Vishweshwar Bhat Column: ಅದು ಕವಿ ಮತ್ತು ಕಾದಂಬರಿಕಾರನ ಕೆಸರು ಕಂಬಳ ಕಾದಾಟ !
ಸ್ಟೀವನ್ಸ್ ನೋಡೋಕೆ ಶಾಂತವಾಗಿದ್ದರೂ, ಮದ್ಯ ಹೊಟ್ಟೆಗೆ ಬಿದ್ದರೆ ಸಾಕು, ಆತನೊಳಗಿನ ರಾಕ್ಷಸ ಎಚ್ಚರವಾಗುತ್ತಿದ್ದ. ಕುಡಿದಾಗ ಆತ ಕವಿಯಲ್ಲ, ಉಗ್ರ ಮೃಗ! ಹೀಗೆ ಒಂದು ಕಡೆ ಬಾಕ್ಸಿಂಗ್ ರಿಂಗ್ ಹುಲಿ ಹೆಮಿಂಗ್ವೇ, ಇನ್ನೊಂದು ಕಡೆ ಕಾರ್ಪೊರೇಟ್ ಜಗತ್ತಿನ ಕವಿ ಸ್ಟೀವನ್ಸ್. ಇವರಿಬ್ಬರೂ ಮುಖಾಮುಖಿ ಯಾಗಿದ್ದು ವಿಧಿಯಾಟ.
-
ನೂರೆಂಟು ವಿಶ್ವ
ಕೆಲವು ವರ್ಷಗಳ ತನಕ, ಬರಹಗಾರರ ಬಗ್ಗೆ ಜನಸಾಮಾನ್ಯರಲ್ಲಿ ಒಂದು ಭಾವನೆ ಇತ್ತೇನೋ. ಕೈಯಂದು ಪೆನ್ನು, ಪುಸ್ತಕ, ಬಗಲಿಗೊಂದು ಜೋಳಿಗೆ ಚೀಲ, ಕುರುಚಲು ಗಡ್ಡ.. ಕತೆ, ಕವನ, ಲೇಖನ, ಕಾದಂಬರಿ, ವಿಮರ್ಶೆ ಬರೆದುಕೊಂಡಿರುವವರು. ಕಾರ್ಯಕ್ರಮಗಳಲ್ಲಿ, ವಿಚಾರಸಂಕೀರ್ಣಗಳಲ್ಲಿ, ಗೋಷ್ಠಿಗಳಲ್ಲಿ ಭಾಷಣ ಮಾಡುವವರು.. ಪರಸ್ಪರ ಟೀಕೆ-ಟಿಪ್ಪಣಿಗಳಲ್ಲಿ ತೊಡಗಿರುವವರು... ಇತ್ಯಾದಿ ಇತ್ಯಾದಿ. ಏನೇ ಅನ್ನಿ, ಸಾಹಿತಿಗಳು ಕೈಸರ್-ಮೈಸರ್ ಹೊಡೆದಾಟಕ್ಕೆ ಇಳಿಯುವವರಲ್ಲ. ಅವರ ಕದನಕ್ಕೆ ಅಸವೇನಿದ್ದರೂ ಅಕ್ಷರಗಳಿಗಷ್ಟೇ ಸೀಮಿತ.
ಹಾಗಂತ ನೀವು ಅಂದುಕೊಂಡಿದ್ದರೆ, ಅದು ನಿಮ್ಮ ತಪ್ಪು. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಶಾಯಿ ಮಸಿ ಚೆಲ್ಲಬೇಕಾದ ಜಾಗದಲ್ಲಿ ನೆತ್ತರು ಚೆಲ್ಲಿದ ಉದಾಹರಣೆಗಳೂ ಸಿಗುತ್ತವೆ. ಲೇಖನಿಯಿಂದ ಜಗತ್ತನ್ನೇ ಗೆದ್ದವರು, ಕತ್ತಲಾದ ಮೇಲೆ ಮದ್ಯದ ಅಮಲಿನಲ್ಲಿ ಅನಾಹುತಕ್ಕೆ ಸಾಕ್ಷಿಯಾಗಿದ್ದರು ಎನ್ನುವುದು ಗೊತ್ತಾದರೆ ಮೈ ಜುಂ ಎನ್ನುತ್ತದೆ.
ನಾನು ಹೇಳಹೊರಟಿರುವುದು ಅಂತಿಂಥವರ ಕಥೆಯಲ್ಲ. ವಿಶ್ವ ಸಾಹಿತ್ಯವನ್ನೇ ಆಳಿದ ಇಬ್ಬರು ದಿಗ್ಗಜರ ಕಥೆ. ಒಬ್ಬ ಅಮೆರಿಕದ ಶ್ರೇಷ್ಠ ಕವಿ ವ್ಯಾಲೇಸ್ ಸ್ಟೀವನ್ಸ್. ಇನ್ನೊಬ್ಬ ಜಗತ್ಪ್ರಸಿದ್ಧ ಕಾದಂಬರಿಕಾರ, ಸಾಹಸಿ ಅರ್ನೆಸ್ಟ್ ಹೆಮಿಂಗ್ವೇ.
ಒಬ್ಬ ಕವಿತೆಯ ಸಾಲುಗಳಲ್ಲಿ ಹೂವು ಅರಳಿಸುವವನು, ಇನ್ನೊಬ್ಬ ಕಾದಂಬರಿಯಲ್ಲಿ ಯುದ್ಧದ ಭೀಕರತೆಯನ್ನು ತರುವವನು. ಇವರಿಬ್ಬರೂ ಅಕ್ಷರಶಃ ಬೀದಿಗಿಳಿದು, ಶರ್ಟು ಮಡಚಿ, ಮುಷ್ಟಿ ಯುದ್ಧ ಮಾಡಿದರೆ ಹೇಗಿರುತ್ತದೆ? ಸುಮ್ಮನೆ ಯೋಚಿಸಿ. 1936ರ ಆ ಮಳೆಗಾಲದ ರಾತ್ರಿ, ಫ್ಲೋರಿಡಾದ ಕೀ ವೆಸ್ಟ್‌ನಲ್ಲಿ ನಡೆದದ್ದು ಇದೇ. ಅದು ಕೇವಲ ಜಗಳವಾಗಿರಲಿಲ್ಲ.
ಇದನ್ನೂ ಓದಿ: Vishweshwar Bhat Column: ನೊಬೆಲ್ ಸಾಹಿತಿ-ವಿಮರ್ಶಕ ನೆಲಕ್ಕುರುಳಿ ಹೊಡೆದಾಡಿಕೊಂಡರು !
ಅದು ಅಹಂಕಾರದ ಅಟ್ಟಹಾಸದ ಕಾದಾಟವಾಗಿತ್ತು. ಪೌರುಷದ ಪ್ರದರ್ಶನವಾಗಿತ್ತು. ಈ ಘಟನೆ ಯ ಆಳಕ್ಕೆ ಇಳಿಯುವ ಮುನ್ನ, ಆ ಇಬ್ಬರು ಪಾತ್ರಧಾರಿಗಳ ಅಸಲಿ ಬಣ್ಣವನ್ನು ನೀವು ನೋಡಲೇ ಬೇಕು. ಆಗಲೇ ಈ ನಾಟಕದ ಕಿಕ್ ನಿಮಗೆ ಸಿಗೋದು. ಮೊದಲನೆಯವನು ಅರ್ನೆಸ್ಟ್ ಹೆಮಿಂಗ್ವೇ. ಹೆಸರು ಕೇಳಿದ್ರೆ ಸಾಕು,
ಅಮೆರಿಕದ ಸಾಹಿತ್ಯ ಲೋಕ ಎದ್ದು ನಿಂತು ಸೆಲ್ಯೂಟ್ ಹೊಡೆಯುತ್ತಿತ್ತು. ಆತ ಬರೀ ಲೇಖಕನಲ್ಲ, ಅದನ್ನೂ ಮೀರಿದ ಒಂದು ‘ಬ್ರ್ಯಾಂಡ್’. ನಾನೊಬ್ಬ ಗಂಡಸು, ನಾನೊಬ್ಬ ಮ್ಯಾನ್ ಆಫ್ ಆಕ್ಷನ್’ ಎಂದು ತೋರಿಸಿಕೊಳ್ಳುವುದರಲ್ಲಿ ಅವನಿಗೆ ಎಲ್ಲಿಲ್ಲದ ಆಸಕ್ತಿ. ಆತ ಬಂದೂಕು ಹಿಡಿದು ಕಾಡಿಗೆ ಹೋಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ.
ಸಮುದ್ರದ ಮಧ್ಯೆ ಹೋಗಿ ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯುತ್ತಿದ್ದ. ಸ್ಪೇನ್‌ನಲ್ಲಿ ಗೂಳಿ ಕಾಳಗ ನೋಡುತ್ತಿದ್ದ. ಅಷ್ಟೇ ಅಲ್ಲ, ಬಾಕ್ಸಿಂಗ್ ರಿಂಗಿಗೆ ಇಳಿದು ಎದುರಾಳಿಯ ಮೂಗು ಒಡೆಯುವು ದರಲ್ಲಿ ಅವನಿಗೆ ಎಲ್ಲಿಲ್ಲದ ಖುಷಿ. ಆತನ ಮೈಯಲ್ಲಿ ಹರಿಯುತ್ತಿದ್ದದ್ದು ರಕ್ತವೋ ಅಥವಾ ಸಾಹಸದ ಹುಚ್ಚೋ ಗೊತ್ತಿಲ್ಲ.
ಆತ ಯಾವಾಗಲೂ ತನ್ನನ್ನು ತಾನು ಒಬ್ಬ ‘ಫೈಟರ್’ ಅಂತಲೇ ಅಂದುಕೊಂಡಿದ್ದ. ಆತನಿಗೆ ಆಗ ವಯಸ್ಸು ಇನ್ನೂ ಮೂವತ್ತರ ಆಸುಪಾಸು. ರಕ್ತ ಕುದಿಯುವ ವಯಸ್ಸು. ಎರಡನೆಯವನು ವ್ಯಾಲೇಸ್ ಸ್ಟೀವನ್ಸ್. ಇವನು ಹೆಮಿಂಗ್ವೇಗಿಂತ ಸುಮಾರು ಇಪ್ಪತ್ತು ವರ್ಷ ದೊಡ್ಡವ. ನೋಡೋಕೆ ಒಬ್ಬ ಸಾದು ಪ್ರಾಣಿ. ಈತನಿಗೊಂದು ವಿಚಿತ್ರವಾದ ಡಬಲ್ ಲೈಫ್ ಇತ್ತು.
ಹಗಲಿನಲ್ಲಿ ಈತ ಇನ್ಶೂರೆನ್ಸ್ ಕಂಪನಿಯ ದೊಡ್ಡ ಎಕ್ಸಿಕ್ಯೂಟಿವ್. ಟೈ ಕಟ್ಟಿಕೊಂಡು, ಸೂಟು ಹಾಕಿಕೊಂಡು, ಫೈಲುಗಳ ಮಧ್ಯೆ ಕುಳಿತು ಇನ್ಶೂರೆನ್ಸ್ ಪಾಲಿಸಿಗಳ ಲೆಕ್ಕ ಹಾಕುವ ಪಕ್ಕಾ ಕಾರ್ಪೊ ರೇಟ್ ಮನುಷ್ಯ. ಆದರೆ ರಾತ್ರಿಯಾಗುತ್ತಿದ್ದಂತೆ, ಆತನೊಳಗೊಬ್ಬ ಕವಿ ಎಚ್ಚರಗೊಳ್ಳು ತ್ತಿದ್ದ.
ಆತ ಬರೆಯುತ್ತಿದ್ದ ಕವಿತೆಗಳು ಎಷ್ಟು ಸೂಕ್ಷ್ಮವಾಗಿರುತ್ತಿದ್ದವು ಎಂದರೆ, ಇವನೇನಾ ಆ ಇನ್ಶೂರೆನ್ಸ್ ಆಫೀಸರ್ ಎಂದು ಜನ ಹುಬ್ಬೇರಿಸುತ್ತಿದ್ದರು. ಆದರೆ ಇಂದು ಟ್ವಿಸ್ಟ್ ಇದೆ. ಸ್ಟೀವನ್ಸ್ ನೋಡೋಕೆ ಶಾಂತವಾಗಿದ್ದರೂ, ಮದ್ಯ ಹೊಟ್ಟೆಗೆ ಬಿದ್ದರೆ ಸಾಕು, ಆತನೊಳಗಿನ ರಾಕ್ಷಸ ಎಚ್ಚರವಾಗುತ್ತಿದ್ದ. ಕುಡಿದಾಗ ಆತ ಕವಿಯಲ್ಲ, ಉಗ್ರ ಮೃಗ! ಹೀಗೆ ಒಂದು ಕಡೆ ಬಾಕ್ಸಿಂಗ್ ರಿಂಗ್ ಹುಲಿ ಹೆಮಿಂಗ್ವೇ, ಇನ್ನೊಂದು ಕಡೆ ಕಾರ್ಪೊರೇಟ್ ಜಗತ್ತಿನ ಕವಿ ಸ್ಟೀವನ್ಸ್. ಇವರಿಬ್ಬರೂ ಮುಖಾಮುಖಿಯಾಗಿದ್ದು ವಿಧಿಯಾಟ.
1936, ಫ್ಲೋರಿಡಾದ ’ಕೀ ವೆಸ್ಟ್’ ದ್ವೀಪ. ಅದು ಸಾಹಿತಿಗಳ ಅಡ್ಡ. ಹೆಮಿಂಗ್ವೇ ಅಲ್ಲಿನ ಖಾಯಂ ನಿವಾಸಿ. ತನ್ನ ಬರವಣಿಗೆ, ಮೀನುಗಾರಿಕೆ ಮತ್ತು ಕುಡಿತಕ್ಕಾಗಿ ಅಲ್ಲಿ ಬೀಡುಬಿಟ್ಟಿದ್ದ. ಅಲ್ಲಿಗೆ ರಜಾ ಕಳೆಯಲು ಬಂದಿದ್ದ ಕವಿ ವ್ಯಾಲೇಸ್ ಸ್ಟೀವನ್ಸ್. ಫೆಬ್ರವರಿ ತಿಂಗಳ ಒಂದು ಸಂಜೆ. ಒಂದು ಅದ್ಧೂರಿ ಕಾಕ್ ಟೇಲ್ ಪಾರ್ಟಿ ನಡೆದಿತ್ತು. ಸಾಹಿತಿಗಳು, ವಿಮರ್ಶಕರು, ಶ್ರೀಮಂತರು ಎಲ್ಲರೂ ಸೇರಿದ್ದರು. ಬಣ್ಣಬಣ್ಣದ ದ್ರವಗಳನ್ನು ಗ್ಲಾಸ್‌ಗಳಿಗೆ ಸುರಿಯಲಾಗಿತ್ತು.
ವಾತಾವರಣದಲ್ಲಿ ಸಿಗರೇಟಿನ ಹೊಗೆ ಮತ್ತು ಹರಟೆಯ ಸದ್ದು ತುಂಬಿತ್ತು. ಆ ಪಾರ್ಟಿಯಲ್ಲಿ ಹೆಮಿಂಗ್ವೇ ಇರಲಿಲ್ಲ, ಆದರೆ ಆತನ ತಂಗಿ ‘ಉರ್ಸುಲಾ’ ಇದ್ದಳು. ವ್ಯಾಲೇಸ್ ಸ್ಟೀವನ್ಸ್ ಆಗಲೇ ಬೇಕಾದಷ್ಟು ‘ಏರಿಸಿಕೊಂಡಿದ್ದರು’. ಮದ್ಯದ ಅಮಲು ತಲೆಗೇರಿದಾಗ ಮನುಷ್ಯನ ನಾಲಿಗೆಗೆ ಮೂಳೆ ಇರುವುದಿಲ್ಲ ಅಂತಾರಲ್ಲ, ಹಾಗೆ ಸ್ಟೀವನ್ಸ್ ನಾಲಿಗೆ ಹರಿಯಬಿಟ್ಟ.
ಸ್ಟೀವನ್ಸ್‌ಗೆ ಮೊದಲಿನಿಂದಲೂ ಹೆಮಿಂಗ್ವೇ ಕಂಡರೆ ಒಂದು ಅಸಡ್ಡೆ. ಏನ್ ಮಹಾ ಬರೀತಾನೆ ಅವನು? ಬರೀ ಪೌರುಷದ ಪ್ರದರ್ಶನ. ಬರೀ ಒರಟು ಸಾಹಿತ್ಯ’ ಎಂದು ಅಂದು ಉರ್ಸುಲಾಳ ಎದುರೇ ಆತ ಹೆಮಿಂಗ್ವೇ ಬಗ್ಗೆ ಹಗುರವಾಗಿ ಮಾತನಾಡಿದ. ನಿನ್ನ ಅಣ್ಣ ಒಬ್ಬ ಪೇಪರ್ ಹೀರೋ ಕಣಮ್ಮ, ಅವನ ಬರವಣಿಗೆಯಲ್ಲಿ ದಮ್ಮಿಲ್ಲ’ ಎಂದುಬಿಟ್ಟ. ಇದು ಅಲ್ಲಿಗೆ ನಿಲ್ಲಲಿಲ್ಲ. ಪಾರ್ಟಿ ಮುಗಿಯುವ ಹೊತ್ತಿಗೆ ಸ್ಟೀವನ್ಸ್ ಪೂರ್ತಿ ನಿಯಂತ್ರಣ ಕಳೆದುಕೊಂಡಿದ್ದ.
ಹೆಮಿಂಗ್ವೇ ಎಲ್ಲಿದ್ದಾನೆ ಎಂದು ಹುಡುಕಿಕೊಂಡು ಹೊರಟ. ಹೊರಗೆ ಜಿಟಿ ಜಿಟಿ ಮಳೆ. ಕತ್ತಲು ಬೇರೆ. ರಸ್ತೆಗಳು ಕೆಸರುಮಯ. ಅದೇ ಸಮಯದಲ್ಲಿ ಹೆಮಿಂಗ್ವೇ ಇನ್ನೊಂದು ಕಡೆಯಿಂದ ನಡೆದು ಕೊಂಡು ಬರುತ್ತಿದ್ದ. ಆತನಿಗೆ ಈ ವಿಷಯ ಗೊತ್ತಿರಲಿಲ್ಲ. ಆದರೆ ಕುಡಿದು ತೂರಾಡುತ್ತಿದ್ದ ಸ್ಟೀವನ್ಸ್, ಹೆಮಿಂಗ್ವೇಯನ್ನು ನೋಡಿದ ಕೂಡಲೇ ರೊಚ್ಚಿಗೆದ್ದ.
ಸ್ಟೀವನ್ಸ್ ನೇರವಾಗಿ ಹೆಮಿಂಗ್ವೇ ಎದುರು ಹೋಗಿ ನಿಂತ. ಏಯ, ನೀನೇನಾ ಅರ್ನೆಸ್ಟ್ ಹೆಮಿಂಗ್ವೇ?’ ಸ್ಟೀವನ್ಸ್ ದನಿ ಏರಿಸಿದ. ಹೆಮಿಂಗ್ವೇ ಶಾಂತವಾಗಿಯೇ, ಹೌದು, ನಾನೇ. ಯಾರು ನೀವು?’ ಎಂದು ಕೇಳಿದ. ಎಲ್ರೂ ಹೇಳ್ತಾರೆ ನೀನೊಬ್ಬ ದೊಡ್ಡ ಗಟ್ಟಿಗ ಅಂತ. ನಿನ್ನ ಕಾದಂಬರಿಗಳಲ್ಲಿ ಬರೀ ಹೀರೋಯಿಸಂ ತೋರಿಸ್ತೀಯಾ. ಬಾ ಇವತ್ತು ನೋಡೇ ಬಿಡೋಣ.
ನನ್ನ ಒಂದೇ ಏಟಿಗೆ ನೀನು ತತ್ತರಿಸಿಹೋಗ್ತೀಯ’ ಎಂದು ಸ್ಟೀವನ್ಸ್ ಸವಾಲು ಹಾಕಿದ. ಹೆಮಿಂಗ್ವೇಗೆ ನಗು ಬಂದಿರಬೇಕು. ಒಬ್ಬ ಕುಡುಕ, ಅದೂ ತನ್ನ ತಂದೆಯ ವಯಸ್ಸಿನವನು ತನಗೆ ಚಾಲೆಂಜ್ ಮಾಡ್ತಿದಾನ ಅಂದುಕೊಂಡ. ಆತ ಸುಮ್ಮನೆ ಮುಂದೆ ಹೋಗಲು ನೋಡಿದ. ಆದರೆ ಸ್ಟೀವನ್ಸ್ ಬಿಡಲಿಲ್ಲ. ಆತನ ದಾರಿ ಅಡ್ಡಗಟ್ಟಿದ. ಮಾತಿನ ಚಕಮಕಿ ಜೋರಾಯಿತು.
ಅಮಲಿನಲ್ಲಿದ್ದ ಸ್ಟೀವನ್ಸ್, ಇದ್ದಕ್ಕಿದ್ದಂತೆ ತನ್ನ ಬಲಗೈಯನ್ನು ಮುಷ್ಟಿ ಮಾಡಿ ತಗೋಳೋ ಮಗನೇ’ ಎಂದು ಹೆಮಿಂಗ್ವೇ ಮುಖಕ್ಕೆ ಗುದ್ದಲು ಮುಂದಾದ. ಆ ಕ್ಷಣ ಅಲ್ಲಿ ಇತಿಹಾಸ ಸೃಷ್ಟಿ ಆಗೋಯ್ತು. ಸ್ಟೀವನ್ಸ್ ಒಬ್ಬ ಕವಿ, ಬಾಕ್ಸರ್ ಅಲ್ಲ. ಆತನಿಗೆ ಮುಷ್ಟಿ ಹೇಗೆ ಬಿಗಿ ಹಿಡಿಯಬೇಕು, ಹೇಗೆ ಹೊಡೆಯ ಬೇಕು ಅನ್ನೋದು ಗೊತ್ತಿಲ್ಲ. ಆದರೂ ಆತ ತನ್ನೆಲ್ಲ ಬಲ ಹಾಕಿ ಹೆಮಿಂಗ್ವೇ ದವಡೆಗೆ ಒಂದು ಪಂಚ್ ಕೊಟ್ಟ. ಢಮಾರ್’ ಅಂತ ಶಬ್ದ ಬಂತು. ಆದರೆ ಬಿದ್ದಿದ್ದು ಹೆಮಿಂಗ್ವೇ ಅಲ್ಲ!
ಹೆಮಿಂಗ್ವೇ ಎಂಥ ಬಾಕ್ಸರ್ ಅಂದ್ರೆ, ಆತನ ದವಡೆ ಕಲ್ಲಿನಷ್ಟೇ ಗಟ್ಟಿಯಾಗಿತ್ತು. ಸ್ಟೀವನ್ಸ್ ಹೊಡೆದ ರಭಸಕ್ಕೆ, ಹೆಮಿಂಗ್ವೇಗೆ ನೋವಾಗಲಿಲ್ಲ, ಬದಲಿಗೆ ಸ್ಟೀವನ್ಸ್ ಅವರ ಕೈಯೇ ಮುರಿದು ಹೋಯಿತು. ಆದರೆ ಸ್ಟೀವನ್ಸ್ ನಿಲ್ಲಲಿಲ್ಲ. ನೋವಿನಲ್ಲೂ ಆತ ಮತ್ತೆರಗಿದ. ಆಗ ಹೆಮಿಂಗ್ವೇ ಸುಮ್ಮನಿರಲಿಲ್ಲ.
ಆತ ತನ್ನೊಳಗಿನ ಬಾಕ್ಸರ್‌ನನ್ನು ಜಾಗೃತಗೊಳಿಸಿದ. ಹೆಮಿಂಗ್ವೇ ಎಡಕ್ಕೆ ಸರಿದು, ಬಲಗೈಯಿಂದ ಒಂದು ಪಂಚ್ ಕೊಟ್ಟ. ಸ್ಟೀವನ್ಸ್ ತರಗೆಲೆಯಂತೆ ಹಾರಿ ರಸ್ತೆಯ ಪಕ್ಕದ ಕೆಸರಿನಲ್ಲಿ ಬಿದ್ದ. ಮಳೆ ಸುರಿಯುತ್ತಿತ್ತು.
ಕೆಸರಿನಲ್ಲಿ ಕವಿ ಪುಂಗವ ಬಿದ್ದಿದ್ದ. ಸ್ಟೀವನ್ಸ್ ಮತ್ತೆ ಎದ್ದ. ಮತ್ತೆ ಹೊಡೆಯಲು ಹೋದ. ಹೆಮಿಂಗ್ವೇ ಮತ್ತೆ ಹೊಡೆದ. ಹೀಗೆ ಮೂರು ಬಾರಿ ಸ್ಟೀವನ್ಸ್ ಕೆಸರಿನಲ್ಲಿ ಉರುಳಾಡಿದ. ಕೊನೆಗೆ ಸ್ಟೀವನ್ಸ್ ಸೋಲೊಪ್ಪಿಕೊಂಡ. ಆತನ ಸೂಟು ಕೆಸರಿನಲ್ಲಿ ಮಿಂದೆದ್ದಿತ್ತು. ಮುಖ ಊದಿಕೊಂಡಿತ್ತು.
ಕೈ ಮುರಿದು ಜೋತು ಬಿದ್ದಿತ್ತು. ಹೆಮಿಂಗ್ವೇ ಮಾತ್ರ ಗಂಭೀರವಾಗಿ ನಿಂತಿದ್ದ. ಅವರ ಕೆನ್ನೆಯ ಮೇಲೆ ಸಣ್ಣ ಗಾಯವಾಗಿತ್ತು ಅಷ್ಟೇ. ರಾತ್ರಿಯ ಕತ್ತಲಲ್ಲಿ ಈ ಕದನ ಕರಗಿಹೋಯಿತು. ಆದರೆ ಬೆಳಗಾದಾಗ ಅಸಲಿ ಸಮಸ್ಯೆ ಶುರುವಾಯಿತು. ಸ್ಟೀವನ್ಸ್ ಬೆಳಗ್ಗೆ ಎದ್ದು ಕನ್ನಡಿ ನೋಡಿಕೊಂಡರೆ, ಮುಖ ಬಾತು ಕೊಂಡಿತ್ತು. ಕೈ ವಿಪರೀತ ನೋಯುತ್ತಿತ್ತು.
ವೈದ್ಯರ ಬಳಿ ಹೋದರೆ, ನಿಮ್ಮ ಕೈ ಮೂಳೆ ಮುರಿದಿದೆ, ಪ್ಲಾಸ್ಟರ್ ಹಾಕಬೇಕು’ ಎಂದು ಹೇಳಿದರು. ಆಗ ಸ್ಟೀವನ್ಸ್ ಎದೆಯಲ್ಲಿ ಢವಢವ ಶುರುವಾಯಿತು. ಯಾಕೆ ಗೊತ್ತಾ? ಆತ ಒಬ್ಬ ದೊಡ್ಡ ಇನ್ಶೂ ರೆನ್ಸ್ ಕಂಪನಿಯ ಎಕ್ಸಿಕ್ಯೂಟಿವ್. ನಾನು ಬೀದಿಬದಿ ಕುಡುಕರ ಥರ ಹೊಡೆದಾಡಿಕೊಂಡು ಕೈ ಮುರಿದುಕೊಂಡೆ’ ಅನ್ನೋ ವಿಷಯ ಪೇಪರ್‌ನಲ್ಲಿ ಬಂದರೆ, ಮಾನ ಮರ್ಯಾದೆ ಹರಾಜಾಗುತ್ತ ದಲ್ಲ? ಕೆಲಸಕ್ಕೂ ಕುತ್ತು ಬೇರೆ. ಕೂಡಲೇ ಸ್ಟೀವನ್ಸ್, ಹೆಮಿಂಗ್ವೇ ಹತ್ತಿರ ಹೋದ.
ಅಲ್ಲಿ ರಾತ್ರಿ ಕಂಡ ಆವೇಶ ಇರಲಿಲ್ಲ. ಪಶ್ಚಾತ್ತಾಪವಿತ್ತು.‘ಮಿಸ್ಟರ್ ಹೆಮಿಂಗ್ವೇ, ರಾತ್ರಿ ನಾನು ಕುಡಿದು ತಪ್ಪು ಮಾಡಿದೆ. ದಯವಿಟ್ಟು ಕ್ಷಮಿಸು’ ಎಂದು ಅಂಗಲಾಚಿದ. ಹೆಮಿಂಗ್ವೇ, ಹೊರಗಿನಿಂದ ಕಠಿಣವಾಗಿ ಕಂಡರೂ ಒಳಗಿನಿಂದ ಮೃದು ಮನುಷ್ಯ. ಪರವಾಗಿಲ್ಲ ಬಿಡು, ಅದೆಲ್ಲ ಮಾಮೂಲಿ’ ಎಂದು ಅಪ್ಪಿಕೊಂಡ. ಅಲ್ಲಿ ಇಬ್ಬರೂ ಒಂದು ರಹಸ್ಯ ಒಪ್ಪಂದ’ ಮಾಡಿಕೊಂಡರು. ಈ ಜಗಳದ ವಿಷಯ ಹೊರಗೆ ಯಾರಿಗೂ ಗೊತ್ತಾಗಬಾರದು. ನಾವು ಇದನ್ನು ಇಲ್ಲೇ ಮಣ್ಣು ಮಾಡೋಣ’ ಎಂದು ತೀರ್ಮಾನಿಸಿದರು. ಸ್ಟೀವನ್ಸ್ ಆಸ್ಪತ್ರೆಯಗಲೀ, ಆಫೀಸಿನಗಲೀ ಅಥವಾ ಮನೆಯಲ್ಲಾಗಲೀ ಯಾರೇ ಕೇಳಿದರೂ ಒಂದೇ ಉತ್ತರ ಕೊಡುತ್ತಿದ್ದ - ಏನ್ ಮಾಡೋದು ಸ್ವಾಮಿ, ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದುಬಿಟ್ಟೆ. ಅದಕ್ಕೇ ಕೈ ಮುರಿಯಿತು’.
ಜಗತ್ತು ಅದನ್ನು ನಂಬಿತು. ಪಾಪ, ಬಡಪಾಯಿ ಕವಿ ಬಿದ್ದು ಕೈ ಮುರ್ಕೊಂಡಿzನೆ ಅಂತ ಅನುಕಂಪ ತೋರಿಸಿತು. ಆದರೆ ಗಾದೆ ಇದೆಯಲ್ಲ, ‘ಗೋಡೆಗಳಿಗೂ ಕಿವಿ ಇರುತ್ತೆ’ ಅಂತ. ಇಲ್ಲಿ ಗೋಡೆಯಲ್ಲ, ಸ್ವತಃ ಹೆಮಿಂಗ್ವೇನೇ ಒಂದು ಲೌಡ್‌ಸ್ಪೀಕರ್!
ಹೆಮಿಂಗ್ವೇಗೆ ಈ ವಿಷಯವನ್ನು ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ತನ್ನಂಥ ಒಬ್ಬ ಪೈಲ್ವಾನ್, ಇನ್ನೊಬ್ಬನನ್ನು ಮಕಾಡೆ ಮಲಗಿಸಿದ್ದಾನೆ ಅಂದರೆ ಅದನ್ನು ಹೇಳಿಕೊಳ್ಳದಿದ್ದರೆ ಹೇಗೆ? ಘಟನೆ ನಡೆದ ಕೆಲವೇ ದಿನಗಳಲ್ಲಿ, ಹೆಮಿಂಗ್ವೇ ತನ್ನ ಆತ್ಮೀಯ ಗೆಳತಿ ಸಾರಾ ಮರ್ಫಿಗೆ ಒಂದು ಪತ್ರ ಬರೆದ. ಆ ಪತ್ರದಲ್ಲಿ ಆತ ಇಡೀ ಜಗಳವನ್ನು ಮಸಾಲೆ ಹಾಕಿ ವರ್ಣಿಸಿದ್ದ.
ಪತ್ರದಲ್ಲಿ ಆತ ಹೀಗೆ ಬರೆದಿದ್ದ - ವ್ಯಾಲೇಸ್ ಸ್ಟೀವನ್ಸ್ ನನ್ನನ್ನು ಹೊಡೆಯಲು ಬಂದ... ಆತ ನನ್ನ ದವಡೆಗೆ ಗುದ್ದಿದಾಗ ಆತನ ಕೈ ಮುರಿದು ಹೋಯಿತು...’ಈ ಪತ್ರ ಯಾವಾಗ ಹೊರಬಿತ್ತೋ, ಸಾಹಿತ್ಯ ಲೋಕದಲ್ಲಿ ಬಾಂಬ್ ಸೋಟವಾಯಿತು! ಓಹೋ! ಮೆಟ್ಟಿಲಿಂದ ಬಿದ್ದಿದ್ದಲ್ಲವೇ? ಇದು ಮುಷ್ಟಿ ಯುದ್ಧದ ಫಲವೇ?’ ಎಂದು ಜನ ಆಡಿಕೊಳ್ಳಲು ಶುರುಮಾಡಿದರು.
ಸ್ಟೀವನ್ಸ್ ಮುಖವಾಡ ಕಳಚಿ ಬಿತ್ತು. ಮೇಲ್ನೋಟಕ್ಕೆ ಇದು ಕುಡಿದು ತೂರಾಡುವ ಇಬ್ಬರ ಜಗಳ ದಂತೆ ಕಾಣಬಹುದು. ಆದರೆ ಇದರ ಹಿಂದೊಂದು ಫಿಲಾಸಫಿ ಇದೆ. ಇದು ಕೇವಲ ಇಬ್ಬರು ವ್ಯಕ್ತಿಗಳ ಜಗಳವಲ್ಲ. ಇದು ‘ಕಲ್ಪನೆ’ ಮತ್ತು ‘ವಾಸ್ತವ’ ನಡುವಿನ ಸಂಘರ್ಷ. ಆದರೆ, ಈ ಘಟನೆಯ ನಂತರ ಇಬ್ಬರ ನಡುವೆ ದ್ವೇಷ ಬೆಳೆಯಲಿಲ್ಲ ಎನ್ನುವುದು ವಿಶೇಷ. ಸ್ಟೀವನ್ಸ್ ನಂತರದ ದಿನಗಳಲ್ಲಿ ಹೆಮಿಂಗ್ವೇ ಬಗ್ಗೆ ಬಹಳ ಗೌರವದಿಂದ ಮಾತನಾಡಲಾರಂಭಿಸಿದ.
ಅರ್ನೆಸ್ಟ್ ಮತ್ತು ನಾನು ಆವತ್ತು ಕಾದಾಡಿದ್ದು ನಿಜ. ಆದರೆ ನಾವಿಬ್ಬರೂ ಪರಸ್ಪರ ದ್ವೇಷಿಸುತ್ತಿರ ಲಿಲ್ಲ. ಅದು ಆ ಕ್ಷಣದ ಹುಚ್ಚುತನ ಅಷ್ಟೇ’ ಎಂದು ಹೇಳಿಕೊಂಡ. ಹೆಮಿಂಗ್ವೇ ಕೂಡ ಸ್ಟೀವನ್ಸ್ ಬಗ್ಗೆ, ಅವನು ಕೆಟ್ಟ ಬಾಕ್ಸರ್ ಇರಬಹುದು, ಆದರೆ ಒಳ್ಳೆಯ ಕವಿ’ ಎಂದು ಸರ್ಟಿಫಿಕೇಟ್ ಕೊಟ್ಟ.
ಕಾಲ ಉರುಳಿತು. ಸ್ಟೀವನ್ಸ್ ಮತ್ತು ಹೆಮಿಂಗ್ವೇ ಇಬ್ಬರೂ ಕಾಲವಾದರು. ಅವರ ಕೃತಿಗಳು ಇಂದಿಗೂ ಅಮರ. ಆದರೆ 1936ರ ಆ ರಾತ್ರಿ, ಕೀ ವೆಸ್ಟ್‌ನ ಆ ಕೆಸರು ರಸ್ತೆಯಲ್ಲಿ ನಡೆದ ಆ ಕಾಳಗ ಮಾತ್ರ ಸಾಹಿತ್ಯ ಚರಿತ್ರೆಯಲ್ಲಿ ಒಂದು ರೋಚಕ ದಂತಕಥೆಯಾಗಿ ಉಳಿದು ಬಿಟ್ಟಿತು.
ಒಬ್ಬ ಲೇಖಕ ತನ್ನ ಶಾಯಿಯಿಂದ ಎಷ್ಟೇ ಇತಿಹಾಸ ಬರೆದರೂ, ಕೆಲವೊಮ್ಮೆ ಆತನ ರಕ್ತವೂ ಇತಿಹಾಸ ಬರೆಯುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಕೈ ಮುರಿದರೂ ಕವಿತೆ ನಿಲ್ಲಲಿಲ್ಲ, ದವಡೆಗೆ ಏಟು ಬಿದ್ದರೂ ಕಾದಂಬರಿ ನಿಲ್ಲಲಿಲ್ಲ. ಮನುಷ್ಯ ಎಷ್ಟೇ ದೊಡ್ಡವನಾಗಲಿ, ಎಷ್ಟೇ ಪ್ರಶಸ್ತಿ ಪಡೆಯಲಿ, ಅಹಂ ಅನ್ನೋದು ತಲೆಗೆ ಹತ್ತಿದಾಗ, ಕೈ ಮುರಿದುಕೊಳ್ಳೋದು ಗ್ಯಾರಂಟಿ. ಅದು ಸ್ಟೀವನ್ಸ್ ಆಗಿರಲಿ, ಅಥವಾ ನಾವಾಗಿರಲಿ!