ಪ್ರಸ್ತುತ
ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
ಪತ್ರಿಕೋದ್ಯಮವೆಂದರೆ ದಿನದ ಘಟನೆಗಳನ್ನು ವರದಿ ಮಾಡುವುದಷ್ಟೇ ಅಲ್ಲ; ಸಮಾಜದ ಗಮನಕ್ಕೆ ಬಾರದ ವಿಚಾರಗಳನ್ನು ಮುನ್ನೆಲೆಗೆ ತರುವುದು, ಸಾರ್ವಜನಿಕ ಅಭಿಪ್ರಾಯ ರೂಪಿಸು ವುದು ಮತ್ತು ಆಡಳಿತದ ಗಮನ ಸೆಳೆಯುವುದೂ ಅದರ ಹೊಣೆಗಾರಿಕೆ. ಕನ್ನಡ ಪತ್ರಿಕೋದ್ಯಮ ದಲ್ಲಿ ವಿಶ್ವೇಶ್ವರ ಭಟ್ ಅವರು ತಮ್ಮ ಅಧ್ಯಯನಪೂರ್ಣ ಬರವಣಿಗೆ, ಸ್ಪಷ್ಟ ಮಾತು ಮತ್ತು ಪರಿಣಾಮಕಾರಿ ಸಂಪಾದಕೀಯ ದೃಷ್ಟಿಯಿಂದ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ಕನ್ನಡದ ಶ್ರೇಷ್ಠ ಲೇಖಕರಲ್ಲಿ ಒಬ್ಬರಾದ ಅವರು ಬರಹಗಾರರಿಗೂ ಹೊಸ ವಿಚಾರಗಳಿಗೂ ಪತ್ರಿಕೆಯಲ್ಲಿ ವೇದಿಕೆ ಒದಗಿಸಿzರೆ. ‘ಬಸವ ಮಂಟಪ’ ಕೃತಿಯ ಸುತ್ತ ಉಂಟಾದ ವಿವಾದದ ಹಿನ್ನೆಲೆ ಯಲ್ಲಿ ಭಟ್ ಅವರನ್ನು ಲಿಂಗಾಯತ-ವೀರಶೈವ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ.
ಕೃತಿಯ ವಿಚಾರಗಳನ್ನು ಪ್ರಶ್ನಿಸುವುದಕ್ಕೂ, ಅದನ್ನು ಪ್ರಕಟಿಸಿದ ಸಂಪಾದಕೀಯ ನಿರ್ಧಾರವನ್ನು ವಿಮರ್ಶಿಸುವುದಕ್ಕೂ ಎಲ್ಲರಿಗೂ ಹಕ್ಕಿದೆ. ಆದರೆ ಒಂದು ಕೃತಿ ಅಥವಾ ಒಂದು ನಿರ್ಧಾರದ ಆಧಾರದಲ್ಲಿ ಪತ್ರಕರ್ತರೊಬ್ಬರ ದಶಕಗಳ ಸಾರ್ವಜನಿಕ ಬದುಕಿಗೆ ಸಮುದಾಯವಿರೋಧಿ ಎಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ.
ಕೃತಿಯ ವಿಚಾರ, ಸಂಪಾದಕರ ಹೊಣೆಗಾರಿಕೆ ಮತ್ತು ವ್ಯಕ್ತಿಯ ಸಮುದಾಯದೊಂದಿಗಿನ ನಿಲುವು-ಇವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು. ವಿಶ್ವೇಶ್ವರ ಭಟ್ ಅವರ ಪತ್ರಿಕಾ ಕಾರ್ಯವನ್ನು ಸಮಗ್ರವಾಗಿ ನೋಡಿದರೆ, ಲಿಂಗಾಯತ-ವೀರಶೈವ ಪರಂಪರೆ, ಮಠಗಳು ಮತ್ತು ಸ್ವಾಮೀಜಿಗಳ ವಿಚಾರಗಳಿಗೆ ಅವರು ಹಾಗೂ ಅವರ ಸಂಪಾದಕತ್ವದ ಪತ್ರಿಕೆ ನೀಡಿದ ಬೆಂಬಲದ ಅನೇಕ ಉದಾಹರಣೆಗಳು ಕಾಣುತ್ತವೆ.
ಇದನ್ನೂ ಓದಿ: Dr Jagadeesh Mane Column: ರೂಪಾಯಿ ಚೇತರಿಕೆ ಭಾರತದ ಆರ್ಥಿಕತೆಯ ಹೊಸ ಭರವಸೆ !
ಕರ್ನಾಟಕದ ಪ್ರತಿಯೊಂದು ಲಿಂಗಾಯತ ಮಠಗಳ ಸಕಾರಾತ್ಮಕ ಸುದ್ದಿ, ಲೇಖನಗಳು ಮತ್ತು ಮಠಾಽಶರ ಸಂದರ್ಶನ ಮತ್ತು ಲೇಖನಗಳಿಗೆ ವಿಶ್ವವಾಣಿಯಲ್ಲಿ ನಿರಂತರವಾಗಿ ಸ್ಥಳ ದೊರೆತಿದೆ. ಮಠ ಮತ್ತು ಸ್ವಾಮೀಜಿಗಳ ಕುರಿತು ವಿಶೇಷ ಸಂಚಿಕೆಗಳು ಪ್ರಕಟವಾಗಿವೆ. ಇದು ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಬದುಕನ್ನು ಪತ್ರಿಕೆಯ ಮೂಲಕ ಜನರಿಗೆ ತಲುಪಿಸಿದ ಮಹತ್ವದ ಕೆಲಸ. ವಿವಿಧ ಮಠಗಳು ಮತ್ತು ಸ್ವಾಮೀಜಿಗಳ ವಿಚಾರಧಾರೆಗಳು ಒಂದೇ ರೀತಿಯಲ್ಲ.
ಆದರೂ ಅವರ ಅಭಿಪ್ರಾಯಗಳಿಗೆ ಪತ್ರಿಕೆಯಲ್ಲಿ ಅವಕಾಶ ದೊರೆತಿರುವುದು ಭಟ್ ಅವರ ಮುಕ್ತ ಸಂಪಾದಕೀಯ ನಿಲುವನ್ನು ತೋರಿಸುತ್ತದೆ. ಅಥಣಿ ಮೋಟಗಿಮಠದ ಚನ್ನಬಸವ ಸ್ವಾಮೀಜಿ ಯವರ ಕೃತಿ ಮತ್ತು ವಿಚಾರಗಳ ಕುರಿತು ವಿಶ್ವವಾಣಿ ಸಂವಾದ ವೇದಿಕೆಯಲ್ಲಿ ಕಾರ್ಯಕ್ರಮ ಆಯೋಜಿಸಿ, ಆ ವೇದಿಕೆಯಲ್ಲಿ ವಿಶ್ವೇಶ್ವರ ಭಟ್ ಮಾತನಾಡಿರುವುದೂ ಗಮನಾರ್ಹ.
ಮಠಗಳ ಕಾರ್ಯ, ಸ್ವಾಮೀಜಿಗಳ ಚಿಂತನೆ ಮತ್ತು ಅವರ ಕೃತಿಗಳನ್ನು ಓದುಗರಿಗೆ ಪರಿಚಯಿಸುವ ಮೂಲಕ ಅವರು ಸಮುದಾಯದ ಜ್ಞಾನಪರಂಪರೆಯನ್ನು ವಿಸ್ತೃತ ವಲಯಕ್ಕೆ ತಲುಪಿಸಲು ನೆರವಾಗಿದ್ದಾರೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಕುರಿತ ಚರ್ಚೆ ನಡೆದಾಗಲೂ ವಿಶ್ವವಾಣಿ ಆ ವಿಚಾರಕ್ಕೆ ಪತ್ರಿಕೆಯಲ್ಲಿ ಸ್ಥಳ ನೀಡಲಾಗಿತ್ತು. ಪರ-ವಿರೋಧದ ಅಭಿಪ್ರಾಯಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಸಾರ್ವಜನಿಕ ಚರ್ಚೆ ಮುಂದುವರಿಯಲು ಸಹಕರಿಸಿದ್ದರು.
ರಾಜ್ಯ, ದೇಶ ಅಥವಾ ಅಂತಾರಾಷ್ಟ್ರೀಯ ಮಟ್ಟದ ಯಾವುದೇ ವಿಚಾರ ಇದ್ದರೂ ಅದರ ಪರ ಮತ್ತು ವಿರೋಧಕ್ಕೆ ಸಮಾನ ಅವಕಾಶವನ್ನು ಅವರು ದುಡಿಯುವ ಪತ್ರಿಕೆಯಲ್ಲಿ ಕಲ್ಪಿಸಿದ ಸಂಪಾದಕ. ಪತ್ರಿಕೆಯ ಕೆಲಸವೆಂದರೆ ಒಂದು ಅಭಿಪ್ರಾಯವನ್ನು ಮಾತ್ರ ಪ್ರಕಟಿಸುವುದಲ್ಲ. ಸಮಾಜದ ವಿವಿಧ ಧ್ವನಿಗಳನ್ನು ಓದುಗರ ಮುಂದೆ ಇಡುವುದೂ ಹೌದು. ವಿಶ್ವೇಶ್ವರ ಭಟ್ ಅವರ ಸಂಪಾದಕೀಯ ಕಾರ್ಯದಲ್ಲಿ ಈ ತೆರೆಯಾದ ಚರ್ಚೆಗೆ ಅವಕಾಶ ನೀಡಿದ ಹಲವು ನಿದರ್ಶನಗಳಿವೆ. ಅವರ ವಿರುದ್ಧ ಟೀಕೆ ಮಾಡಿದವರ ಸುದ್ದಿಗಳೂ ಪತ್ರಿಕೆಯಲ್ಲಿ ಪ್ರಕಟವಾಗಿರುವುದು ಇದೇ ಮುಕ್ತತೆಯ ಮತ್ತೊಂದು ಉದಾಹರಣೆ.
ಬಸವಣ್ಣನವರ ಕುರಿತು ವಿಶ್ವೇಶ್ವರ ಭಟ್ ಅವರ ಗೌರವವನ್ನು ತೋರಿಸುವ ಮತ್ತೊಂದು ಪ್ರಮುಖ ಉದಾಹರಣೆ ಲಂಡನ್ನ ಬಸವೇಶ್ವರ ಪ್ರತಿಮೆ ಸ್ಥಾಪನೆಯ ಪ್ರಯತ್ನ. ವಿಶ್ವೇಶ್ವರ ಭಟ್ ಅವರು ಡಾ.ನೀರಜ್ ಪಾಟೀಲ್ ಅವರನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಗೆ ಕರೆದೊಯ್ದಿದ್ದರು.
ಲಂಡನ್ನಲ್ಲಿ ಬಸವೇಶ್ವರರ ಪ್ರತಿಮೆ ಸ್ಥಾಪನೆಯ ಮಹತ್ವವನ್ನು ಪತ್ರಿಕೆಯಲ್ಲಿ ಬರೆದು, ಸರ್ಕಾರದ ಗಮನ ಸೆಳೆಯುವ ಮತ್ತು ಸಾರ್ವಜನಿಕ ಬೆಂಬಲ ರೂಪಿಸುವ ಪ್ರಯತ್ನವನ್ನೂ ಮಾಡಿದ್ದರು. ಪ್ರತಿಮೆ ನಿರ್ಮಾಣದ ಶ್ರೇಯಸ್ಸು ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇರಿದ್ದರೂ, ಆ ಪ್ರಯತ್ನಕ್ಕೆ ಪತ್ರಿಕಾ ವೇದಿಕೆ ಹಾಗೂ ಸಾರ್ವಜನಿಕ ಗಮನ ಒದಗಿಸುವಲ್ಲಿ ಭಟ್ ಅವರ ಕೊಡುಗೆಯನ್ನು ಮರೆಯಲಾಗದು.
ಇಂದು ಲಂಡನ್ ನಗರದಲ್ಲಿ ಮಹಾತ್ಮ ಬಸವೇಶ್ವರರ ಪುತ್ಥಳಿ ಸ್ಥಾಪನೆಯಾಗಿದ್ದರೆ, ಅದರಲ್ಲಿ ಭಟ್ ಅವರ ಕೊಡುಗೆ ಅಪಾರವಾದದ್ದು. ಭಟ್ ಅವರನ್ನು ಲಿಂಗಾಯತ ವಿರೋಧಿ ಎಂದು ಹಣೆಪಟ್ಟಿ ಹಚ್ಚುವವರು ಇದನ್ನು ಗಮನಿಸಬೇಕು. ಒಂದು ಪ್ರಮುಖ ಯೋಜನೆಗೆ ಪತ್ರಿಕೆ ನೀಡುವ ನಿರಂತರ ಪ್ರಚಾರ ಜನಾಭಿಪ್ರಾಯ ರೂಪಿಸಲು ನೆರವಾಗುತ್ತದೆ. ಜನರ ಗಮನ ಸೆಳೆದ ವಿಚಾರ ಆಡಳಿತದ ಗಮನಕ್ಕೂ ತಲುಪುತ್ತದೆ. ಬಸವೇಶ್ವರರ ಪ್ರತಿಮೆ ಯೋಜನೆಗೆ ಸಂಬಂಧಿಸಿದಂತೆ ಭಟ್ ಅವರ ಬರಹ ಮತ್ತು ಸಂಪಾದಕೀಯ ಬೆಂಬಲವು ಈ ರೀತಿಯ ಸಾರ್ವಜನಿಕ ಚರ್ಚೆಗೆ ಬಲ ನೀಡಿತು.
ಪತ್ರಕರ್ತನೊಬ್ಬನ ಲೇಖನಿ ಸಮುದಾಯದ ಗೌರವಕ್ಕೆ ಸಂಬಂಧಿಸಿದ ವಿಚಾರವನ್ನು ರಾಜ್ಯದ ಮಟ್ಟದಲ್ಲಿ ಚರ್ಚೆಗೆ ತರುವ ಸಾಮರ್ಥ್ಯ ಹೊಂದಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ವಿಶ್ವೇಶ್ವರ ಭಟ್ ಅವರ ಭಾಷಣಗಳು ಮತ್ತು ಪತ್ರಿಕೋದ್ಯಮದ ಬರಹ, ಅವರ ಸಂಪಾದಕರಾಗಿದ್ದ ವೇಳೆ ಮೂಡಿಬಂದ ವರದಿಗಳನ್ನು ಒಟ್ಟಾಗಿ ಗಮನಿಸಿದಾಗ, ಬಸವಣ್ಣನವರು, ವಚನ ಸಾಹಿತ್ಯ, ಲಿಂಗಾಯತ ಮಠಗಳು ಮತ್ತು ವೀರಶೈವ-ಲಿಂಗಾಯತ ಪರಂಪರೆಯ ಕುರಿತು ಅವರು ತೋರಿದ ಗೌರವ ಮತ್ತು ಬೆಂಬಲದ ನಿಲುವು ಸ್ಪಷ್ಟವಾಗುತ್ತದೆ. ಅವರ ಬರವಣಿಗೆ ಹಲವು ಬಾರಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು, ಸಮಾಜದ ವಿಚಾರಗಳನ್ನು ಆಡಳಿತದ ಮುಂದಿಡಲು ಮತ್ತು ಸಮುದಾಯದ ಕೊಡುಗೆಗಳನ್ನು ಜನರಿಗೆ ಪರಿಚಯಿಸಲು ನೆರವಾಗಿದೆ. ಅವರ ಪತ್ರಿಕಾ ಸೇವೆಯನ್ನು ಒಂದು ವಿವಾದಕ್ಕೆ ಸೀಮಿತಗೊಳಿಸಿ ಅಳೆಯುವುದು ಅವರ ಹಿಂದಿನ ಬರಹಗಳು ಮತ್ತು ಸಾರ್ವಜನಿಕ ಕಾರ್ಯಗಳಿಗೆ ನ್ಯಾಯ ಮಾಡಿದಂತಾಗುವುದಿಲ್ಲ.
ಆಧ್ಯಾತ್ಮಿಕ ಪರಂಪರೆ ನಮಗೆ ಸಂವಾದ, ಸಹನೆ ಮತ್ತು ನ್ಯಾಯಬದ್ಧವಾದ ಪರಿಶೀಲನೆಯ ಮಹತ್ವವನ್ನು ಕಲಿಸುತ್ತದೆ. ‘ಬಸವ ಮಂಟಪ’ ಕೃತಿಯ ವಿಚಾರಗಳ ಕುರಿತು ಚರ್ಚೆ ನಡೆಯಲಿ. ಸಂಪಾದಕೀಯ ನಿರ್ಧಾರಗಳೂ ಪ್ರಶ್ನೆಗೆ ಒಳಪಡಲಿ. ಆದರೆ ಆ ಚರ್ಚೆಯ ನೆಪದಲ್ಲಿ ಒಬ್ಬ ವ್ಯಕ್ತಿಯ ಹಿಂದಿನ ಬರಹಗಳು, ಭಾಷಣಗಳು ಮತ್ತು ಸಮುದಾಯಕ್ಕೆ ನೀಡಿದ ಕೊಡುಗೆಗಳನ್ನು ಕಡೆಗಣಿಸಬಾರದು.
ಒಂದು ಘಟನೆ ಅಥವಾ ಒಂದು ನಿರ್ಧಾರದಿಂದಲೇ ದಶಕಗಳ ಪತ್ರಿಕಾ ಸೇವೆಯ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಅವರ ಹಿಂದಿನ ಬರಹಗಳನ್ನು, ಲಿಂಗಾಯತ-ವೀರಶೈವ ಮಠಗಳಿಗೆ ದೊರೆತ ವೇದಿಕೆಯನ್ನು ಮತ್ತು ಬಸವಣ್ಣನವರ ಸ್ಮಾರಕಕ್ಕೆ ಅವರು ನೀಡಿದ ಪತ್ರಿಕಾ ಬೆಂಬಲವನ್ನು ಸಮಗ್ರವಾಗಿ ಪರಿಶೀಲಿಸಬೇಕು. ವಿಶ್ವೇಶ್ವರ ಭಟ್ ಅವರು ಲಿಂಗಾಯತ-ವೀರಶೈವ ಪರಂಪರೆಯ ವಿರೋಧಿಯೂ ಅಲ್ಲ, ಬಸವಣ್ಣನವರ ವಿರೋಧಿಯೂ ಅಲ್ಲ.
ತಮ್ಮ ಬರಹ, ಭಾಷಣ ಮತ್ತು ಪತ್ರಿಕೋದ್ಯಮದ ಮೂಲಕ ಈ ಪರಂಪರೆಗೆ ಗೌರವ ತೋರಿಸಿ, ಅದರ ಧ್ವನಿಗೆ ಬೆಂಬಲ ನೀಡಿದ ಪತ್ರಕರ್ತರು. ನಮ್ಮ ನಾಡಿನ ಸಾಕ್ಷಿಪ್ರಜ್ಞೆ ಬೆಳಗಿದ ಅಪರೂಪದ ಪತ್ರಕರ್ತರು. ಲೇಖನ ಪ್ರಕಟಿಸಿದ್ದೇ ಮಹಾಪರಾಧ ಎಂದು ಹೇಳುವವರು ಈ ಎಲ್ಲ ಸಂಗತಿಗಳನ್ನು ಗಮನಿಸಬೇಕು.