ನೂರೆಂಟು ವಿಶ್ವ
ಸಾಹಿತ್ಯ ಲೋಕದ ಜಗಳ, ಜಟಾಪತಿ ಒಂಥರಾ ಚೆಂದವೇ. ಈ ಜಗಳದಲ್ಲಿ ಒಡಮೂಡುವ ಟೀಕೆ-ಟಿಪ್ಪಣಿಗಳು, ಟೀಕೆ-ಪ್ರತಿ ಟೀಕೆಗಳು ಎರಡೂ ಕಡೆಯ ಅಭಿಮಾನಿಗಳಿಗೆ ರಸಗವಳವೇ. ಈ ಜಗಳ ಈ ನೆಲೆಯಲ್ಲಿ, ಚೌಕಟ್ಟಿನಲ್ಲಿದ್ದರೆ ಅದು ಆರೋಗ್ಯಪೂರ್ಣವೂ ಹೌದು. ಆದರೆ ಪರಸ್ಪರ ಹೊಡೆದಾಟದ ಹಂತಕ್ಕೆ ಹೋದರೆ ಅದರಂಥ ಅಸಹ್ಯ ಮತ್ತೊಂದಿಲ್ಲ.
ಸಾಮಾನ್ಯವಾಗಿ ಸಾಹಿತಿ, ಬರಹಗಾರರು ಆ ಹಂತಕ್ಕೆ ಹೋಗುವುದಿಲ್ಲ. ಅದು ಪುಸ್ತಕ ಬಿಡುಗಡೆ ಸಮಾರಂಭಗಳು, ಬೌದ್ಧಿಕ ಚರ್ಚೆಗಳು, ಕಟು ವಿಮರ್ಶೆ, ಪರಸ್ಪರ ಕಾಲೆಳೆಯು ವಿಕೆ ಮತ್ತು ಲೇಖನಿಗಳ ಮೂಲಕ ನಡೆಯುವ ಪ್ರಹಾರಗಳಿಗೆ ಸೀಮಿತವಾಗಿರುತ್ತವೆ.
ಸಾಹಿತ್ಯವಲಯದಲ್ಲಿ ಸಾಮಾನ್ಯವಾಗಿ ವಿವಾದ ಕಿಡಿ ಹೊತ್ತಿಕೊಳ್ಳುವುದು ವಿಮರ್ಶಕ ರಿಂದ. ಯಾವ ಸಾಹಿತಿಯೂ ವಿಮರ್ಶಕರನ್ನು ಇಷ್ಟಪಡುವುದಿಲ್ಲ. ಅದರಲ್ಲೂ ತಮ್ಮನ್ನು ಟೀಕಿಸುವ ವಿಮರ್ಶಕರನ್ನಂತೂ ಇಷ್ಟಪಡುವ, ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಆದರೆ, 2002 ಮತ್ತು 2004ರ ಅವಧಿಯಲ್ಲಿ ಅಮೆರಿಕದ ಸಾಹಿತ್ಯ ವಲಯದಲ್ಲಿ ನಡೆದ ಒಂದು ಘಟನೆ ಇಡೀ ಜಗತ್ತನ್ನೇ ಹುಬ್ಬೇರಿಸುವಂತೆ ಮಾಡಿತ್ತು.
ಅದು ಕೇವಲ ಪದಗಳ ಸಮರವಾಗಿರದೇ, ದೈಹಿಕ ನಿಂದನೆಯ ಮಟ್ಟಕ್ಕೆ ಇಳಿದಿತ್ತು. ಈ ಜಟಾಪತಿ ನಡೆದದ್ದು ಪ್ರಖ್ಯಾತ ಲೇಖಕ ರಿಚರ್ಡ್ ಫೋರ್ಡ್ ಮತ್ತು ಅಂದಿನ ಉದಯೋ ನ್ಮುಖ ಲೇಖಕ (ಎರಡು ಬಾರಿ ಪುಲಿಟ್ಜರ್ ಪುರಸ್ಕೃತ) ಕಲ್ಸನ್ ವೈಟ್ಹೆಡ್ ನಡುವೆ. ಈ ವಿವಾದದ ಕೇಂದ್ರ ಬಿಂದುವಾಗಿದ್ದು ಒಂದು ‘ಪುಸ್ತಕ ವಿಮರ್ಶೆ’ ಮತ್ತು ಅದರ ಅಂತ್ಯ ವಾಗಿದ್ದು ಮುಖಕ್ಕೆ ‘ಉಗುಳುವ’ ಮೂಲಕ!
ಇದನ್ನೂ ಓದಿ: Vishweshwar Bhat Column: ಅದು ಕವಿ ಮತ್ತು ಕಾದಂಬರಿಕಾರನ ಕೆಸರು ಕಂಬಳ ಕಾದಾಟ !
ಈ ಕಥೆಯನ್ನು ಅರ್ಥಮಾಡಿಕೊಳ್ಳಲು ಮೊದಲು ನಾವು ಇಬ್ಬರು ವ್ಯಕ್ತಿಗಳ ಬಗ್ಗೆ ಸಂಕ್ಷಿಪ್ತ ವಾಗಿ ತಿಳಿದುಕೊಳ್ಳಬೇಕು. ರಿಚರ್ಡ್ ಫೋರ್ಡ್ ಆ ಸಮಯಕ್ಕಾಗಲೇ ಅಮೆರಿಕದ ಸಾಹಿತ್ಯದ ದಿಗ್ಗಜ ಎಂದು ಕರೆಸಿಕೊಂಡವರು. 1996ರಲ್ಲಿ ತಮ್ಮ ‘ಇಂಡಿಪೆಂಡೆನ್ಸ್ ಡೇ’ ಕಾದಂಬರಿಗಾಗಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪಡೆದ ಹಿರಿಯ ಲೇಖಕ. ಅವರ ಬರವಣಿಗೆ ಗಂಭೀರವಾದದ್ದು ಮತ್ತು ಅವರು ತಮ್ಮ ಕೃತಿಗಳ ಬಗ್ಗೆ ಅತೀವ ಅಭಿಮಾನ ಹೊಂದಿದ್ದವರು.
2000ರ ದಶಕದ ಆರಂಭದಲ್ಲಿ ಕಲ್ಸನ್ ವೈಟ್ಹೆಡ್ ಒಬ್ಬ ಯುವ ಲೇಖಕ. ಅವರು ತಮ್ಮ ‘ದಿ ಇಂಟ್ಯೂಷನಿಸ್ಟ್’ ಮತ್ತು ‘ಜಾನ್ ಹೆನ್ರಿ ಡೇಸ್’ ಮೂಲಕ ಆಗಷ್ಟೇ ಸಾಹಿತ್ಯ ಲೋಕದಲ್ಲಿ ಹೆಸರು ಮಾಡುತ್ತಿದ್ದರು. ಅವರು ಹೊಸ ತಲೆಮಾರಿನ ಧ್ವನಿಯಾಗಿದ್ದರು. ಈ ಜಟಾಪತಿಯ 2002ರಲ್ಲಿ ಪ್ರಾರಂಭವಾಯಿತು.
ರಿಚರ್ಡ್ ಫೋರ್ಡ್ ಅವರು ‘ಎ ಮಲ್ಟಿಟ್ಯೂಡ್ ಆಫ್ ಸಿನ್ಸ್’ ಎಂಬ ಸಣ್ಣ ಕಥೆಗಳ ಸಂಕಲನ ವನ್ನು ಬಿಡುಗಡೆ ಮಾಡಿದ್ದರು. ಪ್ರತಿಷ್ಠಿತ ಪತ್ರಿಕೆ ‘ದಿ ನ್ಯೂಯಾರ್ಕ್ ಟೈಮ್ಸ್’ ಈ ಪುಸ್ತಕದ ವಿಮರ್ಶೆಯನ್ನು ಬರೆಯುವ ಜವಾಬ್ದಾರಿಯನ್ನು ಯುವ ಲೇಖಕ ಕಲ್ಸನ್ ವೈಟ್ಹೆಡ್ ಅವರಿಗೆ ನೀಡಿತು. ಸಾಮಾನ್ಯವಾಗಿ ಹಿರಿಯ ಲೇಖಕರ ಕೃತಿಗಳನ್ನು ಕಿರಿಯರು ವಿಮರ್ಶಿಸು ವಾಗ ಎಚ್ಚರಿಕೆ ವಹಿಸುತ್ತಾರೆ ಅಥವಾ ಗೌರವ ಸೂಚಿಸುತ್ತಾರೆ. ಆದರೆ ವೈಟ್ಹೆಡ್ ತಮ್ಮ ವಿಮರ್ಶೆಯಲ್ಲಿ ಅತ್ಯಂತ ನಿಷ್ಠುರವಾಗಿದ್ದರು. ಅವರು ಫೋರ್ಡ್ ಅವರ ಪುಸ್ತಕವನ್ನು ಕಟುವಾಗಿ ಟೀಕಿಸಿದರು.
ವೈಟ್ಹೆಡ್ ಬರೆದ ವಿಮರ್ಶೆಯ ಮುಖ್ಯಾಂಶಗಳು ಹೀಗಿದ್ದವು - ‘ಈ ಪುಸ್ತಕದ ಯಾವುದೇ ಪುಟವನ್ನು ತೆರೆದರೂ ನಿಮಗೆ ಅದೇ ನಿರಾಶಾದಾಯಕ ಪಾತ್ರಗಳು, ಅದೇ ಅಸಹಾಯಕತೆ ಕಾಣಸಿಗುತ್ತದೆ, ಕಥಾವಸ್ತುವಿನಲ್ಲಿ ಯಾವುದೇ ಪ್ರಗತಿಯಿಲ್ಲ. ಫೋರ್ಡ್ ಅವರ ಕಥೆಗಳು ಏಕತಾನತೆಯಿಂದ ಕೂಡಿವೆ.
ಕಥೆಗಳಲ್ಲಿ ಬರುವ ಪಾತ್ರಗಳು ತಮ್ಮ ತಪ್ಪುಗಳಿಂದ ಪಾಠ ಕಲಿಯುವುದಿಲ್ಲ, ಬದಲಿಗೆ ಅದೇ ತಪ್ಪುಗಳನ್ನು ಮಾಡುತ್ತಾ ಗೊಣಗುತ್ತಿರುತ್ತಾರೆ. ಈ ಕಥೆಗಳನ್ನು ಫೋರ್ಡ್ ಪುಸ್ತಕವಾಗಿ ಪ್ರಕಟಿಸುವ ಬದಲು, ತಮ್ಮಷ್ಟಕ್ಕೆ ಓದಿಕೊಂಡಿದ್ದರೆ, ಅವರು ಓದುಗರಿಗೆ ಮಹದುಪಕಾರ ಮಾಡಿದಂತೆ ಆಗುತ್ತಿತ್ತು’. ನಂತರ ವಿಮರ್ಶೆಯ ಕೊನೆಯಲ್ಲಿ, ‘ಫೋರ್ಡ್ ಅವರು ಇನ್ನು ಮುಂದೆ ಆದರೂ ತಮ್ಮ ಪಾತ್ರಗಳಿಗೆ ಬಲವಾದ ಪ್ಲಾಟ್ (ಕಥಾವಸ್ತು) ನೀಡಲಿ ಮತ್ತು ತಮ್ಮ ಕಸುಬಿನ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಗಿ ಸಲಹೆ ನೀಡಿದ್ದರು.
ಈ ವಿಮರ್ಶೆಯು ಸಾಹಿತ್ಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿತು. ಒಬ್ಬ ‘ದಿಗ್ಗಜ’ ಲೇಖಕನ ಕೃತಿಯನ್ನು ಒಬ್ಬ ‘ಹೊಸಬ’ ಹೀಗೆ ಟೀಕಿಸಿದ್ದು ಫೋರ್ಡ್ ಅವರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಫೋರ್ಡ್ ಅವರಿಗೆ ವಿಮರ್ಶಕರ ಬಗ್ಗೆ ಮೊದಲಿನಿಂದಲೂ ಅಸಹನೆ ಇತ್ತು. ವೈಟ್ಹೆಡ್ ಅವರಿಗಿಂತ ಮೊದಲು, ಆಲಿಸ್ ಹಾಫ್ಮನ್ ಎಂಬ ಲೇಖಕಿ, ಫೋರ್ಡ್ ಅವರ ಮತ್ತೊಂದು ಪುಸ್ತಕವನ್ನು ಟೀಕಿಸಿದ್ದರು.
ಆಗ ಫೋರ್ಡ್ ಮಾಡಿದ ಕೆಲಸವೇನು ಗೊತ್ತೇ? ಅವರು ಹಾಫ್ಮನ್ ಅವರ ಪುಸ್ತಕ ವೊಂದನ್ನು ತೆಗೆದುಕೊಂಡು, ಅದಕ್ಕೆ ಬಂದೂಕಿನಿಂದ ಗುಂಡು ಹೊಡೆದು, ಆ ತೂತಾದ ಪುಸ್ತಕವನ್ನು ಅಂಚೆಯ ಮೂಲಕ ಹಾಫ್ಮನ್ ಅವರಿಗೆ ಕಳುಹಿಸಿಕೊಟ್ಟಿದ್ದರು! ಇದನ್ನು ಖಂಡಿಸಿದ ಹಾಫ್ಮನ್ ಅವರ ಪತಿಗೆ ಕರೆ ಮಾಡಿದ ಫೋರ್ಡ್, ‘ಈ ವಿಷಯದಲ್ಲಿ ನೀನು ಸುಮ್ಮನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಪುಸ್ತಕಕ್ಕೆ ಹಾರಿಸಿದ ಗುಂಡನ್ನು ನಿನ್ನ ಎದೆಗೆ ಹಾರಿಸಬೇಕಾಗುತ್ತದೆ, ಹುಷಾರ್’ ಎಂದು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಅಂದರೆ, ತಮ್ಮ ಕೃತಿಯನ್ನು ಯಾರಾದರೂ ಟೀಕಿಸಿದರೆ ಫೋರ್ಡ್ ಅವರು ಅದನ್ನು ವೈಯಕ್ತಿಕ ಅವಮಾನ ಎಂದು ಪರಿಗಣಿಸುತ್ತಿದ್ದರು. ಆದರೆ ವೈಟ್ಹೆಡ್ ವಿಷಯದಲ್ಲಿ ಅವರು ತಕ್ಷಣಕ್ಕೆ ಏನೂ ಮಾಡಲಿಲ್ಲ. ಅವರು ಸೇಡಿಗಾಗಿ ಕಾಯುತ್ತಿದ್ದರು. ವಿಮರ್ಶೆ ಬಂದು ಬರೋಬ್ಬರಿ ಎರಡು ವರ್ಷಗಳು ಕಳೆದಿದ್ದವು. 2004ರಲ್ಲಿ ನ್ಯೂಯಾರ್ಕ್ ನಗರದಲ್ಲಿ ‘ಪೋಯೆಟ್ಸ್ ಆಂಡ್ ರೈಟರ್ಸ್’ ಎಂಬ ಸಂಸ್ಥೆ ಅದ್ದೂರಿ ಔತಣಕೂಟ ಏರ್ಪಡಿಸಿತ್ತು. ಅಲ್ಲಿಗೆ ಸಾಹಿತ್ಯ ಲೋಕದ ಗಣ್ಯರೆಲ್ಲರೂ ಬಂದಿದ್ದರು. ಅಲ್ಲಿ ವೈಟ್ಹೆಡ್ ಕೂಡ ಇದ್ದರು.
ಪಾರ್ಟಿ ನಡೆಯುತ್ತಿದ್ದಾಗ, ಫೋರ್ಡ್ ಅವರು ವೈಟ್ಹೆಡ್ ಅವರಿದ್ದಲ್ಲಿಗೆ ಬಂದರು. ವೈಟ್ಹೆಡ್ ಅವರನ್ನುದ್ದೇಶಿಸಿ ಫೋರ್ಡ್, ‘ನನ್ನ ಪುಸ್ತಕದ ಬಗ್ಗೆ ಆ ಕೆಟ್ಟ ವಿಮರ್ಶೆ ಬರೆದಿದ್ದು ನೀನೇ ಅಲ್ವಾ?’ ಎಂದು ಏರಿದ ದನಿಯಲ್ಲಿ ಪ್ರಶ್ನಿಸಿದರು. ವೈಟ್ಹೆಡ್ ಅವರು ‘ಹೌದು’ ಎನ್ನುವಷ್ಟ ರಲ್ಲಿ, ಫೋರ್ಡ್ ಅವರು ವೈಟ್ಹೆಡ್ ಅವರ ಮುಖಕ್ಕೆ ಕ್ಯಾಕರಿಸಿ ‘ಪ್ಚ್’ ಎಂದು ನೇರವಾಗಿ ಉಗುಳಿದರು!
ಅದು ಕೇವಲ ಮಾತಿನ ಚಕಮಕಿಯಾಗಿರಲಿಲ್ಲ, ಬದಲಿಗೆ ಅತ್ಯಂತ ಹೀನಾಯವಾದ ಕೃತ್ಯ ವಾಗಿತ್ತು. ಫೋರ್ಡ್ ಅಷ್ಟಕ್ಕೆ ನಿಲ್ಲದೇ, ‘ನಾನು ಇದಕ್ಕಾಗಿಯೇ ಎರಡು ವರ್ಷಗಳಿಂದ ಕಾಯುತ್ತಿದ್ದೆ’ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.
ಈ ಘಟನೆ ನಡೆದಾಗ ವೈಟ್ಹೆಡ್ ಅವರ ಪ್ರತಿಕ್ರಿಯೆ ಅತ್ಯಂತ ಆಶ್ಚರ್ಯಕರ ಮತ್ತು ಪ್ರಬುದ್ಧ ವಾಗಿತ್ತು. ಅವರು ಫೋರ್ಡ್ ಮೇಲೆ ತಿರುಗಿ ಬೀಳಲಿಲ್ಲ ಅಥವಾ ದೈಹಿಕವಾಗಿ ಹಲ್ಲೆ ನಡೆಸಲಿಲ್ಲ ಅಥವಾ ಜಗಳಕ್ಕೂ ಮುಂದಾಗಲಿಲ್ಲ. ಪ್ಯಾಂಟಿನಿಂದ ತಮ್ಮ ಕರವಸ್ತ್ರ ತೆಗೆದು, ಮುಖದ ಮೇಲಿನ ಎಂಜಲನ್ನು ಒರೆಸಿಕೊಂಡರು. ನಂತರ ಪತ್ರಕರ್ತರು ಈ ಬಗ್ಗೆ ಕೇಳಿದಾಗ ವೈಟ್ಹೆಡ್, ‘ಅದೊಂದು ಅನಿರೀಕ್ಷಿತ ಘಟನೆ. ಆದರೆ ನಾನು ಒಬ್ಬ ವೃದ್ಧನ ಮೇಲೆ ಹಲ್ಲೆ ಮಾಡಲು ಹೋಗಲಿಲ್ಲ.
ಅಲ್ಲದೇ, ಈ ರೀತಿ ಮುಖಕ್ಕೆ ಉಗುಳುವುದು ಒಂದು ರೀತಿಯ ‘ಪರ್ಫಾರ್ಮೆನ್ಸ್ ಆರ್ಟ್’. ನೀವು ಒಮ್ಮೆ ಮಾಡಿದರೆ ಅದು ಕಲೆ, ಪದೇ ಪದೆ ಮಾಡಿದರೆ ಅದು ಅಸಹ್ಯ ಹುಟ್ಟಿಸುತ್ತದೆ’ ಎಂದು ಪ್ರತಿಕ್ರಿಯಿಸಿದರು. ವೈಟ್ಹೆಡ್ ಅವರು ಅತ್ಯಂತ ಸಂಯಮದಿಂದ ವರ್ತಿಸುವ ಮೂಲಕ ನೈತಿಕವಾಗಿ ಗೆದ್ದರು. ಫೋರ್ಡ್ ಅವರು ತಮ್ಮ ವರ್ತನೆಯಿಂದ ಸಾಹಿತ್ಯ ಲೋಕ ದಲ್ಲಿ ತೀವ್ರ ಮುಜುಗರಕ್ಕೀಡಾದರು.
ಆಶ್ಚರ್ಯವೆಂದರೆ, ಫೋರ್ಡ್ ಈ ಘಟನೆಯ ಬಗ್ಗೆ ಎಂದಿಗೂ ಕ್ಷಮೆ ಕೇಳಲಿಲ್ಲ. ಘಟನೆ ನಡೆದ ನಂತರ ಅವರು ‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು. ಅವರ ವಾದ ಹೀಗಿತ್ತು - ‘ನಾನು ಬರೆದ ಪುಸ್ತಕ ನನ್ನ ಜೀವನದ ಒಂದು ಭಾಗ. ನಾನು ಬೇರೆಯಲ್ಲ, ನನ್ನ ಕೃತಿಗಳು ಬೇರೆಯಲ್ಲ.
ವಿಮರ್ಶಕರು ಅದನ್ನು ಟೀಕಿಸಿದಾಗ, ಅವರು ನನ್ನನ್ನೇ ಟೀಕಿಸಿದಂತೆ. ವಿಮರ್ಶಕರಿಗೆ ನನ್ನ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೇ ಇಲ್ಲ. ಅದರಲ್ಲೂ ವೈಟ್ಹೆಡ್ ಒಬ್ಬ ಬಚ್ಚಾ. ಆತನಿಗೆ ನನ್ನ ಸಾಹಿತ್ಯವನ್ನು ವಿಮರ್ಶಿಸುವ ಯೋಗ್ಯತೆಯೇ ಇಲ್ಲ. ಯಾರಾದರೂ ನನ್ನ ಮಕ್ಕಳ ಬಗ್ಗೆ , ನನ್ನ ಹೆಂಡತಿಯ ಬಗ್ಗೆ ಅಥವಾ ನನ್ನ ಜೀವನದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ನಾನು ಸುಮ್ಮನಿರಬೇಕೇ? ನನ್ನ ಪುಸ್ತಕವನ್ನು ಕೆಟ್ಟದಾಗಿ ಟೀಕಿಸಿದರೆ ಅದಕ್ಕೆ ಪ್ರತಿಕ್ರಿಯಿಸುವುದು ನನ್ನ ಹಕ್ಕು.
ವಿಮರ್ಶಕರು ಸುರಕ್ಷಿತ ವಲಯದಲ್ಲಿ ಕುಳಿತು ಕಲ್ಲು ಎಸೆಯುತ್ತಾರೆ, ಆದರೆ ಲೇಖಕರು ಪೆಟ್ಟು ತಿನ್ನಬೇಕು ಎಂಬ ನಿಯಮವೇನಿಲ್ಲ. ವಿಮರ್ಶೆಗಳು ಕೇವಲ ಅಭಿಪ್ರಾಯಗಳಲ್ಲ, ಅವು ಲೇಖಕನ ಜೀವನದ ಮೇಲಾಗುವ ದಾಳಿಗಳು. ಅದಕ್ಕೆ ನಾನು ನನ್ನದೇ ರೀತಿಯಲ್ಲಿ ಉತ್ತರ ನೀಡಿದ್ದೇನೆ. ನನಗೆ ಆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಹಾಗೆ ನೋಡಿದರೆ, ನಾನು ಅವನನ್ನು ಹೊಡೆಯದೇ ಬಿಟ್ಟಿದ್ದು ಹೆಚ್ಚು.’
ಅಷ್ಟೇ ಅಲ್ಲ, ಫೋರ್ಡ್ ತಾವು ಮಾಡಿದ್ದನ್ನು ‘ಗಂಡಸುತನ’ದ ಸಂಕೇತ ಎಂದೂ ಬಿಂಬಿಸಿ ಕೊಳ್ಳಲು ಪ್ರಯತ್ನಿಸಿದರು. ಅದಾದ ಬಳಿಕ ಕೆಲವು ಪತ್ರಿಕಾ ಸಂದರ್ಶನದಲ್ಲಿ ಫೋರ್ಡ್, ‘ವೈಟ್ಹೆಡ್ ಮುಖಕ್ಕೆ ಉಗುಳಿದ ಘಟನೆ ಏನೇನೂ ಅಲ್ಲ, ನಾನು ಆತನಿಗೆ ಹೊಡೆ ಯದೇ ಬಿಟ್ಟಿದ್ದು ನನ್ನ ಕ್ಷಮಾ ಗುಣ. ಆದರೆ ನಾನು ಆತನ ಮುಖಕ್ಕೆ ನಾಲ್ಕು ಬಾರಿಸಬೇಕಿತ್ತು ಎಂದು ಈಗ ಅನಿಸುತ್ತಿದೆ’ ಎಂದು ಹೇಳಿದ್ದರು.
ಈ ಘಟನೆಯು ಸಾಹಿತ್ಯದ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿದುಬಿಟ್ಟಿತು. ಇದು ಕೆಲವು ಮುಖ್ಯ ಪ್ರಶ್ನೆಗಳನ್ನು ಸಹ ಹುಟ್ಟುಹಾಕಿತು. ಲೇಖಕ ಎಷ್ಟೇ ದೊಡ್ಡವ ನಾಗಿರಲಿ, ಪ್ರಸಿದ್ಧನಾಗಿರಲಿ, ಅವನ ಕೃತಿ ಕಳಪೆಯಾಗಿದ್ದರೆ ಅದನ್ನು ಟೀಕಿಸುವ ಹಕ್ಕು ವಿಮರ್ಶಕನಿಗೆ ಇದೆಯೇ? ವಿಮರ್ಶಕನಾದವನು ಲೇಖಕನಿಗೆ ಹೆದರಿ, ಕೃತಿಯನ್ನು ಹೊಗಳು ವುದು ವಿಮರ್ಶೆಯಾ? ಲೇಖಕರು ವಿಮರ್ಶಕರಿಗೆ ಹೊಡೆಯುವ ಮಟ್ಟಕ್ಕೆ ಹೋದರೆ ಅಂಥ ಲೇಖಕನಿಗೆ ಯಾವ ಶಿಕ್ಷೆ? ಪ್ರಸಿದ್ಧ ಸಾಹಿತಿಗಳು ಬರೆದಿದ್ದೆಲ್ಲ ಮಹಾನ್ ಕೃತಿಗಳಾ? ಸಾಹಿತ್ಯ ವಿಮರ್ಶೆ ಅಂದ್ರೆ ಟೀಕೆಗಳು ಇರಬೇಡವಾ?... ಮುಂತಾದ ಪ್ರಶ್ನೆಗಳ ಬಗ್ಗೆ ಬಿಸಿಬಿಸಿ ಚರ್ಚೆಗಳಾದವು.
ಈ ವಿಷಯದಲ್ಲಿ ಸಾಹಿತಿಗಳ ಎರಡು ಗುಂಪುಗಳಾದವು. ಅವರೂ ತಮ್ಮೊಳಗೇ ಪರಸ್ಪರ ಜಗಳಕ್ಕಿಳಿದರು. ಸುಮಾರು ಆರು ತಿಂಗಳುಗಳ ಕಾಲ ಈ ವಿಷಯ ಚರ್ಚೆಯಲ್ಲಿತ್ತು. ವೈಟ್ಹೆಡ್ ಮತ್ತು ಬಹುತೇಕ ಸಾಹಿತಿಗಳು, ಕೃತಿ ಕಳಪೆಯಾಗಿದ್ದರೆ ಅದನ್ನು ಟೀಕಿಸುವ ಹಕ್ಕು ವಿಮರ್ಶಕನಿಗೆ ಇದೆ ಎಂದು ಪ್ರತಿಪಾದಿಸಿದರು.
ಕೃತಿ ಒಮ್ಮೆ ಪ್ರಕಟವಾದರೆ ಅದು ಸಾರ್ವಜನಿಕ ಆಸ್ತಿ. ಕೃತಿಕಾರನಿಗಿಂತ ವಿಮರ್ಶಕರಿಗೆ ಕೃತಿ ಮುಖ್ಯವಾಗಬೇಕು. ಪ್ರಸಿದ್ಧ ಸಾಹಿತಿ ಬರೆಯುವುದೆಲ್ಲವೂ ಅದ್ಭುತವಾಗಿಯೇ ಇರಬೇಕೆಂದೇ ನೂ ಇಲ್ಲ. ಫೋರ್ಡ್ ಅವರ ವರ್ತನೆಯು ಹಳೆಯ ತಲೆಮಾರಿನ ಲೇಖಕರ ಅಹಂಕಾರ ವನ್ನು ತೋರಿಸಿದರೆ, ವೈಟ್ಹೆಡ್ ಅವರ ಮೌನವು ಹೊಸ ತಲೆಮಾರಿನ ವೃತ್ತಿಪ ರತೆಯನ್ನು ತೋರಿಸಿದೆ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟರು.
ಇನ್ನು ಕೆಲವರು, ಸಾಹಿತಿಗಳಿಂದ ವಿಮರ್ಶಕರಿಗೆ (ಪೊಲೀಸ್) ರಕ್ಷಣೆ ನೀಡಬೇಕು ಎಂದು ಕಿಚಾಯಿಸಿದರು. ಕೆಲವು ವಿಮರ್ಶಕರು ‘ಫೋರ್ಡ್ ಕೃತಿ ಅಫೋರ್ಡಬಲ್ ಅಲ್ಲ’ ಎಂದು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಫಲಕ ಹಿಡಿದು ಪ್ರತಿಭಟಿಸಿದರು. ‘ಫೋರ್ಡ್ ಬರುತ್ತಿದ್ದಾನೆ, ದೂರವಿರಿ. ಆತನ ಎಂಜಲು ಸಿಡಿಯಬಹುದು (ಅಂದರೆ ಬೈಯಬಹುದು), ಇಲ್ಲವೇ ಕ್ಯಾಕರಿಸಿ ಉಗುಳಬಹುದು’ ಎಂದು ಸಾಹಿತ್ಯಾಸಕ್ತರು ಲೇವಡಿ ಮಾಡುತ್ತಿದ್ದರು.
ಕುತೂಹಲಕಾರಿ ವಿಷಯವೆಂದರೆ, ಈ ಘಟನೆಯ ನಂತರ ಕಲ್ಸನ್ ವೈಟ್ಹೆಡ್ (ಈಗ ಅವರಿಗೆ ಐವತ್ತಾರು ವರ್ಷ) ಅವರ ಏಳಿಗೆಯನ್ನು ಯಾರೂ ತಡೆಯಲಾಗಲಿಲ್ಲ. ಅವರು ಮುಂದೆ ‘ದಿ ಅಂಡರ್‌ಗ್ರೌಂಡ್ ರೈಲ್‌ರೋಡ್’ ಮತ್ತು ‘ದಿ ನಿಕಲ್ ಬಾಯ್ಸ್’ ಎಂಬ ಅದ್ಭುತ ಕಾದಂಬರಿ ಗಳನ್ನು ಬರೆದು, ಎರಡು ಬಾರಿ ಪುಲಿಟ್ಜರ್ ಪ್ರಶಸ್ತಿಗೆ ಭಾಜನರಾದರು.
ಇತಿಹಾಸದಲ್ಲಿ ಕೇವಲ ನಾಲ್ಕು ಜನರಿಗೆ ಮಾತ್ರ ಈ ಗೌರವ ಸಿಕ್ಕಿದೆ. ಫೋರ್ಡ್ ಇಂದಿಗೂ (81 ವರ್ಷ) ಗೌರವಾನ್ವಿತ ಲೇಖಕರೇ ಆಗಿದ್ದರೂ, ಆ ‘ಉಗುಳಿದ ಘಟನೆ’ ಅವರ ವ್ಯಕ್ತಿತ್ವದ ಮೇಲಿನ ಒಂದು ಅಳಿಸಲಾಗದ ಕಲೆಯಾಗಿ ಉಳಿದುಬಿಟ್ಟಿದೆ!
ಕನ್ನಡದಲ್ಲೂ ಸಾಹಿತಿ - ವಿಮರ್ಶಕರ ಜಟಾಪತಿ ಹೊಸತೇನಲ್ಲ. ಪರಸ್ಪರ ಬೈದಾಡಿ ಕೊಂಡಿರಬಹುದು, ಆದರೆ ಉಗುಳುವ ಮಟ್ಟಕ್ಕೆ ಹೋಗಿಲ್ಲ.