ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sadhanashree Column: ಹಬ್ಬದ ನಂತರದ ಸಮತೋಲನಕ್ಕಾಗಿ ಅಜ್ಜಿಯ ಸೂತ್ರಗಳು

ಮೀರಾಳ ಸ್ಥಿತಿ ಕಂಡು ಅವಳ ಅಜ್ಜಿ ಎಲ್ಲವನ್ನೂ ತಿಳಿದಂತೆ ಮುಗುಳ್ನಕ್ಕಳು. “ಹಬ್ಬಗಳು ರುಚಿರುಚಿ ಯಾದ ಖಾದ್ಯಗಳನ್ನು ಸವಿಯಲೇ ಇರುವುದು, ಮಗು. ಆದರೆ ಹಬ್ಬದ ನಂತರ ನಮ್ಮನ್ನು ಮತ್ತೆ ಸಮತೋಲನದ ಕಡೆ ಕರೆದೊಯ್ಯುವ ಸಮಯ ಬರುತ್ತದೆ. ಆಯುರ್ವೇದವು ಸ್ವಾಸ್ಥ್ಯವೆಂಬ ಸಮತೋಲನವನ್ನು ಹೇಗೆ ಪುನಃ ಅನುಭವಿಸುವುದು ಎಂದು ನಮಗೆ ಕಲಿಸುತ್ತದೆ" ಎಂದು ಹೇಳುತ್ತಾ ಅವಳು ಅಡುಗೆಮನೆಗೆ ನಡೆದಳು.

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಆಯುರ್ವೇದವು ಹಬ್ಬದ ವಿಶೇಷ ಖಾದ್ಯಗಳಿಂದ ದೂರವಿರಲು ಎಂದಿಗೂ ಹೇಳುವುದಿಲ್ಲ! ನಮ್ಮ ಆಚರಣೆಯು ಸ್ವಾಸ್ಥ್ಯ ಮತ್ತು ಸಂತೋಷಗಳ ಸಮತೋಲನವನ್ನು ಕಾಪಾಡಿ ಕೊಳ್ಳುವ ಪ್ರಯತ್ನ ವಾಗಿರಲಿ ಎಂಬುದು ನಮ್ಮ ಹಿರಿಯರ ಆಶಯ. ತಂಬುಳಿಯಂಥ ಪಾಕವಿಧಾನಗಳು ಕೇವಲ ಹಳೆಯ ಸಂಪ್ರದಾಯಗಳಲ್ಲ, ಅವು ಭೋಗದಿಂದ ಯೋಗ ಕ್ಷೇಮಕ್ಕೆ ಮರಳಲು ನಮಗೆ ಸಹಾಯ ಮಾಡುವ ಜೀವಂತ ಸಾಧನಗಳಾಗಿವೆ.

ಗಣೇಶ ಚತುರ್ಥಿಯ ಹಬ್ಬದ ನಂತರ ಮನೆಯಲ್ಲಿ ತುಪ್ಪ ಮತ್ತು ಧೂಪದ ಪರಿಮಳ ಇನ್ನೂ ಆವರಿಸಿತ್ತು. ಮೋದಕಗಳು, ಹೋಳಿಗೆಗಳು, ಹುರಿದ ತಿಂಡಿಗಳು ಮತ್ತು ಸಿಹಿಖಾದ್ಯಗಳನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಂಡಾಗಿತ್ತು. ನಮ್ಮಲ್ಲಿ ಅನೇಕರಂತೆ ಪುಟಾಣಿ ಮೀರಾ ಕೂಡ ಹಬ್ಬದಲ್ಲಿ ಕುಣಿದು ಕುಪ್ಪಳಿಸಿದ್ದಳು. ಹಾಡಿ ನಲಿದಿದ್ದಳು. ಕೋಡು ಬಳೆ ಚಕ್ಕುಲಿಗಳನ್ನು ಸವಿದಿದ್ದಳು.

ಆದರೆ ಮರುದಿನ ಯಾಕೊ ಮಂಕಾಗಿದ್ದಳು. ಅವಳ ಹೊಟ್ಟೆ ಉಬ್ಬಿತ್ತು, ಮೈಭಾರ ಎನಿಸುತ್ತಿತ್ತು. ಜ್ವರ ಬರುವ ಹಾಗಿತ್ತು. ಅವಳ ನಾಲಿಗೆ ನೋಡಿದಾಗ ಅದರ ಮೇಲೆ ಬೆಳ್ಳಗಿನ ದಪ್ಪನಾದ ಪದರ ಮೂಡಿತ್ತು. ಹಸಿವು ಹೆಚ್ಚಿಲ್ಲದ ಕಾರಣ ಅವಳು ಏನಾದರೂ ಲಘು ಮತ್ತು ಸುಲಭವಾಗಿ ಜೀರ್ಣ ವಾಗುವ ಆಹಾರವನ್ನು ಸೇವಿಸಲು ಇಚ್ಛಿಸಿದಳು.

ಮೀರಾಳ ಸ್ಥಿತಿ ಕಂಡು ಅವಳ ಅಜ್ಜಿ ಎಲ್ಲವನ್ನೂ ತಿಳಿದಂತೆ ಮುಗುಳ್ನಕ್ಕಳು. “ಹಬ್ಬಗಳು ರುಚಿರುಚಿ ಯಾದ ಖಾದ್ಯಗಳನ್ನು ಸವಿಯಲೇ ಇರುವುದು, ಮಗು. ಆದರೆ ಹಬ್ಬದ ನಂತರ ನಮ್ಮನ್ನು ಮತ್ತೆ ಸಮತೋಲನದ ಕಡೆ ಕರೆದೊಯ್ಯುವ ಸಮಯ ಬರುತ್ತದೆ. ಆಯುರ್ವೇದವು ಸ್ವಾಸ್ಥ್ಯವೆಂಬ ಸಮತೋಲನವನ್ನು ಹೇಗೆ ಪುನಃ ಅನುಭವಿಸುವುದು ಎಂದು ನಮಗೆ ಕಲಿಸುತ್ತದೆ" ಎಂದು ಹೇಳುತ್ತಾ ಅವಳು ಅಡುಗೆಮನೆಗೆ ನಡೆದಳು.

Dr Sadhanashree 3008

ತಾಜಾ ತಂಬುಳಿಯ ಮ್ಯಾಜಿಕ್: ಕರ್ನಾಟಕದಲ್ಲಿ ತಲೆ ಮಾರುಗಳಿಂದ, ತಂಬುಳಿಯು ಹಬ್ಬದ ಆನಂದ ಮತ್ತು ದೈನಂದಿನ ಸಮತೋಲನದ ನಡುವಿನ ಸೇತುವೆಯಾಗಿದೆ. ಇದು ವಿವಿಧ ರೀತಿಯ ಸೊಪ್ಪು/ಬಗೆ ಬಗೆಯ ತರಕಾರಿ ಮತ್ತು ಜೀರ್ಣಕ್ಕೆ ಸಹಾಯ ಮಾಡುವ ದ್ರವ್ಯಗಳೊಂದಿಗೆ ರುಬ್ಬಿದ ತೆಳುವಾದ ಮಜ್ಜಿಗೆ. ಜೀರ್ಣಕ್ಕೆ ಜಡವಾದ ಮೊಸರಿನ ತಯಾರಿಕೆಗಳಿಗಿಂತ ಭಿನ್ನವಾಗಿರುವ ತಂಬುಳಿಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತ್ರಿದೋಷಗಳಾದ ವಾತ-ಪಿತ್ತ-ಕಫಗಳನ್ನು ಶಮನ ಗೊಳಿಸಿ, ಹೊಟ್ಟೆಯನ್ನು ತಂಪಾಗಿಸಿ, ದೇಹವನ್ನು ಹಗುರವಾಗಿರಿಸುತ್ತದೆ.

ತನ್ನ ಅಜ್ಜಿಯು ಒಂದು ಚಮಚ ಜೀರಿಗೆಯನ್ನು ಸ್ವಲ್ಪ ಕೊಬ್ಬರಿ ಎಣ್ಣೆ ಮತ್ತು ತೆಂಗಿನ ತುರಿಯೊಂದಿಗೆ ಹುರಿದು, ಮಜ್ಜಿಗೆಯೊಂದಿಗೆ ರುಬ್ಬುವುದನ್ನು ಮೀರಾ ನೋಡುತ್ತಿದ್ದಳು. ಕೊನೆಯಲ್ಲಿ ಸ್ವಲ್ಪ ಹಿಂಗು ಮತ್ತು ಕರಿಬೇವಿನ ಒಗ್ಗರಣೆಯನ್ನೂ ಹಾಕಲಾಯಿತು.

“ತೊಗೋಳೇ ಮೀರಾ, ಇದು ಜೀರಾ ತಂಬುಳಿ. ಸ್ವಲ್ಪ ಮೆತ್ತಗಿನ ಅನ್ನದ ಜತೆ ಇದನ್ನು ಕಲಸಿಕೊಂಡು ತಿಂದರೆ ಯಾವುದೇ ಮಾತ್ರೆಗಿಂತಲೂ ವೇಗವಾಗಿ ನಿನ್ನ ಹೊಟ್ಟೆಯನ್ನು ಇದು ಸರಿಪಡಿಸುತ್ತದೆ" ಎಂದಳು ಅಜ್ಜಿ. ಮೀರಾ, ಅಜ್ಜಿಯ ಸಲಹೆಯಂತೆ ಮಾಡಿದಳು.

ಇದನ್ನೂ ಓದಿ: Dr Sadhanashree Column: ಜೀವನೀಯವಾದ ಹಾಲು, ಹಾಲಾಹಲವಾಗಿದ್ದು ಹೇಗೆ ?

ತಂಬುಳಿಯು ಬಹಳ ರುಚಿಯಾಗಿತ್ತು. ಸ್ವಲ್ಪ ಸಮಯದಲ್ಲೇ ಅವಳ ಹೊಟ್ಟೆಯಲ್ಲಿನ ಕಿರಿಕಿರಿ ಶಮನವಾದ ಅನುಭವ. ದಿನ ಕಳೆದಂತೆ, ಮೀರಾ ತನ್ನ ಅಜ್ಜಿಯು ಹಬ್ಬಗಳ ನಂತರ ಯಾವಾಗಲೂ ಬಳಸುವ ಕೆಲವು ಪಾಕವಿಧಾನಗಳನ್ನು ಕಲಿತಳು. ಆಯುರ್ವೇದದ ಶಾಸ್ತ್ರದ ಸಮ್ಮತವಾಗಿರುವ ಪ್ರತಿಯೊಂದು ಖಾದ್ಯವು ಸಹ ದೇಹಕ್ಕೆ ಅಮೃತವಿದ್ದಂತೆ.

ಜೀರಾ ತಂಬುಳಿ (ಜೀರಿಗೆ ಮಜ್ಜಿಗೆ): ಜೀರಿಗೆಯು ಹೊಟ್ಟೆನೋವು ಮತ್ತು ಉಬ್ಬರವನ್ನು ಕಡಿಮೆ ಮಾಡುತ್ತದೆ. ಕರಿಬೇವು ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ ಮತ್ತು ಮಜ್ಜಿಗೆಯು ತ್ರಿದೋಷ ಗಳನ್ನು ಶಮನಮಾಡುತ್ತದೆ. ಜೀರಿಗೆಯನ್ನು ತೆಂಗಿನ ತುರಿ, ಒಂದು ಚಿಟಿಕೆ ಮೆಣಸಿನಲ್ಲಿ ಹುರಿದು, ಚೆನ್ನಾಗಿ ಕಡೆದ ಮಜ್ಜಿಗೆಯೊಂದಿಗೆ ರುಬ್ಬುವುದು. ನಂತರ ಮೇಲೆ ಒಗ್ಗರಣೆ ನೀಡಿ ಕಲ್ಲುಪ್ಪನ್ನು ಬೆರೆಸಿದರೆ ಜೀರಿಗೆ ತಂಬುಳಿ ಸಿದ್ಧ.

“ತಂಬುಳಿಯನ್ನು ರಾತ್ರಿಯಿಡೀ ಫ್ರಿಜ್‌ನಲ್ಲಿ ಎಂದಿಗೂ ಇಡಬೇಡಿ" ಎಂದು ಅಜ್ಜಿ ಎಚ್ಚರಿಸಿ, “ಇದನ್ನು ಯಾವಾಗಲೂ ಸೇವಿಸುವುದಕ್ಕೆ ಕೆಲ ಸಮಯ ಮುನ್ನವೇ ತಯಾರಿಸಬೇಕು ಮತ್ತು ಆಗಲೇ ಸೇವಿಸಬೇಕು" ಎಂದು ಸಲಹೆಯಿತ್ತಳು.

ಶುಂಠಿ ತಂಬುಳಿ: ಸಿಹಿಯಾದ ಮೋದಕ, ಲಡ್ಡು ಮತ್ತು ಹುರಿದ ತಿಂಡಿಗಳ ನಂತರದ ಆಲಸ್ಯ ಹೋಗಿಸಿ ದೇಹೇಂದ್ರಿಯಗಳನ್ನು ಚುರುಕುಗೊಳಿಸಲು ಶುಂಠಿ ತಂಬುಳಿ ಅತ್ಯಂತ ಸಹಾಯಕಾರಿ. ತಾಜಾ ಶುಂಠಿಯನ್ನು ತೆಂಗಿನ ತುರಿಯೊಂದಿಗೆ ಸ್ವಲ್ಪ ತುಪ್ಪದಲ್ಲಿ ಹುರಿದು, ಹುಳಿಯಿಲ್ಲದ ಮಜ್ಜಿಗೆಯೊಂದಿಗೆ ಸ್ವಲ್ಪ ಉಪ್ಪಿನ ಜತೆ ರುಬ್ಬಿ, ಮೇಲೊಗ್ಗರಣೆ ನೀಡಿದರೆ ಅದುವೇ ಶುಂಠಿ ತಂಬುಳಿ. ಈ ತಂಬುಳಿಯು ಜಠರಾಗ್ನಿಯನ್ನು ಉತ್ತೇಜಿಸಿ ಮಲಪ್ರವೃತ್ತಿಯನ್ನು ಸರಿಪಡಿಸುತ್ತದೆ. ಅದರೆ ಬೇಸಗೆಯಲ್ಲಿ, ಉಷ್ಣಪ್ರಕೃತಿಯವರು ಜೋಪಾನವಾಗಿ ಬಳಸಬೇಕು.

ದೊಡ್ಡಪತ್ರೆ ತಂಬುಳಿ: ತುಂಬಾ ಸಿಹಿತಿಂಡಿಗಳ ಸೇವನೆಯಿಂದಾಗಿ ಗಂಟಲು ತುರಿಕೆ, ನೆಗಡಿ, ತಲೆಭಾರ ಅನುಭವಿಸುವಾಗ, ಅಜ್ಜಿಯು ಹಿತ್ತಲಿನಿಂದ ದೊಡ್ಡಪತ್ರೆ ಸಸ್ಯದ ಎಲೆಗಳನ್ನು ಆರಿಸುತ್ತಾಳೆ. ಅವಳು ಎಲೆಗಳನ್ನು ಕಾಳುಮೆಣಸಿನೊಂದಿಗೆ ತುಪ್ಪದಲ್ಲಿ ಲಘುವಾಗಿ ಹುರಿದು, ಮಜ್ಜಿಗೆಯಲ್ಲಿ ರುಬ್ಬಿ, ಒಗ್ಗರಿಸಿ ಅಕ್ಕಿ ಗಂಜಿ ಯೊಂದಿಗೆ ಸೇವಿಸಲು ನೀಡುತ್ತಾಳೆ.

ರುಚಿಕರವಾದ ಈ ತಂಬುಳಿ ಮೀರಾಳಿಗೆ ಬಹಳ ಪ್ರಿಯ. ಸೇವಿಸಿದೊಡನೆಯೇ ಆರಾಮ. ಇದು ಅವಳ ‘ಅಜ್ಜಿಯ ಆಹಾರ’ವೆಂಬ ಔಷಧಿಯ ಚಮತ್ಕಾರ. ಹಬ್ಬದ ಅಸ್ವಾಸ್ಥ್ಯವನ್ನು ನೀಗುವ ಕೆಲವು ಪಾನೀಯ ಗಳೂ ಇವೆ. ತಂಬುಳಿ ರೂಪದಲ್ಲೂ ಮಜ್ಜಿಗೆಯನ್ನು ಸೇವಿಸಲು ಕೆಲವರಿಗೆ ಸಾಧ್ಯವಾಗದೆ ಇರಬಹುದು. ಅಂಥ ಸಮಯದಲ್ಲಿ ಸಂಸ್ಕರಿಸಿದ ನೀರನ್ನು ಸೇವಿಸಬಹುದು. ಅಂಥ ಕೆಲವು ಇಲ್ಲಿವೆ:

ಹಿಂಗು ಜೀರಿಗೆ ನೀರು: ನೀರಲ್ಲಿ ಹುರಿದ ಜೀರಿಗೆ ಪುಡಿಯೊಂದಿಗೆ ಒಂದು ಚಿಟಿಕೆ ಹಿಂಗನ್ನು ಹಾಕಿ ಕುದಿಸಿ. ಈ ನೀರನ್ನು ಬಿಸಿಯಾಗಿ ಹೀರಿದಾಗ, ಹೊಟ್ಟೆಯುಬ್ಬರ, ನೋವು, ವಾಯುವಿನ ಬಿಗಿತವನ್ನು ಶಮನ ಗೊಳಿಸಿ, ಹಸಿವೆಯನ್ನು ಚುರುಕುಗೊಳಿಸುತ್ತದೆ.

ಅಜ್ವೈನ್ ಟೀ: ಆಲೂಗಡ್ಡೆ, ಕಾಳುಗಳು, ಬಟಾಣಿಗಳು ಮೀರಾಳಿಗೆ ಹೊಟ್ಟೆ ನೋವು ನೀಡಿದಾಗ, ಅಜ್ಜಿ ಓಮದ ಕಾಳುಗಳನ್ನು ನೀರಿನಲ್ಲಿ ಕುದಿಸಿ, ಅದನ್ನು ಸೋಸಿ ಟೀ ರೀತಿಯಾಗಿ ಬಿಸಿಬಿಸಿಯಾಗಿ ಹೀರಲು ನೀಡುತ್ತಾಳೆ. “ಇದು ಹೊಟ್ಟೆಯಲ್ಲಿ ಗುಡುಗುಡು ಮಾಡುವ ಗಾಳಿಯನ್ನು ಓಡಿಸುತ್ತದೆ, ಕುಡಿ" ಎಂದು ಹಾಸ್ಯ ಮಾಡುತ್ತಾಳೆ. ಅದರಂತೆಯೇ, ಈ ಅಜ್ವೈನ್ ಟೀ ಕುಡಿದ ಸ್ವಲ್ಪ ಸಮಯದ ವಾಯುವು ಕೆಳಮುಖವಾಗಿ ಸಶಬ್ದವಾಗಿ ಹೊರಗೆ ಹೋದಾಗ ಮೀರಾಳಿಗೆ ಎಲ್ಲಿಲ್ಲದ ಸಮಾಧಾನ!

ಪೊಂಗಲ್ ಇಲ್ಲವೇ ಗಂಜಿ: ಅಂದು ಸಂಜೆಯ ಹೊತ್ತಿಗೆ ಮೀರಾಳಿಗೆ ಚೆನ್ನಾಗಿ ಹಸಿವಾದಾಗ ಅಜ್ಜಿಯು ಹಬೆಯಾಡುವ ಬಟ್ಟಲಿನಲ್ಲಿ ಹೆಸರು ಬೇಳೆಯಿಂದ ತಯಾರಿಸಿದ ತೆಳುವಾದ ಪೊಂಗಲ್ ಅನ್ನು ಬಡಿಸಿದರು. ಅಕ್ಕಿ ಮತ್ತು ಹೆಸರುಬೇಳೆಯನ್ನು ಸ್ವಲ್ಪ ಹುರಿದು ಅರಿಶಿನದೊಂದಿಗೆ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ ನಂತರ ತುಪ್ಪದಲ್ಲಿ ಹಿಂಗು ಜೀರಿಗೆ ಒಗ್ಗರಣೆ ಮಾಡುವುದು ಇದರ ತಯಾರಿಕಾ ಕ್ರಮ. ಇದು ಹಗುರವಾದರೂ ಪೌಷ್ಟಿಕವಾದ ಆಹಾರ. ಇದು ಎಲ್ಲರಿಗೂ ಹಿತವನ್ನು ನೀಡುವ ಆಹಾರ.

ಇತರ ದಿನಗಳಲ್ಲಿ, ಜೀರ್ಣಾಂಗವ್ಯೂಹವು ಪೊಂಗಲ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ತುಂಬಾ ದುರ್ಬಲವಾಗಿದ್ದಾಗ, ಅಜ್ಜಿ ತೆಳುವಾದ ಅಕ್ಕಿ ಗಂಜಿಯನ್ನು ಮಾಡುತ್ತಾಳೆ. ಸ್ವಲ್ಪ ಉಪ್ಪು ಸೇರಿಸಿ ಹೆಚ್ಚುವರಿ ನೀರಿನಲ್ಲಿ (ಸುಮಾರು 14 ಪಟ್ಟು ) ಹುರಿದಕ್ಕಿಯನ್ನು ತೆರೆದ ಪಾತ್ರೆಯಲ್ಲಿ ಬೇಯಿಸುವುದು. ಮೇಲೆ ಸ್ವಲ್ಪ ತುಪ್ಪವನ್ನು ಸೇರಿಸಿ ಸವಿದರೆ ಬಹಳ ಆರಾಮದಾಯಕ.

“ಈ ಹುರಿದಕ್ಕಿಯ ಗಂಜಿಯು ಹಬ್ಬದ ನಂತರ ನಿಮ್ಮ ಹೊಟ್ಟೆಗೆ ವಿಶ್ರಾಂತಿ ನೀಡುವಂಥದ್ದು" ಎಂದು ವಿವರಿಸುವ ಅಜ್ಜಿ, “ಇದು ಜೀರ್ಣಿಸಿಕೊಳ್ಳಲು ಸುಲಭ, ಹೀರಿಕೊಳ್ಳಲು ಸುಲಭ" ಎನ್ನುವು ದನ್ನು ಮರೆಯುವುದಿಲ್ಲ.

ಕೊಕಮ್-ಕೊತ್ತಂಬರಿ ಸೂಪ್: ನೀರಿನಲ್ಲಿ ಕೊಕಮ್ ಸಿಪ್ಪೆಯನ್ನು ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸ್ವಲ್ಪ‌ ಬೆಲ್ಲದೊಟ್ಟಿಗೆ ಹಾಕಿ ಕುದಿಸಿ ರುಚಿಗೆ ತಕ್ಕಷ್ಟು ಉಪ್ಪು ಮತ್ತೆ ಮೇಲೊಗ್ಗರಣೆ ಯನ್ನು ನೀಡಿದರೆ ಕೊಕಮ-ಕೊತ್ತಂಬರಿ ಸೂಪ್ ಸಿದ್ಧ. ಈ ಸೂಪ್ ಬಹಳ ಹಿತಕಾರಿ, ರಿಫ್ರೆಶಿಂಗ್ ಮತ್ತು ಹೈಡ್ರೇಟಿಂಗ್.

ಆಮ್ಲಾ-ಶುಂಠಿ-ಜೇನುತುಪ್ಪದ ಮಿಶ್ರಣ: ಬೆಳಗ್ಗೆ ಸ್ವಲ್ಪ ಜೇನುತುಪ್ಪದೊಂದಿಗೆ ತಲಾ ಒಂದು ಟೀ ಚಮಚ ಆಮ್ಲಾ ರಸ ಮತ್ತು ಶುಂಠಿ ರಸವನ್ನು ಸೇವಿಸುವುದು ಜೀರ್ಣಕಾರಿ. “ನಿದ್ದೆಯಿಲ್ಲದ ಹಬ್ಬದ ರಾತ್ರಿಗಳ ನಂತರ ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಿಶ್ರಣ" ಎಂದು ಅಜ್ಜಿ ಮೀರಾಳಿಗೆ ಹೇಳುತ್ತಾರೆ. ಆದರೆ ದಿನನಿತ್ಯವೂ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಹಬ್ಬದ ನಂತರ ಪುನಃ ಸ್ವಾಸ್ಥ್ಯದತ್ತ ಹೆಜ್ಜೆಯಿಡಲು ಅಜ್ಜಿ ಮೀರಾಳಿಗೆ ನೀಡಿದ ಇನ್ನೊಂದಿಷ್ಟು ಸಲಹೆಗಳು:

ದೇಹದಲ್ಲಿ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಅಜೀರ್ಣವಾದ ಅಂಶಗಳನ್ನು ಹೊರಹಾಕಲು ದಿನ ವಿಡೀ ಕಾದಾರಿದ ಬೆಚ್ಚಗಿನ ನೀರನ್ನು ಕುಡಿಯುವುದು ಅಥವಾ ಜೀರಿಗೆ/ಧನಿಯಾ/ಸೋಂಪು/ಶುಂಠಿ/ ಭದ್ರಮುಷ್ಟಿ/ಓಮದಿಂದ ಸಂಸ್ಕರಿಸಿದ ನೀರನ್ನು ಸೇವಿಸಬೇಕು.

ಜೀರ್ಣಕ್ರಿಯೆ ಮೊದಲಿನಂತೆ ಆಗುವವರೆಗೆ ತಂಪು ಪಾನೀಯಗಳು, ಸಿಹಿತಿಂಡಿಗಳು ಮತ್ತು ಕರಿದ ತಿಂಡಿಗಳನ್ನು ತಪ್ಪಿಸಬೇಕು, ಮೊಸರನ್ನು ಬಿಡಬೇಕು.

ಸಕ್ಕರೆ ಭರಿತವಾದ ಫ್ರೂಟ್ ಜ್ಯೂಸ್, ಇಡ್ಲಿ, ಬ್ರೆಡ್ ನಂಥ ಬೇಕರಿ ಪದಾರ್ಥಗಳು ಬೇಡ.

ಹಸಿವಿಲ್ಲದಿದ್ದರೆ ಆಹಾರವನ್ನು ತ್ಯಜಿಸುವುದೇ ಕ್ಷೇಮ. ಒಂದು ಅಥವಾ ಎರಡು ದಿನಗಳವರೆಗೆ ಗಂಜಿ/ತೆಳು ಪೊಂಗಲ್‌ನಂಥ ಆಹಾರಕ್ಕೆ ಆದ್ಯತೆ ನೀಡಬೇಕು.

ಜೀರ್ಣಕ್ರಿಯೆಗೆ ಸಹಾಯ ಮಾಡಲು ಊಟದ ನಂತರ 100-200 ಹೆಜ್ಜೆ ಹಾಕಬೇಕು ಅಥವಾ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು. ಹಗಲು ನಿz ಸುತರಾಂ ವರ್ಜ್ಯ.

ದಿನಚರಿಯನ್ನು ಪುನಃಸ್ಥಾಪಿಸಲು ಬೇಗನೆ ಮಲಗಬೇಕು ಮತ್ತು ಸೂರ್ಯೋದಯದ ಮುನ್ನ ಎದ್ದೇಳ ಬೇಕು.. ಈ ಎಲ್ಲಾ ಸಲಹೆಗಿಂತ ಮಿಗಿಲಾದ ಸಲಹೆಯೂ ಅಜ್ಜಿಯಿಂದ ಹೊಮ್ಮಿತು.

“ನೀನು ನಿನ್ನ ದೇಹದ ಮಾತನ್ನು ಕೇಳಬೇಕು. ಅದೇ ನಿನಗೆ ಎಲ್ಲವನ್ನೂ ತಿಳಿಸುತ್ತದೆ" ಎಂದು ಅಜ್ಜಿ ಮೀರಾಳಿಗೆ ನೆನಪಿಸಿದರು.

“ಆಯುರ್ವೇದವು ಕೇವಲ ಆಹಾರದ ಬಗ್ಗೆ ಮಾತ್ರವಲ್ಲದೆ ಸ್ವಾಸ್ಥ್ಯವೆಂಬ ಸಾಮರಸ್ಯದ ಬಗ್ಗೆಯೂ ಸಲಹೆ ನೀಡುತ್ತದೆ. ಮೀರಾ, ಆಯುರ್ವೇದವು ಹಬ್ಬದ ವಿಶೇಷ ಖಾದ್ಯಗಳಿಂದ ದೂರವಿರಲು ಎಂದಿಗೂ ಹೇಳುವುದಿಲ್ಲ! ನಮ್ಮ ಆಚರಣೆಯು ಸ್ವಾಸ್ಥ್ಯ ಮತ್ತು ಸಂತೋಷಗಳ ಸಮತೋಲನ ವನ್ನು ಕಾಪಾಡಿಕೊಳ್ಳುವ ಪ್ರಯತ್ನವಾಗಿರಲಿ ಎಂಬುದು ನಮ್ಮ ಹಿರಿಯರ ಆಶಯ.

ತಂಬುಳಿಯಂಥ ಪಾಕವಿಧಾನಗಳು ಕೇವಲ ಹಳೆಯ ಸಂಪ್ರದಾಯಗಳಲ್ಲ, ಅವು ಭೋಗದಿಂದ ಯೋಗಕ್ಷೇಮಕ್ಕೆ ಮರಳಲು ನಮಗೆ ಸಹಾಯ ಮಾಡುವ ಜೀವಂತ ಸಾಧನಗಳಾಗಿವೆ" ಎಂದಿತು ಅಜ್ಜಿಯ ಅನುಭವ.

ಮರುದಿನ ಬೆಳಗ್ಗೆ, ಮೀರಾಳಿಗೆ ಸುಲಭವಾಗಿ ಎಚ್ಚರವಾಯಿತು, ಅವಳ ದೇಹದ ಭಾರವು ಮಾಯ ವಾಗಿತ್ತು. ಶರೀರ-ಇಂದ್ರಿಯ-ಮನಸ್ಸುಗಳು ಲವಲವಿಕೆಯಿಂದ ಕೂಡಿದ್ದವು. ಆಗ ಅವಳಿಗೆ ಹೀಗೆ ಭಾಸವಾಯಿತು- “ನನ್ನ ಅಜ್ಜಿಯ eನವು ಕೇವಲ ಪಾಕವಿಧಾನಗಳಿ ಗಿಂತಲೂ ಮಿಗಿಲು. ಅದು ದೇಹವನ್ನು ಗೌರವಿಸಿ, ಅದು ನೀಡುವ ಸೂಚನೆಗಳನ್ನು ಆಲಿಸಿ, ಅದರಂತೆ ನಡೆದು ಅದನ್ನು ಪುನಃ ಸ್ವಾಸ್ಥ್ಯಕ್ಕೆ ತರುವ ಬಹಳ ಉತ್ತಮವಾದ ಮಾರ್ಗ"

ಹಬ್ಬಗಳು ಬರುತ್ತಲೇ ಇರುತ್ತವೆ, ಸಿಹಿತಿಂಡಿಗಳು ಮತ್ತು ಖಾದ್ಯಗಳು ಅವಳನ್ನು ಯಾವಾಗಲೂ ಆಕರ್ಷಿಸುತ್ತಿರುತ್ತವೆ; ಆದರೆ ಇನ್ನು ಮುಂದೆ ಹುಷಾರು ತಪ್ಪುವ ಅಗತ್ಯವಿಲ್ಲ. ಕಾರಣ, ಈಗ ಮೀರಾ ಳ ಬಳಿ ಅವಳನ್ನು ನೈಸರ್ಗಿಕವಾಗಿ ಗುಣಪಡಿಸುವ ಆಯುರ್ವೇದದ ಪಾಕ ವಿಧಾನಗಳ ಶಸ್ತ್ರಾಸ್ತ್ರ ವಿದೆ. ಅವೆಂದರೆ- ತಂಬುಳಿಗಳ ಹಿತ, ಜೀರಿಗೆ ನೀರಿನ ಜಾದೂ, ಪೊಂಗಲ್‌ನ ಸುಖ, ಹುರಿದಕ್ಕಿ ಗಂಜಿಯ ಪ್ರೀತಿ ಮತ್ತು ಕೊಕಮ್ ಸೂಪಿನ ಸಾಂತ್ವನ!

ಇದನ್ನು ನೆನಪಿಸಿಕೊಂಡು ಅವಳು, “ಮುಂದಿನ ಬಾರಿ ನಾನು ಅತಿಯಾಗಿ ತಿಂದರೂ ಗಾಬರಿಯಾಗು ವುದಿಲ್ಲ. ನಾನು ಅಡುಗೆಮನೆಗೆ ಓಡಿ ಹೋಗಿ ತಂಬುಳಿ ಮಾಡಿಕೊಳ್ಳುತ್ತೇನೆ" ಎಂದು ಹೇಳಿ ಮುಗು ಳ್ನಕ್ಕಳು. ಈ ಮಾತಿಗೆ ಅಜ್ಜಿ ನಕ್ಕು, “ಆ! ಅದು ನೋಡು ಮಾತು! ಮಗು, ಹಬ್ಬವನ್ನು ಸಂತೋಷ ದಿಂದ ಆಚರಿಸೋಣ, ನಂತರ ಜಾಣ್ಮೆಯಿಂದ ಸ್ವಸ್ಥರಾಗೋಣ!" ಎಂದು ಹೇಳಿದರು.

ಹಾಗಂತ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅಜ್ಜಿ ಎಂದ ಮೇಲೆ ಬುದ್ಧಿಮಾತು ಹೇಳಲೇಬೇಕಲ್ಲವಾ? “ಹಬ್ಬದ ಆಚರಣೆಯಲ್ಲಿಯೂ ನಮ್ಮ ಹಸಿವನ್ನು ಗಮನಿಸಿ, ಜೀರ್ಣಶಕ್ತಿಯನ್ನು ಅನುಸರಿಸಿ ಆಹಾರವನ್ನು ಸೇವಿಸಿದರೆ ಈ ಫಜೀತಿ ಬರುವುದೇ ಇಲ್ಲವ ಪುಟ್ಟಾ.... ಹಾಗೆ ನಡೆಯುವುದು ನಿಜವಾದ ಆಯುರ್ವೇದ ಕಣೋ!" ಎಂದಳು ಮೀರಾಳ ಅಜ್ಜಿ!

ಡಾ. ಸಾಧನಾಶ್ರೀ ಪಿ,

View all posts by this author