ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Hari Paraak Column: ಕಾಡಲ್ಲಿದ್ರೂ ಹುಲೀನೇ, ರೋಡಲ್ಲಿದ್ರೂ ಹುಲೀನೇ

ನಿಮ್ಮಲ್ಲಿ ಅದೇ ಕಾಲೇಜ್ ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್ ಸಿನಿಮಾಗಳು ಇದ್ದರೆ ಅವನ್ನೆಲ್ಲ ಮೂಲೆ ಗೆ ಎತ್ತಿಡಿ ಅಂತ ಆದೇಶಿಸಿಬಿಟ್ಟಿದ್ದಾರೆ. ಇವೆಲ್ಲ, ಇತ್ತೀಚೆಗೆ ದೊಡ್ಡ ಬಜೆಟ್‌ನ, ಮಿತಿ ಮೀರಿದ ಅಬ್ಬರ ಇರೋ ಸಿನಿಮಾಗಳು ಬಂದಿದ್ದರ ಸೈಡ್ ಎಫೆಕ್ಟ್. ಸಾಮಾನ್ಯ ಪ್ರೇಕ್ಷಕರು ಇಂಥ ಚಿತ್ರಗಳ ಅಬ್ಬರ ನೋಡಿ ಹೀಗೆ ಮರುಳಾಗೋದು‌ ಆಶ್ಚರ್ಯವೇನಲ್ಲ

Hari Paraak Column: ಕಾಡಲ್ಲಿದ್ರೂ ಹುಲೀನೇ, ರೋಡಲ್ಲಿದ್ರೂ ಹುಲೀನೇ

ಅಂಕಣಕಾರ ಹರಿ ಪರಾಕ್‌

ಹರಿ ಪರಾಕ್‌ ಹರಿ ಪರಾಕ್‌ Feb 2, 2025 9:55 AM

ತುಂಟರಗಾಳಿ

ಸಿನಿಗನ್ನಡ

ಚಿತ್ರರಂಗದಲ್ಲಿ ಈಗ ಮಾತೆತ್ತಿದರೆ ಪ್ಯಾನ್ ಇಂಡಿಯಾ ಸಿನಿಮಾ, ಹೈ ಬಜೆಟ್ ಚಿತ್ರ, ಟೆಕ್ನಿಕಲಿ ಬ್ರಿಲಿಯಂಟ್, ಹೊಸ ಅಲೆಯ ಚಿತ್ರಗಳು ಅಂತೆ ಮಾತುಗಳು ಶುರುವಾಗಿವೆ. ಕೆಲವರಂತೂ ಮಿತಿ ಮೀರಿದ ಉತ್ಸಾಹದಲ್ಲಿ, ‘ಮಾಮೂಲಿ ಲವ್ ಸ್ಟೋರಿ, ಫ್ಯಾಮಿಲಿ ಸ್ಟೋರಿಗಳು ಇರೋ ಸಿನಿಮಾಗಳು ಓಡೋದೇ ಇಲ್ಲ’ ಅಂತ ಷರಾ ಬರೆದುಬಿಟ್ಟಿದ್ದಾರೆ.

ನಿಮ್ಮಲ್ಲಿ ಅದೇ ಕಾಲೇಜ್ ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್ ಸಿನಿಮಾಗಳು ಇದ್ದರೆ ಅವನ್ನೆಲ್ಲ ಮೂಲೆಗೆ ಎತ್ತಿಡಿ ಅಂತ ಆದೇಶಿಸಿಬಿಟ್ಟಿದ್ದಾರೆ. ಇವೆಲ್ಲ, ಇತ್ತೀಚೆಗೆ ದೊಡ್ಡ ಬಜೆಟ್‌ನ, ಮಿತಿ ಮೀರಿದ ಅಬ್ಬರ ಇರೋ ಸಿನಿಮಾಗಳು ಬಂದಿದ್ದರ ಸೈಡ್ ಎಫೆಕ್ಟ್. ಸಾಮಾನ್ಯ ಪ್ರೇಕ್ಷಕರು ಇಂಥ ಚಿತ್ರಗಳ ಅಬ್ಬರ ನೋಡಿ ಹೀಗೆ ಮರುಳಾಗೋದು‌ ಆಶ್ಚರ್ಯವೇನಲ್ಲ.

ಆದರೆ ಅದು ಸತ್ಯ ಅಲ್ಲ. ಸಿನಿಮಾದಲ್ಲಿ ಏನ್ ಪ್ರಯೋಗಗಳಾಗಲೀ, ಎಷ್ಟೇ ಹೈ ಬಜೆಟ್ ಸಿನಿಮಾ ಗಳು, ಏನೇ ಸೋ ಕಾಲ್ಡ್ ಕಂಟೆಂಟ್ಬೇ ಸಿನಿಮಾಗಳು ಬಂದರೂ ಮಾನವೀಯತೆಯ ಟಚ್ ಇರೋ ಸಿನಿಮಾಗಳಿಗೆ ಎಂದಿಗೂ ಸಾವಿಲ್ಲ. ಪ್ರೇಕ್ಷಕ ಯಾವತ್ತೂ ಸಿನಿಮಾಗೆ ಎಷ್ಟು ದುಡ್ಡು ಹಾಕಿದ್ದೀರಾ, ಏನೇನು ಸರ್ಕಸ್ ಮಾಡಿದ್ದೀರಾ ಅಂತ ಕೇಳಲ್ಲ, ಅವನಿಗೆ ಸಿನಿಮಾ ಇಷ್ಟ ಆದ್ರೆ ಅಷ್ಟೇ ಸಾಕು.

ಅಂದಿನ ಬಂಗಾರದ ಮನುಷ್ಯ, ನಾಗರಹಾವು ಚಿತ್ರಗಳಿಂದ ಹಿಡಿದು ನಂತರದ ನಂಜುಂಡಿ ಕಲ್ಯಾಣ, ರಾಮಾಚಾರಿ, ಜನುಮದ ಜೋಡಿಯಂಥ ಸಿನಿಮಾಗಳನ್ನು, ‘ಅಯ್ಯೋ, ಕಡಿಮೆ ಬಜೆಟ್‌ ನಲ್ಲಿ ಮಾಡಿದ್ದೀರಾ’ ಅಂತ ಅವನು ತಿರಸ್ಕರಿಸಿಲ್ಲ. ಮುಂದೆಯೂ ಅದು ಹಾಗೇ ಇರುತ್ತದೆ.

ಹಾಗಾಗಿ, ಅಯ್ಯೋ, ದೊಡ್ಡ ಬಜೆಟ್ ಸಿನಿಮಾಗಳು ಮಾತ್ರ ಗೆಲ್ತಾವೆ ಅಂತ ಯಾರೂ ಗಾಬರಿ ಗೊಳ್ಳುವ ಅಗತ್ಯವಿಲ್ಲ. ಆದರೆ ಪ್ರೇಕ್ಷಕರಿಗೆ ಗಂಭೀರವಾದ, ಪ್ರಾಮಾಣಿಕವಾದ ಕಂಟೆಂಟ್ ಬೇಕಿದೆ. ವಿಜಯ್ ಪ್ರಸಾದ್‌ರಂಥ ನಿರ್ದೇಶಕರು ಅದನ್ನು ಮಾಡಲು ಯತ್ನಿಸ್ತಿದ್ರೂ ಮಿತಿಮೀರಿದ ಅಶ್ಲೀಲತೆ ಬಳಸುವ ಮೂಲಕ ತಮ್ಮನ್ನ ತಾವೇ ಹಾಳುಮಾಡಿಕೊಳ್ಳುತ್ತಿzರೆ. ಅದನ್ನು ಬಿಟ್ಟು, ಒಳ್ಳೆಯ ಸಿನಿಮಾ ಮಾಡುವ ಕಡೆಗೆ ಗಮನ ಕೊಟ್ಟರೆ ಇವತ್ತಿಗೂ ಸಣ್ಣ ಬಜೆಟ್ ಚಿತ್ರಗಳೂ ಕೋಟಿ ಕೋಟಿ ಬಾಚುವ ಸಾಧ್ಯತೆಗಳಂತೂ ಇವೆ.

ಲೂಸ್‌ ಟಾಕ್‌ - ನರಭಕ್ಷಕ ಹುಲಿ

ಅಲ್ಲಪ್ಪಾ, ಹಿಂಗೆ ಊರೊಳಗೆ ನುಗ್ಗಿ ಮನುಷ್ಯರನ್ನ ಕೊಂದು ತಿನ್ನೋದು ತಪ್ಪಲ್ವಾ?

- ಏನ್ ತಪ್ಪು, ಹುಲಿ ಮುಪ್ಪಾದರೆ ಹುಲ್ಲು ತಿಂತದಾ? ಉಪ್ಪು, ಹುಳಿ, ತಿಂದು ಬೆಳೆದಿರೋ ದೇಹ. ಹುಲಿ ಕಾಡಲ್ಲಿದ್ರೂ ಹುಲೀನೇ, ರೋಡಲ್ಲಿದ್ರೂ ಹುಲೀನೇ ಗೊತ್ತಾ. ಈಗ ನೀನ್ ಸಿಕ್ಕಿದೀಯಾ..ಕುತ್ತೇ ಮೇ ತೇರಾ ಖೂನ್ ಪೀ ಜಾವೂಂಗ

ಓ... ನೀನು ಧರ್ಮೇಂದ್ರನ ಅಭಿಮಾನಿ ಅನ್ಸುತ್ತೆ, ಒಂದ್ ಅರ್ಧಗಂಟೆ ಇರು. ಇವತ್ತಿನ ‘ಡೆಡ್‌ಲೈನ್’ ಮುಗಿಸ್ಕೊಂಡ್ ವಾಪಸ್ ಬರೀನಿ, ಆಮೇಲ್ ತಿನ್ನುವಂತೆ

- ಪುಣ್ಯಕೋಟಿ ಕಾಲ ಎ ಈವಾಗಿಲ್ಲಮ್ಮಾ, ಇದು ಕಲಿಗಾಲ.

ನಿಜ ಹೇಳಬೇಕೂಂದ್ರೆ, ಇದು ಹುಲಿಗಾಲ. ಅದ್ಸರಿ, ಈಗ ಬೋನೊಳಗೆ ಹಾಕಿದ್ದಾರಲ್ಲ ನಿನ್ನ, ಈಗ ಹೇಳು, ನಿನ್ನ ಪ್ರಕಾರ ಯಾರು ಜಾಸ್ತಿ ಸ್ಟ್ರಾಂಗ್? ಮನುಷ್ಯನಾ ಅಥವಾ ‘ಹುಲಿಯಾ’?

- ಗೊತ್ತಿಲ್ಲ,ಕೆ.ವಿ.ರಾಜು ಅವರನ್ನೇಕೇಳಬೇಕು.

ಆದ್ರೆ, ‘ಕಾಡು ಹೋಗು ಅಂತಿದೆ, ಊರು ಬಾ ಅಂತಿದೆ’ ಅನ್ನೋ ನಿನ್ನ ಕೊಲ್ಲಬೇಕೂಂತಾರೆ ಕೆಲವರು, ಏನಂತೀಯಾ?

- ಟೈಗರ್ ಪ್ರಭಾಕರ್, ಬಾಳಾ ಠಾಕ್ರೆ, ಪಟೌಡಿ ಹೀಗೆ ಹುಲಿಗಳ ಸಂತತಿ ಕಡಿಮೆಯಾಗಿದೆ. ಹಂಗಾಗಿ ನನ್ನನ್ನ ಕೊಲ್ಲಲ್ಲ ಅಂತ ಭರವಸೆ ಇದೆ.

ಸಿಕ್ಕಾಕ್ಕೊಂಡಿರೋ ಬೋನಿನಲ್ಲಿ ತಿನ್ನೋಕೆ ಬೋನ್ ಸಿಗ್ತಿಲ್ಲ, ಹಂಗೇ ಸತ್ರೂ ಸಾಯ ಬಹುದು ನೀನು. ಹಂಗೇನಾದ್ರೂ ಆದ್ರೆ, ನಿನ್ ಕೊನೇ ಆಸೆ ಏನು?

- ನೀವ್ಯಾರೂ ನಮ್ಮ ಹುಲಿಗಳ ಆಸೆ ತೀರ್ಸಲ್ಲ ಬಿಡ್ರಪ್ಪಾ. ಒಂದಷ್ಟು ವರ್ಷಗಳ ಹಿಂದೆ ‘ಹುಲಿ ಹಿಡಿದವರುಕಂಡಂತೆ’ ಅಂತ ನನ್ ಮೇಲೊಂದ್ ಸಿನಿಮಾ ಮಾಡ್ತೀನಿ ಅಂತ ಹೇಳಿದ್ರು, ಆದ್ರೆ

ಮಾಡದೇ ನನ್ನ ಆಸೆಗೆ ಹುಳಿ ಹಿಂಡಿಬಿಟ್ರು.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಖೇಮು ಮತ್ತು ಖೇಮುಶ್ರೀ ಮಧ್ಯೆ ದಿನಾ ಜಗಳವಾಗ್ತಾ ಇತ್ತು.‌ ಒಂದ್ ದಿನ ಸರಿಯಿದ್ರೆ ಒಂದ್ ತಿಂಗಳು ಜಗಳ. ಕೊನೆಗೆ ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ ಡೈವೋರ್ಸ್ಗೆ ಅಪ್ಲೈ ಮಾಡೋದು ಅಂತ ತೀರ್ಮಾನಿಸಿದ್ರು, ಹಂಗೇ ಮಾಡಿದ್ರು. ಕೋರ್ಟ್‌ನಲ್ಲಿ ಜq ತುಂಬಾ ಸಂಭಾವಿತರು.

ಹಾಗಾಗಿ ಇಬ್ಬರಿಗೂ ಒಳ್ಳೆ ಮಾತಿನಲ್ಲಿ ಜತೆಯಾಗಿ ಬದುಕೋಕೆ ಸಲಹೆ ನೀಡಿದ್ರು. ನೋ ಯೂಸ್, ಖೇಮು-ಖೇಮುಶ್ರೀ ಇಬ್ರೂ ಸುತರಾಂ ಒಪ್ಪಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ಜq ಇವರಿಬ್ಬರ ಡೈವೋರ್ಸ್‌ಗೆ ಅನುಮತಿ ಕೊಟ್ರು. ಈಗ ವಿಷಯ ಜೀವನಾಂಶಕ್ಕೆ ಬಂತು.

ಖೇಮುಶ್ರೀ “ನಂಗೆ ತಿಂಗಳಿಗೆ ೨೦ ಸಾವಿರ ರು. ಜೀವನಾಂಶ ಬೇಕು" ಅಂತ ಪಟ್ಟು ಹಿಡಿದು ಕೂತಳು. ಖೇಮು “ನನ್ ಕೈಲಿ ಸಾಧ್ಯಾನೇ ಇಲ್ಲ" ಅಂತ ಕೂತ. ಕೊನೆಗೆ ಖೇಮುನ ಒಟ್ಟಾರೆ ಇನ್‌ಕಮ್, ಖೇಮುಶ್ರೀಯ ಅವಶ್ಯಕತೆ‌ ಎಲ್ಲವನ್ನೂ ಪರಿಶೀಲಿಸಿದ ಜq ತೀರ್ಪು ಕೊಟ್ಟರು. “ಎಲ್ಲ ದಾಖಲೆ ಗಳನ್ನು ನೋಡಿ, ಖೇಮುಶ್ರೀಯ ಪರಿಸ್ಥಿತಿಯನ್ನು ಗಮನಿಸಿ ಆಕೆಗೆ ಪ್ರತಿ ತಿಂಗಳು 20 ಸಾವಿರ ರುಪಾಯಿಗಳ ಜೀವನಾಂಶ ಕೊಡಬೇಕೆಂದು ನಾನು ತೀರ್ಮಾನಿಸಿದ್ದೇನೆ" ಎಂದರು. ಅದನ್ನು ಕೇಳಿದ ಖೇಮು ಫುಲ್‌ಖುಷಿಯಾಗಿ ಹೇಳಿದ “ನಿಮ್ದು ಭಾಳಾ ದೊಡ್ ಮನಸು ಸ್ವಾಮಿ, ಸಾಧ್ಯ ಆದ್ರೆ ಅವಳಿಗೆ ನಾನೂ ಆವಾಗಾವಾಗ ಅಲ್ಪ ಸ್ವಲ್ಪ ದುಡ್‌ಕೊಡೋಕೆ ಟ್ರೈ ಮಾಡ್ತೀನಿ".

ಲೈನ್‌ ಮ್ಯಾನ್

ರಜೆ ಕಳೆಯೋಕೆ ಅಂತ HILL STATION ಗೆ ಹೋಗಿ ಅಲ್ಲಿ ಆರೋಗ್ಯ ಕೆಟ್ಟರೆ

- ಅದು ILL STATION

ಹೆಂಡತಿಯು ಗಂಡನಿಗೆ ತುಂಬಾ ಕಿರುಕುಳ ಕೊಡ್ತಾ ಇದ್ರೆ ಅವಳು

- ಮಿಸ್-ಸ್ಟ್ರೆಸ್

ಬಿಜೆಪಿಯವರು ಹೇಳೋ ಮಾತು- ಕೇಸರಿಬಾತ್

- ಎಎಪಿಯವರು ಹೇಳೋ ಮಾತು- ಕೇಜ್ರಿಬಾತ್

‘ನಮ್ ಹೊಲದಲ್ಲಿ 3 ಸಲ ಬೋರ್ ಹಾಕಿಸಿದೆ, ಆದ್ರೂ ನೀರ್ ಬೀಳಲಿಲ್ಲ, ಇನ್ನೊಂದ್ಸಲ ಹಾಕಿಸ್ಬೇಕು’

- ‘೩ ಸಲ ಹಾಕ್ಸಿದ್ ಮೇಲೂ ನಿಮಗೆ ಬೋರ್ ಆಗಿಲ್ವಾ’

ಕೆಲವರಿಗೆ ಎಷ್ಟ್ ಹೇಳಿದ್ರೂ ‌ಬುದ್ಧಿ ಬರಲ್ಲ ಅನ್ನೋದನ್ನು ಹಿಂಗೂ ಹೇಳಬಹುದು.

- ಕುರುಡರ ಜತೆ ಕಣ್ಣಾಮುಚ್ಚಾಲೆ ಆಡೋಕಾಗುತ್ತಾ?

ಯಾರಿಗೂ ಗೊತ್ತಾಗದ ಹಾಗೆ ‘ಮೆಲ್ಲಗೆ’ ಟೇಬಲ್ ಕೆಳಗಿಂದ ಹುಡುಗಿ ಕಾಲು ಟಚ್ ಮಾಡೋನು

- ‘ಜೆಂಟಲ್’ ಮ್ಯಾನ್

ಚಿಕ್ಕಣ್ಣ: ಗುರುಗಳೇ, ಇವತ್ತು ‌ಪೇಪರ್‌ನಲ್ಲಿ ಎ ಟ್ರೂಪ್ ಆಫ್ ಟೆರರಿ ವಾಸ್ Founded by Indian police ಅಂತ ಇತ್ತು. ನಮ್ಮ ‌ಇಂಡಿಯಾದ ಪೊಲೀಸ್ ನವರೂ ಟೆರರಿಸ್ಟ್ ಆಗ್ತಿದಾರಾ?

- ಸಾಧು: ಲೋ ಚಿಕ್ಕ, ಅದು Founded ಅಲ್ಲ ಕಣೋ, Found dead

ಇಂಗ್ಲಿಷ್‌ನಲ್ಲಿ ‘ರೋಡ್ ಮೂವೀಸ್’ ಅಂತಲೇ ಫೇಮಸ್ ಆಗಿರೋ ರೋಡ್‌ನಲ್ಲಿ ನಡೆಯುವ ಕಥೆ

ಇರುವ ಚಿತ್ರಗಳಿಗೆ ಕನ್ನಡ ಚಿತ್ರರಂಗ ಕೊಟ್ಟ ಹೊಸ ಹೆಸರು

- ‘ರೋಡಿಸಂ’ ಚಿತ್ರಗಳು

ಲೈಫಲ್ಲಿ ಜಾಸ್ತಿ ಜನ ಹುಡುಗೀರನ್ನ ಲವ್ ಮಾಡೋದರ ಅಪಾಯ

- ಮುಂದೆ ಮದುವೆ ಆದ ಮೇಲೆ ಎಣ್ಣೆ ಹೊಡೆದು ಸ್ಯಾಡ್ ಸಾಂಗ್ ಕೇಳುವಾಗ ಯಾವ ಗರ್ಲ್ ಫ್ರೆಂಡ್‌ನ ನೆನಪಿಸ್ಕೊಬೇಕು ಅಂತ ಕನ್ ಫ್ಯೂಸ್ ಆಗುತ್ತೆ.