Astro Tips: ಯಾವ ದಿಕ್ಕಿನಲ್ಲಿ ಯಾವ ಕೆಲಸ ಮಾಡಬೇಕು? ಜ್ಯೋತಿಷ್ಯ ಶಾಸ್ತ್ರ ಹೇಳುವ ನಾಲ್ಕು ದಿಕ್ಕಿನ ರಹಸ್ಯ ಇದು
ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳು ಸೂರ್ಯನ ಬೆಳಕು ಮತ್ತು ಗ್ರಹಗಳ ಪ್ರಭಾವದಿಂದ ವಿಭಿನ್ನ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಪೂಜೆ ಮತ್ತು ಅಧ್ಯಯನ, ಉತ್ತರ ದಿಕ್ಕಿನಲ್ಲಿ ವ್ಯಾಪಾರ ಹಾಗೂ ಧನ ಸಂಬಂಧಿತ ಕಾರ್ಯಗಳು ಶುಭಕರವೆಂದು ಹೇಳಲಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಧ್ಯಾನ ಮಾಡುವುದು ಉತ್ತಮವಾದರೆ, ದಕ್ಷಿಣ ದಿಕ್ಕಿನಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸುವುದು ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಎನ್ನುವ ನಂಬಿಕೆ ಇದೆ.
ವಾಸ್ತು ಶಾಸ್ತ್ರ (ಸಂಗ್ರಹ ಚಿತ್ರ) -
ಬೆಂಗಳೂರು: ಹಿಂದೂ ಧರ್ಮ (Hindu Dharma) ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ದಿಕ್ಕುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿಯೊಂದು ದಿಕ್ಕು ಸೂರ್ಯನ ಬೆಳಕು ಮತ್ತು ಗ್ರಹಗಳ ಪ್ರಭಾವದೊಂದಿಗೆ ಸಂಬಂಧ ಹೊಂದಿದ್ದು, ಮಾನವನ ಜೀವನದ ಮೇಲೆ ವಿವಿಧ ರೀತಿಯ ಶಕ್ತಿಯನ್ನು ಬೀರುತ್ತದೆ. ದಿಕ್ಕುಗಳ ಮಹತ್ವವನ್ನು ತಿಳಿಯದೇ ಕೆಲವು ಕಾರ್ಯಗಳನ್ನು ಮಾಡಿದರೆ ಸಮಸ್ಯೆಗಳು ಎದುರಾಗಬಹುದು ಎನ್ನುವ ನಂಬಿಕೆ ಇದೆ. ಆದ್ದರಿಂದ ಯಾವ ದಿಕ್ಕಿನಲ್ಲಿ ಯಾವ ಕಾರ್ಯ ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಹಾಗಾದ್ರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯಂತೆ(Astro Tips) ಯಾವ ದಿಕ್ಕಿನಲ್ಲಿ ಯಾವ ಕೆಲಸ ಮಾಡಿದ್ರೆ ಶುಭ ಫಲಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಪೂರ್ವ ದಿಕ್ಕು: ಜ್ಞಾನ ಮತ್ತು ಕೀರ್ತಿಗೆ ಅನುಕೂಲ
ಪೂರ್ವ ದಿಕ್ಕು ಸೂರ್ಯನೊಂದಿಗೆ ಸಂಬಂಧ ಹೊಂದಿರುವುದರಿಂದ ಈ ದಿಕ್ಕು ಶಕ್ತಿಯುತವೆಂದು ಪರಿಗಣಿಸಲಾಗುತ್ತದೆ. ಪೂರ್ವ ದಿಕ್ಕಿಗೆ ಮುಖಮಾಡಿ ಪೂಜೆ, ಧ್ಯಾನ ಮತ್ತು ಅಧ್ಯಯನ ಮಾಡುವುದರಿಂದ ಜ್ಞಾನ, ಗೌರವ ಮತ್ತು ಕೀರ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕ ಕಾರ್ಯಗಳನ್ನು ಈ ದಿಕ್ಕಿನಲ್ಲಿ ಮಾಡುವುದು ಅತ್ಯಂತ ಶುಭಕರವೆಂದು ವಾಸ್ತು ಹೇಳುತ್ತದೆ.
ಪಶ್ಚಿಮ ದಿಕ್ಕು: ಧ್ಯಾನ ಮತ್ತು ಪ್ರಾರ್ಥನೆಗೆ ಉತ್ತಮ
ಪಶ್ಚಿಮ ದಿಕ್ಕನ್ನು ಶನಿಯ ಪ್ರಭಾವ ಇರುವ ದಿಕ್ಕೆಂದು ಹೇಳಲಾಗುತ್ತದೆ. ಕುಟುಂಬ ಸಂಬಂಧಗಳು ಮತ್ತು ಜೀವನದ ಸಮತೋಲನಕ್ಕೂ ಈ ದಿಕ್ಕು ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸುವುದರಿಂದ ಜೀವನದಲ್ಲಿ ಅಡೆತಡೆಗಳು ಉಂಟಾಗಬಹುದು ಎಂದು ನಂಬಲಾಗುತ್ತದೆ. ಆದರೆ ಪಶ್ಚಿಮ ದಿಕ್ಕಿಗೆ ಮುಖಮಾಡಿ ಧ್ಯಾನ ಮತ್ತು ಪ್ರಾರ್ಥನೆ ಮಾಡುವುದು ಒಳ್ಳೆಯದು ಎಂದು ಹೇಳಲಾಗಿದೆ.
Astro Tips: ಶನಿವಾರ ಈ ಸರಳ ಪರಿಹಾರಗಳಿಂದ ಶನಿ ದೋಷ- ಹಣಕಾಸಿನ ಸಮಸ್ಯೆ ದೂರ!
ಉತ್ತರ ದಿಕ್ಕು: ಸಂಪತ್ತಿನ ಸಂಕೇತ
ವಾಸ್ತು ಪ್ರಕಾರ ಉತ್ತರ ದಿಕ್ಕು ಧನಸಂಪತ್ತಿಗೆ ಸಂಬಂಧಿಸಿದ ದಿಕ್ಕೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿಗೆ ಮುಖಮಾಡಿ ವ್ಯವಹಾರ ಆರಂಭಿಸುವುದು ಅಥವಾ ಕೆಲಸಗಳನ್ನು ಪ್ರಾರಂಭಿಸುವುದು ಶುಭಕರವೆಂದು ಹೇಳಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಿದರೆ ಧನ ಮತ್ತು ಐಶ್ವರ್ಯ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ.
ದಕ್ಷಿಣ ದಿಕ್ಕು: ಎಚ್ಚರಿಕೆಯಿಂದ ಬಳಕೆಯ ದಿಕ್ಕು
ದಕ್ಷಿಣ ದಿಕ್ಕಿನ ಅಧಿಪತಿಗಳಾಗಿ ಮಂಗಳ ಮತ್ತು ಯಮನನ್ನು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ದೋಷಗಳು ಇದ್ದರೆ ಮನೆಯೊಳಗಿನ ಕಲಹಗಳು ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಆಸ್ತಿ ವಿಚಾರಗಳಲ್ಲಿ ಮನಸ್ಥಾಪಗಳು ಉಂಟಾಗಬಹುದು. ಈ ದಿಕ್ಕಿನಲ್ಲಿ ಆಂಜನೇಯ ಸ್ವಾಮಿಯನ್ನು ಪೂಜಿಸುವುದು ಮತ್ತು ಮಂಗಳ ಯಂತ್ರವನ್ನು ಅಳವಡಿಸುವುದು ಶುಭಕರವೆಂದು ನಂಬಿಕೆ ಇದೆ.
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಈ ನಾಲ್ಕು ದಿಕ್ಕುಗಳು ಜೀವನದ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಈ ದಿಕ್ಕುಗಳಿಗೆ ಅನುಗುಣವಾಗಿ ಕಾರ್ಯಗಳನ್ನು ಮಾಡಿದರೆ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗುತ್ತದೆ.