬಹುಭಾಗ ಕರ್ನಾಟಕದಲ್ಲಿ ಹರಡಿಕೊಂಡಿದೆ. ಈ ಘಟ್ಟಗಳ ಸಂರಕ್ಷಣೆ ಕುರಿತು ತಮ್ಮ ವರದಿ ತಯಾರಿಗೆ ಮುನ್ನ ಹಾಗೂ ಅದರ ನಂತರವೂ ಈ ಭಾಗದಲ್ಲಿ ಸಾಕಷ್ಟು ಓಡಾಡಿದ್ದ ಹಿರಿಯ ವಿಜ್ಞಾನಿ ಮಾಧವ ಗಾಡ್ಗೀಳ್ ಅವರಿಗೆ ಸ್ಥಳೀಯರ ಒಡನಾಟ ಚೆನ್ನಾಗಿತ್ತು. ಮರಾಠಿ ಮೂಲವಾದರೂ ಅವರಿಗೆ ಕನ್ನಡ ಚೆನ್ನಾಗಿ ಬರುತ್ತಿತ್ತು. ಗಾಡ್ಗೀಳ್ ಅವರ ಜೀವನದ ಬಹುಮುಖ್ಯ ಅಧ್ಯಾಯಗಳು ಕರ್ನಾಟಕದ ರೂಪುಗೊಂಡಿವೆ.

1973ರಲ್ಲಿ ಅವರು ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (IISc) ಸೇರಿದರು. ಮುಂದಿನ 331 ವರ್ಷ ಕಾಲ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸೆಂಟರ್ ಫಾರ್ ಕಾಲಾಜಿಕಲ್ ಸೈನ್ಸಸ್ (CES) ಅನ್ನು ಸ್ಥಾಪಿಸಿದರು. ಈ ಕೇಂದ್ರವೇ ಮುಂದೆ ಭಾರತದಲ್ಲಿ ಪರಿಸರ ವಿಜ್ಞಾನದ ಪ್ರಮುಖ ತೊಟ್ಟಿಲಾಗಿ ಬೆಳೆಯಿತು.

1970ರ ದಶಕದಲ್ಲಿ ಗಾಡ್ಗೀಳ್ ಮತ್ತು ಅವರ ತಂಡ ಬಂಡೀಪುರ, ದಾಂಡೇಲಿ ಸೇರಿ ಕರ್ನಾಟಕದ 85 ಅರಣ್ಯ ಶ್ರೇಣಿಗಳಲ್ಲಿ ವ್ಯಾಪಕ ಕ್ಷೇತ್ರ ಅಧ್ಯಯನ ನಡೆಸಿತು. ಈ ಸಂಶೋಧನೆಗಳು ಕರ್ನಾಟಕದ ಅರಣ್ಯ ಮತ್ತು ಪರಿಸರ ನೀತಿಗಳ ಮೇಲೆ ದೀರ್ಘಕಾಲೀನ ಪ್ರಭಾವ ಬೀರಿದವು.

ಅವರು ಕೇವಲ ಅರಣ್ಯವನ್ನು ಅಧ್ಯಯನ ಮಾಡಲಿಲ್ಲ. ಅರಣ್ಯದೊಳಗೆ ಬದುಕುವ ಬುಡಕಟ್ಟು ಜನಾಂಗ, ರೈತರು, ಬೆಸ್ತರ ಜ್ಞಾನವನ್ನೂ ವಿಜ್ಞಾನಕ್ಕೆ ಸಮಾನವಾಗಿ ಪರಿಗಣಿಸಿದರು. ಕರ್ನಾಟಕ ದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಅವರು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡು ತ್ತಿದ್ದರು, ಬರೆಯುತ್ತಿದ್ದರು. ಕರ್ನಾಟಕ ಯೋಜನಾ ಮಂಡಳಿಯ ಸದಸ್ಯರಾಗಿದ್ದಾಗ, ತಮ್ಮ ಅಭಿಪ್ರಾಯ ಗಳನ್ನು ಕನ್ನಡದ ಮಂಡಿಸುತ್ತಿದ್ದರು.

ಇದನ್ನೂ ಓದಿ: Harish Kera Column: ಅಪರಿಚಿತ ನಗರದಲ್ಲಿ ಬಿಡುಗಡೆಯ ನಡಿಗೆ

ತಂದೆಯ ಪ್ರೇರಣೆ

1942ರಲ್ಲಿ ಮೇ 24ರಂದು ಪುಣೆಯಲ್ಲಿ ಜನಿಸಿದ ಗಾಡ್ಗೀಳ್, ಬಾಲ್ಯದಿಂದಲೇ ಪ್ರಕೃತಿ ಮತ್ತು ಪಕ್ಷಿ ಗಳೊಂದಿಗೆ ಆಳವಾದ ನಂಟು ಬೆಳೆಸಿಕೊಂಡಿದ್ದರು. ಅವರ ತಂದೆ ಧನಂಜಯ ರಾಮಚಂದ್ರ ಗಾಡ್ಗೀಳ್ ಅವರು ಪ್ರಸಿದ್ಧ ಅರ್ಥಶಾಸ್ತ್ರಜ್ಞ, ಕೇಂಬ್ರಿಜ್ ವಿವಿಯ ಪ್ರಾಧ್ಯಾಪಕ ಹಾಗೂ ‘ಗಾಡ್ಗೀಳ್ ಸೂತ್ರ’ದ ಕರ್ತೃ. ತಾಯಿ ಪ್ರಮೀಳಾ. ಪಕ್ಷಿ ವೀಕ್ಷಕರಾಗಿದ್ದ ತಂದೆಯ ಪ್ರೇರಣೆಯಿಂದ ಪರಿಸರದ ಮೇಲಿನ ಕುತೂಹಲ ಗಾಢವಾಯಿತು.

ಮಾಧವ ಗಾಡ್ಗೀಳ್ 1963ರಲ್ಲಿ ಪುಣೆ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರದಲ್ಲಿ ಪದವಿ ಪಡೆದರು. 1965ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಗಣಿತೀಯ ಪರಿಸರಶಾಸ ಮತ್ತು ಮೀನುಗಳ ವರ್ತನೆ ಕುರಿತಾಗಿ ಡಾಕ್ಟರೇಟ್ ಸಂಶೋಧನೆ ನಡೆಸಿ 1969ರಲ್ಲಿ ಪಿಎಚ್‌ಡಿ ಪದವಿ ಪಡೆದರು.

ಅಲ್ಲಿ ಎರಡು ವರ್ಷ ಜೀವಶಾಸ್ತ್ರದ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸಿದರು. ಮಾಧವ್ ಗಾಡ್ಗೀಳ್ 1971ರಲ್ಲಿ ಭಾರತಕ್ಕೆ ಮರಳಿ, 1973ರಲ್ಲಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಗೆ ಸೇರಿದರು. ಇಲ್ಲಿ ಅವರು ಮೂವತ್ತು ವರ್ಷ ಕಾಲ ಸೇವೆ ಸಲ್ಲಿಸಿ 2004ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ನಿವೃತ್ತರಾದರು.

ಐಐಎಸ್‌ಸಿಯಲ್ಲಿ ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಗಾಡ್ಗೀಳ್ ಎರಡು ಪ್ರಮುಖ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದರು. ಅವುಗಳು ‘ಸೈದ್ಧಾಂತಿಕ ಅಧ್ಯಯನ ಕೇಂದ್ರ (Centre for Theoretical Studies) ಮತ್ತು ಪರಿಸರ ಅಧ್ಯಯನ ಕೇಂದ್ರ’ (Centre for Ecological Studies). ವಿದೇಶಗಳಲ್ಲೂ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.

1991ರಲ್ಲಿ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮತ್ತು 1995ರಲ್ಲಿ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯ, ಬರ್ಕ್ಲಿಯಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದರು. ಐಐಎಸ್‌ಸಿಯಿಂದ ನಿವೃತ್ತರಾದ ನಂತರ, 2004ರಲ್ಲಿ ಮತ್ತೆ ಪುಣೆಗೆ ತೆರಳಿ ಅಗರ್ಕರ್ ಸಂಶೋಧನಾ ಸಂಸ್ಥೆ ಸೇರಿದರು. ಜೊತೆಗೆ ಗೋವಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಸಂಶೋಧನಾ ಪ್ರಾಧ್ಯಾಪಕ ಹುದ್ದೆಯನ್ನು ವಹಿಸಿ ಕೊಂಡರು.

ಕರ್ನಾಟಕದ ಆಪ್ತ ಸಖ

1976ರಲ್ಲಿ ಕರ್ನಾಟಕ ಸರಕಾರ ಬಿದಿರು ಸಂಪನ್ಮೂಲಗಳನ್ನು ರಕ್ಷಿಸುವ ಬಗ್ಗೆ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ಗಾಡ್ಗೀಳ್ ಅವರಿಗೆ ನೀಡಿತು. ಈ ಅಧ್ಯಯನದ ಪರಿಣಾಮವಾಗಿ ಅರಣ್ಯ ಆಧಾರಿತ ಕೈಗಾರಿಕೆಗಳಿಗೆ ನೀಡಲಾಗುತ್ತಿದ್ದ ಸರಕಾರಿ ಸಹಾಯಧನವನ್ನು ಕಡಿತಗೊಳಿಸಲು ರಾಜ್ಯ ಸರಕಾರ ಕ್ರಮ ಕೈಗೊಂಡಿತು. 1986ರಲ್ಲಿ ಅವರನ್ನು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿ ನೇಮಕ ಮಾಡಲಾಯಿತು. 1990ರವರೆಗೆ ಈ ಹುದ್ದೆಯನ್ನು ವಹಿಸಿ ಕೊಂಡಿದ್ದರು. ಈ ಅವಧಿಯಲ್ಲಿ 1986ರಲ್ಲಿ ನೀಲಗಿರಿ ಪ್ರದೇಶದಲ್ಲಿ ದೇಶದ ಮೊದಲ ಜೀವವಲಯ ಸಂರಕ್ಷಿತ ಪ್ರದೇಶ (ಬಯೋಸಿಯರ್ ರಿಸರ್ವವ್) ಸ್ಥಾಪನೆಗೆ ಅವರು ಸಹಕರಿಸಿದರು.

1998ರಲ್ಲಿ ಅವರು ವಿಶ್ವಸಂಸ್ಥೆ ಅಧೀನದಲ್ಲಿರುವ ಜಾಗತಿಕ ಪರಿಸರ ನಿಧಿ (Global Environment Facility )ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡರು.

2002ರವರೆಗೆ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಇದರ ಜೊತೆಗೆ ಅವರು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT)ಯ ಪರಿಸರ ಶಿಕ್ಷಣ ಸಮಿತಿಯ ಸದಸ್ಯರಾಗಿ, ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸದಸ್ಯರಾಗಿದ್ದರು. ಶಾಲಾ ಮಟ್ಟದ ಪರಿಸರ ಶಿಕ್ಷಣ ಪಠ್ಯಕ್ರಮ ರೂಪಿಸುವ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ವಿವಾದ ಎಬ್ಬಿಸಿದ ಮಾಧವ ಗಾಡ್ಗೀಳ್ ವರದಿ

2010ರ ಮಾರ್ಚ್ 4ರಂದು ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ ( Western Ghats Ecology Experts Panel)ಯನ್ನು ರಚಿಸಿತು. ಈ ಸಮಿತಿಗೆ ಪ್ರೊ. ಮಾಧವ ಗಾಡ್ಗಿಳ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿತು. ಪಶ್ಚಿಮ ಘಟ್ಟಗಳಲ್ಲಿನ ಪರಿಸರದ ಇಂದಿನ ಸ್ಥಿತಿಯನ್ನು ಅಧ್ಯಯನ ಮಾಡಿ, ಪರಿಸರದ ದೃಷ್ಟಿಯಿಂದ ಸಂವೇದನಶೀಲವಾಗಿರುವ ಪ್ರದೇಶಗಳನ್ನು ಗುರುತಿಸುವ ಜವಾಬ್ದಾರಿ ಸಮಿತಿಗೆ ನೀಡಲಾಗಿತ್ತು. ಜೊತೆಗೆ ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡಬೇಕೆಂದು ಸೂಚಿಸಲಾಗಿತ್ತು. 2011ರ ಮಾರ್ಚ್‌ನಲ್ಲಿ ಈ ಸಮಿತಿಯ ವರದಿ ಸಿದ್ಧವಾಯಿತು.

ಈ ವರದಿಯ ಗಂಭೀರತೆ ಮನಗಂಡ ಸರಕಾರ ಅದನ್ನು ಬಿಡುಗಡೆ ಮಾಡಲೇ ಹಿಂಜರಿದಿತ್ತು. ಕೊನೆಗೆ ಒತ್ತಾಯದ ಬಳಿಕ 2012ರ ಮೇ 23ರಂದು ವರದಿಯನ್ನು ಸಾರ್ವಜನಿಕಗೊಳಿಸಿತು. ಆ ವರದಿಯಲ್ಲಿ ಇದ್ದ ಶಿಫಾರಸುಗಳು ಸ್ಥಳೀಯರಲ್ಲಿ ಬಹು ಮಂದಿಯ, ಜನಪ್ರತಿನಿಧಿಗಳ ಕಣ್ಣು ಗಳನ್ನು ಕೆಂಪಾಗಿಸಿದವು.

ಗಾಡ್ಗೀಳ್ ವರದಿಯಲ್ಲಿ ಇದ್ದದ್ದೇನು?

ಪಶ್ಚಿಮ ಘಟ್ಟಗಳ ಸುಮಾರು 75 ಶೇಕಡಾ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವಾಗಿ ವಿಭಾಗಿಸ ಬೇಕು. ಇದರ ಸಾಂದ್ರತೆಯನ್ನು ಅನುಸರಿಸಿ ESZ-1, ESZ-2, ESZ-3 ಎಂದು ಮೂರು ಭಾಗ ಮಾಡಿ ಹಂತ ಹಂತವಾಗಿ ಸ್ಥಳೀಯ ಜನರ ಸಹಭಾಗಿತ್ವದೊಂದಿಗೆ ಕ್ರಮ ಕೈಗೊಳ್ಳಬೇಕೆಂದು ಗಾಡ್ಗೀಳ್ ಶಿಫಾರಸು ಮಾಡಿದ್ದರು.

ESZ-1 ಪ್ರದೇಶವನ್ನು ಸಂಪೂರ್ಣ ಗಣಿಗಾರಿಕೆ ನಿಷೇಧಿತ ವಲಯವಾಗಿ ಘೋಷಿಸಬೇಕು. ಈಗಿರುವ ಗಣಿಗಾರಿಕೆಯನ್ನು ಐದು ವರ್ಷಗಳಲ್ಲಿ ಹಂತ ಹಂತವಾಗಿ ನಿಲ್ಲಿಸಬೇಕು. ESZ-2 ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ಅವಕಾಶ ಇರಬಾರದು. ಈಗಿರುವ ಗಣಿಗಾರಿಕೆಯನ್ನು ಕಠಿಣ ನಿಯಮಗಳು ಮತ್ತು ಸಾಮಾಜಿಕ ಪರಿಶೀಲನೆಯೊಂದಿಗೆ ಮಾತ್ರ ನಡೆಸಬೇಕು. ಈ ವಲಯದ ಕೈಗಾರಿಕೆಗಳು ಶೂನ್ಯ ಮಾಲಿನ್ಯಕ್ಕೆ ಬದಲಾಗಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಹೊಸ ವಿಶೇಷ ಆರ್ಥಿಕ ವಲಯಗಳು (SEZ) ಮತ್ತು ಹೊಸ ಹಿಲ್ ಸ್ಟೇಷನ್‌ಗಳ ನಿರ್ಮಾಣಕ್ಕೆ ವರದಿ ವಿರೋಧ ವ್ಯಕ್ತಪಡಿಸಿದ್ದ ವರದಿ ಜಲಾಶಯಗಳ ನೀರು ಬಿಡುಗಡೆ ಕ್ರಮವನ್ನು ಬದಲಿಸಿ ಕೆಳಭಾಗದ ಪ್ರದೇಶ ಗಳಿಗೆ ನೀರು ಸರಿಯಾಗಿ ಹರಿಯುವಂತೆ ಮಾಡಲು, ಮರಳು ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು, ಗಣಿಗಾರಿಕೆ ನಡೆದ ಪ್ರದೇಶಗಳನ್ನು ಪುನಶ್ಚೇತನಗೊಳಿಸಿ, ವಿಶೇಷವಾಗಿ ಜಲ ಸಂಪನ್ಮೂಲಗಳನ್ನು ಪುನರುಜ್ಜೀವನಗೊಳಿಸಲು ಸಲಹೆ ನೀಡಿತ್ತು.

2012ರಲ್ಲಿ ಗಾಡ್ಗೀಳ್ ವರದಿ ಸಾರ್ವಜನಿಕವಾಗುತ್ತಿದ್ದಂತೆ ರಾಜ್ಯ ಸರ್ಕಾರಗಳು ಮತ್ತು ಜನಪ್ರತಿನಿಧಿ ಗಳು ವಿರೋಧ ವ್ಯಕ್ತಪಡಿಸಿದರು. ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವು ದರಿಂದ ಜನರ ಚಟುವಟಿಕೆಗಳಿಗೆ ತೊಂದರೆಯಾಗುತ್ತದೆ, ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ, ಇದು ಪಶ್ಚಿಮಘಟ್ಟ ಗಳ ಜನತೆಯ ಮರಣಶಾಸನ ಎಂಬ ತಪ್ಪು ಕಲ್ಪನೆ ಹರಡಲಾಯಿತು.

ವಿರೋಧದ ಹಿನ್ನೆಲೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2012ರ ಆಗಸ್ಟ್ ನಲ್ಲಿ ಡಾ.ಕೆ.ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಇನ್ನೊಂದು ಸಮಿತಿಯನ್ನು ರಚಿಸಿ ವರದಿ ತಯಾರಿಸಲು ಹೇಳಿತು. ಆ ಸಮಿತಿ 2013ರ ಏಪ್ರಿಲ್‌ನಲ್ಲಿ ವರದಿ ಸಲ್ಲಿಸಿತು. ಆ ವರದಿ ಗೂ ಸಹ ಟೀಕೆ ಮತ್ತು ವಿರೋಧ ವ್ಯಕ್ತವಾಯಿತು.

ಈ ಸಮಿತಿ ಪಶ್ಚಿಮ ಘಟ್ಟಗಳ ಒಟ್ಟು ಪ್ರದೇಶದ 37 ಶೇಕಡಾವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಲು ಶಿಫಾರಸು ಮಾಡಿತ್ತು. ಕರ್ನಾಟಕ ಸರಕಾರ ಇದನ್ನೂ ತಿರಸ್ಕರಿಸಿದೆ. ಮಾಧವ ಗಾಡ್ಗೀಳ್ ಅವರಿಗೂ ಈ ವರದಿಯ ಬಗ್ಗೆ ಭಿನ್ನಾಭಿಪ್ರಾಯವಿತ್ತು.

ಮರದ ಜಾತಿಗೆ ಗಾಡ್ಗೀಳ್ ಹೆಸರು!

2021ರಲ್ಲಿ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ನೆಲ್ಲಿಯಂ ಪತಿ ಬೆಟ್ಟಗಳಲ್ಲಿ ಒಂದು ಹೊಸ ಮರದ ಜಾತಿಯನ್ನು ಅನ್ವೇಷಿಸಲಾಯಿತು. ಮಾಧವ ಗಾಡ್ಗೀಳ್ ಅವರ ಗೌರವಾರ್ಥವಾಗಿ ಈ ಮರಕ್ಕೆ ‘ಎಲಯೋಕಾರ್ಪಸ್ ಗಾಡ್ಗೀಲಿ’ (Elaeocarpus gadgilii) ಎಂದು ಹೆಸರಿಡಲಾಗಿದೆ.

ಪ್ರಶಸ್ತಿಗಳು

ಭಾರತ ಸರಕಾರ ನೀಡುವ ಪ್ರತಿಷ್ಠಿತ ಪದ್ಮಶ್ರೀ ಹಾಗೂ ಪದ್ಮಭೂಷಣ ಪ್ರಶಸ್ತಿಗಳಿಗೆ ಮಾಧವ ಗಾಡ್ಗೀಳ್ ಪಾತ್ರರಾಗಿದ್ದಾರೆ. ಜಾಗತಿಕ ಪರಿಸರ ಸಂರಕ್ಷಣೆಗೆ ಅವರು ನೀಡಿದ ಕೊಡುಗೆ ಪರಿಗಣಿಸಿ ವಿಶ್ವಸಂಸ್ಥೆಯು 2024ರಲ್ಲಿ ಚಾಂಪಿಯನ್ಸ್ ಆಫ್ ದಿ ಅರ್ತ್‌ ಪುರಸ್ಕಾರ ನೀಡಿತು. ಶಾಂತಿ ಸ್ವರೂಪ ಭಟ್ನಾಗರ್ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ, ವಿಕ್ರಮ್ ಸಾರಾಭಾಯ್ ಪ್ರಶಸ್ತಿ, ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ ಪುರಸ್ಕಾರಗಳು ಅವರದಾಗಿವೆ.

ನಿಜವಾದ ಗಾಡ್ಗೀಳ್ ಭವಿಷ್ಯ

ಗಾಡ್ಗೀಳ್ ಅವರು ನೀಡಿದ್ದ ಪಶ್ಚಿಮ ಘಟ್ಟಗಳ ಕುರಿತ ವರದಿ ಭಾರೀ ವಿವಾದಕ್ಕೆ ಕಾರಣವಾಗಿ, ಅಭಿವೃದ್ಧಿ ವಿರೋಧಿ ಎಂದು ಕೆಲವರು ಆರೋಪಿಸಿದರು. ರಾಜಕೀಯವಾಗಿ ಅನುಕೂಲ ಕರವಲ್ಲ ಎಂಬ ಕಾರಣಕ್ಕೆ ವರದಿಯನ್ನು ಕಡೆಗಣಿಸಲಾಯಿತು. ಅನಿಯಂತ್ರಿತ ಅಭಿವೃದ್ಧಿಯಿಂದ ಭೂ ಕುಸಿತ, ಪ್ರವಾಹ ಮತ್ತು ದೀರ್ಘಕಾಲೀನ ಪರಿಸರ ವಿನಾಶ ಉಂಟಾಗಲಿದೆ ಎಂದು ಅಂದೇ ಗಾಡ್ಗೀಳ್ ಎಚ್ಚರಿಕೆ ನೀಡಿದರು. ಯಾರೂ ಈ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಹಲವು ವರ್ಷಗಳ ನಂತರ ಕೇರಳ, ಕೊಡಗು ಸೇರಿದಂತೆ ಪಶ್ಚಿಮ ಘಟ್ಟಗಳ ಹಲವು ಭಾಗಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ಗಳು ಮತ್ತು ಭೂಕುಸಿತಗಳು, ಗಾಡ್ಗೀಳ್ ಅವರ ಮಾತುಗಳನ್ನು ಸತ್ಯವೆಂದು ಸಾಬೀತುಪಡಿಸಿದವು. ವಯನಾಡ್‌ನ ನಾಶ ವನ್ನು ಅವರ ದೂರದೃಷ್ಟಿ ಅಂದೇ ಸಾರಿ ಹೇಳಿತ್ತು.