ದಳಪತಿ ವಿಜಯ್ ವಿರುದ್ಧ ಸ್ವಪಕ್ಷೀಯರಿಂದಲೇ ಆಕ್ರೋಶ; ಕಾರು ತಡೆದು ನಿಲ್ಲಿಸಿದ ಕಾರ್ಯಕರ್ತರು
Actor Vijay: ಕಾಲಿವುಡ್ ನಟ, ರಾಜಕಾರಣಿ ವಿಜಯ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚೆನ್ನೈಗೆ ಆಗಮಿಸಿದ ವಿಜಯ್ ಅವರ ಕಾರನ್ನು ತಡೆದು ನಿಲ್ಲಿಸಿ ಟಿವಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾವಾರು ಹುದ್ದೆಗಳನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ತಡೆ ಒಡ್ಡಿದ್ದಾರೆ.
ವಿಜಯ್ (ಸಂಗ್ರಹ ಚಿತ್ರ) -
ಚೆನ್ನೈ, ಡಿ. 23: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ನಟ ದಳಪತಿ ವಿಜಯ್ (Actor Vijay) ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷ ಹುಟ್ಟು ಹಾಕಿ ಬಿರುಸಿನ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ರಾಜಕೀಯ ಹಾದಿ ಉದ್ದಕ್ಕೂ ಅನೇಕ ವಿಘ್ನಗಳನ್ನು ಎದುರಿಸುತಲ್ಲೇ ಬರುತ್ತಿದ್ದಾರೆ. ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಬಂದಿರುವ ವಿಜಯ್ ಇದೀಗ ಸ್ವಪಕ್ಷೀಯರ ಅಸಮಾಧಾನಕ್ಕೆ ತುತ್ತಾಗಿದ್ದಾರೆ. ಚೆನ್ನೈಗೆ ಆಗಮಿಸಿದ ವಿಜಯ್ ಅವರ ಕಾರನ್ನು ತಡೆದು ನಿಲ್ಲಿಸಿ ಟಿವಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾವಾರು ಹುದ್ದೆಗಳನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ತಡೆ ಒಡ್ಡಿದ್ದಾರೆ.
ಟಿವಿಕೆಯ ಕೇಂದ್ರ ಕಚೇರಿ ಇರುವ ಚೆನ್ನೈಯ ಪನೈಯೂರ್‌ಗೆ ಆಗಮಿಸಿದ ವಿಜಯ್ ಅವರ ಕಾರನ್ನು ಕಾರ್ಯಕರ್ತರು ತಡೆದು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತೂತುಕ್ಕಡಿಯ ಅಜಿತಾ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು ಎಂದು ವರದಿಯೊಂದು ತಿಳಿಸಿದೆ. ಜಿಲ್ಲಾವಾರು ಹುದ್ದೆಗಳ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ದೂರಿದ್ದಾಗಿ ಮೂಲಗಳು ತಿಳಿಸಿವೆ.
ವಿಜಯ್ ಕಾರ್ ತಡೆದ ಟಿವಿಕೆ ಕಾರ್ಯಕರ್ತರು:
VIDEO | Tamil Nadu: Actor-turned-politician Vijay’s car was intercepted in Chennai by disgruntled TVK members protesting the allocation of district-level posts.#TamilNaduNews
— Press Trust of India (@PTI_News) December 23, 2025
(Full video available on PTI Videos- https://t.co/dv5TRAShcC) pic.twitter.com/QykUcwmxiJ
ಕಳೆದ ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಕರೂರಿನಲ್ಲಿ ಟಿವಿಕೆ ಆಯೋಜಿಸಿದ್ದ, ವಿಜಯ್ ಭಾಗವಹಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಸುರಕ್ಷತಾ ಕಾರಣವನ್ನು ಉಲ್ಲೇಖಿಸಿ ಸರ್ಕಾರ ಕೆಲವು ಕಡೆಗಳಲ್ಲಿ ರ‍್ಯಾಲಿಗೆ ಅನುಮತಿ ನೀಡಿರಲಿಲ್ಲ. ಹೀಗೆ ಆರಂಭದಿಂದಲೇ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಬಂದಿರುವ ವಿಜಯ್‌ಗೆ ಇದೀಗ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದ್ದು, ಉತ್ಸಾಹದಿಂದ ರಾಜಕೀಯಕ್ಕೆ ಧುಮುಕಿರುವ ವಿಜಯ್‌ಗೆ ದೊಡ್ಡ ತಲೆನೋವಾದಂತಾಗಿದೆ.
ಜನರಿಗೆ ಮೋಸ ಮಾಡುವುದೇ ಡಿಎಂಕೆ ಕೆಲಸ; ಪುದುಚೇರಿಯಲ್ಲಿ ವಿಜಯ್ ವಾಗ್ದಾಳಿ
ಸಮಥುವ ಕ್ರಿಸ್‌ಮಸ್ ಪಾರ್ಟಿ
ಡಿಸೆಂಬರ್ 22ರಂದು ಟಿವಿಕೆ ವತಿಯಿಂದ ನಡೆದ ಸಮಥುವ ಕ್ರಿಸ್‌ಮಸ್ ಪಾರ್ಟಿ ಮಾತನಾಡಿದ ವಿಜಯ್, ʼʼನಿಜವಾದ ನಂಬಿಕೆಯು ಸಾಮರಸ್ಯವನ್ನು ಉತ್ತೇಜಿಸುತ್ತದೆ. ಯಾವುದೇ ಸಮಸ್ಯೆಯನ್ನು ನಿವಾರಿಸಲು ಅಂತಹ ನಂಬಿಕೆ ಸಾಕು. ಪೊಂಗಲ್, ದೀಪಾವಳಿ, ರಂಜಾನ್ ಮತ್ತು ಕ್ರಿಸ್‌ಮಸ್ ಸೇರಿದಂತೆ ಎಲ್ಲ ಹಬ್ಬಗಳನ್ನು ಸಂತೋಷದಿಂದ ಆಚರಿಸುವ ತಮಿಳುನಾಡಿನಲ್ಲಿ ಪ್ರೀತಿ ಮತ್ತು ಕರುಣೆ ಎಲ್ಲದಕ್ಕೂ ಅಡಿಪಾಯʼʼ ಎಂದು ಹೇಳಿದರು.
ʼʼಜೀವನ ಶೈಲಿ ಮತ್ತು ಪೂಜಾ ವಿಧಾನಗಳಲ್ಲಿ ವ್ಯತ್ಯಾಸಗಳಿದ್ದರೂ ನಾವೆಲ್ಲರೂ ಸಹೋದರರುʼʼ ಎನ್ನುವ ಸಂದೇಶ ಸಾರಿದರು. ತನ್ನ ಸಹೋದರರಿಂದ ಎದುರಾದ ದ್ರೋಹವನ್ನು ಜಯಿಸಿ ರಾಜನಾದ ಜೋಸೆಫ್‌ನ ಬೈಬಲ್ ಕಥೆಗೆ ತನ್ನ ಪ್ರಯಾಣವನ್ನು ಹೋಲಿಸಿದರು. ಸಹೋದರರಿಂದಲೇ ಸಮಸ್ಯೆ ಎದುರಾಗುತ್ತಿದ್ದು, ಅದೆಲ್ಲವನ್ನೂ ಮೀರಿ ಜನರ ಹೃದಯಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಕೊನೆಯ ಚಿತ್ರ ಬಿಡುಗಡೆಗೆ ಸಿದ್ಧ
ಚಿತ್ರರಂಗ ತೊರೆಯುತ್ತಿರುವುದಾಗಿ ಈಗಾಗಲೇ ವಿಜಯ್ ಘೋಷಿಸಿದ್ದು, ಸದ್ಯ ಅವರ ಕೊನೆಯ ಸಿನಿಮಾ ʼಜನ ನಾಯಗನ್ʼ ತೆರೆಗೆ ಬರಲು ಸಜ್ಜಾಗಿದೆ. ಜನವರಿ 9ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದು, ಮೂಲಕ ತಮ್ಮ ನೆಚ್ಚಿನ ನಾಯಕನ ಕೊನೆ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಲು ಮುಂದಾಗಿದ್ದಾರೆ. ಎಚ್. ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸಿದ್ದಾರೆ.